ಜೀವನ್ ಪ್ರಕಾಶನ, ಕೋಲಾರ ಹಮ್ಮಿಕೊಂಡಿದ್ದ ದಸರಾ ಕವಿತೆ ಸ್ಪರ್ಧೆಯಲ್ಲಿ
ಮೆಚ್ಚುಗೆ ಪಡೆದ ಕವಿತೆ

ಕೃಷ್ಣ ದೇವಾಂಗಮಠ
ಒಂದು ಕಾಲಮಾನಕ್ಕೆ
ಬಹಳ ದೊಡ್ಡವನಂತೆ
ಸಿಡುಕು ಮುಖದವನಂತೆ
ಶಿಸ್ತಿನ ಸಿಪಾಯಿಯಂತೆ
ಕೋಲು ಹಿಡಿದು ಬಾಸುಂಡೆ ಮೂಡಿಸುತ್ತಿದ್ದ
ಅಮ್ಮನಿಗಿಂತ ಒಂದು ಕೈ ಜಾಸ್ತಿ ಪ್ರೀತಿ ಅನ್ನಗಳೆರಡನ್ನೂ ಮಿಶ್ರಿಸಿ ಉಣಬಡಿಸುತ್ತಿದ್ದ
ಚಂದ್ರನ ನೆವವಿಲ್ಲದ ಗುಮ್ಮನಿಲ್ಲದ
ಕಟು ಸತ್ಯಗಳ ಬದುಕನ್ನ ಮೈಗೂಡಿಸುತ್ತಿದ್ದ
ಭುಜದ ಮೇಲೆ ಹೊತ್ತು ತಿರುಗಿ
ತಿರಿದುಂಬುವರ ಕಾಣಿಸುತ್ತಿದ್ದ
ನಿರ್ಗತಿಕರ ನಿರಾಶ್ರಿತರ ವೃದ್ಧರ
ಹಸಿವ ಮನಗಾಣಿಸುತ್ತಿದ್ದ
ಅಮಲಿನ ಸಿರಿವಂತರ ಶೋಕಿ ತೋರಿಸುತ್ತಿದ್ದ
ಬಡವರ ಹೊಟ್ಟೆ ಹೊಡೆದು ಜಗಮಗಿಸುವವರ ದವಲತ್ತಿನ ಅರಿವಾಗಿಸುತ್ತಿದ್ದ
ಒಟ್ಟಾಗಿ ಭೂತಭವಿಷ್ಯತ್ತುಗಳ ಗೊಡ್ಡು ಬಿಟ್ಟು
ವರ್ತಮಾನದ ಜಂಗಮನಂತೆ ಕಣ್ಣಿಗೆ ತೋರುತ್ತಿದ್ದ
ನನ್ನ ಜೋಗಿಯಾಗಿಸಿ ಪುಸ್ತಕಗಳ ಜೋಳಿಗೆಗಿಳಿಸಿ ಪ್ರಪಂಚದ ಎಲ್ಲರ
ತವಕ ತಲ್ಲಣ ನೋವು ರಾಗದ್ವೇಷಗಳ
ತಲೆಗೆ ತುಂಬಿ ಜೀರ್ಣಿಸಿಬಿಟ್ಟ
ಮರದ ಬೇರುಗಳಂತೆ ನನ್ನೆದೆ ಭೂಮಿಯಲ್ಲಿ
ಆಳವಾಗಿಳಿದು ಲವಣಗಳ ಹೀರಿ ನನ್ನ ಬಿಳಿಲುಗಳಾಗಿಸಿ ಬಿಸಿಲಲ್ಲಿ ಬೆಂದವರ
ನೆರಳಿಗೆ ಕೊಂಡುತಂದು ಮತ್ತೆ ಚಿಗುರೆಲೆಯಾಗಿ ಹಸಿರಾಗುತ್ತಾನೆ
ಥಟ್ ಅಂತ ಕ್ಷಣಾರ್ಧದಲ್ಲಿ ಒಳಹೊರಗುಗಳ ಬೆಕ್ಕಸಬೆರಗಾಗುವಂತೆ ಎಲ್ಲದರಾಚೆ
ಬಿಚ್ಚಿಟ್ಟು ಸುಮ್ಮನೆ ಮೂಲೆಗುಂಪಾಗಿ ಗಳಗಳ ಕಣ್ಣೀರು ಸುರಿಸುತ್ತಾನೆ
ದಿಟ್ಟಿಸಿ ನೋಡಿದರೆ ಕರಾಳತೆ ಹಾಸುಹೊಕ್ಕಾಗಿರುವ ನಮ್ಮದೇ ಛಾಪು
ರಕ್ತಸಿಕ್ತ ಅಧ್ಯಾಯಗಳ ಪುಸ್ತಕ ಮುಚ್ಚಿ ನೆತ್ತರು ಮಣ್ಣಿಗೆ ಸೋಕದಂತೆ ಆವಿಯಾಗಿಸುತ್ತಾನೆ
ಅಹಿಂಸೆಯ ಸಾರುತ್ತಲೆ ಬುದ್ಧನಾಗುತ್ತಾನೆ
ಆತ ಯಾವುದನ್ನೂ ಅಲ್ಲಗಳೆಯುವುದಿಲ್ಲ
ಸ್ವ ಸಿದ್ಧಾಂತಗಳಿಗೆ ಬದ್ಧನಾದರೂ
ಅದರ ಹೊರೆ ಜಗಕ್ಕೆ ಕಿಂಚಿತ್ತು ಇಲ್ಲ
ಸ್ವಯಂ ಪ್ರಕಾಶಿತ ಬೆಳಕಿನ ಸೆಲೆಯಾಗಿಸಲಿಚ್ಚಿಸುತ್ತಾನೆ
ರೆಪ್ಪೆಯಂತೆ ಕಾವಲು ನಿಂತು
ಕಣ್ಣಾಗಿಸುತ್ತಾನೆ
ತನ್ಮುಖೇನವೇ ಎಲ್ಲೆ ಇಲ್ಲದ ಎಲ್ಲವನ್ನೂ ದಾಟಿಸುತ್ತಾ
ನನ್ನಲ್ಲೊಂದಾಗಿ ತನ್ಮಯನಾಗುತ್ತಾನೆ ಮತ್ತು ಎಂದಿಗೂ ಆಪ್ತವಾಗುತ್ತಾನೆ





ಅಭಿನಂದನೆಗಳು ಕೃಷ್ಣ
ಧನ್ಯವಾದಗಳು ಸಂಗೀತಾ ಮೆಡಮ್