ಅಪ್ಪನ ಬೀಡಿ..

ಮಂಜುನಾಥ ನಾಯ್ಕ

ಹರಿದ ಅರ್ಧತೋಳಿನ ಅಂಗಿ

ಬಿಳಿಪಂಚೆ, ಕಿಸೆಯಲ್ಲೊಂದು ಕವಳದ ಸಂಚಿ

ಊರದಾರಿಗೆ ಕೈಯಲ್ಲೊಂದು ಊರುಗೋಲು

ಕುರುಡುಗಣ್ಣಿಗೆ ಕರುಣೆಯುಕ್ಕಿ

ಕಿರಿದಾಗಿತ್ತು ಹೊಂಡತುಂಬಿದ ಬಯಲು

ಅಪ್ಪಾ !

ನಿನ್ನ ಕೊಳಕು ಅಂಗಿಯೊಳಗೆ

ಅಡಗಿಸಿಟ್ಟ ಬೀಡಿಗೆ ಅನೂಹ್ಯ ಚೇತನವಿತ್ತು

ನಿನ್ನ ಕುರುಡು ನಡಿಗೆಯ ಬದುಕಿನ ಗತ್ತು

ಎಲ್ಲವೂ ನಿನ್ನ ಬೀಡಿಯ ಗಮ್ಮತ್ತು

ಸುಗ್ಗಿಯ ಹಾಡು,ಹಕ್ಕಬುಕ್ಕರ ಕಥೆ

ಪಂಚಪಾಂಡವರ ವನವಾಸ

ಶಕುನಿಯ ಪಗಡೆಯಾಟ

ಮದುವೆ ಸೋಬಾನೆಯ

ಸಂಭ್ರಮದ ಕಳೆಯಾಗಿದ್ದ ನಿನ್ನ ಇಂಪು ಕೊರಳು

ಹೆಂಗರುಳಿಗೆ,ಹೆಂಗಳೆಯರಿಗೆ ಉಯ್ಯಾಲೆಯ ನೆರಳು

ಅಪ್ಪಾ !

ಹುಲ್ಲಿನಮನೆಯೊಳಗೆ

ಮೆಲ್ಲನೆ ಎಳೆಎಳೆಯಾಗಿ

ಸುರುಳಿಸುರುಳಿ ಬಿಟ್ಟ ನಿನ್ನ ಬೀಡಿಯ ಹೊಗೆ

ದೇವರ ದಯೆಗಾಗಿ ಮಾಡಿದ ಹೋಮದ ಹಾಗೆ

ಕ್ಷಮಿಸಿಬಿಡು ಅಪ್ಪಾ

ನಿನ್ನ ನಿಲುವಂಗಿಯಲ್ಲಿದ್ದ

ನಿನ್ನ ಪಾಲಿನ ದಿನದ ಏಕೈಕ

ಬೀಡಿಯ ನಿನಗೆ ಗೊತ್ತಿರದಹಾಗೆ

ನನ್ನ ಕುತೂಹಲದ ಸೊಕ್ಕಿಗೆ ಕದ್ದಿದ್ದೆ

ಕಣ್ಣೀರು ಸುರಿಸಿ ಕಂಗಾಲಾಗಿ ನೀ ನಿದ್ದೆ ಬಿಟ್ಟಿದ್ದೆ 

ಅಪ್ಪಾ!

ನಿನ್ನ ಕೊನೆಗಾಲದ ಕೋರಿಕೆಯ

ಸಿಹಿಮಾಮರವಾಗಬೇಕಿದ್ದ

ನನಗೆ ಒಂದೇ ಒಂದು

ಪುಡಿಗಾಸು ಬೀಡಿ ಕೊಡಿಸುವ

ಯೋಗ್ಯತೆಯಿರದೆ ಭಿಕಾರಿಯಾಗಿ

ಬಡತನವ ಹಾಸೊದ್ದು ಮಲಗಿದ್ದೆ

ಮುಗಿಲ ಮೇಗಡೆ ಮೋಡದ ಮರೆಯಲಿ

ಚಂದ್ರ ತಾರೆ ಧ್ರುವ ಧಾರಿತ್ರಿಕರ ಸೆರಗಲಿ

ಸಾಲುಸಾಲು ಧೂಮರಾಶಿಯ ನಡುವೆ

ನಿನ್ನ ಬೀಡಿಯ ಹೊಗೆಯಿರಬಹುದೇ?

ನೆಲ ಮುಗಿಲು ಠಳಾಯಿಸುವಂತೆ

ಹೂಂಕರಿಸಿ ಕಿವಿಗಪ್ಪಳಿಸುತಿದೆ ಗುಡುಗು

ಅಪ್ಪಾ ನಿನ್ನ ಧನಿಯಿರಬಹುದೇ?

ಮಹಲಿನಂತ ಮನೆಯ ಕಟ್ಟಿ

ಮನೆಯ ಕೋಣೆಯೊಳಗೆ

ಅಪ್ಪನ ಇಷ್ಟದ ಬೀಡಿಯ ಕೂಡಿಟ್ಟು

ಕಾದಿರುವೆ

ನನಗೆ ಅಪ್ಪನೇ ಎಲ್ಲಾ ಸೇದಲು ಅಪ್ಪನೇ ಇಲ್ಲಾ.

‍ಲೇಖಕರು Avadhi

September 15, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Gopal Naik

    ಅಭಿನಂದನೆ ಮಂಜು ಸರ್. ನಾೂ ಅಪ್ಪನ ಬೀಡಿ ಸೇದಿದ ಕುತೂಹಲಕರ ನೆನಪು ಮರುಕಳಿಸಿತು.

    ಪ್ರತಿಕ್ರಿಯೆ
  2. ತಮ್ಮಣ್ಣ ಬೀಗಾರ

    ತುಂಬಾ ಆಪ್ತವಾಗುವ ಕವಿತೆ. ಎಲ್ಲರಿಗೂ ಅಪ್ಪನ ನೆನಪಿಸುತ್ತದೆ. ಅಭಿನಂದನೆಗಳು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: