
ತನ್ನ ಹರಗಣಗಳ
ಕಂತೆಯಿಂದ ಅವಳು ತುಂಡು
ಬಾಚಣಿಕೆ ಎತ್ತಿಕೊಂಡು
ಅವನ ನೆತ್ತಿಯಲ್ಲಿ ಅಳಿದುಳಿದ
ಕೆಂಚುಕೂದಲನ್ನು ಬಾಚತೊಡಗಿದಳು.
ಕಣ್ಣಲ್ಲೇ ಗುನುಗುತ್ತಾ
ಬೈತಲೆ ತೆಗೆದಳು.
ಪೂರ್ವಾಶ್ರಮದ ಬದುಕಲ್ಲಿ
ಇದೊಂದು ಅರ್ಥಹೀನ ನಿತ್ಯಕರ್ಮ.
ಹುಡುಗ ತಿಂಡಿ ತಿಂದು ಸ್ಕೂಲಿಗೆ ಹೊರಡುವ
ಮೊದಲಿನ ಮಾಮೂಲು ಕೆಲಸ.
ಈಗ ಅವನ ಪುಟ್ಟ ಗೋರಿಯ ಮೇಲೆ
ಹೂವೊಂದನ್ನು ಇರಿಸುತ್ತಿದ್ದೇನೋ ಎಂಬಂತೆ
ಆ ತಾಯಿ ತಲೆ ಬಾಚುತ್ತಿದ್ದಾಳೆ.

ಹಿರೋಶಿಮಾ ಮಾನ್ ಅಮೋರ್ ಸಿನಿಮಾವನ್ನು ಹೆಗ್ಗೋಡಿನಲ್ಲಿ ನೋಡಿ ಬಂದಿದ್ದೆ. ಚಿನುವಾ ಅಚಿಬೆ ಈ ಸಾಲುಗಳನ್ನು ಓದುತ್ತಿದ್ದಂತೆ ಆ ಸಿನಿಮಾದ ಭೀಕರತೆ ಅರ್ಥವಾಗುತ್ತಾ ಹೋಯಿತು. ನಿರಾಶ್ರಿತರ ಶಿಬಿರದಲ್ಲಿ ಆ ತಾಯಿ, ಆ ಮಗ, ಬೇದಿಯಿಂದ ನರಳುತ್ತಾ ತಿಕ ತೊಳೆದುಕೊಳ್ಳಲು ಕೂಡ ಶಕ್ತಿಯಿಲ್ಲದೆ ಬಿದ್ದಿರುವ ಮಕ್ಕಳು. ಇಡೀ ವಾತಾವರಣವನ್ನೇ ವ್ಯಾಪಿಸಿದ ವಾಸನೆ. ಅದರ ಮಧ್ಯೆ ಹೂತ ತಾಯಿಯ ಕಣ್ಣು. ನಾಳೆಗಳು ಗೊತ್ತಿಲ್ಲದ ಆಕಾಶ.
ಇಪ್ಪತ್ತೂ ಪ್ಲಸ್ ವರ್ಷಗಳ ಹಿಂದೆ ನಮ್ಮ ಇಂಗ್ಲಿಷ್ ಮೇಷ್ಟ್ರು ಚಿನುವಾ ಅಚಿಬೆ ಓದಿದ್ದೀಯಾ ಅಂತ ಕೇಳಿ, ಥಿಂಗ್ಸ್ ಫಾಲ್ ಅಪಾರ್ಟ್ ಕೈಗಿತ್ತಾಗ ಮತ್ತೊಂದು ಜಗತ್ತು ತೆರೆದುಕೊಂಡಿತು. ಅದನ್ನು ಗಬಗಬ ಓದಿ ಗೆಳೆಯರಿಗೆಲ್ಲ ಓದಿಸಿ, ಅನುವಾದಿಸಲು ಹೆಣಗಾಡಿ, ನಮ್ಮ ನೆಮ್ಮದಿಯಾಚೆಗೆ ಯಾವ ಸೌಕರ್ಯಗಳೂ ಇಲ್ಲದ ಮತ್ತೊಂದು ಬದುಕಿದೆ ಅಂತ ಅರ್ಥಮಾಡಿಕೊಂಡು, ಆ ಬದುಕಿನೊಳಗೆ ಕೂಡ ಸಂಭ್ರಮ, ವಿಷಾದಗಳು ನೆಲೆಗೊಂಡಿವೆ ಎಂದು ನಿಟ್ಟುಸಿರಿಡುವ ಹೊತ್ತಿಗೇ, ಅಚಿಬೆ ಕರ್ನಾಟಕಕ್ಕೂ ಬಂದು ಹೋಗಿದ್ದರು.
ನಿನ್ನೆ ಅವರು ಕಣ್ಮರೆಯಾದ ಸುದ್ದಿ. ಮೇಷ್ಟ್ರು ಕೊಟ್ಟ ಹಳೇ ಪುಸ್ತಕ ಹುಡುಕುತ್ತಿದ್ದೇನೆ.
ಯಾಕೋ ಸಿಗುತ್ತಲೇ ಇಲ್ಲ.
ಅಚಿಬೆಯ ನೆನೆದು ಜೋಗಿ
ನಿಮಗೆ ಇವೂ ಇಷ್ಟವಾಗಬಹುದು…





Lucky to hear Achebe when he came to Karnataka. Never forget Things fall Apart, Fall of a Sparrow, Anthills of Savannah. It opened a new world of literature which was at the hands of Americans, Britons and Europeans.
Ohhh …
oh, its mistake by me, the novel is Arrow of God and not Fall of a Sparrow.
ಶ್ರೇಷ್ಠತೆಯ ವ್ಯಸನದೊಳಗೆ ನರಳುತ್ತಿರುವ ಕನ್ನಡ ಸಾಹಿತ್ಯದ ಪರ್ವಕಾಲದಲ್ಲಿಯೇ ಅಚಿಬೆ ಮೈಸೂರಿಗೆ ಬಂದಿದ್ದರು. ದೇವನೂರರೊಂದಿಗೆ ಮೈಸೂರಿಗೆ ಬಂದಿದ್ದರು. ಅದು ಮೈಸೂರು ಜಿಲ್ಲಾದ್ಯಂತ ನಡೆಯುತ್ತಿದ್ದ ದಲಿತರ ಮಾರಣಹೋಮದ ಸಂದರ್ಭವೂ ಹೌದು. ಆಗ ಆಚಿಬೆ ಹೇಳಿದ್ದು, ಸಾಹಿತ್ಯ ಎನ್ನುವುದು ತಮ್ಮ ಅಕ್ಷರ ಪಾಂಡಿತ್ಯವನ್ನು ಪ್ರದಶರ್ಿಸುವುದಕ್ಕಲ್ಲ, ಬದಲಿಗೆ ಅಕ್ಷರವನ್ನು ಹಂಚುವುದಕ್ಕೆ. ನಮ್ಮ ಸಹಜೀವಿಯನ್ನು ಹೀಗೆ ಸಾಯಿಸುವಾಗ ಅಕ್ಷರ ಎನ್ನುವುದು ಸಂಜೀವಿನಿಯಗಬೇಕು. ಆದರೆ ಇಲ್ಲಿನ ದುರಂತವೆಂದರೆ ಅಕ್ಷರ ಬಣ್ಣನೆಗೆ ಸೀಮಿತಗೊಳ್ಳುತ್ತಿದೆ ಎಂದಿದ್ದರು. ಆಗ ಆವರ ಧ್ವನಿಯಲ್ಲಿ ಆಫ್ರಿಕಾದ್ಯಂತ ಸಾಮ್ರಾಜ್ಯಷಾಹಿಗಳ ದೌರ್ಜನ್ಯ, ಹಿಟ್ಲರನ ಶ್ರೇಷ್ಠತೆಯ ಮಾರಣಹೋಮವನ್ನು ದಲಿತರ ಹತ್ಯೆ ಪ್ರಕರಣವನ್ನು ಹೋಲಿಸುತ್ತಿದೆ ಎಂದೆನಿಸುತ್ತಿತ್ತು