ಅನಾಮಿಕಾ @ ಹ್ಯಾಂಡ್ ಪೋಸ್ಟ್: ಹೀಗಾಗಿ ಅವರು ರಾಜಕುಮಾರರೆ ನಂಗೆ!

ಭೂ ದಿನ, ರಾಜ್ ಮತ್ತು ಮಂಚ..

ಪಿಯು ನಂತರ ಎಂಜನಿಯರ್, ಡಾಕ್ಟರ್, ಐಎಎಸ್ ಸೇರಿದಂತೆ ಏನು ಸಾಧಿಸಬಹುದು ಎಂದು ನೀಲನಕ್ಷೆ ಹಾಕುತ್ತಿದ್ದವಳನ್ನು ಅಪ್ಪ ಹೊಲಕ್ಕೆ ಕರೆದುಕೊಂಡು ಹೋಗಿ ಎರಡು ಮಾತು ಹೇಳಿದ್ದರು.

ಆ ಹುದ್ದೆ ಸಂಪಾದಿಸಿ, ಇಂಥ ಮನೆ ಕಟ್ಟಿಸಿಯೆ ತೀರುತ್ತೇನೆ ಎನ್ನುವ ರೇಸಿನಲ್ಲಿ ನೀನಿಲ್ಲ. ಕಣ್ಣಿಗೆ ಪಟ್ಟಿ ಹಾಕಿದ ಕುದುರೆಗಳಂತೆ ಓಡುವ ಮಿಕ್ಕ ಮಕ್ಕಳು ಗುರಿ ತಲುಪಿದ ದಿನ ಬದುಕಿರುತ್ತಾರೆ ಎನ್ನುವ ಭರವಸೆಯೆ ಇಲ್ಲ. ನಿನ್ನದು ಆ ಮನಸ್ಥಿತಿಯಲ್ಲ ಎನ್ನುವುದು ನನಗೆ ಗೊತ್ತಿದೆ. ಅದು ನಿನಗು ಗೊತ್ತಿದೆ. ನಿನ್ನ ಅರಳುಗಣ್ಣುಗಳಲ್ಲಿ ಜಗತ್ತನ್ನೆ ಸಾಕಬಲ್ಲ ದೈವಕೃಷಿಯ ತಾಕತ್ತಿದೆ ಎಂದು ನನ್ನ ಹಿಡಿ ತುಂಬ ಅಕ್ಕಡಿ ಕಾಳುಗಳನ್ನಿಟ್ಟು, ಇವುಗಳನ್ನು ನಿನ್ನ ದೇಖರೇಖಿಯಲ್ಲಿ ಬೆಳೆಸು. ನಂತರವು ನಿನ್ನಲ್ಲಿ ಇಂದಿನ ಮನಸ್ಥಿತಿಯೆ ಉಳಿದಿದ್ದರೆ ತಡೆಯುವುದಿಲ್ಲ ಎಂದು ಬದುವಿನ ಮೇಲಿಂದ ಎದ್ದು ನಡೆದಿದ್ದರು.

ಅದೇನೆ ಇರಲಿ ಸಾಧಿಸಿ ತೀರಬಲ್ಲೆ ಎನ್ನುವ ನನ್ನ ಅಹಂ ಮುರಿದು, ಪ್ರಕೃತಿಯ ಸಾಥ್ ಇಲ್ಲದಿದ್ದರೆ ಏನು ಮಾಡಲಾರೆ, ವ್ಯಕ್ತಿ, ವಸ್ತುಗಳನ್ನು ಸ್ವಂತ ಮಾಡಿಕೊಳ್ಳುವ ಹಂಬಲಕ್ಕೆ ಬೀಳದಂತೆ, ನಿನ್ನ ಪಾಲಿಗೆ ದಕ್ಕಿದ್ದು ಮಾತ್ರ ನಿನ್ನದು ಎನ್ನುವ ಪ್ರಕೃತಿ ನೀತಿಯನ್ನು ನನಗೆ ಕಲಿಸಿದ್ದೆ ಕೃಷಿ. ಮೊದಲ ಬಿತ್ತನೆ, ಸಾಯಿಗುಣಿಗಳಲ್ಲಿ ಬೇರೆ ಬೀಜ, ಬೋರು ಕೆಟ್ಟಿದ್ದಕ್ಕೆ ಬಾವಿಯಿಂದ ನೀರು ಸೇದಿ ಕಣ ಮಾಡಿ ಒಕ್ಕಿ ಕಾಳು ಮನೆಗೆ ತಂದ ದಿನ -ಬದುಕಿನ ಓಟದಲ್ಲಿ ಸೋತರೇನು ಆಟ ತಾನೆ ಎನ್ನುವ ಜಾಣ್ಮೆ ಕಾಯದೆ ಬಸವಳಿದು ಮನೆಗೆ ಬಂದ ಅಣ್ಣ, ಅಕ್ಕನನ್ನು ಸಾಕುವಷ್ಟು ಶಕ್ತಳಾಗಿದ್ದೆ.

ನಾ ಬೆಳೆಸಿದ ಹತ್ತಿ (ಬಿಟಿ ಅಲ್ಲ) ಫಸಲು ಎಷ್ಟು ಮಜಬೂತಾಗಿತ್ತು ಎಂದರೆ ಮಂಗಗಳು ಗಿಡಗಳಲ್ಲೆ ಕೂತು ಹತ್ತಿಕಾಯಿ ತಿನ್ನುತ್ತಿದ್ದವು! ಬಿದ್ದ ಎಲೆಯೆ ಬೇರಿಗೆ ಆಸರಾಗಿ, ಸೆಗಣಿ ಗೊಬ್ಬರವೆ ನನ್ನ ನೆಲದ ಜೀವಾಳ. so, organic!! ಈ ಸಲದ ವಿಶ್ವ ಭೂ ದಿನದಂದು ಮೆಚ್ಚುಗೆಯಿಂದ ನನ್ನ ಬೆನ್ನು ನಾನೆ ತಟ್ಟಿಕೊಳ್ಳುತ್ತ, ‘ಕಳೆದ ಹದಿನೇಳು ವರ್ಷಗಳಲ್ಲಿ ಹೊಲಕ್ಕೆ ಒಮ್ಮೆಯು ರಾಸಯನಿಕ ಗೊಬ್ಬರ ಹಾಕಿಲ್ಲ ಮತ್ತು ಭೂಮಿ ಪ್ಲಾಸ್ಟಿಕ್ ಮುಕ್ತವಾಗಿದೆ,’ ಎಂದು.

ನಾನು ಪದವಿಯಲ್ಲಿದ್ದಾಗ ಮೂರು ವರ್ಷ ಸತತ ಬರಗಾಲ. ಆಗ ನನಗೊಂದು ಸ್ಕಾಲರ್ ಶಿಪ್ ಬಂದಿತ್ತು. ಮನೆಯಲ್ಲಿ ಹೇಳುತ್ತಿದ್ದೆ ಹೀಗೆ ಅಂತ. ಪೀಜು ಕಟ್ಟುವುದು ಹೇಗೆ ಎನ್ನುವಂತಹ ಪರಿಸ್ಥಿತಿಯಲ್ಲು ಅಪ್ಪ, ಸರಕಾರ ಸಾಕುತ್ತದೆ ಎಂದು ನನ್ನ ಮಕ್ಕಳು ಭೂಮಿಗೆ ಬಂದಿಲ್ಲ. ಸ್ಕಾಲರ್ ಶಿಪ್ ನಿನಗಿಂತ ಹೆಚ್ಚಿನ ಅಗತ್ಯ ಇರುವ ಮಕ್ಕಳಿಗೆ ಹೋಗಲಿ ನೀ ತಗೊಬೇಡ ಎಂದ ಅಪ್ಪಟ ರೈತತನದ ಮಾತುಗಳನ್ನು ನಾನು ಇಂದಿಗು ತುಂಬು ಹೆಮ್ಮೆಯಿಂದ ನೆನೆಯುತ್ತೇನೆ.

ಸದಾ ಅತಿರೇಕದ ಅಂಚಿನಲ್ಲಿ ಬದುಕುವ ನನ್ನನ್ನು ಸಹಿಸಿಕೊಳ್ಳಲು ಬೇಕಾದ ಭೂಮಿತೂಕದ ಸಹನೆಯ ರೈತನೆ ನನ್ನ ಮೊದಲ ಸಾಂಗತ್ಯಕ್ಕೆ ಒದಗಿ ಬಂದಿದ್ದು ಎನ್ನುವುದು ಕೂಡ ನನಗೆ ಖುಷಿ ಕೊಡುವ ವಿಷಯ! ಮಧ್ಯರಾತ್ರಿ ನಾಲ್ಕು ತಾಸು ಸಿಗುತ್ತಿದ್ದ ಕರೆಂಟಿನಲ್ಲಿ ಹೊಲಕ್ಕೆ ನೀರು ಹಾಯಿಸುತ್ತಿದ್ದವನಿಗೆ ಒಮ್ಮೆ ಜೊತೆಯಾಗಿದ್ದೆ. ಆಗ ಅವನು, “ಲೋಡ್ ಶೆಡ್ಡಿಂಗ್, ಕೆಲಸಗಾರರ ಕೊರತೆಯಂಥ ತಾಪತ್ರಯಗಳ ನಡುವೆ, ಒಳ್ಳೆಯ ಸಂಬಳದ ಕೆಲಸ, ಮೇಲು ಆದಾಯದ ಮನೆಯ ವ್ಯವಹಾರ ಬಿಟ್ಟು, ಕೃಷಿ ಇಷ್ಟ ಅಂತ ವ್ಯವಸಾಯಕ್ಕೆ ಇಳಿದು ತಪ್ಪು ಮಾಡಿದ,” ಎನ್ನುವವರಿಗೆ ಈಗ ಮನಮುಟ್ಟಿ ಹೇಳಬಲ್ಲೆ ನನ್ನ ಆಯ್ಕೆ ಸರಿಯಾಗಿದೆ ಎಂದು.

ನಿನ್ನಂಥವಳು ಜೊತೆಗಿದ್ದರೆ ಅರಿತವರಿಗೆ ಮಾತ್ರ ಅತಿ ಸುಲಭ ಒಲವ ಕೃಷಿ ಎನ್ನುತ್ತ, ಕರಣತ್ರಯ ಶುದ್ಧಿಯಿಂದ ಸಖಿ ಎಂದವನಿಗೆ ನಾನೇನು ಕಡಿಮೆ ಎನ್ನುವಂತೆ ಕೃಷಿಯೆ ಉಸಿರಾದ ಉತ್ತಮೋತ್ತಮ ರೈತನ ಕೈ ಹಿಡಿದು ನಡೆಸುವ ಅವಕಾಶ ಸಿಕ್ಕಿದ್ದು ನನ್ನದು ಭಾಗ್ಯವೆಂದೆ. ಅಪರೂಪ ಎನಿಸುವ ನಿನ್ನ ಈ ಸನ್ನಿಧಾನದ ಉಪಕಾರವನ್ನು ಯಾವತ್ತು ಮರೆಯುವುದಿಲ್ಲ ಎಂದು ಅಪ್ಪಿ ಪ್ರೀತಿಯ ಹಸಿರಂತೆ ಕಣ್ಣಿಗೆ ತಣ್ಣಗೆ ಮುತ್ತಿಟ್ಟ ಹೊತ್ತು ಇಳೆಗೆ ಇಳಿದ ಇರುಳ ನೆರಳಿನಲ್ಲಿ ನನ್ನ ಅವನ ಒಂದುತನದಲ್ಲಿ ಹುಟ್ಟಿದ ಹಾಡು ಬೆಳದಿಂಗಳಾಗಿತ್ತು ಬನದಲ್ಲಿ.

ಈಗನಿಸುತ್ತದೆ ಕೃಷಿ ವಿಷಯವಾಗಿ ಇಷ್ಟೆಲ್ಲ ನಡೆದದ್ದರ ಹಿಂದಿನ ಕೈವಾಡ, ಸಿನೆಮಾ ವೀಕ್ಷಣೆ ಎನ್ನುವ ಕಲೆಯನ್ನು ತಡವಾಗಿ ಕಲಿತರು ನಾ ಮೊಟ್ಟಮೊದಲು ನೋಡಿದ ಒಡಹುಟ್ಟಿದವರು ಚಿತ್ರದ್ದು ಎಂದು. ಎಷ್ಟೆ ಮುದ್ದಿನ ಹೆಸರಾದರೂ ಕ್ರಶ್ ಅನ್ನು ಅಣ್ಣಾವ್ರು ಅಂತ ಹೇಗೆ ಕರಯೊದು? ನನ್ನಿಂದಂತು ಸಾಧ್ಯವಿಲ್ಲ. ಹೀಗಾಗಿ ಅವರು ರಾಜಕುಮಾರರೆ ನಂಗೆ!

ನಮ್ಮ ಮನೆಯವರಿಗೆ ಮಾತ್ರ ಗೊತ್ತಿರುವ ನನ್ನ ಒಂದು ಸತ್ಯದ ಹಿನ್ನೆಲೆ ಹೀಗಿದೆ; ಕೆಳಗೆ ಬೀಳುತ್ತೇನೆ ಎನ್ನುವ ಕಾರಣಕ್ಕೆ ನಾನು ಚಿಕ್ಕಂದಿನಿಂದಲು ಮಂಚದ ಮೇಲೆ ಮಲಗುತ್ತಿರಲಿಲ್ಲ. ಅದಕ್ಕಾಗಿಯೆ ಏಳನೆ ತರಗತಿ ಮುಗಿಯುವವರೆಗೆ ನನಗೆ ಅಪ್ಪ-ಅವ್ವನ ಮಗ್ಗುಲಲ್ಲಿ ಮಲಗುವ ಸುವಿಧಾ ಲಭ್ಯವಿತ್ತು.

ಒಮ್ಮೆ ಅಮ್ಮನ ಅತ್ತಿಗೆಯ ತವರು ಮನೆಗೆ ಹೋಗಿದ್ದೆವು. ಆಗಿನ್ನು ಅವರದು ಸಗಣಿಯಿಂದ ಸಾರಿಸುವ ನೆಲವಾಗಿತ್ತು. ನನಗೆ ಅಲ್ಲಿ ಮಲಗಿ ರೂಢಿ ಇಲ್ಲವೆಂದು ದಿವಾನಾ ಮೇಲೆ ಮಲಗಿಸಿದ್ದರು. ಯಥಾಪ್ರಕಾರ ಕೆಳಗಡೆ ಬಿದ್ದಿದ್ದು ಯಾರಿಗು ಗೊತ್ತಾಗುತ್ತಿರಲಿಲ್ಲ ನಾನು ಕಾಲಡಿ ಮಲಗಿದ್ದ ನಾಯಿಮರಿ ಮೇಲೆ ಬೀಳದೆ ಇದ್ದರೆ ಅದು ಕುಂಯ್ಯೋ… ಅಂತ ಅಳದಿದ್ದರೆ. ಎಲ್ಲರು ದುಬುದುಬು ಎದ್ದು ಲೈಟ್ ಹಾಕಿದರು. ಸದ್ದೆ ಇಲ್ಲದೆ ಅರಳಿ ಗೊಂಬೆಯಂತೆ ಉರುಳಿ ಬಿದ್ದಿದ್ದ ನನ್ನ ನೋಡಿ, ಮಾವ, ‘‘ಅಯ್ಯೋ ನನ್ನ ತಂಗಿಯ ಪ್ರೀತಿಯ ಅಳ್ಳಿ ಬವ್ವಾ ಕೆಳಗೆ ಬಿದ್ದಿದೆ,’’ ಎಂದು ತಮಾಷೆ ಮಾಡಿದ್ದರು.

ಹೈಸ್ಕೂಲಿನ ಎರಡನೆಯ ವರ್ಷ ಅನಿಸತ್ತೆ ಆ ವರ್ಷ ಒಳ್ಳೆ ಮಳೆಗಾಲ, ಚಳಿಗಾಲ. ಮಿಕ್ಕ ಮಕ್ಕಳೆಲ್ಲ ಮಂಚದ ಮೇಲೆ ಆರಾಮಾಗಿ ನಿದ್ದೆ ಮಾಡುತ್ತಿದ್ದರು. ಕುಗುರುಗುಟ್ಟುತ್ತ ನಾನು ನೆಲದ ಮೇಲೆ ಮಲಗುವುದನ್ನು ನೋಡಲಾಗದೆ, ಹೊಲದಲ್ಲಿ ಕೆಚ್ಚಿಗೆ ಬಂದ ಮೊದಲ ತೇಗದ ಮರವನ್ನು ಕಡಿಸಿ ಸಿದ್ದಮಾದರಿಗಳನ್ನೆಲ್ಲ ಬದಿಗೆ ಸರಿಸಿ ಆಗಿನ ಕಾಲಕ್ಕೆ ಒಂದು customized ದಿವಾನಾ ಮಾಡಿಸಿದ್ದರು ಅಪ್ಪ

ಅಂದರೆ, ಸ್ವಲ್ಪ ಅಲ್ಲ ಜಾಸ್ತಿನೆ ಗುಂಡಮ್ಮನಂತಿದ್ದ ನಾನು ಹೊರಳಾಡಿದರು ಬೀಳದಷ್ಟು ಅಗಲ, ಬಿದ್ದರು ಪೆಟ್ಟಾಗದಿರುವಷ್ಟು ಎತ್ತರವಿತ್ತು ಅದು. ಆವತ್ತು ಮನೆಗೆ ಬಂದಿದ್ದ ಹಿರಿಯರೊಬ್ಬರು ಇದೇನು ಮಂಚವು ಅಲ್ಲ, ದಿವಾನಾವು ಅಲ್ಲ ಎಂದು ಅಚ್ಚರಿಯಿಂದ ಪ್ರಶ್ನಿಸಿದ್ದರು. ನಮ್ಮ ಮನೆಯಲ್ಲೆ ಇರುತ್ತಿದ್ದ ಚಿಕ್ಕಮಾವ, ನಮ್ಮ ಭಾವ ತಮ್ಮ ಅನ್ ಸೈಜ್ ಮಗಳಿಗೆ ಮಾಡಿಸಿರೊ ಅನ್ ಸೈಜ್ ಮಂಚ ಎಂದು ಆಡಿಸ್ಯಾಡಿಸಿದ್ದರು.

ಈ ಮಂಚದ ಮೇಲೆ ಮಲಗಿಯೆ, ತುಸು ಎತ್ತರದ ಪಕ್ಕದ ಕಿಟಕಿಯ ಸಳಿಗೆ ಪಾದಗಳನ್ನ ಆನಿಸಿ ಪಿಯು, ಡಿಗ್ರಿ, ಪದವಿ, ಪಿಜಿ ಪರೀಕ್ಷೆಗಳಿಗೆ ಓದಿದ್ದು, ಫೋನಿನಲ್ಲಿ ಹರಟಿದ್ದು ಎಲ್ಲ ಎಲ್ಲ… ‘ತಂ ನಂ ತಂ ನಂ ನನ್ನೀ ಮನಸು ಮಿಡಿಯುತಿದೆ…’ ಹಾಡಿನಲ್ಲಿ ರಾಜ್ ಮತ್ತು ಕಲ್ಪನಾ ಮಂಚದ ಮೇಲೆ ಆ ಕಡೆಯಿಂದ ಈ ಕಡೆಗೆ ಹೊರಳಾಡುವ ಒಂದು ದೃಶ್ಯ ಬರುತ್ತೆ. ಮಂಚದಿಂದ ಕೆಳಗಡೆ ಬೀಳುತ್ತಿದ್ದ ನಾನು ಈ ಹಾಡನ್ನು ಪಿಯುನಲ್ಲಿದ್ದಾಗ ನೋಡುವಾಗಲು, ಆ ಸೀನ್ ರೋಮ್ಯಾಂಟಿಕ್ ಅಂತ ಅನಿಸುವುದಕ್ಕಿಂತಲು ಇಬ್ಬರು ಮಂಚದಿಂದ ಕೆಳಗೆ ಬಿದ್ರೆ ಅಂತ ಟೆನ್ಷನ್ ಆಗಿ ನನಗೆ ಗೊತ್ತಿಲ್ಲದಂತೆ ನನ್ನ ಮಂಚದಲ್ಲಿ ಗೋಡೆ ಕಡೆಗೆ ಸರಿದಿರುತ್ತಿದ್ದೆ!!

‍ಲೇಖಕರು avadhi

April 26, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: