ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಂದಿನ ಇರುಳು ಇವನ ಕಂಗಳಲ್ಲಿ ಸಜ್ಜಾಗುವ ಹುನ್ನಾರದಲ್ಲಿತ್ತು

ಒಂದು ಬಸ್ಸ್ಟಾಪು

ವಿಜಯ್ ಹೂಗಾರ್

ಆತ ಬಸ್ಸ್ಟಾಪಿಗೆ ಬಂದು ನಿಂತಾಗ
ನಿನ್ನೆ ರಾತ್ರಿಯ ಬಲವಂತ ಮೈಥುನದ ಉರಿ ಇನ್ನು ಆರಿರಲಿಲ್ಲ.
ಲೋಕ,
ಅದೇನೋ ಕಳೆದುಕೊಂಡಂತೆ ಓಡತೊಡಗಿತ್ತು.
ಬಸ್ಸು, ಬೈಕು, ಆಟೋ, ಟೆಂಪೋ ಹೀಗೆ ಸಾಲು ಸಾಲಾಗಿ.
ಜೊತೆಯಲ್ಲಿ ನಿಂತ ಸಹಪ್ರಯಾಣಿಕರು ನೇತಾಡಿ,ನುಸುಳಿ,ತೆವಳಿ
ಮಸೆದು ತಿನ್ನುವ
ದಟ್ಟಣೆಯಲ್ಲಿ ಹತ್ತಿ ಹಠ ಸಾಧಿಸುತ್ತಿದ್ದರು.

ಆಗಷ್ಟೇ ಖಾಸಗಿ ಬ್ಯಾಂಕಿನಿಂದ ಹೊರಬಂದ ಅವನಿಗೆ
ಅಲ್ಲಿ ನಡೆದ ಘಟನೆಯಿಂದ ಹೊರ ಬರಲು ಆಗಲಿಲ್ಲ.
ಆ ಸುಂದರಿ,
ಬಣ್ಣ ಬಣ್ಣದ ಮಾತಿನಿಂದ ಸೆರೆಹಿಡಿದು
ಕೊನೆಗೂ ಒಂದೆರೆಡು ಇನ್ಸುರೆನ್ಸಗೆ ಸಹಿ ಹಾಕಿಸಿಕೊಂಡಿದ್ದಳು.
ಅದೆಷ್ಟೇ ನಕಾರ ಎತ್ತಿದರು ಕೊನೆ ಅಸ್ತ್ರ ಎಂಬಂತೆ
ತುಸುಬಾಗಿ ಬ್ರಹ್ಮಾಂಡದ ಎರಡು ತೂಗು ತುಂಡುಗಳ
ದರ್ಶನ ಕ್ಷಣಾರ್ದದಲ್ಲೇ ತೋರಿಸಿ ಗೆದ್ದಿದ್ದಳು.
ಹೊರ ಬಂದು ರಸ್ತೆಗೆ ನಿಂತಾಗ ಧಗೆಗೆ ಇನ್ನಷ್ಟು
ಮೈ ಬೆವರತೊಡಗಿತ್ತು.
 
ಆ ಸುಂದರಿ ಸೃಷ್ಟಿಸಿದ ದೃಶ್ಯ ಕಣ್ಮುಂದೆ ಹೊತ್ತಿ ಉರಿಯುತ್ತಿತ್ತು.
ಸಮಯ ಸಾಧಿಸಿ ಬಂದ ಭಿಕ್ಷುಕ, ಕೈಚಾಚಿದ.
ಧಗೆಗೆಂದು ಜೇಬಿನಲ್ಲಿ ಕೈ ಹಾಕಿದಾಗ
ಭಿಕ್ಷುಕನ ಕಂಗಳಲ್ಲಿ ಸೂರ್ಯನನ್ನೇ ಮೀರಿಸುವಷ್ಟು ಪ್ರಭೆ ಇತ್ತು.
ಜೇಬಿನಿಂದ ಬಂದ ಕರ್ಚಿಫು ನೋಡಿ
ಕಂಗಳಿಗೆ ಇರುಳು ಬಡಿದು ಹೋಗಿತ್ತು.
ಅಂದಿನ ಇರುಳು ಇವನ ಕಂಗಳಲ್ಲಿ ಸಜ್ಜಾಗುವ ಹುನ್ನಾರದಲ್ಲಿತ್ತು.
 

‍ಲೇಖಕರು G

15 June, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading