ಅಕ್ಷಯ ಆರ್ ಶೆಟ್ಟಿ ಕವಿತೆ – ಯಶೋಧರೆಯ, ಉವಾಚ…!

ಅಕ್ಷಯ ಆರ್ ಶೆಟ್ಟಿ

ರೋಗವೆಂಬ ಅಂಟು, ಮುದಿತನದ ಮೇಲ್ಮೆ, ಸಾವೆಂಬ ನಾಶ
ಕಾಡಿತೇ ಬುದ್ಧ, ಮಗುವಿನ ಸೆಳೆತದಾಚೆ……?
ಅನ್ನುವ ಸವೆದ ಪ್ರಶ್ನೆಯನೇ
ಮತ್ತೆ ಕೇಳುವ ಇಚ್ಚೆಯಿಲ್ಲ, ಗೌತಮ!
ನನ್ನೊಳಗಿನ ತುಮುಲಗಳ,
ಮತ್ತೆ ನಾ ಓರಣವಾಗಿಟ್ಟ ಸ್ತಬ್ಧಚಿತ್ರಗಳ
ಮೆಲುಕಷ್ಟೇ ಈ ಹೂರಣ…….

ಎಂಟು ದಿನದ ಕೂಸನ್ನೂ ಎಂಟು ವರ್ಷ ಕಾಯಿಸಿದೆ,
ಅಪ್ಪನೆಂಬ ಚಿತ್ರವ ಮನದ ಭಿತ್ತಿಯೊಳಗೆ ಮೂಡಿಸಲು…..

ಆ ರಾತ್ರಿ, ಮತ್ತೆಷ್ಟೋ ರಾತ್ರಿ
ಕಾದೆ… ಕಾದೆ;
ಕುದಿದ ನನ್ನೊಳಗನ್ನೇ ಹಳಿದೆ,
ನೀ ಬದ್ಧನಾಗಲಿಲ್ಲ ಸಂಸಾರಕೆ
ಅನ್ನುವ ಆರೋಪ ಮಾತ್ರ ನನ್ನೊಳಗಿರಲೇ ಇಲ್ಲ,
ನಿನ್ನಲ್ಲೇ ಸಂಗಾತಿಯನು ಎಳವೆಯಿಂದಲೇ ಕಂಡೆನಗೆ…!

ಗೌತಮ ನೀ ಬುದ್ಧನಾಗಿ ದೊರೆತಂದು
ಕೊನೆಗೊಳಿಸಿ, ನನ್ನ ಮನದ ಹುಡುಕಾಟ
ಮಗನ ಕಳುಹಿದೆ, ತಾಯಿಯಾಗಿ-
ತಂದೆಯ ತೋರಿಸುವ ಹೆಮ್ಮೆಯ ಜಗಕ್ಕೆಲ್ಲ ಸಾರಿದೆ…

ನಿನ್ನ ಕಾಣುವ ಉತ್ಕಟತೆಯ ಹತ್ತಿಕ್ಕಿ,
ರಾಹುಲನ ಸಂಭ್ರಮಕೆ, ಸಾಕ್ಷಿಯಾಗದೆ ಉಳಿದೆ…..!

ಸೋದರ ಸಂಬಂಧಿ ನೀನು,
ಮತ್ತೆ ವರ್ಷಗಳ ಸಂಸಾರ
ಎಲ್ಲವೂ ಸುಳ್ಳೆಂಬ ಭ್ರಮೆಗೆ ನೂಕಿ
-ಒಂದು ಮಾತೂ ಹೇಳದೆ, ಒಂದು ಮಾತೂ ಕೇಳದೆ-
ನೆರಳೇ ಉಳಿಸದೆ ಹೊರಟಾಗಲೂ
ನೀ ಬದ್ಧನಾಗಲಿಲ್ಲ ಸಂಸಾರಕೆ, ಅನ್ನುವ
ಆರೋಪವೇ ನನ್ನೊಳಗಿರಲಿಲ್ಲ!

ಆದರೂ “ನಾನು” ಎಂಬ ಏನೋ…
ನಿನ್ನ ಮೇಲಿದ್ದ ಅನಂತ ಪ್ರೀತಿಯಾಚೆ,
ಬಿಟ್ಟು ಹೋದ ನೀನೇ ಬಂದು ನೋಡಲು
ಹಠಕ್ಕೆ ಬಿದ್ದಿತ್ತು!

ನೀ ತಿರುಗಿ ಬಂದ ದಿನ, ನನ್ನೆದುರು ನಿಂತ ಕ್ಷಣ
ಎಲ್ಲ ಎಲ್ಲವೂ ಕರಗಿ ಭಿಕ್ಕುಣಿಯ ಮಾಡಿತ್ತು!
ಅಲ್ಲೂ ನೀ ನಡೆದ ದಾರಿಯ ಅನುಸರಿಸುವ ಬಯಕೆ…..

ನನ್ನ ತ್ಯಾಗಕೆ ನಿನ್ನ ಮೆಚ್ಚು ನುಡಿ,
ಅಷ್ಟು ವರ್ಷಗಳ ಪರಿತಪಿಸುವಿಕೆಗೆ
ಸಾಂತ್ವನದ ನಿಟ್ಟುಸಿರಾದರೂ,
ನಿನ್ನ ಜ್ಞಾನೋದಯದ ಮಗ್ಗುಲಲಿ
ನನ್ನೊಂದು ಕನವರಿಕೆ, ಸತ್ತು ಬಿದ್ದಿದೆ……
ಗೌತಮ,
ನೀನು ಜ್ಞಾನಿ, ಅರ್ಥೈಸುವಿಯೆಂದು,
ಯುಗಯುಗಗಳೇ ಕಳೆದರೂ,
ಕಾದಿದ್ದೇನೆ, ಕೇಳಿಯೇ ಕೇಳಿವಿಯೆಂದು,
“ನಿನಗೇನು ಬೇಕು, ಯಶೋಧರೆ?”
….ಎಂದು!

‍ಲೇಖಕರು Admin

January 23, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: