ಪ್ರಜಾವಾಣಿ ಹಾಗೂ ನೈತಿಕ ಬಿಕ್ಕಟ್ಟುಗಳು

ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ..

ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ಪ್ರಜಾವಾಣಿ’ ‘ಸುಧಾದಲ್ಲಿಯೂ ಮುಖ್ಯ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು.

‘ಸಂಯುಕ್ತ ಕರ್ನಾಟಕ’ ‘ವಾರ್ತಾ ಭಾರತಿ’ಯಲ್ಲಿ ಅಂಕಣ ಬರೆದ ರಂಗನಾಥರಾವ್ ಅವರು ‘ಅವಧಿ’ಯ ಆಹ್ವಾನವನ್ನು ಮನ್ನಿಸಿ ತಮ್ಮ ಮಾಧ್ಯಮ ಲೋಕದ ಪಯಣದ ಬಗ್ಗೆ ಬರೆಯಲಿದ್ದಾರೆ. 

ಸಾರ್ವಜನಿಕ ನೈತಿಕತೆ, ಶಿಷ್ಟಾಚಾರ, ಶಿಸ್ತು, ಪ್ರಮಾಣಿಕತೆ ಮೊದಲಾದವು ಇತ್ತೀಚಿನ ಬದುಕಿನಲ್ಲಿ ಉಪೇಕ್ಷೆ, ತಾತ್ಸಾರಗಳಿಗೆ ಗುರಿಯಾಗಿರುವುದು ಕಳವಳಕಾರಿ ಸಂಗತಿ. ಈ ಮೌಲ್ಯಗಳ ಮಹತ್ವವನ್ನು ಜನತೆಗೆ ತಿಳಿಸಿಕೊಡಬೇಕಾದ ಪತ್ರಿಕಾ ವೃತ್ತಿಯಲ್ಲೂ ಇದೇ ಧೋರಣೆ ಕಂಡುಬಂದಲ್ಲಿ ಅದು ಆಘಾತಕಾರಿಯಲ್ಲದೆ ಮತ್ತೇನು? ಹೊಸ ಪೀಳಿಗೆಯ ಪತ್ರಕರ್ತರಲ್ಲಿ ಮೌಲ್ಯಗಳ ಬಗ್ಗೆ ಉಡಾಫೆಯ ಮನೋಭಾವವನ್ನು ನಾನು ಸೂಕ್ಷ್ಮವಾಗಿ ಗಮನಿಸಿದ್ದೆ.

ನೈತಿಕ ಮೌಲ್ಯಗಳು, ಪತ್ರಿಕಾ ಧರ್ಮ, ವೃತ್ತಿಪರತೆ, ವೃತ್ತಿ ನಿಯತ್ತು, ಋಜುತ್ವ, ವೃತ್ತಿ ಜೀವನದಲ್ಲಿ ಪ್ರಮಾಣಿಕತೆ, ಶಿಸ್ತು, ಶಿಷ್ಟಾಚಾರ -ಇಂಥವುಗಳ ಪಾಲನೆಯಲ್ಲಿ ಹೊಸ ಪೀಳಿಗೆಯ ಪತ್ರಕರ್ತರಲ್ಲಿ ಹೆಚ್ಚಿನ ಕಾಳಜಿ ಇದ್ದಂತಿರಲಿಲ್ಲ. ಬದುಕಿನ ಮಿಕ್ಕೆಲ್ಲ ಕ್ಷೇತ್ರಗಳಲ್ಲೂ ಅಪರೂಪವಾಗುತ್ತಿರುವ ಈ ಮೌಲ್ಯಗಳು ಪತ್ರಿಕಾವೃತ್ತಿಯಲ್ಲಿ ಮಾತ್ರ ಅಪೇಕ್ಷಣೀಯ ಎನ್ನುವುದು ಎಷ್ಟರಮಟ್ಟಿಗೆ ಸರಿ? ಪತ್ರಕರ್ತರಿಗೂ ಸುಖೀ ಜೀವನದ ಆಸೆಗಳಿರುವುದಿಲ್ಲವೆ? ಅದನ್ನು ತ್ಯಾಗ ಮಾಡಬೇಕೆನ್ನುವುದು ಸರಿಯೆ? ಇಂಥ ಪ್ರಶ್ನೆಗಳನ್ನು ನಾನು ಎದುರಿಸ ಬೇಕಾಗಿ ಬಂತು.

ನನ್ನ ಸಹೋದ್ಯೋಗಿಗಳಿಂದಲೇ ಇಂಥ ಪ್ರಶ್ನೆಗಳು ಬಂದಾಗ, ನನ್ನ ಸಹೋದ್ಯೋಗಿಗಳ ಮೇಲೆ ದೂರುಗಳು ಬಂದಾಗ ಬಹಳ ದು:ಖವಾಗುತ್ತಿತ್ತು. ವಿಚಾರಣೆ ಮಾಡಬೇಕಾಗಿ ಬಂದಾಗ ಮನಸ್ಸಿಗೆ ತುಂಬ ಮುಜುಗರವಾಗುತ್ತಿತ್ತು.

ನಾವೂ `ಕೇವಲ’ ಮನುಷ್ಯರೇ ಆಗಿರುವುದರಿಂದ ಇವೆಲ್ಲ ಸಹಜ ಎಂದುಕೊಂಡು ಸುಮ್ಮನಿರಲೂ ಆಗುತ್ತಿರಲಿಲ್ಲ. ಅಂಥ ಪ್ರವೃತ್ತಿಯನ್ನು ನಿಯಂತ್ರಿಸಬೇಕೆಂದು, ಪತ್ರಿಕೆಯ ವಿಶ್ವಾಸಾರ್ಹತೆಗೆ ಧಕ್ಕೆ ಬಾರದಂತೆ ನೋಡಿಕೊಳ್ಳಬೇಕೆಂದು ಆಡಳಿತ ವರ್ಗವೂ ಬಯಸುತ್ತಿತ್ತು. ಕಣ್ಣೆದುರಿಗಿದ್ದವರನ್ನು, ಕಣ್ಣೆದುರು ನಡೆಯುವ ಸಂಗತಿಗಳನ್ನು ನಿಯಂತ್ರಿಸುವುದೇ ಕಷ್ಟಸಾಧ್ಯವಾಗಿರುವಾಗ ದೂರದಲ್ಲಿರುವವರನ್ನು ಬೆಂಗಳೂರಿನಲ್ಲಿ ಕುಳಿತುಕೊಂಡು ಹದ್ದುಬಸ್ತಿನಲ್ಲಿಡುವುದು ಇನ್ನೂ ಕಷ್ಟ.

ನಮ್ಮ ಜಿಲ್ಲಾ ವರದಿಗಾರರ ಬಗ್ಗೆಯೇ ಹೆಚ್ಚು ದೂರುಗಳು ಬರುತ್ತಿದ್ದವು. ಬಹುತೇಕ ದೂರುಗಳು ಪೂರ್ವಾಗ್ರಹ ಪೀಡಿತವಾಗಿರುತ್ತಿದ್ದವು. ತಮ್ಮ ಸುದ್ದಿ ಬರಲಿಲ್ಲ, ತಮಗೆ ಸೂಕ್ತ ಪ್ರಚಾರ ಕೊಡಲಿಲ್ಲ- ಇಂಥ ಕಾರಣಗಳೇ ಇರುತ್ತಿದ್ದವು. ಆದರೆ ಕೆಲವೊಂದು, ಸ್ವಂತಕ್ಕೋ ಪರಕ್ಕೋ ಪತ್ರಿಕೆಯ ಹೆಸರನ್ನು ದುರುಪಯೋಗ ಮಾಡಿಕೊಂಡು ಸರ್ಕಾರಿ ಕೆಲಸಗಳನ್ನು ಮಾಡಿಸಿಕೊಳ್ಳುವಂಥ ಗಂಭೀರ ದೂರುಗಳು. ಕೆಲಸ ಮಾಡಿಕೊಡದಿದ್ದರೆ ಪತ್ರಿಕೆಯಲ್ಲಿ ಬರೆಯುವುದಾಗಿ ಬೆದರಿಸುತ್ತಾರೆಂಬ ದೂರುಗಳು. ಇಂಥ ಕೆಲವು ದೂರುಗಳು ಖಾಸಗಿಯವರಲ್ಲದೆ ಸರ್ಕಾರಿ ಅಧಿಕಾರಗಳಿಂದಲೂ ಬರುತ್ತಿತ್ತು.

ದೂರುಗಳು ನನ್ನ ಮಟ್ಟದಲ್ಲೇ ಬಂದಾಗ ನಾನು ಸೂಕ್ತ ಎಚ್ಚರಿಕೆ ನೀಡುವುದರಲ್ಲಿ ಸಮಾಪ್ತಿಗೊಳಿಸುತ್ತಿದ್ದೆ. ಕೆಲವರು ಅಧಿಕಾರಿಗಳು ನೇರವಾಗಿ ಮ್ಯಾನೇಜಿಂಗ್ ಡೈರೆಕ್ಟರ್ ಅಥವಾ ಡೈರೆಕ್ಟರುಗಳಿಗೆ ದೂರು ಕೊಡುತ್ತಿದ್ದರು. ಅಂಥ ಸಂದರ್ಭಗಳಲ್ಲಿ ವಿಚಾರಣೆ ನಡೆಸುವಂತೆ ನನಗೆ ಆದೇಶ ಬರುತ್ತಿತ್ತು. ಒಂದೆರಡು ಸಂದರ್ಭಗಳಲ್ಲಿ ದೂರು ನಿಜವೆಂದು ಕಂಡು ಬಂದಾಗ ಶಿಸ್ತಿನ ಕ್ರಮ ಅನಿವಾರ್ಯವಾಗುತ್ತಿತ್ತು. ಎಚ್ಚರಿಕೆ ನೀಡುವುದು ಇಲ್ಲವೇ ಆ ಸ್ಥಳದಿಂದ ಬೇರೆಡೆಗೆ ವರ್ಗಾವಣೆ ಮಾಡುವುದು ಇಂಥ ಕ್ರಮಗಳು. ವರ್ಗ ಮಾಡಿದಾಗ ನನ್ನ ವಿರುದ್ಧ ಆರೋಪಗಳು ದೂಷಣೆಗಳೂ ಕೇಳಿ ಬರುತ್ತಿದ್ದವು. ಇವೆಲ್ಲ ವೃತ್ತಿಯಲ್ಲಿ, ಈ ಹುದ್ದೆಯಲ್ಲಿ ಎದುರಿಸಲೇ ಬೇಕಾದ ಪಿಡುಗುಗಳು ಎಂದು ನಾನು ನಿರ್ಲಿಪ್ತನಾಗಿ ಇದ್ದು ಬಿಡುತ್ತಿದ್ದೆ.

ನೈತಿಕತೆ, ನೀತಿ ನಿಯತ್ತು, ವೃತ್ತಿ ಸ್ವಾತಂತ್ರ್ಯ, ವೃತ್ತಿ ಧರ್ಮ, ವೃತ್ತಿಯಲ್ಲಿನ ಹಂಗು ಇವೆಲ್ಲ ಎರಡು ಅಲುಗಿನ ಶಸ್ತ್ರವಿದ್ದಂತೆ. ಸ್ವಲ್ಪ ವಿವೇಚನೆ ತಪ್ಪಿದರೂ ಆತ್ಮಘಾತುಕವಾಗಬಲ್ಲದು. ನೈತಿಕತೆ, ನೀತಿ ನಿಯಮ, ಸ್ವಾತಂತ್ರ್ಯಗಳು ಸಾರ್ವಜನಿಕ ಹಿತದ ಪರವಾಗಿ ಪಾಲನೆಯಾದಾಗ ಕೆಲವೊಮ್ಮೆ ಪತ್ರಕರ್ತರು ತ್ಯಾಗಕ್ಕೂ ಸಿದ್ಧವಿರಬೇಕಾಗುತ್ತದೆ.

`ಪ್ರವಾ’ಯ ಸಿ.ಜಿ.ಕೆ. ರೆಡ್ಡಿ, ಖಾದ್ರಿ ಶಾಮಣ್ಣ ಅವರುಗಳ ರಾಜೀನಾಮೆಯ ನಿದರ್ಶನಗಳು ನಮ್ಮ ಕಣ್ಣ ಮುಂದಿವೆ. ಎಚ್.ಎ.ಎಲ್ ಕಾರ್ಮಿಕರ ಮುಷ್ಕರದಲ್ಲಿ ಇವರಿಬ್ಬರೂ ಕಾರ್ಮಿಕರ ಪರ ನಿಂತು ಸರ್ಕಾರದ/ಆಡಳಿತ ವರ್ಗದ ಕೆಂಗಣ್ಣಿಗೆ ಗುರಿಯಾಗಿ ಉದ್ಯೋಗ ತ್ಯಜಿಸಬೇಕಾಯಿತು. ಇಂಥದೇ ಒಂದು ನೈತಿಕ ಬಿಕ್ಕಟ್ಟನ್ನು ನಾನು ಒಂದಲ್ಲ ಎರಡು ಮೂರು ಬಾರಿ ಎದುರಿಸಬೇಕಾಯಿತು. ಒಂದು ಪ್ರಸಂಗವನ್ನು ಹೇಳುತ್ತೇನೆ.

ಆ ದಿಗಳಲ್ಲಿ ವರ್ಷಕ್ಕೊಮ್ಮೆ ಡೆಕ್ಕನ್ ಹೆರಾಲ್ಡ್ ಸಂಗೀತೋತ್ಸವ ನಡೆಯುತ್ತಿತ್ತು. ಚೌಡಯ್ಯ ಸ್ಮಾರಕ ಸಂಗೀತ ಭವನದಲ್ಲಿ ಮೂರು ನಾಲ್ಕು ದಿನಗಳ ಸಂಗೀತೋತ್ಸವ. ಕಾರ್ಯನಿರ್ವಾಹಕ ನಿರ್ದೇಶಕರ (ಇ.ಡಿ.) ಮೇಲುಸ್ತುವಾರಿಯಲ್ಲಿ ನಡೆಯುತ್ತಿದ್ದ ಈ ಉತ್ಸವ ಸಂಗೀತ ಪ್ರಿಯರನ್ನು ಆಕರ್ಷಿಸಿ ಜನಪ್ರಿಯವಾಗಿತ್ತು. ಆದರೆ ಈ ಉತ್ಸವದಲ್ಲಿ ಸಂಗೀತ ಕಚೇರಿ ನಡೆಸಲು ಹೆಚ್ಚಾಗಿ ಮದ್ರಾಸಿನ ಗಾಯಕರು ಮತ್ತು ವಾದಕರುಗಳನ್ನೇ ಆಯ್ಕೆ ಮಾಡಲಾಗುತ್ತದೆ, ಕನ್ನಡಿಗರಿಗೆ ಅವಕಾಶ ನೀಡುತ್ತಿಲ್ಲ ಎಂಬ ಅಪಸ್ವರವೂ ಕೇಳಿಬಂದಿತ್ತು. ಇದು ಕನ್ನಡ ಚಳವಳಿಗಾರರಿಗೆ ಒಂದು ಅಸ್ತ್ರವಾಯಿತು.

ಡೆಕ್ಕನ್ ಹೆರಾಲ್ಡ್  ಕನ್ನಡ ವಿರೋಧಿ ಎಂದು ಭಾವಿಸಿದ ಚಳವಳಿಗಾರರು ಕುಪಿತರಾದರು. ಆ ವರ್ಷ ಉತ್ಸವದ ಸಮಯದಲ್ಲಿ ಡೆಕ್ಕನ್ ಹೆರಾಲ್ಡ್ ಕಚೇರಿ ಎದುರಿನ ಫುಟ್ ಪಾತಿನಲ್ಲಿ ಪ್ರತಿಭಟನಾ ಪ್ರದರ್ಶನ ನಡೆಸಿದರು. ಧಿಕ್ಕಾರ ಕೂಗಿದರು. ನಿರ್ದೇಶಕರುಗಳು ತಮ್ಮ ಚೇಂಬರಿನ ಕಿಟಕಿಗಳಿಂದಲೇ ಎದುರು ಫುಟ್ ಪಾತಿನಲ್ಲಿ ನಡೆಯುತ್ತಿದ್ದ ಈ ಪ್ರತಿಭಟನೆಯನ್ನು ಸಾಕ್ಷಾತ್ ನೋಡಬಹುದಿತ್ತು.

ಈ ಪ್ರತಿಭಟನಾ ಪ್ರದರ್ಶನದಲ್ಲಿ ʼಪ್ರವಾ’ದ ಉಪ ಸಂಪಾದಕಿಯೊಬ್ಬರು ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ ಎಂಬ ಕಳಕಳಿಯಿಂದಲೋ ಅಥವಾ ಸಂಗೀತದ ಪ್ರೇರಣೋತ್ಸಾಹದಿಂದಲೋ ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಈ ಹೆಣ್ಣು ಮಗಳು ಕರ್ನಾಟಕದ ಖ್ಯಾತ ವೈಣಿಕ ವಿದ್ವಾಂಸ ಶ್ರೀ ರಾಜಾರಾಯರ ಸುಪುತ್ರಿ. ತಂದೆಯಿಂದ ಬಂದ ಸಂಗೀತದ ಮೋಹವೂ ಆಕೆಯನ್ನು ಈ ಪ್ರತಿಭಟನೆಗೆ ದೂಡಿರಲಿಕ್ಕೆ ಸಾಕು.

ಡೆಕ್ಕನ್ ಹೆರಾಲ್ಡ್ ನಲ್ಲಿ ತಮಿಳು ಮೂಲದ ಒಬ್ಬರು ಮಹಿಳಾ ಪತ್ರಕರ್ತರಿದ್ದರು. ಈಕೆ ಸ್ವತಃ ಸಂಗೀತ ಪ್ರಿಯರಾಗಿದ್ದು ಸಂಗೀತದ ಬಗ್ಗೆ, ಶಿಕ್ಷಣದ ಬಗ್ಗೆ ವಿಶೇಷ ಲೇಖನಗಳನ್ನು ಬರೆಯುತ್ತಿದ್ದರು. ʼಪ್ರವಾ’ದ ಉಪ ಸಂಪಾದಕಿಯೊಬ್ಬಳು ʼಡಿಎಚ್’ ಸಂಗೀತೋತ್ಸವ ವಿರೋಧಿ ಪ್ರತಿಭಟನಾ ಪ್ರದರ್ಶನದಲ್ಲಿ ಭಾಗಿಯಾಗಿರುವುದನ್ನು ಗಮನಿಸಿದ ಈಕೆ ತಕ್ಷಣ ಅದನ್ನು ಎಕ್ಸುಕ್ಯುಟಿವ್ ಡೈರೆಕ್ಟರ್ ಗಮನಕ್ಕೆ ತಂದಿದ್ದರು. ತಮ್ಮ ಚೇಂಬರಿನ ಕಿಟಕಿಯಿಂದಲೇ ಪ್ರತಿಭಟನಾ ಪ್ರದರ್ಶನದಲ್ಲಿ ʼಪ್ರವಾ’ ಉಪ ಸಂಪಾದಕಿ ಮುಂಚೂಣಿಯಲ್ಲಿರುವುದನ್ನು ಅವರು ಪ್ರತ್ಯಕ್ಷ ಕಂಡರು. ಮರು ಕ್ಷಣವೇ ನನಗೆ ಬುಲಾವ್”: “ಎಕ್ಸಿಕ್ಯುಟಿವ್ ಡೈರೆಕ್ಟರ್ ನಿಮ್ಮನ್ನು ಕರೆಯುತ್ತಿದ್ದಾರೆ. ಬನ್ನಿ”

ನಾನು ಅವರ ಚೇಂಬರಿಗೆ ಹೋದೆ.

“ನಮ್ಮ ಆಫೀಸಿನ ಎದುರು ಏನಾಗುತ್ತಿದೆ ಎಂಬುದು ನಿಮಗೆ ಗೊತ್ತೆ?” ಇ.ಡಿ.ಯವರ ಪ್ರಶ್ನೆ.

“ಹೌದು ಸರ್ ಅದನ್ನ ಗಮನಿಸಿದ್ದೇನೆ”

“ಪ್ರತಿಭಟನೆಯಲ್ಲಿ ಮುಂದೆ ಯಾರಿದ್ದಾರೆ? ಗೊತ್ತಾ?

“…………..”

“ನಮ್ಮವರೇ… ನಿಮ್ಮ ಉಪ ಸಂಪಾದಕಿಯೊಬ್ಬರು ಆ ಪ್ರತಿಭಟನೆಯಲ್ಲಿ ಹೇಗೆ ಸೇರಿಕೊಂಡರು.? ನೀವು ಹೇಗೆ ಅವರಿಗೆ ಇದಕ್ಕೆ ಅನುಮತಿ ಕೊಟ್ಟಿರಿ?”

“ಸರ್ ಇದು ನನಗೆ ತಿಳಿಯದ ವಿಷಯ. ನಾನು ಯಾರಿಗೂ ಅನುಮತಿ ನೀಡಿಲ್ಲ.”

“ನಿಮಗೆ ತಿಳಿಯದು ಅಂದರೆ.. ನೀವೆಂಥ ಜರ್ನಲಿಸ್ಟ್.. ಆಸ್  ಹೆಡ್ ಆಫ್ ದಿ ಡಿಪಾರ್ಟ್‍ಮೆಂಟ್ ಐ ಹೋಲ್ಡ್ ಯೂ ರೆಸ್ಪಾನ್ಸಿಬಲ್ ಫಾರ್ ದಿಸ್ …….. ನಮ್ಮ ಉದ್ಯೋಗಿಯಾಗಿದ್ದುಕೊಂಡು ನಮ್ಮ ವಿರುದ್ಧವೇ ತಿರುಗಿ ಬೀಳುವುದೆ?ನಮ್ಮ ನೀತಿ ನಿರ್ಧಾರಗಳು ಒಪ್ಪಿಗೆಯಾಗದವರಿಗೆ ನಮ್ಮಲ್ಲಿ ಜಾಗವಿಲ್ಲ. ಆಸ್ಕ್ ಹರ್ ಟು ಪುಟ್ ಹರ್ ಪೇಪರ್ಸ್. ರೈಟ್ ನೌ. ಯೂ ಕೆನ್ ಗೋ”.

ನಾನೊಂದು ನಿರ್ಧಾರ ತೆಗೆದುಕೊಳ್ಳ ಬೇಕಿತ್ತು. ನನಗೆ ಇದೊಂದು ನೈತಿಕ ಸಮಸ್ಯೆಯಾಗಿತ್ತು. ಆಕೆ ಮಾಡಿದ್ದು ಸರಿಯೇ?

ಈ ದೇಶದ ಪ್ರಜೆಯಾಗಿ ಅನ್ಯಾಯದ ವಿರುದ್ಧ ಪ್ರತಿಭಟಿಸುವ ಸ್ವಾತಂತ್ರ್ಯ ಆಕೆಗಿದೆ. ಜೊತೆಗೆ ಹಂಗೂ ಇದೆ. ಅನ್ಯಾಯದ ಆರೋಪವಿರುವುದು ತನಗೆ ಉದ್ಯೋಗ ನೀಡಿರುವ ಸಂಸ್ಥೆಯ ವಿರುದ್ಧ. ತನ್ನ ಸಂಸ್ಥೆಯ ನೀತಿ ನಿರ್ಣಯಗಳ  ವಿರುದ್ಧವೇ ಪ್ರತಿಭಟಿಸುವುದು ಸರಿಯೆ? ಪ್ರತಿಭಟನೆ, ತನ್ನ ಸಂವಿಧಾನದತ್ತ ಸ್ವಾತಂತ್ರ್ಯ, ಹಕ್ಕು ಎನ್ನುವುದಾದಲ್ಲಿ ಆಕೆ ತಾನು ಕೆಲಸ ಮಾಡುವ ಸಂಸ್ಥೆಯ ಹಂಗಿನಿಂದ ಹೊರಬರಬೇಕಾಗಿತ್ತು. ಅನ್ನ ಕೊಟ್ಟ ಕೈ ಕಚ್ಚಬಾರದು ಎಂದು ನಮ್ಮ ಸಾಂಸ್ಕೃತಿಕ ಪರಂಪರೆ ಹೇಳುತ್ತದೆ. ಆದರೆ ಒಳಗಿದ್ದುಕೊಂಡೇ ಪ್ರತಿಭಟಿಸಿ ಅನ್ಯಾಯ ಸರಿಪಡಿಸಬೇಕು ಎಂದು ಆಧುನಿಕ ಚಿಂತನೆ ಹೇಳುತ್ತದೆ.

ನಾನು ಎರಡೂ ದ್ವಂದ್ವ ಚಿಂತನೆಗಳ ಸುಳಿಯಲ್ಲಿ ಸಿಲುಕಿದೆ. ವಿಚಾರಣೆಗೆ ಮುನ್ನ ನಾನೇ ಒಂದು ನಿರ್ಧಾರಕ್ಕೆ ಬರಬೇಕಿತ್ತು: ಸಂಸ್ಥೆಯೊಳಗಿದ್ದುಕೊಂಡೇ ಆಡಳಿತ ವರ್ಗದ ನೀತಿನಿರ್ಣಯಗಳ ವಿರುದ್ಧ ಪ್ರತಿಭಟಿಸುವ ಸ್ವಾತಂತ್ರ್ಯ ಇದೆಯಾ?

ಆ ಉಪ ಸಂಪಾದಕಿಯಿಂದ ರಾಜೀನಾಮೆ ಪಡೆದುಕೊಳ್ಳುವಂತೆ ಅಥವಾ ಅಶಿಸ್ತಿನ ಕಾರಣ ಆಕೆಯನ್ನು ವಜಾ ಮಾಡುವಂತೆ ನನ್ನ ಮೇಲೆ ಒತ್ತಡ ಜಾಸ್ತಿಯಾಯಿತು. ಕೊನೆಗೆ ನಾನು ಪ್ರಧಾನ ಸಂಪಾದಕರೂ ಆದ ಮ್ಯಾನೇಜಿಂಗ್ ಡೈರೆಕ್ಟರ್ ಅವರ ಬಳಿ ಹೋದೆ.

“ನಿಮ್ಮ ಅಭಿಪ್ರಾಯದಲ್ಲಿ ಆಕೆಯಿಂದ ತಪ್ಪಾಗಿದೆಯೆ?’

“ಆಕೆಗೆ ಪ್ರತಿಭಟಿಸುವ ಸ್ವಾತಂತ್ರ್ಯವಿದೆ. ಆದರೆ ತಾನು ಕೆಲಸ ಮಾಡುವ ಸಂಸ್ಥೆಯ ನೀತಿ ನಿರ್ಣಯಗಳಿಗೆ  ನಿಯತ್ತುಬದ್ಧಳಾಗಿರಬೇಕು ಎಂಬ ಅಲಿಖಿತ `ನೀತಿ’ಯೂ ಇದೆ. ಸರಿಯಲ್ಲ ಎನ್ನಿಸಿದಾಗ ಅದನ್ನು ಬಹಿರಂಗವಾಗಿ ಹೇಳುವ ಮುನ್ನ ಸಂಸ್ಥೆಯೊಳಗೇ ತಿಳಿಸಬಹುದಿತ್ತು. ಆದರೆ ಹಾಗೆ ಮಾಡದೇ ನೇರವಾಗಿ ಪ್ರತಿಭಟನಾ ಚಳವಳಿಯಲ್ಲಿ ಭಾಗಿಯಾದದ್ದು ಸಂಸ್ಥೆಯ ಸ್ಟಾಂಡಿಂಗ್ ಆರ್ಡರ್ಸ್ ಪ್ರಕಾರ ತಪ್ಪು. ಆಕೆ ರಾಜೀನಾಮೆ ನೀಡಿ ಪ್ರತಿಭಟಿಸಬಹುದಿತ್ತು ಎನ್ನುವ ವಾದವೂ ಸರಿ.”

“ತಪ್ಪಾಗಿದೆ ಎಂದಾದಲ್ಲಿ ಏನು ಮುಂದಿನ ಕ್ರ್ರಮ?”

“ವಿಚಾರಣೆ ನಡೆಸಿ ಶಿಕ್ಷೆ “

“ಏನು ಶಿಕ್ಷೆ?’

“ಸರ್, ಆಕೆ ಗೊತ್ತಿದ್ದು ಪ್ರಜ್ಞಾಪೂರ್ವಕವಾಗಿ ಪ್ರತಿಭಟಿಸಿದ್ದಾರೋ ಅಥವಾ ಸಂಗೀತದ ಮೇಲಿನ ‘ಕ್ಷಣಪಿತ್ತ-ಕ್ಷಣ ಚಿತ್ತ’ದ ಉತ್ಸಾಹದಿಂದ ಬೇಹುಶಾರಾಗಿ ಹೀಗೆ ಮಾಡಿದರೋ ತಿಳಿಯದು. ಆಕೆಯ ಕೌಟುಂಬಿಕ ಹಿನ್ನೆಲೆ ಗಮನಿಸಿದಾಗ ಇದು ಸಂಗೀತಮೋಹದ ಆ ಕ್ಷಣದ  ಆತುರದ ಕ್ರಮವೇ  ಹೊರತು ತಾನು ಕೆಲಸ ಮಾಡುವ ಸಂಸ್ಥೆ ವಿರುದ್ಧ ಬಂಡಾಯವಲ್ಲ ಎನಿಸುತ್ತದೆ. ಇದಕ್ಕೆ ರಾಜೀನಾಮೆ ಅಥವಾ ವಜಾ ತುಂಬ ಉಗ್ರ ಶಿಕ್ಷೆಯಾಗುತ್ತದೆ”

“ಹಾಗಿದ್ದರೆ ಅವರನ್ನು ಬೇರೆಡೆಗೆ ವರ್ಗಮಾಡಿ ಬಿಡಿ. ಮಂಗಳೂರಿಗೆ”

ಶಸ್ತ್ರ ಚಿಕಿತ್ಸೆಯೊಂದರಿಂದ ಚೇತರಿಸಿಕೊಳ್ಳುತಿದ್ದ ನನ್ನ ಮಹಿಳಾ ಸಹೋದ್ಯೋಗಿಗೆ ವರ್ಗದ ಆದೇಶದಿಂದ ಆಘಾತವೇ ಆಗಿತ್ತು. ತನ್ನಿಂದ ಹೋಗಲಾಗದು ಎಂದರು. ನಾನು ಕಾರಣವನ್ನಾಗಲಿ, ಮೇಲಿನವರ ಅಸಮಾಧಾನವನ್ನಾಗಲಿ ತಿಳಿಸುವಂತಿರಲಿಲ್ಲ.

“ಜಿಲ್ಲಾ ವರದಿಗಾರಿಕೆಯನ್ನು ಬಲಗೊಳಿಸಬೇಕಾಗಿದೆ. ಆದ್ದರಿಂದ ಹಿರಿಯ ವರದಿಗಾರರನ್ನು ಜಿಲ್ಲೆಗಳಿಗೆ ಕಳುಹಿಸುವ ನಿರ್ಧಾರ ಕೈಗೊಳ್ಳಲಾಗಿದೆ. ನೀವು ಹೋಗಬೇಕು. ಬೇಕಾದರೆ ಒಂದು ತಿಂಗಳು ರಜೆ ತೆಗೆದುಕೊಂಡು ಆರೋಗ್ಯ ಪೂರ್ತಿ ಸುಧಾರಿಸದ ಮೇಲೆ ಹೋಗಬಹುದು”

ನನ್ನ ಈ ಮಹಿಳಾ ಸಹೋದ್ಯೋಗಿ ಒಲ್ಲದ ಮನಸ್ಸಿನಿಂದಲೇ ಮಂಗಳೂರಿಗೆ ಹೋದರು. ಆಕೆ ಬಹಳ ಚಾಲೂಕಿನ ಛಾತಿವಂತ ಮಹಿಳೆ. ವೃತ್ತಿ ಸಾಮರ್ಥ್ಯದ ಜೊತೆಗೆ ಎಂಥ ಪ್ರತಿಕೂಲ ಪರಿಸ್ಥಿತಿಯನ್ನೂ ತನ್ನ ಅನುಕೂಲಕ್ಕೆ ತಿರುಗಿಸಿಕೊಳ್ಳುವಂಥ ಚಾಲೂಕು, ಛಲ. ಮಂಗಳೂರಿಗೆ ಹೋದ ಕೆಲವೇ ತಿಂಗಳುಗಳಲ್ಲಿ ಜಿಲ್ಲಾ ಅಧಿಕಾರವಲಯ ಹಾಗೂ ಅಲ್ಲಿನ ಪತ್ರಿಕಾ ವಲಯದ ಗಮನ ಸೆಳೆದು ತಮ್ಮ ಛಾಪನ್ನು ಮೂಡಿಸಿದರು. ಉದಯವಾಣಿ ಒಡೆತನದ ಮಣಿಪಾಲ್ ಸಂಸ್ಥೆಯ ʼದೃಷ್ಟಿಗೂ’ ಬಿದ್ದರು. ಮುಂದೆ `ಉದಯವಾಣಿ’ ಸಂಪಾದಕಿಯಾದರು. ಕನ್ನಡ ಪತ್ರಿಕೋದ್ಯಮದಲ್ಲಿ ಬ್ರಾಡ್ ಶೀಟ್ ದೈನಿಕದ ಸಂಪಾದಕಿ ಹುದ್ದೆಗೆ ಏರಿದ ಪ್ರಪ್ರಥಮ ಮಹಿಳೆ ಎನ್ನುವ ಕೀರ್ತೀಯೂ ಅವರದಾಯಿತು.

February 4, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: