ಅಧ್ಯಯನಕ್ಕೆ ಹೊಸ ಮಾದರಿ ‘ಹಯ್ದರಾಬಾದ ಕರ್ನಾಟಕ’

ವಿನಯ ನಂದಿಹಾಳ

ಪುಸ್ತಕದ ಹೆಸರು- ಹಯ್ದರಾಬಾದ ಕರ್ನಾಟಕ   

ಲೇಖಕರು- ಬಸವರಾಜ ಕೊಡಗುಂಟಿ 

ಪ್ರಕಾಶನ- ಬಂಡಾರ ಪ್ರಕಾಶನ ಮಸ್ಕಿ     

ಸಮಕಾಲೀನ ಸಂದರ್ಭದಲ್ಲಿ ಎಲ್ಲ ಕ್ಷೇತ್ರಗಳ ಅಧ್ಯಯನದ ವ್ಯಾಪ್ತಿ ವಿಸ್ತೃತಗೊಳ್ಳುತ್ತಾ ಸಾಗುತ್ತಿದೆ. ಅಂತಹ ಅಧ್ಯಯನಕ್ಕೆ ಪೂರಕವಾಗುವ ಮಾಹಿತಿ ಒದಗಿಸುವ ಕೃತಿಗಳು ಅಷ್ಟೆ ಪ್ರಮಾಣದಲ್ಲಿ ರಚನೆಯಾಗುತ್ತಿಲ್ಲ. ಈ ಕಾರಣದಿಂದಾಗಿಯೇ ಸಂಶೋಧನೆಯಲ್ಲಿ ತೊಡಗಿಕೊಂಡವರಿಗೆ ಆಕರಗಳು ಇರುವ ಬಗ್ಗೆ ಸರಿಯಾದ ಮಾಹಿತಿ ಇರುವುದಿಲ್ಲ. ಇಂತಹ ಸನ್ನಿವೇಶಗಳನ್ನು ತಪ್ಪಿಸುವುದಕ್ಕಾಗಿ ಆಕರಜನಕ ಕೃತಿಗಳು ಹೆಚ್ಚಾಗಿ ರಚನೆಯಾಗಬೇಕಾದ ಸಂದರ್ಭವಿದು.

ಪ್ರಸ್ತುತ ಕೃತಿಯ ಲೇಖಕರಾದ ಬಸವರಾಜ ಕೊಡಗುಂಟಿ ಯವರ ಆಶಯವು ಸಹ ಇದಾಗಿದೆ. ಅಂತಹ ಒಂದು ಪ್ರಯತ್ನದ ಹಿನ್ನಲೆಯಲ್ಲಿ ‘ಹಯ್ದರಾಬಾದ ಕರ್ನಾಟಕ’ ಎಂಬ ಕೃತಿ ರಚನೆಯಾಗಿದೆ. ಹೈದ್ರಾಬಾದ ಕರ್ನಾಟಕ ಎಂದ ತಕ್ಷಣ ಅದೊಂದು ಹಿಂದುಳಿದ ಪ್ರದೇಶವೆಂಬ ಭಾವನೆ ಎಲ್ಲರಲ್ಲೂ ಉಳಿದುಕೊಂಡಿದೆ, ಅದು ವರ್ತಮಾನಕ್ಕೆ ಸಂಬಂಧಿಸಿದ್ದಿರಬಹುದು. ಆದರೆ ಈ ಪ್ರದೇಶದ ಸ್ಮೃತಿ ತುಂಬಾ ಶ್ರೀಮಂತಿಕೆಯಿಂದ ಕೂಡಿದ್ದಾಗಿದೆ. ಆದ್ದರಿಂದ ಈ  ಪ್ರದೇಶವನ್ನು ವಿವಿಧ ದೃಷ್ಟಿಕೋನಗಳಿಂದ ಅಧ್ಯಯನಕ್ಕೆ ಒಳಪಡಿಸಬಹುದಾದ ಹಲವು ಸಾಧ್ಯತೆಗಳನ್ನು ಈ ಕೃತಿ ತೆರೆದಿಡುತ್ತದೆ.

ಈ ಕೃತಿಯಲ್ಲಿ ಹೈದ್ರಾಬಾದ ಕರ್ನಾಟಕದ ಧಾರ್ಮಿಕ, ರಾಜಕೀಯ, ಸಾಹಿತ್ಯಿಕ ಇತಿಹಾಸ ಮತ್ತು ಸಾಹಿತ್ಯದ ಕೆಲವು ಸಾಮಾನ್ಯ ಗುಣಗಳು ಎಂಬ ಅಂಶಗಳನ್ನಿಲ್ಲಿ ಮುಖ್ಯವಾಗಿರಿಸಿಕೊಂಡು ಚರ್ಚಿಸಿದ್ದಾರೆ. ಮೊದಲನೆಯ ಅಧ್ಯಾಯದಲ್ಲಿ ಈ ಪ್ರದೇಶದ ಪ್ರಾಥಮಿಕ ಪರಿಚಯವನ್ನು ಮಾಡಿಕೊಡುತ್ತಾ, ಈ ಕೃತಿಯು ಹೈದ್ರಾಬಾದ ಕರ್ನಾಟಕದ ಹಿಂದುಳಿದಿರುವಿಕೆಯ ಬಗ್ಗೆ ಮಾತನಾಡುವುದಿಲ್ಲ, ಬದಲಿಗೆ ಈ ಭಾಗದ ಇತಿಹಾಸದ ಮಹತ್ವ ಸಂಗತಿಗಳನ್ನು ಪರಿಚಯಿಸುವುದರ ಜೊತೆಗೆ, ಹೆಚ್ಚಿನ ಅಧ್ಯಯನಕ್ಕೆ ಅವಕಾಶಗಳನ್ನು ಸೃಷ್ಟಿಸಿಕೊಡುವುದು ಈ ಕೃತಿಯ ಉದ್ದೇಶವಾಗಿದೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ಈ ಪ್ರದೇಶದ ಭೂಗೋಳ ಹಾಗೂ ಇತಿಹಾಸದ ಪೂರ್ವಕಾಲವನ್ನು ಪರಿಚಯಿಸುತ್ತಾರೆ. ಹೈದ್ರಬಾದ ಕರ್ನಾಟಕದ ಇತಿಹಾಸ ಪೂರ್ವಕಾಲದ ಬಗೆಗೆ ಮಾತನಾಡುತ್ತಾ, ಏಷಿಯಾದಲ್ಲಿಯೇ ಬಹು ಹಳೆಯ ಮಾನವ ವಸತಿ ಕೇಂದ್ರವನ್ನು ಈ ಪ್ರದೇಶ ಹೊಂದಿದೆ ಎಂಬುದನ್ನು ತಿಳಿಸುತ್ತಾರೆ. ಹಳೆ, ನಡು ಮತ್ತು ಹೊಸ ಶಿಲಾಯುಗಗಳ ಅವಶೇಷಗಳು ಇಲ್ಲಿ ದೊರಕಿದ್ದು, ಹರಪ್ಪಾ ನಾಗರೀಕತೆಯೊಡನೆ ಈ ಪ್ರದೇಶ ಸಂಪರ್ಕ ಹೊಂದಿರಬಹುದೆಂಬ ಊಹೆಯನ್ನು ವ್ಯಕ್ತಪಡಿಸಿದ್ದಾರೆ.

ಮುಂದಿನ ಅಧ್ಯಾಯದಲ್ಲಿ ಈ ಪ್ರದೇಶ ಹೊಂದಿದ್ದ ಧಾರ್ಮಿಕವಾದ ಮಹತ್ವದ ಅಂಶಗಳನ್ನು ಆಧಾರಸಹಿತ ಚರ್ಚಿಸಿದ್ದಾರೆ. ಭಾರತದ ಬಹುತೇಕ ಧರ್ಮಗಳು ಇಲ್ಲಿ ಸಮ್ಮಿಳಿತವಾಗಿ ಬದುಕ್ಕಿದ್ದು, ಅದು ಈ ಪ್ರದೇಶದ ವಿಶಿಷ್ಟಸಂಗತಿ. ಧರ್ಮಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಮಾಡುವ ಪ್ರಯತ್ನಗಳಲ್ಲಿ ಬೌದ್ಧಿಕ ಮತ್ತು ಭೌತಿಕ ದಾಳಿಗಳನ್ನು ಮಾಡುತ್ತವೆ. ಅವುಗಳಲ್ಲಿ ಒಂದು ಶಾಂತಿ ಇನ್ನೊಂದು ಹಿಂಸೆ, ಇಂತಹ ತಂತ್ರವನ್ನು ಈ ಪ್ರದೇಶದಲ್ಲಿ  ಪ್ರಯೋಗಿಸಿದರ ಕುರಿತು ಮಾತನಾಡುತ್ತಾರೆ. ನಿರಂತರವಾದ ಅಸ್ತಿತ್ವದ ಹೋರಾಟದಲ್ಲಿ, ನೆಲದ ದೇವರುಗಳು ತಮ್ಮ ಬಂಡಾಯ ಮನೋಧರ್ಮದಿಂದ ನೆಲೆ ಕಂಡುಕೊಂಡು ಗಟ್ಟಿಯಾಗಿ ನೆಲೆ ನಿಂತ ರೀತಿ ಅನನ್ಯ. ಈ ನೆಲದ ದೇವರುಗಳ  ಬಗೆಗೆ ಮಾತನಾಡುತ್ತಾ ಯಲ್ಲಮ್ಮನ ಬಗ್ಗೆ ತುಸು ಹೆಚ್ಚಿಗೆ ಚರ್ಚಿಸಿದ್ದಾರೆ.

ಮೊದಲನೆಯದಾಗಿ ಈ ನೆಲದ ದೇವರು ಯಲ್ಲಮ್ಮ ಮತ್ತು ಇತರ ದೇವರುಗಳ ಬಗ್ಗೆ, ಎರಡನೆಯದಾಗಿ ಈ ನೆಲದಲ್ಲಿ ಬೆಳೆದ ಲಾಕುಳ ಪಂತಗಳು, ಮೂರನೆಯದಾಗಿ ವೀರಶೈವ ಧರ್ಮ, ನಾಲ್ಕನೆಯದಾಗಿ ಹೊರಗಿನಿಂದ ಬಂದ ಧರ್ಮ, ಪಂಥಗಳು ಇಲ್ಲಿ ಬಾಳಿದ ಕುರಿತು, ಹೊರಗಿಂದ ಬಂದ ಎಲ್ಲ ಧರ್ಮ, ದೇವರು, ತಾತ್ವಿಕ ನಾಯಕರೊಂದಿಗೆ ಯಲ್ಲಮ್ಮ ಹೋರಾಟ ಮಾಡಿ ಬದುಕಿದ ಕುರಿತು, ತುಂಬಾ ಅಚ್ಚರಿಯ ವಿಷಯಗಳನ್ನು ಇಲ್ಲಿ ತೆಗೆದುಕೊಂಡಿದ್ದಾರೆ. ಬರಿ ಸಂಘರ್ಷವಲ್ಲದೆ ಇತರ ಧರ್ಮಗಳಾದ ಬೌದ್ಧ, ಜೈನ, ಇಸ್ಲಾಂ, ಕ್ರಿಶ್ಚಿಯನ್ ಧರ್ಮಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಬಾಳಿರುವುದು ವಿಶೇಷವಾಗಿದೆ. ಒಟ್ಟಿನಲ್ಲಿ ಹೈದ್ರಾಬಾದ ಕರ್ನಾಟಕದಲ್ಲಿ ಎಲ್ಲ ಧರ್ಮಗಳು ತಮ್ಮ ಅಸ್ತಿತ್ವ ಕಂಡುಕೊಳ್ಳಲು ಮಾಡಿದ ಪ್ರಯತ್ನಗಳು, ಅವುಗಳ ತಾತ್ವಿಕ ವಾಗ್ವಾದ, ಜನರನ್ನು ಮೆಚ್ಚಿಸಲು ನಡೆಸಿದ ಕಸರತ್ತುಗಳು, ತಮ್ಮದೇಯಾದ ಗಟ್ಟಿ ನೆಲೆ ಕಂಡುಕೊಂಡ ಹೆಣ್ಣು ದೇವರುಗಳು, ಇಲ್ಲಿಯ ಧಾರ್ಮಿಕ ಪ್ರದೇಶಗಳು, ಶಿಲ್ಪಗಳು, ದೇವಸ್ಥಾನಗಳು ಇವೆಲ್ಲದರ ಬಗೆಗೆ ಆಧಾರಪೂರ್ವಕವಾಗಿ ಈ ಅಧ್ಯಾಯದಲ್ಲಿ ಚರ್ಚಿಸಿದ್ದಾರೆ.

ರಾಜಕೀಯ ಇತಿಹಾಸವನ್ನು ಚರ್ಚಿಸುತ್ತಾ ಅಶೋಕನ ಶಾಸನಗಳಿಂದ ಆರಂಭಿಸಿ, ಅಶೋಕನ ಆಳ್ವಿಕೆಯಲ್ಲಿ ಈ ಪ್ರದೇಶವಿತ್ತು ಅದಕ್ಕೆ ಹಲವು ದಾಖಲೆಗಳಿವೆ ಎಂದು ತಿಳಿಸುತ್ತಾರೆ. ಮೌರ್ಯರು, ಶಾತವಾಹನರು, ಬಾದಾಮಿ ಚಾಲುಕ್ಯರು ಈ ಪ್ರದೇಶವನ್ನು ಆಳಿದ್ದು, ರಾಷ್ಟ್ರಕೂಟರ ಕಾಲದಲ್ಲಿ ನಡೆದ ವಿದ್ವತ್ತಿನ ಕೆಲಸಗಳು, ಇವರ ಕಾಲದಲ್ಲಿ ಕನ್ನಡ ಭಾಷೆ ಆಡಳಿತ ಭಾಷೆಯಾದದ್ದು, ಅದನ್ನು ಮುಂದುವರಿಸಿದ ಕಲ್ಯಾಣ ಚಾಲುಕ್ಯರ ಬಗ್ಗೆ ಮಾತನಾಡುತ್ತಾರೆ. ಅವರ ಕಾಲದಲ್ಲಿ ನಡೆದ ಬಹುದೊಡ್ಡ ಸಾಮಾಜಿಕ ಚಳುವಳಿಯ ವಿವರಗಳಿವೆ. ಸೇವುಣರ ಆಡಳಿತದ ನಂತರ ದೆಹಲಿ ಆಡಳಿತ ಪ್ರದೇಶಕ್ಕೆ ಇದು ಸೇರಿಕೊಂಡಿದ್ದರ ಕುರಿತು ವಿವರಿಸಿದ್ದಾರೆ. ಬಹುಮನಿ, ವಿಜಯನಗರ, ಆದಿಲ್ಶಾಹಿಗಳು, ಸುರುಪುರ ದೊರೆಗಳ ಆಡಳಿತದ ಜೊತೆಗೆ ವಿವಿಧ ಸಂಸ್ಥಾನಗಳು ನಡೆಸಿದ ಆಳ್ವಿಕೆಯನ್ನು ಪ್ರಸ್ತಾಪಿಸುತ್ತಾರೆ. ಈ ಪ್ರದೇಶವನ್ನು ಆಳಿದ ಮನೆತನಗಳು ಈ ಭಾಗದಲ್ಲಿ ನಡೆಸಿದ ಸಾಂಸ್ಕೃತಿಕ ಚಟುವಟಿಕೆಗಳ ಸ್ಥೂಲ ರೂಪವನ್ನು ಇದರಲ್ಲಿ ಕಾಣಬಹುದು.

ಸಾಹಿತ್ಯಿಕ ಇತಿಹಾಸ ಎಂಬ ಅಧ್ಯಾಯದಲ್ಲಿ, ಬರವಣಿಗೆಯ ಇತಿಹಾಸ ಹಾಗೂ ಸಾಹಿತ್ಯಿಕ ಇತಿಹಾಸ ಎಂಬ ಎರಡು ಭಾಗ ಮಾಡಿಕೊಂಡಿದ್ದಾರೆ. ಬರವಣಿಗೆ ಇತಿಹಾಸದಲ್ಲಿ ಇಲ್ಲಿಯ ಶಾಸನಗಳನ್ನು ಪ್ರಸ್ತಾಪಿಸಿ, ಸಾಹಿತ್ಯಿಕ ಇತಿಹಾಸದಲ್ಲಿ ಕನ್ನಡದಲ್ಲಿ ದೊರೆತ ಹಳೆಯ ಕೃತಿ ಕವಿರಾಜಮಾರ್ಗ, ಅದು ಸಂಸ್ಕೃತ ಕಾವ್ಯಮೀಮಾಂಸೆಯ ವಿರುದ್ಧ ಬಂಡಾಯವೆದ್ದು ಪರ್ಯಾಯಮಾರ್ಗ ಸೃಷ್ಟಿಸಿದ ಕೃತಿಯಾಗಿದೆ. ಆ ರೀತಿಯ ಪರಂಪರೆ ಇಲ್ಲಿಯವರೆಗೂ ಬೆಳೆದು ಬಂದ ಕ್ರಮವನ್ನು ವಿವರಿಸುತ್ತಾರೆ. ಅದು ಕನ್ನಡದ ಬೌದ್ಧಿಕ ವಲಯವನ್ನು ಪ್ರಭಾವಿಸಿದ ಪರಿ ತುಂಬಾ ಗಾಢವಾದದ್ದು. ವಚನ ಸಾಹಿತ್ಯದ ಪ್ರಧಾನ ಕೇಂದ್ರ ಈ ಪ್ರದೇಶವಾಗಿದ್ದು ಇಲ್ಲಿಯ ವಚನಕಾರರನ್ನು ಹೆಸರಿಸುತ್ತಾರೆ. ವಚನ ಪರಂಪರೆ ಪಸರಿಸಿದ ಬಗೆ ಹರಿಹರ, ರಾಘವಾಂಕ, ಚಾಮರಸ ಇವರಲ್ಲಿ ಬೇರೆ ಸಾಹಿತ್ಯ ಪ್ರಕಾರಗಳಲ್ಲಿ ಮುಂದುವರೆದು ವಿಸ್ತರಣೆಗೊಂಡಿದ್ದು ವಿಶೇಷವಾಗಿದೆ.

ಇಲ್ಲಿಯ ಭಕ್ತಿ ಪರಂಪರೆ ಪುರಾಣಗಳಾಗಿ ಬೆಳೆದಿದೆ, ಅದಕ್ಕೆ ಸಾವಳಗಿ ಶಿವಲಿಂಗನ ಚರಿತ್ರೆಯಂತಹ ಹಲವು ಉಲ್ಲೇಖಗಳನ್ನು ನೀಡುತ್ತಾರೆ. ಕೀರ್ತನ ಸಾಹಿತ್ಯ ವೈದಿಕ ಸಾಹಿತ್ಯದ ಬಹುದೊಡ್ಡ ಭಾಗವಾಗಿ ಜನಸಾಮಾನ್ಯರ ಬಳಿಗೆ ಹೋದ ಕುರಿತು ಚಚರ್ಿಸುತ್ತಾರೆ. ರಾಯಚೂರು ಪ್ರದೇಶ ಕೀರ್ತನ ಸಾಹಿತ್ಯಕ್ಕೆ ತೊಟ್ಟಿಲು ಎಂದು ಕರೆಸಿಕೊಳ್ಳುವುದು ಈ ಭಾಗದ ಹೆಮ್ಮೆಯಾಗಿದೆ. ಸಂಗೀತ ಕ್ಷೇತ್ರದಲ್ಲಿ ಕೀರ್ತನೆಗಳು ಬಹುದೊಡ್ಡ ಆಸ್ತಿಯಾಗಿ ನಿಲ್ಲುತ್ತವೆ. ರಾಘವೇಂದ್ರ, ಜಗನ್ನಾಥದಾಸ, ಗೋಪಾಲದಾಸ ಈ ಪ್ರದೇಶದವರೆ. ಇಲ್ಲಿಯ ಸಂಪಾದನ ಕಾರ್ಯ, ಪುರಾಣ ಸಾಹಿತ್ಯ, ತತ್ವಪದ, ಬಯಲಾಟ ಪಠ್ಯಗಳು, ಜನಪದ ಸಾಹಿತ್ಯ, ಜನಪದ ಮಹಾಕಾವ್ಯಗಳು, ಇವೆಲ್ಲದರ ಬಗೆಗೆ ಚರ್ಚಿಸುತ್ತಾರೆ. ಸಾಹಿತ್ಯದ ಕೆಲವು ಸಾಮಾನ್ಯ ಲಕ್ಷಣಗಳು ಎಂಬ ಅಧ್ಯಾಯದಲ್ಲಿ  ಭಕ್ತಿ ಮತ್ತು ಬಂಡಾಯ ಎಂಬ ಎರಡು ವಿಶಿಷ್ಟ ಲಕ್ಷಣಗಳನ್ನು ಒಳಗೊಂಡು ಈ ಭಾಗದ ಸಾಹಿತ್ಯ ರಚನೆಯಾಗಿದೆ. ಅಧಿಕಾರದ ಎಲ್ಲ ಕೇಂದ್ರಗಳನ್ನು ವಿರೋಧಿಸುವ ಸಾಹಿತ್ಯ, ಜೊತೆಗೆ ಬೌದ್ಧಿಕ ಕೇಂದ್ರಗಳನ್ನು ಪ್ರಶ್ನಿಸುವುದು ವಿಶಿಷ್ಟವಾಗಿದೆ. ಅಂತರಂಗದ ಪ್ರಕ್ರಿಯೆಯಾಗಿದ್ದ ಭಕ್ತಿಯನ್ನು ಸಾಮಾಜಿಕ ಪ್ರಜ್ಞೆಯನ್ನಾಗಿಸುವಲ್ಲಿ ಈ ಭಾಗದ ಕೊಡುಗೆ ಮಹತ್ವವಾದದ್ದು.

ಪ್ರಾದೇಶಿಕ ಅಧ್ಯಯನಗಳ ಅವಶ್ಯಕತೆಯಿರುವ ಸಂದರ್ಭದಲ್ಲಿ ಈ ಕೃತಿ ಮೌಲಿಕವಾಗಿದೆ. ಒಂದು ಪ್ರದೇಶವನ್ನು ಅಧ್ಯಯನಕ್ಕೆ ಆಯ್ದುಕೊಂಡಾಗ ಆ ಪ್ರದೇಶದ ಅಧ್ಯಯನದ ಎಲ್ಲ ಅವಕಾಶಗಳನ್ನು ತೆರೆದಿಡುವಂತಹ ಮಹತ್ವದ ಕೃತಿಗಳಲ್ಲಿ ಇದು ಒಂದಾಗಿದೆ. ಹೈದ್ರಾಬಾದ ಕರ್ನಾಟಕದ ಹಲವು ಮಹತ್ವದ ಸಂಗತಿಗಳನ್ನು ಪರಿಚಯಿಸುವುದರ ಜೊತೆಗೆ ವಿವಿಧ ದೃಷ್ಟಿಕೋನಗಳಿಂದ ಹೇಗೆ ಅಧ್ಯಯನ ಮಾಡಬಹುದು ಎಂಬ ಹಲವು ಹಾದಿಗಳನ್ನು ತೆರದಿಡುತ್ತದೆ.

‍ಲೇಖಕರು avadhi

March 20, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: