ಮತ್ತೊಂದಿಷ್ಟು ಜನ ಪ್ರತಿನಿಧಿಗಳಿಗೆ ಉಗಿದು ಉಪ್ಪಿನಕಾಯಿ ಹಾಕಿದ..

ಅಣ್ಣನ ನೆನಪು ೪೪
“ಪ್ರತಿಭಟನಾರ್ಥವಾಗಿ ನಾನು ಚುನಾವಣೆಗೆ ನಿಲ್ಲುತ್ತೇನೆ.”

ಹಿಂದಿನ ವಾರ ಹೇಳಲು ಮರೆತಿದ್ದೆ. ಜೋಯ್ಡಾದ ಸಮ್ಮೇಳನದ ಕಲಾಪಗಳಲ್ಲಿ ಪಾಲ್ಗೊಂಡ ಎಲ್ಲಾ ಅತಿಥಿಗಳಿಗೆ ಒಂದು ಒಳ್ಳೆಯ ಮಾವಿನ ಗಿಡ ಕೊಟ್ಟಿದ್ದರು. ಸಮ್ಮೇಳನದ ಸವಿ ನೆನಪು ಸದಾ ಇರಬೇಕು ಅನ್ನುವುದು ಒಂದಾದರೆ, ಜೋಯ್ಡಾದ ಹಸಿರು ಜಿಲ್ಲೆಗೆ ವಿಸ್ತರಿಸಬೇಕು ಎನ್ನುವ ಸಾಂಕೇತಿಕ ಆಶಯವೂ ಇರಬೇಕು. ಅದು ಕೂಡ ಭಾಗಶ: ಯಶಸ್ವಿಯಾಗಿದೆ. ಅಣ್ಣನಿಗೆ ಕೊಟ್ಟ ಆ ಗಿಡವನ್ನು ನನ್ನ ದೊಡ್ಡ ಅಕ್ಕ ಇನ್ನಕ್ಕ ತೆಗೆದುಕೊಂಡು ಹೋಗಿ ಇಟಗಿಯಲ್ಲಿ ನೆಟ್ಟಿದ್ದಳು. ಅಲ್ಲಿ ಕೊಟ್ಟ ಮಾವಿನ ಗಿಡ ಇಂದು ಬೆಳೆದು ಹಣ್ಣಾಗಿದೆ. ಆದರೆ ಮಂಗನ ಹಾವಳಿಯಿಂದ ಒಂದು ಹಣ್ಣನ್ನೂ ತಿನ್ನೋಕಾಗ್ತಿಲ್ಲ ಅನ್ನೋದು ಬ್ಯಾರೆ.

ಹಿಂದೆ ಹೇಳಿದಂತೆ ಜೋಯ್ಡಾದಲ್ಲಿ ಅಣ್ಣ ಮಾಡಿದ ಭಾಷಣ ಹಲವು ಕಾರಣಕ್ಕಾಗಿ ಸಾಂಪ್ರದಾಯಿಕತೆಯನ್ನು ಮೀರಿತ್ತು. ಸಾಮಾನ್ಯವಾಗಿ ಭಾಷಣಗಳು ಸಾಹಿತ್ಯಕ್ಕೆ ಹಿಂದಿನ ಕೊಡುಗೆಯಿಂದ ಪ್ರಾರಂಭವಾದರೆ ಇಲ್ಲಿ ಜೋಯ್ಡಾದ ಅಭಿವೃದ್ದಿಯಿಂದಲೇ ಪ್ರಾರಂಭ ಆಗಿತ್ತು.

“ಸಮ್ಮೇಳನ ಮೂಲೆಯಲ್ಲಿ ನಡೆದಿರಲಿ, ಕೇಂದ್ರದಲ್ಲಿ ನಡೆದಿರಲಿ, ಅದು ಆ ಕಾರಣದಿಂದಲೇ ಸಣ್ಣದು ದೊಡ್ಡದು ಎಂದಾಗುವುದಿಲ್ಲ. ಯಾಕೆಂದರೆ ಅದರ ಹಿಂದೆ ನಿಂತು ನಡೆಸುವ ಶಕ್ತಿ ಮಹತ್ತಾದುದು. ಹಾಗೆಯೇ ಮನುಷ್ಯರ ಹೃದಯದಲ್ಲಿ ಮಡುಗಟ್ಟುವ ಭಾವನಾಶಕ್ತಿ ಕೂಡ ಅದಕ್ಕೆ ಸಾಥಿಯಾದುದು. ಆದ್ದರಿಂದ ಅಂಥ ಒಂದು ವಿಶಿಷ್ಟವಾದ ಸ್ಥಾನವನ್ನು ಕೊಟ್ಟು ನನ್ನನ್ನು ಗೌರವಿಸಿದ್ದೀರಿ. ಇದರಲ್ಲಿ ನನ್ನ ಸಾಹಿತ್ಯಿಕ ಸಾಧನೆಗಿಂತ ನಿಮ್ಮ ಔದಾರ್ಯ ಮತ್ತು ಪ್ರೀತಿಯ ಮೊತ್ತವೇ ಹೆಚ್ಚಿನದು. ಈ ಸ್ಥಾನವನ್ನು ಈ ಹಿಂದೆ ಗೌರೀಶ ಕಾಯ್ಕಿಣಿ, ಜಿ.ಆರ್ ಪಾಂಡೇಶ್ವರದಂಥ ಮಹಾಸಾಧಕರೂ ಧೀಮಂತರೂ ಆದವರು ವಹಿಸಿಕೊಂಡಿದ್ದರು. ನಾನು ಅಂಥವರ ಮೊಣಕಾಲಿನ ಎತ್ತರಕ್ಕೂ ಬಾರದಂಥವನು. ಆದ್ದರಿಂದ ತಾವಿತ್ತ ಈ ಸಮ್ಮೇಳನಾಧ್ಯಕ್ಷತೆಯ ಗೌರವವನ್ನು ಅತ್ಯಂತ ವಿನಯದಿಂದ ಗುರು-ಹಿರಿಯರನ್ನು ನೆನಪಿಸಿಕೊಂಡು, ಸ್ವೀಕರಿಸುತ್ತಿದ್ದೇನೆ” ಎನ್ನುವ ವಿನಯದಿಂದಲೇ ಮಾತು ಪ್ರಾರಂಭವಾಗಿತ್ತು.

ಮುಂದುವರಿದು “ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಭಾಷಣದಲ್ಲಿ ಜಿಲ್ಲೆಯಲ್ಲಿನ ಲೇಖಕರ ಸಾಧನೆ, ಅಧ್ಯಕ್ಷ ದೃಷ್ಟಿಯಲ್ಲಿ ಅದರ ಕೊರತೆ ಇತ್ಯಾದಿಗಳು ಪ್ರಸ್ತಾಪಿತವಾಗುತ್ತವೆ ಎಂದು ನಿರೀಕ್ಷಿಸುವುದು ತೀರಾ ಸ್ವಾಭಾವಿಕ. ಆದರೆ ನನ್ನ ದೃಷ್ಟಿಯಲ್ಲಿ ತುಸು ಬೇರೆಯದೇ ಆದ ಅನ್ನಿಸಿಕೆಯಿದೆ. ಸಾಹಿತ್ಯದ ಕುರಿತು ದೃಷ್ಟಿ-ದರ್ಶನ, ಸಾಧನೆ ಮುಂತಾದವುಗಳ ಕುರಿತು ಪ್ರತಿ ಸಮ್ಮೇಳನದಲ್ಲೂ ಮತ್ತು ಬೇರೆ ಬೇರೆ ಗೋಷ್ಠಿಗಳ ಮುಖಾಂತರವೂ ಮಂಥನ ನಡದೇ ನಡೆಯುತ್ತದೆ. ಅಷ್ಟಲ್ಲದೇ ನಾನು ಅಂಥ ಮಹಾಪ್ರಜ್ಞನೂ ಅಲ್ಲ. ಆದ್ದರಿಂದ ನಾನು ಅಂಥ ಯಾವುದೇ (ಬಹುಶಃ) ವಿವರಕ್ಕೆ ತೊಡಗದೇ, ನಿಮ್ಮ ಕ್ಷಮೆಕೋರಿ ತುಸು ಅಸಂಪ್ರದಾಯಿಕ ಎನ್ನಬಹುದಾದ ರೀತಿಯಲ್ಲಿ ನನ್ನ ಭಾಷಣ ಇರುತ್ತದೆ ಎಂದುಕೊಳ್ಳುತ್ತೇನೆ.” ಎಂದು ಹಲವರು ಹುಬ್ಬೇರಿಸುವಂತೆ ಮಾಡಿದ.

ಜಿಲ್ಲಾ ಮಟ್ಟದ ಸಮ್ಮೇಳನವನ್ನು ಸಂಘಟಿಸಲು ಜೊಯಿಡಾದಂತ ಹಿಂದುಳಿದ ಸ್ಥಳವನ್ನು ಆರಿಸಿಕೊಳ್ಳದಿದ್ದರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮತ್ತು ಕಾರ್ಯಕಾರಿ ಸಮಿತಿಗೆ ಕೆಲಸ ಎಷ್ಟೋ ಹಗುರಾಗುತ್ತಿತ್ತು. ಆದರೆ ಅದರ ಬದಲಾಗಿ ಅವರು ಜೊಯಿಡಾವನ್ನೇ ಆರಿಸಿಕೊಂಡಿದ್ದಾರೆ. ಇದು ಅವರ ಜನಪರವಾದ ಕಾಳಜಿಗೆ ಸಾಕ್ಷಿಯಾಗಿದೆ. ಆದ್ದರಿಂದ ಇಡಿಯ ಜನತೆಯ ಪರವಾಗಿ ಜಿಲ್ಲಾ ಕಸಾಪವನ್ನು ಅಭಿನಂದಿಸಿದ. ನಾನು ಅಧ್ಯಕ್ಷತೆಯನ್ನು ಸಂತೋಷದಿಂದ ಸ್ವೀಕರಿಸಲು ಇದೂ ಒಂದು ಮುಖ್ಯ ಕಾರಣವಾಗಿದೆ ಎನ್ನುವುದನ್ನು ಸಭೆಯಲ್ಲಿ ಪುನರುಚ್ಚರಿಸಿದ್ದ.

ಆತನ ಭಾಷಣದಲ್ಲಿ ಮೂರು ಭಾಗಗಳಿದ್ದವು. ಮೊದಲನೆಯದು ಜಿಲ್ಲೆಯ, ಅದರಲ್ಲೂ ಗಡಿತಾಲೂಕಾದ ಜೊಯಿಡಾದ ಆರ್ಥಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಗತಿಗಳ ಬಗ್ಗೆ. ಎರಡನೆಯದರಲ್ಲಿ ಜಿಲ್ಲೆಯ ಇತರ ಸಾಮೂಹಿಕವಾದ ಸಾಂಸ್ಕೃತಿಕ ಸಂಗತಿಗಳ ಬಗ್ಗೆ ಮತ್ತು ಮೂರನೆಯದರಲ್ಲಿ ಜಿಲ್ಲೆಯ ಸಾಹಿತ್ಯ ಮತ್ತಿತರ ಕೆಲವು ಸಂಗತಿಗಳ ಬಗೆಗೆ.

ಚಾರಿತ್ರಿಕ ಕಾರಣಕ್ಕಾಗಿಯೂ, ಜೋಯ್ಡಾದ ಅಭಿವೃದ್ಧಿಗೆ ನೀಲನಕ್ಷೆ ಆಗಬಹುದಾದ ಸಾಧ್ಯತೆ ಇರುವುದರಿಂದಲೂ ಈ ಭಾಷಣವನ್ನು ಸಂಕ್ಷಿಪ್ತವಾಗಿ ಇಲ್ಲಿ ಕೊಡುತ್ತಿದ್ದೇನೆ.

“ಆರ್ಥಿಕತೆ, ಔದ್ಯೋಗಿಕತೆ, ಪ್ರಗತಿ ಮತ್ತು ಭಾಷೆ-ಸಾಹಿತ್ಯಗಳ ಮಧ್ಯದ ಸಂಬಂಧವೇನು? ಎಲ್ಲಮ್ಮನ ಜಾತ್ರೆಗೂ ಮುಲ್ಲಾಸಾಹೇಬನಿಗೂ ಯಾವ ಸಂಬಂಧ? ಇದೇನು ಮಂತ್ರಿಗಳಿಗೆ ಕೊಡುವ ಭಿನ್ನವತ್ತಳಿಕೆಯೇ- ಎಂದು ಅಂದುಕೊಳ್ಳುತ್ತಿರಾದರೆ ಅದು ನಿಜವಲ್ಲ. ಯಾಕೆಂದರೆ ಸಾಹಿತ್ಯಕ್ಕೂ, ಆರ್ಥಿಕ ಪ್ರಗತಿಗೂ ಉಪ್ಪು ಮತ್ತು ನೆಲ್ಲಿಕಾಯಿ ಸಂಬಂಧವಿದೆ. ಹಾಗೆಯೇ ಪ್ರಗತಿಗೂ ಮತ್ತು ರಾಜಕೀಯಕ್ಕೂ ಪಾರ್ವತಿ -ಪರಮೇಶ್ವರ (ಗಂಡ-ಹೆಂಡತಿಯರು) ಸಂಬಂಧವಿದೆ ಎಂದುಕೊಂಡವನು ನಾನು. ಆದ್ದರಿಂದ ಸಾಹಿತ್ಯ ಮತ್ತು ರಾಜಕಾರಣ ಎರಡೂ ನಮ್ಮನ್ನು ನಡೆಸುವ ಮುಖ್ಯ ಶಕ್ತಿಗಳಾಗಿ ಸಮಾನ ಗೌರವಕ್ಕೆ ಪಾತ್ರವಾಗಿವೆ ಎಂದೇ ನನ್ನ ನಂಬಿಗೆ. ಅಂಥ ಒಂದು ಗೌರವಕ್ಕೆ ಭಾಜನರಾಗಬೇಕೆಂದು ಜನಪ್ರತಿನಿಧಿಗಳನ್ನೂ ಪ್ರಾರ್ಥಿಸುತ್ತೇನೆ.

ನನ್ನ ಭಾಷಣವನ್ನು ನಾನು ಉಪನಿಷತ್ತಿನ ಒಂದು ಕತೆಯಿಂದ ಶುರುಮಾಡುತ್ತೇನೆ. ಅದು ಉಪನಿಷತ್ತಿನ ಆರುಣಿ ಮತ್ತು ಅವನ ಮಗ ಶ್ವೇತಕೇತುವಿನ ಮಾತುಕತೆಗೆ ಸಂಬಂಧಿಸಿದ್ದು. ಶ್ವೇತಕೇತು ಹನ್ನೆರಡು ವರ್ಷ ವಿದ್ಯಾಭ್ಯಾಸ ಮಾಡಿ ಬಂದು ಅಪ್ಪನೆದುರು ನಿಂತ. ಆರುಣಿ ಅನೇಕ ಪ್ರಶ್ನೆಗಳನ್ನು ಹಾಕಿದಾಗ ಶ್ವೇತಕೇತುವಿನ ಮನಸ್ಸಿನಲ್ಲಿ ಅನೇಕ ಸಂದೇಹಗಳು ಶುರುವಾಗುತ್ತದೆ. ಅದನ್ನು ಗಮನಿಸಿದ ತಂದೆ ಆತನ ಸಂದೇಹ ನಿವಾರಣೆಗಾಗಿ ಮಾತು ಮುಂದುವರಿಸುತ್ತಾನೆ.

‘ಇಲ್ಲಿ ಕೇಳು, ನೀನು ಹದಿನೈದು ದಿನ ಊಟವನ್ನು ಮುಟ್ಟಬೇಡ. ನೀರನ್ನು ಮಾತ್ರ ಎಷ್ಟಾದರೂ ಕುಡಿ. ನೀರು ಕುಡಿಯುತ್ತಿರುವವರೆಗೆ ಪ್ರಾಣಕ್ಕೆ ಚ್ಯುತಿಯಿಲ್ಲ. ಏಕೆಂದರೆ ನೀರು ಆಪೋಮಯ. ಆಪಃ ಎಂದರೆ ನೀರು’ ಎನ್ನುತ್ತಾರೆ. ಹದಿನೈದು ದಿನ ಉಪವಾಸವಿದ್ದು ಹದಿನಾರನೆಯ ದಿನ ಮಗ ಬಂದು ‘ಈಗೇನು ಮಾಡಲಿ?’ ಎಂದು ಕೇಳಿದ. ಅಪ್ಪ, ಈಗ ಋಕ್ಕಗಳನ್ನು ಓದು, ಸಾಮವನ್ನು ಹೇಳು, ಇತ್ಯಾದಿ ಹೇಳಿದ. ಶ್ವೇತಕೇತು ‘ನನ್ನ ಮನಸ್ಸಿಗೆ ಏನೇನೂ ಹೊಳೆಯುತ್ತಾ ಇಲ್ಲ’ ಎನ್ನುತ್ತಾನೆ. ಆಗ ಆರುಣಿ ‘ಮಗು ಬೆಂಕಿ ಧಗಧಗಾ ಪ್ರಜ್ವಲಿಸುತ್ತದೆ. ಉರಿದು ಕೊನೆಗೆ ಮಿಣುಕು ಹುಳುವಿನಂತಹ ಕೆಂಡವೊಂದು ಉಳಿದಿರುತ್ತದೆ. ಆ ಕೆಂಡ ತನಗಿಂತ ದೊಡ್ಡದನ್ನು ಸುಡಲಾರದು. ಮನುಷ್ಯರಲ್ಲಿ ಹದಿನಾರು ಅಂಶಗಳು ಉಳಿದಿರುತ್ತವೆ. ನಿನ್ನಲ್ಲೀಗ ಊಟವಿಲ್ಲದೆ ಒಂದು ಅಂಶ ಮಾತ್ರ ಉಳಿದಿದೆ. ಈ ಒಂದಂಶದಿಂದ ನಿನ್ನ ಮನಕ್ಕೆ ಏನೂ ಹೊಳೆಯಲಾರದು. ಹೋಗು ಮಗು, ಊಟಮಾಡಿ ಬಾ’ ಎನ್ನುತ್ತಾನೆ. ಶ್ವೇತಕೇತು ಊಟಮಾಡಿ ಬಂದು ತಂದೆ ಕೇಳಿದ್ದನ್ನೆಲ್ಲ ಹೇಳತೊಡಗಿದ. ಆಗ ಆರುಣಿ ‘ಈಗ ನೀನು ಮಿಣುಕು ಹುಳುವಿನಂತಹ ಕೆಂಡದ ಮೇಲೆ ಒಣಗಿದ ಹುಲ್ಲನ್ನು ಹಾಕಿದ್ದೀಯೆ. ಈಗ ಬೆಂಕಿ ಪ್ರಜ್ವಲಿಸತೊಡಗಿದೆ. ಹೀಗೆ ಅನ್ನದಿಂದ ಮನೋಬಲ ಬೆಳೆಯುತ್ತದೆ. ಆದುದರಿಂದ ಮನುಸ್ಸು ಅನ್ನಮಯ. ಪ್ರಾಣ ಆಪೋಮಯ, ವಾಕ್ಕು ತೇಜೋಮಯ’ (ಆರ್. ಡಿ. ಹೆಗಡೆ. ಉಪನಿಷತ್ತುಗಳ ಅರ್ಥಲೋಕ:೧೯೯೭; ಪುಟ. ೮೫-೮೬) ಎನ್ನುತ್ತಾನೆ.

ಇದರ ಅರ್ಥವನ್ನು ಸಂಕ್ಷಿಪ್ತವಾಗಿ ಹೀಗೆ ಹೇಳಬಹುದು. ಎಲ್ಲದಕ್ಕೂ ಅನ್ನವೇ ಮೂಲ. ಅನ್ನ, ನೀರು ಮನಸ್ಸಿಗೆ, ಪ್ರಾಣಕ್ಕೆ ಆಧಾರವಾಗಿದೆ. ಮೊದಲ ಸಲ ಉಪವಾದ ಇದ್ದ ಶ್ವೇತಕೇತು ವೇದವನ್ನು ಓದದಾದ, ಆತ ಅಷ್ಟು ಅಶಕ್ತವಾಗಿದ್ದ. ಆದರೂ ಸತ್ತಿರಲಿಲ್ಲ. ಯಾಕೆಂದರೆ ನೀರನ್ನಾದರೂ ಕುಡಿಯುತ್ತಿದ್ದ. ನಂದಲು ಪಕ್ಕಾಗಿರುವ ಕೆಂಡದ ಹಾಗೆ ಕ್ಷೀಣವಾಗಿದ್ದ. ಕ್ಷೀಣವಾದ ಕಿಡಿ ದೊಡ್ಡವಸ್ತುವನ್ನು ಸುಡಲಾರದು. ಶ್ವೇತಕೇತು ಅಂಥ ಸುಡಲಾರದ ಕೆಂಡವಾಗಿದ್ದ. ಆದರೆ ಊಟಮಾಡಿ ಬಂದಾಗ ಅವನು ಶಕ್ತನಾಗಿದ್ದ. ಓದ ಬಲ್ಲವನಾಗಿದ್ದ, ಓಡಬಲ್ಲವನಾಗಿದ್ದ. ಉರಿಯುವ ಕೆಂಡದ ಮೇಲೆ ಹುಲ್ಲಿನ ರಾಶಿಯನ್ನೇ ಹಾಕಿದರೂ ಸಾವಕಾಶ ಇಡಿ ಗೊದನೆಗೇ ಬೆಂಕಿ ಹತ್ತಿದ ಹಾಗೆ ಆಗಿದ್ದ. ಒಟ್ಟು ಅರ್ಥವೆನೆಂದರೆ ಅಕ್ಷರಕ್ಕೂ ಅನ್ನವೇ ಮೂಲ ಅಕ್ಷರವೇ ಸಾಹಿತ್ಯವಾಗುವುದು, ಅಕ್ಷರವೇ ಸಾಂಸ್ಕೃತಿಯ ಸಂಸ್ಕೃತಿಯಾಗುವುದು. ಆದ್ದರಿಂದ ಸರ್ವಕ್ಕೂ ಅನ್ನವೇ ಮೂಲ. ಅನ್ನವೇ ಬ್ರಹ್ಮ ಎಂದು ಕರೆದಿದ್ದಾರೆ ನಮ್ಮ ಜನಗಳು. ಆದ್ದರಿಂದ ಜೊಯ್ಡಾ ಅತ್ಯಂತ ಹಿಂದುಳಿದದ್ದು. ಈ ಅನ್ನಬೃಹ್ಮನ ಅನುಗ್ರಹದ ಕೊರತೆಯಿಂದಾಗಿಯೇ ಜಿಲ್ಲೆಯ ಹಿಂದುಳಿದಿರುವಿಕೆಗೂ ಇದೇ ಕಾರಣ ಎಂತಲೇ ಅನ್ನದ ಸಮೃದ್ಧಿಗೆ ಮೊದಲ ಆದ್ಯತೆ.

ಇಲ್ಲಿ ನಾನು ‘ಅನ್ನ’ ಎಂದು ಕರೆದಿರುವುದು ಕೇವಲ ಕೋಳಿ ಹೆಕ್ಕುವ ಕಾಳು ಎಂದಲ್ಲ. ಅನ್ನ ಅಕ್ಷರಕ್ಕೆ ಹಾದಿ, ಅಕ್ಷರ ಅಕ್ಷಯವಾಗಬೇಕು. ಸಂಗೀತ, ಸಾಹಿತ್ಯ, ಸಂಸ್ಕೃತಿ ಇತ್ಯಾದಿಗಳಾಗಿ ಅರಳಬೇಕು. ಅಂಥ ಶಕ್ತಿಗೆ ನಾನು ‘ಅನ್ನ’ ಎಂದು ಕರೆದೆ. ಅದರ ಸ್ಪಷ್ಟ ಅರ್ಥವೇ ಮೊದಲು ಆರ್ಥಿಕ ಸಮೃದ್ಧಿ. ಆರ್ಥಿಕ ಸಮೃದ್ಧಿಯೆಂದರೆ ಪ್ರಗತಿ ಅಥವಾ ಔದ್ಯೋಗಿಕ ಉನ್ನತಿ. ಆದರೆ ಆರ್ಥಿಕ ಪ್ರಗತಿಗೆ ರಾಜಕೀಯ ಶಕ್ತಿಯೇ ಧಾತುವರ್ಧಕವಾಗಿದೆ. ಆದ್ದರಿಂದ ಸಮೃದ್ಧಿಗೂ ರಾಜಕೀಯಕ್ಕೂ ಅವಿನಾ ಸಂಬಂಧವಿದೆ. ಆದರೆ ದುರ್ದೈವ ಎಂಬಂತೆ ನಮ್ಮ ಸ್ಥಿತಿ ಹೇಗಾಗಿದೆಯೆಂದರೆ ‘ಅರಸ ರಕ್ಕಸನಂತೆ ವರಮಂತ್ರಿ ಹುಲಿಯಂತೆ, ಬರೆವಾತ ನಾಡ ನರಿಯಂತೆ ಪರಿವಾರ ಗರಗಸದಂತೆ-ಸರ್ವಜ್ಞ’ ಇದಕ್ಕೆ ಹೆಚ್ಚಿನ ವಿವರಣೆ ಬೇಡ ನಾವು ಅಕ್ಷರವನ್ನು ಹೊಗಳುತ್ತೇವೆ. ಅಕ್ಷರವೇ ಜಾಗ್ರತಿಗೆ ಮೂಲಕಾರಣ ಎನ್ನುತ್ತೇವೆ. ಆದರೆ ನಮ್ಮಲ್ಲಿ ಅಕ್ಷರ ಕಲಿತವರು ಏನಾಗಿದ್ದಾರೆ ಎಂಬುದರ ಸ್ಪಷ್ಟ ಚಿತ್ರಣ ಈ ತ್ರಿಪದಿಯಲ್ಲಿದೆ.

ಈಗ ರಾಜ ಇಲ್ಲ. ‘ಜನರೇ ಪ್ರಭು’ ಎನ್ನುತ್ತೇವೆ. ಈ ಸಾಮಾನ್ಯ ಜನರನ್ನೇ ಪ್ರಜಾಪ್ರಭುತ್ವದಲ್ಲಿ ‘ಶ್ರೀಸಾಮಾನ್ಯ’ ಎಂದು ಕುವೆಂಪು ಕರೆದಿದ್ದಾರೆ. ಅಂದರೆ ಈಗ ಹೇಳಿದ ಸರ್ವಜ್ಞನ ವಚನದಲ್ಲಿ ಬಂದ ‘ರಾಜ’ ಎನ್ನುವ ಶಕ್ತಿ-ಪ್ರಭುತ್ವ -ಜನರಲ್ಲಿ ಹಂಚಿಹೋಗಿದೆ ಎಂದರ್ಥ. ಆದರೆ ನಿಜವಾದ ವ್ಯಂಗ್ಯಸ್ಥಿತಿ ಎಂದರೆ ‘ರಾಜ’ ಈಗ ಜನರಲ್ಲಿ ಹಂಚಿಹೋಗುವ ಬದಲು ಮೇಲಿನ ಸರ್ವಜ್ಞನ ವಚನದಲ್ಲಿ ಬಂದ ‘ವರಮಂತ್ರಿ, ಬರೆವಾತ, ಪರಿವಾರ ಎಂಬವರಲ್ಲಿ ಹಂಚಿಹೋಗಿದೆ.! ಅಂದರೆ ಈಗ ವರಮಂತ್ರಿಗಳಲ್ಲಿ ಕೇವಲ ಹುಲಿ ಮಾತ್ರ ಇದ್ದುದಲ್ಲ, ಸರ್ವಜ್ಞನ ತ್ರಿಪದಿಯಲ್ಲಿ ಬಂದ ‘ರಕ್ಕಸ’ ಕೂಡ ಕೂಡಿಕೊಂಡಿದ್ದಾನೆ!” ಹೀಗೆ ಆತ ಹೇಳುವಾಗ ಜಿಲ್ಲಾ ಮಟ್ಟದ ಅಧಿಕಾರಿಗಳು, ಜನಪ್ರತಿನಿಧಿಗಳೆಲ್ಲಾ ವೇದಿಕೆ ಮತ್ತು ಕೆಲವರು ವೇದಿಕೆಯ ಮುಂಭಾಗದಲ್ಲಿಯೇ ಇದ್ದರು.

ಆನಂತರ ಆತ ಗಮನ ಸೆಳೆದ್ದದ್ದು ಗಡಿಯ ಸಮಸ್ಯೆಯ ಕುರಿತು. ವiತ್ತು ಅಲ್ಲಿ ಬದುಕುತ್ತಿರುವ ಕುಣಬಿ ಸಮುದಾಯದ ಬಗ್ಗೆ. “ಮಹಾಶಯರೇ, ಭಾಷೆ ರಾಜ್ಯಗಳ ಪ್ರಕ್ರಿಯೆಯಲ್ಲಿ ಕರ್ನಾಟಕ ರಾಜ್ಯ ರಚನೆಯಾಗಿ ಮಹಾಜನವರದಿ ಬಂದು ಈಗ ನಲ್ವತ್ತೈದು ವರ್ಷ ಕಳೆದು ಹೋಗಿವೆ. ಅಂದಿನಿಂದಲೂ ಜೊಯಿಡಾ, ಹಳಿಯಾಳ ಮತ್ತು ಕಾರವಾರದ ಇತರ ಗಡಿ ಪ್ರದೇಶ ಇಲ್ಲೇ ಇದೆ. ಇದೇ ನಾಡಿನಲ್ಲಿದೆ. ಅಲ್ಲಿಂದ ಇಲ್ಲಿಯ ತನಕದ ಈ ಭಾಗದ ಶಾಸಕರನ್ನು ಸಂಸದರನ್ನು ಸಾಲಾಗಿ ನಿಲ್ಲಿಸಿ, ನೀವು ನಿಮ್ಮ ಭಾಗದ ಕರ್ತವ್ಯದಲ್ಲಿ ಎಷ್ಟು ಪಾಲನ್ನು ಸಲ್ಲಿಸಿದ್ದೀರಿ? ಇಲ್ಲಿ ಕೂಡಿದ ಇಷ್ಟು ಜನರೆದುರು ಹೇಳಿ-ಎಂದು ಕೇಳಲು ಈಗ ಅವಕಾಶವಿಲ್ಲ. ಯಾಕೆಂದರೆ ಅವರಲ್ಲಿ ಕೆಲವರು ನಮ್ಮ ಗರುಡಪಾರಣದ ಯಾವ ಪುಟದಲ್ಲಿ ವಿಲವಿಲ ಒದ್ದಾಡುತ್ತಿದ್ದಾರೊ ತಿಳಿಯದು.

ಆದ್ದರಿಂದ ಹಿಂದಿನವರ ಬಗ್ಗೆ ನಾನು ಹಳಹಳಿಕೆಯನ್ನು ಮಾಡುತ್ತಿಲ್ಲ. ಈಗ ಜೊಯಿಡಾಕ್ಕೆ ಮತ್ತು ಗಡಿನಾಡಿಗೆ ಸಂಬಂಧಿಸಿದವರಿಗೆ ಕೇಳುತ್ತೇನೆ- ಇಲ್ಲಿ ವಾಸಿಸುವ ಜನ ನಿಮಗೆ ಸಂಬಂಧಿಸಿದವರಲ್ಲವೇ? ನಿಮ್ಮ ಸೋದರ ಸೋದರಿಯರಲ್ಲವೇ? ನೀವು ಹೇಗೆ ಬದುಕುತ್ತಿದ್ದಿರಿ? ನಿಮ್ಮ ಈ ಜನ ಹೇಗೆ ಬದುಕುತ್ತಿದ್ದಾರೆ? ಎಲ್ಲರ ಹೃದಯದಲ್ಲೂ ರಾಕ್ಷಸರಿದ್ದಾರೆ. ಆದರೆ ದೇವತೆಗಳೂ ಇದ್ದಾರೆ. ನಿಮ್ಮಲ್ಲಿರುವ ಆ ದೇಶಭಕ್ತಿಯನ್ನೇ ಉದ್ಧೇಶಿಸಿ ಕೇಳುತ್ತೇನೆ. ಈ ಹಿಂದುಳಿದ ಜನಗಳನ್ನು ಉದ್ಧರಿಸಬೇಕು. ಮನುಷ್ಯರಂತೆ ಬಾಳುವ ಅವಕಾಶವನ್ನು ಈ ಭಾಗದವರಿಗೂ ಒದಗಿಸಬೇಕು ಎಂದು ತೋರಲಿಲ್ಲವೇಕೆ? ಕಳೆದದ್ದು ಬಿಡಿ; ಈಗಲಾದರೂ ನಿಮ್ಮ ಮನಸ್ಸು ಕ್ರಿಯಾಶೀಲವಾಗುವುದಿಲ್ಲವೇ? ನೀವು, ನಿಮ್ಮ ಅಧಿಕಾರಿಗಳು ಮನಸ್ಸು ಮಾಡಿದರೆ ಈ ಸ್ಥಳವನ್ನು ಚೈತನ್ಯಶಾಲಿ ಊರನ್ನಾಗಿ ಮಾಡಬಲ್ಲಿರಿ. ಆದರೆ ಈಗ ಜೊಯಿಡಾ, ಹಳಿಯಾಳ, ಕಾರವಾರದ ಗಡಿಭಾಗ ಏನಾಗಿದೆ? ಹದ್ದು, ಗಿಡಗ, ಕಾಗೆ, ನರಿ, ನಾಯಿ ಯಾರೇ ಬಂದರೂ ಹಿಸಿಹಿಸಿದು ತಿನ್ನುವ ಹೆಣವಾಗಿದೆ.

ಇದು ಕೇವಲ ಉತ್ಪ್ರೇಕ್ಷೆಯ ಭಾಷೆ ಎನ್ನಬೇಡಿ. ತುಸು ಉತ್ಪ್ರೇಕ್ಷೆಯೂ ಇರಬಹುದು.ಆದರೆ ಅದರ ಸತ್ಯಚಿತ್ರವನ್ನೇ ಇಲ್ಲಿ ಕೊಡುತ್ತೇನೆ. ಭೂಮಿಗೆ ಸಂಬಂಧಿಸಿ ಇಲ್ಲಿ ಕುಣಬಿ ಜನರ ಸಮಸ್ಯೆ ಇದೆ. ಅವರು ಅತಿಕ್ರಮಣದಾರರಲ್ಲ. ಅವರು ಅರಣ್ಯವಾಸಿಗಳೇ ಆಗಿದ್ದಾರೆ. ಸ್ವಾತಂತ್ರ್ಯ ಪೂರ್ವದಿಂದ ಅವರು ವಾಸವಾಗಿದ್ದಾರೆ. ಕುಂಬರಿ ಬೇಸಾಯ ಮಾಡುತ್ತಿದ್ದಾರೆ. ಆದರೆ ಅವರಿಗೆ ಇನ್ನೂ ಪಟ್ಟಾ ನೀಡಲಿಲ್ಲ. ಹೌದು, ಅದರಲ್ಲಿ ಕಾನೂನು ತೊಡಕು ಇದೆ. ಆದರೆ ಕಾನೂನನ್ನು ಮಾಡುವವರು ಮನುಷ್ಯರೇ ಅಲ್ಲವೆ? ಕಾನೂನಿಗೆ ಮಿದುಳಿಲ್ಲ ಅದರ ಕೈಯಲ್ಲಿ ಇರುವುದು ಗನ್ನು. ಹಾಗಂತ ಮನುಷ್ಯರೂ ಮಿದುಳನ್ನು ಕಳೆದುಕೊಂಡರೆ ಹೇಗೇ?”

ಮುಂದೆ ಇಂತಹದೇ ಪರಿಸ್ಥಿತಿಯಲ್ಲಿರುವ ಕೈಗಾ ಕ್ಷೇತ್ರದ ಬಗ್ಗೆ, ಭೂಮಿ ಅತಿಕ್ರಮಣದ ಕುರಿತು ಗಮನ ಸೆಳೆದ.ಪರಿಹಾರ ಒದಗಿಸುವುದೆಂದರೆ ಒಂದಿಷ್ಟು ಕರೆನ್ಸಿ ನೋಟುಗಳನ್ನು ಒಗೆಯುವುದಲ್ಲ. ಬದಲಾಗಿ ದುಡಿಯುವ ಅವಕಾಶ ಒದಗಿಸುವುದಾಗಿದೆ. ಈ ಧೋರಣೆ ಅಮೃತಸೇನರ ಅರ್ಥಶಾಸ್ಟ್ರದಲ್ಲಿದೆ. ಆದರೆ ಕಾಳಿಯಾಗಲಿ, ಕೈಗಾವಾಗಲಿ, ರಾಷ್ಟ್ರೀಯ ಉದ್ಯಾನವಾಗಲಿ ದೇಶದ ಉದ್ಧಾರಕ್ಕೆ ತ್ಯಾಗ ಮಾಡಬೇಕು ಅಂದರೆ, ಒಬ್ಬ ‘ರಾಜನಾಗಲು’ ಲಕ್ಷಲಕ್ಷ ಸೈನಿಕರು ಸಾಯುವ ಅವಶ್ಯಕತೆಯಿದೆ. ಇದು ಮಾನವೀಯವೇ? ಎಂದು ಆಕ್ರೋಶದಿಂದಲೇ ಪ್ರಶ್ನಿಸಿದ.

ಅಭಿವೃದ್ಧಿ ಎಂದಾಗ ಮೂಲಸೌಕರ್ಯ ಹೆಚ್ಚಿಸಬೇಕು. ಅಂಥ ಕೆಲ ಒಂದೆರಡು ಉದಾಹರಣೆಯನ್ನು ಮಾತ್ರ ಇಲ್ಲಿ ಕೊಡುತ್ತೇವೆ-ಆನೆಯನ್ನು ಕನ್ನಡಿಯಲ್ಲಿ ಹಿಡಿದ ಹಾಗೆ. ಇಲ್ಲಿ ಹಳ್ಳಿಯಿಂದ ಹಳ್ಳಿಗೆ, ಹಳ್ಳಿಯಿಂದ ಪಟ್ಟಣಕ್ಕೆ ಜೋಡಿಸುವ ವಾಹನ ತಿರುಗಾಟವೇ ಇಲ್ಲ. ಅದನ್ನು ಹೀಗೆ ನಿವಾರಿಸಿಕೊಳ್ಳಬಹುದು.

೧. ಕಾರವಾರದಿಂದ ಒಂದು ಬಸ್ಸು ಹೊರಟು, ಕದ್ರಾ, ಕದ್ರಾದಿಂದ ಅಣಸಿ, ಅಣಸಿಯಿಂದ ಉಳವಿ, ಉಳವಿಯಿಂದ ನಂದಿಗದ್ದೆ, ನಂದಿಗದ್ದೆಯಿಂದ ಪೊಟೋಳಿ, ದಾಂಡೇಲಿಯಿಂದ ತಿರುಗಿ ಕಾರವಾರವನ್ನು ಸೇರುವಂತೆ ಮಾಡಬಹುದು.

೨. ಇವೋಲಿ, ಕುವೇಶಿ, ಬಾಜಾರಕುಣಂಗ, ಡಿಗ್ಗಿ, ಅಸುಳ್ಳಿ, ಪಿಸೋಸಾ, ಬಾಂದೊಡ, ವಿರಲ, ಅಮೇಡ, ಪೊಪ್ಪಳವಾಡ ರಸ್ತೆ ಜೋಡಣೆ, ಬಸ್ ಸಂಪರ್ಕ ಕಲ್ಪಿಸಬೇಕು. ಅಂತೆಯೇ ಅಸುದಿಂದ ವಾಡ, ಕಸರ್ಲೆ, ಬೋರಿ,ಚಪಾಳಿ, ಕಾಮರಾ, ಗುರ್ಗಾ ಗ್ರಾಮಗಳನ್ನು ಸಂಪರ್ಕಿಸುವ ರಸ್ತೆ.

೩. ಜೊಯಿಡಾದಿಂದ ನಾಗೋಡರಸ್ತೆ, ಹಾಗೆಯೇ ಬಾಬಣಗಿ, ಗವೇಗಾಳಿ, ಗವೇಗಾಳಿಯಿಂದ ವಿರ್ನೋಲಿ, ಪಣಸೋಲಿ, ಜೊಯಿಡಾ; ಅದರಂತೆ ರಾಮನಗರದಿಂದ ಮಾಲಂಬೆ, ಅಮಶೇತ. ರಾಮನಗರದಿಂದ ಜೊಯಿಡಾ, ಅಲ್ಲಿಂದ ಕರಂಜೊಯಿಡಾ ಸುತ್ತು ರಸ್ತೆ.

ಇದರ ಹೊರತಾಗಿಯೂ ಮುಡೆ. ಕಾರಟೋಳಿ, ಕಸುಬಾ, ವರಲ್ಲಿ, ಖಾನಗಾಂ, ವಾಗೇಲಿ, ಡಿಗ್ಗಿ, ಗೊಂದೇಲಿ, ಮಾನೇರಿ, ಅಸೋಳ್ಳಿ, ಅನ್ನಳಿ, ಸೋಲಿ ಮುಂತಾದ ನಲ್ವತ್ತ ಹಳ್ಳಿಗಳಿಗೆ ರಸ್ತೆಯಾಗಲಿ, ಸಾರಿಗೆ ಸಂಪರ್ಕವಾಗಲಿ, ವಿದ್ಯುತ್ ಆಗಲಿ, ಆಸ್ಪತ್ರೆಗಳಾಗಲಿ ಇಲ್ಲ. ಕಚ್ಚಾರಸ್ತೆಗಳಿದ್ದು ಈಗಿನ್ನು ದುರಸ್ತಿ ಶುರುವಾಗಿದೆ. ಅದು ವ್ಯವಸ್ಥಿತವಾಗಿ ಆಗಬೇಕು.” ಆಶ್ಚರ್ಯವೆಂದರೆ ಇಡೀ ಜೋಯ್ಡಾವನ್ನು ಇಷ್ಟೊಂದು ಸೂಕ್ಷ್ಮವಾಗಿ ಅಧ್ಯಯನ ಮಾಡಿದ್ದ ಎನ್ನುವುದು.

ಈ ಎಲ್ಲ ಪ್ರಗತಿಗೆ ಉಸಿರು ಇದ್ದಂತೆ ಇರುವುದು ಶಿಕ್ಷಣ. ಅದರಲ್ಲೂ ೧೪ ವರ್ಷದವರೆಗಿನವರಿಗೆ ಶಿಕ್ಷಣ ಕಡ್ಡಾಯ. ಶಿಕ್ಷಣ ಪಡೆಯುವುದು ನಾಗರಿಕ ಹಕ್ಕು. ಅದನ್ನು ಕೊಡುವುದು ಸರಕಾರದ ಹೊಣೆ. ಯಾವುದೇ ರಾಷ್ಟ್ರ ತನ್ನ ಪ್ರಗತಿಗಾಗಿ ಮೊದಲು ಶುರುಮಾಡುವುದು ಶಿಕ್ಷಣದಿಂದ. ಆದ್ದರಿಂದ ಶಿಕ್ಷಣ ಎನ್ನುವುದು ನಾಗರಿಕರ ಕಣ್ಣು. ಅಂಥ ಜವಾಬ್ದಾರಿ ಕ್ಷೇತ್ರವನ್ನು ಚುರುಕುಗೊಳಿಸಲು ಸಕಲ ಪ್ರಯತ್ನ ಮಾಡುವುದು ಸರಕಾರದ ಮತ್ತು ಪ್ರತಿನಿಧಿಗಳ ನೈತಿಕ ಕರ್ತವ್ಯ ಎಂದು ಹೇಳುತ್ತಾ ಪ್ರತಿ ಹಳ್ಳಿಯಿಂದ ಶಾಲೆಗ ಬರಲು ಅವರು ನಡೆಯಬೇಕಾದ ದೂರವನ್ನು ಕೂಡ ಆತ ಈ ಮುಂದಿನಂತೆ ವಿವರಿಸಿದ.

“೩೨ ಕಿ.ಮಿ. ದೂರ ಬರಬೇಕಾಗುತ್ತದೆ. ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬರಲು ೩೨ ಕಿ.ಮಿ. ಬರಬೇಕು. ಹಾಗೆಯೇ ಪದವಿಪೂರ್ವ ವಿದ್ಯಾಲಯಕ್ಕೆ ಹೋಗಲು ೫೦ ಕಿ.ಮಿ. ಬರಬೇಕಾಗುತ್ತದೆ. ರಸ್ತೆ ಸೌಕರ್ಯ ಸಹ ಇದಕ್ಕೆ ಅನುಕೂಲವಾಗಿ ಇಲ್ಲ. ಇದರಂತೆ ವಿರಲ್‌ದಿಂದ ಹಿರಿಯ ಪ್ರಾಥಮಿಕ ಶಾಲೆ ೨೮ ಕಿ.ಮಿ. ಪ್ರೌಢಶಾಲೆಗೆ ೨೮ ಕಿ.ಮಿ. ಆರೋಗ್ಯ ಕೇಂದ್ರಕ್ಕೆ ೨೮ ಕಿ.ಮಿ. ಮತ್ತು ತಾಲೂಕಾ ಕೇಂದ್ರ ಜೊಯಿಡಾಕ್ಕೆ ೮೭ ಕಿ.ಮಿ. ಜೊಂಡೆಯಿಂದ ಪ್ರೌಢಶಾಲೆಗೆ ೨೬ ಕಿ.ಮಿ. ಆರೋಗ್ಯ ಕೇಂದ್ರಕ್ಕೆ ೩೬ ಕಿ.ಮಿ. ದುಧಮಳಾದಿಂದ ಪ್ರೌಢಶಾಲೆ ೨೮ ಕಿ.ಮಿ. ಆರೋಗ್ಯಕೇಂದ್ರ ೨೮ ಕಿ.ಮಿ. ಪದವಿಪೂರ್ವ ಕಿರಿಯ ವಿದ್ಯಾಲಯ ೪೦ ಕಿ.ಮಿ. ಡಿಂಗಿಯಿಂದ ಪ್ರೌಢಶಾಲೆ ೩೨ ಕಿ.ಮಿ. ಪದವಿಪೂರ್ವಕಾಲೇಜು ೪೦ ಕಿ.ಮಿ. ಪ್ರಾಥಮಿಕ ಆರೋಗ್ಯಕೇಂದ್ರ ೪೧ ಕಿ.ಮಿ. ಸಾಕು ಮತ್ತೆ ವಿಸ್ತರಿಸುವುದಿಲ್ಲ. ಈಗಲೇ ನಿಮಗೆ ಬೋರ್ ಹೊಡೆಯಲು ಶುರುವಾಗಿರಬಹುದು. ಆದರೆ ಇದು ಜೀವನವೇ ಬರಡಾದವರ ಸ್ಥಿತಿ ಎಂಬುದನ್ನು ಮರೆಯದಿರಿ.”

ಹಾಸ್ಟೆಲುಗಳ ಕುರಿತು, ರೇಶನ್ ಅಂಗಡಿಯ ಕುರಿತು, ಗ್ರಂಥಾಲಯಗಳ ಕುರಿತು, ಪ್ರೇರಕರಿಗೆ ಕೊಡಬೇಕಾದ ಗೌರವಧನದ ಕುರಿತು, ಆರೋಗ್ಯ ಕೇಂದ್ರದ ಕುರಿತು, ಕನ್ನಡ ಭಾಷೆ ಮಾಧ್ಯಮದ ಕುರಿತು, ಧಾರ್ಮಿಕ ಅಲ್ಪಸಂಖ್ಯಾತರಿಗೆ ಕೆಲವು ವಿಶೇಷ ರಕ್ಷಣಾತ್ಮಕ ಸವಲತ್ತುಗಳನ್ನು ನೀಡುವ ಕುರಿತು, ಇಲ್ಲಿಯ ಅರಣ್ಯ ಉತ್ಪನ್ನದ ಹತ್ತರಲ್ಲಿ ಒಂದು ಭಾಗವನ್ನು ಇಲ್ಲಿಯ ಅಭಿವೃದ್ಧಿಗಾಗಿ ಖರ್ಚು ಮಾಡುವ ಕುರಿತು,ಗಡಿನಾಡ ಅಭಿವೃದ್ಧಿಗೆ ಪ್ರತ್ಯೇಕವಾಗಿ ಒಂದು ಪ್ಯಾಕೇಜನ್ನು ಮಂಜೂರು ಮಾಡುವ ಕುರಿತು…

ಕರ್ನಾಟಕ ಪ್ರಾಂತ ರೈತ ಸಂಘದವರು ೨೦೦೨ ರಲ್ಲಿ ಇಲ್ಲಿಯ ರೈತgರೊಂದಿಗೆ ಇಲ್ಲಿಂದ ೧೦೦ ಕಿ.ಮೀ. ದೂರದ ಕಾರವಾರಕ್ಕೆ ಜಿಲ್ಲಾಧಿಕಾರಿಗಳ ಕಚೇರಿಗೆ ನಡೆದೇ ಹೋಗಿ ತಮ್ಮ ಮನವಿಯನ್ನು ಅರ್ಪಿಸಿದ ಕುರಿತು ಹಲವು ಸಮಸ್ಯೆಗಳ ಬಗ್ಗೆ ಗಮನ ಸೆಳೆದರು
ಉತ್ತರ ಕನ್ನಡ ಒಂದರಲ್ಲೇ ಜಿಲ್ಲೆಯಲ್ಲಿ ೬೫ ಸಾವಿರ ಯುವಕರು ಉದ್ಯೋಗಕ್ಕಾಗಿ ಹೆಸರು ನೋಂದಾಯಿಸಿದ್ದಾರೆ. ಇಂಥಲ್ಲಿ ಎಂಥ ಸಂಸ್ಕೃತಿ, ಸಾಹಿತ್ಯ, ಕಲೆ ಬೆಳೆದೀತು, ಹೇಳಿ! ಎಂದು ಹೇಳಿದ್ದು ಮಾತ್ರವಲ್ಲ ಒಂದು ನಿಗದಿತ ಅವಧಿಯಲ್ಲಿ ಕೆಲಸ ಆಗದಿದ್ದರೆ ಪ್ರತಿಭಟನಾರ್ಥವಾಗಿ ನಾನು ಈ ಭಾಗದಿಂದ ಚುನಾವಣೆ ನಿಲ್ಲಿವಿದಾಗಿ ಗುಡುಗಿದ್ದು ಈಗ ಇತಿಹಾಸ.

ಆನಂತರ ಜೋಯ್ಡಾಕ್ಕೆ ನಾವು ಏರ್ಪಡಿಸಿದ ಒಂದು ಕಾರ್ಯಕ್ರಮಕ್ಕೆ ಬಂದ ನ್ಯಾಯಮೂರ್ತಿ ಎಚ್. ಎನ್. ನಾಗಮೋಹನದಾಸ್ ಅವರು ಕೂಡ ಅಣ್ಣನ ಭಾಷಣವನ್ನು ಉದ್ಧರಿಸಿ “೨೦೦೫ರಲ್ಲಿ ಇದೇ ಜೋಯಿಡಾ ಗ್ರಾಮದಲ್ಲಿ ಕಾರವಾರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಾಗ ಆ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ ದಿವಂಗತ ಆರ್. ವಿ. ಭಂಡಾರಿಯವರು ಅಧ್ಯಕ್ಷತೆಯ ಭಾಷಣದಲ್ಲಿ ಆಡಿದ ಮಾತನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕಾಗಿದೆ. ಈವತ್ತಿಗೂ ಅದು ಪ್ರಸ್ತುತವಿದೆ.

ಅವರು ಎತ್ತಿದ ಇಲ್ಲಿಯ ಅಭಿವೃದ್ಧಿಯ ಪ್ರಶ್ನೆಗಳನ್ನು ನಾವು ಹಾಕಿಕೊಂಡಾಗ ಮಾತ್ರ ನಮ್ಮ ಕೆಲಸಕ್ಕೆ ಒಂದು ಚುರುಕು ಮುಟ್ಟುವಂತಾಗುತ್ತದೆ. ಬಂಧುಗಳೇ ನಮ್ಮೆಲ್ಲರಿಗೂ ಒಂದು ಜವಾಬ್ದಾರಿ ಇದೆ. ನಮ್ಮೆಲ್ಲರಿಗೂ ಒಂದು ಕರ್ತವ್ಯವಿದೆ. ಈ ವಿಭಾಗದ ಜನರನ್ನು ನಮಗೆ ಸರಿ ಸಮಾನರಾಗಿ ತಂದು ಕಾನೂನಿನಲ್ಲಿರತಕ್ಕಂತ ಎಲ್ಲಾ ಸೌಲತ್ತುಗಳನ್ನು ಅವರಿಗೆ ಕೊಡಿಸಬೇಕಾಗಿದೆ. ಈ ದಿಕ್ಕಿನಲ್ಲಿ ಇವತ್ತು ನಾವು ಮಾಡಿರತಕ್ಕಂಥ ಕೆಲಸ ಏನಿದೆ ಇದೊಂದು ಸಣ್ಣ ಪ್ರಯತ್ನ. ಇಲ್ಲಿಗೆ ಮುಗಿಸಿದರೆ ಸಾಲದು. ಇಂಥ ಕಾರ್ಯಕ್ರಮ ಅನೇಕ ಆಗಬೇಕಾಗಿದೆ. ಅಧಿಕಾರಿಗಳು ತಮ್ಮ ಮನಸ್ಸನ್ನು ಪರಿವರ್ತನೆ ಮಾಡಿಕೊಳ್ಳಬೇಕಾಗಿದೆ. ಆನಪ್ರತಿನಿಧಿಗಳು ಇದಕ್ಕೆ ಸ್ಪಂದಿಸಬೇಕಾಗಿದೆ. ಆ ದಿಕ್ಕಿನಲ್ಲಿ ಈ ಕಾಡಿನಲ್ಲಿ ಬದುಕುತ್ತಿರತಕ್ಕಂಥ ಜನರ ಜೀವನ ಉತ್ತಮಗೊಳಿಸಬೇಕಾಗಿದೆ. ನಮಗೆ ಸಮಾನರಾಗಿ ಬದುಕತಕ್ಕಂಥ ಅವಕಾಶವನ್ನು ಕಲ್ಪಿಸಿಕೊಡಬೇಕಾಗಿದೆ. ಹಾಗೆ ಮಾಡಿದರೆ ಮಾತ್ರ ಭಾರತದ ಸ್ವಾತಂತ್ರ್ಯಕ್ಕೆ ಅರ್ಥ ಬರುತ್ತದೆ.” ಎಂದು ಹೇಳಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.

ವಿರೋಧ ಬಂದಿಲ್ಲ ಎಂದೇನೂ ಇಲ್ಲ. ಕೋಮುವಾದಿಗಳನ್ನು ದೂರ ಇಡಿ ಎಂದು ಹೇಳಿದ ಹೇಳಿಕೆಗಳಿಗೆ ಸಂಘ ಪರಿವಾರದವರು ಕ್ಯಾತೆ ತೆಗೆದರು, ಬಿಜೆಪಿ ಸಂಸದ ಅನಂತಕುಮಾರ್ ಮತ್ತು ಉಳಿದ ಆ ಪಕ್ಷದ ಮುಖಂಡರೂ ಬಂದಿರಲಿಲ್ಲ. ಸಮಾರೋಪಕ್ಕೆ ಬರಬೇಕಾಗಿದ್ದ ಆರ್. ವಿ ದೇಶಪಾಂಡೆ, ಕೆ. ಎಚ್. ಪಾಟೀಲ ಮುಂತಾದವರು ಗೈರು ಹಾಜರಿ. ಹಾಗಾಗಿ ಸಮಾರೋಪದ ಮಾತೂ ಅಣ್ಣನದೇ. ಆಗ ಮತ್ತೊಂದಿಷ್ಟು ಜನ ಪ್ರತಿನಿಧಿಗಳಿಗೆ ಉಗಿದು ಉಪ್ಪಿನಕಾಯಿ ಹಾಕಿದ.

ಧ್ಯೇಯವೇ ಇಲ್ಲದಿದ್ದರೂ ಧ್ಯೇಯನಿಷ್ಠ ಎಂದು ಹೇಳಿಕೊಳ್ಳುವ ಪತ್ರಕರ್ತ ಸಚ್ಚಿದಾನಂದ ಹೆಗಡೆಯವರು ಅಣ್ಣನ ಭಾಷಣವನ್ನು ಮಾರ್ಕ್ಸ್ ಚಿಂತನೆಯ ಪ್ರಚಾರ ಭಾಷಣವೋ ಎಂದು ಕೇಳಿ ಬರೆದ. ಅಣ್ಣ ಅದಕ್ಕೂ ನಂತರದ ದಿನದಲ್ಲಿ ಉತ್ತರ ನೀಡಿದ. ಸಮಾರೋಪದಲ್ಲಿ ಗೆಳೆಯ ರಾಜೇಶ ದೇಸಾಯಿ ಪೆನ್ಸಿಲ್ಲಿನಿಂದ ತಾನೇ ಬಿಡಿಸಿ ಕಟ್ಟು ಹಾಕಿಸಿ ಅಣ್ಣನ ಚಿತ್ರವನ್ನು ನೀಡಿದ. ಅಣ್ಣನಿಗಂತೂ ಖುಷಿಯೋ ಖುಷಿ. ರಾಜೇಶ ಅಣ್ಣನ ಕೆಲವು ಪುಸ್ತಕಗಳಿಗೆ ಮುಖಪುಟ ಬಿಡಿಸಿಕೊಟ್ಟ ಎಳೆಯ ಕಲಾವಿದ.

೧೩ ನೇ ಸಾಹಿತ್ಯ ಸಮ್ಮೇಳನ ನಡೆಯುವಾಗ ಅಣ್ಣ ಅನಾರೋಗ್ಯದಿಂದ ಮಣಿಪಾಲ ಆಸ್ಪತ್ರೆಯಲ್ಲಿದ್ದ. ಡಾಕ್ಟರರೊಂದಿಗೆ ಹಠಮಾಡಿ ಸಮ್ಮೇಳನಕ್ಕೆ ಬಂದ. ವೇದಿಕೆ ಹತ್ತಿ ಮಾತನಾಡುವಷ್ಟು ಗಟ್ಟಿ ಇರಲಿಲ್ಲ. ಆದರೂ ಭಾಷಣ ಬರೆದುಕೊಂಡು ಬಂದಿದ್ದ. ಅದರಲ್ಲಿ ಮತ್ತೆ ಜೋಯ್ಡಾದ ಅಭಿವೃದ್ಧಿಯ ಕುರಿತು ನಿರ್ಣಯ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದ. ಮಾತನಾಡಲಾರದಷ್ಟು ಅನಾರೋಗ್ಯ ನಡುವೆ ಕೂಡ ಆತನ ಆಗ್ರಹ ಆತನ ಬದ್ಧತೆಯನ್ನು ಎತ್ತಿತೋರಿಸುತ್ತದೆ.

‍ಲೇಖಕರು avadhi

May 25, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

೧ ಪ್ರತಿಕ್ರಿಯೆ

  1. subray mattihalli.

    2005 ರ ದಿ. ಭಂಡಾರಿಯವರ ಭಾಷಣ ಕೇಳಿ ರೋಮಾಂಚಿತರಾದವರಲ್ಲಿ ನಾನೂ ಒಬ್ಬ. ಸೂಕ್ಷ್ಮ ಸಂವೇದನಾ ಶೀಲರಾಗಿ, ಜೋಯ್ಡಾದ ಕ್ರೂರ ವಾಸ್ತವವನ್ನು ಕಣ್ಣೆದುರಿಗೆ ಬರುವಂತೇ ಅಧ್ಯಯನಪೂರ್ಣವಾಗಿ ಮಂಡಿಸಿದ್ದರು. ಅದು ಕಳೆದು ಹದಿಮೂರು ವರ್ಷಗಳಾದರೂ ಅಲ್ಲಿಯ ಚಿತ್ರಣ ಬದಲಾಗಿಲ್ಲ. ಕಾಳಿಯಲ್ಲಿ ಸಾಕಷ್ಟು ನೀರು ಹರಿದು ಸಮುದ್ರ ಪಾಲಾದಂತೇ ದಿ. ಭಂಡಾರಿಯವರ ಮಾತೂ ಗಾಳಿಯಲ್ಲಿ ಲೀನವಾಗಿದೆ. ಮತ್ತೆ ನೆನಪಿಸಿ, ಎಚ್ಚರಿಸಿದ್ದಕ್ಕೆ ವಿಠ್ಠರ ಭಂಡಾರಿಯವರಿಗೆ ಅನಂತ ಕೃತಜ್ಞತೆಗಳು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: