ಇವರು ಹಸನ್ ನಯೀಂ‌ ಸುರಕೋಡ..

ಇಸ್ಮತ್ ಪಜೀರ್

ಹಿರಿಯ ಸಾಹಿತಿ ಹಸನ್ ನಯೀಂ ಸುರಕೋಡ ಅವರಿಗೆ ತಡವಾಗಿಯಾದರೂ ರಾಜ್ಯೋತ್ಸವ ಪ್ರಶಸ್ತಿ ಸಂದಿರುವುದು ಸಂತಸದ ವಿಚಾರ. ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಮಡ್ಡಿಗಲ್ಲಿಯವರಾದ ಸುರಕೋಡರು ಇಂದಿಗೂ ಬಡತನದಲ್ಲೇ ಬದುಕು ಸವೆಸುತ್ತಿರುವವರು. ಅವರ ಆರ್ಥಿಕ ಸ್ಥಿತಿಯನ್ನರಿತು ಇತ್ತೀಚೆಗೆ ಕನ್ನಡ ನಾಡಿನ ಪ್ರಗತಿಪರರು ಸೇರಿ ಅವರಿಗೆ ಇತ್ತೀಚೆಗೆ ಒಂದು ಅಭಿನಂದನಾ ಗ್ರಂಥವನ್ನು ಸಮರ್ಪಿಸಿದ್ದರು.

2009ರಲ್ಲಿ ಪ್ರಸಿದ್ದ ಪಂಜಾಬಿ ಲೇಖಕಿ ಅಮೃತಾ ಪ್ರೀತಂರ ಆತ್ಮ ಚರಿತ್ರೆ ‘ರಶೀದಿ ಟಿಕೇಟು’ ಕೃತಿಗೆ ಅನುವಾದ ಸಾಹಿತ್ಯದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಸಂದಾಗ ಅವರ ಕುರಿತಂತೆ ‘ವಾರ್ತಾಭಾರತಿ’ಗೆ ಒಂದು ಲೇಖನ ಬರೆಯಲು ಕರೆ ಮಾಡಿದಾಗ ಅವರು ನನ್ನೊಂದಿಗೆ ಆಡಿದ ಮಾತುಗಳಲ್ಲಿ ಅವರ ವೈಯಕ್ತಿಕ ಬದುಕಿನ ಜಂಜಡಗಳು ಅವರಿಗರಿವಿಲ್ಲದಂತೆಯೇ ಹೊರಬಂದಿತ್ತು.

ಅವರದೇ ಮಾತುಗಳಲ್ಲಿ ಹೇಳಬೇಕಾದರೆ “ನಂಗೆ ಸಿಕ್ಕ ಪ್ರಶಸ್ತಿ, ಸಮ್ಮಾನಗಳನ್ನು ಮೂಟೆಯಲ್ಲಿ ಕಟ್ಟಿ ನನ್ನ ಮಂಚದ ಕೆಳಗೆ ಇಟ್ಟೀನ್ರಿ.. ನನ್ನ ಪುಸ್ತಕಗಳು ಹಂಗೇ ಐತ್ರಿ, ಅವನ್ನಿಡಾಕ್ ನಮ್ಮನಿಯಾಗ ಒಂದು ಚಲೋ ಬೀರೂ ಇಲ್ರಿ., ಒಂದು ಚಿಕ್ಕ ಮನೆ ಐತ್ರೀ, ತುಂಬು ಕುಟುಂಬ ಅದ್ರಾಗ ಇದ್ದೀವಿ….”

ಸುರಕೋಡರು ಬರೆದಂತೆ ಬದುಕಿದವರು. ವಡ್ಡರ್ಸೆ ರಘುರಾಮ ಶೆಟ್ರ ‘ಮುಂಗಾರು’ ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ ಅವರು ಆಗ ಮಂಗಳೂರಿನಲ್ಲಿ ವಾಸವಾಗಿದ್ದರು. ಕನ್ನಡದಲ್ಲಿ ಸಾಹಿತ್ಯ ಬರವಣಿಗೆಯನ್ನೇ  ಹೊಟ್ಟೆಪಾಡಿನ ಕಸುಬಾಗಿಸುವಂತಹ ಸ್ಥಿತಿ ಅಂದೂ ಇರಲಿಲ್ಲ, ಇಂದೂ ಇಲ್ಲ. (ಶಿವರಾಮ ಕಾರಂತರಂತಹ ಕೆಲವರನ್ನು ಹೊರತುಪಡಿಸಿ) ಸುರಕೋಡರು ಕೆಲಕಾಲ ಮಕ್ಕಳಿಗೆ‌ ಮನೆಪಾಠ ಹೇಳಿಕೊಡುವ ಕಸುಬನ್ನೂ ಮಾಡಿದ್ದರು.

ಸುರಕೋಡ ಕನ್ನಡದಲ್ಲಿ ಸಮಾಜವಾದೀ ಚಿಂತನೆಯ ಬರಹಗಳಿಗೆ ಒಂದು ಅಥಾರಿಟಿ. ರಾಮಮನೋಹರ ಲೋಹಿಯಾರ ಚಿಂತನೆಗಳನ್ನು ಅತೀ ಹೆಚ್ಚು ಕನ್ನಡೀಕರಿಸಿದ ಲೇಖಕ ಮತ್ತು ಅನುವಾದಕ ಎಂಬ ಕೀರ್ತಿ ಸುರಕೋಡರದ್ದು.
ಅವರ ಮೊದಲ ಅನುವಾದ ಕೃತಿ ಲೋಹಿಯಾರ Caste system.. ಅದನ್ನವರು ಜಾತಿಪದ್ದತಿ ಎಂಬ ಹೆಸರಲ್ಲಿ 1986 ರಲ್ಲೇ  ಕನ್ನಡಕ್ಕೆ ತಂದು, ತನ್ನ ಮೊದಲ ಕೃತಿಗೇ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅನುವಾದ ಪ್ರಶಸ್ತಿ ಪಡಕೊಂಡಿದ್ದರು.

ಕನ್ನಡದ ಉತ್ಕೃಷ್ಟ ಅನುವಾದಕರಾದ ಸುರಕೋಡರು ಅನುವಾದಿಸಿದ ಯಾವುದೇ ಕೃತಿಯನ್ನು ಓದಿದರೂ ಅದೊಂದು ಅನುವಾದ ಕೃತಿ ಎಂಬ ಯಾವ ನಿಶಾನಿಯೂ ಕಾಣಸಿಗುವುದಿಲ್ಲ. ಸುರಕೋಡರ ಭಾಷೆ ಅಷ್ಟು ಸೊಗಸು ಮತ್ತು ಸರಳ.
ಅವರ ಮಾತಿನಲ್ಲಿ ಉತ್ತರ ಕರ್ನಾಟಕದ ಕನ್ನಡ ಸೊಗಡು ಸ್ಪಷ್ಟವಾಗಿ ಕಾಣುತ್ತದಾದರೂ ಬರವಣಿಗೆಯಲ್ಲಿ ಅದರ ಲವಲೇಶವೂ ಕಾಣಸಿಗದಿರುವುದು ಒಂದು ವಿಶೇಷ.

ಉತ್ತರ ಕರ್ನಾಟಕದ ಭಾಷೆಯ ಕ್ಲಿಷ್ಟತೆ ಬೇಂದ್ರೆ, ಬಸವರಾಜ ಕಟ್ಟೀಮನಿ ಚಂಪಾ ಮುಂತಾದವರ ಬರಹಗಳಲ್ಲಿ ಇಣುಕುತ್ತವೆ. ಯಾವ ಚಂಪಾ ದೇವನೂರರ ಕುಸುಮಬಾಲೆ ಮತ್ತು ಕುವೆಂಪುರವರ ರಾಮಾಯಣ ದರ್ಶನಂ ನ್ನು ಕನ್ನಡಕ್ಕೆ ಅನುವಾದಿಸಬೇಕೆಂದು ವ್ಯಂಗ್ಯವಾಡಿದ್ದರೋ‌ ಅದೇ ಚಂಪಾರ ಕೆಲವೊಂದು ವಾಕ್ಯಗಳನ್ನು ನಮ್ಮ ಮಂಗಳೂರಿಗರು‌ ಓದುವಾಗ ಅವರಿಗೂ ಅದನ್ನು ಕನ್ನಡಕ್ಕೆ ಅನುವಾದಿಸಬೇಕೆಂದೆನಿಸಿದರೆ ಆಶ್ಚರ್ಯವಿಲ್ಲ.

ಸುರಕೋಡರು ಹಿಂದಿ, ಇಂಗ್ಲಿಷ್, ಉರ್ದು ಹೀಗೆ ಮೂರು ಭಾಷೆಗಳಿಂದ ಅನೇಕ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಯಾವುದೇ ಮೂಲ ಭಾಷೆಯ ಕೃತಿಯಿರಲಿ‌ ಆಯಾ ಭಾಷೆಯ ನುಡಿಕಟ್ಟನ್ನು ಕನ್ನಡದ ಸಂದರ್ಭಕ್ಕೆ ಅನುವಾದಿಸುವಾಗ ಹೆಚ್ಚಿನೆಲ್ಲಾ ಲೇಖಕರು ತಿಣುಕಾಡುವುದನ್ನು ಒಳ್ಳೆಯ ಓದುಗ ಗುರುತಿಸುತ್ತಾನೆ. ಆದರೆ ಸುರಕೋಡ ಅದೆಷ್ಟು ಸರಳವಾಗಿ ಅನುವಾದಿಸುತ್ತಾರೆಂದರೆ ಆ ನುಡಿಕಟ್ಟು ಮೂಲ ಕನ್ನಡದ್ದೇ ಎಂದೆನಿಸಬೇಕು.

ಸುರಕೋಡರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ತಂದುಕೊಟ್ಟ ‘ರಶೀದಿ ಟಿಕೇಟು’ ಮೂಲ ಪಂಜಾಬಿ ಭಾಷೆಯದ್ದು.‌ ಅದು ಪಂಜಾಬಿಯಿಂದ ಹಿಂದಿಗೆ ಅನುವಾದಗೊಂಡದ್ದರಿಂದ ಸುರಕೋಡರು ಕನ್ನಡಕ್ಕೆ ಅನುವಾದಿಸಿದ್ದಾರೆ. ಪಂಜಾಬಿಯಿಂದ ನೇರ ಅನುವಾದಗೊಂಡ ಹಿಂದಿಯಲ್ಲಿ ರಶೀದಿ ಟಿಕೆಟ್ ಗಮನ ಸೆಳೆದಿರಲೇ ಇಲ್ಲ. ಆದರೆ ಕನ್ನಡದಲ್ಲಿ ಅದೆಷ್ಟು ಸೊಗಸಾಗಿ ಬಂತೆಂಬುವುದಕ್ಕೆ ಅದಕ್ಕೆ ಸಿಕ್ಕ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೇ ಸಾಕ್ಷಿ. ಸುರಕೋಡರ ‘ಸದ್ಯಕ್ಕಿದು ಹುಚ್ಚರ ಸಂತಿ’ ಕೃತಿಯ ಮುನ್ನುಡಿಯಲ್ಲಿ ಕನ್ನಡದ ಶ್ರೇಷ್ಠ ವಿಮರ್ಶಕರಾದ ರಹಮತ್ ತರೀಕೆರೆ ಹೀಗೆ ಬರೆಯುತ್ತಾರೆ ” ಹೋದ ವರ್ಷ ಸುರಕೋಡರು ಅನುವಾದಿಸಿದ ರಶೀದಿ ಟಿಕೇಟು ಕನ್ನಡದಲ್ಲಿಯೇ ಹುಟ್ಟಿದೆ ಎಂಬಷ್ಟು ಸಹಜವಾಗಿ ಅದರ ಅನುವಾದವಿದೆ”.

ನಾನು (ಇಸ್ಮತ್ ಪಜೀರ್) ಉರ್ದುವಿನ ಸಾದತ್ ಹಸನ್ ಮಂಟೋರ ಕನ್ನಡಕ್ಕೆ ಅನುವಾದಗೊಂಡ ಹೆಚ್ಚಿನೆಲ್ಲಾ ಕೃತಿಗಳನ್ನು ಓದಿದ್ದೇನೆ. ಅವುಗಳಲ್ಲಿ ಪ್ರಮುಖವಾದುದು ಜೆ.ಬಾಲಕೃಷ್ಣರ “ಮಂಟೋ ಕತೆಗಳು, ಫಕೀರ್ ಮುಹಮ್ಮದ್ ಕಟ್ಪಾಡಿಯವರ “ದೇಶ ವಿಭಜನೆಯ ಕತೆಗಳು’, ಸರಜೂ ಕಾಟ್ಕರ್ ಅವರ “ಕೆಲವು ನಿಷೇಧಿತ ಕತೆಗಳು”, ಕೆ.ಎಚ್..ಶ್ರೀನಿವಾಸ್ ರವರ ” ಸಾದತ್ ಹಸನ್ ಮಂಟೋ” ಎಂಬ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಕಟಿಸಿದ “”ಸಾದತ್ ಹಸನ್ ಮಂಟೋ”  ಮತ್ತು ಸುರಕೋಡರವರ “ಸದ್ಯಕ್ಕಿದು ಹುಚ್ಚರ ಸಂತಿ”.

ನನಗೆ ಇವುಗಳಲ್ಲಿ ಅತ್ಯಂತ ಇಷ್ಟವಾದ ಅನುವಾದ ಸುರಕೋಡರದ್ದು. ನನ್ನ ಆತ್ಮೀಯರೂ, ಸಾಹಿತ್ಯದಲ್ಲಿ ನನ್ನ ಮಾರ್ಗದರ್ಶಕರೂ ಆದ ಫಕೀರ್ ಮುಹಮ್ಮದ್ ಕಟ್ಪಾಡಿಯವರ ದೇಶ ವಿಭಜನೆಯ ಕತೆಗಳು ಕೃತಿಯೂ ಸುರಕೋಡರ “ಸದ್ಯಕ್ಕಿದು ಹುಚ್ಚರ ಸಂತಿ”ಯಷ್ಟು ನನ್ನನ್ನು ತಾಕಲಿಲ್ಲ ಮತ್ತು ಹೃದ್ಯವಾಗಿರಲಿಲ್ಲ. ಸುರಕೋಡರ ಅನುವಾದ ಓದುವಾಗ ನನಗಂತೂ ಇದು ಮೂಲಕೃತಿಯೋ ಎನ್ನುವಷ್ಟು ಇಷ್ಟವಾಗಿತ್ತು ಮತ್ತು ಆಪ್ತವಾಗಿ ಓದಿಸುತ್ತಾ ಹೋಗಿತ್ತು.

ಸುರಕೋಡ ಅವರು ಕನ್ನಡಕ್ಕೆ ತಂದ ಕೃತಿಗಳೆಲ್ಲವೂ ಅತ್ಯಂತ ಮೌಲಿಕ ಕೃತಿಗಳು. ಸುರಕೋಡ ಅವರು ಬಿ.ಎನ್.ಪಾಂಡೆಯವರ  “ಹಿಂದೂ ಮಂದಿರ್‌ ಔರ್ ಔರಂಗಜೇಬ್ ಕಿ ಫರ್ಮಾನ್” ಕೃತಿಯನ್ನು ‘ಹಿಂದೂ ಮಂದಿರಗಳು ಮತ್ತು ಔರಂಗಜೇಬನ ಆದೇಶಗಳು’ ಎಂಬ ಶೀರ್ಷಿಕೆಯಲ್ಲಿ ಕನ್ನಡಕ್ಕೆ ಅನುವಾದಿಸಿದರು. ಸುಮಾರು ಒಂದು ದಶಕದ ಹಿಂದೆ ಬಳ್ಳಾರಿಯ ಲೋಹಿಯಾ ಪ್ರಕಾಶನ ಪ್ರಕಟಿಸಿದ ಈ ಕೃತಿಯನ್ನು ಇತ್ತೀಚೆಗೆ ಧಾರವಾಡದ ಲಡಾಯಿ ಪ್ರಕಾಶನ ಮರು ಮುದ್ರಿಸಿತು.

ಪುಟ್ಟ ಕೃತಿಯಾದರೂ ಅತ್ಯಂತ ಮಹತ್ವದ ಈ ಕೃತಿಯಲ್ಲಿ ಮೊಗಲ್ ಚಕ್ರವರ್ತಿ ಔರಂಗಜೇಬ್ ಬಗ್ಗೆ ಅತ್ಯಂತ ಅಪೂರ್ವ ಐತಿಹಾಸಿಕ ಮಾಹಿತಿಗಳಿವೆ. ಔರಂಗಜೇಬ್ ಎಂದರೆ ಹಿಂದೂ ವಿರೋಧಿ, ಮತಾಂಧ, ದೇವಾಲಯ ಧ್ವಂಸಕ ಎಂಬ ಋಣಾತ್ಮಕ ಚಿತ್ರಣವೇ ಇತಿಹಾಸದುದ್ದಕ್ಕೂ ನಮಗೆ ಕಾಣಸಿಗುತ್ತವೆ. ಆದರೆ ವಾಸ್ತವ ಅದಲ್ಲ ಎಂಬುವುದನ್ನು ಇತಿಹಾಸಕಾರ ಬಿ.ಎನ್.ಪಾಂಡೆಯವರು ಧಾರಾಳ ಸಾಕ್ಷ್ಯ ಸಮೇತ ಈ ಕೃತಿಯಲ್ಲಿ ನಿರೂಪಿಸಿದ್ದಾರೆ.

ಒಟ್ಟಿನಲ್ಲಿ ಔರಂಗಜೇಬ್ ಬಗ್ಗೆ ಸದಭಿಪ್ರಾಯ ತಾಳಿದ ಮಹತ್ವದ ಈ ಕೃತಿ ಓದುವವರೆಗೂ ಔರಂಗಜೇಬ್ ಬಗ್ಗೆ ನನಗೂ ಅನೇಕ ಸಂಶಯಗಳಿದ್ದವು. ಅಂತಹ ಸಂಶಯಗಳನ್ನು ಈ ಕೃತಿ ದೂರೀಕರಿಸಿದೆ. ಇದರಲ್ಲಿ ನಮ್ಮ ಕನ್ನಡನಾಡಿನ ವೀರಪುತ್ರ ಟಿಪ್ಪು ಕುರಿತಂತೆಯೂ ಅಪೂರ್ವ ಒಳನೋಟವಿರುವ ಲೇಖನವಿದೆ. ಸಾಮಾನ್ಯವಾಗಿ ಇತಿಹಾಸದ ‌ಪುಸ್ತಕಗಳೆಂದರೆ‌ ಸ್ವಲ್ಪ ಹೆಚ್ಚೇ ಎನ್ನಬಹುದಾದಷ್ಟು ಬೋರ್. ಆದರೆ ಸುರಕೋಡರ ಅನುವಾದದಲ್ಲಿ ಎಷ್ಟು  ಜೀವಂತಿಕೆಯಿದೆಯೆಂದರೆ ಒಮ್ಮೆ ಕೈಗೆತ್ತಿಕೊಂಡರೆ ಒಳ್ಳೆಯ ಓದುಗ ಮುಗಿಸದೇ ಕೆಳಗಿಡಲಾರ. ಸುಲಲಿತವಾಗಿ‌‌‌ ಓದಿಸುವ ಈ ಕೃತಿಯನ್ನು‌ ಓದುತ್ತಾ ಹೋದರೆ ಅನುವಾದಿತ ಕೃತಿಯೆಂದೆನಿಸುವುದೇ ಇಲ್ಲ.

ಅಸ್ಗರ್ ಅಲಿ ಇಂಜಿನಿಯರ್ ಅವರ “ಇಸ್ಲಾಂ ಹುಟ್ಟು ಮತ್ತು ವಿಕಾಸ” ಕೃತಿಯನ್ನು ಸುರಕೋಡರು ಸುಂದರವಾಗಿ ಅನುವಾದಿಸಿದ್ದಾರೆ. ಈ ಕೃತಿಯ ಮೂಲಕ ಇಸ್ಲಾಂ ಧರ್ಮದ ಕುರಿತಂತೆ ಮುಸ್ಲಿಮೇತರ‌ ಓದುಗ ವರ್ಗಕ್ಕೆ ಇಸ್ಲಾಮಿನ ಸುಧಾರಣಾವಾದಿ ನಿಲುವನ್ನು ಲೇಖಕರು ಪರಿಚಯಿಸಿದ್ದಾರೆ.

ಇಸ್ಲಾಮಿನ ಚರಿತ್ರೆ, ತತ್ವಶಾಸ್ತ್ರ ಇತ್ಯಾದಿಗಳ ಕುರಿತ ವಿಸ್ತೃತ ಚರ್ಚೆ ಇರುವ ಈ ಕೃತಿಯ ಕನ್ನಡಾನುವಾದ ಸುರಕೋಡರ ಹೊರತಾಗಿ ಬೇರೆ ಯಾರೇ ಮಾಡಿದರೂ ಆ ಮಟ್ಟಿನ ಹೃದ್ಯ ಅನುಭವ ಸಿಗುತ್ತಿರಲಿಲ್ಲವೇನೋ ಎಂದೆನಿಸುತ್ತದೆ. ಇಸ್ಲಾಮಿನ ಕುರಿತಂತೆ ಇರುವ ತಪ್ಪು ಕಲ್ಪನೆಗಳನ್ನು ದೂರೀಕರಿಸುವ ಈ ಕೃತಿಯ ಕನ್ನಡಾನುವಾದ ಸಾಹಿತ್ಯ ಕ್ಷೇತ್ರಕ್ಕೆ ಅತ್ಯಂತ ಮಹತ್ವದ ಕೊಡುಗೆ. ಇತಿಹಾಸದ ಹಿನ್ನೆಲೆಯಲ್ಲಿ ವರ್ತಮಾನದ ಚೆರ್ಚೆ ನಡೆಸುವ ಈ ಕೃತಿಯನ್ನು ಓದುತ್ತಾ ಹೋದಂತೆ ಎಲ್ಲೂ ಇದೊಂದು ಅ‌ನುವಾದಿತ ಕೃತಿ ಎನ್ನಬಹುದಾದ ಕುರುಹು ಸಿಗದಷ್ಟು ಅದ್ಭುತವಾಗಿ ಸುರಕೋಡರು ಅದನ್ನು ಕನ್ನಡೀಕರಿಸಿದ್ದಾರೆ.

ನಿವೃತ್ತ ಪೋಲೀಸ್ ಅಧಿಕಾರಿ ಮತ್ತು ಮಹಾರಾಷ್ಟ್ರದ ವಾರ್ಧಾದ ಮಹಾತ್ಮ ಗಾಂಧಿ ಯುನಿವರ್ಸಿಟಿಯ ಉಪಕುಲಪತಿಗಳಾಗಿದ್ದ ವಿಭೂತಿ ನಾರಾಯಣ್ ರಾಯ್ ಅವರ Communal riots and Indian Police ಎಂಬ ಕೃತಿಯನ್ನು”ಕೋಮು ಗಲಭೆಗಳು ಮತ್ತು ಭಾರತದ ಪೋಲೀಸರು” ಎಂಬ ಶೀರ್ಷಿಕೆಯಲ್ಲಿ ಸುರಕೋಡ ಅವರು ಕನ್ನಡೀಕರಿಸಿದ್ದಾರೆ.

ಅಧ್ಯಯನಾತ್ಮಕವಾದ ಈ ಕೃತಿ ಭಾರತದ ಕೋಮು ಗಲಭೆಗಳ ಹಿನ್ನೆಲೆ, ಕೋಮುಗಲಭೆಗಳ ಸಂದರ್ಭದಲ್ಲಿ ಅಲ್ಪಸಂಖ್ಯಾತ ಮತ್ತು ಬಹುಸಂಖ್ಯಾತರ ಮನೋಸ್ಥಿತಿ, ಅಲ್ಪಸಂಖ್ಯಾತರಲ್ಲಿರುವ ಅಭದ್ರತೆಯ ಭಾವನೆ,ರಕ್ಷಣೆ ನೀಡಬೇಕಾದ ಪೋಲೀಸರ ಪಕ್ಷಪಾತೀಯ ನಿಲುವು. ಅದು ಅಲ್ಪಸಂಖ್ಯಾತ ಸಮುದಾಯದ ಮೇಲೆ ಬೀರುವ ಪರಿಣಾಮ ಇತ್ಯಾದಿ.. ಹೀಗೆ ಎಲ್ಲವನ್ನೂ ಅಂಕಿ ಅಂಶಗಳನ್ನಿಟ್ಟುಕೊಂಡೇ ವಿಭೂತಿ ನಾರಾಯಣ್ ರಾಯ್ ವಿಶ್ಲೇಷಣೆ ನಡೆಸಿದ್ದಾರೆ. ಅನುವಾದದ ಬಗ್ಗೆ ಎರಡು ಮಾತೇ ಇಲ್ಲವೆನ್ನುವಷ್ಟು ಸರಾಗವಾಗಿ ಓದಿಸುತ್ತದೆ.

ಮಹಾರಾಷ್ಟ್ರದ ಹಿರಿಯ ಸಮಾಜವಾದಿಗಳಾಗಿದ್ದಂತಹ ಮಧು ಲಿಮೆಯವರು ರಚಿಸಿದ “ಅಯೋಧ್ಯೆ : ವಿನಾಶಕಾರಿ ಓಟ್ ಬ್ಯಾಂಕ್ ರಾಜಕೀಯ” ಎಂಬ  ಕೃತಿಯನ್ನು ‌ಸುರಕೋಡ ಅವರು ಕನ್ನಡೀಕರಿಸಿದ್ದಾರೆ. ಇದು ಭಾರತದಲ್ಲಿ ಧರ್ಮಾದಾರಿತ ರಾಜಕೀಯದ ಆರಂಭ, ನಂತರದ ಬೆಳವಣಿಗೆ ಇದು ಭಾರತದ ಸೆಕ್ಯುಲರ್‌ ಪರಂಪರೆಗೆ ನೀಡಿದ ಏಟು, ಪ್ರಜಾತಂತ್ರಕ್ಕೆ ಮಾರಕವಾದ ಬಗೆ ಇವೆಲ್ಲವನ್ನೂ ವಿಶ್ಲೇಷಿಸಿದ್ದಾರೆ. ಬಾಬರೀ ಮಸೀದಿಯ ಹಿನ್ನೆಲೆ ಮತ್ತು ಅದರ ಧ್ವಂಸ ಹೇಗೆ ನಮ್ಮ ಸಂವಿಧಾನದ ಆಶಯಗಳನ್ನು ಬುಡಮೇಲುಗೊಳಿಸಿದೆ ಎಂಬ ಚರ್ಚೆಯೂ ಅಲ್ಲಿದೆ. ಅದನ್ನು ಅತ್ಯಂತ ಸರಳ ಕನ್ನಡದಲ್ಲಿ ಓದುಗರ ಮನಸ್ಸಿನಾಳಕ್ಕೆ ಇಳಿಯುವಂತೆ ಸುರಕೋಡ ಅನುವಾದಿಸಿದ್ದಾರೆ.

ಸುರಕೋಡರ ಎಲ್ಲಾ ಅನುವಾದಗಳಲ್ಲಿ ಸಮಾಜವಾದದ ಕಂಪು ಸೂಸುತ್ತದೆ. ಒರಿಸ್ಸಾದ ಹಿರಿಯ ಸಮಾಜವಾದಿ ಕಿಶನ್ ಪಟ್ನಾಯಕ್ ರವರ ‘ವಿಕಲ್ಪ್ ಹೀನ್ ನಹೀ ಹೈ ದುನಿಯಾ” ಎಂಬ ಕೃತಿಯನ್ನು “ಪ್ರತಿಚಿಂತನೆ” ಎಂಬ ಹೆಸರಲ್ಲಿ ಸುರಕೋಡ ಕನ್ನಡಕ್ಕೆ ತಂದಿದ್ದಾರೆ. ಸಮಾಜವಾದವು ಸದಾ ಆಶಾವಾದಿಯಾಗಿರುತ್ತದೆ ಎಂಬ ಆಶಯವುಳ್ಳ ಈ ಕೃತಿಯು ಸುರಕೋಡರ ಸಮಾಜವಾದದೆಡೆಗಿನ ತೀರದ ದಾಹಕ್ಕೆ ಒಂದು ಉತ್ತಮ ನಿದರ್ಶನ.

ಸಾಹಿತ್ಯ ಜಗತ್ತಿನ ಅಮರ‌ ಪ್ರೇಮಿಗಳಾದ ಸಾಹಿರ್ ಲುಧಿಯಾನ್ವಿ ಮತ್ತು ಅಮೃತಾ ಪ್ರೀತಂರ ಪ್ರಣಯದ ಕುರಿತಂತೆ ಅನೇಕ ಬಿಡಿ ಬರಹಗಳನ್ನು ಬರೆದಿರುವ ಸುರಕೋಡರಿಗೆ ಅವರ ಮೇಲೆ ಮತ್ತವರ ಪ್ರಣಯದ ಮೇಲೆ ಅದೆಂತಹದೋ ವಿಚಿತ್ರ ಮೋಹ. ಅದರ ಪರಿಣಾಮವಾಗಿ ಬಂದ ಸುರಕೋಡರ ಸ್ವತಂತ್ರ ಕೃತಿ “ಪ್ರೇಮ ಲೋಕದ ಮಾಯಾವಿ”.

ಸಾಹಿರ್ ಜೀವನ ಮತ್ತು ಕಾವ್ಯ ಎಂಬ ಉಪಶೀರ್ಷಿಕೆಯನ್ನು ಈ ಕೃತಿಗೆ ನೀಡಿದ್ದಾರೆ. ಈ ಕೃತಿಯನ್ನು ಎರಡು ಭಾಗಗಳನ್ನಾಗಿ ಮಾಡಿ ಒಂದರಲ್ಲಿ ಸಾಹಿರ್ ಜೀವನದ ವೃತ್ತಾಂತವನ್ನೂ, ಎರಡನೇ ಭಾಗದಲ್ಲಿ ಅಮೃತಾರ ಜೀವನ ವೃತ್ತಾಂತವನ್ನು ಸುಂದರವಾಗಿ ಚಿತ್ರಿಸಿದ್ದಾರೆ.

ಕೋಮು ಸೌಹಾರ್ದವನ್ನು ತನ್ನ ಬರಹಗಳ ಮೂಲದ್ರವ್ಯವಾಗಿಸಿದ್ದ ಸುರಕೋಡರು 1993ರಲ್ಲಿ “ಹಿಂದೂ ಧರ್ಮ ಮತ್ತು ಹಿಂದೂ ಮುಸ್ಲಿಂ ಸಮಸ್ಯೆಗಳು’ ಎಂಬ ರಾಮಮನೋಹರ ಲೋಹಿಯಾರ ಪ್ರಖರ ವೈಚಾರಿಕ ಚಿಂತನೆಗಳಡಗಿರುವ ಕೃತಿಯನ್ನು ಕನ್ನಡಕ್ಕೆ ತಂದರು.

ಓಂಕಾರ್ ಶರದ್  ರಚಿಸಿದ ಲೋಹಿಯಾ ಜೀವನ ಚರಿತ್ರೆಯನ್ನು 2000ದಲ್ಲಿ ಸುರಕೋಡ ಕನ್ನಡಕ್ಕೆ ಅನುವಾದಿಸಿದರು. ಇವಲ್ಲದೇ ಸಮಾಜವಾದಿ ಚಿಂತನೆಯ ಹಲವಾರು ಬಿಡಿ ಬರಹಗಳನ್ನೂ ಸುರಕೋಡ ಬರೆದಿದ್ದಾರೆ. ಬಹುಶಃ ಇಷ್ಟು ಅಗಾಧ ಪ್ರಮಾಣದಲ್ಲಿ ಸಮಾಜವಾದಿ ಸಾಹಿತ್ಯಕ್ಕೆ ಕೊಡುಗೆ ನೀಡಿದ ಇನ್ನೊಬ್ಬ ಸಾಹಿತಿ ಕನ್ನಡದಲ್ಲಿಲ್ಲ.

ನನ್ನಲ್ಲಿ ಅನೇಕರು ಕೇಳಿದ್ದಿದೆ.‌ ಅನುವಾದ ಸಾಹಿತ್ಯದಲ್ಲಿ ಅಂತಹ ವಿಶೇಷವೇನಿದೆ ಎಂದು. ಕನಕದಾಸರ ಮೂರು ಕಾವ್ಯಕೃತಿಗಳನ್ನು ಬ್ಯಾರಿ ಭಾಷೆಗೆ ಅನುವಾದಿಸಿದ ಅನುಭವವಿರುವ ನನ್ನ ಪ್ರಕಾರ ಸ್ವಂತ ರಚನೆಯಷ್ಟೇ ಅಥವಾ ಅದಕ್ಕಿಂತ ತುಸು ಹೆಚ್ಚೇ ಕಷ್ಟ ಅನುವಾದ ಸಾಹಿತ್ಯದಲ್ಲಿದೆ.

ಅನುವಾದದಲ್ಲಿ ಮೂಲ ಲೇಖಕನ ಮತ್ತು ಕೃತಿಯ ಆಶಯಕ್ಕೆ ಧಕ್ಕೆ ಬಾರದಂತೆ ಎಚ್ಚರ ವಹಿಸಬೇಕು. ಅನುವಾದಕ ತನ್ನ ಸ್ವಂತದ್ದನ್ನು ಸೇರಿಸುವಂತಿಲ್ಲ. ಮೂಲ ಮತ್ತು ಅನುವಾದಿಸುವ ಎರಡೂ ಭಾಷೆಗಳ ಮೇಲೆ ಒಳ್ಳೆಯ ಹಿಡಿತವಿರಬೇಕು. ಅನುವಾದದಲ್ಲಿ ಮೂಲದ ಸ್ವಾದ ಕಡಿಮೆಯಾಗದಂತೆ ಭಾಷೆಯನ್ನು ಅತ್ಯಂತ ಸರಳಗೊಳಿಸಬೇಕು. ವಾಕ್ಯ ರಚನೆಯಲ್ಲೂ ವಿಶೇಷ ಎಚ್ಚರ ವಹಿಸಬೇಕು.

ಕನ್ನಡ ಸಾಹಿತ್ಯದಲ್ಲಿ ಸಮಾಜವಾದದ ಕಂಪು ಹರಡಿಸಿದ ಕನ್ನಡದ ಅಗ್ರ ಶ್ರೇಣಿಯ ಅನುವಾದಕರಲ್ಲೊಬ್ಬರಾದ ಸುರಕೋಡರ ಸಾಹಿತ್ಯಿಕ ಕೊಡುಗೆಗೆ ಯಾವತ್ತೋ ಸಲ್ಲಬೇಕಾಗಿದ್ದ ಈ ಪ್ರಶಸ್ತಿ ತಡವಾಗಿಯಾದರೂ ಸಂದಿದ್ದು ಸಂತೋಷದ ಸಂಗತಿ.
ಅವರಿಂದ ಕನ್ನಡ ಸಾಹಿತ್ಯ‌ ಲೋಕ ಇನ್ನಷ್ಟು ಶ್ರೀಮಂತಗೊಳ್ಳಲಿ. ಇನ್ನಷ್ಟು ಶ್ರೇಷ್ಠ ಪ್ರಶಸ್ತಿಗಳು ಅವರಿಗೆ ಒಲಿದು ಬರಲಿ ಎಂದು ಹಾರೈಸುವೆ.

‍ಲೇಖಕರು Avadhi

December 2, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Shyamala Madhav

    ನೀವು ಉದ್ಧರಿಸಿದ ಎಲ್ಲ ಕೃತಿಗಳನ್ನೂ ಪಡೆದು ಓದುವ ಆಶೆ ಬಲವಾಯ್ತು. ಉತ್ತಮ ಲೇಖನಕ್ಕೆ ಅಭಿನಂದನೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: