ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಂಬಿಕಾ ಇಡೂರು ಕವಿತೆ- ಅವಳು ನನ್ನಜ್ಜಿ…

ಅಂಬಿಕಾ ಇಡೂರು

ಹನ್ನೆರಡನೆ ವಯಸ್ಸಿಗೆ ತುಂಬುಕುಟುಂಬದ ಸೊಸೆಯಾದವಳು
ಆಡುವ ವಯಸ್ಸಿನಲ್ಲಿ ಸಂಸಾರದ ನೊಗ ಹಿಡಿದವಳು
ಹಾಸಿಗೆ ಹಿಡಿದ ತನ್ನತ್ತೆಯ ತಾಯಿಯ, ಚಾಕರಿ ಮಾಡಿದವಳು
ನಾಲ್ಕು ಗಂಡು, ಒಂದು ಹೆಣ್ಣನ್ನು ಹೆತ್ತವಳು…

ಬಾಣಂತನ ಗೀಣಂತನವೆನ್ನದೆ ಇನ್ನೊಬ್ಬರ ಗದ್ದೆಯಲ್ಲಿ
ನಾಟಿ ಮಾಡಿದವಳು, ಭತ್ತ ಕುಟ್ಟಿದವಳು
ತನ್ನ ಪಾಲಿಗೆ ಸಿಕ್ಕ ಒಂದು ಸೇರು ಅಕ್ಕಿಯನ್ನು
ಜತನದಿಂದ ಮನೆಗೆ ತಂದವಳು…

ನೆಂಟರಿಷ್ಟರು ಅವರಿವರ ಕೊಂಕು ಕೇಳಿದರೂ
ತನಗಲ್ಲವೆಂದು ಬದುಕು ಕಟ್ಟಿಕೊಂಡವಳು
ಮನೆಯಲ್ಲಿನ ದನಕರುಗಳಿಗೆ ಮೇವು ಹಾಕಿದವಳು
ಈಗಷ್ಟೇ ಹುಟ್ಟಿದ ಪುಟಾಣಿ ಕೋಳಿಮರಿಗಳಿಗೆ,
ಕತ್ತಿ ಕಾಯಿಸಿ ನೀರು ಕುಡಿಸಿದವಳು…

ಯಾವಾಗಲೂ ಹೆಚ್ಚೇ ಅನ್ನಸಾರು ಮಾಡಿಟ್ಟು
ಊಟದ ಸಮಯಕ್ಕೆ ಬಂದವರಿಗೆಲ್ಲ ಉಣಬಡಿಸಿದವಳು
ತುಂಬುಪ್ರೀತಿಯನ್ನು ಮೊಮ್ಮಕ್ಕಳಿಗೆ ನೀಡಿದವಳು
ಬದುಕಿನ ಬಗ್ಗೆ ದೂರುಗಳಿಲ್ಲದೆ ಜೀವಿಸಿದವಳು…

ಚಿನ್ನಬಣ್ಣಕ್ಕೆಲ್ಲ ಎಂದಿಗೂ ಆಸೆಪಡದವಳು
ತಾನು ಬದುಕಿದ ಮನೆಯನ್ನು ಅತ್ಯಂತ ಪ್ರೀತಿಸಿದವಳು
ಕೊನೆಗೆ ಆ ಮನೆಯಲ್ಲೇ ತನ್ನ ಕೊನೆಯುಸಿರೆಳೆದವಳು…

ಅವಳು ನನ್ನಜ್ಜಿ…
ನನ್ನ ಬದುಕಿನ ತುಂಬೆಲ್ಲ
ಪ್ರೀತಿ ಮಮತೆಯ ತುಂಬಿದ ಅಜ್ಜಿ…
ನನ್ನುಸಿರಿರುವವರೆಗೂ ಅವಳ ನೆನಪು ಹಸಿರಾಗಿರುವಷ್ಟು
ನನ್ನನ್ನು ಪ್ರೇಮಿಸಿದ ಅಜ್ಜಿ…

‍ಲೇಖಕರು Admin

13 November, 2022

1 Comment

  1. Prashantha Naik

    ಅಂಬಿಕಾ ಇಡೂರು ಅವರ ‘ಅವಳು ನನ್ನಜ್ಜಿ… ‘ ಕವಿತೆ ಹೃದಯಸ್ಪರ್ಶಿಯಾಗಿ ಮೂಡಿಬಂದಿದೆ. ಕವಿತೆ ಓದಿ ನನಗೂ ನನ್ನಜ್ಜಿಯ ನೆನಪಾಯಿತು.‌

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading