ಲಕ್ಷ್ಮಣ ವಿ ಎ
ಹೀಗೇ…. ಹೊರಗೆ ಬಿರು ಬಿಸಿಲು
ನಡು ಹಗಲಿನ ಒಂದು ಸಾದಾ ದಿನ
ಹಸಿದ ನಾನು
ಒಲೆಯ ಮೇಲೆ ರಾಗಿ ಹಿಟ್ಟು ಕುದಿ ಎಸರು
ಪ್ರತಿ ಅನ್ನದ ಅಗುಳಿನ ಮೇಲೆ
ಬರೆಯಲಾಗಿದೆಯಂತೆ ತಿನ್ನುವವನ ಹೆಸರು
ಇಂದಿಗೆ
ಎಷ್ಟೋ ಸಹಸ್ರಮಾನಗಳ ಹಿಂದೆ
ಈ ಭೂಮಿ ಕೂಡ ದಿಕ್ಕು ದೆಸೆಯಿಲ್ಲದೆ
ಕುಂಬಾರನ ಚಕ್ರದ ಮೇಲಿನ ಮಣ್ಣ ಮುದ್ದೆಯಂತೆ
ಆಕರಾಳ ವಿಕರಾಳ ತಳ ತುದಿ ಮೊದಲಿಲ್ಲದ
ನೀರು ನೀರಲ್ಲದ ಕಲ್ಲು ಕಲ್ಲಲ್ಲದ ಮಣ್ಣು ಮಣ್ಣಲ್ಲದ ನಿಂತಲ್ಲೇ ನಿಲಲಾರದೆ
ಒಳಬೇಗುದಿಯಲಿ ಕುದಿ ಎಸರಿನಂತೆ
ಕುದ್ದು ಕುದ್ದು ಕುದ್ದು ತಳಮಳಿಸಿ
ಯಾರು ಅಲಗಿಸಿದರೂ ಅಲುಗದ ಉರುಳಿಸಿದರೂ ಉರುಳದ ಬುಗುರಿ
ಬಿಗಿಯಿರುವ ತಳದ ಆಕಾರಕೆ ಹಂಬಲಿಸಿ

ಅನ್ನವಾದರೇನು
ಚಿನ್ನವಾದರೇನು
ಹಾದು ಬರಬೇಕು ಹೇಮವೂ ಕೂಡ
ಬೆಂಕಿ ಬಾಯಿಯೊಳಗೆ ತೋಳ ಬಂದಿಯಾಗಲು
ಮರದ ಸೌಟಿನಿಂದ
ಕುದಿ ಎಸರು
ತಿರು ತಿರುವುತ್ತ ಇವಳು ಒಂದು ದುಂಡನೆಯ
ಮುದ್ದೆ ಹಸಿದ ಮಗನ ತಣಿಸಲು
ಚಳಿ ಗಾಳಿ ಹಿಮಪಾತ ಉಲ್ಕಾಪಾತ ಭೂಮಿಯೊಡಲಿನಲಿ ಬೆಂಕಿಯುಗುಳುವ ಒಲೆ
ಹೀಗೆ ನಿರಾಕಾರವೊಂದು ಆಕಾರವಾಗಿ ಸಾಕಾರಗೊಳ್ಳಲು
ಏಸು ಯುಗ ಯುಗಗಳ ದಣಿವಿರದ ದಾರಿ ಇದು! ಏನು ಕತೆ ?
ಮೇಲಿಂದ
ಇಳಿಸಿ
ಇವಳ ಕೈಯೊಳಗೆ ಬೋಗುಣಿಯಿಂದಿಳಿದ ದುಂಡನೆಯ ಕಪ್ಪು ಭೂಗೋಳದಂತಹ
ಬಿಸಿ ಮುದ್ದೆಯ ಮೇಲೆ
ಮೂಡಿ ಮುಳುಗುವ ಸೂರ್ಯ
ಹಸಿದ ಮರಿ ಮೀನು ಮೊಸಳೆ ಕೆರೇಬಿಯನ್ ಕಡಲು
ಕಂದಕ ನದಿ ಕಿರಿಮಂಜಾರೊ ಪರ್ವತ ಹಿಮಾಲಯ ಮಾಚು ಪಿಚು
ನಯಾಗರ ಚೈನಾ ಗೋಡೆ ತಾಜ್ ಮಹಲ್
ಮತ್ತು
ಕುಂಡಿಯ ಮೇಲೆ ಒಣಗಿದ ಮಾಂಸ
ಮೂಳೆ ಚಕ್ಕಳ ಕೋರೈಸುವ ಬಿಳಿ ಹಲ್ಲು
ಇಥಿಯೋಪಿಯ ಉಗಾಂಡದ ಹಸಿದು ಬಿಕ್ಕುವ
ಮಕ್ಕಳು ಮೂಡಿ
ಕೆಣಕುತ್ತವೆ ತಮ್ಮ ತಮ್ಮ ಪಾಲಿನ ಅನ್ನ ಎಲ್ಲಿ ? ಎಂದು ಕೇಳಿದ ಹಾಗೆ ಕನಸಿನಲ್ಲಿ
ಪ್ರತಿ ಬಾರಿ ಮುದ್ದೆ ಮುರಿಯುವಾಗಲೆಲ್ಲಾ..






0 Comments