ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಕ್ಷತಾ ಕೃಷ್ಣಮೂರ್ತಿ ಹೊಸ ಕವಿತೆ- ಮೊಳಕೆಯೊಡೆಯುವ ಹುಕ್ಕಿ

ಅಕ್ಷತಾ ಕೃಷ್ಣಮೂರ್ತಿ

ಈ ಬಿರು ಬೇಸಿಗೆಯಲ್ಲಿ
ನೀ ನನ್ನ ಜೊತೆಯಲ್ಲಿ ಇಲ್ಲ 

ಎಂದು ಅನಿಸುತ್ತಲೇ ಇಲ್ಲ ..

ಬಿಸಿಲಿನ ಝಳ
ಮೂಡುಗಾಳಿಗೂ
ಬಿಸಿಯಾಗುವುದನು ಕಲಿಸಿದೆ
ಅಭ್ಯಾಸವಿದೆ
ನಿನ್ನ
ಬಿಸಿಯುಸಿರಿನ ಮಾಪು
ನನ್ನೆದೆಯ ಒಲವ ಕರಗಿಸುವಷ್ಟೇ ಇದೆ
ಧರೆ ಬಾಡದ ಹಾಗೆ ಕಂಡಲ್ಲೆಲ್ಲ
ನಿನ್ನೊಲವೆ
ಕುಂಭದಲಿ
ಉಪರಾಟಿ ಮಾಡದೆ
ಒಲವ ಸಮೀಕರಣ
ಬಿಡಿಸು ಮತ್ತೆ ಮತ್ತೆ

ನನ್ನ ಹಿಂದೆ ಮುಂದೆಲ್ಲ
ಚಿಗುರೊಡೆದಿದೆ ಹಪ್ಪು
ಎನ್ನಲಾರದ ನೆನಪು
ನಿನ್ನದೆ..
ಹೇಗೆ ಏಕೆ ಎಂದಾಯಿತು
ಕೇಳಬೇಡ ನೀನು
ಮರಣವಿರದ ಒಲವ ಪೈರು
ಎದೆಯಲ್ಲಿ ಬಿತ್ತಿ
ಧಪಧಪ
ಏಳು‌ಲೋಕ ಸುತ್ತವೆ ನೀನು

ಮುತ್ತಿಕ್ಕಲು ಸಿದ್ದವಾದ
ಮಳೆಹನಿಯಲೂ
ನಿನ್ನೊಲುಮೆ
ಮರಗಳ ತುಂಬಿ ಮಿಡಿಗಾಯಿ
ಎದೆಯ ನೆರಳು

ಅರಿವ ಆವರಿಸಿರುವ
ಅಂತರಾಳ ಅರಳಿಸುವ
ನಿನ್ನ ಚೌಕಾಸಿ ಮಾತುಗಳು
ಒಲವ ಬೀಜಗಳು
ಬಿದ್ದು ಭೂಮಿಯ ಸೇರಿ
ಮತ್ತದೇ ಬಣ್ಣ
ಮಣ್ಣೊಳಗೆ ಮೌನ
ಮೊಳಕೆಯೊಡೆಯುವ ಹುಕ್ಕಿ

ಒಲವು ನೆಲದಂತೆ
ಬಗೆದಷ್ಟು ತೆರೆಯುವುದು
ಬಿತ್ತಿದಷ್ಟು ಹಸಿರಾಗುವುದು
ಬಿತ್ತಿದ್ದನೇ ಬೆಳೆಯುವುದು
ಒಲವ ಹಾದಿ.
ಮುರ್ಕಿಯಿಲ್ಲದ
ಒಂದೇ ಹಾದಿ.

‍ಲೇಖಕರು Admin

8 July, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading