ಅನಾಮಿಕಾ @ ಹ್ಯಾಂಡ್ ಪೋಸ್ಟ್ : ಈ ಸಲದ ಮಾಗಿಗೆ..

ಮಾಗಿಯ ಮುಖದಲ್ಲಿ ಕಂಡ ಈ ಚೆಲುವನ್ನು…

ಕಳೆದ ಹದಿನೈದು ವರ್ಷಗಳಿಂದ ನನ್ನ ಜೀವನದ ಒಂದು ಭಾಗವೇ ಆಗಿದ್ದು Seasonal affective disorder. ಸರಳವಾಗಿ ಹೇಳಬೇಕು ಎಂದರೆ ಚಳಿಗಾಲದ ಡಿಪ್ರೆಷನ್. ಇತ್ತೀಚಿನ ವರ್ಷಗಳವರೆಗೆ ಇದೊಂದು ಕಾಯಿಲೆ ಥರದ್ದು ಅಂತ ಸ್ವತಃ ನನಗೂ ಗೊತ್ತಿರಲಿಲ್ಲ. ಇದರ ಅನೇಕ ಲಕ್ಷಣಗಳಲ್ಲಿ ನಿದ್ದೆಯೇ ಬರದಿರುವುದೂ ಒಂದು.

Seasonal affective disorder ನ ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದಾಗ ನನ್ನವು ಪಿಯು, ಡಿಗ್ರಿ ದಿನಗಳು. ಆ ಐದೂ ವರ್ಷ ಬೆಳಗಿನ ಕಾಲೇಜು. ಏಳೂವರೆಯ ಮೊದಲ ತರಗತಿಯನ್ನು ತಪ್ಪಿಸುವ ಹಾಗಿರಲಿಲ್ಲ. ಪಿಜಿ ಮಾಡುವಾಗ ಒಂಬತ್ತಕ್ಕೆ ಕ್ಲಾಸ್ ಶುರುವಾಗುತ್ತಿದ್ದರೂ ಊರಿನಿಂದ ಓಡಾಡುತ್ತಿದ್ದುದಕ್ಕೆ ಆರೂವರೆಗೆ ಮನೆ ಬಿಡಬೇಕಿತ್ತು. ರಜೆ ದಿನಗಳಲ್ಲಿ ತಡವಾಗಿ ಏಳೋಣ ಎಂದರೆ ಇನ್ನೂ ಮುಂಚೆಯೇ ಎಚ್ಚರವಾಗುತ್ತಿತ್ತು. ಹೀಗಾಗಿಯೇ ನಿದ್ದೆ ಎಂದರೆ ಇವತ್ತಿಗೂ ವಿಚಿತ್ರ ಆಕರ್ಷಣೆ ನನಗೆ.

ಇದೆಲ್ಲಕ್ಕಿಂತ ಮುಂಚೆ ಕಣ್ತುಂಬ ನಿದ್ದೆ ಮಾಡಿದ ದಿನಗಳನ್ನ ನೆನಸಿಕೊಂಡರೇ ಸುಖದ ಭಾವ. ಚಿಕ್ಕವಳಿದ್ದಾಗ ಮಧ್ಯಾಹ್ನ ಊಟದ ನಂತರ ಆಟವಾಡಿ ಮಲಗಿದರೆ, ಸಂಜೆ ರಾತ್ರಿಗೂ ಏಳದೆ ಮಾರನೆಯ ನಸುಕಿಗೆ ಏಳುತ್ತಿದ್ದೆ. ಎಂದಾದರೊಂದು ಮುಸ್ಸಂಜೆ ಹೊತ್ತಲ್ಲಿ ಅವ್ವ ಎಬ್ಬಿಸಿದರೆ ಬೆಳಗಾಗಿದೆ ಎಂದು ಹಲ್ಲುಜ್ಜಲು ಓಡಿದ್ದೇನೆ!

ಹೈಸ್ಕೂಲು ಮೆಟ್ಟಿಲು ಹತ್ತಿದ ದಿನಗಳಲ್ಲೂ ಗಟ್ಟಿ ನಿದ್ದೆಯಲ್ಲಿ ನನಗೊಂದು ಮುದ್ದುಮುದ್ದಾದ ಕನಸು ಬೀಳುತ್ತಿತ್ತು. ಮೆತ್ತ ಮೆತ್ತನೆಯ ಚಿಟ್ಟೆಗಳು ಗದ್ದ, ಗಲ್ಲ, ಹಣೆಯ ಮೇಲೆ ಕೂತು ಮುತ್ತಿಡುವಂತೆ. ಕಣ್ಣು ಮುಚ್ಚಿಯೇ ಎದ್ದು ಕೂತು ಇಲ್ಲದ ಚಿಟ್ಟೆಗಳನ್ನು ಒಂದೊಂದೇ ತೆಗೆದು ಪಕ್ಕಕ್ಕೆ ಇಡುತ್ತಿದ್ದ ರೀತಿಯನ್ನು ಅಕ್ಕಂದಿರು ತೋರಿಸಿದಾಗಲೆಲ್ಲ ನಾನು ಮತ್ತೆ ಅಂತಹ ನಿದ್ದೆ ಮಾಡುವ, ಕನಸು ಕಾಣುವ ಕನಸು ಕಂಡಿದ್ದೇನೆ.

ಮಾನಸಿಕ ಆರೋಗ್ಯಕ್ಕೆ ನಿದ್ದೆಗಿಂತ ಕನಸಿಗೇ ಹೆಚ್ಚು ಬೆಲೆ ಎಂದು ತಿಳಿದು ಬಂದ ಸಂಶೋಧನೆಯೂ ತುಂಬಾ ಕುತೂಹಲಭರಿತವಾಗಿದೆ.

ವೈದ್ಯರೊಬ್ಬರು ಮಾನವನ ನಿದ್ರೆಯ ರಹಸ್ಯ ಭೇದಿಸಲು ಹೊರಟಿದ್ದರು. ಬಹುಕಾಲ ನಿದ್ದೆಗೆಟ್ಟರೆ ಮನುಷ್ಯನಿಗೇನಾಗುತ್ತದೆ? ಕನಸು ಯಾವಾಗ ಬೀಳುತ್ತದೆ? ಕನಸು ಬೀಳುವುದರಿಂದ ಏನು ಪ್ರಯೋಜನ? ಇವೆಲ್ಲ ಪ್ರಶ್ನೆಗಳಿಗೆ ಅವರಿಗೆ ಉತ್ತರ ಬೇಕಾಗಿತ್ತು. ನಾಗರಿಕತೆ ಪ್ರಗತಿ ಹೊಂದಿದಂತೆ ಅನಿದ್ರಾರೋಗಿಗಳ ಸಂಖ್ಯೆ ಬೆಳೆಯುತ್ತಿರುವುದರಿಂದ ಈ ಸಂಶೋಧನೆಯೂ ಮಹತ್ವದ್ದಾಗಿತ್ತು.

ಅವರು ಪ್ರಯೋಗಗಳಿಗಾಗಿ ‘ಸ್ವಯಂ ಸೇವಕ’ರು ಬೇಕೆಂದು ಜಾಹೀರಾತು ಕೊಟ್ಟರು. ಬರೀ ದಿನದ ಊಟಕ್ಕೆ ಪ್ರತಿಯಾಗಿ ರಾತ್ರಿಯ ನಿದ್ದೆ ಕೆಡಲು ತಯಾರಿರುವವರು ಬೇಕಾಗಿದ್ದಾರೆ. ಆಶ್ಚರ್ಯವೆಂದರೆ ಅನೇಕರು ಸ್ವಯಂ ಸೇವಕರಾಗಲು ಮುಂದೆ ಬಂದರು. ಅವರ ತಲೆಗೆ, ಕಣ್ಣಿಗೆ ಮತ್ತು ಎದೆಗೆ ನಾನಾ ತರಹದ ಉಪಕರಣಗಳನ್ನು ತಗಲಿಸಿ ಮೀಟರ್ ಗಟ್ಟಳೆ ತಂತಿಗಳನ್ನು ಜೋಡಿಸಿ ಮಲಗಿಸಲಾಯಿತು.

ಒಂದೇ ರಾತ್ರಿಯಲ್ಲಿ ಹತ್ತಾರು ಸಲ ಅವರನ್ನು ಎಚ್ಚರಿಸಲಾಯಿತು. ಅವರ ಮೈಗೆ ನಿದ್ದೆಯಲ್ಲಿರುವಾಗ ನೀರು ಚಿಮುಕಿಸಲಾಯಿತು ಮತ್ತು ನಿದ್ದೆಗೆಡಿಸಲು ಬೇಕಾದ ಎಲ್ಲ ಉಪಾಯಗಳನ್ನು ಪ್ರಯೋಗಿಸಲಾಯಿತು. ಕೆಲವರ ಮೆದುಳು ಕೆಲಸ ಮಾಡಲೊಲ್ಲದಾಯಿತು. ಮತ್ತಿತರರು ಎಚ್ಚರವಿದ್ದಾಗಲೇ ಕನಸು ಕಾಣತೊಡಗಿದರು. ಉಳಿದವರು ಹೆಚ್ಚು ಕಡಿಮೆ ಹುಚ್ಚರಂತೆ ವರ್ತಿಸತೊಡಗಿದರು.

ಆದರೆ ಆ ವೈದ್ಯರಿಗೆ ತಮ್ಮ ಅನೇಕ ಸವಾಲುಗಳಿಗೆ ಉತ್ತರ ಲಭಿಸಿತ್ತು. ನಿದ್ದೆಗಿಂತ ಕನಸು ಮಹತ್ವದ್ದೆಂದವರು ಕಂಡುಹಿಡಿದಿದ್ದರು. ನಿದ್ರೆಯ ಅವಧಿಯಲ್ಲಿ ಕನಸು ಬೀಳುತ್ತಲೇ ಇರುತ್ತದೆಂದು ಗೊತ್ತಾಯಿತು. ತಮಗೆ ಕನಸು ಬೀಳುವುದೇ ಇಲ್ಲವೆಂಬುವವರು ಸತ್ಯ ಹೇಳುತ್ತಿಲ್ಲವೆಂದು ಅವರು ತೋರಿಸಿಕೊಟ್ಟಿದ್ದರು. ಅನೇಕ ಮನೋರೋಗಗಳಿಗೆ ಕೀಲಿಕೈ ಸಿಕ್ಕಿದ್ದೇ ಈ ಸಂಶೋಧನೆಯಿಂದ

ಇರಲಿ. ಮತ್ತೆ ನನ್ನ ನಿದ್ದೆಯ ಕಥೆಗೆ ಬರುವುದಾದರೆ, ಈ ಡಿಪ್ರೆಶನ್ ಯಾಕೆ ಬಂತು, ಹೇಗೆ ಬಂತು ಎಂದರೆ ಅದಕ್ಕೆ ನಿರ್ದಿಷ್ಟ ಉತ್ತರವಾಗಲಿ ಕಾರಣವಾಗಲಿ ಇಲ್ಲ. ಬೆಳಗ್ಗೆ ಏಳುತ್ತಿದ್ದಂತೆ ಗಂಟಲಿನಿಂದ ಹೊಟ್ಟೆಯವರೆಗೆ ಅಂಗಾಗಗಳೇ ಇಲ್ಲ ಎನಿಸುವಂತ ಖಾಲಿ ಖಾಲಿಗೆ ಮತ್ತು ಸಂಜೆಯಾಗುತ್ತಿದ್ದಂತೆ ಅಕ್ಕಪಕ್ಕದವರಿಗೂ ಕೇಳಿಸುವಂತಹ ಎದೆಯೊಳಗಿನ ಡುಕ್ ಡುಕ್ ಗೆ, ತೀರಾ ಸಣ್ಣಪುಟ್ಟ ವಿಷಯಗಳಿಗೂ ಅಂತಿಮ ಪರಿಹಾರ ಸಾವೇ ಎನ್ನುವಲ್ಲಿಗೆ ತಂದು ನಿಲ್ಲಿಸುವುದಕ್ಕೆ ಡಿಪ್ರೆಶನ್ ಅಂತಲ್ಲದೇ ಬೇರೆ ಹೆಸರಿಲ್ಲ.

ಇದರ ಒಟ್ಟು ಮೊತ್ತವೇ ನಾನು ನಿದ್ದೆಯಿಲ್ಲದೆ ಕಂಗೆಟ್ಟಿದ್ದು. ಹೀಗೆ ನಿದ್ದೆಗೆಡುವುದು ಬದುಕಿನ ಒಂದು ಭಾಗ ಆದರೆ ಹೇಗೆ ಎಂದು ಯೋಚಿಸಿಯೇ ನಿದ್ದೆ ಹಾಳಾದದ್ದು ಒಂದು ಕಥೆಯಾದರೆ, ನಿದ್ದೆ ಇಲ್ಲದೆ ಉಂಟಾದ ಹಪಾಹಪಿಯಿಂದ ಹೊರಬರಲು ಮಾಡಿಕೊಂಡ ಪರ್ಯಾಯಗಳೇ ನಿದ್ದೆಯನ್ನ ದೂರ ಓಡಿಸಿದ್ದು ಇನ್ನೊಂದು ಕಥೆ.

ಈ ಜೀವನ ನನ್ನದು, ಬೇಕೆಂದಂತೆ ಬದುಕುವ ಅಧಿಕಾರವನ್ನು ನನಗೆ ನಾನೇ ಕೊಟ್ಟುಕೊಂಡು ಸಂಬಂಧಗಳು ಬಂಧವಾಗುವಂತೆ ಒಂದೆಡೆ ನಿಲ್ಲದ ಓಟದಲ್ಲಿ ಅನುಭವಿಸಿದ ಕಾಠಿಣ್ಯ, ಒಲವಿನ ಸೊಗಸಿನ ಕಾರಣಕ್ಕೂ ನಾನು ನಿದ್ದೆ ಕಳೆದುಕೊಂಡಿದ್ದೇನೆ.

ಆದರೆ ಏನು ಮಾಡುವುದು ನನಗೆ ಹೀಗಲ್ಲದೆ ಬೇರೆ ರೀತಿ ಬದುಕಲು ಬಾರದು. ಕಳೆದ ಎಲ್ಲ ದಿನಗಳ ಅನುಭವ, ನೋವು, ಮೈಮುದುಡಿಸುವ ಪೆಟ್ಟು, ಬೇರಾದ ಕ್ಷಣಗಳು, ದೂರವಾಗಿ ಬಿಟ್ಟ ಭಾವನೆ ಎಲ್ಲವೂ ಬದುಕಿಗೆ ಶ್ರೀಮಂತಿಕೆ ಸೌಂದರ್ಯ ತಂದಿವೆ. ನನಗೇನು ಬೇಕು ಎನ್ನುವುದರ ಸ್ಪಷ್ಟ ಅರಿವು ಮೂಡಿಸಿವೆ.

ಸ್ಪಷ್ಟ ನೋಡುವ ದೃಷ್ಟಿ ತನ್ನದೇ ಕ್ರಿಯೆಯನ್ನು ಉದ್ದೀಪಿಸಿದ್ದಕ್ಕೇ ನಾನು ಡಿಪ್ರೆಷನ್ ನಿಂದ ಹೊರಬರಲು ವೈದ್ಯರ ಸಲಹೆ ಪಡೆಯಲು ಸಾಧ್ಯವಾಗಿದ್ದು. ನನ್ನ ಅಂದಿನ ವಿಚಿತ್ರ ತಳಮಳ ನೋಡಿ ವೈದ್ಯರೇ ‘ಸಮಾಧಾನ’ ಮಾಡಿದ್ದು, “ನಿಮ್ಮ ಕೈ ಮೂಳೆ ಮುರಿದಾಗ, ನಿಮಗೆ ನೆಗಡಿಯಾದಾಗ, ಔಷಧ ಸೇವಿಸಿ ಗುಣವಾಗುವಿರಿ. ಇತರ ಅಂಗಾಂಗಗಳಂತೆ ಮಿದುಳಿಗೂ ಪೆಟ್ಟಾಗಬಹುದು. ಆಗ ಅದಕ್ಕೆ ಔಷಧದ ಸಹಾಯ ಬೇಕಾಗುತ್ತದೆ,” ಎಂದು.

ಮುಂದೆ ಎಂದಾದರೂ ಖಿನ್ನತೆಯ ದಿನಗಳು ಧುತ್ತೆಂದು ಎದುರು ಬರುವ ಭಯ ಇದ್ದೇ ಇದೆ. ಒಳಗಿನಿಂದ ಬಲಿದು ನನ್ನದೆಲ್ಲವನ್ನೂ ಖಾಲಿಯಾಗಿಸಿದ, ರವಿಯು ಶಶಿಯು ತಂಪು ಬೆಳಕಿನ ಋತುಮಾನಗಳು ಗೊತ್ತಾಗದಂತಿದ್ದ ಆ ದಿನಗಳಿಗೆ ನಾನು ಮರಳಿ ಹೋಗಲು ಇಚ್ಛಿಸುವುದಿಲ್ಲ. ಇಂದಿಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ನನಗೆ ನಿತ್ಯದ ಸವಾಲು.

ಎಲ್ಲರಂತೆ ನನಗೂ ದೈಹಿಕ ಆರೋಗ್ಯ ಬದುಕಿರುವಷ್ಟು ದಿನ ಈ ಜೀವನದ ಭಾಗವೇ ಆಗಿರುವಂತೆ, ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಕೂಡ ನನ್ನ ದಿನಚರಿಯ ಭಾಗವಾಗಿದೆ. ಖಿನ್ನತೆಯಿಂದ ಹೊರಬರಲು ಮತ್ತು‌ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವ ಸಲುವಾಗಿ ನಾನು ನಡೆಸಿದ ನಿರಂತರ ಪ್ರಯತ್ನ ನನ್ನ ಜೀವನದ ಮೇಲೆ ಪರಿಣಾಮ ಬೀರಿದೆ ಮತ್ತು ಅದು ನನ್ನ ಜೀವನವನ್ನು ಬದಲಿಸಿದೆ ಕೂಡ.

ವೈದ್ಯರ ಹತ್ತಿರ ಹೋಗಿದ್ದಕ್ಕೆ, ಔಷಧೋಪಚಾರದಲ್ಲಿ ಇದ್ದುದಕ್ಕೇ ಮಾನಸಿಕವಾಗಿ ಕುಗ್ಗದಂತೆ ತಡೆದು ಈ ಸಲದ ಚಳಿಗಾಲ ಮುದ ನೀಡಿದ್ದು ಎರಡು ಕಾರಣದಿಂದಾಗಿ.

ಥೂ ನಿನ್ನ… ಇನ್ನೊಂದು ಹತ್ತು ವರ್ಷ ಕಳೆದರೆ ದೇಹದ ಸ್ಪಂದನೆಯೇ ಕಡಿಮೆ ಆಗತ್ತೆ, ಸಾಂಗತ್ಯದ ಬಗ್ಗೆ ಯೋಚಿಸು. ವಯೋಸಹಜ ಭಾವಗಳನ್ನು ತಡೆ ಹಿಡಿವುದು ಏಕೆ? ಈ ಡಿಪ್ರೆಷನ್ ಗೆ ಇದೂ ಒಂದು ಕಾರಣ ಇದ್ದಿರಬಹುದು. ಈ ದಿನಗಳಲ್ಲಿ ಯಾರಾದರೂ ನಿನ್ನ ಮನಸಿಗೆ ಬಂದಿದ್ದರೆ, ಅವರೊಂದಿಗೆ ತಿರುಗಾಡಬೇಕು ಎನಿಸಿದ್ದರೆ ಹೇಳು. ಎಲ್ಲ ನಿನಗೆ ಪ್ರಶಸ್ತ ಎನಿಸುವ ಹಾಗೆ ವ್ಯವಸ್ಥೆ ಮಾಡಿಕೊಡುತ್ತೇವೆ ಎಂದ ಸ್ನೇಹಿತರಿಂದಾಗಿ…

ವಿಕ್ಸ್-ಮೆಂಥೋ ಓಕೆ, ಝಂಡೂ… ಎಂದರೆ ಮಾರು ದೂರ ಎನ್ನುವ ನಾನು ಮಧ್ಯರಾತ್ರಿಯಾದರೂ ನಿದ್ದೆಗೆಡಿಸುವ ಕಾಯಕದಲ್ಲಿದ್ದಾಗ, ಕಾಡಲ್ಲಿರುವ ಪ್ರಾಣಿಗಳು ಕಾಡು ಪ್ರಾಣಿಗಳಾದರೆ ನೀನು ಎದೆಯ ಮೇಲೆ ಮಲಗಿ ಕಾಡುವ ಪ್ರಾಣಿ. ಹಿಂದು ಮುಂದು ನನ್ನ ಒಲವೆಲ್ಲ ನಿನ್ನದೇ ಎಂದವನ ಎದೆಯಲ್ಲಿ ಮಿನುಗುತ್ತಿದ್ದ ನನ್ನವೇ ಕಣ್ಣುಗಳನ್ನು ನೋಡುತ್ತಿದ್ದೆ. ಈಗ ಮಲಗದಿದ್ದರೆ ಮೂತಿಗೆಲ್ಲ …ಬಾಮ್ ಹಚ್ಚುತ್ತೇನೆ ಎಂದು ಗದರುತ್ತ ಒಳಗಣ್ಣು ತೆರೆಸುವಂತೆ ರೆಪ್ಪೆಗೆ ಮುತ್ತಿಟ್ಟು ನನ್ನನ್ನೇ ಚಿಟ್ಟೆಯಾಗಿಸಿದವನಿಂದಾಗಿ…

‘ಕಷ್ಟದಲ್ಲು ಅವನ ಕರುಣೆ ಮಾಲೆಮಾಲೆಯಾಗಿ ನಮ್ಮ ಕಟ್ಟಿ ಎಳೆವುದಣ್ಣ’ ಎನ್ನುವಂತೆ ಬೇಕು ಅಂದಿದ್ದೆಲ್ಲವನ್ನ ಕೈಗೂ, ಮೈಗೂ ತಂದಿತ್ತ ಈ ಸಲದ ಮಾಗಿಯ ಮುಖದಲ್ಲಿ ಕಂಡ ಚೆಲುವನ್ನು ನಾನು ಯಾವ ವಸಂತದಲ್ಲೂ ಕಂಡಿರಲಿಲ್ಲ.

 

‍ಲೇಖಕರು avadhi

February 9, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: