ಮೇಘನಾ ಸುಧೀಂದ್ರ ಅಂಕಣ: “ಇಂದೂ? ಪಾಕಿ? “

“ಟ್ರೈನ್ಸ್ ಟು ಕಾರಡೆಡ್ಯೂ” ಎಂದು ಹುಡುಕಿ ನೋಡಿದಳು. ಬಾರ್ಸಾದಿಂದ ೪೭ ನಿಮಿಷ ಟ್ರೈನಿನಲ್ಲಿ ಹೋಗಬೇಕು, ರೆನ್ಫೆ ತೆಗೆದುಕೊಳ್ಳಬೇಕು ಎಂದು ಬಂದಿತ್ತು. “ಅರೆ ಈ ಹುಡುಗಿ ಬಾರ್ಸಾದಿಂದ ಅಷ್ಟು ದೂರ ಇದ್ದೂ ತನ್ನ ಕೆಲಸಗಳನ್ನ ಇಷ್ಟು ಅಚ್ಚುಕಟ್ಟಾಗಿ ಮಾಡುತ್ತಾಳಲ್ಲಾ” ಎಂದು ಅಂದುಕೊಂಡು ಟ್ರೈನಿಗೆ ಕಾಯುತ್ತಾ ನಿಂತಳು. ಕಾರ್ಡೆಡ್ಯೂ ಬಾರ್ಸಿಲೋನಾದಿಂದ ೪೦ ಕಿ  ಮೀ ದೂರ ಇರುವ ಹಳ್ಳಿ. ಅಲ್ಲಿಂದ ಸುಮಾರು ಜನ ಕತಲಾನ್ ಹೋರಾಟಗಾರರು ಬಂದಿದ್ದಾರೆ. ತುಂಬಾ ಜನ ವಿದ್ಯಾವಂತರು ಬೇರೆ ದೇಶಕ್ಕೆ ಹೋಗಿ ಓದಿಕೊಂಡು ಮತ್ತೆ ವಾಪಸ್ಸು ಇಲ್ಲೇ ಬಂದಿದ್ದಾರೆ. ಇದರ ಬಗ್ಗೆ ಎಲೆನಾ ಯಾವಾಗಲೂ ಹೇಳುತ್ತಿದ್ದಳು. “ನೀನು ಇಲ್ಲೆಲ್ಲಾ ಕಲಿತು ನಿನ್ನ ದೇಶಕ್ಕೆ ಹೋಗಿ ಏನಾದರೂ ಮಾಡಿದರೇ ಮಾತ್ರ ನಿನ್ನ ವಿದ್ಯೆ ಸಾರ್ಥಕ, ನೋಡು ನಮ್ಮಪ್ಪ ಆಕ್ಸ್ಫರ್ಢಿನಲ್ಲಿ ಓದಿದ್ದರೂ ಮತ್ತೆ ಇಲ್ಲೇ ವಾಪಸ್ಸು ಬಂದರು, ನಮ್ಮ ಕಾಲೇಜಿನ ಹೆಡ್ ಸಹ ಸ್ಟಾಂಫರ್ಡಿನಲ್ಲಿ ಓದಿದರೂ ಮತ್ತೆ ಇಲ್ಲೇ ಬಂದು ಒಂದು ವಿಶ್ವವಿದ್ಯಾಲಯವನ್ನ ಸ್ಥಾಪಿಸಿದ್ದಾರೆ, ಅವೆಲ್ಲಾ ಇರಬೇಕು, ಇಲ್ಲದಿದ್ದರೆ ಕಷ್ಟ, ನಾವು ಕಲಿತಿದ್ದನ್ನ ನಮ್ಮ ಜನರಿಗೆ ಹೇಳಿಕೊಡದಿದ್ದರೆ ಏನು ಸಾರ್ಥಕತೆ, ಬರೀ ನಾವಷ್ಟೆ ಉದ್ಧಾರ ಆಗೋದು ಸರಿಯಲ್ಲ ಅಲ್ವಾ” ಎಂದಿದ್ದಳು.

ಇದನ್ನ ನೆನಪಿಸಿಕೊಂಡೇ ಹುಡುಗಿ ರೈಲಿಗೆ ಹತ್ತಿದ್ದಳು. ಆದಷ್ಟು ತನ್ನ ಅಪಾರ್ಟ್ಮೆಂಟಿನವರು ಹೇಳಿದಷ್ಟೂ ವಿಷಯಗಳನ್ನ ಸಣ್ಣ ಪಾಕೇಟು ಪುಸ್ತಕದಲ್ಲಿ ಬರೆದುಕೊಂಡು ಅದನ್ನ ಎಲೆನಾ ಮುಂದು ಗಿಣಿ ಪಾಠ ಒಪ್ಪಿಸುವ ಕಾರ್ಯಕ್ಕೆ ತಯಾರಿಮಾಡಿಕೊಳ್ಳುತ್ತಿದ್ದಳು. ಬಾರ್ಸಾ ಮೆಟ್ರೋಗಿಂತ ಇಲ್ಲಿ ಹೆಚ್ಚು ಸಂಗೀತಗಾರರು, ಮತ್ತು ಭಿಕ್ಷುಕರು ತುಂಬಿದ್ದರು. ಒಮ್ಮೊಮ್ಮೆ ತನ್ನ ದೇಶದ ಟ್ರೇನುಗಳೇ ಎಷ್ಟೋ ಸುಭದ್ರ ಎಂದುಕೊಳ್ಳುತ್ತಿದ್ದಳು. ಹತ್ತತ್ತು ನಿಮಿಷಕ್ಕೂ ನಿಮ್ಮ ಪರ್ಸು, ಫೋನ್ ಮತ್ತು ಲಗೇಜಿಗೆ ನೀವೇ ಜವಾಬ್ದಾರರು ಎಂದು ಹೇಳುತ್ತಲೇ ಇದ್ದರು. ಅಲ್ಲೆಲ್ಲೋ ಜಿಪ್ಸಿ ಸಂಗೀತ, ಮತ್ತೆಲ್ಲೋ ಗಾಯಿತ್ರಿ ಮಂತ್ರ, ಇನ್ನೆಲ್ಲೋ “ನನಗೆ ದಾನ ಮಾಡಿದರೆ ನಿಮಗೆ ಸ್ವರ್ಗ ಖಂಡಿತ ಪ್ರಾಪ್ತಿ” ಎಂದು ಹೇಳುವ ಭಿಕ್ಷುಕರ   ಮಾತುಗಳನ್ನು ಕೇಳಿ ಹುಡುಗಿ ಒಮ್ಮೆಲೆ “ಇಲ್ಲೆಲ್ಲಾ ಹೀಗೆಲ್ಲಾ ಆಡುತ್ತಾರಾ” ಎಂದು ಸುಮ್ಮನೆ ಫೋನ್ ನೋಡಿಕೊಂಡಿದ್ದಳು.

“ಇಂದೂ ?, ಪಾಕಿ ? ” ಎಂದು ಯಾರೋ ಒಬ್ಬ ಭುಜ ತಟ್ಟಿದ. ತನ್ನಷ್ಟೆ ವಯಸ್ಸಿನ ಹುಡುಗನ್ನನ್ನ ಕಂಡು, ಇವನು ಯಾವನೋ ದೊಡ್ದ ಕಳ್ಳನಿರಬೇಕು, ಇಲ್ಲ ಹೆಣ್ಣುಮಕ್ಕಳನ್ನ ಏನಾದರು ಮಾಡಲು ಬಂದಿರಬೇಕು ಎಂದುಕೊಂಡೇ “ಸೀ ?” ಎಂದಳು. “ಸ್ವಲ್ಪ ಸರಿದರೆ ನಾನೂ ಇಲ್ಲಿ ಕೂರಬಹುದು” ಎಂದ, “ಇಡೀ ಬೋಗಿ ಖಾಲಿ ಇದೆ, ಬೇರೆ ಎಲ್ಲಾದರೂ ಕೂತುಕೊಳ್ಳಿ” ಎಂದು ಬೈದು ಆ ಆಶಿಕಿಯನ್ನು ಆ ಕಡೆ ಓಡಿಸಿದಳು.

“ಮುಂದುವರೆದ ದೇಶ ಅಂತೆ, ಇವರ ತಲೆ ಜಗತ್ತಿಗೆ ಸ್ವಾತಂತ್ರ್ಯ ಬಂದರು ಹೆಣ್ಣುಮಕ್ಕಳನ್ನ ಛೇಡಿಸುವುದು, ಅವರ ಮೈ ಮೇಲೆ  ಬೀಳುವುದು ಯಾವತ್ತೂ ಕಡಿಮೆಯಾಗುವುದಿಲ್ಲ. ಇವರ ಕಥೆ ಇಷ್ಟೆ, ಒಟ್ಟಿನಲ್ಲಿ ಹೆಣ್ಣುಮಕ್ಕಳು ಎಲ್ಲಿ ಹೋದರೂ ಯಾವತ್ತೂ ಸೇಫ್ ಅಲ್ಲ ಅಷ್ಟೆ” ಎಂದು ಬೈದುಕೊಂಡೇ ಕೂತಳು.

ಮತ್ತೆ ಆ ಆಶಿಕಿ, “ನಿನ್ನನ್ನ ಟೀವಿಯಲ್ಲಿ ನೋಡಿದೆ ಅದಕ್ಕೆ ನೀನು ಭಾರತದವಳಾ ಪಾಕಿನವಳಾ ಎಂದು ಕೇಳಿದೆ ಅಷ್ಟೆ, ನನ್ನ ದೇಶದ ಬಗ್ಗೆ ನಿನಗೆ ಇಷ್ಟೊಂದು ಕಾಳಜಿ ಕಂಡು ನನಗೆ ಬಹಳ ಖುಷಿಯಾಯಿತು ಅದಕ್ಕಾಗಿ ಮಾತಾಡಿಸಲು ಬಂದೆ” ಎಂದು ಹೇಳಿದ.

“ಕಾಳಜಿನಾ, ಅಂಥೆದೆಲ್ಲಾ ಏನಿಲ್ಲ ನನಗೆ, ನನ್ನ ಮನೆಯವರು, ಅಪಾರ್ಟ್ಮೆಂಟಿನವರು ಬಾಯಿಗೆ ಬಂದ ಹಾಗೆ ಬೈದರು, ಅವರೆಲ್ಲಾ ಈ ಹೋರಾಟ ನೋಡಿ ಹತಾಶರಾಗಿದ್ದಾರೆ. ನನ್ನ ಗೆಳತಿಯೊಬ್ಬಳು ಈ ಹುಚ್ಚು ಹಿಡಿಸಿದ್ದಳು ಅದಕ್ಕೆ ಅವಳನ್ನ ಕಂಡ ಕಂಡಲ್ಲಿ ಫಾಲೋ ಮಾಡುತ್ತಿದ್ದೆ. ಅಷ್ಟೆ, ನಿಮ್ಮ ದೇಶ ನಿಮ್ಮ ಸಮಸ್ಯೆ, ನನಗೇನಾಗಬೇಕು, ನಾನು ಯಾವತ್ತಿದ್ದರೂ ಈ ದೇಶ ಬಿಟ್ಟು ಹೋಗುವವಳು, ಮುಂದೆ ಬಾರ್ಸಾ ಬಗ್ಗೆ ಹೇಳು ಎಂದರೆ ನಾನು ರಾಝ್ ಮತಾಝ್ ಬಾರ್ ಮತ್ತು ಪ್ಲಾಸ ಕತಲೂನ್ಯ ಎನ್ನುತ್ತೇನೆ ಹೊರತಾಗಿ ಮತ್ತೇನ್ನನ್ನೂ ಅಲ್ಲ, ನಿಮ್ಮ ಜನ ಸ್ವಲ್ಪ ವಿಚಿತ್ರ . ಏನೋ ಅಯ್ಯೋ ಪಾಪ ನಿಮ್ಮ ಕಥೆ ಕೇಳೋಣ ಎಂದು ಕೂತರೆ ಸುಮ್ಮನೆ ನನಗೇನು ಗೊತ್ತಿಲ್ಲ ಅನ್ನೋ ಥರ ಮಾಡಿಬಿಟ್ಟರು, ಬಿಟ್ಟಾಕಿ, ನಮ್ಮ ದೇಶದಲ್ಲಿ ನಮ್ಮ ಜನಕ್ಕೆ ನಮ್ಮ ಇತಿಹಾಸ ಗೊತ್ತಿಲ್ಲ, ನಿಮ್ಮದು ಕಟ್ಟಿಕೊಂಡು ನನಗೇನಾಗಬೇಕು” ಎಂದು ತನ್ನ ಅಪಾರ್ಟ್ಮೆಂಟಿನ ತಾತಂದಿರ ಮೇಲಿನ ಕೋಪವನ್ನ ಇದ್ಯಾವುದೋ ಹುಡುಗನ ಮೇಲೆ ಎತ್ತಾಕಿದಳು ಹುಡುಗಿ.

ಅವನು ಮಾತ್ರ ನಕ್ಕು, “ನೀನಷ್ಟೆಲ್ಲಾ ನಮ್ಮ ದೇಶದ ಬಗ್ಗೆ ಅಂದುಕೊಳ್ಳುತ್ತೀಯಲ್ಲಾ, ನಿನ್ನ ಮನಸಿನಲ್ಲಿ ಒಂದು ಭಾವನೆಯನ್ನು ನನ್ನ ದೇಶ ನಿನಗೆ ಕೆರಳಸಿದ್ದೆಯೆಲ್ಲ ಅದಕ್ಕಿಂತ ಇನ್ನೇನು ಬೇಕು, ನನ್ನ ದೇಶದ ಹೋರಾಟ ನಿನಗೆ ತಟ್ಟಿದ್ದು ಖುಷಿಯಾಯಿತು, ಏನೂ ಗೊತ್ತಿಲ್ಲದವರು ಯಾವುದರ ಸಂಬಂಧವಿಲ್ಲದವರಿಗೂ ಈ ಸ್ವಾಯತ್ತತೆಯ ಕಲ್ಪನೆ ಗೊತ್ತಾದ್ದದ್ದು ನನಗೆ ಖುಷಿ. ನಿನ್ನ ದೇಶವೂ ರಾಜ್ಯಗಳ ಒಕ್ಕೂಟ ಅಲ್ವಾ , ನನಗೆ ನೀನು ಇಂದೂ ಅನ್ನಿಸುತ್ತಿದೆ ” ಅಂದ. “ಹಾ ಏನದು, ನನ್ನ ದೇಶ ಭಾರತ ” ಎಂದಳು  ಹುಡುಗಿ. “ಅದು ಗೊತ್ತು ಆದರೆ ನಿನ್ನ ದೇಶ ರಾಜ್ಯಗಳ ಒಕ್ಕೂಟ ಅಲ್ವಾ” ಅಂದಾಗ, “ಇದ್ಯಾವ ಸೀಮೆ ಅಳಿಯ ಅಲ್ಲ ಮಗಳ ಗಂಡ ಅಂಥ ಹೇಳಿದ್ದನೇ ಹೇಳುತ್ತಿದ್ದಾನೆ ” ಎಂದು , “ಗುರು ಏನು ನಿನ್ನ ಕಥೆ, ಏನು ಹೇಳಬೇಕು ನನ್ನ ದೇಶದ ಬಗ್ಗೆ ನೀನು ಏನೂ ನೆಟಗಿಲ್ಲ ಅಂತಾನ, ಎಲ್ಲಾ ನೆಟ್ಟಗಿದೆ ಅಂತಾನಾ ಹೇಳು ಬೇಗ” ಎಂದಳು.

“ಇಲ್ಲ ನಾನು ಹೇಳೋಕೆ ಹೊರಟಿರೋದು ನಿನ್ನ ದೇಶದಲ್ಲಿ ಒಂದೊಂದು ರಾಜ್ಯಕ್ಕೂ ಒಂದೊಂದು ಭಾಷೆಯಿದೆ ನಿನ್ನ ದೇಶದಲ್ಲಿ ಅಧಿಕೃತ ಭಾಷೆಯೇ ಎಷ್ಟೊಂದು ಇದೆ… ಆಮೇಲೆ… ” ಎನ್ನುತ್ತಿರುವಾಗಲೇ “ಹಲೋ ಬಾಸ್ ನನ್ನ ದೇಶದ ಬಗ್ಗೆ ನನಗೆ ಪಿಟೀಲು ಕುಯ್ಯಬೇಡ, ನನಗದು ಗೊತ್ತು, ನಮ್ಮ ಕಡೆ ೫೦ ಕಿ ಮೀ ಗೊಂದೊಂದು ಭಾಷೆ ಮಾತಾಡುತ್ತಾರೆ, ಏನೀವಾಗ ನೀಂದು?” ಎಂದು ಮರುಪ್ರಶ್ನೆ ಹಾಕಿದ ಮೇಲೆ, “ಹಾ ಅದೇ ಹೇಳೋಕೆ ಹೊರಟಿದ್ದು, ನಿನ್ನ ಭಾಷೆಯನ್ನು ಕಡೆಗಣಿಸಿ ಮತ್ತೊಂದು ಭಾಷೆಯನ್ನು ನಿನ್ನ ಮೇಲೆ ಹೇರಿಕೆ ಮಾಡಿದರೆ ಏನು ಮಾಡುತ್ತೀಯ” ಎಂದು ಕೇಳಿದ , “ಕಪಾಳಕ್ಕೆ ಎರಡು ಬಾರಿಸಿ ನನ್ನ ಭಾಷೆಯನ್ನ ಹೇಳುಕೊಡುತ್ತೇನೆ” ಎಂದಳು ಹುಡುಗಿ.

“ಇಲ್ಲೂ ಇದೇ ೨೦೧೪ರಲ್ಲಿ ಆಗಿದ್ದು, ಅದಕ್ಕೂ ಮುಂಚೆ ೨೦೦೯ ಮತ್ತು ೨೦೧೧ರಲ್ಲಿ  ಅನಧಿಕೃತ ಜನಾಭಿಪ್ರಾಯ ಸಂಗ್ರಹವಾಗಿತ್ತು. ಅದರಲ್ಲಿ ಮುಕ್ಕಾಲಷ್ಟು ಜನ ಸ್ವಾತಂತ್ರ್ಯ ಬೇಕು ಎಂದೇ ಹೇಳಿದ್ದರು. ನನ್ನನ್ನ ಕೇಳದೇ ಯಾವುದ್ಯಾವುದೋ ದೇಶಕ್ಕೇ ಸೇರಿಸಬೇಡಿ ಎಂದು ದೊಡ್ಡ ಪ್ರತಿಭಟನೆಯನ್ನೂ ಮಾಡಲಾಯಿತು. ೨೦೧೨ರಲ್ಲಿ “ಕತಲೂನ್ಯ , ಮುಂದಿನ ಯೂರೀಪಿನ ರಾಷ್ಟ್ರ ಎಂದೂ ಘೋಷಿಸಲಾಯಿತು. ಆಮೇಲೆ ಸಿ ಐ ಯು ಮತ್ತು ಈ ಆರ್ ಸಿ ಪಾರ್ಟಿಗಳು ಒಡಂಬಡಿಕೆ ಮಾಡಿಕೊಂಡು ನಮ್ಮ ದೇಶಕ್ಕೆ ಸ್ವಾತಂತ್ರ್ಯವನ್ನ ಪಡೆಯುವುದಕ್ಕೆ ಸಾಂವಿಧಾನಿಕವಾಗಿ ಹೋರಾಡಬೇಕಾಯಿತು.”

“ಆಮೇಲೆ ನಮ್ಮ ರಾಷ್ಟ್ರದ ಸಂಪತ್ತು ನಮ್ಮದೇ ಎಂದು ಘೋಷಿಸಿಕೊಂಡೆವು, ಸಮುದ್ರ ತೀರವಾದ್ದರಿಂದ ತೈಲ, ನಿಧಿ ನಿಕ್ಷೇಪಗಳೆಲ್ಲವೂ ಪೂರ್ತಿ ನಮ್ಮದೇ ಎಂದು ಘೋಷಿಸಬೇಕಾಯಿತು. ಸ್ವಾತಂತ್ರ್ಯ ಬಂದ ನಂತರ ನಮ್ಮ ಪಾಲು ನಿಮ್ಮ ಪಾಲು ಎಂದು ಯಾರೂ ಮಾತಾಡಬಾರದು ಎಂದು. ಅದನ್ನ ಕಾಯುವುದಕ್ಕೆ ಒಬ್ಬ ಶಕ್ತಿಶಾಲಿ ಮನುಷ್ಯ ಬೇಕಾಯಿತು. ಅದಕ್ಕೆ ಊರಿನ ಸಾಹುಕಾರರು ಬಂದು ಅದರ ಬಗ್ಗೆ ಮಾತಾಡಿದ್ದು. ಇದು ಸಾರ್ವಜನಿಕ ಆಸ್ತಿಯಾದರೆ ಸ್ಪೇನ್ ಸಹ ಪಾಲು ಕೇಳಲು ಬರತ್ತೆ, ಒಬ್ಬ ವ್ಯಕ್ತಿಯ ಒಡೆತನಕ್ಕೆ ಬಂದರೆ ಆಮೇಲೆ ಅವನು ಅದನ್ನ ದೇಶಕ್ಕೆ ಹಸ್ತಾಂತರಿಸುತ್ತಾನೆ” ಎಂದಾಗ ಹುಡುಗಿ ನಕ್ಕು, ” ಹ ಹ ಹ ಅಲ್ಲಾ ಮಾರಾಯ ಇಷ್ಟೊತ್ತು ನಿನ್ನನೇನೋ ಕ್ರಾಂತಿಕಾರಿ, ದೊಡ್ಡ ಬುದ್ಧಿವಂತ ಅಂದುಕೊಂಡಿದ್ದೆ, ನೋಡಿದರೆ ನೀನು ಗುಗ್ಗು ಥರಹ ಮಾತಾಡುತ್ತೀದ್ದೀಯ, ಯಾರಪ್ಪ ತನ್ನ ಸಂಪತ್ತನ್ನ ದೇಶಕ್ಕೆ ಬರೆದುಕೊಡುವಷ್ಟು ವಿಶಾಲ ಹೃದಯವನ್ನ ಹೊಂದಿರುತ್ತಾನೆ. ಅಲ್ಲಾ ಇದೇನು ಮಹಾತ್ಮ ಗಾಂಧಿ ಕಾಲ ಅಂದುಕೊಂಡೆಯಾ, ಅಥವಾ ಯಾರೋ ದೊಡ್ಡ ಯುಗ ಪುರುಷ ಈ ಕೆಲಸ ಮಾಡುತ್ತಿದ್ದಾನಾ, ಸುಮ್ಮನೆ ದುಡ್ಡು ಮಾಡಿಕೊಳ್ಳುವುದಕ್ಕೆ ಇವೆಲ್ಲ ಕಥೆಗಳು, ನೋಡು ಎಷ್ಟೊಂದು ದೇಶಗಳಲ್ಲಿ ಯುದ್ಧ ಮತ್ತು ಪ್ರತಿಭಟನೆ ಒಬ್ಬ ಮನುಷ್ಯನ ದಡ್ಡತನ ಅಥವಾ ದುಡ್ಡಿನ ಮದದಿಂದ ಆಗುತ್ತದೆ, ಬಿಟ್ಟಾಕು ಇವೆಲ್ಲ ಓಬೀರಾಯನ ಕಾಲದ ಅಥವಾ ಶ್ರೀರಾಮಚಂದ್ರನ ತುಂಡು ಎಂದು ಹೇಳುವ ಜನರನ್ನ ಈ ಭೂಮಿ ಸಹಿಸಿಕೊಳ್ಳುವುದಿಲ್ಲ” ಎಂದು ಕೆಣಕುವ ಮಾತುಗಳಿಂದಲೇ ಹೇಳಿದಳು.

“ಇಲ್ಲ ನನ್ನಪ್ಪ ಅಂಥಹವರಲ್ಲ ನಿನಗೆ ಯಾರೋ ತಪ್ಪು ಮಾಹಿತಿ ಕೊಟ್ಟಿದ್ದಾರೆ. ಕೋಟ್ಯಾಧೀಶನಾಗಿದ್ದರೆ ಏನು ಅವರಿಗೇ ದೇಶಪ್ರೇಮವಿರಬಾರದಾ, ನೀನು ಜಡ್ಜ್ಮೆಂಟಲ್” ಅಂದ … “ಕೋಟ್ಯಾಧೀಶನ ಮಗನಾಗಿ ನೀನು ರೈಲಿನಲ್ಲಿ ಹೀಗೆ ಅಪರಿಚಿತರೊಡನೆ ಮಾತಾಡುವುದು ಎಷ್ಟು ಅಸಹಜವೋ ಅಷ್ಟೇ ಅಸಹಜ ನಿನ್ನಪ್ಪ ಎಂದು ಹೇಳುವ ಅವರ ದೇಶಪ್ರೇಮ.” ಎಂದು ನಕ್ಕು ಹುಡುಗಿ ಇಳಿಯುವಾಗ ಅವಳ ಕೈ ಹಿಡಿದ…

ಮುಂದೆ…

 

‍ಲೇಖಕರು avadhi

March 21, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: