ಶ್ರೀದೇವಿ ಕೆರೆಮನೆ ಕವಿತೆ- ಒಂದು ಸುತ್ತಿನ ಕಥೆ…

ಶ್ರೀದೇವಿ ಕೆರೆಮನೆ

ಕೆಲಸ ಮುಗಿಸಿ ಬರುವವರೆಗೂ ಕಾದು
ಒಂದೇ ಒಂದು ಸುತ್ತು ಎನ್ನುವವನ
ಕುರಿತು ಎಲ್ಲಿಲ್ಲದ ಅಚ್ಚರಿ
ಹೇಳಲಾಗದ ನೂರು ಭಾವಗಳು
ಹೆಪ್ಪುಗಟ್ಟಿರುವ ಕಣ್ಣಿನ ಆಳದಲ್ಲಿ
ಇರುವುದೇನು ಎಂಬುದು ನಿಜಕ್ಕೂ
ಅರ್ಥವಾಗುವುದಿಲ್ಲ ಸರಿಯಾಗಿ

ಏನಿರಬಹುದು ಕಣ್ಣೊಳಗೆ
ನೇರಾನೇರ ದಿಟ್ಟಿಸುವುದು
ನಿಜಕ್ಕೂ ಹುಟ್ಟಿಸುತ್ತದೆ ಅರಿವಾಗದ ಮುಜುಗರ
ಒಂದಿಷ್ಟು ಭಯವೂ ಮತ್ತಿಷ್ಟು ನಾಚಿಕೆ
ಕಣ್ಣ ಕಡಲ ಪ್ರೇಮದೊಳಗೆ ಬಿದ್ದು
ಮೇಲೇಳಲಾಗದಿದ್ದರೆ ಎಂಬ ಅಂಜಿಕೆ
ಅಲ್ಲೇ ಹುದುಗಿದ ಭಾವಗಳು
ಅನಾಮತ್ತಾಗಿ ಬರಸೆಳೆದು ಬಿಡಬಹುದೆಂದು
ಹೊಕ್ಕಳ ಸುಳಿಯಿಂದೆದ್ದ ಛಳುಕನ್ನು
ಅಲ್ಲಲ್ಲಿಯೇ ಅದುಮಿಟ್ಟು
ತೊಡಬೇಕಿದೆ ಸಹಜತೆಯ ಮುಖವಾಡ

ಕಾರು ಚಲಾಯಿಸುತ್ತಾನೆ ಸುಮ್ಮನೆ ಪಕ್ಕ ಕುಳಿತು
ರಸ್ತೆಯನ್ನೇ ನೋಡುತ್ತ
ಬಿಗಿದ ಒಣ ತುಟಿಗಳ ಒಳಗೆ
ಹೇಳಲೇಬೇಕಾದ ನೂರು ಮಾತುಗಳು
ಹೊರಬರಲಾಗದೆ ಚಡಪಡಿಸುವುದು
ಓರೆನೋಟದಲ್ಲೂ ಕಣ್ಣಿಗೆ ರಾಚುತ್ತದೆ
ಸ್ಟೇರಿಂಗ್ ಹಿಡಿದ ಬೆರಳುಗಳು
ಸ್ವಲ್ಪ ಹೆಚ್ಚೇ ಕಂಪಿಸುತ್ತಿರುವುದು
ಅರಿವಾಗುತ್ತಿದೆ ಏರಿದ ಎದೆಬಡಿತಕ್ಕಷ್ಟೇ

ಆದರೂ ಕಣ್ಣು ನೋಡುವ ಸಾಹಸದಿಂದ
ತಪ್ಪಿಸಿಕೊಳ್ಳಬೇಕಿದೆ ಆದಷ್ಟೂ
ಒಂದೂ ಮಾತಾಡದೇ ಕಣ್ಣೊಳಗಿಂದಲೇ
ದಾಟಿಸಬಹುದಾದ ಭಾವನೆಗಳಿಂದ ತಪ್ಪಿಸಿಕೊಳ್ಳಲೆಂದು
ಎದುರಿನ ಖಾಲಿ ರಸ್ತೆಯನ್ನು
ಕಿಟಕಿಯಂಚಲ್ಲಿ ಓಡುವ ಮರಗಳನ್ನು
ಬಿಡದೆ ನೋಡುವ ನಾಟಕವಾಡುವುದು
ಕಷ್ಟವೆಂಬ ಅರಿವಾಗುತ್ತಿದೆ ಇತ್ತೀಚೆಗೆ

ಒಂದು ಸುದೀರ್ಘವಾದ ಸುತ್ತು
ಒಂದೇ ನಿಮಿಷದಲ್ಲಿ ಮುಗಿದು ಹೋದಂತಾಗಿ
ನಿಧಾನವಾಗಿ ಕಾರಿನ ಬಾಗಿಲು ತೆರೆದು ಇಳಿಯುವಾಗ
ಕಣ್ಣೊಳಗೆ ಅರಿವಾದರೂ ಆಗಬಾರದ ವೇದನೆ
ನಸುನಕ್ಕು ವಿದಾಯದ ಕೈ ಬೀಸುವ ಮುನ್ನವೇ
ತಿರುಗಿಯೂ ನೋಡದಂತೆ
ಬಿಟ್ಟ ಬಾಣದಂತೆ ಹೊರಟು ಬಿಡುವ
ಹುಡುಗಾ, ಮನದೊಳಗಾದರೂ ಹೇಳು
ನೀರ ಪಸೆಯ ತೆಳು ಪದರವಿತ್ತೇ ನಿನ್ನ ಕಣ್ಣಂಚಲ್ಲಿ ?

ಮತ್ತೆ ಬರಬೇಡ ಒಂದು ಸುತ್ತು ಎನ್ನುತ್ತ
ಕಿರು ಬೆರಳಿನ ತುದಿಯನ್ನೂ ಸೋಕಿಸದೆ
ಮನದೊಳಗೇ ಮುದ್ದಿಸುವ ಪರಿಗೆ
ಕಾಡುತ್ತಿದೆ ಮನದೊಳಗೆ ಎಡವಿ ಬೀಳುವ ಭಯ

‍ಲೇಖಕರು Admin

November 13, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: