ಅನುಕಂಪದಲ್ಲಿ ಅನುಮಾನ

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು.

ಪ್ರಸ್ತುತ  ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ.

ಸಾಮಾಜಿಕ ವಿಷಯಗಳ ಬಗ್ಗೆ ಆಳನೋಟವನ್ನು ಹೊಂದಿರುವ ಶರ್ಮಾ ಅವರ ಜೊತೆ ಮಾತಿಗೆ ಕುಳಿತರೆ ಜಗತ್ತಿನ ಒಂದು ಸುತ್ತು ಬಂದಂತೆ..

ಪ್ರತೀ ವಾರ ಇವರು ಮಕ್ಕಳ ಹಕ್ಕುಗಳ ಬಗ್ಗೆ ನಾವು ಕೇಳರಿಯದ ಸಂಗತಿಗಳನ್ನು ನಮ್ಮ ಮುಂದೆ ಇಡಲಿದ್ದಾರೆ.. 

|ಕಳೆದ ಸಂಚಿಕೆಯಿಂದ|

ಅದೊಂದು ಸರಳರೇಖೆಯಷ್ಟೇ ಸಾಫ್‌ ಸೀದಾ ಪ್ರಕರಣ ಅಂತ ನಾನಂದುಕೊಂಡಿದ್ದೆ. ಆದರೆ ಆ ರೇಖೆ ಎಲ್ಲ ತರಹದ ದಿಕ್ಕುಗಳಲ್ಲಿ, ಕೋನಗಳಲ್ಲಿ ತಿರುಗಿ ತಿರುಗಿ ಎಷ್ಟು ಸಿಕ್ಕುಸಿಕ್ಕಾಯಿತೆಂದರೆ ಒಂದಷ್ಟು ವರ್ಷಗಳು ನಾನೂ ಅದರೊಳಗೆ ಸಿಲುಕಿಕೊಂಡು ಗರಗರ ತಿರುಗುವಂತಾಗಿತ್ತು.  ಸಂಬಂಧಗಳು, ಪ್ರೀತಿ, ಪ್ರೇಮ, ಮೋಸ, ವಂಚನೆ, ಸಾವುಗಳು, ಸರ್ಕಾರಕ್ಕೂ ಮೋಸ ಮಾಡುವ ಜಾಲಗಳು, ಅದರಲ್ಲಿನ ಏಜೆಂಟುಗಳು, ಕಾನೂನುಗಳನ್ನು ಬೇಕುಬೇಕಾದಂತೆ ತಿರುಗಿಸಿಕೊಳ್ಳುವ ಸಮಯ ಸಾಧಕರು, ಇದರ ಮಧ್ಯ ಮೋಸ ಹೋದವರು, ಸಿಕ್ಕರೆ ನಮಗೂ ಒಂದಷ್ಟು ಲಾಭ ಸಿಗಲಿ ಎಂದು ಕಾಯುವವರು… ಯಾರನ್ನೆಲ್ಲಾ ನೋಡುವಂತಾಯಿತು.

ಎಲ್ಲ ರೇಖೆಗಳು ಒಂದು ಬಿಂದುವಿನಿಂದ ಆರಂಭವಾಗಬೇಕಷ್ಟೆ. ಆರಂಭವಾದ ರೇಖೆ ಮುಗಿಯುವುದು ಇನ್ನೊಂದು ಬಿಂದುವಿನಲ್ಲಿ. ಇಲ್ಲೂ ಹಾಗೇ ಆಗಿದ್ದು. ಬಿಂದುವಿನಿಂದ ರೇಖೆ ಆರಂಭವಾಯಿತು, ಇನ್ನೊಂದು ಬಿಂದುವನ್ನು ಸೇರುವತ್ತ ಸಾಗಿತ್ತು. ಆದರೆ ಬೇರೆ ಬೇರೆ ಕಡೆಗಳಿಂದ ಬಂದ ಅಲೆಗಳ ಹೊಡೆತಕ್ಕೆ ಸಿಲುಕಿ ಹೊಯ್ದಾಡುತ್ತಾ ಎತ್ತೆತ್ತಲೋ ಹೋಗಿ ಸಿಕ್ಕು ಸಿಕ್ಕಾಯಿತು.

ಬೆಂಗಳೂರು ನಗರ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ (District Child Welfare Committee)ಯ ಅಧ್ಯಕ್ಷನಾಗಿದ್ದ ನಾನು (೨೦೦೭) ಮಕ್ಕಳ ಪೋಷಣೆ ಸಂಸ್ಥೆಗೆ ಹೊಸದಾಗಿ ಬಂದಿದ್ದ ಮಕ್ಕಳ ದಾಖಲೆಗಳನ್ನು ಪರಿಶೀಲಿಸುತ್ತಿದ್ದ ಸಮಯದಲ್ಲಿ, ಬೇರೊಂದು ಸಂಸ್ಥೆಯಿಂದ ಕೆಲಕಾಲಗಳ ಹಿಂದೆ ವರ್ಗಾವಣೆಯಾಗಿ ಬಂದಿದ್ದ ೧೦ ವರ್ಷದ ಒಬ್ಬ ಬಾಲಕನ ಕಡತ ನನ್ನನ್ನ ತುಂಬಾ ಕಾಡಿತು (ಇಂತಹವು ಹಲವು. ಅವುಗಳಲ್ಲಿ ಇದೊಂದು). ನಿಲಯದಲ್ಲೇ ನಡೆಯುತ್ತಿದ್ದ ಶಾಲೆಯಲ್ಲಿ ಐದನೇ ತರಗತಿಗೆ ಹೊಸದಾಗಿ ಸೇರಿಸಿರುವ ಹುಡುಗ. ಯಾರ ಜೊತೆಯೂ ಸೇರುತ್ತಿರಲಿಲ್ಲ. ಸ್ವಲ್ಪ ಅಂತರ್ಮುಖಿ ಎಂದೆಲ್ಲಾ ಕಡತದಲ್ಲಿ ಅವನ ಹೌಸ್‌ ಫಾದರ್‌ ಬರೆದಿದ್ದನ್ನು ನೋಡಿದ್ದೆ.

ಬಾಲಕನಿಗೆ ಇಬ್ಬರು ಪೋಷಕರೂ ಇಲ್ಲ. ಸತ್ತು ಹೋಗಿದ್ದಾರೆ. ಮಗುವನ್ನು ಯಾವುದೋ ಅನಾಥಾಲಯಕ್ಕೆ ಅವನು ಸುಮಾರು ನಾಲ್ಕೈದು ವರ್ಷದವನಿದ್ದಾಗ ಸೇರಿಸಿದ್ದು. ಅಲ್ಲಿ ಮಗು ಐದು ವರ್ಷಗಳ ಕಾಲ ಬೆಳೆದಿದ್ದು, ಯಾವುದೋ ಕಾರಣಕ್ಕೆ ಆ ಸಂಸ್ಥೆ ನಿಂತು ಹೋದದ್ದರಿಂದ, ಅಲ್ಲಿದ್ದ ಮಕ್ಕಳನ್ನು ವಿವಿಧ ನಿಲಯಗಳಿಗೆ ವರ್ಗಾವಣೆ ಮಾಡಲಾಗಿತ್ತು. ಈ ಹುಡುಗ ಸರ್ಕಾರೀ ಬಾಲಕರ ಬಾಲ ಮಂದಿರಕ್ಕೆ ಬಂದಿದ್ದ.

ಹುಡುಗನೊಡನೆ ಮಾತನಾಡಿದೆ. ಏನೇ ಕೇಳಿದರೂ ಒಂದೆರಡು ಪದಗಳ ಉತ್ತರ. ಹೆಚ್ಚಿನ ಸಮಯ ಮೌನವಾಗಿರುತ್ತಿದ್ದ. ಎಲ್ಲೋ ಒಮ್ಮೆ ಅಜ್ಜಿಯಿದ್ದಾರೆ ಎಂದು ಹೇಳಿದ. ಆದರೆ ಕಡತದಲ್ಲಿ ಆ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಬಾಲಕನನ್ನ ಸಂಸ್ಥೆಗೆ ಸೇರಿಸಿದವರ ಬಗ್ಗೆಯೂ ವಿವರಣೆ ಸಮರ್ಪಕವಾಗಿರಲಿಲ್ಲ. ಹುಡುಗ ಹೇಳುವುದು ತನ್ನನ್ನ ʼಅಮ್ಮʼ ಬಿಟ್ಟು ಹೋದರು. ಯಾರೋ ಅಣ್ಣನೊಂದಿಗೆ ಇದ್ದೆ. ʼಅಮ್ಮʼ ಯಾರು ಎಂದು ಕೇಳಿದರೆ ʼಅಮ್ಮʼ ಎಂದು ಒಂದು ಹೆಸರನ್ನೂ ಹೇಳುತ್ತಿದ್ದ. ಅರೆ, ಹಾಗಾದರೆ ಯಾಕೆ ಇವನ್ನೆಲ್ಲಾ ಪರಿಶೀಲಿಸಿ ದಾಖಲಿಸಿಲ್ಲ ಎಂದು ಪ್ರಶ್ನೆ ಎತ್ತಿದೆ. ಬಾಲಕರ ಬಾಲ ಮಂದಿರದ ಸಂಬಂಧಿಸಿದ ಅಧಿಕಾರಿಗಳು ತಮ್ಮ ತನಿಖೆ ಚುರುಕುಗೊಳಿಸಬೇಕೆಂದೂ, ಮಗುವಿನ ಅಧ್ಯಯನ ವರದಿ (Child Study Report) ನೀಡಬೇಕೆಂದು ನಿರ್ದೇಶಿಸಿದೆ.

ಮುಖ್ಯವಾಗಿ ಪೋಷಕರಿಬ್ಬರೂ ಇಲ್ಲ ಎಂದಾದರೆ ಅಥವಾ ನೋಡಿಕೊಳ್ಳುವವರು ಇಲ್ಲ ಎಂದಾದರೆ ಮಗುವಿಗೆ ಪರ್ಯಾಯ ಕುಟುಂಬದಲ್ಲಿ ಬೆಳೆಯಲು ಅವಕಾಶ ಮಾಡಿಕೊಡಬೇಕು. ಮಕ್ಕಳು ಸಂಸ್ಥೆಗಳಲ್ಲಿ, ಅನಾಥಾಲಯಗಳಲ್ಲಿ ದೀರ್ಘಕಾಲ ಇರುವುದು ಅಷ್ಟು ವಿಹಿತವಲ್ಲ. ಈ ಮಗುವನ್ನ ಯಾಕೆ ಹಾಗೆ ದೀರ್ಘಕಾಲ ಇಟ್ಟುಕೊಳ್ಳಲಾಯಿತು? ಅಜ್ಜಿ ದೈಹಿಕವಾಗಿ ಮತ್ತು ಆರ್ಥಿಕವಾಗಿ ಸದೃಢವಾಗಿದ್ದರೆ, ಅವರಿಗೆ ಮೊದಲ ಆದ್ಯತೆಯಾಗಿ ಮಗುವನ್ನು ನೋಡಿಕೊಳ್ಳಲು ವ್ಯವಸ್ಥೆ ಮಾಡಬೇಕು. ಇಷ್ಟರ ಮೇಲೆ ಅಜ್ಜಿಯ ಹಣಕಾಸು ವ್ಯವಸ್ಥೆ ಅಷ್ಟು ಸಮರ್ಪಕವಾಗಿಲ್ಲದಿದ್ದರೂ, ತಾನು ಮಗುವನ್ನು ಸಾಕಿಕೊಳ್ಳುವೆ ಎಂದಿದ್ದರೆ ಅಜ್ಜಿಗೆ ಸರ್ಕಾರದಿಂದಲೇ ನೆರವು ನೀಡುವ ವ್ಯವಸ್ಥೆಯನ್ನೂ (Sponsorship or foster care expenses) ಮಾಡಬಹುದಿತ್ತು. ಇಷ್ಟಕ್ಕೂ ಮೊದಲು ಅಜ್ಜಿಯನ್ನು ಹುಡುಕಬೇಕು.

ವರದಿ ಬಂತು. ಮಕ್ಕಳ ಕಲ್ಯಾಣ ಸಮಿತಿ ವಿಶೇಷ ಆಸಕ್ತಿ ವಹಿಸಿದ್ದರಿಂದ ಬಾಲಕರ ಬಾಲ ಮಂದಿರದ ಕಲ್ಯಾಣಾಧಿಕಾರಿಗಳು ಆದಷ್ಟೂ ತ್ವರಿತವಾಗಿ ಮಾಹಿತಿ ಸಂಗ್ರಹಿಸಿದ್ದರು. ಬಾಲಕ ಹೇಳುತ್ತಿದ್ದ ಚೂರುಪಾರು ಮಾಹಿತಿ ಹಿಡಿದು ಮೂಲೆಮೂಲೆಗಳನ್ನು ಸೇರಿಸಿಡುವ ಯತ್ನ ಮಾಡಿದರು. ಆದರೂ ಅದು ಗೋಜಲು ಗೋಜಲು. ಅಜ್ಜಿಯ ವಿವರಗಳು ಪತ್ತೆಯಾಗಲಿಲ್ಲ! ಮಗು ಈ ಹಿಂದೆ ಇದ್ದ ಸಂಸ್ಥೆಯವರಿಂದಲೂ ಏನೂ ವಿವರಗಳು ಸಿಗಲಿಲ್ಲ. ವರದಿಯೊಡನೆ ಒಂದು ಸಲಹೆಯೂ ಇತ್ತು. ಸಾಧ್ಯವಾದಲ್ಲಿ ಶೀಘ್ರವಾಗಿ ಮಗುವನ್ನು ಯಾವುದಾದರೂ ಅರ್ಹ ಕುಟುಂಬದಲ್ಲಿ ಸಾಕಿಕೊಳ್ಳಲು ಕೊಡುವುದು ಒಳ್ಳೆಯದು.

ಇನ್ನೇನು ಮಾಡುವುದು. ಹೀಗೇ ಇನ್ನೊಂದೈದಾರು ತಿಂಗಳುಗಳು ಕಳೆಯಿತು. ಆ ಸಮಯದಲ್ಲಿ ಬಾಲಮಂದಿರಕ್ಕೆ, ಶಿಶುಮಂದಿರಕ್ಕೆ ಮತ್ತು ಮಕ್ಕಳ ಕಲ್ಯಾಣ ಸಮಿತಿಗೆ ಸಾಕಷ್ಟು ಜನ ಮಕ್ಕಳನ್ನು ಸಾಕಿಕೊಳ್ಳಲು ಕೊಡಿ, ದತ್ತು ಕೊಡಿ ಎಂದು ಕೇಳಿಕೊಂಡು ಬರುವುದು ಇದ್ದೇ ಇತ್ತು. ದತ್ತು ಪ್ರಕ್ರಿಯೆಯ ಸಮಯ ಮತ್ತು ಅದರಲ್ಲಿನ ಗೃಹ ತನಿಖೆಯೇ ಮೊದಲಾದವುಗಳು ಬೇಡ. ಹಾಗೇ ಮಗುವೊಂದನ್ನು ಕೊಟ್ಟುಬಿಡಿ ಎನ್ನುವವರೇ ಅಧಿಕ.

ಜೊತೆಗೆ ಈಗ ಹುಟ್ಟಿದ ಮಗು ಬೇಕು. ಪುಟ್ಟ ಮಗು ಬೇಕು ಎನ್ನುವವರ ಮಧ್ಯೆ ಒಂದು ಕುಟುಂಬದ ಅರ್ಜಿಯಲ್ಲಿ ಬೆಳೆದ ಮಗುವನ್ನು ನೋಡಿಕೊಳ್ಳುವ ಹಂಬಲ ವ್ಯಕ್ತಪಡಿಸಿದ್ದು ಕಂಡಿತು. ಗೃಹ ತನಿಖೆ ವರದಿಯೂ ಬಂದಿತ್ತು. (ತೀರಾ ಇತ್ತೀಚಿನವರೆಗೂ ಬೆಳೆದ ಹುಡುಗ ಹುಡುಗಿಯನ್ನು ಸಾಕಿಕೊಳ್ಳುವ ಅಪೇಕ್ಷೆ ಇದೆಯೆಂದು ಹೇಳುವವರು ವಾಸ್ತವವಾಗಿ ಮನೆಗೆಲಸಕ್ಕೆ, ತಮ್ಮ ಮಕ್ಕಳನ್ನು, ನಾಯಿಯನ್ನು ನೋಡಿಕೊಳ್ಳುವುದಕ್ಕೆ, ತೋಟ, ಗದ್ದೆ ಕೆಲಸಕ್ಕೆ ಆಳು ಸಿಗುವುದು ಎಂದುಕೊಂಡೇ ಬರುತ್ತಿದ್ದುದನ್ನು ನೋಡಿದ್ದೇವೆ).

ಅರ್ಜಿಯ ವಿವರಗಳು: ಕುಟುಂಬ ವೃತ್ತಿಯಲ್ಲಿ ನಾಪಿತರು. ಒಂದು ಅಂಗಡಿ. ಕುಟುಂಬಕ್ಕೆ ಸಾಕಾಗುವಷ್ಟು ವ್ಯಾಪಾರ. ಜೊತೆಯಲ್ಲಿ ತಮ್ಮ ಊರಿನಲ್ಲಿ ತೋಟ ಗದ್ದೆ ಹೊಂದಿದ್ದಾರೆ. ಕೆಲವು ಅಂಗಡಿ ಮಳಿಗೆಗಳನ್ನು ಬಾಡಿಗೆಗೆ ಕೊಟ್ಟಿದ್ದಾರೆ. ಹಣಕಾಸಿನ ಭದ್ರತೆಯಿದೆ. ಗಂಡ ಹೆಂಡಿರು ಆರೋಗ್ಯವಾಗಿದ್ದಾರೆ. ಇನ್ನೂ ವಯಸ್ಸಿದೆ. ಮಕ್ಕಳಾಗದು. ಆದರೆ ಒಂದೇ ಒಂದು ತೊಂದರೆ. ಅವರ ಇಬ್ಬರು ಬೆಳೆದ ಮಕ್ಕಳು ಬೇರೆ ಬೇರೆ ಕಾರಣಗಳಿಂದ ಸತ್ತು ಹೋಗಿದ್ದರು. ಸ್ವಲ್ಪ ಕಣ್ಣಿನ ತೊಂದರೆ ಇದ್ದ ಒಬ್ಬ ಮಗ ಸಂಜೆಗತ್ತಲಿನಲ್ಲಿ ರೈಲ್ವೆ ಹಳಿಗಳ ಟ್ರಾಕ್‌ಚೇಂಜ್‌ ಜಂಕ್ಷನ್‌ನಲ್ಲಿ ಕಾಲು ಸಿಕ್ಕಿಸಿಕೊಂಡು ದುರಂತದಲ್ಲಿ ಸತ್ತು ಹೋಗಿದ್ದ. ಇನ್ನೊಬ್ಬ ಹುಡುಗ ಅದಾವುದೋ ರೋಗಕ್ಕೆ ಬಲಿಯಾಗಿದ್ದ. ಮನೆಯಲ್ಲಿ ಸಾಕಷ್ಟು ವರ್ಷಗಳು ಶೋಕದ ವಾತಾವರಣ. ಹೇಗೆ ಹೇಗೋ ಅವರು ಬದುಕಿನಲ್ಲಿ ಹೊಂದಿಕೊಂಡಿದ್ದರು. ಆದರೂ ತಮಗೊಂದು ಮಗು ಬೇಕೆಂಬ ಆಶೆ ಇಟ್ಟುಕೊಂಡಿದ್ದರು. 

ಸಾಮಾನ್ಯ ಸಂದರ್ಭಗಳಲ್ಲಿ ʼಇದರ ಬದಲು ಅದುʼ ಎಂಬ ಮನಸ್ಥಿತಿ ಇದ್ದರೆ, ಅಂತಹವರಿಗೆ ಬಹಳಷ್ಟು ಕಾಲ ಆಪ್ತ ಸಮಾಲೋಚನೆ ನಡೆಸಿ, ಈಗ ಇಲ್ಲದ ಮಗುವನ್ನೋ/ಮಕ್ಕಳನ್ನೋ ʼದತ್ತು ಬರುವʼ ಅಥವಾ ʼಸಾಕಿಕೊಳ್ಳುವʼ ಮಕ್ಕಳಲ್ಲಿ ಏಕೆ ನೋಡಬಾರದು (ಆ ನಮ್ಮ ಮಗು ಎಷ್ಟು ಚೆನ್ನಾಗಿ ಹಾಡ್ತಿತ್ತು, ಎಷ್ಟು ಚೆನ್ನಾಗಿ ಓದ್ತಿತ್ತು, ನಮ್ಮನ್ನು ನೋಡಿದ ಕೂಡಲೇ ಅಮ್ಮಾ ಅಂತ ಬರ್ತಿತ್ತು, ಬಹಳ ಒಳ್ಳೇ ಮಗುವಾಗಿತ್ತು ಎಂದು, ಈ ಮಗುವಿನಲ್ಲೂ ಅದನ್ನೇ ಎದುರು ನೋಡಬಾರದು. ಮುಖ್ಯವಾಗಿ ನಿಮ್ಮ ಹಿಂದಿನ ಮಕ್ಕಳ ಹೆಸರನ್ನು ಈ ಮಗುವಿಗೆ ಇಡಬಾರದು) ಎಂದು ಹಂತ ಹಂತವಾಗಿ ತಿಳಿ ಹೇಳುವುದು ಅತ್ಯಾವಶ್ಯಕ.

ಇದೇ ಪ್ರಕ್ರಿಯೆಯನ್ನು ಮಕ್ಕಳೊಡನೆಯೂ ನಡೆಸಬೇಕು. ಮಾತನಾಡಬಲ್ಲ, ತಿಳಿವಳಿಕೆ ಮೂಡಿರುವ ಮಕ್ಕಳೊಡನೆ, ಅದರಲ್ಲೂ ತಮ್ಮ ತಾಯಿ ತಂದೆ, ಬಂಧುಗಳ ಜೊತೆ ಇದ್ದ ಅಥವಾ ಸಂಪರ್ಕದಲ್ಲಿದ್ದ ಮಕ್ಕಳೊಡನೆ ಅತಿ ಹೆಚ್ಚು ಸಮಯ ಇದಕ್ಕಾಗಿ ಮೀಸಲಿಡಬೇಕು.

ಸಮಿತಿಯ ಸದಸ್ಯರು ನಾವೈವರೂ ಮತ್ತು ದತ್ತು, ಫಾಸ್ಟರ್‌ ಕೇರ್‌ ಸಂಬಂಧಿತ ಅಧಿಕಾರಿಗಳು ಸೇರಿ ಸಭೆ ನಡೆಸಿದೆವು. ಈ ಪ್ರಕರಣವನ್ನು ಪರಿಶೀಲಿಸಿ ಅತಿ ಜಾಗ್ರತೆಯಿಂದ ನಿರ್ವಹಿಸುವುದು ಎಂದು ತೀರ್ಮಾನಿಸಿದೆವು. ಕಡತಗಳು ಓಡಾಡಿದವು. ಇಲಾಖೆಯಿಂದ ತಾತ್ಕಾಲಿಕ ಅನುಮತಿ ಸಿಕ್ಕಿತು.

ಭಾವೀ ಪೋಷಕರು ಮತ್ತು ಮಗುವಿನ ಭೇಟಿಯಾಯಿತು. ಐದಾರು ಬಾರಿ ಭೇಟಿಯ ನಂತರ ಹುಡುಗ ಅವರಿಗೆ ಕಾಯುವುದು, ಅವರು ಬಂದು ಮಗುವಿನೊಡನೆ ಆಟವಾಡಿ, ಮಾತನಾಡಿ ಸಂತೋಷ ಪಡುವುದು, ಮುಂದಿನ ದಿನಕ್ಕಾಗಿ ಎದುರು ನೋಡುವುದನ್ನು ದಾಖಲಿಸಲಾಯಿತು. ಮುಂದೊಂದು ನಿರ್ಧಾರಿತ ದಿನ ಒಪ್ಪಿತ ವಿಧಿವಿಧಾನಗಳಂತೆ ಬಾಲಕನನ್ನು ಅವನ ಭಾವೀ ಪೋಷಕರ ಮನೆಗೆ ʼಸಾಕಿಕೊಳ್ಳುವ/ನೋಡಿಕೊಳ್ಳುವʼ ಜವಾಬ್ದಾರಿ ಒಪ್ಪಂದಗಳೊಡನೆ ಕಳುಹಿಸಿಕೊಡಲಾಯಿತು. ಅದಕ್ಕೆ ಬೇಕಾದ ಅನುಸರಣೆ ಭೇಟಿಗಳು ಕೂಡಾ ನಿರ್ಧಾರವಾಯಿತು.

ನಾವೆಲ್ಲರೂ ಒಂದು ಮಗುವಿಗೆ ಪೋಷಕರು ಸಿಕ್ಕರು ಎನ್ನುವ ಸಮಾಧಾನದ ಉಸಿರು ಬಿಟ್ಟೆವು. ಸಂತೋಷವಾಗಿತ್ತು.

ಆದರೆ ಈ ಸಂತೋಷ ಹೆಚ್ಚು ಕಾಲ ಹಾಗೇ ಇರಲಿಲ್ಲ!

|ಮುಂದಿನ ಸಂಚಿಕೆಯಲ್ಲಿ|

‍ಲೇಖಕರು ವಾಸುದೇವ ಶರ್ಮ

February 4, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: