ನಾನು ವಿಕ್ರಮಾದಿತ್ಯನಲ್ಲ
ರೋಹಿಣಿ ಸತ್ಯ
ನೋವು ಹೆಗಲೇರಿ ಮನ ಭಾರವಾಗಿದೆ
ಹಗುರವಾಗಿಸುವ ತವಕವಾದರೂ
ಆಸರೆ ಕಾಣದೇ –
ಅನ್ಯಥಾಶರಣಂನಾಸ್ತಿ ಎಂದು
ಅದು ದಿಗಿಲಿನೊಂದಿಗೆ ಜೊತೆಗೂಡಿದೆ
ನೋವು ದಿಗಿಲು ಒಟ್ಟಾದ ಹೆಜ್ಜೆಗುರುತುಗಳು
ಅಲ್ಲೆಲ್ಲೋ ಪಾತಾಳದಲ್ಲಿ ಊರುತ್ತಿರಲು
ನನ್ನದಲ್ಲದ ಲೋಕದಲ್ಲಿ ನನ್ನ ನಡಿಗೆ
ನನಗೇ ಮುಜುಗರವನ್ನುಂಟುಮಾಡಿದಾಗ
ನೋವಿನ ಬಗೆ ನನಗೆ ಮಾತ್ರವೇನಾ ?
ಪ್ರಶ್ನೆ ಧುತ್ತೆಂದು ಎದುರು ನಿಂತಾಗ
ಒರೆ ಹಚ್ಚಿದ ಯೋಚನೆ ಅಡ್ಡವಾಗಿ ತಲೆಯಾಡಿಸಿತು
ಆಶ್ಚರ್ಯ !

ಯಾವ ಆಸರೆಯ ಆಸರೆಯೂ ಇಲ್ಲದೇ
ನೋವೆಂದು ಭಾವಿಸಿದ ಭಾವವು
ಗಾಳಿಯಲ್ಲಿ ಗಾಳಿಯಾಗಿ ಬೆರೆತುಹೋಯಿತು
ಮನವಾಗ ಹತ್ತಿಯಂತೆ ಹಗುರವಾಗಿ ಹಾರಾಡಿ
ನನ್ನದೇ ಆದ ಲೋಕದಲ್ಲಿ ನನ್ನ ಕಾಲೂರಿತು
ನಿಮಿಷಗಳ ಮುಳ್ಳು ನಿಲ್ಲದೇ ಓಡಲು
ಗಂಟೆಗಳ ಮುಳ್ಳು ಕುಪ್ಪಳಿಸುತ್ತಾ ಸಾಗಲು
ಗಾಳಿಯಲ್ಲಿ ಬೆರೆತುಹೋದ ಭಾವವು
ಬೇತಾಳನಂತೆ ಮತ್ತೇ ಹೆಗಲೇರಿತು
ಅದೇ ಭಾರ ಅದೇ ಹಗುರವಾಗಿಸುವ ತವಕ
ಅದೇ ಅನ್ವೇಷಣೆ ಅದೇ ದಿಗಿಲಿನ ಸಾಂಗತ್ಯ
ಆಗನಿಸಿದ್ದು ನಾನು ವಿಕ್ರಮಾದಿತ್ಯನಲ್ಲವೆಂದು






ಚೆಂದದ ಅಭಿವ್ಯಕ್ತಿ ರಿ
ಅವಧಿಯಲ್ಲಿ ಪ್ರಕಟವಾದ ನನ್ನ ಕವನ ” ನಾನು ವಿಕ್ರಮಾದಿತ್ಯನಲ್ಲ ” ಪ್ರಕಟಿಸಿದ ಅವಧಿಗೆ ಧನ್ಯವಾದಗಳನ್ನು ತಿಳಿಸುತ್ತ… ! ( ಮಾನವನ ಬದುಕಿನಲ್ಲಿ ನೋವು ದುಃಖ ಸತತ. ಸಂತೋಷ ಆನಂದಗಳು ಆಗೊಮ್ಮೆ ಈಗೊಮ್ಮೆ ಇಣುಕಿ ನೋಡುತ್ತವೆ. ಇದಕ್ಕೆ ಅಪವಾದವಿರಬಹುದು. ಆದರೇ ಎಲ್ಲರು ಅವಳಿಜವಳಿಗಳಾಗೆ ಹುಟ್ಟುತ್ತಾರೆ ನೋವಿನೊಂದಿಗೆ. ಹಾಗಾಗಿ ನೋವು ಎಲ್ಲರ ಬಾಳಲ್ಲೂ ಇದ್ದದ್ದೇ. ಅದನ್ನು ಸಮ ಚಿತ್ತದಿಂದ ಒಪ್ಪಿಕೊಂಡಾಗಲೇ ಬಾಳು ಸುಗಮ. ಅದನ್ನು ಸಂಪೂರ್ಣವಾಗಿ ಅಟ್ಟಿಬಿಡಬೇಕೆನ್ನುವುದು ವ್ಯರ್ಥ ಪ್ರಯತ್ನವೆನ್ನುವುದು ಈ ಕವನದ ವಸ್ತುವು. ಇದು ನನ್ನ ಅನಿಸಿಕೆ.
ಕವಿತೆಗೆ ಕವಿಯೇ ವಿವರಣೆ ಕೊಡುವುದು ಸಮಂಜಸವಲ್ಲ. ಅದು ಓದುಗನ ಮನಸಿನಲ್ಲಿ ವಿಭಿನ್ನವಾಗಿ ಬೆಳೆಯುವ ಸಾಧ್ಯತೆಗಳಿರುತ್ತದೆ…..
ನಿಜ ಸರ್/ಮೇಡಂ! ನಿಮ್ಮ ಸೂಚನೆಗೆ ಧನ್ಯವಾದಗಳು