ಯಾವ ಆಶಯ ಹೊರಗೆಡಹಿದ್ದಾರೆ ಎನ್ನುವುದೇ ಜಟಿಲ ಪ್ರಶ್ನೆ

ಕಾವೇರಿದಾಸ್ ಲಿಂಗನಾಪುರ ಎಂಬ ಹೊಸ ತಲೆಮಾರಿನ ಯುವ ಕವಿಯು ಹೆಣ್ಣುಮಕ್ಕಳ “ಮುಟ್ಟು” ಕುರಿತು ಬರೆದಿರುವ ಕವಿತೆಯನ್ನು ಪ್ರಕಟಿಸುತ್ತಿದ್ದೇವೆ.

ಅದನ್ನು ಓದಿದ ಡಾ ವಡ್ಡಗೆರೆ ನಾಗರಾಜಯ್ಯ ಅವರು ಮಂಡಿಸಿದ ಮೊದಲ ನೋಟ ಸಹಾ ಇಲ್ಲಿದೆ.

ಈಗ ನಾ ದಿವಾಕ ಅವರುಸ್ಪಂದಿಸಿದ್ದಾರೆ

ನಿಮ್ಮ ಅಭಿಪ್ರಾಯವನ್ನೂ ತಿಳಿಸಿ. [email protected] ಗೆ ಕಳಿಸಿಕೊಡಿ

ನಾ ದಿವಾಕರ್ 

ಮುಟ್ಟು ಎನ್ನುವುದು ಹೆಣ್ಣಿನ ದೇಹದಲ್ಲಿ ಉಂಟಾಗುವ ಒಂದು ಪ್ರಕೃತಿ ಸಹಜ ಜೈವಿಕ ಕ್ರಿಯೆ. ಇದನ್ನು ಒಂದು ಘಟನೆಯಂತೆ ಮಾಡಿರುವುದು ಭಾರತೀಯ ಸಮಾಜದ ಸಾಂಪ್ರದಾಯಿಕ ಧೋರಣೆ ಮತ್ತು ಪುರುಷಪ್ರಧಾನ ಸಮಾಜದ ಅಹಮಿಕೆ.

ಒಂದು ಜೈವಿಕ ಕ್ರಿಯೆಗೆ ಯಾವುದೇ ರೀತಿಯ ಪ್ರತಿಕ್ರಿಯೆ ಅಥವಾ ಸಾಂತ್ವನ ಏಕೆ ಬೇಕಾಗುತ್ತದೆ ? ಹೆಣ್ಣಿನ ಅಂಗರಚನೆ ಮತ್ತು ಜೈವಿಕ ಬೆಳವಣಿಗೆಗೆ ಅನುಸಾರವಾಗಿ ಮುಟ್ಟು ಸಹ ಎಲ್ಲ ದೈನಂದಿನ ಕ್ರಿಯೆಯಂತೆಯೇ ತಿಂಗಳಿಗೊಮ್ಮೆ ಕಂಡುಬರುತ್ತದೆ. ಮುಟ್ಟಾದ ಹೆಣ್ಣುಮಕ್ಕಳನ್ನು ಬಹಿಷ್ಕೃತಳಂತೆ ಕಾಣುವ ವಿಕೃತ ಸಂಪ್ರದಾಯವನ್ನು ಭಾರತೀಯ ಸಮಾಜ ಪೋಷಿಸಿಕೊಂಡು ಬಂದಿದೆ. ಇದು ಖಂಡನಾರ್ಹ ಮತ್ತು ತಿರಸ್ಕಾರ ಯೋಗ್ಯ ಎನ್ನುವುದು ನಿಸ್ಸಂದೇಹ.

ಯುವ ಕವಿ ಕಾವೇರಿದಾಸ್ ಲಿಂಗನಾಪುರ ತಮ್ಮ ಕವಿತೆಯಲ್ಲಿ ಯಾವ ಆಶಯವನ್ನು ಹೊರಗೆಡಹಿದ್ದಾರೆ ಎನ್ನುವುದೇ ಜಟಿಲ ಪ್ರಶ್ನೆಯಾಗಿ ಕಾಡುತ್ತದೆ. “ ಅವನು ನನ್ನ ಪ್ರತಿ ತಿಂಗಳ ಮುಟ್ಟನ್ನು ಸಂಭ್ರಮಿಸುತ್ತಿದ್ದ” ಈ ಸಾಲಿನಲ್ಲಿ ಎರಡು ಸೂಚ್ಯಾರ್ಥಗಳಿವೆ. ಒಂದು ತನ್ನ ಪತ್ನಿಯ ಸೇವೆ ಮಾಡಲು ಪತಿಯಾದವನ ಚಡಪಡಿಕೆಗೆ ಮುಟ್ಟು ಒಂದು ಸಾಂಕೇತಿಕ ಅವಕಾಶ ಒದಗಿಸುತ್ತದೆ. ಎರಡನೆಯದು  ತನ್ನ ಪತ್ನಿಯ ಅಸಹಾಯಕ ಪರಿಸ್ಥಿತಿಯಲ್ಲಿ ತನ್ನ ಸಾಂತ್ವನದ ಮೂಲಕ ಪ್ರೀತಿಯನ್ನು ಹೊರಗೆಡಹಲು ಪತಿ ತವಕಿಸುತ್ತಾನೆ. ಹೆಂಡತಿಯಾದವಳ ದೇಹದೊಳಗಿನ ಜೈವಿಕ ಕ್ರಿಯೆ ಸಂಭ್ರಮದ ಭೂಮಿಕೆಯಾಗುವುದಾದರೂ ಏಕೆ ? ಇರಲಿ ಇದು ಕವಿಯ ಒಂದು ಕಲ್ಪನೆಯೂ  ಇರಬಹುದು.

ಮುಟ್ಟಿನ ಸಂದರ್ಭದಲ್ಲಿ ಹೆಣ್ಣು ಅಶಕ್ತಳಾಗಿರುತ್ತಾಳೆ ಎನ್ನುವ ಪರಿಕಲ್ಪನೆ ವೈಜ್ಞಾನಿಕವಾಗಿಯೂ ಒಪ್ಪಲಾಗದು, ವೈಚಾರಿಕವಾಗಿಯೂ ಒಪ್ಪಲಾಗದು. ಈ ಕಲ್ಪನೆಗೆ ತಾರ್ಕಿಕ ತಳಹದಿಯೇ ಇಲ್ಲ ಎನ್ನುವುದೂ ಸತ್ಯ. ಹೀಗಿರುವಾಗ ಮುಟ್ಟಾದ ಮೂರು ದಿನ ತಾನೇ ಅಡುಗೆ ಮನೆಯ ಉಸ್ತುವಾರಿ ವಹಿಸಿಕೊಳ್ಳುವ ಗಂಡು ಏನನ್ನು ಹೇಳಬಯಸುತ್ತಾನೆ. ಇದು ಹೆಣ್ಣಿನ ಅಸಹಾಯಕತೆಯನ್ನು ಬಿಂಬಿಸುವ ಪರಿಯೋ ಅಥವಾ ಗಂಡಿನ ಔದಾರ್ಯವನ್ನು ಬಿಂಬಿಸುವ ಪ್ರಯತ್ನವೋ ? ಹೆಣ್ಣಿನ ಅಂತರಾಳದ ಸೂಕ್ಷ್ಮತೆ ಸಾಂಪ್ರದಾಯಿಕತೆ ಮತ್ತು ಪುರುಷ ಪ್ರಧಾನ ಧೋರಣೆಯ ಅಸ್ತ್ರವಾಗುವುದನ್ನು ಕವಿ ಇಲ್ಲಿ ಸೂಚಿಸಿದ್ದಾರೋ ಅಥವಾ ಪ್ರತಿಪಾದಿಸಿದ್ದಾರೋ ಎಂಬ ಅನುಮಾನ ಮೂಡುತ್ತದೆ.

ಮುಟ್ಟಾದ ಸಂದರ್ಭದಲ್ಲಿ ಹೆಣ್ಣು ಬಲಹೀನತೆಯಿಂದ ಬಳಲುತ್ತಾಳೆ ಎಂಬ ಕಾರಣವನ್ನು ಒಡ್ಡುತ್ತಲೇ ಸುಶಿಕ್ಷಿತ ಸಮಾಜದಲ್ಲಿ ಇಂದಿಗೂ ಮುಟ್ಟಾದ ಹೆಣ್ಣನ್ನು ಬಹಿಷ್ಕೃತಳನ್ನಾಗಿ ಕಾಣುವುದನ್ನು ನಾವು ನೋಡುತ್ತಿದ್ದೇವೆ. ಆದರೆ ಸುತ್ತಲಿನ ಜಗತ್ತಿನಲ್ಲಿ ಈ ಪರಿಕಲ್ಪನೆಯನ್ನು, ಭಾವನೆಯನ್ನು ಮಹಿಳಾ ಲೋಕ ನಿರಾಕರಿಸಿರುವುದೇ ಅಲ್ಲದೆ ಇದು ಆಧಾರರಹಿತ ಎಂದು ನಿರೂಪಿಸಿದೆ. ನಿಜ, ಋತುಸ್ರಾವದಿಂದ ಕೊಂಚಮಟ್ಟಿಗೆ ಬಳಲಿಕೆ ಉಂಟಾಗುತ್ತದೆ ಆದರೆ ಹೆಣ್ಣನ್ನು ನಿಶ್ಶಕ್ತಳನ್ನಾಗಿ ಮಾಡುವುದಿಲ್ಲ.

ಇಲ್ಲಿ ಪರಿಶುದ್ಧತೆ ಮತ್ತು ಮಾಲಿನ್ಯದ ಪರಿಕಲ್ಪನೆ ಇರುವುದನ್ನು ಕವಿ ಲಿಂಗನಾಪುರ ಗ್ರಹಿಸಬೇಕಿತ್ತು. ಇತ್ತೀಚಿನ ಶಬರಿಮಲೆ ವಿವಾದದ ಸಂದರ್ಭದಲ್ಲೂ ಇದೇ ಕೇಂದ್ರ ವಿಚಾರವಾಗಿದ್ದನ್ನೂ ಗಮನಿಸಬಹುದು. ಮುಟ್ಟಿನ ಸಂದರ್ಭದಲ್ಲಿ ಹೆಣ್ಣು ಮಲಿನಳಾಗಿರುತ್ತಾಳೆ ಹಾಗಾಗಿ ಆಕೆಗೆ ಅಡುಗೆ ಮನೆ, ಮನೆಯೊಳಗಿನ ದೇವರ ಮನೆಗೆ , ದೇವಸ್ಥಾನಗಳಿಗೆ ಪ್ರವೇಶ ಇರುವುದಿಲ್ಲ ಎಂದು ಆಕೆಯನ್ನು ಹೊರಗಿಡುವ ಸಂಪ್ರದಾಯ ನಮ್ಮಲ್ಲಿ ಬೆಳೆದುಬಂದಿದೆ. ಈ ವಿಕೃತ ಸಂಪ್ರದಾಯ ಮುಟ್ಟಾದ ಹೆಣ್ಣನ್ನು ಊರಾಚೆ ಇರಿಸುವವರೆಗೂ ವಿಸ್ತರಿಸಿದೆ. (ಅತ್ಯಾಚಾರದ ಸಂದರ್ಭದಲ್ಲಿ ಮಾತ್ರ ಇದು ಅನ್ವಯಿಸುವುದಿಲ್ಲ ಎನ್ನುವುದು ಪುರುಷ ಸಮಾಜದ ವಿಕೃತಿಗೆ ಹಿಡಿದ ಕೈಗನ್ನಡಿ). ಇಂತಹ ಒಂದು  ಸಂದರ್ಭವನ್ನು ಸಂಭ್ರಮಿಸುವುದೆಂದರೆ ಏನರ್ಥ ?

ಹೆಣ್ತನಕ್ಕೆ ಮಿಡಿಯುವುದು ಬೇರೆ, ಹೆಣ್ಣಿನ ಸಂವೇದನೆಗಳಿಗೆ ಸ್ಪಂದಿಸುವುದು ಬೇರೆ ಅಲ್ಲ. ಆದರೆ ಈ ಮಿಡಿತಕ್ಕೆ ಅಥವಾ ಸಂವೇದನಾ ಸೂಕ್ಷ್ಮತೆಗೆ ಮುಟ್ಟಾದ ಹೆಣ್ಣು ಆಕರವಾಗುವುದು ಮತ್ತೊಮ್ಮೆ ಪುರುಷ ಪ್ರಧಾನ ಧೋರಣೆಯನ್ನೇ ಬಿಂಬಿಸುತ್ತದೆ.

ಮುಟ್ಟು, ನೋವು ಮತ್ತು ಸಾಂತ್ವನ ಈ ಮೂರನ್ನೂ ಭೂಮಿಕೆಯನ್ನಾಗಿಟ್ಟುಕೊಂಡು ಕವಿ ಲಿಂಗನಾಪುರ ಒಂದು ಕವಿತೆಯನ್ನು ಕಟ್ಟಿಕೊಟ್ಟಿದ್ದಾರೆ. ಇದು ಸಾಕಷ್ಟು ಚರ್ಚೆಗೂ ಒಳಗಾಗಿದೆ. ಬಹುಶಃ ಕೆಲವು ದಶಕಗಳ  ಹಿಂದೆ ಹೆಣ್ತನದ ಪರಿಕಲ್ಪನೆ ಇನ್ನೂ ಸಾಂಪ್ರದಾಯಿಕ ಸ್ಥಿತಿಯಲ್ಲಿದ್ದಾಗ ಈ ರೀತಿಯ ಅವ್ಯಕ್ತ ಸಂವೇದನೆ ಸೂಕ್ಷ್ಮ ಎನಿಸುತ್ತಿತ್ತೇನೋ. ಆದರೆ ಇಂದು ಹೆಣ್ಣು ಅಂತಹ ಸೂಕ್ಷ್ಮತೆಗಳನ್ನು ಮೆಟ್ಟಿ ನಿಂತಿದ್ದಾಳೆ.

ಇಂದಿಗೂ ಸಂವೇದನೆ ಅಗತ್ಯವೇ ಆದರೂ ಅದು ಹೆಣ್ತನದ ನೆಲೆಯಲ್ಲೇ ನಿಂತು ವ್ಯಕ್ತಪಡಿಸಬೇಕೇ ಹೊರತು, ಹೆಣ್ಣನ್ನು ಅಸಹಾಯಕಳಂತೆ ಚಿತ್ರಿಸುವ ಪುರುಷ ಸಮಾಜದ ಸಾಂತ್ವನದ ಮೂಲಕ ಅಲ್ಲ.

‍ಲೇಖಕರು avadhi

June 25, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Arakalgud Jayakumar

    ಯುವಕವಿ ಕಾವೇರಿದಾಸ್ ಲಿಂಗನಪುರ ಬರೆದ ಮುಟ್ಟಿನ ಕವಿತೆ ಪರಿಸರದಲ್ಲಿ ಕಂಡ ಸಂಗತಿಗಳನ್ನು ಅನುಭಾವಕ್ಕೆ ತಂದುಕೊಂಡು ಅಭಿವ್ಯಕ್ತಿಸಿದೆ. ಸಹಜ ಧಾಟಿಯಲ್ಲಿ ಬಂದ ಕವಿತೆಯ ಬೆರಗನ್ನು ಗ್ರಹಿಸುವ ಬದಲು, ಅದು ತಟ್ಟಿದ ಬಗೆಯ ಕುರಿತು ವಿಮರ್ಶೆಯ ಚೌಕಟ್ಟಿನಲ್ಲಿ ನೋಡಲಾಗುತ್ತಿದೆ.

    ಸವಿತಾ ನಾಗಭೂಷಣ ರಂತಹ ಹಿರಿಯ ಸಾಹಿತಿ ‘ಅಸಹಜ’ ಕವಿತೆ ಎನ್ನುತ್ತಾರೆ ಅದೇ ಧಾಟಿ ಮುಂದುವರೆದು ಡಾ ವಡ್ಡಗೆರೆ ನಾಗರಾಜಯ್ಯ, ನಾ ದಿವಾಕರ ಕವಿತೆಯ ಪ್ರಾತಿನಿಧ್ಯವನ್ನು ‘ಹೆಣ್ಣು ಅಶಕ್ತ’ ಎಂಬ ನೋಟ ಒದಗಿಸಿದೆ ಎಂದು ಹಳಿಯುತ್ತಾ ಕವಿತೆಯ ಪ್ರಾಮುಖ್ಯತೆಯನ್ನು ತಳ್ಳಿಹಾಕುತ್ತಾರೆ.

    ಸದರಿ ಕವಿತೆ ಎಲ್ಲಿಯೂ ಹೆಣ್ಣು ಅಶಕ್ತಳು ಎಂಬುದನ್ನು ಧ್ವನಿಸುವುದಿಲ್ಲ, ಆದರೆ ಅದೇ ಭಾವದಿಂದ ನೋಡುವವರಿಗೆ ಹಾಗೆ ಕಾಣಿಸಬಹುದು. ಎರಡೂ ಅರ್ಥಗಳನ್ನು ಅವರವರ ಭಾವಕ್ಕೆ ತಕ್ಕಂತೆ ಕಲ್ಪಿಸಿಕೊಳ್ಳ ಬಹುದು. ಹಾಗೆಂದು ಕವಿತೆಯ ಒಟ್ಟು ಆಶಯಗಳನ್ನು ತಿರಸ್ಕರಿಸುವುದು, ಕಠಿಣ ವಿಮರ್ಶೆಯ ಮೂಸೆಯಲ್ಲಿಟ್ಟು ನೋಡುವುದು ಥರವಲ್ಲ. ಓರೆಕೋರೆಗಳನ್ನು ಸಮಾಧಾನದ ಮಾತುಗಳಲ್ಲಿ ತಿದ್ದಬೇಕೆ ವಿನಹ, ಕಠಿಣ ವಿಮರ್ಶೆಯ ಮೂಲಕವಲ್ಲ ಎಂಬುದನ್ನು ಹಿರಿಯರು ಅರ್ಥ ಮಾಡಿಕೊಳ್ಳ ಬೇಕು. ಕವಿಯ ವಯಸ್ಸಿಗೆ ನಿಲುಕಿದ್ದು ಅಷ್ಟೆ, ಅಷ್ಟನ್ನೆ ಆತ ಗ್ರಹಿಸಲು ಸಾಧ್ಯವೇ ವಿನಹ ಮಾಗಿದ ವಯಸ್ಸಿನ ಗ್ರಹಿಕೆಗಳನ್ನು ಖಂಡಿತಾ ಅಲ್ಲ.

    ಪ್ರತಿಕ್ರಿಯೆ
  2. prakash konapur

    ಹೆಣ್ಣು ಮುಟ್ಟಾದ ಸಂಧರ್ಭದಲ್ಲಿ( ಗಂಡು )ಗಂಡನಾದವನು ತೋರಿಸಬೇಕಾದ ಪ್ರೀತಿ,ಕಾಳಜಿ, ಮತ್ತು ಜೀವನದ ಸಹಪಯಣಿಗನ ಗುರುತರ ಜವಾಬ್ದಾರಿ ಎಲ್ಲವನ್ನೂ ನವಿರಾದ ಪ್ರೀತಿಯಿಂದ ಅತ್ಯಂತ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ ಕಾವೇರಿದಾಸ ಲಿಂಗನಾಪುರ ತಮ್ಮ ಕವಿತೆಯ ಮೂಲಕ
    ಈ ಕವಿತೆಯ ಆಶಯ ಶ್ಲಾಘನೀಯ
    ಶ್ಲಾಘಿಸುವುದರ ಬದಲಾಗಿ ವಿವಿಧ ಮಾಪನಗಳಿಂದ ಕವಿತೆಯ ಅಳತೆ ಮಾಡುವುದು ಎಷ್ಟರಮಟ್ಟಿಗೆ ಸರಿ ?
    ಹೆಂಡತಿಯ ಕೆಲವು ಸಂದರ್ಭಗಳಲ್ಲಿ ಗಂಡನಾದವನು ಹೆಂಡತಿಯ ಮೇಲೆ ಕಕ್ಕುಲಾತಿ ತೋರುವುದರಲ್ಲಿ ತಪ್ಪೇನಿದೆ ?
    ಹೆಣ್ಣಿನ ಇಂತಹ ಅನೇಕ ಸಂದರ್ಭಗಳಲ್ಲಿ ಗಂಡು(ಗಂಡ) ಸ್ಪಂದಿಸಬೇಕಾದ ರೀತಿ ಇದು ಎಂದು ಇಡೀ ಗಂಡು ಕುಲಕ್ಕೆ ಸಂದೇಶ ಕೊಟ್ಟಿದ್ದಾರೆ ಆ ಕವಿ ಕಾಳಿದಾಸ ಲಿಂಗನಾಪುರ ಅವರಿಗೆ ನನ್ನ ಹೃದಯಾಂತರಾಳದ ಅಭಿನಂದನೆಗಳು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: