ಮೇಘನಾ ಸುಧೀಂದ್ರ ಅಂಕಣ: ನನ್ನ ಆಂಟಿ ಅನ್ನಬೇಡ..

ಹುಡುಗಿ ಆ ರೂಮಿನಿಂದ ಎದ್ದು ಬಂದು ಎಲೆನಾ ಅಮ್ಮನ ಹತ್ತಿರ, “ಅಲ್ಲಾ ಆಂಟಿ, ಇವಳು ಹೀಗೆಲ್ಲಾ ಮಾತಾಡಿದರೆ ಯಾರಾದರೂ ಅವಳ್ಳನ್ನ ಜೈಲಿಗೆ ಹಾಕೋದಿಲ್ವಾ” ಎಂದು ಥೇಟ್ ಜಯನಗರದ ಪಕ್ಕದ ಮನೆಯವರ ಹತ್ತಿರ ಮಾತಾಡಿದ ಹಾಗೆ ಮಾತಾಡಿದಳು. ಎಲೆನಾಳ ತಾಯಿ ಮಾತ್ರ, “ನನ್ನ ಆಂಟಿ ಅನ್ನಬೇಡ, ನೀನು ನನ್ನನ್ನ ನನ್ನ ಹೆಸರಿನಿಂದಲೇ ಕರಿ, ಇಲ್ಲಿ ಸುಮ್ಮನೆ ಎಲ್ಲರಿಗೂ ಆಂಟಿ ಅನ್ನೋಲ್ಲ, ಅದು ಫ್ಯಾಮಿಲಿಗೆ ಮಾತ್ರ” ಎಂದು ಬುದ್ಧಿ ಹೇಳಿದರು.

ಭಾರತದಲ್ಲೆ ಸೋದರತ್ತೆಗೂ, ಪಕ್ಕದ ಮನೆಯವರಿಗೂ, ಕಸ ಗುಡಿಸುವವರಿಗೂ, ಹೊಲಿಗೆ ಹಾಕುವವರಿಗೂ, ವೈದ್ಯರಿಗೂ ಇಲ್ಲಾ ಯಾವುದೇ ವಯಸ್ಸಾದ ಅಪರಿಚಿತ ಹೆಣ್ಣುಮಕ್ಕಳಿಗೆ ಸಾರಾಸಗಟಾಗಿ ಆಂಟಿ ಎನ್ನುವ ಪರಿಪಾಠ ಇರುವಾಗ ಇದು ಸ್ವಲ್ಪ ವಿಚಿತ್ರ ಅನ್ನಿಸಿತು. “ಸರಿ, ಸಾರಿ ” ಎಂದು ಹ್ಯಾಪು ಮೋರೆ ಹಾಕಿಕೊಂಡು ಹೋಗುತ್ತಿದ್ದ ಹುಡುಗಿಯನ್ನು ಕರೆದು ಎಲೆನಾ ಅಮ್ಮ, “ನೀನು ಆಂಟಿ ಅನ್ನಬಹುದು, ಈಗ ಮನೆಯವಳ ಥರಹವೇ ಅಲ್ವಾ” ಎಂದರು. “ಓಹ್ ಇದೇನು ಅನ್ನಿಯನ್ ಸಿನಿಮಾ ಥರ ಒಂದೊಂದು ನಿಮಿಷ ಒಂದೊಂದು ಕಥೆ ಇವರದ್ದು” ಎಂದು ಸರ್ ಎಂದು ಬಂದು ಕೂತಳು.

ಎಲೆನಾ ದೊಡ್ಡ ಸಂದರ್ಶನ ಮುಗಿಸಿದ ಆನಂದದಲ್ಲಿದ್ದಳು. “ನೋಡಿದೆಯಾ ಹೇಗೆ ನಮ್ಮ ಮೂವ್ಮೆಂಟ್ ನೀನು ಓದು ಮುಗಿಸಿ ಇಲ್ಲೇ ಇದ್ದರೆ ನಿನಗೆ ಬಿಟ್ಟಿ ಪೌರತ್ವ ಕೊಡಿಸುತ್ತೇನೆ” ಎಂದು ನಕ್ಕಳು. “ಇದೇನು ನಿಮ್ಮ ಅಪ್ಪನ ಮನೆಯ ಆಸ್ತಿಯಾ ಬೆಂಗಳೂರಿನಂತಹ ಬೆಂಗಳೂರಿನಲ್ಲಿ ನಿಮ್ಮ ವೀಸಾ ಕಛೇರಿ ಸಹ ಇಲ್ಲ, ನಾವೆಲ್ಲಾ ಬಾಂಬೆಗೆ ಹೋಗಬೇಕು, ಜಗತ್ತಿನ ಎಲ್ಲಾ ದೇಶಕ್ಕೆ ಹೋಗೋದು ನಾವುಗಳು ನಾವು ಅಮೇರಿಕಾಗೆ ಹೋಗಕ್ಕೆ ಚೆನ್ನೈಗೆ ಹೋಗಬೇಕು, ಇಲ್ಲ ನಿಮ್ಮ ದೇಶಕ್ಕೆ ಬರೋಕೆ ಮುಂಬೈಗೆ ಹೋಗಬೇಕು, ಇಂಥ ಅಲ್ಪಸಂಖ್ಯಾತ ಬೆಂಗಳೂರಿಗರಿಗೆ ನೀನೇನು ಪೌರತ್ವ ಕೊಡೋದು, ಮುಂಬೈಗೆ ಹೋಗಿ ಬರುವ ಫ್ಲೈಟ್ ಚಾರ್ಚಿನಲ್ಲಿ ನನ್ನ ಊರಲ್ಲಿ ಝುಮ್ಮಂತ ಓಡಾಡಬಹುದು” ಎಂದು ಹುಡುಗಿ ಅಂದಳು. “ನನ್ನ ದೇಶ ಎಷ್ಟು ದೊಡ್ಡದೆಂದರೆ ಪಕ್ಕದ ಶ್ರೀಲಂಕಾ, ಬಾಂಗ್ಲಾದೇಶದವರಿಗೂ ನಿಮ್ಮ ದೇಶಕ್ಕೆ ವೀಸಾ ಬೇಕಾದರೆ ಅಲ್ಲಿಗೇ ಬರಬೇಕು” ಎಂದು ಹೇಳುತ್ತಿದ್ದಳು.

ಹೀಗಿದ್ದಾಗ ಸಡನ್ನಾಗಿ ಟೀವಿಯಲ್ಲಿ, ಕತಲಾನ್ ಹೋರಾಟಗಾರರನ್ನ ಚದುರಿಸಲು ಬಯೋ ವಾರ್ ಮಾಡಬಹುದು ಎಂಬ ವರದಿ ಬರುತ್ತಿತ್ತು. ಹುಡುಗಿಗೆ ವಿಪರೀತ ಬೋರ್ ಆಗಿ, “ಏನಿದು ಬಯೋ ವಾರ್, ಬಯೋಲಜಿ ಟೀಚರ್ ಜೊತೆ ವಾರ್ ಏ ಮಾಡುತ್ತಿದ್ದೆ ಶಾಲೆಯಲ್ಲಿ, ಅವರು ನನ್ನನ್ನು ತಿದ್ದೋಕಿಂತ ಬಯ್ದದ್ದೇ ಜಾಸ್ತಿ. ನನಗೆ ಅವರನ್ನ ಕಂಡರೆ ಆಗುತ್ತಿರಲ್ಲಿಲ್ಲ ಅದಕ್ಕೆ ವಾರ್ ಮಾಡುತ್ತಿದ್ದೆ ಹೊರತಾಗಿ ಮತ್ತೇನು ಇಲ್ಲ. ” ಎಂದು ಹೇಳಿದಾಗ, ಎಲೆನಾ “ಇಲ್ಲ ಮೊದಲ ವಿಶ್ವಯುದ್ಧದಲ್ಲಿ ಸ್ಪಾನಿಷ್ ಪ್ಲೂ ಎಂಬುದೊಂದು ರೋಗ ಶುರುವಾಗಿತ್ತು. ಅದರ ಉಗಮ ಇಲ್ಲಿ ಅಲ್ಲದಿದ್ದರೂ ನಾವು ಮೊದಲ ವಿಶ್ವಯುದ್ಧದಲ್ಲಿ ಯಾವ ಬಣಕ್ಕೂ ಸೇರದಿದ್ದಾಗ ಯಾರು ಮಾಡಿದರೆಂದು ಗೊತ್ತಾಗಲ್ಲಿಲ್ಲ ಆದರೆ ನಮ್ಮ ಮೇಲೆ ಇದರ ಪರಿಣಾಮ ಎರದು ವರ್ಷದವರೆಗೂ ಆಯಿತು” ಎಂದು ಎಲೆನಾ ಹೇಳಿದಳು.

ಎಲೆನಾಳ ತಾಯಿ, ಗೋಡೆಯ ಫೋಟೋ ತೋರಿಸಿ “ಇವರು ನನ್ನ ಅಪ್ಪನ ತಮ್ಮ, ಯುದ್ಧದಲ್ಲಿ ಸೈನಿಕರಾಗಿದ್ದರು ಅವರೂ ಈ ಪಿಡುಗಿನಿಂದ ಸತ್ತರು, ಅದಕ್ಕೆ ನಮ್ಮ ಇಡೀ ಫ್ಯಾಮಿಲಿಯನ್ನ ಊರಿಂದ ಹೊರಗೆ ಹಾಕಿದರು ಅದಕ್ಕೆ ನಾವು ಈ ಹಳ್ಳಿಯಲ್ಲಿ ಅಷ್ಟು ವರ್ಷದಿಂದ ಇರೋದು” ಎಂದಾಗ ಹುಡುಗಿ  ಒಂದರೆಕ್ಷಣ ದಂಗಾದಳು. . ಇವರ್ಯಾಕೋ ಗೃಹಭಂಗದ ನಂಜಮ್ಮನ ಹಾಗೆ ಕಾಣಿಸಿದರು. ಒಂದು ರೋಗ ಒಬ್ಬ ಮನುಷ್ಯನ್ನನ್ನ ಯಾವ ಹಂತಕ್ಕೆ ತಲುಪಿಸುತ್ತದೆ ಎಂಬುದರ ಬಗ್ಗೆ ಮಾತುಕತೆಯಾಗುತ್ತಿದ್ದಾಗಲೇ ಎಲೆನಾ “ಅವೆಲ್ಲಾ ಈ ವಿರೋಧ ಪಕ್ಷದವರ ಕಿತಾಪತಿ” ಎಂದು ಜೋರಾಗಿ ಕಿರುಚಿದಳು.

“ಅದೇನು ಗೊತ್ತಾ ೧೯೧೮ರಲ್ಲಿ ಅಮೇರಿಕಾ ಜರ್ಮನಿಯ ಜೊತೆ ಆಗಲೆ ೧೧ ತಿಂಗಳಿಂದ ಯುದ್ಧ ಮಾಡುತ್ತಲಿತ್ತು, ಅದಾಗಲೇ ೨ ಮಿಲಿಯನ್ ಸೈನಿಕರು ಯುರೋಪಿನಲ್ಲಿ ತುಂಬಿಕೊಂಡಿದ್ದರು. ಆ ಕ್ಯಾಂಪುಗಳಲ್ಲಿ ಅದೆಷ್ಟೊ ಜನಕ್ಕೆ ಜ್ವರ, ನೆಗಡಿ ಅದು ಇದು ಕಾಣಿಸಿಕೊಂಡಿತ್ತು ಗೊತ್ತಾ” ಅಂದಳು. “ಎಲೆನಾ ನೀನು ಹೇಳುವುದು ತುಂಬಾ ಹಾಸ್ಯಾಸ್ಪದವಾಗಿದೆ, ವಿಪರೀತ ಶೀತವಿರುವ ಪ್ರದೇಶ ಜರ್ಮನಿ ಮತ್ತು ನಾರ್ಡಿಕ್ ದೇಶಗಳು. ಸೋ ಅಲ್ಲಿ ಯುದ್ಧದ ಸನ್ನಿವೇಶದಲ್ಲಿ ಒಂದು ೧೦೦ ಜನ ಒಂದು ಕ್ಯಾಂಪಿನಲ್ಲಿ ಸಿಕ್ಕಿಹಾಕಿಕೊಂಡರೆ ಎಂಥಾ ರೋಗ ರುಜಿನಗಳು ಬಂದೇ ಬರುತ್ತದೆ. ಏನು ಮಾಡೋದಕ್ಕೆ ಸಾಧ್ಯವಿಲ್ಲ. ಆಗ ಬಂದಿರಬಹುದು ಸರಿ ಅದಕ್ಕೆ ಸ್ಪಾನಿಷ್ ಫ್ಲೂ ಎಂದು ಯಾಕೆ ಹೆಸರಿಟ್ಟರು?” ಎಂದು ಕೇಳಿದಕ್ಕೆ. ಎಲೆನಾಳ ಅಪ್ಪ ಮಾತಾಡಲು ಶುರು ಮಾಡಿದರು. ಹುಡುಗಿಗೆ, “ಈ ಮನೆಯವರೆಲ್ಲ ಚರಿತ್ರೆಯ ದೊಡ್ಡ ಥೆಸಾರಸ್ ಇದ್ದ ಹಾಗೆ” ಎಂದನಿಸಿತು.

“ನಾವು ೧೯೧೮ರಲ್ಲಿ ಯಾವುದೇ ಬಣಕ್ಕೆ ಸೇರದೇ   ನ್ಯೂಟ್ರಲ್ ಆಗಿದ್ದೆವು. ಅಂದರೆ ಯುದ್ಧದ ಸಮಯದಲ್ಲಿ ಪ್ರೆಸ್ ಗಳಿಗೆ ಬೀಗ ಹಾಕಿ, ಜನರನ್ನ ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಾರೆ. ಇಲ್ಲಿ ಸಾಧ್ಯವಿರಲ್ಲಿಲ್ಲ. ನಾವು ಎಲ್ಲದರ ಬಗ್ಗೆ ಮುಕ್ತವಾಗಿ ಬರೆಯುತ್ತಿದ್ದೆವು , ಹಾಗೂ ನಮಗಾಗುವ ತೊಂದರೆಗಳ ಬಗ್ಗೆ ಮುಕ್ತ ವಾಗಿ ಬರೆಯುತ್ತಿದ್ದೆವು. ಮ್ಯಾಡ್ರಿಡಿನ ದಿನಪತ್ರಿಕೆಯ ಮುಖ್ಯಾಂಶಗಳಲ್ಲಿ ಇದರ ಬಗ್ಗೆ ಬರೆದಿದ್ದೆವು. ಬೇರೆಲ್ಲಾ ದೇಶಗಳಿಗೆ ಹರಡಿದ್ದರೂ ಅವರುಗಳು ಅದರ ಅಂಕಿ ಅಂಶಗಳನ್ನ ಪ್ರಕಟಿಸುತ್ತಿರಲ್ಲಿಲ್ಲ. ನಮ್ಮ ರಾಜ ಆಲ್ಫ್ರೆಡೋ ೧೩ ನಿಗೂ ಈ ಮಹಾಮಾರಿ ಬಂತು. ಈ ಸುದ್ದಿಯನ್ನೂ ಸಹ ನಾವು ಮರೆಮಾಚಲ್ಲಿಲ್ಲ. ೧೯೧೮ರಲ್ಲಿ ಒಂದು ಸಣ್ಣ ಪತ್ರಿಕಾ ವರದಿ ಪ್ರಕಟವಾಯಿತು. ಅದಾದ ನಂತರ ಯುರೋಪಿನಲ್ಲಿ ೧ ಲಕ್ಷ ಜನಕ್ಕೆ ಈ ರೋಗ ತಗುಲಿತ್ತು. ಲಂಡನ್ನಿಗೆ ಮುಂಚೆ ಸುದ್ಧಿ ಮುಟ್ಟಿಸಿದ್ದ ಮ್ಯಾಡ್ರಿಡ್ಡನ್ನ ನೋಡಿ  ಇದೇ ಅವಕಾಶಕ್ಕಾಗಿ ಕಾಯುತ್ತಿದ್ದ ಬ್ರಿಟನ್ ಇದನ್ನ ಸ್ಪ್ಯಾನಿಷ್ ಫ್ಲೂ ಎಂದು ನಾಮಕರಣ ಮಾಡಿ ಊರಿಗೆಲ್ಲ ಹಬ್ಬಿಸಿತು. ನಮ್ಮ ದೇಶದ ರಾಜನೇ ಅಫೆಕ್ಟ್ ಆದನಲ್ಲ, ಮತ್ತು ನಮ್ಮ ದೇಶದ ೩೦ ರಿಂದ ೪೦% ಜನರಿಗೆ ಈ ಖಾಯಿಲೆ ಬಂತು, ಮದ್ದಿರಲ್ಲಿಲ್ಲ. ಕಂಡಕಂಡವರು ಬಂದು ನಮಗೆ ಸಹಾಯ ಮಾಡಲು ಯತ್ನಿಸಿದರು. ನಾವು ಅವರಿಗೆ ಬಗ್ಗಲ್ಲಿಲ್ಲ ನೋಡು” ಅಂದಳು ಎಲೆನಾ.

“ಆದರೆ ನಿನಗೆ ಗೊತ್ತಾ , ೨೦೧೪ರಲ್ಲಿ ಒಂದು ವರದಿ ಬಂದಿತ್ತು ಅದರಲ್ಲಿ ಈ ವೈರಸ್ ಚೈನಾದಿಂದ ಬಂದಿರಬಹುದು ಎಂಬ ಶಂಕೆಯಿದೆ” ಎಂದು  ಹೇಳಿದಳು. ಹುಡುಗಿ, “ನಿಮಗೆ ಅಂತೂ ಏಷಿಯನ್ಸ್ ಕಂಡರೆ ಆಗೋದೆ ಇಲ್ಲ ಅಲ್ವಾ” ಎಂದು ನಕ್ಕಳು.”ನೋ ನೋ ಇದು ಹಾಗಲ್ಲ ಹೌದು ನೀವುಗಳು ನಮಗಿಂತ ಬುದ್ಧಿವಂತರು, ಕಷ್ಟ ಪಡುತ್ತೀರಾ, ಆದರೆ ನೀವ್ಯಾರೂ ನಮ್ಮ ಸಂಸ್ಕೃತಿಯನ್ನ ಪಾಲಿಸುವುದಿಲ್ಲ ಇಲ್ಲೇ ನೋಡು ಚೈನಾ ಟೌನ್ ಇದೆ, ರಾಂಬ್ಲಾಸ್ ಇದೆ ಅದು ಸ್ಪೇನ್ ಥರಹವೇ ಇಲ್ಲ, ಅದು ಅರ್ಧ ಚೈನಾ, ಅರ್ಧ ಭಾರತದ ಹಾಗಿದೆ, ನಿಮ್ಮ ನಿಮ್ಮ ದೇಶದಲ್ಲಿ ನೀವು ಕಚ್ಚಾಡಿಕೊಳ್ಳುತ್ತೀರಾ ಆದರೆ ಇಲ್ಲಿ ಬಂದು ನಿಮ್ಮ ಸೌಹಾರ್ದತೆ ತೋರಿಸುತ್ತೀರಾ ಸಮಸ್ಯೆ ಇರೋದು ಅಲ್ಲಿ. ೪ ಜನ ಇರುವ ಮನೆಯಲ್ಲಿ ೧೦ ಜನ ಇರುತ್ತೀರಾ ಏನು ಮಾಡೋದಕ್ಕಾಗುತ್ತದೆ ಹೇಳು” ಎಂದಳು. ಇದು ಸರಿ ಎಂದು ಹುಡುಗಿಗೆ ಅನ್ನಿಸಿತ್ತು. ರಾಮನ ಲೆಕ್ಕ ಕೃಷ್ಣನ ಲೆಕ್ಕ ದಲ್ಲಿ ನಿಸ್ಸೀಮರಾದ ಭಾರತೀಯರಿಗೆ ಇದು ಸ್ವಲ್ಪ ಅರಗಿಸಿಕೊಳ್ಳೋದಕ್ಕೆ ಕಷ್ಟ. ನಮಗೆ ಉತ್ತರಭಾರತದವರು ಬೆಂಗಳೂರಿಗೆ ಬಂದಾಗ ದೋಸೆಯನ್ನೇ ತಿನ್ನಬೇಕು ಆದರೆ ನಾವು ಬಾರ್ಸಿಲೋನಾಗೆ ಹೋದರೂ ಸಾರನ್ನ ಕೊಡುವ ಹೋಟೆಲ್ ಬೇಕು ಹೊರತಾಗಿ ಅಲ್ಲಿನ ಬೊಕಾದಿಯಾ ಬೇಕಿಲ್ಲ. ನಮ್ಮ ಹಿಪಾಕ್ರೆಸಿ ಇಲ್ಲಿ ಜನಾಂಗೀಯ ದ್ವೇಷವಾಗಿ ಬದಲಾಗುತ್ತಿದ್ದದ್ದು ಚೆನ್ನಾಗಿಯೇ ಗೊತ್ತಾಗುತ್ತಿತ್ತು ಹುಡುಗಿಗೆ.

ಎಲೆನಾ ಭುಜ ಅಲುಗಾಡಿಸಿದಳು, “ಏನು ನೀನು ಯಾವುದೋ ಭ್ರಮಾ ಲೋಕದಲ್ಲಿದ್ದೀಯಲ್ಲಾ ” ಎಂದಳು. “ಏನಿಲ್ಲ ನೀನು ಪೂರ್ತಿ ಕಥೆ ಹೇಳುವಾಗ ಸ್ಪಾನಿಷ್ ಜನರನ್ನು ನಾವು ನಾವು ಎಂದು ಅನ್ನುತ್ತಿದ್ದದ್ದು ಬಹಳ ನಗು ಬಂತು ನನಗೆ, ಆ ರಾಜನೂ ನಿಮ್ಮವನೇ ಅಂತ ಬೇರೆ ಅಂದೆ, ನಾನು ಇಲ್ಲಿ ಬರುವಾಗ ಪಿ ವಿ ಸಿಂಧು ಜೊತೆ ಸ್ಪಾನಿಷ್ ಹುಡುಗಿ ಮ್ಯಾಚ್ ಆಡುತ್ತಿದ್ದಾಳೆ ಅಂದಿದಕ್ಕೆ ದೊಡ್ಡ ಉಪನ್ಯಾಸ ಕೊಟ್ಟಿದ್ದೆಯಲ್ಲ ಅದು ನೆನಪಾಯಿತು ಅಷ್ಟೆ. ” ಎಂದಳು..

ಎಲೆನಾ ದುರುದುರು ಕಣ್ಣುಬಿಟ್ಟುಕೊಂಡು ನೋಡಿದಳು… ಹುಡುಗಿ ನಕ್ಕಳು…

‍ಲೇಖಕರು avadhi

April 25, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

೧ ಪ್ರತಿಕ್ರಿಯೆ

  1. T S SHRAVANA KUMARI

    ಇಂದಿನ ಕರೋನಾದಂತದೇ ಪರಿಸ್ಥಿತಿ. ಲವಲವಿಕೆಯ ಲೇಖನ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: