ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಪ್ಪ ಮತ್ತೇ ನೆನಪಾದ…

ಕೊಟ್ರೇಶ್ ಕೊಟ್ಟೂರು

ಈಗೀಗ ಅಪ್ಪ ಮತ್ತೆ ಮತ್ತೇ
ನೆನಪಾಗುತ್ತಿದ್ದಾನೆ…
ಪ್ರತೀ ಸಲ ಗಾಡಿ ಹತ್ತುವಾಗಲೂ
ಅವನ ಧ್ವನಿ ಕೇಳಿಸಿದಂತೆ
ಹಿಂತಿರುಗಿ ನೋಡಿದರೆ ಮತ್ತದೇ ಕತ್ತಲು

ಅವನೆಂದೂ ತನ್ನ ಹೊಟ್ಟೆಯ
ತುಂಬಿಸಿಕೊಳ್ಳಲೇ ಇಲ್ಲ
ಅವನಿಗೇನಿದ್ದರೂ ಮಕ್ಕಳದೇ ಚಿಂತೆ
ಅವರೂಟ ಮಾಡಿದರೆ ಅವನು ನಿಶ್ಚಿಂತ

ಅಪ್ಪ ಮೈ ತೊಳೆದು ಹೊರಬಂದು
ಪಂಜೆ ಕಟ್ಟುವಾಗ ಸೊಂಟದಲ್ಲಾದ
ಬಿಳಿ ಕೆಂಪು ಬಣ್ಣವ ನೋಡಿ
ನಾ ಕೇಳಿದೆ ಒಮ್ಮೆ,
“ಅಪ್ಪಾ… ಏನದು ಗುರುತು?”
ಅದಕ್ಕೆ ಅಪ್ಪ ಅಂದ
“ಲೇ ಹುಡ್ಗಾ, ನಮ್ಮಪ್ಪುಗ ನಾನೂ ಕೇಳ್ತಿದ್ದೆ
ಯಪ
ಹೊಟ್ಟೆ ಹಸಿದೈತೆಪ, ಉಣ್ಣಾಕ ಇಲ್ಲ ಅಂದ್ರ
ಬಿಗಿಕಟ್ಟು ಪಂಜೀನಾ, ಅದ್ಹೆಂಗ
ಹಸುವಕತಿ ನೋಡನು ಅಂತಿದ್ದ
ಅದ್ಕ ಪಂಜಿ ಬಿಗಿ ಕಟ್ಟಿ ಕಟ್ಟಿ ಹಿಂಗಾಗೈತಿ”
ಅಂದ…

ಅವನ ಉತ್ತರ ಕೇಳಿ ನಾ ಬೆಸ್ತು ಬಿದ್ದಿದ್ದೆ.
ಅಪ್ಪನ ಹಸಿವು ಅದೆಷ್ಟು ಭೀಕರ
ನೆನೆದರೆ ಭಯಾನಕ
ಯಾವ ಹಸಿವೂ ಅಪ್ಪನ ಹಸಿವಿಗೆ
ನಿಲುಕಲಾರದ್ದೇನೋ?

ಅಪ್ಪನ ಹಸಿವಿಗೆ ಕರಿಯ ಚರ್ಮ
ಕೆಂಪು ಬಿಳಿಯಾದದ್ದು ಈಗ ವಿಪರ್ಯಾಸ

ಅವನ ಹರಿದ ಬನಿಯನ್ನು
ನೂರಾರು ಕತೆಗಳನ್ನು ಹೇಳುತ್ತಿತ್ತು
ಆ ಕತೆಗಳನ್ನು ಅರಿಯುವಲ್ಲಿಯೇ
ನಾ ಸೋತುಹೋದೆ.

ಹೋಗುವ ಮುನ್ನ “ನೀನೇ ನನ್ನ ಪಾಲಿನ
ಕೊಟ್ರಯ್ಯನಪ್ಪ” ಎಂದು ಬೆನ್ನು ಸವರಿ,
ಹಣೆಗೆ ಕೊಟ್ಟ ಮುತ್ತು;
ಅದೇ ಕೊನೆಯ ಮುತ್ತಾಗಬಹುದೆಂದು
ನಾ ಊಹಿಸಿರಲೇ ಇಲ್ಲ

ಪ್ರತೀ ಸಲ ನಾ ಮುತ್ತು ಕೊಡುವಾಗಲೂ
ಮುಖ ಮುಚ್ಚಿಕೊಳ್ಳುತ್ತಿದ್ದ ಅಪ್ಪ
ಅಂದೇಕೋ ಸಂಕೋಚ ಬಿಟ್ಟಿದ್ದ
ಮುತ್ತು ಕೊಡಲು
ತೊಡೆಯ ಮೇಲೆ ಮಲಗಿದ ಅಪ್ಪ
ನಂತರ ಏಳಲೇ ಇಲ್ಲ…

ಅವನ ನೆನಪಿನಲ್ಲಿ
ವರ್ತಮಾನವ ನೂಕುತ್ತಿದ್ದೇನೆ
ಕೊನೆಯ ದಿನದವರೆಗೆ
ಅಪ್ಪ ಎಂದಿಗೂ ಶಾಶ್ವತ
ನನ್ನೆದೆಯೊಳಗೆ…

‍ಲೇಖಕರು Avadhi

21 November, 2020

2 Comments

  1. ದಾಕ್ಷಾಯಣಿ ಮಸೂತಿ

    ಆಪ್ತ ಕವಿತೆ

  2. Kotresh Arsikere

    ಚೆಂದದ ಅಪ್ಪನ ಕವಿತೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading