ಅಬ್ಬಾಸ್ ಸರ್.. ಇನ್ನೊಮ್ಮೆ ಬನ್ನಿ !

ಅಶ್ಫಾಕ್ ಪೀರಜಾದೆ

ಸದಾ ಮಾನವೀಯತೆಗಾಗಿ ಕೋಮ ಸೌಹಾರ್ದತೆಗಾಗಿ ಹಿಂದೂ ಮಸ್ಲಿಂ ಭಾವೈಕ್ಯತೆಗಾಗಿ ತುಡಿಯುವ ಮಾತೃ ಹೃದಯದ ಕಥೆಗಾರ ಅಬ್ಬಾಸ್ ಮೇಲಿನಮನಿಯವರು ಸಾಹಿತ್ಯದ ನನ್ನ ಪಯಣದಲ್ಲಿ ಸದಾ ನೆರಳಾಗಿ ಇದ್ದವರು. ಈಗ ಅವರು ನಮ್ಮನ್ನೆಲ್ಲ ಬಿಟ್ಟು ಅಗಲಿದ್ದಾರೆ ಎನ್ನುವ ಸುದ್ದಿ ನನ್ನ ಮೇಲೆ ಬರಸಿಡಿಲಿನಂತೆ ಬಂದೆರಗಿದೆ. ಅವರ ಅಗಲಿಕೆಯ ನಡುವೆಯೂ ಅವರು ಬಿಟ್ಟು ಹೋದ ಸಾಹಿತ್ಯ ಮತ್ತು ನೆನಪುಗಳು ನಮಗೆ ದಾರಿದೀಪ.

ಅವರನ್ನು ಮೂಖತಃ ಭೇಟಿಯಾಗುವ ಅವಕಾಶ ನನಗೆ ಒದಗಿ ಬರಲಿಲ್ಲವಾದರೂ ಮಾನಸಿಕವಾಗಿ ಸದಾ ನನ್ನೊಂದಗಿ ಇದ್ದರು ಎನ್ನುವ ಹೆಮ್ಮೆ. ನನ್ನ “ಮನೋಲೋಕ” ಕವನ ಸಂಕಲನ ಪ್ರಕಟವಾದಾಗ.. ನಿಮ್ಮ ಕವನಗಳು ಓದಿ ಹೀಗೂ ಬರೆಯಬಹುದೇ ಎನ್ನುವಷ್ಟರ ಮಟ್ಟಿಗೆ ನನಗೆ ಖುಷಿ ಮತ್ತು ಆಶ್ಚರ್ಯ ಏಕಕಾಲಕ್ಕೆ ಆಗಿದೆ ಎಂದು ಹುರಿದುಂಬಿಸಿ ಮಾರ್ಗದರ್ಶನ ಮಾಡುತ್ತ ಬಂದವರು. ಮತ್ತು ಅವರು ಸಂಪಾದಕರಾಗಿದ್ದ ದೀಪಾವಳಿ ವಿಶೇಷಾಂಕವೊಂದರಲ್ಲಿ ಅದೇ ಸಂಕಲನದ “ಬಂಡಾಯದ ಕವಿತೆ” ಎನ್ನುವ ಕವಿತೆಯನ್ನು ಪ್ರಕಟಿಸಿ ಪ್ರೋತ್ಸಾಹಿಸಿದವರು.

ಜತೆಜತೆಗೆ ನಾಡಿನ ಸಾಕಷ್ಟು ಹಿರಿಯ ಸಾಹಿತಿಗಳಿಗೆ ನನ್ನನ್ನು ಹೆಮ್ಮೆಯಿಂದ ಪರಿಚಯಿಸಿದವರು. ಸಮಾಜ ಮತ್ತು ಅಧ್ಯಾತ್ಮದ ಬಗ್ಗೆ  ಸದಾ ಚಿಂತಿಸುತ್ತಿದ್ದ ಅವರು ಸದಾ ಮನುಷ್ಯ ಸಂಬಂದಗಳನ್ನು ಉತ್ತಮ ಪಡಿಸುವ ನಿಟ್ಟಿನಲ್ಲಿ, ಜಾತಿ ಮತಗಳನ್ನು ಮೀರಿ ಮಾನವೀಯ ಸಂಬಂಧಗಳು ಬೆಸೆಯಬೇಕು ಎನ್ನುವ ಹಂಬಲದೊಂದಿಗೆ ಬರೆಯುತ್ತಿದ್ದರು. ಹಿಂದು ಮುಸ್ಲಿಂ ಸಾಮಾರಸ್ಯ ಕಾಪಾಡುವುದು ಇಂದಿನ ತುರ್ತುಗಳಲ್ಲಿ ಒಂದು ಹಾಗೂ ಸಾಹಿತಿಯಾದವನ ನೈತಿಕ ಜವಾಭ್ದಾರಿ ಎಂದು ಭಾವಿಸಿದ್ದರು.

ಅವರ ಇದೇ ಚಿಂತನೆಯ ಪ್ರಭಾವದಿಂದ ಪ್ರೇರಿತನಾಗಿ ನಾನು ಕೂಡ ಸಾಮಾಜಿಕ ಸಾಮರಸ್ಯ ಮೂಡಿಸುವ ಒಂದೆರಡು ಕತೆ ಕವನಗಳು ರಚಿಸಿದ್ದು ಇದೆ. ಇದರಲ್ಲಿ ಬಹುಮುಖ್ಯವಾಗಿ “ಒಂದು ಜೋಡಿ ಕಣ್ಣು” ಎಂಬ (ಅವಧಿಯಲ್ಲಿ ಪ್ರಕಟಿತ)  ಕವನವನ್ನು ಹೆಸರಿಸಬಹುದು. ಮುಂದೆ ಅದೇ ಶೀರ್ಷಿಕೆಯ ಕವನ ಸಂಕಲನ ಪ್ರಕಟಿಸಿದ್ದೆ. ಮುಂದೆ ನನ್ನ “ಜನ್ನತ್ ಮತ್ತು ಇತರ ಕತೆಗಳು” ಆದಿತ್ಯ ಪ್ರಕಾಶನ ಬೆಳಗಾವಿಯಲ್ಲಿ ಮುದ್ರಣದ ಹಂತದಲ್ಲಿದ್ದಾಗ ಕರಡು ಪ್ರತಿಯನ್ನು ಕಳಿಸಿ ಇದನ್ನು ತಾವೇ ಬಿಡುಗಡೆಗೊಳಿಸಿ ಕೃತಿಯ ಕುರಿತು ಮಾತಾಡಬೇಕೆಂದು ವಿನಂತಿಸಿದ್ದೆ.

ಆದರೆ ಅವರಿಂದ ಬಿಡುಗಡೆಯಾಗುವ ಭಾಗ್ಯ ಅದಕ್ಕೆ ಸಿಗಲೇ ಇಲ್ಲ.. ಏಕೆಂದರೆ ಆ ಕೃತಿ ಮುದ್ರಣಗೊಂಡು ನನ್ನ ಕೈ ಸೇರಬೇಕಾದರೆ ಸರಿಸುಮಾರು ಐದು ವರ್ಷಗಳೇ ತಗೆದುಕೊಂಡಿತು. ಆ ಐದು ವರ್ಷಗಳ ಬದಲಾದ ಪರಿಸ್ಥಿಗಳಲ್ಲಿ ನಾನು ಸ್ಥಳಾಂತರಗೊಂಡು   ಧಾರವಾಡ ಸೇರಿದ್ದೆ. ಆಗ ಆ ಕೃತಿ ಧಾರವಾಡದ ನೆಲದಲ್ಲಿ ನನ್ನ ಇಲಾಖೆಯ ಸಾಹಿತಿ ಮಿತ್ರ ಮಾರ್ತಂಡಪ್ಪ ಕತ್ತಿ ಇವರ ನೇತ್ರತ್ವದಲ್ಲಿ ಡಾ. ಶಶಿಧರ ನರೇಂದ್ರ ಅವರ ಉಪಸ್ಥಿತಿ ಹಾಗೂ ಪರಿಚಯಪರ ಮಾತುಗಳೊಂದಿಗೆ ಲೋಕಾರ್ಪಣೆಗೊಂಡಿತ್ತು.

ಆದರೆ ಅಬ್ಬಾಸ್ ಸರ್ ರಿಂದ ಕೃತಿ ಬಿಡುಗಡೆ ಮಾಡಿಸಬೇಕು ಮತ್ತು ನನ್ನ ಯಾವುದಾದರು ಪುಸ್ತಕಕ್ಕೆ ಮುನ್ನುಡಿ ಬರೆಸಬೇಕು ಎನ್ನುವ ಕನಸು ಕೊನೆಗೂ ನನಸಾಗಲೇ ಇಲ್ಲ. ಇದಕ್ಕೆ ಯಾರನ್ನೂ ದ್ವೇಷಿಸಿ ಅರ್ಥವಿಲ್ಲ. ತಪ್ಪು ನನ್ನದೇ. ನಾನು ಇಡೀ ಸಮಾಜದಿಂದಲೇ ಸಂಪರ್ಕ ಕಡಿತಗೊಳಿಸಕೊಳ್ಳಬೇಕು ಎನ್ನುವ ನಿರ್ಧಾರದಿಂದ ನನಗೆ ಸಂಪರ್ಕದ ಎಲ್ಲ ಮಾರ್ಗಗಳನ್ನು ಮುಚ್ಚಿಕೊಂಡು ಬಿಟ್ಟಿದ್ದೆ. ಇಂಥದರಲ್ಲಿ ನನ್ನ ಸಾಕಷ್ಟು ಸ್ನೇಹಿತರು, ಒಡನಾಡಿಗಳು, ಹಿತಚಿಂತಕರು ದೂರಾಗಿದ್ದರು. ಅಂಥವರಲ್ಲಿ ಅಬ್ಬಾಸ್ ಮೇಲಿನಮನಿ ಸರ್ ಒಬ್ಬರು.

ನಾನು ಬಹುದಿನಗಳ ನಂತರ ಮತ್ತೇ ಸಾಹಿತ್ಯಲೋಕಕ್ಕೆ ಹಿಂದಿರುಗಿದಾಗ ನನ್ನಿಂದ ದೂರಾದವರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದೆ. ಪೋನ ಮೂಲಕ ಸಾಮಾಜಿಕ ಜಾಲತಾಣಗಳ ಮೂಲಕ ಬಹಳಷ್ಟು ಆತ್ಮೀಯರಿಗೆ ಸಂಪರ್ಕಿಸುವಲ್ಲಿ ಸಫಲ ಸಹ ಆಗಿದ್ದೆ. ಅದರಂತೆ “ಅಕ್ಕಡಿ ಸಾಲು” ಖ್ಯಾತೀಯ ಹಿರಿಯ ಕವಿ ಎ ಎಸ್ ಮಕಾಂದಾರ್ ಸರ್ ಅವರನ್ನು ಮಾತಾಡಿ ಕಳೆದು ಹೋಗಿದ್ದ ಅಬ್ಬಾಸ್ ಸರ್ ಅವರ ಮೊಬೈಲ್ ಸಂಖ್ಯೆಯನ್ನು ಪಡೆದುಕೊಂಡಿದ್ದೆ. ಆದರೆ ಹಿಂಜರಿಕೆಯಿಂದಲೋ, ಸಂಕೋಚದಿಂದಲೋ ಅವರೊಂದಿಗೆ ಮಾತ್ನಾಡುವ ಸಾಹಸ ಮಾಡಲಾಗಲಿಲ್ಲ.

ಇಂದೋ ನಾಳೆಯೋ ಮಾತಾಡಬೇಕು ಎನ್ನುವ ಅಸೆಯಲ್ಲಿ ಎಷ್ಟೊಂದು ದಿನಗಳು.. ತಿಂಗಳಗಳು.. ವರುಷಗಳು ಉರುಳಿ ಹೋದವು ಗೊತ್ತೇಯಾಗಲಿಲ್ಲ. ನಾನು ಅವರೊಂದಿಗೆ ಮಾತಾಡಬೇಕು.. ಅವರಿಂದ ಮುನ್ನುಡಿ ಬರೆಸಬೇಕು.. ಪುಸ್ತಕ ಬಿಡುಗಡೆಗೊಳಿಸಬೇಕು ಎನ್ನುವ ಆಸೆಗಳು ಕನಸು ಹಾಗೇ ಉಳಿದುಕೊಂಡು ಬಿಟ್ಟವು.. ಅದರಂತೆ ಸಾಹಿತ್ಯದಲ್ಲಿ ಇನ್ನೂ ಆಗಾಧವಾದ ಸಾಧನೆ ಮಾಡಬೇಕೆನ್ನುವ ಅವರ ಕನಸು ಕೂಡ… ನನ್ನ ನಿಮ್ಮಂಥ ಹಲವಾರು ಕನಸುಗಾರರ ಭಗ್ನಗೊಂಡ ಕನಸುಗಳ ಕಥೆ ಹೆಣೆಯಬೇಕಿದೆ.. ಜಾತಿ ಮತ ಪಂತ ಪಂಗಡಗಳ ದ್ವೇಷದ ದುಳ್ಳುರಿಯಲ್ಲಿ ಬೇಯುವ ಜೀವಿಗಳಿಗೆ ಪ್ರೀತಿಯ ಪಾಠ ಓದಿಸಬೇಕಿದೆ.. ಅಬ್ಬಾಸ್ ಸರ್ ಸಾಧ್ಯವಾದರೆ ಮತ್ತೊಮ್ಮೆ ಸಾಹಿತಿಯಾಗಿ ಹುಟ್ಟಿ ಬನ್ನಿ.

‍ಲೇಖಕರು Avadhi

September 23, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. T S SHRAVANA KUMARI

    ಕೆಲವು ಆಸೆಗಳು ಹೀಗೆಯೇ ಉಳಿದೇ ಹೋಗುತ್ತವೆ.

    ಪ್ರತಿಕ್ರಿಯೆ
  2. ಎ ಎಸ್. ಮಕಾನದಾರ

    ಮಾನವೀಯ ಕವಿ ಸಹೃದಯಿಕತೆಗಾರ , ಕಥಾ ಲೋಕದ ಜಂಗಮ ಪ್ರೊ ಅಬ್ಬಾಸ್ ಮೇಲಿನಮನಿ ಅವರ ಅಕಾಲಿಕ ನಿಧನ ದಿಂದ ಸರಸ್ವತ ಲೋಕ ಬಡವಾಗಿದೆ. ನನ್ನಂಥ ಅಸ್ಪಾಕ್. ಮಹದೇವ್ ಬಸರಕೋಡ ಅಂತಹ ಅನೇಕ ಸಸಿಗಳಿಗೆ ನೀರು ಉಣಿಸಿ ಪೋಷಿಸಿ ಬೆಳೆಸಿದ್ದು ಅಬ್ಬಾಸ್ ಸರ್
    ಅವರ ಅನೇಕ ಕನಸುಗಳು ಕನಸಾಗಿಯೇ ಉಳಿದಿವೆ. ಪರಿಷತ್ತ್, ಪ್ರಾಧಿಕಾರ. ಗೆಳೆಯರು ಈ ದೆಸೆಯತ್ತ ಚಿಂತಿಸ ಬೇಕಿದೆ
    ಅಂತಹ ಸಂದರ್ಭಕ್ಕಾಗಿ ಕಾಯುವೆ ಅವಧಿ ಬಳಗಕ್ಕೆ ಅಸ್ಪಾಕ್ ಸರ್ ಅವರಿಗೆ ಶುಭಾಶಯಗಳು

    ಪ್ರತಿಕ್ರಿಯೆ
  3. ಅಶ್ಫಾಕ್ ಪೀರಜಾದೆ

    ನನ್ನ ಬರಹ “ಅವಧಿ” ಪ್ರಕಟಿಸಿದ
    ಜಿ ಎನ್ ಮೋಹನ್ ಸರ್,
    T S SHRAVANA KUMARI
    ಮತ್ತು
    ಎ ಎಸ್. ಮಕಾನದಾರ ಅವರಿಗೆ
    ತುಂಬ ಹೃದಯದ ಧನ್ಯವಾದಗಳು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: