ಅವಧಿ Archive ನಿಂದ: ’ಅನಂತಮೂರ್ತಿಯವರೂ ಸಹಾ ರಾಗ ದ್ವೇಷಗಳಿಗೆ ಬದ್ಧರು’

’ಅವಧಿ’ಯಲ್ಲಿ ಪ್ರಕಟವಾಗಿದ್ದ ’ಅರಸು ಮುನಿದರೆ ನಾಡೊಳಗಿರಬಾರದು’ ಎನ್ನುವ ಜಿ ಪಿ ಬಸವರಾಜು ಅವರ ಲೇಖನಕ್ಕೆ ಕೆ ವಿ ತಿರುಮಲೇಶ್ ಅವರು ಪ್ರತಿಕ್ರಯಿಸಿದ್ದು ಹೀಗೆ :

ಕೆ ವಿ ತಿರುಮಲೇಶ್

ನಾವು ಗೌರವಿಸುವ–ಹಾಗೂ ವಿಶ್ವದ ಶ್ರೇಷ್ಠ ಲೇಖಕರಲ್ಲಿ ಒಬ್ಬರೆಂದು ನಾನು ಪರಿಗಣಿಸುವ–ಅನಂತಮೂರ್ತಿಯವರೂ ಸಹಾ ಕೇವಲ ಮನುಷ್ಯರು. ರಾಗ ದ್ವೇಷಗಳಿಗೆ ಬದ್ಧರು. ಅವರೇನಾದರೂ ಅತಿರೇಕಕ್ಕೆ ಹೋದರೆ ಅವರನ್ನು ಎಚ್ಚರಿಸುವುದು ಅವರ ಹಿತೈಷಿಗಳು ಮಾಡಬೇಕಾದ ಕೆಲಸ, ಹೊರತು ಅದನ್ನು ಸಮರ್ಥಿಸುವುದಲ್ಲ. ಸ್ವತಃ ಅನಂತಮೂರ್ತಿಯವರೇ ಬಹುಬೇಗನೆ ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುತ್ತಾರೆ. (ತಪ್ಪು ಮಾಡುವ ಸ್ವಾತಂತ್ರ್ಯ ಇರಬೇಕಲ್ಲವೇ ಎನ್ನುವ ಅವರ ಮಾತೊಂದಿದೆ; ನಾನು ಬಹಳವಾಗಿ ಮೆಚ್ಚುವ ಮಾತು ಅದು.) ಆ ತಪ್ಪುಗಳನ್ನು ಸರಿಯಂದು ಸಮರ್ಥಿಸಹೊರಟವರು ಆಗ ಮತ್ತೆ `ಹೌದೌದು!’ ಎನ್ನಬೇಕಾಗುತ್ತದೆ. `ಮೋದಿ ಪ್ರಧಾನಮಂತ್ರಿಯಾದರೆ ನಾನು`ದೇಶದಲ್ಲಿ ಇರಬಯಸುವುದಿಲ್ಲ’ ಎಂಬ ತಮ್ಮ ಮಾತನ್ನು ಚುನಾವನೆ ಫಲಿತಾಂಶಕ್ಕೆ ಮೊದಲೇ ಅನಂತಮೂ

ರ್ತಿಯವರು ತಿದ್ದಿಕೊಂಡಿದ್ದಾರೆ. ಅವರ ವೈಚಾರಿಕ ಜೀವನವನ್ನು ತೆಗೆದುಕೊಂಡರೆ, ಅವರೆಂದೂ ಕಠಿಣ ಶಿಲೆಯಂತೆ ಇದ್ದವರಲ್ಲ ಎನ್ನುವುದು ತಿಳಿಯುತ್ತದೆ. ಒಂದು ಉದಾಹರಣೆಯನ್ನು ಕೊಡುವುದಾದರೆ, ಅಯ್ಯಪ್ಪ ಭಜನೆಯನ್ನು ಟೀಕಿಸಿದ ಅವರು ಖುದ್ದು ಶಬರಿಮಲೆಗೆ ಭಕ್ತನಾಗಿ ಹೋಗಿಬಂದುದು! ಅವರ ಲೇಖನಗಳಲ್ಲಿ, ಮಾತುಗಳಲ್ಲಿ ನಾನು ಮೆಚ್ಚುವುದು ಅವರ ಸ್ವಾನುಮಾನವನ್ನು; ಅದನ್ನೇ ಅವರು ಇತರರಲ್ಲೂ ಅಪೇಕ್ಶಿಸುತ್ತಾರೆ. ಈ ಸ್ವಾನುಮಾನವನ್ನು ಅವರೇ ಕೆಲವು ಸಲ ಮರೆತುಬಿಡುವುದಿದೆ–ಆಗಲೆಲ್ಲ ಅವರು ಫ್ಯಾಸಿಸ್ಟರಂತೆ ಮಾತಾಡುತ್ತಾರೆ. ಮೋದಿ ವಿಷಯದಲ್ಲೂ ಇದೇ ಆಯಿತು ಎಂದು ಕಾಣುತ್ತದೆ. ಚುನಾವಣೆಯ ಸಂದರ್ಭದಲ್ಲಿ ಅನಂತಮೂರ್ತಿಯವರು ಒಂದು ಪಕ್ಷದ ಪರವಾಗಿ ಚುನಾವಣಾ ಪ್ರಚಾರಕರಂತೆ ವರ್ತಿಸಿದುದು ಅನೇಕರಿಗೆ ಸೇರಲಿಲ್ಲ–ನನಗೂ ಕೂಡ. ಯಾಕಂದರೆ ಅವರು ನಿಷ್ಪಕ್ಷಪಾತೀ ಸ್ಥಾನದಲ್ಲಿದ್ದರೆ ಒಂದು ಭರವಸೆಯಿರುತ್ತಿತ್ತು. ಸೋನಿಯಾ ಗಾಂಧಿಯನ್ನು ಹೊಗಳಿದರು, ಸರಿ. ಅದೇ ಮಾತಿನಲ್ಲಿ ರಾಹುಲ್ ಗಾಂಧಿಯನ್ನು ಹೊಗಳಿದರು, ನಂತರ ಪ್ರಿಯಂಕಾ ಗಾಂಧಿಯನ್ನೂ! ಭಾರತ ಬಯಸಿದ್ದು ಇಂಥ ಪ್ರಜಾಪ್ರಭುತ್ವವನ್ನೇ? ಅನಂತಮೂರ್ತಿಯನ್ನು ಕಾಡಿದ ಗಾಬರಿ ಯಾವುದು? ಸ್ವವಿಮರ್ಶೆಯನ್ನು ಅವರು ಸಂಪೂರ್ಣ ಕಳಕೊಂಡರೇ?

ಅನಂತಮೂರ್ತಿಯವರಿಗೆ ನಾನು ಸಾಹಿತ್ಯ ಸಂಗತಿಗಳ ಕುರಿತು ನಾನು ಕೆಲವೊಮ್ಮೆ ಈಮೇಲ್ ಮಾಡುವುದಿದೆ. ರಾಜಕೀಯ ವಿಷಯಗಳನ್ನು ನಾನು ಪ್ರಸ್ತಾಪಿಸುವುದು ಬಹಳ ಅಪರೂಪ. ಆದರೆ `ದೇಶದಲ್ಲಿ ಇರಬಯಸುವುದಿಲ್ಲ’ ಎಂಬ ಅವರ ಮಾತು ಕೇಳಿ, ಅದು ಪ್ರಜಾಪ್ರಭುತ್ವಕ್ಕೆ ಹೊಂದುವ ಮಾತಲ್ಲ ಎಂದು ಒಮ್ಮೆ ಬರೆದೆ; ಅಲ್ಲದೆ, ಇಂಥ ಮಾತು ಸಂವಾದಕ್ಕೆ ಎಡೆ ಮಾಡದೆ ಜಗಳವನ್ನು ಪ್ರಚೋದಿಸುತ್ತದೆ ಎಂದೆ. ನಂತರ ಇತ್ತೀಚೆಗೆ ಒಮ್ಮೆ ರಾಜಕೀಯವಾಗಿ ಬರೆದ ಮಾತೆಂದರೆ, ಕಾಂಗ್ರೆಸ್ ಪಕ್ಷ ಹೇಗೆ ಕೊಲೋನಿಯಲಿಸಮಿನ ಪಳೆಯುಳಿಕೆಯಾಗಿ ಕಾಣಿಸುತ್ತಿದೆ ಎಂದು. ಒಂದೇ ಪಕ್ಷ (ಕಾಂಗ್ರೆಸ್) ದೇಶವನ್ನು ಯಾವತ್ತೂ ಆಳಬೇಕೆಂದು ನಿಮ್ಮ ಬಯಕೆಯೇ, ಹಾಗಾದರೆ ಪ್ರಜಾಪ್ರಭ್ಹುತ್ವದ ಗತಿಯೇನು ಎಂದು ಕೇಳಿದ್ದೆ. ಇವೆರಡಕ್ಕೂ ಅನಂತಮೂರ್ತಿಯವರು ಉತ್ತರಿಸಲಿಲ್ಲ. ಇದರ ಅರ್ಥ ನಮ್ಮ ನಡುವೆ ವಿರಸ ಬಂದಿದೆಯೆಂದೋ, ನನ್ನ ಮಾತುಗಳನ್ನು ಅವರು ತಪ್ಪು ತಿಳಿದಿದ್ದಾರೆ ಎಂದೋ ಅಲ್ಲ. ನಾನೂ ಒಬ್ಬ `ಹೌದಪ್ಪ’ನಾಗುವುದನ್ನು ಅನಂತಮೂರ್ತಿ ಇಷ್ಟಪಡುವುದಿಲ್ಲ ಎನ್ನುವುದು ನನಗೆ ಗೊತ್ತಿದೆ. ಹೌದಪ್ಪ ಸಂಸ್ಕೃತಿಯನ್ನು ಕಾಂಗ್ರೆಸ್ ಪಕ್ಷದ ನೇತಾರರು ಬೇಕೆಂದೇ ಬೆಳೆಸಿ ಹಾಳಾದರು. ಅನಂತಮೂರ್ತಿ ಅಂಥ ಸಂಸ್ಕೃತಿಯಿಂದ ದೂರ ಇರಬಯಸುತ್ತಾರೆ,ಸಮರ್ಥನೆ ಅವರಿಗೆ ಮುಜುಗರ ಉಂಟುಮಾಡುತ್ತದೆ, ವಿಮರ್ಶೆಯನ್ನು ಅವರು ಸ್ವಾಗತಿಸುತ್ತಾರೆ ಎಂದು ನಾನು ತಿಳಿದಿದ್ದೇನೆ. ವಿಮರ್ಶೆಯ ಸುದೂರವನ್ನು ಉಳಿಸಿಕೊಳ್ಳುವುದಕ್ಕಾಗಿಯಾದರೂ ಅನಂತಮೂರ್ತಿಯವರು ಪಕ್ಷಾತೀತರಾಗಿರುವುದು ಅಗತ್ಯ.
ಇನ್ನು ಅವರಿಗೆ ಟಿಕೆಟ್ ಕಳಿಸಿ, ಪಾಕಿಸ್ತಾನಕ್ಕೆ ಹೋಗಿ ಎನ್ನುವುದು, ಅವರ ಮನೆ ಮುಂದೆ ಅವರ ವಿರುದ್ಧ ಘೋಷಣೆ ಕೂಗುವುದು–ಇವೆಲ್ಲ ಅನಾಗರಿಕ ಮತ್ತು ಖಂಡನಾರ್ಹ ಎನ್ವುವುದರಲ್ಲಿ ಸಂಶಯವಿಲ್ಲ. ಅನಂತಮೂರ್ತಿ ನಮ್ಮಲ್ಲಿರುವ ಒಬ್ಬ ಶ್ರೇಷ್ಠ ಕ್ರಿಟಿಕಲ್ ಇನ್ಸೈಡರ್–ಅವರನ್ನು ಈ ದೇಶ ಬಿಟ್ಟುಕೊಡುವುದಿಲ್ಲ.

ನಮ್ಮಲ್ಲೀಗ ಯಾವ ಅರಸೂ ಇಲ್ಲ, ಇರುವುದು ಪ್ರಜಾಪ್ರಭುತ್ವ.

‍ಲೇಖಕರು G

January 30, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

12 ಪ್ರತಿಕ್ರಿಯೆಗಳು

  1. Prabhakar M. Nimbargi

    Truly balanced comment. In democracy, there must be persons to put up questions as well as open up their minds and also there must be those who answer them but the answers should not be personally abusive abusive. The best way is to ignore a comment rather than prolong it pretty long leading to unnecessary eventualities. Isn’t there a saying, to err is human and to forgive is divine? Let divinity take an upper hand in the people. Let’s become, as Prof. Tirumalesh puts it, critical insiders & definitely not outsiders.

    ಪ್ರತಿಕ್ರಿಯೆ
  2. Somashekhar

    ಮಾನ್ಯ ತಿರುಮಲೇಶ್ ,
    ನನಗೆ ಅನಂತಮೂರ್ತಿ ಯವರ ಬರವಣಿಗೆ ಅಥವಾ ಅವರು ಪ್ರತಿಪಾದಿಸುವ ಮೌಲ್ಯಗಳಾದ ಪ್ರಜಾಪ್ರಭುತ್ವ, ಮಾತಿನ ಸ್ವಾತಂತ್ರ್ಯಾ ಮತ್ತು ಫ್ಯಾಸಿಸ್ಟ್ ವಿರುದ್ಧದ ಅವರ ನಿಲುವುಗಳ ಬಗ್ಗೆ ಯಾವುದೇ ತಕರಾರು ಇಲ್ಲ. ಆದರೆ ಇತ್ತೀಚಿಗೆ ವಿಜಯ ಕರ್ನಾಟಕದಲ್ಲಿ ಬಂದ ಸುದ್ದಿಯನ್ನು ತಾವು ಓದಿರುತ್ತೀರಿ ಎಂದು ನಂಬಿದ್ದೇನೆ. ಇವರು ಬಿಜೆಪಿ ಯನ್ನು ವಿರೋದಿಸುವುದು, ಕಾಂಗ್ರೆಸ್ ಬೆಂಬಲಿಸುವುದು ಮತ್ತು ಕಾಂಗ್ರೆಸ್ ಸರ್ಕಾರದಿಂದ ಅರ್ಥಿಕ ನೆರುವು ಪಡೆವುದು ಇದೆಲ್ಲಾ ನಾನಾ ಅರ್ಥಗಳನ್ನು ಕೊಡುವುದಿಲ್ಲವೇ. ನಿಜಕ್ಕೂ ಈ ಸಹಾಯ ಪಡೆಯುವಷ್ಟು ಬಡವರೇ ಅನಂತಮೂರ್ತಿ?. ಈ ಹಿಂದೆಯೇ ಸರ್ಕಾರದಿಂದ ಮನೆ ಪಡೆದು ವಿವಾದಕ್ಕೊಳಗಗಿದ್ದ ಇವರಿಗೆ ಅಷ್ಟೂ ‘ಜ್ಞಾನ’ ಇಲ್ಲವೆಂದರೆ ಹೇಗೆ?.
    ಇವರ ಇಂತಹ ನಡೆಗಳು ಇವರ ಬಗ್ಗೆ ಮಾತ್ರವಲ್ಲ, ಬೇರೆ ಸಾಹಿತಗಳಬಗ್ಗೆ ಇರುವ ವಿಶ್ವಾಸಾರ್ಹತೆಯ ಮೇಲೆ ಎಲ್ಲರಲ್ಲೂ ಅನುಮಾನ ಬರುವಂತೆ ಮಾಡಿದೆ.
    ಅನಂತಮೂರ್ತಿ ಯವರ ಆತ್ಮಕತೆ ‘ಸುರಗಿ’ಯಲ್ಲಿ ಅವರು ತಮ್ಮ ಜೀವನದ ಪೂರ್ವಾರ್ದದ ಬಗ್ಗೆ ಬರೆದುದೆಲ್ಲ ಅವರು ತಮ್ಮ ಬದುಕಿನ ಸಮರ್ಥನೆಗೆ ಬಳಸಿಕೊಂಡಂತೆ ಅನಿಸುವುದು ಇಂಥಹ ಕಾರಣಗಳಿಂದಲೇ ಇರಬೆಕು. ಇದರಲ್ಲಿ ಅವರ ಮನೆ ವಿವಾದದ ಬಗ್ಗೆ ಪ್ರಸ್ಥಾಪಿಸುತ್ತ ಒಮ್ಮೆ ಲಂಕೇಶರು ಮೂರ್ತಿಯವರನ್ನು ಅವರ ವಿವಾದಿತ ಮನೆಯಲ್ಲಿ ಬೇಟಿಯಾದಾಗ ಅವರು ಹೇಳಿದ ‘ ಇದೆಲ್ಲ ಆಗಿಹೋದ ವಿಚಾರ , ಮರೆತುಬಿಡಿ ‘ ಎಂದಿದ್ದನ್ನೇ ತಮ್ಮ ಸಮರ್ಥನೆಗೆ ಬಳಸಿಕೊಂಡಿದ್ದಾರೆ ಮತ್ತು ಅದೇನೋ ಯಾರಿಗೂ ಗೊತ್ತಿರದಿದ್ದ ವಿಷಯವೆಂಬಂತೆ ಬರೆದಿದ್ದಾರೆ. ಆದರೆ, ಈ ಬೇಟಿಯ ಬಗ್ಗೆ ಲಂಕೆಶರೇ ತಮ್ಮ ಪತ್ರಿಕೆಯಲ್ಲಿ ಬರೆದಿದ್ದರು . ತೀವ್ರ ಅನಾರೋಗ್ಯದಿಂದ ಚೇತರಿಸಿಕೊಳುತ್ತಿದ್ದ ಅನಂತಮೂರ್ತಿ ಯವರನ್ನು ಕಾಣಲು ಬಂದಿದ್ದ ಲಂಕೇಶರು ಆ ಸಮಯದಲ್ಲಿ ಮತ್ತೇನನ್ನು ಹೇಳಬಹುದಿತ್ತು?
    ಇವರಿಗಿರುವ ಅಧಿಕಾರಸ್ತರ ಮತ್ತು ಪ್ರಶಸ್ತಿಗಳ ಬಗೆಗಿನ ವ್ಯಾಮೋಹ ಇವರ ಬಗೆಗಿರುವ ವಿಶ್ವಾಸಾರ್ಹತೆಗೆ ಕಪ್ಪು ಚುಕ್ಕೆ ಇಟ್ಟಿದೆ

    ಪ್ರತಿಕ್ರಿಯೆ
  3. narendra shivanagere

    i read his short story suryana kudure,samskara and many of his writings, i have lot of respect on URA, as you said, he has got rights to do mistakes like any common man. We are very much fortunate that we are living and experiencing our lives at the current times of URA and literary legends like Thirumalesh.

    ಪ್ರತಿಕ್ರಿಯೆ
  4. Chidambar Narendra

    ಅನಂತ ಮೂರ್ತಿಯವರು ಮನುಷ್ಯರು ಸರಿ, ಅವರು ತಪ್ಪು ಮಾಡುತ್ತಾರೆ ಅದೂ ಸರಿ ಆದರೆ ಈ ನಾಡಿನ ಸಾಮಾಜಿಕ, ಸಾಂಸ್ಕೃತಿಕ ಆರೋಗ್ಯದ ಬಗ್ಗೆ ಕಳಕಳಿಯುಳ್ಳ ಮನುಷ್ಯ ಕೆಲವೊಮ್ಮೆ ಕೆಲವು ವಿಷಯಗಳನ್ನು ಅತಿಯಾಗಿ ಹೇಳಬೇಕಾಗುತ್ತದೆ. ಲಂಕೇಶ್ ಇದನ್ನ ಮಾಡುತ್ತಿದ್ದರು, ಮಹದೇವ ಮಾಡುತ್ತಿದ್ದಾರೆ. ಏಕೆಂದರೆ ಅವರು ದಂತ ಗೋಪುರದ ಸಾಹಿತಿಗಳಲ್ಲ. ಇಂಥವುಗಳನ್ನ ನೆಪವಾಗಿಟ್ಟುಕೊಂಡು ಅವರನ್ನು ಹೀಗಳೆಯುವ ಧೋರಣೆ ಸಲ್ಲ.

    ಪ್ರತಿಕ್ರಿಯೆ
    • M.A.Sriranga

      ತಾವು ಅನಂತಮೂರ್ತಿ ಅವರ “ಮಾತುಗಳಿಗೆ” ಕೊಟ್ಟ concession ಬಗ್ಗೆ ನನಗೆ ಯಾವ ತಕರಾರಿಲ್ಲ. ಆದರೆ ಅದೇ ಉದಾರತೆಯಿಂದ ಇತರರ ಮಾತುಗಳಿಗೆ,ಲೇಖನಗಳಿಗೆ ತಾವು ಕೊಡುತ್ತೀರಾ? ಅನಂತಮೂರ್ತಿ ಅವರಾಗಲಿ,ಕಲಬುರ್ಗಿ ಅವರಾಗಲಿ ಒಂದು ಮಾತನ್ನು ಬಾಯಿ ತಪ್ಪಿನಿಂದಲೋ/ಉದ್ದೇಶಪೂರ್ವಕವಾಗಿಯೋ ಆಡಿದ ಮೇಲೆ ಅದರ ಪರಿಣಾಮಗಳನ್ನು ಎದುರಿಸದೆ ಕೇವಲ hit and run policy ಅನುಸರಿಸುವುದು ಸರಿಯೇ? ನಮ್ಮ ಹಿರಿಯ ಬುದ್ಧಿಜೀವಿಗಳು,ವಿದ್ವಾಂಸರು ತಮಗೆ ಮಾತ್ರ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ ಇತರರಿಗೆ ಇಲ್ಲ ಎಂಬಂತೆ ನಮ್ಮ ಜನಗಳ ಮೇಲೆ,ಸಮಾಜದ ಮೇಲೆ ದೋಷ ಹೊರಿಸಿದರೆ ಸರಿಯೇ?

      ಪ್ರತಿಕ್ರಿಯೆ
  5. Anonymous

    ಏನೇ ಆಗಲಿ ತಮ್ಮ ಬರವಣಿಗೆ ಶೈಲಿಯಿಂದಾಗಿ ಮತ್ತು ಮಾತಿನ ಮೋಡಿಯಿಂದಾಗಿ ಜನರನ್ನು ಸೆಳೆಯುವ ಚುಂಬಕಶಕ್ತಿ ಅನಂತಮೂರ್ತಿಯವರಲ್ಲಿ ಹಾಗೆ ಉಳಿದಿದೆ. ಒಂದು ಛಾನಲ್ಲಿನಲ್ಲಿ ತಮ್ಮ ವಿಪರೀತವೆನಿಸುವ ಹೇಳಿಕೆಗಳಿಂದ ಕಿರಿಕಿರಿ ಉಂಟುಮಾಡಿದರೂ, ಮರುಕ್ಷಣ ಮತ್ಯಾವುದೋ ಛಾನಲ್ಲಿನಲ್ಲಿ ತಮ್ಮ ಮಾತಿನ ಮೋಡಿ ಮತ್ತು ಪ್ರತಿಭೆಯ ಕಾರಣದಿಂದ ಮನಸೆಳೆಯುತ್ತಾರೆ. ಹೀಗಾಗಿ ಸಾಮಾನ್ಯರಿಗೆ ಅನಂತಮೂರ್ತಿಯವರು ಬಿಸಿತುಪ್ಪದಂತೆ. ಮೋದಿ ಪ್ರಧಾನಿಯಾದರೆ ತಾವು ದೇಶದಲ್ಲಿರುವುದಿಲ್ಲ ಎಂದು ಅವರು ಭಾವಾವೇಶದಲ್ಲಿ ಹೇಳಿದ ಮಾತು ಕನ್ನಡಿಗರು ಕೆಲವರಿಗೆ ಕೀಟಲೆ ಎನ್ನಿಸಿರಬೇಕು ಅವರ ಹೇಳಿಕೆಗೆ ಆ ಕನ್ನಡಿಗರು ನೀಡಿದ ಉತ್ತರ ಅಥವಾ ಪ್ರತಿಕ್ರಿಯೆ ಕೂಡ ಕೀಟಲೆಯದೆ. ಹೊರೆತು ಅನಂತ ಮೂರ್ತಿಯವರನ್ನು ದೂರ ಮಾಡಿಕೊಳ್ಳುವ ಕೆಟ್ಟ ಆಸೆ ಯಾರಿಗೂ ಬಿಲ್ಕುಲ್ ಇಲ್ಲ.

    ಪ್ರತಿಕ್ರಿಯೆ
  6. Kiran

    In my opinion this man is just a very smart person, no doubts about it, he knows how to use his intellectual tag he acquired decades ago because of his revolutionary writings he did decades ago but since then he is just living with the same cover. He extracted all he can from the society and now in this age of social media he just not able to gauge which way the wind is blowing and so he is getting into controversies, give him some time and he will be back like a phoenix!

    ಪ್ರತಿಕ್ರಿಯೆ
  7. D.Ravivarma

    ಇನ್ನು ಅವರಿಗೆ ಟಿಕೆಟ್ ಕಳಿಸಿ, ಪಾಕಿಸ್ತಾನಕ್ಕೆ ಹೋಗಿ ಎನ್ನುವುದು, ಅವರ ಮನೆ ಮುಂದೆ ಅವರ ವಿರುದ್ಧ ಘೋಷಣೆ ಕೂಗುವುದು–ಇವೆಲ್ಲ ಅನಾಗರಿಕ ಮತ್ತು ಖಂಡನಾರ್ಹ ಎನ್ವುವುದರಲ್ಲಿ ಸಂಶಯವಿಲ್ಲ. ಅನಂತಮೂರ್ತಿ ನಮ್ಮಲ್ಲಿರುವ ಒಬ್ಬ ಶ್ರೇಷ್ಠ ಕ್ರಿಟಿಕಲ್ ಇನ್ಸೈಡರ್–ಅವರನ್ನು ಈ ದೇಶ ಬಿಟ್ಟುಕೊಡುವುದಿಲ್ಲ.
    ನಮ್ಮಲ್ಲೀಗ ಯಾವ ಅರಸೂ ಇಲ್ಲ, ಇರುವುದು ಪ್ರಜಾಪ್ರಭುತ್ವ. arthapurna chintane…

    ಪ್ರತಿಕ್ರಿಯೆ
  8. ಕೆ.ಫಣಿರಾಜ್

    1.ತಿರುಮಲೇಶರ ಪ್ರತಿಕ್ರಿಯೆಯಲ್ಲಿ, ಅನಂತಮೂರ್ತಿಯವರು ಲೋಕಾಭಿರಾಮದಲ್ಲಿ ಆಡಿದ ಒಂದು ರಾಜಕೀಯ ಅಭಿಪ್ರಾಯವನ್ನು, ಅವರನ್ನು ಓಲೈಸುವ ’ಹೌದಪ್ಪ’ಗಳು ಸಮರ್ಥಿಸಿಕೊಂಡು, ಅನಂತಮೂರ್ತಿಯವರನ್ನು ಭ್ರಮೆಯಲ್ಲಿಡುತ್ತಿದ್ದಾರೆ ಎನ್ನುವ ದನಿ ಇದೆ.
    ಅನಂತಮೂರ್ತಿಯವರು, ನಿರ್ದಿಷ್ಟ ಕಾಲ ಸನ್ನಿವೇಶದಲ್ಲಿ, ಒಬ್ಬ ವೈಚಾರಿಕನಾಗಿಯೂ, ಒಬ್ಬ ಪ್ರಜೆಯಾಗಿಯೂ,ಪ್ರತಿಕ್ರಿಯಿಸುವ ಸಂದರ್ಭ ಬಂದಾಗ, ತಮ್ಮ ಮುಂದಿರುವ ಕೆಲವು ಮಾರ್ಗಗಳನ್ನು ಅಳೆದು ತೂಗಿರಲಿಕ್ಕೂ ಸಾಕು:
    ಒಬ್ಬರನ್ನು ವಿರೋಧಿಸಿ ಸುಮ್ಮನಾಗಲೋ? ಒಬ್ಬರನ್ನು ವಿರೋಧಿಸುತ್ತಿರುವುದು ಯಾಕೆ ಎಂದು ಸ್ಪಷ್ಟಗೊಳಿಸಲು ಮತ್ತೊಬ್ಬರನ್ನು, ವಿವರಿಸಿ ಬೆಂಬಲಿಸಲೋ? ನನ್ನ ತಳಮಳಗಳು ನನಗೆ-ಸಾಹಿತ್ಯದ ಸಾಮಾಗ್ರಿಯಾಗಿರಲಿ-ಮಾತನಾಡೋದ್ಯಾಕೆ?
    ಇರುವ ಸನ್ನಿವೇಶದಲ್ಲಿ ಅನಂತಮೂರ್ತಿಯವರು ಎರಡನೆಯದನ್ನು ಪ್ರಜ್ಞಾಪೂರ್ವಕವಾಗಿ ಆಯ್ದುಕೊಂಡಿದ್ದಾರೆ; ಹಾಗೆ ಮಾಡುವಾಗ ಅವರು ಒಬ್ಬ ಲೇಖಕನಾಗಿಯೂ, ಒಂದು ಬಗೆಯ ಲೋಕದೃಷ್ಟಿಯುಳ್ಳ ಒಬ್ಬ ಪ್ರಜೆಯಾಗಿಯೂ ತಮ್ಮ ಎದುರುಗಿರುವ ಸಾಧ್ಯಾಂತ ಅಸ್ಥಿತ್ವದ ಆಯ್ಕೆಗಳಲ್ಲಿ ಒಂದನ್ನು ಆಯ್ದುಕೊಂಡಿದ್ದಾರೆ. ಈ ಅಸ್ಥಿತ್ವವಾದಿ ಆಯ್ಕೆಯ ಮೂಲಕ ತಮ್ಮೊಳಗಿನ ವೈಚಾರಿಕನನ್ನೂ, ಪ್ರಜೆಯನ್ನೂ ಹುರಿಗೊಳಿಸಿ ಕಾಲಕ್ಕೆ ಪ್ರತಿಕ್ರಿಯಿಸುವಲ್ಲಿ ಅವರು ಪಾರದರ್ಶಕರೂ, ಪ್ರಾಮಾಣಿಕರೂ ಆಗಿದ್ದಾರೆ. 1998ರೀಚೆಯ ಅವರ ಸಾಹಿತ್ಯೀಕ, ವೈಚಾರಿಕ ಬರಹಗಳಲ್ಲಿ ಈ ಬಗೆಯ ಅಸ್ಥಿತ್ವವಾದಿ ಆಯ್ಕೆ ಸ್ಪಷ್ಟವಾಗಿದೆ.
    ಇದನ್ನೆಲ್ಲಾ ನಾನೂ, ಬಸವರಾಜೂ ಅನಂತಮೂರ್ತಿಯವರ ಜೊತೆ ಯಾವ ವೈಯಕ್ತಿಕ ಸಂಪರ್ಕವೂ ಇಲ್ಲದೆ, ಕಳೆದ ಎರಡು ದಶಕಗಳ ಅವರ ಸಾಹಿತ್ಯವನ್ನು ನೆಚ್ಚಿಕೊಂಡು ಹೇಳಬಲ್ಲೆವು. ’ಹೌದಪ್ಪ’ಗಳಾಗುವ ಅವಶ್ಯಕತೆ ನಮಗಿಲ್ಲ. ನಮ್ಮ ಊರುಕೇರಿಗಳ ನಿತ್ಯಜೀವನದ ಅಸ್ಥಿತ್ವ ಆಯ್ಕೆಗಳೇ, ಅನಂತಮೂರ್ತಿಯವರ ಅಸ್ಥಿತ್ವವಾದಿ ವೈಚಾರಿಕ ಆಯ್ಕೆಯನ್ನು ಬೆಂಬಲಿಸುವಂತೆ ಪ್ರೇರಣೆ ನೀಡುತ್ತದೆ.
    ಅನಂತಮೂರ್ತಿ, ಈ ನಮ್ಮ ಅಸ್ಥಿತ್ವವಾದಿ ಪ್ರಜ್ಞೆಗೆ ವ್ಯತಿರಿಕ್ತವಾಗಿ ಮಾತನಾಡಿದಲ್ಲಿ, ನಾವೂ ಪ್ರತಿಕ್ರಿಯಿಸುವೆವು.
    ಬಸವರಾಜು, ನಮ್ಮ ’ಕಾಲ-ದೇಶ’ಗಳ ಸನ್ನಿವೇಶದಲ್ಲಿ, ಅನಂತಮೂರ್ತಿಯವರ ಪ್ರತಿಕ್ರಿಯೆಯನ್ನು ಅಸ್ಥಿತ್ವವಾದಿ ಜವಾಬ್ದಾರಿಯಲ್ಲಿ ಸ್ವೀಕರಿಸಿ, ಪ್ರತಿಕ್ರಿಯಿಸಿರುವುದನ್ನು, ಹ್ರಸ್ವಗೊಳಿಸಿ ಮಾತನಾಡಿರೋದು ನನಗಂತು ಉಡಾಫೆ ಎನಿದೆ. ನೋವಾಗಿದೆ.
    2. ಅನಂತಮೂರ್ತಿ ಮೋದಿಯ ಕುರಿತು ಆಡಿದ ಮಾತುಗಳೇನು? ನಿತ್ಯ ಪತ್ರಿಕೆಗಳ ನಿರಾಸಕ್ತ ವಿಷಯಗಳನ್ನೂ ಓದಿ, ವ್ಯವಸ್ಥೆ ಸೃಷ್ಟಿಸುವ ’ದೈನಂದಿನ ಜ್ಞಾನ’ವೇನು ಎಂದು ವಾಲ್ಟರ್ ಬೆಂಜಮಿನ್ನನ ಹಾಗೆ ಓದಿಕೊಂಡರೆ, ನಮಗೆ ತಿಳಿಯುವುದು, ಅನಂತಮೂರ್ತಿ ಹೇಳಿದ್ದು ’ಮೋದಿ ಪ್ರಧಾನಿಯಾದರೆ ನಾನು ದೇಶ ಬಿಟ್ಟು ಹೋಗುತ್ತೇನೆ’ ಅಂತ ಅಲ್ಲ. ’ಮೋದಿ ನಾಡಿನಲ್ಲಿ ನನಗೆ ಬದುಕಲು ಇಷ್ಟವಿಲ್ಲ’ ಅಂತ-ಮಾತಿನ ’ಧ್ವನ್ಯಾರ್ಥ’, ’ಪ್ರತಿಮಾರ್ಥಾ’, ಕಡೆಗೆ ’ವಾಚ್ಯಾರ್ಥ’ದಲ್ಲೂ ಕನ್ನಡಿಗರು ಹೇಗೆ ಅರ್ಥೈಸುತ್ತಾರೆ, ಅರ್ಥೈಸಬೇಕು. ಈ ಮಾತನ್ನು ’ಪ್ರಧಾನಿಯಾದರೆ ದೇಶ ಬಿಟ್ಟು ಹೋಗುತ್ತೇನೆ’ ಎಂದು ತಿರುಚಿ ಪ್ರಚಾರ ಮಾಡಿದ್ದು, ಎರಡು ದೈನಿಕಗಳು- ’ವಿಜಯವಾಣಿ’, ’ಕನ್ನಡ ಪ್ರಭಾ’.ನಂತರ ನಡೆದುದ್ದನ್ನೆಲ್ಲಾ ಗಮನಿಸದರೆ, ಭಾಷಾರ್ಥವನ್ನೇ ತಮ್ಮ ಮೂಗಿನ ನೇರಕ್ಕೆ ಬಗ್ಗಿಸುವ ಕೊಬ್ಬಿರುವವರ ಯಜಮಾನಿಕೆಯನ್ನು ಕಾಣದಿರುವುದು ’ವಿಮರ್ಶೆಯ ಸುದೂರ’ವೇ ಆಗಿದ್ದರೆ, ಅದಕ್ಕೆ ನನ್ನ ಆಕ್ಷೇಪವಿದೆ.

    ಪ್ರತಿಕ್ರಿಯೆ
  9. M.A.Sriranga

    ಕೆ. ಫಣಿರಾಜ್ ಅವರಿಗೆ–ಅನಂತಮೂರ್ತಿ ಅವರ ಸಾಹಿತ್ಯದ ಒಬ್ಬ ಓದುಗನಾಗಿ ಮತ್ತು ಇದುವರೆಗೆ ಅವರಂತೆ ಯಾವುದೇ ವಿಚಾರಗಳನ್ನು ಕನ್ನಡ ಭಾಷೆಯ ಎಲ್ಲಾ ಸಾಧ್ಯತೆಗಳನ್ನೂ ಉಪಯೋಗಿಸಿ ಬರೆದ ಬೇರೊಬ್ಬರು ಇಲ್ಲ ಎಂಬುದನ್ನು ಮೆಚ್ಚಿದವರಲ್ಲಿ ನಾನೂ ಒಬ್ಬ. ಅವರ ವಿಚಾರಗಳ ಬಗ್ಗೆ ನಮಗೆ ಭಿನ್ನಾಭಿಪ್ರಾಯಗಳಿರಬಹುದು ; ಮತ್ತು ಇರಬೇಕಾದ್ದೇ. ಇಲ್ಲದಿದ್ದರೆ “ಹೌದಪ್ಪ”ಗಳಾಗುವ ಸಾಧ್ಯತೆಗಳಿವೆ. ಆದರೆ ಸಭೆಯಲ್ಲೋ,ಪತ್ರಕರ್ತರ ನಡುವೆ ನಡೆಯುವ ಸಂದರ್ಶನದಲ್ಲೋ ಆಡಿದ ಒಂದು ಮಾತು ಯಾವ ಯಾವ ‘ಧ್ವನ್ಯಾರ್ಥ’, ‘ವಾಚ್ಯಾರ್ಥ’ ಗಳನ್ನು ಪಡೆದುಕೊಳ್ಳಲಾಗುತ್ತದೆಯೋ ಹೇಳಲಾಗುವುದಿಲ್ಲ. ನಂತರದಲ್ಲಿ ನಾನು ಹೇಳಿದ್ದು “ಆ ಅರ್ಥದಲ್ಲಿ ಅಲ್ಲ” ಎಂದು ‘ತಿದ್ದುಪಡಿ’ಮಾಡುವಷ್ಟರಲ್ಲಿ ಕಾಲ ಮಿಂಚಿ ಹೋಗಿರುತ್ತದೆ . ಇತ್ತೀಚೆಗೆ ಕಲಬುರ್ಗಿ ಅವರ ಘಟನೆಯಲ್ಲೂ ನಡೆದದ್ದು ಸಹ ಇದೆ. ಇಲ್ಲದಿದ್ದರೆ ಕಲಬುರ್ಗಿ ಅವರು ಉದಾಹರಿಸಿದ ಅನಂತಮೂರ್ತಿ ಅವರ ಆ ಲೇಖನವಿದ್ದ ‘ಬೆತ್ತಲೆ ಸೇವೆ ಯಾಕೆ ಕೂಡದು’ ಎಂಬ ಪುಸ್ತಕ ಪ್ರಕಟವಾದಾಗಲೇ ಅವರ ಆ ವಿಚಾರ ಕುರಿತು ವಿರೋಧ ವ್ಯಕ್ತ ವಾಗಬೇಕಿತ್ತಲ್ಲವೇ? ಆಗ ಏಕೆ ಆಗಲಿಲ್ಲ? ಅನಂತಮೂರ್ತಿ ಅವರ ಆ ಪುಸ್ತಕವನ್ನೇ ಯಾರೂ ಇದುವರೆಗೆ ಓದಿಲ್ಲ ಎಂಬುದು ಉಡಾಫೆಯ ಮಾತಾಗುತ್ತದೆ. ಪತ್ರಿಕೆ / ಟಿ ವಿಯ ಸುದ್ದಿಗಳಷ್ಟು ಒಂದು ಪುಸ್ತಕ hot ಅಲ್ಲ ಎಂಬುದು ಸ್ವಲ್ಪ ನಂಬಬಹುದಾದ ಮಾತು. ಆದರೆ ಯಾವಾಗಲೂ ಇದೂ ಸಹ ಪೂರ್ತಿ ನಿಜವಲ್ಲ. ಏಕೆಂದರೆ ‘ಪುಸ್ತಕ’ಗಳಿಗೆ ಮತ್ತು ಇದುವರೆಗೆ ಸ್ಥಾಪಿತವಾಗಿದ್ದ ನಂಬುಗೆ ಮತ್ತು ಕೆಲವೊಂದು “ಹಿತಾಸಕ್ತಿಗಳಿಗೆ” ವಿರುದ್ಧವಾದ ಸಾಹಿತ್ಯ ಸಂಬಂಧಿ ಸಂಶೋಧನೆಗಳಿಗೆ ವಿರೋಧ ವ್ಯಕ್ತವಾಗಿದ್ದಕ್ಕೆ ನಾವುಗಳು ಸಾಕ್ಷಿಯಾಗಿದ್ದೇವೆ. ಅಲ್ಲವೇ? ಮುಖ್ಯವಾದ ಮಾತೆಂದರೆ ನದಿಗೆ ಇಳಿಯುವ ಮುಂಚೆ ಚಳಿಯ ಬಗ್ಗೆ ಯೋಚಿಸಿರಬೇಕು.

    ಪ್ರತಿಕ್ರಿಯೆ
  10. M.A.Sriranga

    ೨೧ ಜೂನ್ ೨೦೧೪ರಂದು ನಾನು ಬರೆದಿರುವ ಪ್ರತಿಕ್ರಿಯೆಯಲ್ಲಿ ‘ಬೆತ್ತಲೆ ಸೇವೆ ಯಾಕೆ ಕೂಡದು’ ಎಂಬುದನ್ನು ‘ಬೆತ್ತಲೆ ಪೂಜೆ ಯಾಕೆ ಕೂಡದು’ ಎಂದು ಓದಿಕೊಳ್ಳಬೇಕಾಗಿ ವಿನಂತಿ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: