ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಡಿ ಮಳೆ, ಸೋನೆ ಮಳೆ, ತುಂತುರು ಮಳೆ, ಸಂಜೆಯ ಮಳೆ, ಬಿಸಿಲ ಮಳೆ..

ಸಂಜೆಯ ಮಳೆ…

ಟಿ ಎಸ್ ಶ್ರವಣ ಕುಮಾರಿ

ನಾನು ಹುಟ್ಟಿ ಬೆಳೆದಿದ್ದೆಲ್ಲಾ ಮಲೆನಾಡಿನ ಒಂದು ಜಿಲ್ಲಾ ಕೇಂದ್ರವಾದ ಶಿವಮೊಗ್ಗೆಯಲ್ಲಿ. ಮಳೆ ನನಗೆಂದೂ ಬೇಸರ ತಂದದ್ದಿಲ್ಲ. ಜಡಿ ಮಳೆ, ಸೋನೆ ಮಳೆ, ತುಂತುರು ಮಳೆ, ಸಂಜೆಯ ಮಳೆ, ಬಿಸಿಲ ಮಳೆ ಎಲ್ಲವೂ ಅದರದರದೇ ರೀತಿಯಲ್ಲಿ ನನಗೆ ಸೊಬಗೆನಿಸಿದೆ.

ದಿನಗಟ್ಟಲೆ ಸುರಿಯುವ ಜಡಿಮಳೆಯಲ್ಲಿ ಅದೆಂಥ ದೈತ್ಯ ಶಕ್ತಿ! ಇಡೀ ಜಗದ ಕೊಳೆಯನ್ನೆಲ್ಲಾ ತೊಳೆದು ಶುಭ್ರ ಮಾಡಿಬಿಡುವ ಅದೇನು ಉತ್ಸಾಹ! ಮಿಂಚು, ಗುಡುಗು ಸಿಡಿಲುಗಳ ಆರ್ಭಟ… ಒಣಗಿಹೋಗಿರುವ ಕೆರೆ, ಕಟ್ಟೆ, ನದಿಗಳನ್ನೆಲ್ಲಾ ತುಂಬಿಸಿಬಿಡುವ ಚೈತನ್ಯ…

ಮುಂಗಾರಿಗಾಗಿ ನಿರೀಕ್ಷಿಸುತ್ತಿರುವ ರೈತರ ಕಣ್ಣಲ್ಲಿ ಜೀವಂತಿಕೆಯ ಮಿಂಚನ್ನು ಹರಿಸುವ ಹರ್ಷಧಾರೆ. ಸೋನೆ ಮಳೆಯೋ ಒಂದು ಭಾವಗೀತೆ… ಹೆಚ್ಚು ಆರ್ಭಟಿಸದ, ನೆಲದ ಕಾವಿಗೆ ಸಾಂತ್ವನವನ್ನೀಯುವ, ಇಡೀ ವಾತಾವರಣವನ್ನೆಲ್ಲಾ ತಂಪಾಗಿಸುವ, ಆಕಾಶಕ್ಕೆ ಜರಡಿ ಹಿಡಿದಂತ ಜಲಧಾರೆ… ನಿಧಾನವಾಗಿ ಸುರಿಯುತ್ತಾ, ಅತ್ಯಾವಶ್ಯಕ ಚಟುವಟಿಕೆಗಳನ್ನು ಮಾತ್ರವೇ ಜೀವಂತವಾಗಿಟ್ಟುಕೊಂಡು, ಮಿಕ್ಕವೆಲ್ಲ ಹೆಚ್ಚಿನ ಕೆಲಸಗಳಿಗೂ ಅನಿವಾರ್ಯವಾಗಿ ರಜಾ ಘೋಷಿಸಿ, ಕಡ್ಡಾಯವಾಗಿ ವಿಶ್ರಾಂತಿ ನೀಡುವಂತ ಜೋಗುಳ.

ತುಂತುರು ಮಳೆಯೋ ಆಗೀಗ ಬಂದು ಕಾಡುವ ಭಾವ ಸಂಚಾರಗಳು… ಬಿಸಿಲ ಮಧ್ಯದಲ್ಲಿ ಸ್ವಲ್ಪ ಮಳೆ.. ಮತ್ತೆ ವಿರಾಮ.. ಮತ್ಯಾವಾಗಲೋ ಮಳೆ.. ಬೀದಿಯಲ್ಲಿ ಓಡಾಡುವವರೆಲ್ಲ ಅಲ್ಲಿ ಇಲ್ಲಿ ನಿಂತುಕೊಳ್ಳುವಷ್ಟರಲ್ಲಿ ಮಾಯ.. ಮತ್ತೆ ಹೊರಟರೋ, ಹಿಂದೆಯೇ ಶುರು.. ಒಣಹಾಕಿದ ಬಟ್ಟೆಗಳನ್ನು ಎಳೆದು ಒಳಗೆ ತರುವಷ್ಟೇ ಹೊತ್ತು.. ಅರೆಬರೆ ಒಣಗಿದ ಬಟ್ಟೆಗಳನ್ನು ಮತ್ತೆ ಒಳಗೆ ಒಣಹಾಕುವ ಕೆಲಸವಿಡುವ ಮಕ್ಕಳ ಚೇಷ್ಟೆಯಂತ ಮಳೆ! ಹೆದರಿಸದ, ಬೇಸರ ತರಿಸದ, ತನ್ನ ತಾಳಕ್ಕೆ ತಕ್ಕಂತೆ ಎಲ್ಲರನ್ನೂ ಕುಣಿಸುವ ತುಂತುರು ಮಳೆ.. ಅದೆಷ್ಟು ಚಲನಚಿತ್ರಗಳಲ್ಲಿ ಪ್ರೇಮಿಗಳನ್ನು ಕೂಡಿಸುವ ಮಧ್ಯವರ್ತಿಯಾಗಿದೆಯೋ.. ನಿಜ ಜೀವನದಲ್ಲೂ ಅದೆಷ್ಟು ಪ್ರೇಮಿಗಳು ಅದಕ್ಕೆ ಕೃತಜ್ಞರಾಗಿದ್ದಾರೋ….

ಇಷ್ಟೆಲ್ಲಾ ತರದ ಮಳೆಗಳಲ್ಲಿ ನಾವು ಚಿಕ್ಕವರಿದ್ದಾಗ ನಮಗೆಲ್ಲಾ ಹೆಚ್ಚು ಆತ್ಮೀಯವಾಗಿದ್ದದ್ದು ಸಂಜೆಯ ಮಳೆ. ವಿಪರೀತ ಮಳೆಯಾದರೆ ಶಾಲೆಗೆ ಹೋಗುವ ಪ್ರಶ್ನೆಯೇ ಇರಲಿಲ್ಲ. ಅದೂ ಒಂದು ರೀತಿಯ ಬೇಜಾರೇ… ದಿನವಿಡೀ ಮನೆಯಲ್ಲೇ ಸೆರೆವಾಸ. ಹಿರಿಯರ ಕಣ್ಣಿಗೆ, ಕೈಕಾಲುಗಳಿಗೆ ಸದಾ ಕಿರಿಕಿರಿಯಾಗಿರುತ್ತಾ, ವೃಥಾ ಬೈಸಿಕೊಂಡು, ಹೊಡೆಸಿಕೊಂಡು, ಕೋಪಿಸಿಕೊಳ್ಳುವ ರಗಳೆ.

ಈಗಿನಂತೆ ಆಗೇನು ಶಾಲೆಗೆ ಕರೆದೊಯ್ಯುವ ವ್ಯಾನು, ಆಟೋಗಳಿರಲಿಲ್ಲವಲ್ಲ! ವಿಪರೀತ ಮಳೆಯ ದಿನಗಳಲ್ಲಿ ಶಾಲೆ ತೆರೆಯುವ ಪ್ರಶ್ನೆಯೇ ಇರಲಿಲ್ಲ; ಇನ್ನು ಹೋಗುವುದೆಲ್ಲಿಗೆ?! ಮನೆಯಿಂದ ಹೊರಗೆ ಹೋಗದೇ ಇದ್ದರೆ ದಾರಿಯಲ್ಲಿ ಬಿಟ್ಟ ಸೀಬೇಕಾಯಿ, ನೇರಳೇ ಹಣ್ಣು, ನೆಲ್ಲಿ ಕಾಯಿ, ಪರಗೀ ಹಣ್ಣುಗಳಿಗೆ ಮೋಕ್ಷವೆಲ್ಲಿ!

ಶಾಲೆಯ ನೆಪವಿದ್ದರೆ ಹೊರಗೆ ಹೋಗುವುದಕ್ಕೊಂದು ರಹದಾರಿ. ದಾರಿಯುದ್ದಕ್ಕೂ ಗುಂಪುಗುಂಪಾಗಿ, ಸಿಕ್ಕ ಮರಗಳಿಗೆ ಹತ್ತಿ/ಹತ್ತಿಸಿ, ಗಿಡಗಳನ್ನು ತರಿದು ಅಲ್ಲಿದ್ದ ಹೂವು ಹಣ್ಣುಗಳಿಗೆಲ್ಲಾ ಒಂದು ಗತಿಕಾಣಿಸಿ, ಚೀಲದಲ್ಲಿಷ್ಟು ತುಂಬಿಕೊಂಡು ಶಾಲೆಗೆ ಹೋದಾಗ, ಬೆಲ್ಲು ಹೊಡೆದಿದ್ದರೂ ಪರವಾಗಿಲ್ಲ; ತಡವಾಗಿ ಬಂದೆವೆಂದು ಶಿಕ್ಷೆ ಕೊಡಲು ಅವರೇನು ಈಗಿನ ಆಂಗ್ಲ ಭಾಷಾ ಮಾಧ್ಯಮದ ಕಾನ್ವೆಂಟಿನ ಮಿಸ್ಸುಗಳೇ? ಹೋದಷ್ಟು ಹೊತ್ತಿಗೆ ಶಾಲೆ; ಕಲಿತಷ್ಟೇ ಪಾಠ.

ಒಬ್ಬರೇ ಮೇಷ್ಟ್ರು ಕನ್ನಡ, ಗಣಿತ, ಸಮಾಜ ಶಾಸ್ತ್ರ, ವಿಜ್ಞಾನ ಎಲ್ಲವನ್ನೂ ಹೇಳಿಕೊಡುತ್ತಿದ್ದರು. ʻಅರ್ಥವಾಯ್ತೇನ್ರೋ?ʼ ಅಂತ ಕೇಳಿದಾಗ ʻಹ್ಞೂಂ ಸಾರ್‌ʼ ಅಂತ ಅರಚಿದ್ದೇನೋ ನಿಜ; ಆದರೆ ʻಅರ್ಥವಾಗಿದ್ದು ಏನು ಎಂದು ನನಗಿದುವರೆಗೂ ಅರ್ಥವಾಗಿಲ್ಲ ಬಿಡಿ. ಅದು ಪಾಪ! ಆ ಮೇಷ್ಟ್ರಿಗೆ ಅವತ್ತೇ ಅರ್ಥವಾಗಿತ್ತೇನೋ… ಅದಕ್ಕೇ ಅವರು ಟೆಸ್ಟು, ಅಸೈನ್ಮೆಂಟು ಅಂತ ಏನನ್ನೂ ಕೊಡ್ತಿರಲಿಲ್ಲ. ನವರಾತ್ರಿಗೆ ಮುಂಚೆ ಒಂದು ಸಣ್ಣ ಪರೀಕ್ಷೆ; ಯುಗಾದಿಗೆ ಮುಂಚೆ ದೊಡ್ಡ ಪರೀಕ್ಷೆ… ಎಂಥ ಸುಖದ ದಿನಗಳು… ಈಗಿನ ಮಕ್ಕಳು ಕನಸಲ್ಲೂ ಕಾಣಲು ಸಾಧ್ಯವಿಲ್ಲ. ಹಾಗಂತ ನಾವೇನು ದಡ್ಡರೇ?! ಶಾಂತಂ ಪಾಪಂ… ಪುಸ್ತಕ ಕಲಿಸದ ಎಷ್ಟೋ ವಿಷಯಗಳನ್ನು ಪ್ರಪಂಚ ನಮಗೆ ಕಲಿಸಿತ್ತು, ಕಲಿಸಿದೆ.

ಹ್ಞಾಂ.. ಇದೆಲ್ಲಾ ಏತಕ್ಕೆ ಹೇಳುತ್ತಿದ್ದೀನಿ ಎಂದರೆ… ಹೀಗೆ ನಾವು ಶಾಲೆಗೆ ಹೋಗುತ್ತಿದ್ದ ಕಾಲದಲ್ಲಿ, ಮಳೆ ಬಂದರೆ ನಮಗೆಲ್ಲಾ ಅದೆಂಥಾ ಆನಂದ… ಮನೆಯಲ್ಲಿದ್ದರೆ ಮಳೆಯಲ್ಲಿ ನೆನೆಯಲು ಸಾಧ್ಯವೇ? ತಾತನ ಕೋಲು, ಅಮ್ಮನ ಅಂಕೆ ನಮ್ಮ ಸುತ್ತ ಲಕ್ಷ್ಮಣರೇಖೆಯನ್ನು ಎಳೆದಿರುತ್ತಿರಲಿಲ್ಲವೇ! ಶಾಲೆಯಿಂದ ಮನೆಗೆ ಬರುವಾಗ ಮಳೆ ಬಂದರೆ ನೆನೆಯಲು ಅದೆಂಥಾ ಸುವರ್ಣಾವಕಾಶ.

ಮಳೆ ಬಂತೆಂದು ಶಾಲೆಯಲ್ಲೇ ಕುಳಿತಿರಲು ಸಾಧ್ಯವೇ? ಕತ್ತಲಾಗಿ ನಮಗೆ ಭಯವಾಗುವುದಿಲ್ಲವೆ? ಹಾಗೆಂದು ಮಕ್ಕಳು ನೆನೆದಾರೆಂದು ಆಟೋ ಮಾಡಿಕೊಂಡು ಓಡಿ ಬರುವಂತಹ ಅಪ್ಪ, ಅಮ್ಮಂದಿರು ಆ ಕಾಲದಲ್ಲಿ ನೂರಕ್ಕೆ ಒಬ್ಬರೂ ಇರಲಿಲ್ಲ ಬಿಡಿ! ಸುರಿಯುತ್ತಿರುವ ಮಳೆಯಲ್ಲಿ ಪರಮಾನಂದದಿಂದ ನೆನೆಯುತ್ತಾ ʻಹುಯ್ಯೋ ಹುಯ್ಯೋ ಮಳೆರಾಯ.. ಹೂವಿನ ತೋಟಕೆ ನೀರಿಲ್ಲʼ ಎಂದು ಕುಣಿಯುತ್ತಾ, ಗಾಳಿಯ ಆರ್ಭಟಕ್ಕೆ ತೊನೆದಾಡುವ ಮರಗಳಲ್ಲಿ ರಾಕ್ಷಸರನ್ನು ಕಲ್ಪಿಸಿಕೊಳ್ಳುತ್ತಾ, ಕಾಲ ಕೆಳಗೆ ಉಕ್ಕುಕ್ಕಿ ನೀರು ಹರಿಯುತ್ತಿದ್ದರೆ ಕಿತ್ತು ಹೋದ ಚಪ್ಪಲಿಯನ್ನು ನೀರಲ್ಲೇ ಬಿಟ್ಟು ಥೈಯ್ಯ ಥಕ್ಕ ಕುಣಿಯುತ್ತಾ..

ಬಿಸಿಲು ಮಳೆಯಾದರೆ ಕಾಣುವ ಕಾಮನಬಿಲ್ಲಿನ ಬಣ್ಣಗಳೆಷ್ಟು ಎಂದು ಎಣಿಸುತ್ತಾ, ಪಾಠದಲ್ಲಿ ಹೇಳಿಕೊಟ್ಟ ಅಷ್ಟೂ ಬಣ್ಣಗಳು ಅಲ್ಲಿ ಕಾಣುವುದಿಲ್ಲವಲ್ಲ ಅಂತ ಚರ್ಚೆ ಮಾಡುತ್ತಾ… ಅಷ್ಟರಲ್ಲಿ ಮಳೆ ನಿಂತರೆ ಮಳೆಯ ಆರ್ಭಟಕ್ಕೆ ಕೆಳಕ್ಕುದುರಿದ ಮುಗಿಲ ಮಲ್ಲಿಗೆಯ ಹೂಗಳನ್ನು ಆಯ್ದುಕೊಂಡು, ಒದ್ದೆ ಚೀಲದಲ್ಲಿ ತುಂಬಿಕೊಂಡು ಮನೆಯ ಬಾಗಿಲಿಗೆ ಬಂದಾಗಷ್ಟೆ ಅಜ್ಜನ ಕೋಲಿನ, ಅಮ್ಮನ ಬೈಗುಳದ ನೆನಪು…

ಬಾಗಿಲಲ್ಲೇ ನಿಂತಿರುತ್ತಿದ್ದ ಅಮ್ಮನನ್ನು ಕಾಣುತ್ತಲೇ ಸೃಷ್ಠಿಯಾಗುತ್ತಿದ್ದ ಕತೆಗಳದೆಷ್ಟು?! ಶಾಲೆಯಿಂದ ಹೊರಟು ಅರ್ಧ ದೂರ ಬಂದ ಮೇಲೆ ಮಳೆ ಶುರುವಾಗಿದ್ದು.. ನಿಲ್ಲಲಿಕ್ಕೆ ಎಲ್ಲೂ ಸರಿ(?)ಯಾದ ಜಾಗ ಸಿಗದೇ ಇದ್ದದ್ದು… ದಾರಿಯಲ್ಲಿ ಯಾರೂ ಇಲ್ಲದೇ ಇದ್ದದ್ದು… ಭಯವಾಗಿ, ಒಬ್ಬಂಟಿಯಾಗಿ ಮನೆಗೆ ಓಡಿ ಬಂದಿದ್ದು…. ಎಲ್ಲಾ ಸುಳ್ಳೆಂದು ಅಮ್ಮನಿಗೆ ಗೊತ್ತಿಲ್ಲವೇ?!

ತಾತ ಹಾಲು ಕರೆದುಕೊಂಡು ಒಳಗೆ ಬರುವಷ್ಟರಲ್ಲಿ ಒದ್ದೆ ಬಟ್ಟೆ ತೆಗೆದು ತಲೆಯನ್ನು ಚೆನ್ನಾಗಿ ಒರಸಿ, ಅಡುಗೆ ಮನೆಯಲ್ಲಿ ಉರಿಯುತ್ತಿದ್ದ ಒಲೆಯ ಮುಂದೆ ಕೂರಿಸಿ ತಟ್ಟೆಗೆ ಬಿಸಿ ಬಿಸಿ ತಿಂಡಿಯನ್ನು ಹಾಕಿಕೊಟ್ಟು ಅಜ್ಜನ ಏಟನ್ನು ತಪ್ಪಿಸುತ್ತಿರಲಿಲ್ಲವೇ?? ʻಮಕ್ಕಳು ಬಂದಾಯ್ತೆ?ʼ ಎನ್ನುತ್ತಾ ತಾತ ಒಳಗೆ ಬರುವಾಗ ʻಹ್ಞಾಂ ಈಗ ಬಂದರು ಹೆಚ್ಚೇನೂ ನೆಂದಿಲ್ಲʼ ಎನ್ನುತ್ತಾ ನಮ್ಮ ಪರವಾಗಿ ವಕಾಲತ್ತು ವಹಿಸುತ್ತಿರಲಿಲ್ಲವೆ?

ʻತಿಂಡಿ ತಿಂದು ಜಗಲಿ ಕಟ್ಟೆಗೆ ಬನ್ನಿ ಎಲ್ರೂ ಕಾಗದದ ದೋಣಿ ಮಾಡೋಣʼ ಅನ್ನುತ್ತಾ ತಾತ ಹೊರನಡೆದರೆ, ಕೋಡೊಲೆಯ ಮೇಲಿದ್ದ ಬಿಸಿಬಿಸಿ ಕಾಫಿಯನ್ನು ʻಸೊರ್‌ ಸೊರ್‌ʼ ಎಂದು ಶಬ್ದ ಮಾಡುತ್ತಾ ಕುಡಿದು ಅಷ್ಟು ಹೊತ್ತಿಗೆ ಸಾಕಷ್ಟು ಬೆಚ್ಚಗಾಗಿದ್ದು ಮತ್ತೆ ಅದೆಂಥ ಉತ್ಸಾಹದಿಂದ ಹೊರಗೋಡುತ್ತಿದ್ದೆವು! ತಾತ ಮಾಡಿಕೊಟ್ಟ ದೋಣಿಯನ್ನು ಮನೆಯ ಮುಂದೆ ಹರಿಯುತ್ತಿದ್ದ ನೀರಲ್ಲಿ ಬಿಟ್ಟು ಯಾರ್ಯಾರ ದೋಣಿ ಎಷ್ಟೆಷ್ಟು ಮುಂದೆ ಹೋಯಿತು ಅಂತ ಆಟವಾಡುತ್ತಾ ಇರುವಾಗ ಹೊತ್ತು ಅಲ್ಲೇ ಕರಗಿ ಹೋಗಿರುತ್ತಿತ್ತು…

ಸಂಜೆ ಮಳೆ ಬಂತೆಂದರೆ ಕರೆಂಟು ಇರಲು ಸಾಧ್ಯವೇ? ಯಾವುದೋ ಎಲೆಕ್ಟ್ರಿಕ್‌ ಕಂಬ ಬಿದ್ದು ಹೋಗಿ ಕರೆಂಟು ಪಡ್ಚಾ.. ಪಡಸಾಲೆಯಲ್ಲೊಂದು, ಅಡುಗೆ ಮನೆಯಲ್ಲೊಂದು ದೀಪದ ಬುಡ್ಡಿಯನ್ನೋ, ಲ್ಯಾಂಟ್ರಿನ್ನನ್ನೋ ಹಚ್ಚಿಟ್ಟರೆ ಆ ರಾತ್ರಿ ಕಳೆದೇ ಹೋಗಿರುತ್ತಿತ್ತು. ಕರೆಂಟು ಇದ್ದಾಗಲೇ ಓದುವುದು ಆ ಚಂದ; ಇನ್ನು ಬುಡ್ಡಿಯ ಬೆಳಕಲ್ಲಿ ಓದಲು ಸಾಧ್ಯವೇ!

ʻಭಜನೆ ಹೇಳ್ಕೊಡ್ತೀನಿ ಬನ್ರಿʼ ಅಂತ ಅಜ್ಜಿ ಕರೆದರೆ ಸಾಕು ಎಷ್ಟೊಂದು ದೈವಭಕ್ತಿ! ಭಜನೆ… ಅದಾದ ಮೇಲೆ ಸ್ಕೂಲಿನಲ್ಲಿ ಹೇಳಿಕೊಟ್ಟಿದ್ದ ಹಾಡು, ಪದ್ಯ… ಪಕ್ಕದ ಮನೆ ಶೀಲಂಗೆ ಬೋರೆಹಣ್ಣು ಕೊಟ್ಟು ಕಲಿತುಕೊಂಡು ಬಂದಿದ್ದ ಲಂಬೋದರ, ವರವೀಣಾ.. ಸಿನಿಮಾ ಹಾಡುಗಳು, ಯಕ್ಷಗಾನದ ಮಟ್ಟುಗಳು…… ಇವೆಲ್ಲವುಗಳ ಪಾಂಡಿತ್ಯ ಪ್ರದರ್ಶನ ಒಳಗಡೆ ಘಮ್ಮೆನ್ನುವ ಸಾರಿನ ಒಗ್ಗರಣೆಯ ಪರಿಮಳ ಮೂಗಿಗಡರುವ ತನಕ. ಸಾಯಂಕಾಲ ತಿಂದಿದ್ದ ತಿಂಡಿ ಅದೆಲ್ಲಿ ಭಸ್ಮವಾಗಿರುತ್ತಿತ್ತೋ..

ಎಲೆಯ ಮುಂದೆ ಕುಳಿತರೆ ಬಾಳೆಯ ಮೇಲೆ ಹಬೆಯಾಡುವ ಅನ್ನ, ಮನೆಯಲ್ಲಿ ಮಾಡಿದ ಹಸುವಿನ ತುಪ್ಪ, ಮಿಡಿ ಉಪ್ಪಿನಕಾಯಿ, ಖಾರವಾದ ಸುಟ್ಟ ಹುರಳಿ ಹಪ್ಪಳ, ಘಾಟು ಘಾಟು ಮೆಣಸಿನ ಸಾರು (ಮಳೆಯಲ್ಲಿ ನೆಂದವರಿಗೆ ಶೀತವಾಗದಿರಲೆಂದು)… ಯಾವ ಪಂಚತಾರಾ ಹೊಟೆಲ್ಲಿನ ಊಟಕ್ಕಿದೆ ಈ ಸೊಗಸು!

ಊಟವಾದ ಮೇಲೆ ಜಗಲಿಯ ಮೇಲೆ ಇನ್ನೊಂದು ಕಟ್ಟೆ ಪುರಾಣ. ಕತ್ತಲಲ್ಲಿ ಅಲ್ಲೊಂದು ಇಲ್ಲೊಂದು ಕಾಣುವ ಮಿಣುಕು ಹುಳ, ಸುಳ್ಳು ಸುಳ್ಳೇ ಕೊಳ್ಳಿದೆವ್ವವೆಂದು ಹೆದರಿಸುತ್ತಿದ್ದ ಅಣ್ಣ, ನೀರವ ಮೌನದಲ್ಲಿ ಒಟಗುಡುತ್ತಿದ್ದ ಕಪ್ಪೆಗಳು, ಯಾವುದೋ ಹುಳ ಹುಪ್ಪಡಿಗಳ ಕುಟುರ್‌ ಕುಟುರ್‌ ಸದ್ದು, ಜಾಜಿ, ಮಲ್ಲಿಗೆ, ಸಂಪಿಗೆಗಳ ಮಾದಕ ಸುವಾಸನೆ… ʻಎಲ್ರೂ ಮಲಿಕ್ಕೋ ಬನ್ನಿʼ ಅಪ್ಪ ಕರೆಯುವ ತನಕ ಆ ಪ್ರಪಂಚದಲ್ಲೇ ಮುಳುಗಿರುತ್ತಿದ್ದವರು ಒಳಬಂದು ಪಡಸಾಲೆಯಲ್ಲಿ ಸಾಲಾಗಿ ಹಾಸಿದ್ದ ಹಾಸಿಗೆಗಳ ಮೇಲೆ ಮಲಗಿ ಒಂದು ಕಂಬಳಿಯ ಮುಸುಕನ್ನೆಳೆದುಕೊಂಡು ಬಿಟ್ಟರೆ ಕಣ್ಣು ಬಿಡುವುದು ಬೆಳಗ್ಗೆ ಹಕ್ಕಿಯ ಚಿಲಿಪಿಲಿ ಕೇಳಿದಾಗಲೇ…

ನಿದ್ದೆಗಣ್ಣನ್ನುಜ್ಜಿಕೊಂಡು ಹೊರಬಂದು ನೋಡಿದರೆ ಮಳೆಯಿಂದ ಜಗವೆಲ್ಲಾ ತೊಯ್ದ ಇಳೆ ಮುಂಜಾವಿನ ಎಳೆಯ ರವಿಕಿರಣಗಳಲ್ಲಿ ಅದೆಷ್ಟು ಸುಂದರ… ಮೈ ತೊಳೆದು ಹಸಿರು ಸೀರೆಯುಟ್ಟು ನಿಂತ ಮರಗಳು; ಮನೆಯ ಕೈತೋಟದಲ್ಲಿದ್ದ ಆಗಷ್ಟೇ ಕಣ್ಣು ಬಿಡುತ್ತಿದ್ದ ಬಣ್ಣ ಬಣ್ಣದ ಹೂಗಳು; ಅವು ಕಣ್ಣು ಬಿಡುವುದನ್ನೇ ಕಾಯುತ್ತಿದ್ದ ಚಿಟ್ಟೆಗಳು; ಹಕ್ಕಿಗಳ ಉಲ್ಲಾಸದ ಕಲರವ; ರಾತ್ರಿಯೆಲ್ಲಾ ಸುರಿದು ಶುಭ್ರವಾಗಿದ್ದ ಆಕಾಶ; ರಾತ್ರಿಯ ಮಜ್ಜನದಲ್ಲಿ ಮಿಂದೆದ್ದು ಬಂದ ಎಳೆಯ ಸೂರ್ಯನ ಹಾಯೆನಿಸುವ ಕಿರಣಗಳು; ಸ್ವರ್ಗದಲ್ಲಿ ಇದಕ್ಕಿಂತಲೂ ಚೆಲುವಿರಲು ಸಾಧ್ಯವೇ?! ಸಂಜೆಯ ಮಳೆಯ ಒಂದು ನೆಪದಿಂದ ಎಂಥ ಬ್ರಹ್ಮಾನಂದ!!

ಕಾಲದ ಹಾದಿಯಲ್ಲಿ ಹಿಂದೆ ಸಾಗಿ ಮತ್ತೊಮ್ಮೆ ಮಳೆಯಲ್ಲಿ ಮನಸಾರ ನೆಂದು, ನಡುಗಿ, ಹರಿವ ನೀರಲ್ಲಿ ಕಾಗದದ ದೋಣಿ ಬಿಟ್ಟು, ಬಿಸಿಬಿಸಿಯಾಗಿ ಉಂಡು, ಬೆಚ್ಚಗೆ ಮಲಗಿ, ಶುಭ್ರ ಮುಂಜಾವನ್ನು ಮತ್ತೊಮ್ಮೆ ನೋಡಲು ಸಿಗುವಂತಿದ್ದರೆ ಎಷ್ಟು ಚಂದವಿತ್ತು!!

‍ಲೇಖಕರು avadhi

25 May, 2019

1 Comment

  1. Sarayu

    Howdu namma balyada malegalada dinagalu hetchu kadime heegeye ittu. Lekhana chennagide

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading