ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಪ್ಪನಿಗಿದ್ದದ್ದು ಒಂದೇ ಅಂಗಿ.. 

ಲಕ್ಷ್ಮಣ್ ವಿ ಎ

ಅಪ್ಪನಿಗಿದ್ದದ್ದು ಒಂದೇ
ಮೊಂಡ ತೋಳಿನ ಅಂಗಿ
ಹತ್ತಿ ಉತ್ತುವಾಗಲೂ ಜೋಳ ಬಿತ್ತುವಾಗಲೂ
ಮದುವೆಗೂ ಜೈ ಮಸಣಕೂ ಸೈ
ಅಲ್ಲಲ್ಲಿ ಗುಂಡಿ ತಪ್ಪಿದ ಬಟನ್ ಗಳು
ಅದರ ಮೈ ತುಂಬ ಅವ್ವ ಹಾಕಿದ ತೇಪೆಗಳು

ಭೂಗೋಳದ ನಕಾಶೆಯ ಮೇಲೆ
ಬಾಂಬು ಬಿದ್ದ ನತದೃಷ್ಟದೇಶಗಳ ಚಿತ್ರ ಗಳಂತೆ
ಗುಂಡು ಬಿದ್ದ ಯೋಧನ ಮಿಲಿಟರೀ ಸಮವಸ್ತ್ರದಂತೆ
ಬೀಡಿಗೆ ಅಂಟಿ ಭಸ್ಮಗೊಂಡ ಅಂಗಿಯ ತುದಿ

ಗೂರಲು ಅಪ್ಪ ದವಾಖಾನೆ ಸೇರಿದ ದಿನವೂ
ಅವನ ತಲೆದಿಂಬಿಗೇ
ಆಸರೆಯಾಗಿದೆ ನೋಡಿ
ಈ ಗುಂಡಿ ತಪ್ಪಿದ ಅಂಗಿ

ಮೊಟ್ಟ ಮೊದಲ ಸಲ
ಆಸ್ಪತ್ರೆಯ ಶ್ವೇತ ಶುಭ್ರ ದಿರಿಸಿನಲ್ಲಿ
ದೇವಮೂಲೆಯಿಂದಿಳಿದು ಬರುವ
ಬಿಳಿ
ಮೋಡದ ಕೆಳಗೆ ಎರೆಮಣ್ಣು ಬಣ್ಣದ ಅಪ್ಪ
ನೆಲಕೆ ಇಳಿಯದ ಮಳೆ
ಬೆಂದು ಬೆಂಕಿಯ ರುಗ್ಣ ಶಯ್ಯೆಯಲಿ ಮಲಗಿದ ಇಳೆ
ಜೋಡು ಕಣ್ಣುಗಳಲಿ
ಆಡದೇ ಉಳಿದ ಮಾತುಗಳಿವೆಯೆ ?
ತುಟಿವರೆಗೆ ಬರಬಾರದೆ ಇಂದೊಂದು ದಿನವಾದರೂ
ಹನಿಯದೇ ಹಾರಿ ಹೋಗುವ ಶುಷ್ಕ ಮೋಡಗಳು

 

ಗುಂಡಿಗೆಯ ಬಡಿತ ನಿಂತ ದಿನವೂ
ಗುಂಡಿ ತಪ್ಪಿದ ಅಂಗಿ ಇವನ ತಲೆ ದಿಂಬಿಗೇ

ಏನು ಮಾಡುವುದು ತೇಪೆ ಹಚ್ಚಿದ ಈ ಅಂಗಿ
ಅಪ್ಪ ತೀರಿದ ಮೇಲೆ ?
ಸೀದಾ ತಂದು ಹೊದಿಸಿದೆವು ಜೋಳದ ಹೊಲದಲ್ಲಿ
ನಿಂತ ಬೆರ್ಚಪ್ಪನಿಗೆ

ಮುದಿ ಹಕ್ಕಿಯೊಂದು ಬಂದು
ಕೂರುವುದು ನೋಡಿದ್ದೇನೆ ಆಗಾಗ
ಬೆರ್ಚಪ್ಪನ ಭುಜದ ಮೇಲೆ ಎಷ್ಟೋ ಹೊತ್ತಿ ನ ತನಕ
ಹಸಿದರೂ ಜೋಳ ತಿನ್ನದೆ
ಮರಳುವ ಅದರ ಮರಿ ಹಕ್ಕಿಗಳ ಸಮೇತ.

‍ಲೇಖಕರು avadhi

25 May, 2019

9 Comments

  1. kusuma patel

    ಕವನ ತುಂಬಾ ಇಷ್ಟ ಆಯ್ತು ಲಕ್ಷ್ಮಣ್ ನಮಗಿಬ್ಬರಿಗೂ, Very touching.

    • Lakshman

      ಧನ್ಯವಾದಗಳು ಮೇಡಮ್

  2. Basavanneppa.Kambar

    super doctore saheb

  3. Lakshman

    ತ್ಯಾಂಕ್ಯೂ ವೆರಿ ಮಚ್ ಸರ್

  4. Padmanabha Gowda

    ಚೆನ್ನಾಗಿದೆ

    • Lakshman

      ತ್ಯಾಂಕ್ಯೂ ವೆರಿ ಮಚ್ ಸರ್

    • Lakshman

      ತ್ಯಾಂಕ್ಯೂ ಸರ್

  5. Sarojini Padasalgi

    ತುಂಬ ಸುಂದರ, ಮನ ತಟ್ಟುವ ಕವನ.ಎಲ್ಲೋ ಅದು ಇಲ್ಲೇ, ಹತ್ತಿರದ, ನನ್ನ ಪಕ್ಕದ ಅಲ್ಲ ನನ್ನ ಮನದ ಮಾತನ್ನೇ,ಹೇಳ್ತಿದೆಯೆನೋ ಎಂಬ ಹಳವಂಡ, ಕಣ್ತುಂಬಿ ಜಾರಿದ ಹನಿ

    • Lakshman

      ತ್ಯಾಂಕ್ಯೂ ಮೇಡಮ್

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading