ಅಂತರಂಗದ ಅಳಲು

ಅಮಿತಾ ರವಿಕಿರಣ್

ಹಾಗೆ ದಿನಕ್ಕೆಷ್ಟು ಬಾರಿ scroll
ಮಾಡುತ್ತೇನೋ ಗೊತ್ತಿಲ್ಲ,
ನೂರಾರು ಅಂಕಿಗಳು
ಪ್ರತಿ ಐದು ಜೋಡಿ ಸಂಖ್ಯೆಗಳಿಗೊಂದು ಹೆಸರು.

ಅಲ್ಲಿ ಒಂದಾದರೂ
ಮನಸಿನ ತುಮುಲ ತಿಳಿಮಾಡುವ,
ನೋವಾಗಿದೆ ಮನಸಿಗೆ ಎಂದರೆ,
ನಾನಿಲ್ಲವೇ ನಿನಗೆ ಎಂದು ಅಕ್ಕರೆ ಒಸರುವ
ಆರ್ದ್ರ ದನಿ ಸಿಗುವುದಿಲ್ಲ.ಆದರೂ ಹೇಳಿಕೊಳ್ಳುತ್ತೇವೆ
ಅವರಿವರ ಮುಂದೆ.

ಎಲ್ಲರೂ ಕೇಳುತ್ತಾರೆ
ಕೇಳುವವರಿಲ್ಲ ಎಂದಲ್ಲ
ಮತ್ತದೇ ಕೇಳುತ್ತಾರೆ,
ಅವರಿಗೆ ಬೇಕನಿಸಿದ್ದು
ಬೇಕಾದಂತೆ ಅರ್ಥೈಸಿಕೊಳ್ಳುತ್ತಾರೆ

ಸಾಧಾರಣ ಎಷ್ಟಿರಬಹುದು ಮನಸಿನ ಸ್ಟೋರೇಜ್
ಎಡಿಟ್, ಡಿಲೀಟ್, ಆ್ಯಡ್ ನ್ಯೂ ವರ್ಡ್
ಎಲ್ಲವೂ ಮನದಲ್ಲೇ,
ಸಂದರ್ಭಕ್ಕೆ ತಕ್ಕಂತೆ,
ಅನುಕೂಲ ಸಿಂಧು, ಸೀಮಾತೀತ ಮನಸು.

ಮನಸಿನ ಅದ್ಯಾವುದೋ
ಅಲೆಗಳ ಹೊಡೆತಕ್ಕೆ ಸಿಕ್ಕು
ಅರೆಜೀವ ಮಾತ(ನೊಂದು)
ಹೇಳಿರುತ್ತೇವೆ, ಕೇಳುವವರಿದ್ದಾರೆಂದು.
ಮಾತಾಡಿ ಹಗುರಾಗಿ ಮರೆತೇ ಬಿಡುತ್ತೇವೆ.

ಅದಾರದೋ ಮನದ ಕಿನಾರೆಯಲ್ಲಿ
ಅಂದೆಂದೋ ಸತ್ತು ಬಿದ್ದ ಆ ಮೀನಿನಂಥ
ಚಂಚಲ, ಈಗ ನಿಶ್ಚಲ ಮಾತನ್ನ
ಒಣಗಿಸಿ ಉಪ್ಪು ಸವರಿ ಅದೆಲ್ಲೋ ಹೊಗೆ ಸಂದಿಯಲ್ಲಿ ತೂಗು ಹಾಕುತ್ತಾರೆ.

ಆ ದಿನ ಅದ್ಯಾರೋ ಬರುತ್ತಾರೆ
ಮಾತಿನ ಭೋಜನ ಶುರುವಾಗುತ್ತದೆ
ಹೊಸ ಹೊಸ ಮಾತು, ಯಾರ ಅಂಗಳದ ಹಪ್ಪಳವೋ
ಯಾರ ಮಹಡಿಯಲ್ಲಿ ಒಣಗಿದ ಸಂಡಿಗೆಯೋ.
ಚಪ್ಪರಿಸುತ್ತಾರೆ.

ಹಾ ಈಗ ಇವರ ಸರದಿ,
ನೋಡಿ! ನೋಡಿ ಇಲ್ಲಿ
ನನ್ನಲ್ಲಿದೆ ಆ ಕೊಳೆತ ಮೀನು,
ಅದೆಷ್ಟು ಜತನದಿಂದ ಕಾದಿರಿಸಿದ್ದೆ ಗೊತ್ತಾ?
Just for you people!!

ವಾಸನೆ ಬರುತ್ತಿದೆ.
ಮೀನು ತಿನ್ನುವವರು ಆಹಾ ಎಂದರೆ,
ತಿನ್ನದವರು ಮೂಗು ಮುಚ್ಚಿಕೊಂಡು
ಕಿವಿ, ಕಣ್ಣು, ಅರಳಿಸಿಕೊಂಡು
ಕೂತಿದ್ದಾರೆ.
ಕೊಳೆತು, ಒಣಗಿ, ಮಾತೆಂಬ ಆ ಮೀನು
ಊರೆಲ್ಲ ಗುಲ್ಲೆಬ್ಬಿಸಿ
ಇಲ್ಲದ ಬಾಲ ಸೇರಿಸಿಕೊಂಡು
ಬಣ್ಣಗಳನ್ನು ಹಚ್ಚಿಕೊಂಡು
ಮತ್ತೆ ನನ್ನ ಅಕ್ಕ ಪಕ್ಕ ಹೊಸ ಜೀವ ಪಡೆದು
ಹರಿದಾಡುತ್ತಿದೆ

ನಂಬಬೇಕೆ?
ಮತ್ತೆ ಈ ಅಳಲ ಹೇಳಲು ಹೊಸ
ಅಂಕಿಗಳನ್ನು
ಹುಡುಕಬೇಕೆ?

‍ಲೇಖಕರು Avadhi

January 20, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: