ಅಭಿರುಚಿ ಚಂದ್ರು ಓದಿದ ‘ಪವಿತ್ರ ಪ್ರವಾಹ’

ಅಭಿರುಚಿ ಚಂದ್ರು

ಮಂಜುಳಾ. ಡಿ ರವರ ‘ಪವಿತ್ರಪ್ರವಾಹ’ ಮತ್ತೆ ಕೈಗೆತ್ತಿಕೊಂಡಿದ್ದೇನೆ. ಖಾಸಗಿ ತಳಮಳಗಳು, ಸಾರ್ವಜನಿಕ ತಹತಹಗಳು, ಪ್ರಕೃತಿಯಿಂದ ದೂರಾಗುತ್ತಾ ಸಾಗುತ್ತಿರುವ ಆಧುನಿಕ ಜೀವನಶೈಲಿಯಿಂದಾಗಿ, ಸೂಕ್ಷ್ಮ ಸಂವೇದಿಯಾದ ಮನಸ್ಸೊಂದರ ಚಡಪಡಿಸುವಿಕೆಗಳು, ಗಾಢವಾದ ಸಂಬಂಧಗಳ ನೆನಪನ್ನು ಹಂಚಿಕೊಳ್ಳುತ್ತಲೇ, ಕಳೆದುಕೊಂಡದ್ದನ್ನು ಸೂಚ್ಯವಾಗಿ ದಾಖಲಿಸುವ ಪ್ರಯತ್ನಗಳನ್ನು ಇವರ ಕವನಗಳಲ್ಲಿ ಕಾಣಬಹುದು. ಕವಯತ್ರಿಯ ಅನುಭವಗಳು ಒದುಗನ ಅನುಭವವೂ ಹೌದು ಎನ್ನುವಂತೆ ಸೆಳೆಯಬಲ್ಲ ಗುಣವಿರುವಂಥವು. ತೀವ್ರ ಏಕಾಂತದಲ್ಲಿ ಕಣ್ಣ ಮುಂದೆ ಮೂಡಿನಿಂತ ಹಲವು ಬಣ್ಣಗಳ ಸ್ಪಷ್ಟಚಿತ್ರಗಳು ಅಕ್ಷರರೂಪದಲ್ಲಿ ಯಶಸ್ವಿಯಾಗಿ ಅಭಿವ್ಯಕ್ತಗೊಂಡಿರುವುದನ್ನು, ಮಂಜುಳಾರವರ ಕವನಗಳಲ್ಲಿ ಕಾಣುತ್ತೇವೆ.

ಅವರೇ ಹೇಳುವಂತೆ ಇದು ಮಾತಿಗೆ ಬಾರದ್ದನ್ನು ಬರಿಸುವ ಅಂತರ್ಯುದ್ಧ. ವಾಚ್ಯವಾಗಿದ್ದಲ್ಲಿ, ಗಾಢವಾದ ಅನುಭವವೂ ಪೇಲವವಾಗಿಬಿಡುವ ಸಾಧ್ಯತೆ ಇರುತ್ತದೆ. ಕಾವ್ಯಾಭಿವ್ಯಕ್ತಿಯಲ್ಲಿ ಮೂಡಿಬಂದಾಗ, ಗಂಭೀರವೂ, ಮತ್ತೆ ಮತ್ತೆ ಓದಿಸಿಕೊಳ್ಳುವಂಥಹವೂ ಆಗಿ, ಕವಿಯೊಂದಿಗೆ ತಾದಾತ್ಮ್ಯ ಸಾಧ್ಯವಾಗುತ್ತದೆ. ಗಟ್ಟಿ ಕಾಳಿನಂತಿರುವ ಅಂತಹ ಹಲವಾರು ಕವನಗಳು ‘ಪವಿತ್ರಪ್ರವಾಹ’ ಕವನಸಂಕಲನದಲ್ಲಿದೆ.

ಕವನವೆಂದರೆ, ಕವಿ ತನ್ನೊಡನೆ ತಾನೇ ಒಳದನಿಯಲ್ಲಿ ಮಾತಾಡಿಕೊಳ್ಳುವ ಕ್ರಿಯೆ. ಕವಿ ಸಣ್ಣವನಾದರೆ, ಅವನ ವೈಯಕ್ತಿಕ ಅನುಭವಗಳು, ವೈಯಕ್ತಿಕವೇ ಆಗಿ, ಕಾವ್ಯರಸಿಕನನ್ನು ತಲುಪಲು ಸೋಲುವ ಅಪಾಯವಿರುತ್ತದೆ. ಕವಿಯ ನೋವುನಲಿವುಗಳು ಗಾಢವಾದದ್ದಾಗಿದ್ದರೆ, ಲೋಕದ ನೋವುನಲಿವುಗಳ ಜೊತೆಗೆ ತಳುಕುಹಾಕಿಕೊಂಡ, ಆದರೆ ಖಾಸಗಿಯೂ ಆಗಿದ್ದುದಾದರೆ, ಅಂದರೆ ಅವನ ಸೃಜನಶೀಲತೆಯೇ ವ್ಯಾಪ್ತವಾಗಿದ್ದಾದರೆ, ಅವನ ಸ್ವಂತದ ಮುಲುಕುಗಳು, ಒಳದನಿಗಳೂ ಇಡೀ ಜನಾಂಗದ್ದೂ ಆಗಬಹುದಾಗಿಬಿಡುತ್ತವೆ.

ಮೇಲಿನ ಮಾತುಗಳನ್ನು ಒಟ್ಟಾರೆಯಾಗಿ ಮಂಜುಳಾ ಅವರ ಕವನಗಳ ಹಿನ್ನೆಯಲ್ಲಿ ಹೇಳಲು ಯತ್ನಿಸಿದ್ದೇನೆ. ಸಾರ್ವಜನಿಕವಾದ ಚಿತ್ರಗಳು ನೋಡನೋಡುತ್ತಿದ್ದಂತೆಯೇ ಖಾಸಗಿ ಚಿತ್ರವಾಗಿಬಿಡುವ ಮತ್ತು ನಮ್ಮದೂ ಆಗಿಬಿಡುವ ಚಂದವನ್ನು ಇಲ್ಲಿನ ಕೆಲವು ಕವಿತೆಗಳಲ್ಲಿ ಕಾಣಬಹುದು. ‘ಇಲ್ಲಿ ನಾನು ಚುಕ್ಕಿಯಲ್ಲ’ ಎನ್ನುವ ಕವನವನ್ನು ನೋಡಿ:

ಟ್ರಾಫಿಕ್ ಮಧ್ಯೆ ಕಿರುದೀಪವೊಂದು
ಹಳದಿಯಿಂದ ಹಸಿರಾಗಲು ಕಾದ ಸಾವಿರಾರು ಕಣ್ಣುಗಳು ಸುತ್ತಲೂ
ಹೌದು ಹಲವು ನೂರು ವಾಹನಗಳ
ಮಧ್ಯೆ ನಾನೊಂದು ಚುಕ್ಕಿಯಷ್ಟೆ
ಎನ್ನುವ ಅರಿವಿದೆ. ಈ ವಿಶಾಲ ಜಗತ್ತಿನಲ್ಲಿ, ಕೋಟ್ಯಂತರ ಜೀವಿಗಳ ನಡುವೆ ನಾವು ಕೇವಲ ಚುಕ್ಕಿಗಳೆ. ಇಂಥದೇ ಅನುಭವ ಬೇರೆ ಹಲವು ಕಡೆಗಳಲ್ಲೂ ನಮ್ಮನ್ನು, ನಮ್ಮ ಅಸ್ತಿತ್ವವನ್ನು ಸಣ್ಣದೊಂದು ಚುಕ್ಕಿಯ ಹಾಗೆ ಕಾಣಿಸುವಂತೆ ಮಾಡುವುದು, ನಮ್ಮ ಅನುಭವಕ್ಕೆ ಬಂದಿರುತ್ತದೆ. ಆದರೆ, ಅಲ್ಲೊಂದು ಬೇರೆಯೇ ಆದ ಲೋಕವಿದೆ. ಅಲ್ಲಿ ಈ ಚುಕ್ಕಿಯೇ ಮುಖ್ಯ. ಅದೇ ಆ ಜೀವಕ್ಕೆ ಜಗತ್ತು. ಈ ಚುಕ್ಕಿಯ ಸುಖಸಂತೋಷಗಳೇ ಬದುಕು. ಅಂಥದೊಂದು ಲೋಕವನ್ನು ಪ್ರವೇಶಿಸಿದ ಗಳಿಗೆ, ಆ ಚುಕ್ಕಿಯ ಸಾರ್ಥಕ ಕ್ಷಣ.

ಇನ್ನೂ ಒಳಗೆ ಹೆಜ್ಜೆ ಇಟ್ಟಿಲ್ಲ ‘ನನ್ನಮ್ಮ ಬಂದೆಯಾ
ಏನಾದರೂ ತಿಂದೆಯಾ’ ಅಮ್ಮನ ಧ್ವನಿಯ ಜೀವತಂತು
ಉಳಿದ ಅತ್ಯಾಪ್ತ ಸ್ವರಗಳು
ಕೇಳುವ ಮುನ್ನವೇ ಅರಿತು ಒದಗಿದ ಮನಗಳು.

ನಾಲ್ಕನೆಯ ಚರಣದಲ್ಲಿ ಬದಲಾಗುವ ಭಾವಲೋಕವೇ ಬದುಕನ್ನು ಹಿಡಿದಿಟ್ಟ ಜೀವತಂತು. ಕವಿಗೆ ಆಗ ಅನಿಸುತ್ತದೆ:

ಇಲ್ಲಿ ನಾ ಚುಕ್ಕಿಯಲ್ಲ
ಆಗಸವೇ ನನ್ನದು…
‘ನೆಪಗಳ ಮುಸುಕು’ ಎನ್ನುವ ಕವನವನ್ನು ನೋಡಿ. ಉಪಯೋಗಿಸದ ವಸ್ತುವಿಗೆ ಧೂಳು ಕವಿಯುವುದು ಸಾಮಾನ್ಯ ಸಂಗತಿ. ಓದಿದ ಪುಸ್ತಕಗಳು ಅಂಕಪಟ್ಟಿಯಾದ ನಂತರ ರದ್ದಿಯಂಗಡಿ ಸೇರಿ ಧೂಳಾಗುವುದು, ಧೂಳು ಸರಿಸುವುದಕ್ಕಿಂತ, ನಾವು ಧೂಳು ಅಲ್ಲಿರುವುದಕ್ಕೆ, ಎಲ್ಲೆಲ್ಲೂ ಇರುವುದಕ್ಕೆ ನೆಪಗಳನ್ನು ಹುಡುಕುತ್ತಿರುತ್ತೇವೆ.

ಮಣ್ಣಿನ ಕಣವೂ ಅಲ್ಲ ಗಾಳಿಯ ಅಂಶವೂ ಅಲ್ಲ
ಭೂಮಿಯಿಂದ ಗಗನದೆಡೆಗೆ ತೆಳುತೆರೆಯಂತೆ
ಏಳುವ ಧೂಳೆಂದರೆ ಏಕೆ ಸಂಕಟವೆನಿಸುವುದು
ಎಂದು ವಿಸ್ಮಯಪಡುವ ಮನಸ್ಸಿಗೆ ಕೊನೆಗೆ ಕಾಣ್ಕೆಯೆಂಬಂತೆ ಹೊಳೆಯುತ್ತದೆ:

ಇಷ್ಟಕ್ಕೂ ಅಂತರಂಗಕ್ಕೆ ಹೊದಿಸಿದ
ನೆಪಗಳ ಮುಸುಕು
ಧೂಳಲ್ಲವೇ…
ಎನ್ನುವ ಮಾತು ನಮ್ಮಂತರಂಗಕ್ಕೆ ಹಿಡಿದ ಕನ್ನಡಿಯಾಗುತ್ತದೆ.

ನಾನು ಇಲ್ಲಿ ಎರಡು ಕವನಗಳನ್ನಷ್ಟೇ ಉದಾಹರಿಸಿ, ನನಗನ್ನಿಸಿದ್ದನ್ನು ಹಂಚಿಕೊಳ್ಳುವ ಯತ್ನ ಮಾಡಿದ್ದೇನೆ. ಹೀಗೆಯೇ, ಉಳಿದೆಲ್ಲ ಕವನಗಳ ಬಗ್ಗೆಯೂ ಬರೆಯಬಹುದು. ಪ್ರತಿಯೊಂದರಲ್ಲೂ ಕಣುವುದು, ಅವರ ಜೀವನೋತ್ಸಾಹ ಮತ್ತು ಪ್ರಾಮಾಣಿಕ ಕಾಳಜಿಗಳು. ಆಪ್ತವಾಗಿ ಬರೆಯುವ ಕಲೆ ಅವರಿಗೆ ಸಿದ್ಧಿಸಿದೆ. ಅನುಭವವನ್ನು ಮಾತಾಗಿಸಿ, ಮಾತನ್ನು ಪ್ರತಿಮೆಯಾಗಿಸಿ. ಮತ್ತೆ ಮತ್ತೆ ಮೆಲುಕಾಡುವಂತೆ ಮಾಡುವ ಮಂಜುಳಾ ಮುಂದೆ ಇನ್ನೂ ಹೆಚ್ಚು ಗಂಭೀರ ಚಿಂತನೆಗಳನ್ನು, ಶಿಲ್ಪವಾಗಿಸಿ ಕಾವ್ಯಪ್ರಿಯರ ಮಡಿಲಿಗಿಡುತ್ತಾರೆ ಅನಿಸುತ್ತದೆ.

ಇಲ್ಲಿನ ಹಲವಾರು ಕವನಗಳು ನನಗೆ ಪ್ರಿಯವಾದವು, ಅಲ್ಲದೆ, ಮಂಜುಳಾರವರು, ಈಗ ಓತಪ್ರೋತವಾಗಿ ಬರುತ್ತಿರುವ ಕವನ ಸಂಕಲನಗಳ ಪ್ರವಾಹದಲ್ಲೂ, ಬೇರೆಯಾದ ದನಿಯನ್ನು ಹೊರಡಿಸುತ್ತಿರುವ, ಬಹಳಕಾಲ ನೆನಪಿನಲ್ಲಿ ಉಳಿಯುವ ಕವಯತ್ರಿಯಾಗಿ ಹೊರಹೊಮ್ಮಲಿದ್ದಾರೆ ಎನ್ನುವ ನಂಬಿಕೆಯನ್ನು ಮೂಡಿಸಿದ್ದಾರೆ.

‍ಲೇಖಕರು Admin

December 30, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: