ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅದ್ ಬರ್ಲಿ ಹಾಳ್ಮನೆ ಕೊತ್ತಿಯ ಒದ್ ನಿಗ್ರಿಸ್ತೀನಿ..

ಬಾಳಾ ಬೇಜಾರ್ ಆಯ್ತದೆ..

jayashankar halagur

ಜಯಶಂಕರ್ ಹಲಗೂರು 

ಮನೆ ಮುಂದಿನ ಹೊಂಗೆ ಮರದಲ್ಲಿ ಗೂಡು ಕಟ್ಟಿದ್ದ ಎರಡು ಕೆಮ್ಮೀಸೆ ಪಿಕಳಾರದ ಹಕ್ಕಿ, ಗೂಡಿನಲ್ಲಿದ್ದ ಮೂರು ಪುಟ್ಟ ಮರಿಗಳು ನಮ್ಮ ಮನೆಯವರೆಲ್ಲರ ಕುತೂಹಲ ಪ್ರೀತಿಗೆ ಕಾರಣವಾಗಿದ್ದವು.

pikalaraಫೊಟೋ ತೆಗೆಯುವ ನನ್ನ ಉತ್ಸಾಹವನ್ನು ಕಂಡು ನನ್ನ ತಾಯಿ ” ಗೂಡ್ ಮುಟ್ಟಿ ಮೈಲಿಗೆ ಮಾಡ್ ಬೇಡ, ಮನುಸ್ರು ಮುಟ್ಟಿಸ್ಕಂದ್ರೆ ಮರಿಬುಟ್ ದೊಡ್ಡಕ್ಕಿ ಹೊಂಟೋಯ್ತವೆ” ಅನ್ನು ಜಾನಪದ ನುಡುದ್ರು.

ನಾ ಫೊಟೋ ತೆಗೆಯೋ ಆಸೆ ಬಿಟ್ಟು ಸುಮ್ಮನೆ ಆಗಾಗ ಸುಳಿದಾಡುತ್ತಾ ಹಕ್ಕಿಗಳ ಚಲನವಲನ ಗಮನಿಸ್ತಾ ಇದ್ದೆ. ಒಂದು ವಾರದಿಂದ ನಂಗೆ ನನ್ ತಂಗಿಗೆ ಇದೇ ಕೆಲ್ಸ…ಹಕ್ಕಿಗಳ ಆತಂಕ..ಆನಂದ..ಹುಳ ಚಿಟ್ಟೆಗಳನ್ನು ಹಿಡಿದು ತಂದು ಜಗತ್ತನ್ನೇ ನುಂಗುವಂತೆ ಬಾಯಿ ತೆರೆದು ಕಾಯುವ ಮರಿಗಳ ಬಾಯಿಗೆ ಇಳಿಸುವ ರೀತಿ…ಎಲ್ಲವನ್ನು ಹತ್ತಿರದಿಂದ ಗಮನಿಸ್ತಾ ಇದ್ವಿ..

ಮೊನ್ನೆ ಸಂಜೆ ಹಕ್ಕಿಗಳ ಜೋರು ಸದ್ದು ಕೇಳಿಸಿ ಹೊರಬಂದು ಗಮನಿಸಿದೆ. ನಾಲ್ಕು ಹಕ್ಕಿಗಳು ಮರದ ಸುತ್ತಲೂ ಹಾರಾಡುತ್ತಾ ಗೂಡಿನ ಬಳಿಗೆ ಹೋಗೋದು ಹಿಂದಿರುಗಿ ಎದುರಿನ ವಿದ್ಯುತ್ ತಂತಿ ಮೇಲೆ ಕೂರೋದು ಮಾಡ್ತಾ ಇದ್ವು. ಎರಡು ಪಿಕಳಾರದ ಕೊಕ್ಕಿನಲ್ಲಿ ಹಸಿರು ಬಣ್ಣದ ಹುಳಗಳಿದ್ದವು. ಮಿಡತೆ ಇರಬಹುದು. ಯಾಕಿಷ್ಟು ಸದ್ದು ಅಂತ ಹೋಗಿ ಗಮನಿಸಿದೆ, ತುಂಬಾ ಹೊತ್ತು ಏನೂ ಹೊಳಿಯಲೇ ಇಲ್ಲ. ಕೆಳಗಿಳಿದು ಹೋಗಿ ನೋಡಿದರೆ ಗೂಡಿಗೆ ಹತ್ತಿರವಿರುವ ಕಾಂಪೌಂಡ್ ಮೇಲೆ ಮೌನ ಗಾಂಭೀರ್ಯದಲ್ಲಿದ್ದ ಬೆಕ್ಕು ನನ್ನ ಕಂಡು ಚಂಗನೆ ಹಾರಿ ಹೋಯ್ತು.

ಬೆಕ್ಕಿನ ಭಯದಲ್ಲಿ ಹಕ್ಕಿಗಳ ಚೀರಾಟವನ್ನು ನನ್ ತಾಯಿಗೆ ವಿವರಿಸಿದೆ. ” ಎಷ್ಟ್ ಬುದ್ದಿ ನೋಡು ಹಕ್ಕಿಗಳ್ಗೆ..ಆ ಬುದ್ದಿ ನಮ್ಗಿಲ್ಲ” ಅಂದರು. ನನಗಾಗಲೇ ಬೆಕ್ಕಿನ ಅಪಾಯ ಹೊಳೆದಿತ್ತು; ಅದರಿಂದ ಮರದ ಬಳಿ ಬೆಕ್ಕು ಸುಳಿದಾಗೆಲ್ಲ ನಾವು ಗದರಿ ಓಡಿಸುತ್ತಿದ್ದೆವು.‌‌.

ಊಹೆ ನಿಜವಾಗಿದೆ..ನಾ ಇವತ್ತು ಸಂಜೆ ಕಾಲೇಜಿನಿಂದ ಬಂದವನೆ ಮರದ ಬಳಿ ಹೋಗಿ ನೋಡಿದೆ, ಹಕ್ಕಿ ಇಲ್ಲ ಸದ್ದಿಲ್ಲ ಹತ್ತಿರ ಹೋಗಿ ನೋಡಿದರೆ ಗೂಡು ಖಾಲಿ ಖಾಲಿ..ನನ್ನ ತಾಯಿ ಹೇಳಿದ್ದಿಷ್ಟು: ಅಯ್ಯೊ ಹಾಳಾದ್ ಕೊತ್ತಿ ಅದಕ್ಕೆ ಬರಬಾರದ್ ಬರ ಮರಿನೆಲ್ಲ ತಿನ್ಕಂದದೆ..ಹೊತಾರೆ ಮರದ್ ಕೆಳ್ಗೆ ಹಕ್ಕಿ ಪುಕ್ಕ ಗೂಡು ಎಲ್ಲ ಬಿದ್ದೋಗಿದ್ದೊ..ನೆನ್ನೆ ರಾತ್ರಿಯೇ ಏನೋ ಸದ್ ಬತ್ತು ಕನ್ಲ ..ಹಕ್ಕಿ ಸದ್ದೀಯೆ..

ಹಾಳಾದ್ದು ತಿನ್ಕಂಡದಲಾ..ಅದ್ ಬರ್ಲಿ ಹಾಳ್ಮನೆ ಕೊತ್ತಿಯ ಒದ್ ನಿಗ್ರಿಸ್ತೀನಿ..

‍ಲೇಖಕರು Admin

25 May, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading