ಅಮರ ಸುಳ್ಯದಲ್ಲಿ ನಡೆಯಿತು ಒಂದು ಮಹತ್ವದ ರೈತ ಹೋರಾಟ

ಪುರುಷೋತ್ತಮ ಬಿಳಿಮಲೆ

೧೮೩೪ ರಲ್ಲಿ ಆರಂಭವಾಗಿ ೧೮೩೭ರಲ್ಲಿ ಕೊನೆಗೊಂಡ ‘ಅಮರ ಸುಳ್ಯದ ರೈತ ಹೋರಾಟ’ದ ಕುರಿತಾದ ನನ್ನ ಪುಸ್ತಕ ಕೊರೊನಾದ ಕೆಟ್ಟಕಾಲದಲ್ಲಿ ಬಿಡುಗಡೆಯಾಗಿದೆ. ೧೮೫೭ರ ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮಕ್ಕೆ ೨೦ ವರ್ಷಗಳ ಮೊದಲೇ ಈ ಚಳುವಳಿಯು ಈಸ್ಟ್‌ ಇಂಡಿಯಾ ಕಂಪೆನಿಯ ವಿರುದ್ಧ ಸುಳ್ಯ ಮತ್ತು ಕೊಡಗು ಪರಿಸರದಲ್ಲಿ ಕಾಣಿಸಿಕೊಂಡಿತ್ತು.

ಪೂಮಲೆ ಬೆಟ್ಟವು ಹೋರಾಟಗಾರರಿಗೆ ಆಶ್ರಯ ನೀಡಿತ್ತು. ಗೌಡರು, ಲಿಂಗಾಯತರು, ಕೊಡವರು, ಜೈನರು, ಬಂಟರು, ಮಲೆಕುಡಿಯರು, ಬ್ರಾಹ್ಮಣರು, ಮತ್ತು ಮುಸಲ್ಮಾನರು ಹೋರಾಟದಲ್ಲಿ ಪಾಲ್ಗೊಂಡ ಪ್ರಮುಖ ಸಮುದಾಯಗಳು. ಈ ಚಳುವಳಿಯ ಕುರಿತು ಈಸ್ಟ್‌ ಇಂಡಿಯಾ ಕಂಪೆನಿಯ ಅಧಿಕಾರಿಗಳಾದ ಲೆವಿನ್, ಕಾಟನ್ ಮತ್ತು ಕಬ್ಬನ್ ಬೇರೆ ಬೇರೆ ವರದಿಗಳನ್ನು ತಯಾರಿಸಬೇಕಾಯಿತು ಎಂಬ ಅಂಶವೇ ಹೋರಾಟದ ಮಹತ್ವವನ್ನು ಸಾದರ ಪಡಿಸುತ್ತದೆ. ಲೆವಿನ್ ವರದಿಯ ಪ್ರಕಾರ, ‘ಇದು ನಿಜವಾಗಿಯೂ ಸರಕಾರದ ವಿರುದ್ಧ ಜನರ ಬಂಡಾಯʼ.

ಈ ಹೋರಾಟವು ಮುಂದೆ ಸುಳ್ಯ ಪರಿಸರದ ಜನರ ಮೇಲೂ, ಬ್ರಿಟಿಷರ ಆಡಳಿತ ವಿಧಾನದ ಮೇಲೂ ಸಾಕಷ್ಟು ಪರಿಣಾಮ ಬೀರಿದೆ. ರೈತರ ಹೋರಾಟ ಕೊನೆಗೊಂಡ ತಕ್ಷಣ ಕಂಪೆನಿ ಅಧಿಕಾರಿಗಳು ಜನರ ಅಸಮಾಧಾನಕ್ಕೆ ಕಾರಣವಾದ ಕಂದಾಯದ ಕ್ರಮಗಳನ್ನು ಬದಲಾಯಿಸಿದರು. ಕಂಪೆನಿ ಸರಕಾರದ ವಿರುದ್ಧ ಹೋರಾಡುವ ಸಂದರ್ಭದಲ್ಲಿ ರೈತರು ಬಹಳ ವಿನೂತನವಾದ ಕೆಲವು ತಂತ್ರಗಳನ್ನು ಅನುಸರಿಸಿದ್ದಾರೆ. ಅದರಲ್ಲಿ ನಕಲೀಕರಣ ಮತ್ತು ದೈವೀಕರಣ ಪ್ರಕ್ರಿಯೆಗಳು ಬಹಳ ಮಹತ್ವದ್ದು.

೧೮೩೦ರ ನಗರ ಬಂಡಾಯದ ರೂವಾರಿಯಾಗಿದ್ದ ಬೂದಿ ಬಸಪ್ಪನೇ ಅಪರಂಪಾರನಾಗಿ ೧೮೩೨ರ ಹೊತ್ತಿಗೆ ಸುಳ್ಯ ಪರಿಸರದಲ್ಲಿ ಕಾಣಿಸಿಕೊಂಡದ್ದು, ಅವನ ಬಂಧನವಾದ ಮೇಲೆ ಮತ್ತೊಬ್ಬ ಬಸಪ್ಪನು ಕಲ್ಯಾಣಸ್ವಾಮಿಯಾಗಿ ಕಾಣಿಸಿಕೊಂಡ ಕತೆಗಳು ರೋಚಕವಾಗಿವೆ. ಕೊಡಗಿನ ಅರಸೊತ್ತಿಗೆಯ ಕುಡಿಯೊಂದು ಜೀವಂತವಾಗಿದೆಯೆಂಬ ಸಂದೇಶವನ್ನು ಹೋರಾಟಗಾರರು ಜನರಿಗೆ ಸದಾ ಕೊಡುತ್ತಲೇ ಇರಬೇಕಾಗಿತ್ತು. ಅಷ್ಟೇನೂ ರಾಜಕೀಯ ಪ್ರಜ್ಞೆಯಿಲ್ಲದ ಜನರನ್ನು ಹೋರಾಟಕ್ಕೆ ಸಿದ್ಧಗೊಳಿಸಬೇಕಾಗಿತ್ತು. ಆದರೆ ಹೋರಾಟಗಾರರಿಗೆ ಕಂಪೆನಿ ಸರಕಾರದ ಜಾಗತಿಕ ವಿಸ್ತಾರ ಮತ್ತು ಸೈನ್ಯ ಬಲವನ್ನು ಅರ್ಥಮಾಡಿಕೊಳ್ಳುವುದು ಅಸಾಧ್ಯವಾಗಿತ್ತು.

ಈ ಮಿತಿಯಡಿಯಲ್ಲಿಯೂ ಹೋರಾಟಗಾರರು ತಾತ್ಕಾಲಿಕವಾಗಿಯಾದರೂ ಕಂಪೆನಿ ಸರಕಾರದ ಬಾವುಟವನ್ನು ಕೆಳಗಿಳಿಸಿದ್ದಾರೆ. ರೈತರ ಅಭಿವೃದ್ಧಿಗೆ ಕೆಲವು ಘೋಷಣೆಗಳನ್ನು ಹೊರಡಿಸಿದ್ದಾರೆ. ಪ್ರಾಣವನ್ನು ಪಣಕ್ಕಿಟ್ಟು ‘ಅಂಬಲಿ ಪಡೆ’ಯಂಥಾ ಗೆರಿಲ್ಲಾ ಮಾದರಿಯ ಹೋರಾಟವನ್ನು ರೂಪಿಸಿ ನೇಣುಗಂಬವನ್ನೇರಿದ್ದಾರೆ. ೧೮ ಮತ್ತು ೧೯ನೇ ಶತಮಾನದಲ್ಲಿ ಕಂಪೆನಿ ಸರಕಾರದ ವಿರುದ್ಧ ದೇಶದಾದ್ಯಂತ ನಡೆದ ಪ್ರಾದೇಶಿಕ ಹೋರಾಟಗಳಿಗೆ ಸುಳ್ಯ-ಕೊಡಗಿನ ಜನರೂ ತಮ್ಮ ಧ್ವನಿ ಸೇರಿಸಿದ್ದು ಸಣ್ಣ ಸಂಗತಿಯೇನಲ್ಲ.

‍ಲೇಖಕರು Avadhi

April 22, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: