ಭಾವನಾತ್ಮಕ ಜೀವಿಯಲ್ಲ…

ಆಕರ್ಷ ಆರಿಗ

ಕೆಂಪನೆಯ ನೀಲಿಯಾಕಾಶ, ಮುಸ್ಸಂಜೆಯ ಇಳಿ ಹೊತ್ತು, ಚಿಟಪಟ ಮಳೆ, ಸೂರ್ಯ ತನ್ನ ಕೆಲಸ ಮುಗಿಸಿ ಚಂದ್ರನಿಗೆ ನೀ ಬಾ ಬಾ ಎಂದು ಕರೆಯುತ್ತ ಕರೆಯುತ್ತ ತನ್ನ ಕೆಂಬಣ್ಣದ ಹೊನ್ನ ಕಿರಣ ಹರಡುತ್ತ ದಿಗಂತದಲ್ಲಿ ಲೀನವಾಗುವ ಸಮಯ. ನನ್ನ ಕಾಲ್ನಡಿಗೆ ಬಿರುಸಾಗಿ ಸಾಗಿತ್ತು. ಮನದಲಡಗಿದ ಮೌನ ದುಃಖದ ಕಟ್ಟೆಯೊಡೆಯುವ ಸೂಚನೆ ಕೊಡುತ್ತಿತ್ತು. ಸುತ್ತೆಲ್ಲ ಜನರ ಕಣ್ಣು ತಪ್ಪಿಸಲು ಒತ್ತರಿಸಿ ಬಂದ ಅಳು ನುಂಗಲು ಗಂಟಲು ಬಿರಿಯುತ್ತಿತ್ತು. ಬಹುಶಃ ಸೂರ್ಯನೂ ಕೂಡಾ ಬರುವ ಕಣ್ಣೀರಿಗೆ ಶತ್ರುವಾಗಿ ಕಾಣುತ್ತಿದ್ದನೊ ಏನೊ!

ನಾನು ಅಷ್ಟೇನು ಭಾವನಾತ್ಮಕ ಜೀವಿಯಲ್ಲ. ಹಾಗಂತೇ ಭಾವನೆಗಳೇ ಇಲ್ಲದ ವ್ಯಕ್ತಿಯೂ ಅಲ್ಲ. ಕೆಲವು ಸಂದರ್ಭಗಳು ನಮ್ಮನ್ನು ಭಾವನಾತ್ಮಕವಾಗಿ ಮಾಡುತ್ತದೆ. ಕಳೆದುಕೊಂಡ ದುಃಖ ಮನಕೆ ಅರಿವಾಗುವುದು ನಮ್ಮ ಹತ್ತಿರದವರು ದೂರದಾಗ ಮಾತ್ರ. ಬದುಕು ನಿಂತ ನೀರಾಗದೆ ಸರಾಗವಾಗಿ ಹರಿಯಲು ನವ ಚೈತನ್ಯ ಆ ಒಂದು ಜೀವ. ಅನಿರೀಕ್ಷಿತವಾದರೂ ಅರಗಿಸಿಕೊಳ್ಳಲಾಗದ ಸತ್ಯ ನಡೆದೆ ಹೋಗಿತ್ತು. ದೂರದಲ್ಲಿರುವ ನನಗೆ ಒಂಟಿತನ ಕಾಡಲು ಶುರುವಾಗಿದ್ದು ಇದೇ ಮೊದಲ ಬಾರಿ. ನನ್ನ ದುಃಖ,ನೋವು ನಲಿವು, ಸಂಕಟ ವ್ಯಥೆ ಇವುಗಳನೆಲ್ಲ ಮನಃಪೂರ್ತಿ ಹೇಳಿಕೊಳ್ಳಲು ಇನ್ನಾರಿಹರಿಲ್ಲಿ!? ಈ ಒಂದು ಹತಾಷೆಯ ಸ್ಥಿತಿ ಇಷ್ಟು ಬೇಗ ನನ್ನನ್ನಾವರಿಸಬಹುದೆಂಬ ಕಿಂಚಿತ್ತು ಸೂಚನೆ ಕೂಡಾ ನನಗರಿವಾಗಲಿಲ್ಲ. ಹೌದು ವಿಧಿಯ ಆಟದ ಮುಂದೆ ನಾವೆಲ್ಲ ಕೀ ಕೊಟ್ಟ ಬೊಂಬೆಯಂತೆ.

ಅನುಪಮ ಸಿರಿ ಸಂಪತ್ತು, ಒಡ ಹುಟ್ಟಿದ ಬಂಧು ಬಳಗ, ಹೆತ್ತ ಕರುಳು ಯಾರಿದ್ದರೇನು? ಆ ಜೀವದ ಮುಂದೆ ಯಾರು ಸರಿಸಾಟಿ. ವರ್ಷಗಳೇ ಕಳೆದರೂ ನಿನ್ನ ನೆನಪು ಎಂದಿಗೂ ಅಮರ. ಹೌದು ವಯಸ್ಸು ಎಲ್ಲರಿಗೂ ಆಗ್ತದೆ, ಎಲ್ಲರೂ ಒಂದು ದಿನ ಹೋಗಲೇಬೇಕು ಆದ್ರೆ ಅವರ ನೆನಪು ಮಾತ್ರ ಇಂದಿಗೂ ಅಮರ. ನಿಜಕ್ಕೂ ಇದ್ದಾಗ ಗೊತ್ತಾಗಲ್ಲ ವ್ಯಕ್ತಿಯ ಮೌಲ್ಯ, ಅದೇ ಅವರು ನಮ್ಮಿಂದ ದೂರ ಆದಾಗ ಅವರ ಪ್ರಾಮುಖ್ಯತೆ ನಿಮಿಷ ನಿಮಿಷಕ್ಕೂ ಕಣ್ಣ ಮುಂದೆ ಗೋಚರಿಸುತ್ತದೆ.

ಅದು ಪರೀಕ್ಷೆಯ ಸಮಯ, ಹಿಂದಿನ ದಿನ ಯಾಕೊ ಏನೋ ಮನದಲ್ಲಿ ತಲ್ಲಣ, ಅಜ್ಜನನ್ನು ಒಂದು ಬಾರಿಯಾದರೂ ನೋಡಬೇಕೆಂಬ ಬಯಕೆ ಆಸೆ ಹೆಚ್ಚಾಗಿದ್ದು, ಆದರೆ ‘ಅಜ್ಜ ಇನ್ನಿಲ್ಲ’ ಅಪ್ಪನ ದೂರವಾಣಿ ಎದೆಗೆ ಹತ್ತಿದ ಭರ್ಚಿಯಾಯಿತು. ಲಗುಬಗೆಯಲ್ಲಿ ಹರಡಿಕೊಂಡ ಪುಸ್ತಕಗಳನ್ನೆಲ್ಲ  ಗಡಿಬಿಡಿಯಲ್ಲಿ ಮೇಜಿನ ಮೇಲೆ ಇರಿಸಿ,  ನನ್ನ ಕಾಲ್ನಡಿಗೆ ಊರಿನತ್ತ. ಉಟ್ಟುಡುಗೆಯಲ್ಲಿ ಸಾಗಿದ ಪಯಣ  ಕಣ್ಣೀರು ಆ ಕತ್ತಲಲ್ಲಿ ಯಾರ ಗಮನಕ್ಕೆ ಬೀಳದೆ ಹೋಯಿತು. ಆಲೋಚನೆ ಮುಕ್ತ ಬುದ್ಧಿ, ಉಸಿರುಕಟ್ಟಿಸುವ  ಕಣ್ಣೀರು, ನಂಬಲಸಾಧ್ಯವಾದ ಸತ್ಯ ನನ್ನ ಮುಂದೆ ಇತ್ತು. ಅದು ಮೊದಲಬಾರಿ ನಾನು ಶವವನ್ನ ನೋಡಿದ್ದು, ಮನುಷ್ಯ ದುಃಖದ ಕಡಲಲ್ಲಿ ಒಂಟಿಯಾಗಿರುವಾಗ ಈ ಸಾಂತ್ವನದ ಮಾತುಗಳೆ ಬೆನ್ನೆಲುಬು. ಆದರೆ ಯಾರು ಏನೇ ಮಾತನಾಡಿದರು ನನಗೆ ಏನು ಗೊತ್ತಾಗುತ್ತಿರಲಿಲ್ಲ, ವಯಸ್ಸಾದ ಮೇಲೆ ಎಲ್ಲರೂ ಹೋಗುತ್ತಾರೆ ಅಂತ  ಅಲ್ಲಿ ಇದ್ದ ಜನರು ಮತ್ತೆ ಮತ್ತೆ ನನಗೆ ಕಿವಿಗೆ ಬೀಳುವ ತರ ಹೇಳುತ್ತಿದ್ದರು. 

ಹೋಗಮ್ಮ, ಊಟ ಮಾಡು. ನಿನ್ನಿಂದ ಏನೂ ತಿಂದಿಲ್ಲ ಅಂತ ನನ್ನ ಪಕ್ಕ ಕುಳಿತುಕೊಂಡ ಆಂಟಿ ಹೇಳಿದ್ರು. ನಿಜಕ್ಕೂ ನನಗೆ ಅವರು ಯಾರು ಎಂದು ಗೊತ್ತಿಲ್ಲ. ಆದರೆ ಅವರು ಮತ್ತೆ ಮತ್ತೆ ನಿನ್ನ ಹತ್ತಿರ ಕುಳಿತುಕೊಂಡು, ಅಜ್ಜನ ಬಗ್ಗೆ ಮಾತನಾಡುತ್ತಿದ್ದರು. ಕಣ್ಣು ಮುಂದೆ ಇಷ್ಟು ಜನ ಮುಖ ಮುಖ ನೋಡಿಕೊಂಡು ಅತ್ತರು, ಕೆಲವು ಜನ ನಂಬಲಾಗದೆ ಬಿದ್ದು ಬಿದ್ದು, ಅಜ್ಜನನ್ನು ಎಬ್ಬಿಸುತ್ತಿದ್ದರು. ಎಷ್ಟೇ ಎಬ್ಬಿಸಿದರು  ಬಾರದ ಲೋಕಕ್ಕೆ ಹೋದ ವ್ಯಕ್ತಿ ಹೇಗೆ ಮರಳಿ ಬರುವರೇ ???

ನನ್ನ ಕೈ ನಡುಗುತ್ತಿತ್ತು, ಹೃದಯ ಬಡಿತ ಜೋರಾಯಿತು, ಕಣ್ಣುಗಳು ಭಯದಲ್ಲಿ ಅಜ್ಜನನ್ನು ನೋಡಲಾರಂಭಿಸಿತು. ಒಂದು ಕಡೆ ಅಮ್ಮನ ಭೀಕರ ಅಳು, ಹೇಗೋ ಧೈರ್ಯ ಮಾಡಿಕೊಂಡು,  ಕಾರ್ಯವನ್ನು ಆರಂಭಿಸಿದೆ.

ಎಲ್ಲ ಮುಗಿದ ಮೇಲೆ ಗೋಡೆಯ ಮೇಲಿನ ಫೋಟೋದಲ್ಲಿ ಇರುವ ಮುಖದ ರಾಜನಿಗೆ ಹಾರ ಬಿದ್ದಾಯಿತು, ಆ ಕ್ಷಣದಲ್ಲಿ ನನಗೆ ಮನೆಯಲ್ಲಿ  ಇರಲು ಆಗಲಿಲ್ಲ. ಬಚ್ಚಿಟ್ಟುಕೊಂಡಿದ್ದ ಕಣ್ಣೀರ ಹನಿ ಜಾರಿತು, ಊರಿನಿಂದ ಮತ್ತೆ ನನ್ನ ಪಯಣ ಹಾಸ್ಟೆಲಿನತ್ತ ಬಂದುಬಿಟ್ಟೆ. ಇಂದಿಗೂ ನಾನು ಅಜ್ಜನನ್ನು ಕಳೆದುಕೊಂಡಿಲ್ಲ, ಎಂದಿಗೂ ವ್ಯಕ್ತಿತ್ವ, ನೆನಪುಗಳು ಶಾಶ್ವತ.

‍ಲೇಖಕರು Admin

December 30, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: