ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅನಿತಾ ತಾಕೊಡೆ ಹೊಸ ಕವಿತೆ-ಅಲೆಗಳಂಚಿನ ಹಸಿರು

ಅನಿತಾ ಪಿ. ತಾಕೊಡೆ

**

ಮುತ್ತು ಮಾಣಿಕ್ಯದೊಡನಾಟದ ಹುರುಪಿನಲಿ
ಹಾಲು ಬಿಳುಪಿನಂದದ ಸಾಸಿರ ಚುಕ್ಕಿಗಳ ಚಿತ್ರಕೂಟದಲಿ
ಶಬ್ದಾಂತರಂಗದ ಸೌಹಾರ್ದದಿ ಒಲಿದು ಬರುವ
ಅಲೆಗಳಂಚಿಗೂ ಈ ಪರಿಯ ಹಸಿರಿನೊಲವೇ?

ಶುದ್ದವಾಗಿ ಪರಿಶುದ್ದವಾಗಿ ಒಳಗನು ತೆರೆದು
ಮುಕ್ತವಾಗಿ ವ್ಯಕ್ತವಾಗಿ ನಿರಾಳವಾಗುವ ಕಡಲು
ಸುಪ್ತ ಭಾವಗಳ ತಾಳಮೇಳದಲಿ
ಹೊಸದಾಗಿ ಚಿಗುರುವಲೆಗಳು

ಒಮ್ಮೊಮ್ಮೆ ಕಡಲು ಕಡಲಾಗಿರದೆ
ಸಿಹಿಯಾಗಲೂ ಆಗದ ನೋವು…!
ಮತ್ತೆ ನಗುವಾಗಿ ಮಧುರವಾಗುವ ಒರತೆಯಲಿ
ಅವಳ ನೆರಳು

ಪರಾಮರ್ಶೆಗೆ ನಿಲುಕದ ಅವಳು…
ಹಿಮಗಿರಿಯ ಪದತಲದಲಿ ಜನಿಸಿ
ಮೆದು ಮಣ್ಣ ಮಮತೆಯಲಿ ಮಾರ್ದನಿಸಿ
ಹದಗೊಂಡು ಮುದಗೊಂಡು ಹರಿದು
ಬಗಲಲಿ ಹಸಿರು ದಂಡೆಯ ಹೊಸೆದವಳು

ಬಾಗು ಬಳುಕಿನಲಿ ಹತ್ತೂರ ತಿರುಗಿನಲಿ
ಒಂದೇ ಋತಪಥದಿ
ನಿರುತದಲಿ ಸಾಗಿ ಕಡಲೆದೆಯ ಕೂಡಿದವಳು

ಅವಳೆಂದರೀಗ ಬರೀ ಕಡಲು
ನಡೆದ ಹಾದಿಯಲಿ ಗುನುಗುನಿಸಿದ ಹಾಡು
ಮಡಿಲಲಿ ಬಚ್ಚಿಟ್ಟ ಕನಸಿನ ತೇರು
ಇಂಚಿಂಚು ಬಿಚ್ಚಿಕೊಂಡು ತನ್ನಿರುವನು ಸಾರುತ್ತವೆ
ಒಡನೆ ಅಲೆಗಳಂಚುಗಳೆಲ್ಲ ಹಸುರಾಗುತ್ತವೆ
ಜೀವ ಜೀವಗಳ ಉಸಿರಾಗುತ್ತವೆ

‍ಲೇಖಕರು avadhi

16 December, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading