ಅಭಿನಂದನೆ ಗುರುವಪ್ಪನವರೇ..

ನರೇಂದ್ರ ರೈ ದೇರ್ಲ

ಅಂತರಾಷ್ಟ್ರೀಯ ಮ್ಯಾರಥಾನ್ ಆಟಗಾರನೊಬ್ಬ ಹೊಳೆನರಸೀಪುರದ ಮಾಜಿ ಪ್ರಧಾನಿಯ ಚೆನ್ನಂಬಿಕಾ ಥಿಯೇಟರ್ ಪಕ್ಕ ತೆಂಗಿನ ಮಡಲಿನ ಗುಡಿಸಲು ಹಾಕಿ ತನ್ನ ತಂಗಿಯ ಮಕ್ಕಳನ್ನು ಸಾಕಿಕೊಂಡು ಬದುಕುತ್ತಿದ್ದರು. ಅಂತರಾಷ್ಟ್ರೀಯ ಹಣಾಹಣಿಗೆ ಆತ ಪಾಕಿಸ್ತಾನಕ್ಕೆ ಹೋಗಬೇಕಾಗಿತ್ತು. ಕೈಯಲ್ಲಿ ನಯಾ ಪೈಸೆ ಇರಲಿಲ್ಲ. ಪ್ರಭುತ್ವದ ಸಹಕಾರವಿಲ್ಲದೆ ಹೋದಾಗ ಸಿಕ್ಕಿದ ಚಿನ್ನದ ಪದಕಗಳನ್ನು ಅಡವಿಟ್ಟು, ಮಾರಿ ವಿಮಾನದ ಟಿಕೆಟ್ ಖರೀದಿಸಿದ್ದರು. ‘ಮಾಜಿ ಪ್ರಧಾನಿಯ ಊರಲ್ಲಿ ಐಸ್ ಕ್ಯಾಂಡಿ ಮಾರುವ ಅಂತರಾಷ್ಟ್ರೀಯ ಕ್ರೀಡಾಪಟು’ ಎಂದು ಆಗ ಪುಟ್ಟ ಒಂದು ಲೇಖನ ಬರೆದೆ. ಲೇಖನ ಅಚ್ಚಾಗಿ ಪತ್ರಿಕೆಯಿಂದ ಬರಬೇಕಾದ ಸಂಭಾವನೆ ಬಂತು.

ತಿಂಗಳು ಕಳೆದಿರಲಿಲ್ಲ, ಮನಸ್ಸು ಇನ್ನೊಂದು ಲೇಖನದಲ್ಲಿ ತೊಡಗಿತ್ತು. ಅದೇ ಹೊತ್ತಿಗೆ ಇಂಡಿಯನ್ ರೈಲ್ವೆಯಿಂದ ಒಂದು ಕಾಲ್ ಬಂತು. ‘ಸರ್ ನಾನು ಸಗಣಪ್ಪ, ಭಾರತೀಯ ರೈಲ್ವೆ ಯಿಂದ ಮಾತನಾಡುತ್ತಿದ್ದೇನೆ ಮದ್ರಾಸ್ ನಲ್ಲಿದ್ದೇನೆ ನನ್ನ ಬಗ್ಗೆ ಬಂದ ಲೇಖನ ನೋಡಿ ಭಾರತೀಯ ರೈಲ್ವೆಯವರು ನನ್ನನ್ನು ಕರೆದು ಉದ್ಯೋಗ ಕೊಟ್ಟರು’ ಎಂದರು ಸಗಣಪ್ಪ.

ಒಬ್ಬ ಬರಹಗಾರ- ಪತ್ರಕರ್ತನಿಗೆ ಸಿಗುವ ಇಂಥ ಅಪರೂಪದ ಸುಖವನ್ನು ನಾನು ‘ಮಾಧ್ಯಮ ಸಮಾಧಾನ’ ಎಂದು ಕರೆಯುತ್ತೇನೆ. ಇಂಥದ್ದೆ ಸಮಾಧಾನ ಆತ್ಮಸುಖದ ಬಗ್ಗೆ ನನಗೆ ಪದೇಪದೇ ನೆನಪಾಗುವುದು ಮಂಗಳೂರಿನ ಗುರುವಪ್ಪ ಬಾಳೆಪುಣಿ ಅವರನ್ನು ಕಂಡಾಗ. ಮುಡಿಪು ಸಮೀಪದ ಬಾಳೆಪುಣಿ ಬಹಳ ದೊಡ್ಡ ಊರಲ್ಲ. ತಳ ಸಮುದಾಯದಿಂದ ಹುಟ್ಟಿಬಂದ ಬಾಳೆಪುಣಿಯವರಿಗೆ ನೆಲದವರ ಕಷ್ಟ ಸಂಕಟದ ಪರಿಜ್ಞಾನ ಇರುವುದರಿಂದಲೇ ಅವರಿಗೆ ಕಿತ್ತಳೆ ಮಾರಿ ಶಾಲೆ ಕಟ್ಟಿದ ಹಾಜಬ್ಬನಂಥವರ ಪರಿಚಯವಾಗುವುದು.

ಈಗಲೂ ಮಂಗಳೂರಿನ ಶಕ್ತಿಕೇಂದ್ರವಾದ ಹಂಪನಕಟ್ಟೆಯಲ್ಲಿ ಕಿತ್ತಳೆ ಮಾರುವ ಹರೇಕಳ ಹಾಜಬ್ಬನ ಮುಖದಲ್ಲೊಂದು ಸುಸ್ತು ಇದೆ. ಇನ್ನೂ ಈಡೇರದ ನಿಸ್ತೇಜ ನೋವಿದೆ. ಸಂಜೆವರೆಗೆ ಏನೂ ತಿನ್ನದೆ, ಕುಡಿಯದೆ ನೋಂಬು ಹಿಡಿಯುವ ಸದ್ಭಕ್ತರ ಮುಖದಲ್ಲಿರುವ ಸುಸ್ತು ಅದು. ಆ ಕಾರಣಕ್ಕಾಗಿಯೇ ಕಿತ್ತಲೆ ಖರೀದಿಸುವ ಗಿರಾಕಿಗಳಿಂದ ಕಡಿದು ಕಚೇರಿಯಲ್ಲಿ ಅವರನ್ನು ಮುಖಾಮುಖಿಯಾಗಿರುವ ಅಧಿಕಾರಿಗಳವರೆಗೆ ಸುಲಭವಾಗಿ ಅವರನ್ನು ನಿರ್ಲಕ್ಷಿಸುವವರು ಹೆಚ್ಚು. ಪದ್ಮಶ್ರೀ ಪಡೆದ ಮೇಲೂ ಹಾಜಬ್ಬ ತನ್ನ ಜೀವನದಾರಿಯನ್ನು ಬದಲಾಯಿಸಿಕೊಂಡಿಲ್ಲ.

ಅಂದು ಅವರೊಟ್ಟಿಗೆ ಕಿತ್ತಳೆ ಮಾರಿದ ಎಷ್ಟೋ ಬಸ್ಟ್ಯಾಂಡ್ ವ್ಯಾಪಾರಿಗಳು ಇಂದು ಅಂಗಡಿ ತೆರೆದು ದೊಡ್ಡವರಾದ ಕಥೆ ಹರೇಕಳದಿಂದ ಹಂಪನಕಟ್ಟೆವರೆಗೆ ಅಡ್ಡಡ್ಡ ಸಿಗುತ್ತವೆ. ಅದೇ ರೀತಿ ಗುರುವಪ್ಪ ಬಾಳೆಪುಣಿ ಕೂಡ. ಜೀವನ ದಾರಿಯನ್ನು ಬದಲಾಯಿಸಿಕೊಂಡು ಬದುಕಬಹುದಿತ್ತು. ಪ್ರಪ್ರಥಮ ಬಾರಿಗೆ ಹಾಜಬ್ಬನವರನ್ನು ಗುರುತಿಸಿ ಪತ್ರಿಕೆಯ ಮೂಲಕ ಲೋಕಕ್ಕೆ ತೆರೆದಿಟ್ಟು, ಮುಂದಿನ ತಿಂಗಳು ರಾಷ್ಟ್ರಪತಿ ಭವನಕ್ಕೆ ‘ಪದ್ಮಶ್ರೀ’ಗಾಗಿ ತಲುಪಿಸುವರೆಗೆ ಅವರು ಎಲ್ಲೂ ವಿರಮಿಸಿಲ್ಲ. ತಳಸಮುದಾಯದವರ ನೋವಿಗೆ ಸದಾ ಸ್ಪಂದಿಸುವ, ಪರಿಧಿಯಲ್ಲೇ ಉಳಿದವರ ಬಗ್ಗೆಯೇ ಬರೆಯಬೇಕು ಎಂದು ಶಪಥ ಮಾಡಿದ ಹಾಗೆ ಬರೆದು ಬದುಕುತ್ತಿರುವುದು ಖುಷಿಯ ಸಂಗತಿ.

ಮುಂಗುಲಿ ಕೊರಗ, ಚೀಂಕ್ರ ಪೂಜಾರಿ ಮುಂತಾದವರ ಬೆನ್ನಿಗೆ ಬಿದ್ದು ಈಗ ಪುಸ್ತಕ ಬರೆಯಲು ಹೊರಟ ಗುರುವಪ್ಪ ಬಾಳೆಪುಣಿಯವರಿಗೆ ಹೃದಯಪೂರ್ವಕ ಅಭಿನಂದನೆ. ಇದೇ ನವಂಬರ್ 7ನೇ ತಾರೀಕು ಹಾಜಬ್ಬ ರಾಷ್ಟ್ರಪತಿ ಭವನದಲ್ಲಿ ಪದ್ಮಶ್ರೀಯನ್ನು ಪಡೆಯುವ ಹೊತ್ತು ಬಾಳೆಪುಣಿಯ ನಮ್ಮ ಗುರುವಪ್ಪನವರು ಮುಡಿಪಿನ ತಟ್ಟಿ ಹೋಟೆಲಿನ ಕಂಗಿನ ಸಲಾಕೆಯ ಬೆಂಚ್ ಮೇಲೆ ಕೂತು ಒಂದು ಕಟಕ್ ಕಣ್ಣ ಚಹಾ ಕುಡಿಯುತ್ತಾ ಸಂತೋಷ ಪಡುವುದರಲ್ಲಿ ಯಾವುದೇ ಅನುಮಾನ ಇಲ್ಲ…

ಅಭಿನಂದನೆ ಗುರುಪ್ಪನವರೇ..

‍ಲೇಖಕರು Admin

October 27, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: