ಅತ್ತೆ ಹೇಳಿದ ಅಣ್ಣನ ಬಾಲ್ಯದ ಬಡತನ..


ಅತ್ತೆ ಹೇಳಿದ ಅಣ್ಣನ ಬಾಲ್ಯದ ಬಡತನ

ಅಣ್ಣನಿಗೆ ಒಬ್ಬಳೇ ತಂಗಿ, ಆಕೆಯ ಹೆಸರು ಮೀರಾ. ಅಕ್ಕ, ಅಣ್ಣ, ತಮ್ಮ ಯಾರೂ ಇಲ್ಲ, ಅವಳನ್ನು ಮದುವೆ ಮಾಡಿ ನಮ್ಮೂರಿಗೇ ಕೊಟ್ಟಿದ್ದರು. ಅಜ್ಜಿಯ ಹಾಗೆ ಆಕೆ ಕಿಟಿಕಿಟಿಯಾಗಿದ್ದಳು. ಈಗ 3-4 ತಿಂಗಳ ಹಿಂದೆ ಆಕೆ ತೀರಿಕೊಂಡಳು. ಅಪ್ರಜ್ಞಾವಸ್ಥೆಯಲ್ಲೂ ಆಕೆ ‘ಅಣ್ಣ ಬಂದ… ಅವನೊಂದಿಗೆ ಮಾತನಾಡಿದೆ’ ಎಂದೆಲ್ಲಾ ಗುನುಗುತ್ತಲೇ ಇದ್ದಳು.
ಅವಳ ಮಾತು ಅಣ್ಣನ ಬಾಲ್ಯವನ್ನು, ಆತನ ವ್ಯಕ್ತಿತ್ವದ ಇನ್ನೊಂದು ಮುಖವನ್ನು ತೆರೆದಿಡುವುದರಲ್ಲಿ ಸಂಶಯ ಇಲ್ಲ. ನಾನು ಈವರೆಗೆ ನನ್ನ ಬಾಲ್ಯದಲ್ಲಿ ನೋಡಿದ ಅಣ್ಣನನ್ನು ಹೇಳಿದ್ದೆ. ಈಗ ಅಣ್ಣನ ಬಾಲ್ಯದ ಬಗ್ಗೆಯೇ ಅತ್ತೆ ಹೇಳಿದ್ದನ್ನು ಕೇಳೋಣ!

“ನಾನು ಕಲಿತಿದ್ದುದು ಮೂರನೇ ಈಯತ್ತೆ ವರಗೆ. ಅಣ್ಣ ಹೆಚ್ಚು ಕಲಿತ. ನನಗೂ ಕಲಿಯುವ ಮನಸ್ಸಿತ್ತು. ಆದರೆ ನಾನು ಶಾಲೆಗೆ ಹೋದರೆ ಅಣ್ಣನಿಗೆ ಹೋಗಲು ಸಾಧ್ಯ ಆಗುತ್ತಿರಲಿಲ್ಲ. ಈಗಲೂ ಯಾರಾದರೂ ಎಷ್ಟು ಕಲಿತಿದ್ದೆ ಅಂತ ಕೇಳಿದರೆ 3ನೇ ತರಗತಿ ಅನ್ನಲು ಮರ್ಯಾದೆ. ಶಾಲೆ ಬಿಟ್ಟು ಬಿಡು ಅಂತ ಆಯಿ ಹೇಳಿದಳು. ಶಾಲೆ ಬಿಟ್ಟು ಏನು ಮಾಡುವುದು? ಸಣ್ಣ ಮಾವನ ಮನೆಯಲ್ಲಿ ಮಕ್ಕಳನ್ನು ಆಡಿಸಲು ಇದ್ದೆ. ದೊಡ್ಡ ಮಾವನ ಮನೆಯಲ್ಲಿ ಇದ್ದುದು ಕಡಿಮೆ.

ಆಯಿ ಅವನಿಗೂ “ಶಾಲೆ ಬಿಡು, ಏನಾದರೂ ಕೆಲಸ ಮಾಡಿದರಾಯ್ತು. ಸಣ್ಣ ತೋಟ ಗೇಣಿಗಿದೆ” ಎಂದಳು. ಅವನು ಕಲಿಯಬೇಕು ಅಂತ ಆಕೆಗೆ ಇತ್ತು. ತೀವ್ರ ಬಡತನದಿಂದಾಗಿ ಓದಿಸುವಷ್ಟು ಹಣ ಆಕೆಯಲ್ಲಿ ಇರಲಿಲ್ಲ. ಆದರೆ ಅಣ್ಣ ಅಂತದ್ದಕ್ಕೆಲ್ಲ ಬಗ್ಗುತ್ತಿರಲಿಲ್ಲ. ಕಲಿಕೆಯ ವಿಷಯದಲ್ಲಿ ಆಯಿಯ ಮಾತನ್ನೂ ಆತ ಕೇಳುತ್ತಿರಲಿಲ್ಲ. ಆಗ ಕೆರೆಕೋಣ ಶಾಲೆಯಲ್ಲಿ ಇದ್ದುದು ಕೇವಲ 4ನೇ ತರಗತಿಯವರೆಗೆ. ಐದನೇ ತರಗತಿಗಾಗಿ ಆತ ಕುಮಟಾದ ಹೆಗಡೆಗೆ ಹೋದ. ಅದು ನಮ್ಮ ಮೂಲ ಮನೆ. ಆದರೆ ಹೆಚ್ಚು ದಿನ ಅಲ್ಲಿ ಆತ ಇರಲಿಲ್ಲ. ಯಾಕೆ ಎಂದು ಕೇಳಿದರೆ ಆತ ಹೇಳಲಿಲ್ಲ. ಬಹು ಸ್ವಾಭಿಮಾನಿ ಆದ ಆತನಿಗೆ ಅಲ್ಲಿ ಏನೋ ಅವಮಾನ ಆಗಿರಬೇಕು. ಈ ಕುರಿತು ಇಂಥ ಯಾವ ಸಂಗತಿಯನ್ನೂ ಯಾವಾಗಲೂ ಹೇಳಿಕೊಳ್ಳುವ ಸ್ವಭಾವ ಆತನದಾಗಿರಲಿಲ್ಲ.

ಆಮೇಲೆ ಕೆರೆಕೋಣದಿಂದ 6-7 ಕಿ.ಮೀ. ದೂರ ಇರುವ ಸಾಲ್ಕೋಡು ಶಾಲೆಗೆ ಹೋಗಿ 5ನೇ ತರಗತಿಗೆ ಸೇರಿದ. 7ನೇ ಇಯತ್ತೆಯವರೆಗೆ ಅಲ್ಲೇ ಓದಿದ. ಅವನಂತಾಗಿದ್ದರೆ ಈಗ ಯಾರೂ ಓದುತ್ತಿರಲಿಲ್ಲ. ಹೈಸ್ಕೂಲು ಎಲ್ಲೂ ಇರಲಿಲ್ಲ. ದುಡ್ಡೂ ಕೂಡ ಇರಲಿಲ್ಲ, ತುಂಬಾ ಬಡತನ. ಹಾಗಾಗಿ ಓದನ್ನು ಬಿಟ್ಟ.
ಶಾಲೆ ಬಿಟ್ಟಾಗ ದುಡಿತ ಆಯಿಯೊಬ್ಬಳದೇ. (ಆಯಿ=ತಾಯಿ) ನನ್ನ ದುಡಿಮೆಯು ಹಣ ತರುವಂತದ್ದಲ್ಲ. ಹಾಗಾಗಿ ಬೇರೆ ಮನೆ ಕೆಲಸಕ್ಕೆ ಹೋಗು ಎಂದು ಆಯಿ ಹೇಳುತ್ತಿದ್ದಳು. ಬ್ರಾಹ್ಮಣರ ಮನೆಯ ಕೆಲಸಕ್ಕೆ ಹೋಗುವುದೆಂದರೆ ಅವನಿಗೆ ಆಗುತ್ತಿರಲಿಲ್ಲ. “ಅವರು ನಮ್ಮನ್ನು ಕನಿಷ್ಟವಾಗಿ ಕಾಣುತ್ತಾರೆ; ಅವರ ಮನೆಗೆ ಹೋಗಬೇಡ” ಎಂದು ಆಯಿಗೂ ಹೇಳುತ್ತಿದ್ದ.

ಆದರೆ ಬಡತನ….. 3 ಜೀವ ಸಾಕಬೇಕು…. ಆಯಿಗೆ ಬೇರೆ ಉಪಾಯ ಇರಲಿಲ್ಲ. ಸಪ್ಪು ತರುವುದು, ಪಾತ್ರೆ ತೊಳೆಯುವುದು, ಬಾಣಂತಿ ಮೀಸುವುದು ಮಾಡುತ್ತಾ ಜೀವನ ಸಾಗಿಸುತ್ತಿದ್ದಳು. ಬಾಣಂತಿ ಮೀಸುವುದೆಂದರೆ ಸುಲಭ ಆಗಿರಲಿಲ್ಲ. ಈಗಿನಂತೆ ಅಲ್ಲ. ಚೂಳಿಗಟ್ಟಲೆ ಬಾಣಂತಿ ಬಟ್ಟೆ ಇರ್ತಿತ್ತು. ಮಕ್ಕಳ ಹೇಲುಚ್ಚೆಯ ಬಟ್ಟೆ; ಮನೆಯವರೂ ಅದರೊಂದಿಗೆ ಬಟ್ಟೆ ಹಾಕಿ ಕೊಡೋರು, ಹಂಡೆಗಟ್ಟಲೆ ಬಿಸಿ ನೀರು ಮಾಡಿ ಆ ಬಿಸಿ ನೀರನ್ನು ಬಾಣಂತಿಗೆ ಮೀಯಿಸಬೇಕು. ಒಮ್ಮೊಮ್ಮೆ ಬಿಸಿ ನೀರು ಮೀಯಿಸಿ ಕೈ ಬೆರಳು ಸುಟ್ಟು ಹೋಗುತ್ತಿತ್ತು. ಮತ್ತೆ ಬಾವಿಯಿಂದ ನೀರು ಎತ್ತಿ ಹಂಡೆ ತುಂಬಬೇಕು. ಒಂದು ಬಾಣಂತಿ ಮೀಸುವುದರೊಳಗೆ ಹೈರಾಣಾಗುತ್ತಿದ್ದಳು. ಒಮ್ಮೊಮ್ಮೆ ದಿನಕ್ಕೆ ಎರಡೆರಡು ಬಾಣಂತಿ ಮೀಸಿದ್ದು ಇದೆ. ಇಷ್ಟೆಲ್ಲ ಆದ ಮೇಲೆ ಒಂದು ಮರಕಣ್ಣು ಚಾ (ಒಮ್ಮೆ ಚಾ ಮಾಡಿ ಇಟ್ಟ ಚಾಸೋಪ್ಪನ್ನು ಮತ್ತೆ ಬೇಯಿಸಿ ಚಾ ಮಾಡುವುದು) ಕೊಟ್ಟು ಕೆಲವರ ಮನೆಯಲ್ಲಿ ಮಾತ್ರ ನಾಲ್ಕಾಣೆಯಿಂದ 1 ರೂಪಾಯಿವರೆಗೆ ಕೊಡ್ತಿದ್ದರು. ಬರುವಾಗ ನಿನ್ನೆಯ ಅನ್ನ ಸಾರು ಇದ್ದರೆ ಕೆಲವರು ಕೊಟ್ಟಿದ್ದು ಇದೆ.

ಕೆರೆಕೋಣ, ಕಲ್ಬಾಗ, ಬೀನ್ಗೋಡು, ಉಂಚುಟ್ಟೆ ಹೀಗೆ ಸುತ್ತಮುತ್ತಲ ಕೇರಿಗೆ ಆಯಿ ಅನಿವಾರ್ಯ ಆಗಿದ್ದಳು. ಹೀಗೆ ಬಾಣಂತಿ ಮೀಸಲು ಹೋಗುವಾಗ ನನ್ನನ್ನೂ, ಅಣ್ಣನನ್ನು ಆಕೆ ತನ್ನ ತಮ್ಮನ ಮನೆಯಲ್ಲಿ ಬಿಟ್ಟು ಹೋಗುತ್ತಿದ್ದಳು. ಅಲ್ಲಿ ಅಮ್ಮ (ತಾಯಿಯ ತಾಯಿ) ನಮ್ಮನ್ನು ನೋಡಿಕೊಳ್ತಿದ್ದಳು. ಅವಳಿಗೂ ವಯಸ್ಸಾಗಿತ್ತು.

ನಾನು, ಅಣ್ಣ, ನಿನ್ನ ಅಕ್ಕ, ಸಣ್ಣಕ್ಕ ಇವರನ್ನೆಲ್ಲ ಆಯಿಯ ಆಯಿ ಅಂದರೆ ಅಜ್ಜಿಯೇ ನೋಡಿಕೊಳ್ಳಬೇಕಾಗಿತ್ತು. ನಾವು ಅವಳಿಗೆ ತುಂಬಾ ತ್ರಾಸು ಕೊಡುತ್ತಿದ್ದೆವು. ಹಾಗಾಗಿ ಅಜ್ಜಿ ನಮಗೆ ಬೈಯುತ್ತಿದ್ದಳು. ಒಂದಿನ ಮಂಡೆ (ತಲೆ ಕೂದಲು) ಬಾಚಿದರೆ ನಾಲ್ಕು ದಿನ ಹಾಗೇ ಇರಬೇಕು. ಆಕೆಯೇ ಬಿಚ್ಚಬೇಕಾಗಿತ್ತು. ಕೂದಲು ಬಾಚುವಾಗ “ಈ ಮಕ್ಕಳ ಮಂಡೆಯೂ ಒಕ್ಕಿ (ಉದುರಿ) ಹೋಗುವುದಿಲ್ಲ ಎಂದು ಬೈಯುತ್ತಿದ್ದಳು. ಒಮ್ಮೆ ಆಯಿಗೂ ಅವಳಿಗೂ ಏನು ಮಾತುಕತೆ ಆಯ್ತೋ ಗೊತ್ತಿಲ್ಲ. ಮಧ್ಯಾಹ್ನ 12 ಗಂಟೆಗೆ ನನ್ನನ್ನು ಅಣ್ಣನನ್ನು ಕಟ್ಟಿಕೊಂಡು ಮನೆ ಬಿಟ್ಟು ಬಂದಳು. ಅಲ್ಲೇ ಪಕ್ಕದಲ್ಲಿರುವ ಬೋಳ್ಗೆರೆ ಮಾವನ (ದೊಡ್ಡಬ್ಬೆಯ ಮಗ) ಮನೆಗೆ ಬಂದು ನಿಂತಳು. ಆತ ಏನಾಯ್ತೆಂದೆಲ್ಲ ಕೇಳಿದ ಮೇಲೆ ತನ್ನ ಮನೆಯ ಹಿತ್ತಲ ಕಡೆ ಚಾಚಿಕೊಂಡಿರುವ ಒಂದು ಓರಿ (ಕೋಣೆ) ತೋರಿಸಿ ಅಲ್ಲೇ ಉಳಿಯಲು ಹೇಳಿದ. ಅದು ದಬ್ಬೆಯಿಂದ ಕಟ್ಟಿದ ಗೋಡೆ ಇರುವ ಕೋಣೆ. ಅದರ ಪಕ್ಕದಲ್ಲೇ ದೊಡ್ಡದಾಗಿ ನೀರು ಹರಿಯುವ ಕಾರ್ಗೆ ಇತ್ತು. ಅಲ್ಲೇ ಹಲವು ವರ್ಷ ನಾವು ಉಳಿದೆವು. ಆತ ನಮ್ಮನ್ನು ತುಂಬಾ ಚೆಂದವಾಗಿ ನೋಡಿಕೊಂಡಿದ್ದ.

ಆಯಿಗೆ ಬೆಣ್ಣೆಮನೆಯ ಹತ್ತಿರ ನಾಲ್ಕು ಬೆಲಗು ತೋಟವನ್ನು ಗೇಣಿಗೆ ಕೊಡಿಸಲಾಗಿತ್ತು. ಅದು ಬಾಯ್ಮಾತಿನಲ್ಲಿ ಕೊಟ್ಟಿದ್ದು. ಆದರೆ ಕೆಲವು ವರ್ಷಗಳ ನಂತರ ಕೃಷ್ಣ ಭಟ್ಟರು ಈ ತೋಟ ಬಿಡಲು ಹೇಳಿದರು. ಸಣ್ಣ ಮಾವ ಒಡೆಯ ಕೃಷ್ಣ ಭಟ್ಟರ ವಿರುದ್ಧ ಕೋರ್ಟಿನಲ್ಲಿ ನಂಬ್ರ ಹಾಕಲು ಮುಂದಾದ. ಆದರೆ ನಾವೆಲ್ಲ ಸಣ್ಣವರು, ತೋಟಕ್ಕೆ ಒಬ್ಬೊಬ್ಬರೇ ಮಕ್ಕಳು ಹೋದರೆ ಸಿಟ್ಟಿನಿಂದ ಹೊಂಡತೆಗೆದು ಹುಗಿದು ಹಾಕಬಹುದು ಎಂಬ ಭಯ ಆಯಿಯನ್ನು ಕಾಡಿತ್ತು. ಹಾಗಾಗಿ ಸಣ್ಣ ಮಾವ ವ್ಯಾಜ್ಯ ಹಾಕುವುದನ್ನು ಬಿಟ್ಟ. ಆ ಜಾಗ ಆಯಿಯ ಹೆಸರಿಗಿತ್ತು. ಕೃಷ್ಣ ಹೆಗಡೆಯವರು ಜಾಗ ಬಿಟ್ಟು ಕೊಡಲು ಸಹಿ ಹಾಕಿ ಎಂದು ಒತ್ತಾಯ ಮಾಡಿದರು. ಸಣ್ಣ ಮಾವ ಸಹಿ ಮಾಡದಂತೆ ತಾಕೀತು ಮಾಡಿದ. ಕೊನೆಗೆ ಆ ಭೂಮಿಯನ್ನು ಬಿಡಬೇಕಾಯಿತು.

ಅಣ್ಣ ಶಾಲೆ ಬಿಟ್ಟ ಮೇಲೆ ಕೆಲವು ದಿನ ಮನೆಯಲ್ಲೇ ಇದ್ದ. ಪುಸ್ತಕದ ಹುಚ್ಚು ಅವನಿಗೆ. ಸ್ವಲ್ಪ ದಿನ ಪೋಷ್ಟ್ ಮ್ಯಾನ್ಕೆ ಮಾಡಿದ. ಹೊನ್ನಾವರದಿಂದ ಪೋಷ್ಟ್ ಬ್ಯಾಗ್ ತಂದು ಅರೆಅಂಗಡಿಗೆ ಕೊಡುವುದು. ಆಗ ಮಾಬ್ಲ ಹೆಗಡೆರು ಪೋಷ್ಟ್ ಮಾಸ್ತರ್. ಬಾಡಿಗೆ ಸೈಕಲ್ ತೊಗೊಂಡು ಹೊನ್ನಾವರಕ್ಕೆ ಹೋಗುತ್ತಿದ್ದ. ಆಮೇಲೆ 25 ರೂ ಕೊಟ್ಟು ಒಂದು ಸೈಕಲ್ ಖರೀದಿ ಮಾಡಿದ್ದ ಅಂತ ನೆನಪು ಅಥವಾ ಬಾಡಿಗೆದೇ ಆಗಿತ್ತೋ ಏನೋ. ಆಮೇಲೆ ಪೋಷ್ಟ ಮ್ಯಾನ್ಕೆನೂ ಬಿಟ್ಟ. ಕೊಳೆ ಅಡಿಕೆ, ಮೆಣಸಿನ ಕಾಳಿನ ವ್ಯಾಪಾರ ಮಾಡುತ್ತಿದ್ದ. ಅಟ್ಲಕಾಯಿ, ಮತ್ತೆಂತದ್ದೋ ತಗೊಂಡು ಹೋಗ್ತಿದ್ದ. ಬೆಳಿಗ್ಗೆ ಬೆಟ್ಟಕ್ಕೆ ಹೋಗಿ ಒಂದು ಹೊರೆ ಸೊಪ್ಪು ತರುತ್ತಿದ್ದ. ಒಂದಿಷ್ಟು ದಿನ ಸಣ್ಣ ಮಾವನ ಮನೆ ಎತ್ತಿನ ಗಾಡಿ ಹೋಡೀತಿದ್ದ. ಆದರೆ ಬ್ರಾಹ್ಮಣರ ಮನೆಯ ಕೆಲಸಕ್ಕೆ ಮಾತ್ರ ಹೋಗ್ತಿರಲಿಲ್ಲ. ಆದರೆ ಆಯಿ ಎಂದೂ ಅವನಿಂದ ದುಡ್ಡು ಕೇಳುತ್ತಿರಲಿಲ್ಲ. ಉಳಿದ ದುಡ್ಡಿನಲ್ಲಿ ಅವನು ಪುಸ್ತಕ ತರುತ್ತಿದ್ದ.

ಆದರೆ ಅವನಿಗೆ ಇಲ್ಲಿಯ ಕೆಲಸನೂ ಒಗ್ಗಲಿಲ್ಲ. ಮತ್ತೆ ಒಂದು ವರ್ಷ ಶಾಲೆಗೆ ಹೋಗಬೇಕೂಂತ ಹೆಗಡೆಗೆ ಹೋದ. ನನಗೆ ಇಲ್ಲೆಲ್ಲ ಉಳಿಯೂದಕ್ಕೆ ಆಗುದಿಲ್ಲ. ಎಲ್ಲಾದರೂ ಓಡ್ ಹೋಗ್ತೆ ಅಂತಿದ್ದ. ನೀನು ಓಡಿ ಹೋದ್ರೆ ನಾನೂ ಓಡಿ ಬರ್ತೆ ನಿನ್ನೊಂದಿಗೆ ಅಂತ ಹೇಳ್ತಿದ್ದೆ. ನಾನು ಅಂದರೆ ಅವನಿಗೆ ತುಂಬಾ ಪ್ರೀತಿ. ನಾನು ಸಣ್ಣ ತಿಂಡಿ ಇದ್ರೂ ಅವನಿಗಾಗಿ ಕಾದಿಟ್ಕೊತಿದ್ದೆ. ಬೇಜಾರಾದಾಗ ನನ್ನ ಹತ್ತಿರ ಅಪರೂಪಕ್ಕೆ ಎಲ್ಲಾದರೂ ಹೇಳ್ಕೊತ್ತಿದ್ದ.

ಅಷ್ಟೊತ್ತಿಗೆ ಅರೆಅಂಗಡಿಯಲ್ಲಿ ಹೈಸ್ಕೂಲ್ ಶುರುವಾಯ್ತು. ಆಗ ಅಲ್ಲಿ ಶಾಲೆಗೆ ಹೋಗಲು ಪ್ರಾರಂಭಿಸಿದ. ಸುಮಾರು 16-17 ನೇ ವಯಸ್ಸು ಆಗ. ಅವನ ಜೊತೆಗೆ ಶೀಗೆಹಳ್ಳಿ ಗಜಾನನ ಅಂತ ಅವನ ದೋಸ್ತ ವಾರಾನ್ನಕ್ಕೆ ಇದ್ದ. ಬಹಳ ತುಟ್ಟಿ ಕಾಲ. ನಾನು ಅಡಿಕೆ ಸುಲಿಲಿಕ್ಕೆ ಹೋದಾಗ ಬಂದ ದುಡ್ಡನ್ನು ಅಣ್ಣನಿಗೇ ಕೊಡುತ್ತಿದ್ದೆ. ನನಗೆ ಅಣ್ಣ ಅಂದ್ರೆ ಆಯಿಗಿಂತ ಹೆಚ್ಚು ಪ್ರೀತಿ. ಪರೀಕ್ಷೆ ಕಟ್ಟುದಕ್ಕೆ ಐದ್ ರೂಪಾಯಿಯೂ ಇರಲಿಲ್ಲ. ಇದ್ದ ಒಂದು ಸಣ್ಣ ಬಂಗಾರ ಅಡು ಇಟ್ಟು ಆಯಿ ದುಡ್ಡು ತಂದು ಕೊಟ್ಟಿದ್ಲು.

ಹೈಸ್ಕೂಲ್ ಹೋಗುವಾಗಲೇ ಮದುವೆ ಮಾಡು ಎಂದರು. ಮದುವೆ ಆಗದಿದ್ದರೆ ಗೇಣಿ ತೋಟ ಬಿಡಿಸ್ತೇನೆ ಅಂತ ಕೃಷ್ಣ ಹೆಗಡೆ ಹೇಳಿದರು. ಬಹುಶಃ ನನ್ನ ದೊಡ್ಡ ಮಾವ ಅವರ ಮೂಲಕ ಹೇಳಿಸಿರಬೇಕು. ಮದುವೆ ಆಗಿ ಶಾಲೆಗೆ ಹೈಸ್ಕೂಲಿಗೆ ಹೋಗೂದು ಮರ್ಯಾದೆ ಅಂತಿದ್ದ. ಆದರೂ ಮಾವ ಕಲಿಯುವದಕ್ಕೆ ಏನಾದರೂ ಸಹಾಯ ಮಾಡಬಹುದು ಅಂತ ಮದುವೆ ಆದ. ಮದುವೆ ಆಗಿ ಒಂದಿಷ್ಟು ದಿನ ಶಾಲೆಗೆ ಹೋಗುತ್ತಿರಲಿಲ್ಲ. ಗೆಳೆಯರೆಲ್ಲ ತಮಾಷೆ ಮಾಡುತ್ತಿದ್ದರು ಅಂತಿದ್ದ. ಆಮೇಲೆ ಹೋಗಲು ಶುರುಮಾಡ್ಕೊಂಡ. ಮದುವೆ ಮಾಡೋದಕ್ಕೆ ದುಡ್ಡು ಇರಲಿಲ್ಲ ಆಯಿ ಹತ್ತಿರ. ಊರಲ್ಲೆಲ್ಲ ಓಡಾಡಿ ಕಾಯಿಯನ್ನೆಲ್ಲ ಒಟ್ಟು ಮಾಡಿ ಮದುವೆ ಮಾಡಿದಳು.

ಆಮೇಲೂ ದುಡ್ಡಿಲ್ದೇ ಕಲಿಕೆ ನಿಲ್ಲಿಸಬೇಕಾದ ಸ್ಥಿತಿ ಬಂತು. ಆಗ ನಮ್ಮೂರಿನ ಮಾಬ್ಲ ಹೆಗಡೆ ಕಲಭಾಗ್, ಗೋವಿಂದ ಹೆಗಡೆ ಕಲಬಾಗ ಇವರೆಲ್ಲ ಸೇರಿ ಅಣ್ಣನಿಗೆ ಒಂದಿಪ್ಪತ್ತು ಜನರ ಪಟ್ಟಿ ಮಾಡಿಕೊಟ್ಟರು. ಅವರನ್ನೆಲ್ಲ ಪ್ರತಿ ತಿಂಗಳು ಭೇಟಿಯಾಗಿ ಸಂಭಾವನೆ ರೀತಿಯಲ್ಲಿ ಹಣ ಒಟ್ಟುಮಾಡಿ ಓದು ಎಂದರು. ಪಾಪ ಆತ ಹಾಗೆ ಮಾಡಿದ. ಹಾಗೆಲ್ಲ ಮಾಡಿ ಅಂವ ಕಲ್ತಿದ್ದು, ಬಹಳ ಕಷ್ಟ ಪಟ್ಟಿದ್ದಾನೆ. (ಕಣ್ಣೀರು) ಮತ್ತೂ ಕಲಿತಿದ್ದ. ಆದರೆ ಮೊದಲೇ ಹೇಳಿದ್ನಲ್ಲ ಬಡತನ.

ನನ್ನ ಅಪ್ಪ ಹೇಳ್ತಿದ್ನಂತೆ -ನಾನಾಗಲಿ ಅಣ್ಣ ಆಗಲಿ ಅಪ್ಪ ನನ್ನು ನೋಡ್ಲಿಲ್ಲಾ. ನಾವು ಸಣ್ಣವರಿರುವಾಗಲೇ ತೀರಿಕೊಂಡುಬಿಟ್ಟ. – ನನ್ನ ಮಕ್ಕಳು ಎಷ್ಟು ಕಲಿತಾರೋ ಅಷ್ಟು ಕಲಿಸ್ತೆ ಅಂತ. ಆತನೂ ಮಾಸ್ತರ್ ಆಗಿದ್ದನಂತೆ. ಈಗಲು ಅಪ್ಪನ ನೆನಪಾಗುತ್ತದೆ. ತುಂಬಾ ಒಳ್ಳೆಯವನಾಗಿದ್ದನಂತೆ. ಒಂದ್ ಫೋಟೋನೂ ಇಲ್ಲ. ಟಿಬಿ ಆಗಿ ತೀರಿಕೊಂಡನಂತೆ. ಅಪ್ಪ ಹೇಗಿದ್ದಾನೆಂತ ಆಯಿಯನ್ನು ಕೇಳ್ತಿದ್ದೆ. ಹೆಗಡೆಗೆ ಹೋದಾಗ ಅಪ್ಪನ ಅಮ್ಮನನ್ನೂ ಕೇಳಿದ್ದೆ. ಒಂದ್ ಫೋಟೋ ಇತ್ತಂತೆ ಅಪ್ಪಂದು. ಆದರೆ ಆ ಫೋಟೋ ನೋಡಿದಾಗಲೆಲ್ಲ ಮಗನ ನೆನಪಾಗಿ ಅಳು ಬರುತ್ತಿತ್ತೆಂದು ಒಡೆದು ಹಾಕಿಬಿಟ್ಟಳಂತೆ. ಅದು ಅವನಿಗೆ ಒಳ್ಳೆಯ ಶಿಕ್ಷಕ ಅಂತ ಪ್ರಶಸ್ತಿ ಬಂದಾಗಿನ ಫೋಟೋ ಆಗಿತ್ತಂತೆ. ಅಪ್ಪ ತೀರಿಕೊಂಡಾಗ ಬಹುಶಃ ನನಗೆ 3-4 ತಿಂಗಳು. ಅಣ್ಣನಿಗೆ 2-3 ವರ್ಷ ಆಗಿರಬಹುದು. ಆಗಲೇ ಹೆಗಡೆ ಬಿಟ್ಟು ಕೆರೆಕೋಣಕ್ಕೆ ಬಂದಿದ್ದು.

ಆಯಿ ಒಬ್ಬಳೇ ಮಗಳಾಗಿದ್ದಳು. ತುಂಬಾ ಪ್ರೀತಿಯಿಂದ ಸಾಕಿದ್ರು. ಹಾಗಾಗಿ ಅವಳು ಗಂಡ (ನಮ್ಮ ಅಪ್ಪ) ತೀರಿಕೊಂಡ ನಂತರ ಇಲ್ಲಿಯೇ ಕರಕೊಂಡು ಬಂದರಂತೆ.

ಈತ ಭಂಡಾರಿ ಜಾತಿಯಲ್ಲೇ ಹೆಚ್ಚು ಕಲಿತವನು. ಒಂದು ವರ್ಷ ಹೈಸ್ಕೂಲಿನಲ್ಲಿ ನೌಕರಿ ಮಾಡಿದ. ಅದು ಬ್ರಾಹ್ಮಣರ ಸಂಸ್ಥೆ ಆಗಿತ್ತು. ಇವನು ಎಲ್ಲೋ ಜಾತಿ ಬಗ್ಗೆ ಮಾತಾಡಿದ ಅಂತ ತೆಗೆದು ಹಾಕಿದ್ರು. ಆಮೇಲೆ ಕನ್ನಡ ಶಾಲೆ ಸೇರಿಕೊಂಡ. ಸಣ್ಣಿಂದನೂ ಸಂಸಾರದ ಬಗ್ಗೆ ಇವನಿಗೆ ಯಾವ ಕಾಳಜಿಯೂ ಇರಲಿಲ್ಲ. ಎಲ್ಲವನ್ನೂ ಆಯಿ ನೋಡಿಕೊಳ್ಳುತ್ತಿದ್ದಳು. ಆಮೇಲೆ ಅತ್ತಿಗೆ (ನಿನ್ನಕ್ಕ) ನೋಡಿಕೊಳ್ಳುತ್ತಿದ್ದಳು. ಬರೀ ಪುಸ್ತಕ, ಓದು. ಎಲ್ಲಿಹೋದ್ರೂ ಪುಸ್ತಕ ತರುತ್ತಿದ್ದ.

ಪಾಪ, ನಿನ್ನಕ್ಕ ಸೊಪ್ಪು ಸೌದೆ ತರುತ್ತಿದ್ದಳು. ಅವಳಿಗೆ ಮಾಸ್ತರ್ ಹೆಂಡ್ತಿ ಅಂತ ಯಾವ ಗ್ರೇಡೂ ಇರಲಿಲ್ಲ. ನಾನು ಅವಳು ಎಲ್ಲಾ ಸೇರಿನೇ ಸೊಪ್ಪು ಸೌದೆ ಕರಡ ತರುತ್ತಿದ್ದೆವು. ಎಮ್ಮೆ ಸಾಕಿದ್ದಳು. ತೆಂಗಿನ ಸಸಿಗೆ ಅತ್ತೆ ಸೊಸೆ ಸೇರಿ ಬಾವಿಯಿಂದ ನೀರೆತ್ತಿ ಹಾಕಿ ಬೆಳೆಸಿದ್ದರು. ಕೈಗೆ ಗುಳ್ಳೆ ಬರುತ್ತಿತ್ತು. ಬೆರಳಿಗೆ ವಸ್ತ್ರ ಕಟ್ಟಿ ನೀರೆತ್ತುವುದು. ಆಗ ಚಪ್ಪಲಿ ಇರಲಿಲ್ಲ. ಬಿಸಿಲಲ್ಲೇ ನಡೆದುಕೊಂಡು ಬರೋದು ಅಡಿಕೆ ಸುಲಿಯೋದು. ಪಾಪ ಒಳ್ಳೆಯ ಬಟ್ಟೆಯ ಬಟ್ಟೆನೂ ಇರಲಿಲ್ಲ.

ಅಣ್ಣನಿಗೂ ಹಾಗೇ. ಒಂದೇ ಜೊತೆ ಅಂಗಿ. ಹೊರಗೆ ಹೋಗುವುದಿದ್ದರೆ ಬೇರೆ ಅಂಗಿ ಇರಲಿಲ್ಲ. ನಮ್ಮೂರಲ್ಲಿ ಒಬ್ಬ ಶೇಶು ಮೊಗೇರ ಅಂತ ಕೂಲಿ ಮಾಡ್ಕೊಂಡಿದ್ದ. ಅವನ ಹತ್ತಿರ ಒಂದು ಲುಂಗಿ, ಅಂಗಿ ತಗೊಂಡು ಮದುವೆಗೆ ಎಲ್ಲಾದರೂ ಹೋಗುತ್ತಿದ್ದ. ಪ್ರತಿ ಸಲ ಹೊಸಾಕುಳಿ ತೇರಿಗೆ ಒಂದ್ ಜೊತೆ ಬಟ್ಟೆ ತರೋದು. ಶಾಲೆ ಹೋಗುವಾಗ ಕೊಡೆ ಇರಲಿಲ್ಲ. ತಾಳೆ ಮಡ್ಲು ಸೂಡ್ಕೊಂಡು ಹೋಗ್ಬೇಕಾಗಿತ್ತು. ಕೆಲವು ಸಂದರ್ಭದಲ್ಲಿ ಕೆಸುವಿನ ಎಲೆ ಮುಚ್ಚಿಕೊಂಡು ಹೋಗಿದ್ದೂ ಇದೆ. ಆದರೂ ಅಣ್ಣ ದೊಡ್ ಹೆಸರು ಮಾಡ್ದ. ಪೇಪರಿನಲ್ಲೆಲ್ಲ ಬಂತು. ನಂಗಂತೂ ಖುಷಿ.” ಎಂದು ಅಂತರ್ಮುಖಿಯಾಗಿ ಹೇಳುತ್ತಲೇ ಇದ್ದಳು.

‍ಲೇಖಕರು Avadhi

December 2, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

3 ಪ್ರತಿಕ್ರಿಯೆಗಳು

  1. prathibha nandakumar

    ಭಂಡಾರಿ ಅವರ ಜೀವನ ಚಿತ್ರಣ ತುಂಬಾ ಚೆನ್ನಾಗಿ ಬರಿತಿದ್ದೀರಾ… ಹೊಸ ಕಂತಿಗಾಗಿ ನಾನು ಸದಾ ಕಾಯ್ತಿರ್ತೆನೆ. ಬೇಗ ಪುಸ್ತಕ ಮಾಡಿ, ಇದನ್ನು ನಾನು ಇಂಗ್ಲಿಷಿಗೆ ಅನುವಾದಿಸಿ ಕೊಡ್ತೇನೆ. ಇಂಗ್ಲೀಷಿನಲ್ಲಿಯು ತರಬಹುದು.

    ಪ್ರತಿಕ್ರಿಯೆ
  2. Tammanna Beegar

    ಆ ದಿನಗಳ ಕಷ್ಟ,ಅನಿಷ್ಟ ಎಲ್ಲ ಕಣ್ಣಮುಂದೆ ಬರುತ್ತವೆ.ಸಹಜ ಬರವಣಿಗೆ.ನಮ್ಮ ಬಾಲ್ಯದ ದಿನಗಳೂ ನೆನಪಾಗುತ್ತವೆ. ಎಲ್ಲ ಸೇರಿ ಒಂದು ಪುಸ್ತಕದ ರೂಪದಲ್ಲಿ ಬರಲಿ.ವಂದನೆ

    ಪ್ರತಿಕ್ರಿಯೆ
  3. ಉಮೇಶ್ ನಾಯ್ಕ

    ಎಷ್ಟೆಲ್ಲಾ ನೋವುಗಳ ದಾಟಿಬಂದ ಜೀವ ಅದು…!….ಆರ್ ವಿ ಸರ್ ರ ಎಲ್ಲಾ ಮಗ್ಗಲನ್ನು ಪರಿಚಯಿಸುತ್ತಿರ ವ ತಮಗೆ ಅಬಿನಂದನೆ ಸರ್

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: