ಹಬ್ಬಿದಾ ಬಲೆ ಮಧ್ಯದೊಳಗೆ…

ರಾಜು ಎಂ ಎಸ್

ಸಾಲಿಗುಡಿ ಬಿಟ್ ಕೂಡ್ಲೇ ನಿಂಗಿ, ಗುಡ್ಲು ಕಡಿಕ್ ಹೊಂಟವ್ಳು… ತಾರ್ಸಿ ಮನೆ ಗುರ್ಲಿಂಗಪ್ಪನ್  ಮಗ್ಳು ಪರಿಮಳ ತನ್ ಕೈಲಿ ರಿಮೋಟ್ ಹಿಡ್ದು ಡ್ರೋಣ್ ಹಾರ್ಸೋದನ್ನೇ ಪಿಳಿ ಪಿಳಿ ನೋಡ್ತಾ  ನಿಂತ್ಲು.

“ಏ ನಿಂಗಿ, ನಾ ಮೂರ್ದಿನ ಬಿಟ್ ಬರ್ತೀನಿ ಇಸ್ಕೂಲ್ ಗೆ. ಈಗ ನಂಕೂಡೇ ಆಡ್ಬಾರೇ” ಪರಿ ಕರುದ್ಲು.

ಪಾಟಿಚೀಲನ ಬೌಲರ್ ತರ  ಕಾಂಪೌಂಡ್ ಮೆಲ್ ಎಸ್ದು, ದೊಡ್ ಗೇಟ್ ತಳ್ಳಿ ನುಗ್ದೋಳೇ ನಿಂಗಿ, ಸ್ವಾಟೇ ತಿರ್ವಿ, ‘ಫಿವ್!’ ಅಂತ ತುಟಿ ಉಸ್ರು ಮ್ಯಾಕ್ ಊದಿ ಮುಂದಲೆಗೂದ್ಲು ಹಾರ್ಸಿದ್ಲು, ‘ಏರ್ ಟೆಲ್ ಬಾಲೆ’ ಹಾಂಗೆ!

ನಿಂಗಿಗೆ ಸೊಲುಪ ಇಂಗ್ಲಿಷ್, ಟಿವಿ, ಮೊಬೈಲ್, ಟಿಕ್ ಟಾಕ್, ಪಬ್ಜಿ ಗುಂಗು ಜಾಸ್ತಿ.

” ಏ ಪರಿ, ಇದ್ರಲ್ಲೇ ಹಾರ್ ವೊಂಟೋಗಣಾ, ಮಾರ್ಸ್ ಗೆ,… ಸಾಲಿಗುಡಿ ಮಾಸ್ತರ್ ಹೇಳ್ತಾರಲ್ಲ ಹಂಗೆ?”

“ಆಹಹಹಹ! ಬುಳ್ಳಿ! ಮಂಗಳ ಗಂಡಸ್ರಿಗೆ…! ನಮ್ಗೆ ವೀನಸ್… ಶುಕ್ರ!”

“ನಿಂಗೊತ್ತಾ… ವೀನಸ್ ಳ ಮಗ ಕ್ಯೂಪಿಡ್, ಅಂದ್ರೆ ಎರೋಸ್! ಪರಿ, ಆ ಸುಂದ್ರಾಂಗ ರಾಜ್ಕುಮಾರ ಸಿಗ್ತಾವ್ನ ಅಲ್ಲಿಗ್ಹೋದ್ರೆ? … ಇಂಗ್ಲಿಷ್ ಮೇಷ್ಟ್ರು ಹೇಳಿದ್ಹಂಗೆ!!”

“ಆ್ಯsssವ್! ದೂರದ್ ಬೆಟ್ಟ ನುಣ್ಣಗೆ…ಹಂಗೇ ದೂರದ್ ಗ್ರಹನೂವೆ… “

ನಿಂಗಿ ಮ್ಯಾಲ್ ನೋಡ್ಕಂತಾ, ಆಕಾಶ ತಡ್ಕಾಡ್ತಾ ಹೇಳಿದ್ಲು, ” ಈ ಡ್ರೋಣ್ ಕಂಡ್ಹಿಡ್ದದ್ದು, ಒಬ್ಬ ಜ್ಯೂವಿಷ್ , ಅಬ್ರಹಾಂ ಕರೀಂ… ನಾವ್ ಇಂಡಿಯನ್ಸು ಹಾರುಸ್ತೀವಿ… ಅಷ್ಟೇ! ಪುಷ್ಪಕ ವಿಮಾನನೂ ಹಿಂಗೇ ಇತ್ತೇನಪಾ?! ವಾವ್! ಹೆಂಗ್ ಹಾರುಸ್ತಿದೀವಿ ನೋಡು…! ಗಾಳಿಪಟ ಹಾರ್ಸೋತರಾನೇ… ಬಲ್ ಮಜಾ ಐತೆ”.

“ನಿಂಗಿ, ಮೊನ್ನೆ ಒಂದ್ ಪಾರಿವಾಳದ್ ರೆಕ್ಕೆ ಕತ್ರಿಸ್ಬಿಡ್ತು , ನನ್ ಡ್ರೋಣ್ … ಪಾಪ! ನನ್ ಕಣ್ಮುಂದೇನೇ ವಿಲ್ವಿಲಾ ಒದ್ದಾಡಿ ಪ್ರಾಣ ಬಿಡ್ತು. ಅವತ್ತು ನಂಗೆ ಕೂಳು ನೀರೇ ಸೇರ್ಲಿಲ್ಲಪೀ …!

ಕೊಂಚ ಪೆಚ್ಚಾದ್ರೂ , ತಡವರ್ಸಿಕೊಂಡು ನಿಂಗಿ ಅಂದ್ಲು, ” ಅಯ್ಯೋ ಪರೀ,  .. ಸ್ವರ್ಗದ್ ‘ ಪರಿ’ ರೆಕ್ಕೇನೇನ್ ಕತ್ತರಿಸ್ಲಿಲ್ವಲ್ಲ ನೀನೇನು? ಎನ್ಮಾಡಕಾಕತಿ ಹೇಳು… ಆ ಪಾರಿವಾಳದ್ ಹಣೆಬರಾ ಅಷ್ಟೇ ಇತ್ತೂ ಅನ್ನು…”

“ಹ್ಞಾ … ಇರ್ಲಿ ಬಿಡತ್ಲಾಗ್ … ‘ಮಾನಿಷಾದ’…. ಹೇಳಕಾಗ್ತಿತ್ತೇ… ಅಲೆಲೆಲೆಲೇ…!…! ಡ್ರೋಣ್ ಕಂಟ್ರೋಲ್ ತಪ್ಪಿ, ಭೂತಪ್ಪನ್ ಗುಡ್ಡೆ ಪಕ್ಕದ್ ಮಾವಿನ್ ಕೊಪ್ಲಿಗ್ಹೋಗಿ ಬಿತ್ ನೋಡಲ್ಲಿ! ನಡೀ, ಓಡು, ತಗಂಬರಾಣಾ…”

” ಆ ಕ್ವಪ್ಲಾಗ್ , ಹುಚ್ ಸಾಕವ್ವದಳ್ ಕಣೇ” ಅಂದ್ಕೊತಾನೇ ಇಬ್ರೂ ಓಟ ಕಿತ್ರು ಆ ಕಡೆಗೆ.

ಕ್ವಪ್ಲಾಗಿದ್ದ ಉತ್ರಾಣಿ ಕಡ್ಡಿ ಮುಳ್ಗಳು ಬಾನಿಗೆ ನಿಮಿರಿ ನಿಂತು ಹಸಿದ ಕೇಕೆಯ ಕೈಚಾಚಿ ನಿಂತಂಗಿದ್ವು , ಬತ್ತದ್ ಕಾಳ್ನಂಗೆ ಲಂಗ ಜಾಕಿಟ್ ಮ್ಯಾಲೆಲ್ಲಾ ಮುತ್ಕೊಂಡ್ವು. ಮೈಕೈ ಪರ್ಚಿದ್ವು. ತುಟಿ ಹರಿದ್ವು. ಪಬ್ಜಿ ಆಡ್ವಾಗ ಡಿಫೆನ್ಸ್ ಮಾಡ್ಕಳಾಕೂ ಆಗ್ದಂಗೆ ಫೀಲಾಯ್ತು ನಿಂಗಿಗೆ!

“ಡ್ರೋಣ್ ಸೆನ್ಸಾರ್ ಲೈಟ್, ಇಲ್ಕಾಣ್ತಾ ಐತೆ ನೋಡೇ ಪರಿ” ಅಂತ ನಿಂಗಿ ಕೈಕೈ ಹಿಡಿದು ಮುಂದ್ ಹೊಂಡ್ತಿದ್ಹಂಗೇ… ಮೈ ತುಂಬಾ ಕರಿಕೂದ್ಲಿದ್ದ ದೊಡ್ದೊಂದು ವಿಕಾರಿ ಜೇಡ, ಜೊಲ್ಸುರ್ಸ್ಕೊಂಡ್ ನೇಯ್ದ ಬಲೆ ಮೈಗಡರಿ ಇವ್ರಿಬ್ರನ್ನೂ ಕೆಳಬೀಳಿಸ್ತು.

ವರ್ಷದ್ಹಿಂದೆ ತನ್ಮಗ್ಳನ್ನ ಇದೇ ಕ್ವಪ್ಲು ಬಲಿ ತಗೊಂಡದ್ನ ಮರಿಯಕ್ಕಾಗ್ದೆ, ಹುಚ್ಚಿಯಾಗಿ ಇಲ್ಲೇ ಅಂಡಲೀತಿದ್ದ ಮ್ಯಾಗ್ಳಮನೆ ಸಾಕವ್ವ, ಇವ್ರ ಪರ್ದಾಟ ಚೀರಾಟ ಕಂಡು, ಭ್ರಾಂತಿ ಹೇಚ್ಚಾದವ್ಳಂತೆ ಏನನ್ನೋ ಪಿತ್ರುಗುಣಿ ಪಿತ್ರುಸ್ತಾ ಅರ್ಥವಿಲ್ದಂಗೆ ವದ್ರಿದ್ಲು… “…ಹ್ರೂಮ್… ಮತ್ರಸ್…ಹತ್ರಸ್… ಚಿತ್ರಸ್… ಪಿಚ್ಕೊಳಿ… ಕಿತ್ರಸ್…. ಕೆಂಚುಳಿ… ಸತ್ರಸ್…” ಅಂತಾ ರಾಪಾಡಿ, ಜಾಲ ಕೊಡ್ವಿದ್ದೇ ತಡ, ನಿಂಗಿ ಪರಿ ಇಬ್ರೂ, ಭೂತಪ್ಪನ್ಗುಡಿಯ ಕಲ್ಲನ್ನೆತ್ತಿ ಜೇಡನ ಜಜ್ಜಿ ರಸವಾಡಿಸಿದ್ರು!

ಭೂತಪ್ಪನ್ ಕಲ್ ಮ್ಯಾಲೆ ಮೆತ್ಕೊಂಡಿದ್ದ ಭಕ್ತ್ರು ಹಚ್ಚಿದ್ದ ಭಸ್ಮ ಊದ್ಬತ್ತಿ ಪುಡಿ ಅರುಶ್ಣ ಕುಂಕ್ಮ ಒಣಗಿದ್ ಹೂ ಪತ್ರೆ ಬಾಳೆಬಿಚ್ವಾಲೆ ಒಣ್ಗಿದ್ ಹಕ್ಳಗಟ್ಟಿದ್ ಕುರಿಬಲಿ ರಕ್ತ ಎಲ್ಲದ್ರ ನಡ್ವೆ ಸಮಾಧಿಯಾದ ಜೇಡ್ರ ರಸವನ್ನ ಡ್ರೋಣ್ ನ ಕ್ಯಾಮೆರಾ ಕಣ್ತೆರ್ದು ಬ್ಲಿಂಕಿಸುತ್ತಾ, ಚಿತ್ರಿಸಲಾರಂಭಿಸಿತು…

ಕತ್ಲ  ಕ್ವಪ್ಲು ದಾಟಿ ಸಾಕಿ ನಿಂಗಿ ಪರಿ ಸಂಭ್ರಮಿಸಿದರು.

‍ಲೇಖಕರು Avadhi

November 21, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಪ್ರದೀಪ ಬಳ್ಳಾರಿ

    ಹಳ್ಳಿ ಸೊಗಡಿನ ಗ್ರಾಮ್ಯ ಭಾಷೆಯ ಈ ಲೆಖನ ವೈಜ್ಞಾನಿಕ ಮಾಹಿತಿ ಯನ್ನು ಒಳಗೊಂಡಿದೆ .ನಿಮ್ಮಿಂದ ಇನ್ನೂ ಹೆಚ್ಚಿನ ಲೇಖನ ಗಳು ಮೂಡಿಬರಲಿ….

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: