ಅಪ್ಪ ಕೊಟ್ಟು ಹೋದ ಆಸ್ತಿ…

ರಾಜೇಶ್ವರಿ ಹುಲ್ಲೇನಹಳ್ಳಿ

ಮಾತೃ ದೇವೋಭವ, ಪಿತೃ ದೇವೋಭವ, ಆಚಾರ‍್ಯ ದೇವೋಭವ, ಎನ್ನುವಂತೆ, ಜನ್ಮದಾತರು ಹಾಗೂ ವಿದ್ಯೆ ಬುದ್ಧಿ ಕಲಿಸಿ ಸರಿದಾರಿ ತೋರುವ ಗುರುಗಳು, ನಿಜವಾಗಿ ಇವರುಗಳು ಕಣ್ಣಿಗೆ ಕಾಣುವ ದೇವರುಗಳು ಹಾಗೂ ಪೂಜನೀಯರು. ಎಲ್ಲರ ಬದುಕಿನಲ್ಲಿ ಈ ಮೂವರ ಪಾತ್ರ ಗುರುತರವಾದದ್ದು. ಅಮ್ಮನ ಪಾತ್ರದಂತೆ ಅಪ್ಪನ ಪಾತ್ರ ಕೂಡ ಹಿರಿದೇ. ಎಲ್ಲ ಮಕ್ಕಳಿಗೂ ತಂದೆಯೇ ಹೀರೋ, ಅಂತೆಯೇ ನನಗೂ ಕೂಡ. ಅಪ್ಪನನ್ನು ನಾವು ಅಣ್ಣ ಎಂದೇ ಕರೆಯುತ್ತಿದ್ದುದು.

ನನ್ನಪ್ಪನೆಂದರೆ ಅಪಾರ ಪ್ರೀತಿಯ ಆಗರ, ಅಪರಿಮಿತ ಮಮತೆಯ ಸಾಗರ ಕಣ್ಣೆದುರಿನ ದೈವ. ಅಪ್ಪ ನನಗೆ ಅಪ್ಪನಷ್ಟೇ ಅಲ್ಲ, ಆತ್ಮೀಯ, ಮಾರ್ಗದರ್ಶಿ, ಒಳ್ಳೆಯ ಸ್ನೇಹಿತ, ನನ್ನ ಬದುಕಿನ ಬೆನ್ನೆಲುಬು ದಾರಿದೀವಿಗೆ, ನನ್ನನ್ನು ಕಣ್ರೆಪ್ಪೆಯಂತೆ ಕಾಪಿಟ್ಟವರು. ಬಾಲ್ಯದಲ್ಲಿ ತಗಡಿನ ಸ್ಲೇಟನ್ನು ಇದ್ದಿಲಿನಿಂದ ಉಜ್ಜಿ ತೊಳೆದು ಕನ್ನಡ ಉಕ್ತಲೇಖನ ಹೇಳಿ ಮಗ್ಗಿ ಬರೆಸುವಾಗಿನ ಶಿಸ್ತು, ಅಕ್ಷರ ಅಂಕುಡೊಂಕಾಗದಂತೆ ಏರುಪೇರಾಗದಂತೆ ದುಂಡಗೆ ಒತ್ತು ಧೀರ್ಘ ಕಾಗುಣಿತಗಳು ತಪ್ಪಾಗದಂತೆ ಬುನಾದಿ ಹಾಕಿದರು. ವಿಶೇಷವೆಂದರೆ ಅವರು ಬರೆಸುತ್ತಿದ್ದ ಉಕ್ತಲೇಖನದಲ್ಲಿ ಇಂಗ್ಲೀಷ್ ಪದಗಳನ್ನು ಕನ್ನಡದಲ್ಲಿ ಹಾಗೂ ಕ್ಲಿಷ್ಟ ಪದಗಳನ್ನು ಬರೆಸುತ್ತಿದ್ದುದು.

ನಾನು ೫ ನೇ ತರಗತಿಗೆ ಹೋದಾಗ ನನ್ನ ಹೆಸರು ಇಂಗ್ಲೀಷಿನಲ್ಲಿ ಏನು ಎಂದು ಕೇಳುತ್ತಿದ್ದುದು, ಹೆಸರು ಇಂಗ್ಲೀಷಿನಲ್ಲಿಯೂ ರಾಜೇಶ್ವರಿನೆ ಎಂದು ಹೇಳಿದ್ದು ಇನ್ನೂ ನೆನಪಿಗೆ ಬರುತ್ತದೆ. ಮಕ್ಕಳೈವರನ್ನು ಸಮನಾಗಿ ಪ್ರೀತಿಸಿದವರು. ಬಾಲ್ಯದಲ್ಲಿ ಶಾಲೆಗೆ ಸೇರಿಸಲು ಬಂದಂತೆ ನನಗೆ ಕೆಲಸ ಸಿಕ್ಕಾಗಲೂ ನನ್ನೊಂದಿಗೆ ಜೊತೆಯಲ್ಲಿ ಬಂದಿದ್ದರು. ಮಕ್ಕಳು ಎಷ್ಟೇ ದೊಡ್ಡವರಾದರೂ ಹೆತ್ತವರಿಗೆ ಎಂದೆಂದಿಗೂ ಚಿಕ್ಕವರೇ ಅಲ್ಲವೇ? ಅವರು ಹಾಸಿಗೆ ಹಿಡಿಯುವವರೆಗೂ ಪ್ರತಿದಿನ ನನ್ನನ್ನು ಆಫೀಸಿಗೆ ಬಿಡುತ್ತಿದ್ದರು. ನಾನಂತೂ ಒಂದಲ್ಲಾ ಒಂದು ಕೆಲಸಕ್ಕೆ ಅಪ್ಪನನ್ನು ಆಶ್ರಯಿಸುತ್ತಿದ್ದೆ ಒಂದು ರೀತಿ ಪರಾವಲಂಬಿಯಂತೆ.

ಮರೆಗುಳಿಯಾದ ನಾನು ಒಮ್ಮೆ ಕಛೇರಿಗೆ ಪಂಚ್ ಕಾರ್ಡ್ ಮರೆತು ಹೋಗಿ ಫಜೀತಿಪಟ್ಟಾಗ ಕೂಡಲೇ ಅಪ್ಪನಿಗೆ ಫೋನಾಯಿಸಿ ಮನೆಯಲ್ಲಿ ಬಿಟ್ಟು ಬಂದಿದ್ದ ಕಾರ‍್ಡನ್ನು ತರಲು ಹೇಳಿದರೆ ಪಾಪ! ಇಳಿವಯಸ್ಸಿನಲ್ಲೂ ಸ್ವಲ್ಪವೂ ಬೇಸರಿಸದೆ ಕಛೇರಿಗೆ ಅದೂ ನಾನು ಕೆಲಸ ಮಾಡುತ್ತಿದ್ದ ವಿಭಾಗಕ್ಕೇ ತಂದು ತಲುಪಿಸಿದಾಗ ನನ್ನ ಕಣ್ಣಂಚು ಒದ್ದೆಯಾಯಿತು. ಅದೆಷ್ಟೋ ಬಾರಿ ಅಪ್ಪನ ಋಣ ತೀರಿಸುವುದಾದರೂ ಹೇಗೆ ಎಂದುಕೊಳ್ಳುತ್ತಿದ್ದೆವು, ಅದಕ್ಕೋ ಏನೋ ದೇವರು ನಮಗೆ ಋಣ ತೀರಿಸುವ ಪರೀಕ್ಷೆಯೊಡ್ಡಿದ ಆ ಪರೀಕ್ಷೆಯಲ್ಲಿ ನಾವು ಗಳಿಸಿದ್ದು ನೂರಕ್ಕೆ ನೂರು ಅಂಕ.

ತನ್ನೂರೆಂದರೆ ಬಲು ಪ್ರೀತಿ. ಊರ ಜನರಿಗೂ ಇವರನ್ನು ಕಂಡರೆ ಅಚ್ಚುಮೆಚ್ಚು, ಸರಕಾರದಿಂದ ಸಿಗುವ ಎಲ್ಲ ಸವಲತ್ತುಗಳನ್ನು ಹೋರಾಟ ಮಾಡಿ ಊರಿಗಾಗಿ ದೊರಕಿಸಿಕೊಡುತ್ತಿದ್ದರು. ಒಂದು ಪುಟ್ಟ ಕುಗ್ರಾಮವಾದ ನಮ್ಮೂರು ಇಂದು ಚಂದದ ಊರಾಗಿದ್ದರ ಹಿಂದೆ ಅಪ್ಪನ ಪರಿಶ್ರಮ ಹೆಚ್ಚೆಂದರೆ ತಪ್ಪಾಗಲಾರದು. ಊರಿನವರೆಲ್ಲ ಹಾಸನದ ಅಪ್ಪ, ಹಾಸನದ ಮಾವ, ಅಯ್ಯ ಎನ್ನುತ್ತ ಊರಿಗೂರೇ ಗೌರವಿಸುತ್ತಿದ್ದರು. ಊರ ಜನರೆಲ್ಲ ಹಾಸನದಪ್ಪನ ದನಿ ಕೇಳ್ತು ಅಂದ್ರೆ ಊರಿಗೆ ಬಸ್ ಬಂತು ಅಂತ ಬಿಡಿ ಎನ್ನುತ್ತಿದ್ದರು.

ಬದುಕಿನಲ್ಲಿ ಅಗತ್ಯಕ್ಕಿಂತ ಏನನ್ನೂ ಆಶಿಸದವರು, ಜಾಣ್ಮೆಯಲ್ಲಿ ಅವರಿಗಿಂತ ಜಾಣರಿಗೆ, ಅಂತಸ್ತಿನಲ್ಲಿ ಅವರಿಗಿಂತ ಕಡಿಮೆಯವರಿಗೆ ಹೋಲಿಕೆ ಮಾಡಿಕೊಂಡು, ಬದುಕಿ ನಮಗೂ ಅಂತೆಯೇ ಬದುಕಲು ಕಲಿಸಿದರು ಕೂಡ. ಭಗವಂತ ಕೊಡಲಿಲ್ಲವೆಂದು ಕೊರಗದೆ, ಕೊಟ್ಟಿರುವುದಕ್ಕೆ ಬೀಗದೆ ಕೊಟ್ಟಿರುವುದಷ್ಟೇ ಸಾಕೆಂದು, ಸದಾ ಹನುಮಂತನಿಗೆ ವಂದಿಸುತ್ತಿದ್ದರು. ಹನುಮ ರಾಮ ಪ್ರಿಯನಾದರೆ, ನಮ್ಮಪ್ಪ ಹನುಮ ಪ್ರಿಯ.

ಅಪ್ಪನಿಗೆ ಅಪಾರ ಸ್ನೇಹ ಬಳಗ. ಸಿರಿವಂತರು ಬಡವರು ಹಿರಿಯರು ಕಿರಿಯರು ಎಂಬ ತಾರತಮ್ಯವಿಲ್ಲದ ಗೆಳೆತನ. ಬಹುತೇಕ ದೊಡ್ಡ ದೊಡ್ಡ ಹುದ್ದೆಯವರು, ಉದ್ದಿಮೆದಾರರೂ ರಾಜಕಾರಣಿಗಳಿಂದ ಹಿಡಿದು ಕಡುಬಡವರೂ ಅವರಿಗೆ ಸ್ನೇಹಿತರೇ. ಎಲ್ಲರನ್ನೂ ಪ್ರೀತಿಸುವ, ಶತೃಗಳನ್ನೂ ಕ್ಷಮಿಸುವ ದೊಡ್ಡ ಗುಣ ಅವರಲ್ಲಿತ್ತು. ಎಲ್ಲರೂ ನಮ್ಮವರೇ ಎನ್ನುವ ಭಾವದಿಂದ ಬೆರೆಯುತ್ತಿದ್ದರು. ದ್ವೇಷ ಅಸೂಯೆಯಿಲ್ಲದ ಅವರನ್ನು ಎಂದೂ ಆಸ್ತಿ ಹಣ ಆಕರ್ಷಿಸಲಿಲ್ಲ. ಹಣದ, ಬೆನ್ನು ಹತ್ತಲಿಲ್ಲ. ಅಲ್ಪತೃಪ್ತರು ಬಹುಶಃ ಕೋಟಿ ಕೋಟಿ ಅಸ್ತಿ, ಅಂತಸ್ತು ಹೊಂದಿದವರೂ ಕೂಡ ಅವರಷ್ಟು ಆರೋಗ್ಯವಾಗಿ, ನೆಮ್ಮದಿಯಾಗಿ ಬದುಕಿದ್ದು ಕಡಿಮೆ ಇರಬಹುದೇನೋ.

ನೆಮ್ಮದಿಗೆ ಹಣ ಆಸ್ತಿಯೇ ಮುಖ್ಯವಲ್ಲವೆಂದು ಬಗೆದವರು. ಪರಿಪೂರ್ಣ ಬದುಕ ಸವೆಸಿದವರು. ಕುಟುಂಬದ ಎಲ್ಲ ಜವಾಬ್ದಾರಿಗಳನ್ನೂ ನಿಭಾಯಿಸಿದ್ದರು. ವಿಶೇಷವೆಂದರೆ, ಸೆಪ್ಟೆಂಬರ್ ಮೊದಲ ವಾರವಾದರೂ ಮಳೆಯಿಲ್ಲದೆ ಜೋಳ ಹಾಕಲು ಮಳೆಗಾಗಿ ಕಾಯುತ್ತಿದ್ದಾಗ ಅಪ್ಪನ ತಿಥಿ ಮುಗಿದ ಸಂಜೆ ಸುರಿದ ಮಳೆಗೆ ಮಳೆರಾಯನಿಗೆ ಕೃತಜ್ಞತೆ ಹೇಳದೆ ನಮ್ಮ ಹಾಸನದಪ್ಪ ಸತ್ತು ಸ್ವರ್ಗ ಸೇರಿ ತನ್ನ ಕಾರ್ಯ ಮುಗಿದ ಮೇಲೆ ತೃಪ್ತಿಯಾಗಿ ಮಳೆ ಸುರಿಸಿದ್ರು ಎಂದು ಇಡೀ ಊರಿಗೂರೇ ಹೊಗಳಿ ಹಾಡಿದ್ದು ಅಪ್ಪನ ಸಜ್ಜನಿಕೆ ಮತ್ತು ಊರಿನ ಬಗೆಗಿದ್ದ ಅವರ ಅಭಿಮಾನ ಪ್ರೀತಿಗೆ ಹಿಡಿದ ಕನ್ನಡಿಯೆನ್ನಬಹುದು.

ನೇರ ನಡೆ ನುಡಿ ಕಂಚಿನ ಕಂಠ, ದಿಟ್ಟ ದನಿ, ಮುಚ್ಚುಮರೆಯಿಲ್ಲದ ಮನಸು. ಶಿಸ್ತು, ಸಮಯ ಪ್ರಜ್ಙೆ ಸ್ನೇಹಪರತೆಯೇ ಅವರ ಆಸ್ತಿ. ರಾಜಕಾರಣದಲ್ಲಿಯೂ ತೊಡಗಿಸಿಕೊಂಡ ಇವರ ಗರಿ ಗರಿಯಾದ ಖಾದಿ ಉಡುಗೆ, ಶಿಸ್ತು ಮಾತಿನ ರೀತಿಗೆ ಯಾವುದೋ ಕಾರ್ಯಕ್ರಮದಲ್ಲಿ ಒಮ್ಮೆ ಶಾಸಕರಾದ ಅವರ ಗೆಳೆಯರನ್ನು ಬಿಟ್ಟು ಇವರನ್ನೇ ಶಾಸಕರೆಂದು ಬಗೆದ ಘಟನೆಯನ್ನು ಅವರ ಸ್ನೇಹಿತರು ಹೇಳಿ ನಕ್ಕದ್ದುಂಟು. ‘ಘಟ್ಟದ ನಂಟು ಉಪ್ಪಿಗೆ ಬಡತನ ತಮ್ಮ’ ಎನ್ನವಂತೆ ಅಪ್ಪನ ಬದುಕು. ಸರಳ ಜೀವಿ, ರಿಕ್ತ ಹಸ್ತರು, ಹಾಸ್ಯಪ್ರಯರು. ಹಾಸ್ಯ ಪ್ರಜ್ಣೆ ಅವರದೇ ಬಳುವಳಿ ನನಗೆ.

ಖಾದಿ ಬಟ್ಟೆಯನ್ನು ತಾವೇ ಶುಭ್ರವಾಗಿ ತೊಳೆದು ಗಂಜಿ ಹಾಕುತ್ತಿದ್ದುದನ್ನು ನೋಡಿ ನೆರೆ ಹೊರೆಯ ಗಂಡು ಮಕ್ಕಳು ಅಣ್ಣಾ ನಿಮ್ಮಿಂದಾಗಿ ನಮ್ಮ ಹೆಂಡಿರಿಂದ ಬೈಗುಳ ತಿನ್ನಬೇಕಿದೆ. ಎಷ್ಟು ವಯಸ್ಸಾಗಿದೆ ಅಣ್ಣನನ್ನು ನೋಡಿ ಕಲಿತುಕೊಳ್ಳಿ ಎಂದು ಕೋಪಿಸುತ್ತಾರೆ ಎನ್ನುತ್ತಿದ್ದರು. ಇನ್ನು ಆರೋಗ್ಯದ ವಿಚಾರದಲ್ಲಿ ಹೇಳುವಂತೆಯೇ ಇರಲಿಲ್ಲ ಬಿಡಿ, ೭೯ರ ಇಳಿ ವಯಸ್ಸಿನಲ್ಲಿಯೂ ದೃಢಕಾಯರಾಗಿ ಯಾವುದೇ ಬಿ.ಪಿ. ಶುಗರ್ ಇರಲಿ ಗ್ಯಾಸ್ಟ್ರಿಕ್ ಸಹ ಇಲ್ಲದಿದ್ದ ಇವರ ಅರೋಗ್ಯದ ಕುರಿತು ಸ್ನೇಹಿತರು ದೃಢಕಾಯ, ವಜ್ರದೇಹಿ ಎನ್ನುತ್ತಿದ್ದರು. ರಾಜಕಾರಣಿಯೊಬ್ಬರು ಸಣ್ಣಯ್ಯನವರೇ ನಿಮ್ಮ ಆರೋಗ್ಯದ ಗುಟ್ಟೇನು? ಎಂದಾಗ ಅಲ್ಲಿಯೇ ಇದ್ದ ಸಂಬಂಧಿಯೊಬ್ಬರು, ಅವರ ಅಲ್ಪ ತೃಪ್ತತೆಯೇ ಅವರ ಆರೋಗ್ಯದ ಗುಟ್ಟೆಂದರಂತೆ.

ಅಪ್ಪನನ್ನು ನಾವು ಚಿರಾಯು ಎಂದುಕೊಂಡಿದ್ದೆವೇನೋ! ಅವರಿಲ್ಲದ ಕಲ್ಪನೆ ಕೂಡ ಅಸಾಧ್ಯವೆನಿಸುತ್ತಿತ್ತು. ಆದರೆ ನಮ್ಮನ್ನು ಅಗಲುವಂತಹದ್ದೊಂದು ದಿನ ಬಂದೇ ಬಿಟ್ಟಿತು! ಅಪ್ಪ ನಮ್ಮನ್ನು ಬಿಟ್ಟು ಹೊರಟಿರುವರೆಂಬ ಸೂಕ್ಷ್ಮ ಅರಿವಿಗೆ ಬಂದೊಡನೆ ಸುರಿಸಿದ ಕಣ್ಣೀರು ಅನುಭವಿಸಿದ ವೇದನೆ ಹೇಳಲಾಗದಷ್ಟು. ಆದರೆ ಅವರಿಗೆ ಅದರ ಅರಿವು ಬಾರದಂತೆ ನಡೆದುಕೊಳ್ಳುತ್ತಿದ್ದೆವು. ಇನ್ನು ನಾನು ಸಂಪೂರ್ಣ ಅನಾಥೆಯೆನಿಸಿತು. ಒಳ್ಳೆಯ ಮಕ್ಕಳನ್ನು ಪಡೆಯಲು ಪುಣ್ಯ ಮಾಡಿರಬೇಕಂತೆ. ಅಂತೆಯೆ ಒಳ್ಳೆಯ ತಂದೆ ತಾಯಿಯ ಮಕ್ಕಳಾಗಿ ಜನಿಸಲು ಕೂಡ ಪುಣ್ಯ ಮಾಡಿರಬೇಕೆನಿಸುತ್ತದೆ. ಇಂದಿಗೂ ನಾನು ಗುರುತಿಸಿಕೊಳ್ಳುವುದು ನನ್ನಪ್ಪನ ಹೆಸರಿನಿಂದಲೇ ಸರಿ.

ಆರೋಗ್ಯ ಕೆಟ್ಟಂದಿನಿಂದ ನನ್ನನ್ನು ಸರ್ಕಾರಿ ಅಸ್ಪತ್ರೆಗೆ ಸೇರಿಸಿ ಎಂದೇ ಹೇಳುತ್ತಿದ್ದರು. ಅದೇನೋ ಗೊತ್ತಿಲ್ಲ ಸರ್ಕಾರಿ ಆಸ್ಪತ್ರೆ ಎಂದರೆ ಅವರಿಗೆ ಎಲ್ಲಿಲ್ಲದ ಅಭಿಮಾನ. ಊರಿನಿಂದ ಯಾರೇ ಅನಾರೋಗ್ಯವೆಂದು ಬಂದರೂ ಅವರನ್ನು ಸರ್ಕಾರಿ ಆಸ್ಪತ್ರೆಗೆ ಖುದ್ದಾಗಿ ಕರೆದುಕೊಂಡು ಹೋಗುತ್ತಿದ್ದರು. ಸರ್ಕಾರಿ ಆಸ್ಪತ್ರೆಯಲ್ಲೇ ಎಲ್ಲ ಸವಲತ್ತುಗಳಿರುವಾಗ ಖಾಸಗಿ ಆಸ್ಪತ್ರೆಗೆ ಹೋಗಿ ಯಾಕೆ ಸಾಲ ಮಾಡಿಕೊಳ್ಳುವಿರಿ ಎಂದು ತಿಳಿಹೇಳಿ ಸರ್ಕಾರಿ ಆಸ್ಪತ್ರೆಯ ಡಾಕ್ಟರುಗಳು ಕೂಡ ಎಂ.ಬಿ.ಬಿ.ಎಸ್. ಎಂ.ಡಿ. ಓದಿಯೇ ಬಂದಿರ‍್ತಾರೆ ಗೊತ್ತಾ? ಎಂದು ರೇಗಿಸುತ್ತಿದ್ದರು. ಅವರನ್ನು ಮೊದಲ ಬಾರಿಗೆ ಖಾಸಗಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಿ ಪ್ರಜ್ಞೆ ಬಂದಾಗ ಅಕ್ಸಿಜನ್ ಪೈಪ್ ಕಿತ್ತುಕೊಳ್ಳುವರೆಂದು ಕೈಗಳನ್ನು ಕಟ್ಟಿದ್ದರು. ನಾವು ಒಳಹೋದ ಕೂಡಲೇ ಕೈಬೆರಳುಗಳನ್ನು ಆಡಿಸಿ ಏನೋ ಸನ್ನೆ ಮಾಡಿದರು ನಾವು ಒಬ್ಬೊಬ್ಬರು ಒಂದೊಂದು ರೀತಿ ಅರ್ಥೈಸಿಕೊಂಡೆವು, ನಂತರ ತಿಳಿದ್ದದ್ದು ಬರೆಯಲು ಪೆನ್ನು ಪೇಪರ್ ಕೇಳಿದ್ದೆಂದು.

ಕೂಡಲೇ ಪೆನ್ನು ಪೇಪರ್ ಕೊಟ್ಟರೆ ಅವರು ಬರೆದ್ದು ಹೀಗೆ ‘ಇದು ಖಾಸಗಿ ಆಸ್ಪತ್ರೆ, ನನ್ನನ್ನು ಸರ್ಕಾರಿ ಆಸ್ಪತ್ರೆಗೆ ಸೇರಿಸಿ’ ಎಂದು. ಕೂಡಲೇ ನಾವು, ಈ ಆಸ್ಪತ್ರೆಯವರು ಪರಿಚಿತರು ನಮ್ಮಿಂದ ಹೆಚ್ಚು ಹಣ ಕೇಳುವುದಿಲ್ಲವೆಂದು ಸಮಾಧಾನಿಸಿದೆವು. ಅವರಿಗೆ ಮಕ್ಕಳಿಗೆ ಹಣದ ತೊಂದರೆಯಾಗಬಾರದೆಂಬ ಭಾವ. ಅವರ ಜೀವಕ್ಕಿಂತ ಹಣ ಮುಖ್ಯವೇ? ಬದುಕುವುದಿಲ್ಲವೆಂದು ತಿಳಿದರೂ ಕೊನೆಯವರೆಗೂ ಹಣದ ಕುರಿತು ಯೋಚಿಸಲಿಲ್ಲ. ನಮಗಾಗಿಯೇ ಬದುಕಿದ ಅವರಿಗಾಗಿ ನಾವು ಅಷ್ಟೂ ಮಾಡದಿದ್ದರೆ ಮಕ್ಕಳಾಗಿದ್ದಕ್ಕೆ ಸರ‍್ಥಕತೆಯಾದರೂ ಏನು? ಶರಣರ ಸಾವು ಮರಣದಲ್ಲಿ ನೋಡು ಎನ್ನುವಂತೆ ಅಪ್ಪನ ಅನಾರೋಗ್ಯದಲ್ಲಿ ನೋಡಲು ಬಂದ ಸ್ನೇಹಿತರು ಬಂಧುಬಳಗದವರ ಲೆಕ್ಕವದೆಷ್ಟೋ. ಆಸ್ಪತ್ರೆಯ ಸಿಬ್ಬಂದಿಗಳು, ವೈದ್ಯರು ಇವರು ಡಿಸ್ಚಾರ್ಜ್ ಅದರೆ ಸಾಕು ಜನರನ್ನು ನಿಭಾಯಿಸಲಾಗುವುದಿಲ್ಲ ಎನ್ನುತ್ತಿದ್ದರು. ಪಕ್ಕದ ಬೆಡ್ಡಿನಲ್ಲಿದ್ದ ರೋಗಿಯ ಕಡೆಯವರು ಬಂದು ಹೋಗುವ ಜನರನ್ನು ನೋಡಿ ಅಚ್ಚರಿಯಿಂದ ಇವರು ಏನಾಗಿದ್ದರು? ಎಂದರು. ಏನೂ ಇಲ್ಲ ಎಂದೆ!

೨೦೧೮ ಜುಲೈ ಮಾಹೆಯ ಒಂದು ಸಂಜೆ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ ಅಪ್ಪ ಸಾವಿನ ಮನೆಗಿರುವ ಅಂತರವನ್ನು ಹೆಜ್ಜೆಯಿಂದ ಅಳೆಯುತ್ತಿದ್ದ ಸಮಯ. ಅದುವರೆವಿಗೆ ಬಹಳಷ್ಟು ಚಿಕಿತ್ಸೆಯಾಗಿ ಅಣ್ಣ ಮಲಗಿ, ಮಲಗಿ ಔಷಧಿ ಮಾತ್ರೆಗಳನ್ನು ನುಂಗಿ ಬೇಸತ್ತು ಹೋಗಿದ್ದರು. ಸುಮಾರು ಒಂದು ವರ್ಷ ಚಿಕಿತ್ಸೆಗೊಳಪಡಿಸಿದರೂ ಅದೆಷ್ಟೇ ಹಣ ಖರ್ಚಾದರೂ ನಮಗೆ ಏನೋ ಆಸೆ ಅಣ್ಣನ ರೋಗ ವಾಸಿಯಾಗಿ ಮತ್ತೆ ಟಿವಿಎಸ್ ಎನ್ನುವ ಅವರ ಐರಾವತದಲ್ಲಿ ಓಡಾಡುತ್ತಾರೆ ಎನ್ನುವ ಭರವಸೆ.

ಅವರಿಗೆ ಬೇಸರ ಕಾಡದಂತೆ ಮಕ್ಕಳೆಲ್ಲ ನಾವು ಅವರೊಂದಿಗೆ ಅವರ ಊರಿನ ಜನರ ಸ್ನೇಹಿತರ ಬಂಧುಬಳಗದವರ ವಿಚಾರಗಳನ್ನು ಮಾತನಾಡುತ್ತಿದ್ದೆವು. ಪ್ರತಿಕ್ರಿಯಿಸಲು ಧ್ವನಿ ಸ್ಪಷ್ಟವಾಗಿ ಬರದ ಕಾರಣ ತೊಂದರೆಯಾಗಬಾರದೆಂದು ಪೆನ್ನು ಪೇಪರನ್ನು ಅವರ ಬಳಿ ಇಟ್ಟಿದ್ದೆವು. ಅಂದು ಅವರು ನನ್ನ ಬಳಿ ಏನೋ ಹೇಳಲು ಕಷ್ಟಪಡುವಾಗ ಬೇಡ ಬರೆಯಿರಿ ಎಂದೆ. ಎದ್ದು ಕುಳಿತು ಬರೆದ ಹಾಳೆಯನ್ನು ನನ್ನ ಕೈಗಿಟ್ಟರು. ಅಪ್ಪನ ಅಕ್ಷರ ಸ್ಪುಟ, ಒಕ್ಕಣೆ ಕೂಡ ಚಂದ.

ಅವರು ಬರೆದ್ದು ಹೀಗಿತ್ತು -ನನ್ನ ಅಂತಿಮ ತಿರ್ಮಾನ ನನಗೆ ಗೊತ್ತಾಗಿದೆ. ಆದುದರಿಂದ ನನ್ನನ್ನು ಸರ್ಕಾರಿ ಆಸ್ಪತ್ರೆಗೆ ಸೇರಿಸಿ, ನೀವು ಇದುವರೆಗೂ ನನ್ನ ಸೇವೆ ಮಾಡಿದ್ದಕ್ಕೆ ಭಗವಂತ ನಿಮ್ಮನ್ನು ಆಶೀರ್ವದಿಸಲಿ ಎಂದು ಬೇಡುತ್ತೇನೆ. ಇದುವರಗೂ ನೀವು ನನ್ನ ಸೇವೆಗೆ ಸಹಕರಿಸಿದ್ದಕ್ಕೆ ನನ್ನ ಧನ್ಯವಾದಗಳು.

ಅದನ್ನು ಓದಿದ ಕೂಡಲೇ ನನ್ನ ಎದೆ ಭಾರವಾಗಿ ದುಃಖ ಉಮ್ಮಳಿಸಿ ಬಂತು. ದುಃಖದ ಕಟ್ಟೆ ಒಡೆಯಲಾರಂಭಿಸಿತು ಹೇಗೋ ಅದನ್ನು ತೋರ್ಪಡಿಸದೆ ತಡೆದು ಒಮ್ಮೆಗೇ ಜೋರಾಗಿ ನಕ್ಕುಬಿಟ್ಟೆ. ಅಣ್ಣಾ ಏನಣ್ಣಾ ಇದು ನಾವೇನು ನಿಮ್ಮ ನೆರೆಮನೆಯವರಾ? ಧನ್ಯವಾದ ಹೇಳಲು? ನಾವು ನಿಮ್ಮ ಮಕ್ಕಳು ನಮಗೆ ಹೀಗೆ ಹೇಳುವುದಾ ನಿಮ್ಮಂತಹ ಅಪ್ಪನನನ್ನು ಪಡೆಯಲು ನಾವು ಪುಣ್ಯ ಮಾಡಿದ್ದೆವು ಎಂದೆ ನಗುವಿನ ಮುಖವಾಡದೊಂದಿಗೆ ಹುಸಿಕೋಪ ಬೆರೆಸಿ.

ಅವರು ಆಗ ಗೊಗ್ಗರು ದ್ವನಿಯಲ್ಲಿ ಹೆಮ್ಮೆಯಿಂದ, ಕಣ್ಣಿನಲ್ಲಿ ಮಖದಲ್ಲಿ ಸಂತಸ ಸಂತೃಪ್ತಿಯ ಭಾವದಲ್ಲಿ ಎರಡೂ ಕೈಗಳನ್ನೆತ್ತಿ ಆಶೀರ್ವದಿಸಿ ನಾನು ಧನ್ಯನೆಂದು ಹೇಳಿದರು. ಅವರು ಆ ಪತ್ರದಲ್ಲಿ ಬರೆದುದಕ್ಕಿಂತ ಸಾವಿರ ಪಟ್ಟು ಹೆಮ್ಮೆ ಸಂತೃಪ್ತಿ ಅವರ ಮುಖಭಾವದಲ್ಲಿತ್ತು. ದುಃಖ ತಡೆಯಲಾರದೆ ಎದ್ದು ಹೋಗಿ ದೇವರ ಮನೆಯಲ್ಲಿ ಕುಳಿತು ಮನಃಪೂರ್ತಿ ಬಿಕ್ಕಿ ಬಿಕ್ಕಿ ಅತ್ತೆ. ಕುಟುಂಬದವರೆಲ್ಲರಿಗೂ ಹೇಳಿದಾಗ ಮಕ್ಕಳು ಮೊಮ್ಮಕ್ಕಳಾದಿಯಾಗಿ ಎಲ್ಲರ ಕಂಗಳಲ್ಲಿ ನೀರು ತುಂಬಿತ್ತು. ಅದರ ಪ್ರತಿಯನ್ನು ನನ್ನ ಒಡಹುಟ್ಟಿದವರೆಲ್ಲರಿಗೂ ಜೆರಾಕ್ಸ್ ಮಾಡಿಸಿ ಆಸ್ತಿ ಪತ್ರದಂತೆ ಹಂಚಿದೆ. ಜತನ ಮಾಡಿದ್ದೇವೆ ನಮ್ಮ ಮಕ್ಕಳಿಗೂ ನೀಡಲು!

ಜಗತ್ತಿನಲ್ಲಿ ಯಾವ ಉಡುಗೊರೆಯೂ ಹೆತ್ತವರು ಕೊಟ್ಟ ಆಶೀರ್ವಾದಕ್ಕೆ ಸರಿದೂಗುವುದಿಲ್ಲವೆಂದೇ ಹೇಳಬಹುದು. ಅಂತಹದ್ದೊಂದು ಉಡುಗೊರೆಯನ್ನು ಪಡೆದರೆ ಅದರಿಂದಾಗುವ ಸಂತೋಷಕ್ಕೆ ಪಾರವುಂಟೇ?. ಆ ಉಡುಗೊರೆಗೆ ಭಾಜನರಾದವರು ಅಪ್ಪನ ಮಕ್ಕಳು ಮೊಮ್ಮಕ್ಕಳು ಇಡೀ ಕುಟುಂಬದವರೆಂದು ಹೇಳಲು ಹೆಮ್ಮೆಯೆನಿಸುತ್ತದೆ. ಬಹುಶಃ ಇಂದು ಅಂತಹ ಉಡುಗೊರೆಯನ್ನು ಪಡೆವವರ ಸಂಖ್ಯೆ ಅಲ್ಪವಿರಬಹುದೇನೋ, ಯಾವ ಆಸ್ತಿ ಹಣ ಒಡವೆ ಬಂಗಾರಗಳಿಗೂ ಸರಿದೂಗದಂತಹ ಬಳುವಳಿ ನನ್ನಪ್ಪ ನಮಗೆ ಕೊಟ್ಟದ್ದು! ಅದೇ ನಮ್ಮ ಆಸ್ತಿ. ಅಪ್ಪಕೊಟ್ಟು ಹೋದ ಆಸ್ತಿ ಅದೆಷ್ಟೊಂದು…!

ಇಂದು ಶಾಲೆಗಳಿಗಿಂತ ಹೆಚ್ಚಾಗಿ ಎಲ್ಲೆಲ್ಲೂ ವೃದ್ಧಾಶ್ರಮಗಳೇ ತಲೆಯೆತ್ತುತ್ತಿರುವಾಗ, ಹೆತ್ತವರನ್ನು ಸಲಹಿ ಅವರಿಂದ ಆಶೀರ್ವಾದ ಪಡೆದವರೇ ಭಾಗ್ಯಶಾಲಿಗಳೆನ್ನಬಹುದು. ಇತಿಹಾಸ ಪುರಾಣಗಳಲ್ಲಿ ತಮ್ಮ ಸ್ವಾರ್ಥಕ್ಕೆ ಮಕ್ಕಳಿಂದ ತ್ಯಾಗವನ್ನು ಬಯಸಿದ ಅದೆಷ್ಟೋ ಮಹನೀಯರಿದ್ದಾರೆ. ಅಂತಹದ್ದರಲ್ಲಿ ನಮ್ಮಿಂದ ಏನನ್ನೂ ನಿರೀಕ್ಷಿಸದೆ ಅವರ ಆರೋಗ್ಯ ಹದಗೆಡುವವರೆಗೂ ನಮ್ಮಗಳ ಸೇವೆ ಮಾಡಿದವರು ನನ್ನಪ್ಪ ಎಂದು ಹೇಳಲು ಹೆಮ್ಮೆಯೆನಿಸುತ್ತದೆ. ನನ್ನಪ್ಪ ಶಂತನುವಲ್ಲ, ದಶರಥನಲ್ಲ, ಯಯಾತಿಯಲ್ಲ, ನನ್ನಪ್ಪ ಜಮದಗ್ನಿಯೂ ಅಲ್ಲ, ಅವರಂತೆ ಮಕ್ಕಳಿಂದ ಏನನ್ನೂ ಒತ್ತಾಯಿಸಲಿಲ್ಲ.

ನನ್ನಪ್ಪನ ಬೊಗಸೆಯಲ್ಲಿ ಮಕ್ಕಳೈವರೂ ನಾವು ಒಂದು ಹಿಡಿಯಂತೆ, ಒಟ್ಟಾಗಿ ಪ್ರೀತಿ ಬಾಂಧವ್ಯಗಳಿಂದ ಇದ್ದುದೇ ಅವರಿಗೆ ಅನನ್ಯ ಕೊಡುಗೆಯಾಗಿತ್ತು. ಸದಾ ಯಾರಿಗಾದರೂ ಸಹಾಯ ಮಡಬೇಕೆನ್ನುವ ಮನೋಭಾವವನ್ನು ಹೊಂದಿದ್ದ ಅವರ ಬಳಿ ಲಕ್ಷ್ಮೀ ಮಾತ್ರ ಸುಳಿಯಲೇ ಇಲ್ಲ ನೋಡಿ!. ಇಲ್ಲದ ಹಣವೊಂದನ್ನು ಬಿಟ್ಟು, ಕೇಳಿದವರಿಗೆ ಕೈಲಾದ ಸಹಾಯ ಮಾಡುತ್ತಾ ಬದುಕಿದಂತಹ ಅಪ್ಪನನ್ನು ಪಡೆದ ನಾವು ಪುಣ್ಯಶಾಲಿಗಳೆಂದೇ ಭಾವಿಸುತ್ತಾ, ಜನುಮಗಳೆಷ್ಟೇ ಬರಲಿ ನನ್ನೀ ಅಪ್ಪನೆ ನನಗೆ ಸಿಗಲಿ ಎಂದು ಬೇಡುತ್ತಾ ಅಪ್ಪನ ಮಾಸದ ನೆನಪಲ್ಲಿ…

ಅಪ್ಪಾ…

ನಿನ್ನ ಮಗಳು…

ರಾಜಿ

‍ಲೇಖಕರು Admin

July 7, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: