ವಾಹ್..! ಅನು ಪಾವಂಜೆ

ಅನು ಪಾವಂಜೆ

ಸಾಂಪ್ರದಾಯಿಕ ಮೈಸೂರು ಅಥವಾ ತಂಜಾವೂರು ಕಲಾಕೃತಿಗಳ ರಚನೆಗಳಲ್ಲಿ ಜೆಸ್ಸೋ ಕೆಲಸ ಮತ್ತು ಚಿನ್ನದ ರೇಖು ಅಂಟಿಸುವ ಕೆಲಸಗಳನ್ನ ಸಂಪ್ರದಾಯದ ಹೆಸರಲ್ಲಿ ರಹಸ್ಯವಾಗಿ ಇಡುತ್ತಾರೆ. ಗೊತ್ತಾದಾಗಲೂ ಅದರ ಕ್ಲಿಷ್ಟ, ಮತ್ತು ಸಮಯ ವ್ಯಯವಾಗುವಂತಹಾ ಕೆಲಸದ ಗೋಜಿಗೆ ಹೋಗದೆ ಸುಲಭದ ಮಾರ್ಗದ ಹುಡುಕಾಟ ನಡೆಸುತ್ತಾರೆ. ತಾಳ್ಮೆಯ ಕೊರತೆ ಇರುವವರು ಅವಸರದಲ್ಲಿ ಕಲಾಕೃತಿಯ ತಯಾರಾಗಬೇಕು ಅನ್ನೋರು ಈ ಹಾದಿಯನ್ನೇ ಹಿಡಿಯುತ್ತಾರೆ.

ಸುಲಭದಲ್ಲಿ ಸಿಗುವ ಕೋನ್ ಔಟ್ ಲೈನರ್ ನ್ನ ಉಪಯೋಗಿಸುತ್ತಾರೆ. ಅಥವಾ ಮೆಹಂದಿ ಕೋನ್ ನಂತೆ ಕೋನ್ ಬಳಸುತ್ತಾರೆ. ಇಲ್ಲಿ ಕೆಲಸ ಸುಲಭವಾಗುವುದೇನೋ ನಿಜ. ಆದರೆ, ಎಳೆಯುವ ಗೆರೆಗಳಲ್ಲಿ ಅದೇನೋ ಅಸ್ವಾಭಾವಿಕತೆ ತುಂಬಾ ಯಾಂತ್ರಿಕವಾದ ಏಕತಾನತೆಯಿಂದ ಕೂಡಿದ ಎಳೆಗಳು ಕುಂಚದಲ್ಲಿ ಎಳೆಯುವ ಎಲೆಯಲ್ಲಿನ ಲಾಲಿತ್ಯವಿಲ್ಲ, ಬಳುಕಾಟವಿಲ್ಲ, ಸ್ವಾಭಾವಿಕ ನಡೆಯಿಲ್ಲ. ಇದು ನನ್ನ ವೈಯಕ್ತಿಕವಾದ ನಿಲುವು. ಹಾಗಾಗಿ ನನಗೆ ಈ ಸಾಂಪ್ರದಾಯಿಕ ಬಗೆಯಲ್ಲಿಯೇ ಒಲವು. ಅದುವೇ ಚಂದ ಎಂಬ ಕಟುವಾದ ನಿಲುವು.

ಈ ವಿಷಯದಲ್ಲಿ ಕಾಲಕ್ಕೆ ತಕ್ಕ ಬದಲಾಗಬೇಕೆಂಬ ಮನಸ್ಸು ಇಲ್ಲವೇ ಇಲ್ಲ. ನೂರಾರು ವರ್ಷಗಳಿಂದ ಮಾಡಿಕೊಂಡು ಬಂದಿರುವ ಈ ಬಗೆಯಾ ಕಲಾಕೃತಿಗಳು ಇನ್ನೂ ಹೊಳೆಯುತ್ತಿರುವಾಗ ಬೇರೆ ಹಾದಿಯ ಅಗತ್ಯವೇನಿದೆ ಅನ್ನೋ ನಿಷ್ಠುರವಾದ ನಿರ್ಧಾರ..!!!

ಇಂತಹಾ ಕಲೆಗಳಲ್ಲಿ ಸುಲಭದ ಹಾದಿಯಿಲ್ಲ. ಅದನ್ನ ಹೇಗೆ ಮಾಡಬೇಕೋ ಹಾಗೆ ಮಾಡಬೇಕು.. ಅದೇ ಚಂದ.. ಅಷ್ಟೂ ತಾಳ್ಮೆ ನಮಗಿಲ್ಲವಾದರೆ ನಾವು ಅದೆಂತಹವರು.. ನನ್ನ ಸಾಂಪ್ರದಾಯಿಕ ಚಿತ್ರಗಳಲ್ಲಿ ಆಸಕ್ತಿ ಸುಮಾರು ಇಪ್ಪತ್ತೈದು ವರ್ಷಗಳಿಗೂ ಹಳೆಯದು. ಈ ಚಿನ್ನದ ರೇಖುವಿನ ಕೆಲಸ ಕಲಿಯಬೇಕೆಂದ್ರೆ ಯಾರೂ ಹೇಳಿಕೊಡುವವರು ಇರಲಿಲ್ಲ. ಗೊತ್ತಿದ್ದರೂ ಹೇಳಿಕೊಡುವವರಂತೂ ಇಲ್ಲವೇ ಇಲ್ಲ. ಎಲ್ಲೆಲ್ಲಾ ಹುಡುಕಿದ್ದೆ.. ಸಿಕ್ಕಸಿಕ್ಕವರನ್ನ ಕೇಳಿ ನೋಡಿದ್ದೇ.. ಕಾಡಿದ್ದೆ.. ಬೇಡಿದ್ದೆ.. ಉಹೂ.. ಯಾರೂ ಹೇಳಿಕೊಡಲೇ ಒಲ್ಲರು.. ಸಾಂಪ್ರದಾಯಿಕ ಕಲೆಯನ್ನ ಕಲಿಸುವ ಕ್ಲಾಸ್ಸುಗಳಲ್ಲೂ ಈ ಪೇಸ್ಟನ್ನ ಅವರೇ ತಯಾರು ಮಾಡಿ ಕೊಡುವರಂತೆ. ಆದರೆ ಹೇಗೆ ಮಾಡುವುದೆಂದು ಹೇಳಲ್ಲವಂತೆ..!!!                                                     

ಕೊನೆಗೆ ಒಬ್ಬರು ಕಲಾವಿದರು ಸಿಕ್ಕಿದವರು ಏನೇನು ವಸ್ತುಗಳನ್ನ ಉಪಯೋಗಿಸಬೇಕು, ಹೇಗೆ ಉಪಯೋಗಿಸಬೇಕು ( ಅಂದ್ರೆ ಸೇರಿಸಿ ಕುಡಿಸಿ ಸೋಸಿ ಅರೆದು ಅಂತ ಅಷ್ಟೇ ) ಅಂತ ಹೇಳಿದ್ರು. ಅದೂ ವಿವರವಾಗಿ ಅಲ್ಲ. ಆದ್ರೆ ಎಷ್ಟೆಷ್ಟು ಅನ್ನೋದನ್ನ ಹೇಳಲಿಲ್ಲ. ಎಷ್ಟೆಷ್ಟನ್ನ ಸೇರಿಸಬೇಕು ಅನ್ನೋದನ್ನ ನೀವೇ ಮಾಡಿ ತಿಳ್ಕೊಳ್ಳಿ ಅಂದುಬಿಟ್ಟರು. ಅಷ್ಟಕ್ಕೇ ಕುಣಿದಾಡಿ ಬಿಟ್ಟೆ. ಅಷ್ಟಾದ್ರೂ ಗೊತ್ತಾಯ್ತಲ್ಲ ಅಂತ ಸಂಭ್ರಮಿಸಿದೆ. ಆ ವಸ್ತುಗಳೆಲ್ಲ ಯಾವ ಅಂಗಡಿಯಲ್ಲಿ ಸಿಗುತ್ತೆ ಅಂತ ಮತ್ತೆ ಹುಡುಕಾಡಿ ತಗೊಂಡು ಬಂದು ನನ್ನ ಪ್ರಯೋಗ ಶುರು ಹಚ್ಚಿಕೊಂಡೆ.

ಒಮ್ಮೆ ಯಾರಾದ್ರೂ ಮಾಡೋವಾಗ ನೋಡಿದ್ರೂ ಏನು ಎತ್ತ ಅಂತಾ ಅಂದಾಜಿಸಬಹುದು. ಆದ್ರೆ ಅದ್ಯಾವುದೂ ಇಲ್ಲದೆ ಸುಮ್ಮನೆ ಕತ್ತಲಲ್ಲಿ ಕುರುಡಿ ಕೈಯಾಡಿಸುತ್ತಾ ನಡೆದಂತೆ ನಡೆಯಲು ಪ್ರಾರಂಭಿಸಿದೆ. ಮೊದಲ ಪ್ರಯತ್ನ ಸೋತಿತು. ಮಾಡಿದ ಪೇಸ್ಟ್ ಬಳಸಿದಾಗ ಒಣಗದೆ ಮುದ್ದೆ ಮುದ್ದೆಯಾಗೆ ಉಳಿದುಬಿಟ್ಟಿತು. ಮತ್ತೆ ಸ್ವಲ್ಪ ಪ್ರಮಾಣ ಬದಲಿಸಿದೆ. ಮತ್ತೆ ಸೋಲು. ಪೇಸ್ಟ್ ಗಟ್ಟಿಯಾಗಿ ಬಿರುಕೊಡೆದು ಚಿತ್ರ ಹಾಳಾಯ್ತು. .ಮತ್ತೆ ಮತ್ತೆ ಪ್ರಮಾಣವನ್ನ ಬದಲಿಸುತ್ತಾ ಬದಲಿಸುತ್ತಾ ಒಂದು ಹಂತಕ್ಕೆ ಬರುವಷ್ಟರಲ್ಲಿ ಸುಮಾರು ಏಳು ವರ್ಷ ಕಳೆದಿತ್ತು. ಅಂತೂ.. ಅಬ್ಬಾ.. ಮೊದಲ ಕಲಾಕೃತಿ ಯಾವುದೇ ಕುಂದಿಲ್ಲದೆ ಮೂಡಿಬಂದಾಗ ಅತ್ತೆ ಬಿಟ್ಟಿದ್ದೆ.

ಆಗ ನನಿಗೆ ಅನ್ನಿಸಿದ್ದು “ಛೆ.. ಒಮ್ಮೆ ಯಾರಾದ್ರೂ ಹೇಗೆ ಅಂತ ಸರಿಯಾಗಿ ಮಾರ್ಗದರ್ಶನ ಮಾಡಿಬಿಟ್ಟಿದ್ದಾರೆ.. ನಾನು ಎಷ್ಟು ಸುಲಭವಾಗಿ ಮಾಡಿಕೊಳ್ಳಬಹುದಿತ್ತು ಅಂತ.” ಆದ್ರೆ ಕಲೆ ಯಾವತ್ತೂ ಸುಲಭವಾಗಿ ಒಲಿಯಬಾರದು. ನಾವು ಅದನ್ನ ಕಷ್ಟಪಟ್ಟೇ ಗಳಿಸಿಕೊಳ್ಳಬೇಕು ಅನ್ನೋ ಸತ್ಯ ನನ್ನ ಅದೆಷ್ಟು ಗಟ್ಟಿ ಮಾಡಿತ್ತು…. !!! ನಾನು ಈ ಪೇಸ್ಟ್ ಮಾಡುವ ರೀತಿ ಅದೆಷ್ಟು ಸರಿಯೋ ತಪ್ಪೋ ಗೊತ್ತಿಲ್ಲ.. ನಿಜವಾಗಿಯೂ ಸಾಂಪ್ರದಾಯಿಕ ಕಲಾವಿದರು ಹೇಗೆ ಮಾಡುತ್ತಾರೋ ಗೊತ್ತಿಲ್ಲ. ಒಮ್ಮೆಗೆ ಒಂದು ಜಾಡಿ ತುಂಬಾ ಮಾಡಿ ಇಟ್ಟುಕೊಳ್ಳುತ್ತಾರೆ ಅಂತ ಕೇಳಿದ್ದೇನೆ. ಅದನ್ನು ಹೇಗೆ ತಯಾರಿಸುತ್ತಾರೋ ನನಗೆ ಗೊತ್ತಿಲ್ಲ. ನಾನು ತಯಾರಿಸೋ ವಿಧಾನ ಇದು.

ನನ್ನ ಮಟ್ಟಿಗೆ ಇದು ಉತ್ತಮ ಫಲಿತಾಂಶ ಇದುವರೆಗೂ ಕೊಟ್ಟಿದೆ. ಹತ್ತು ವರ್ಷಗಳಷ್ಟು ಹಳೆಯದಾದರೂ ಕಲಾಕೃತಿಗಳ ಚಿನ್ನದ ರೇಖುವಿನ ಕೆಲಸ ಹಾಳಾಗಿಲ್ಲ. ಇನ್ನಷ್ಟು ವರುಷಗಳು ಉರುಳಿದರೂ ಅದು ಹಾಳಾಗದು ಅನ್ನೋ ನಂಬಿಕೆ ನನ್ನದು. ಕಷ್ಟ ಪಟ್ಟಿದ್ದಕ್ಕೆ ಸಾರ್ಥಕತೆ ಸಿಗುವ ಈ ಹಾದಿಯಲ್ಲಿನ ಎಲ್ಲವನ್ನು ಕೊನೆಗೆ ನನ್ನನ್ನೇ ಮರೆಸುವ ಸುಖ ಸದಾ ಹೀಗೆ ಇರಲಿ !!

‍ಲೇಖಕರು avadhi

September 13, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. T S SHRAVANA KUMARI

    ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: