ಆಗ ನೀವೇನು ಮಾಡುತ್ತೀರಿ ಎಂಬುದೇ ಕಥೆ!

‘ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ ಮಾವಲಿ ಅವರದೇ ಕತೆಯೊಂದರಲ್ಲಿ ಬರುವ ಸಾಲು.

ನೋಡಲೂ ಇವರು ನಿರುಪದ್ರವಿಯ ಹಾಗೇಯೇ ಇದ್ದಾರೆ! ಜನರ ಕೈಯಿಂದ ತಪ್ಪಿಸಿಕೊಳ್ಳಲು ಸುಳ್ಳು ಹೇಳುತ್ತಾರಾ ಇಲ್ಲವಾ ನೀವೇ ಕೇಳಿ.

ಬೆಂಗಳೂರಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿರುವ ಇವರ ಟೈಪಿಸ್ಟ್ ತಿರಸ್ಕರಿಸಿದ ಕಥೆಯನ್ನು ಬಹುರೂಪಿ’ ಪ್ರಕಟಿಸಿದೆ. ಇವರು ಇಂಗ್ಲಿಷ್ ಕುರಿತೇ ವಿಜಯ ಕರ್ನಾಟಕದಲ್ಲಿ ಬರೆಯುವ ಅಂಕಣ ಅತ್ಯಂತ ಜನಪ್ರಿಯ

ಪ್ರತಿ ಬುಧವಾರದ ‘ಮಾವಲಿ ರಿಟರ್ನ್ಸ್’ನಲ್ಲಿ ಅವರುಂಟು ನೀವುಂಟು.

ನೀವೊಬ್ಬ ದೊಡ್ಡ ಹುದ್ದೆಯಲ್ಲಿದ್ದು ದಿನಂಪ್ರತಿ ನೂರಾರು ಜನರ ಸಂಪರ್ಕಕ್ಕೆ ಬರುತ್ತಿದ್ದವರು. ಮಗನನ್ನು ಚೆನ್ನಾಗಿ ಓದಿಸಿದಿರಿ. ಅವನು ಸಾಗರದಾಚೆಯ ದೇಶದಲ್ಲೊಂದು ಒಳ್ಳೆಯ ಗಳಿಕೆ‌ ಬರುವ ಕೆಲಸದಲ್ಲಿದ್ದಾನೆ. ಅವಕಾಶಗಳ ನೆಲ ಎಂದೇ ಪ್ರಸಿದ್ಧಿಯಾಗಿರುವ ದೇಶಕ್ಕೆ‌ ಹೋದವನು ಚೆನ್ನಾಗಿ ಗಳಿಸಿದ ಮೇಲೆ ನಿಮ್ಮ ವೃತ್ತಿ ಜೀವನ ಇನ್ನೂ ಇರುವಾಗಲೇ ರಾಜೀನಾಮೆ ಕೊಟ್ಟು ಮಗನೊಂದಿಗೆ ನೆಲೆಸಲು ಆರಂಭಿಸಿದ್ದೀರಿ. ಆದರೆ ನೀವು ಅಧಿಕಾರವಿಲ್ಲದೆ ಜೀವನ ನಡೆಸಬೇಕಾದ ಸ್ಥಿತಿ. ನಿಮ್ಮ ಮಾತು ಕೇಳಲು ಯಾರೂ ಇಲ್ಲ, ನಿಮ್ಮಿಂದ ಬೈಸಿಕೊಳ್ಳಲು ಯಾರೂ ಸಬಾರ್ಡಿನೇಟ್ ಇಲ್ಲ. ನಿಮ್ಮ ಪತ್ನಿಯೂ ಇಲ್ಲಿದ್ದಾಗ ನಿಮ್ಮ ಆಜ್ಞಾನುವರ್ತಿಯಾಗಿದ್ದವಳು ಈಗ ವೆಸ್ಟರ್ನೈಸ್ಡ್ ವೈಫ್ ಆಗಿಬಿಟ್ಟಿದ್ದಾಳೆ.‌ ಆಗ ನೀವು… 

*   *    *    * 

ನಿಮ್ಮ ಮನೆಗೊಂದು ಅಂಚೆ ಮೂಲಕ ಸರ್ಕಾರದ ಆದೇಶ ಬಂದಿದೆ. ಇನ್ನು ಈ ರಾಜ್ಯದಲ್ಲಿ ಪ್ರತಿಯೊಬ್ಬರಿಗೂ ಒಂದೊಂದು ಕಾನೂನಾತ್ಮಕವಾಗಿ ಕೊಲೆ ಮಾಡಲು ಅವಕಾಶ ನೀಡಲಾಗಿದೆ. ಆದರೆ ಅದಕ್ಕೆ ಸಂಬಂಧಪಟ್ಟ ಕಾಗದಪತ್ರಗಳನ್ನು ಮೊದಲೇ ನೀವು ಭರ್ತಿ ಮಾಡಬೇಕು. ನೀವು ಯಾರನ್ನು ಕೊಲ್ಲಬೇಕೆಂದಿದ್ದೀರೋ ಅವರಿಗೂ ಅವನನ್ನು ನೀವು ಯಾಕೆ ಕೊಲ್ಲಬೇಕೆಂದಿದ್ದೀರಿ  ಎಂಬುದನ್ನು ಮೊದಲೇ ವಿವರಿಸಲಾಗುತ್ತದೆ. ನಿಮಗೆ ಯಾರನ್ನೋ ಕೊಲ್ಲಬೇಕು ಅನ್ನಿಸಿದೆ. ಸಕಾರಣ ನೀಡಿ ನೀವು ಕೊಲೆಗೆ ಸಿದ್ಧರಾಗಿದ್ದೀರಿ. ಅಷ್ಟರಲ್ಲಿ ನಿಮಗೆ ಮತ್ತೊಂದು ಲಕೋಟೆ ಬರುತ್ತದೆ.‌ ಅದರಲ್ಲಿ ಯಾರೋ ಒಬ್ಬರು ನಿಮ್ಮನ್ನು ಕೊಲ್ಲಲು ಸಿದ್ಧತೆ ನಡೆಸಿರುವುದರ ಬಗ್ಗೆ ಮಾಹಿತಿ ನೀಡಲಾಗಿರುತ್ತದೆ. ಆಗ ನೀವು… 

*   *    *    * 

ನಗರದ ದೇವಸ್ಥಾನವೊಂದರ ರಸ್ತೆಯಲ್ಲಿ ಕೂತು ಜನರ ಭವಿಷ್ಯ ಹೇಳುವವನಾದ ನಿಮಗೆ ನಿಮ್ಮ ಬಳಿ ಭವಿಷ್ಯ ಕೇಳಲು ಬರುವ ಯುವತಿಯೊಬ್ಬಳ ಮೇಲೆ ಪ್ರೀತಿ ಹುಟ್ಟುತ್ತದೆ. ಆಕೆ ಪ್ರತೀ ತಿಂಗಳು ಬಂದು ನಿಮ್ಮನ್ನು ಭೇಟಿ ಮಾಡುತ್ತಾಳೆ. ಆಕೆಯ ಭವಿಷ್ಯವನ್ನು ನೀವು ಚೆನ್ನಾಗಿ ಬಲ್ಲಿರಿ. ಹಾಗಾಗಿಯೇ ನೀವು ಅವಳನ್ನು ಪ್ರೀತಿಸಲು ಮುಂದಾಗಿದ್ದೀರಿ.

ನಿಮ್ಮ ಬಳಿ ಒಂದು ಬಾರಿ ಮಾತ್ರ ಪ್ರಯೋಗಿಸಬಹುದಾದ ಪ್ರೇಮಬಾಣ ಇದೆ. ಅದರ ವೈಶಿಷ್ಟ್ಯವೇನೆಂದರೆ ನೀವು ಅದನ್ನು ಯಾರ ಮೇಲೆ ಪ್ರಯೋಗಿಸುತ್ತೀರೋ ಅವರಿಗೆ ನಿಮ್ಮ ಮೇಲೆ ಪ್ರೀತಿಯುಂಟಾಗುತ್ತದೆ. ಆದರೆ ಅಕಸ್ಮಾತ್ ಅವರಿಗೆ ಮೊದಲೇ ನಿಮ್ಮ ಮೇಲೆ ಪ್ರೀತಿಯ ಭಾವನೆಗಳು ಇದ್ದಿದ್ದರೆ ಮಾತ್ರ ಈ ಬಾಣ ನಾಟಿದ ಮರುಕ್ಷಣವೇ ನಿಮ್ಮ ಮೇಲಿನ ಪ್ರೀತಿ ಇನ್ನಿಲ್ಲವಾಗಿ ಬಿಡುತ್ತದೆ. ಆ ಹುಡುಗಿಯ ಮೇಲೆ ಪ್ರೇಮಬಾಣ ಪ್ರಯೋಗಿಸಲು ತಯಾರಿರುವ ನಿಮಗೆ ಒಂದು ವೇಳೆ ಅವಳಿಗೂ ನನ್ನ ಮೇಲೆ ಮೊದಲೇ ಪ್ರೀತಿ ಇರಬಹುದೆ? ಎಂಬ ಚಿಂತೆ ಶುರುವಾಗುತ್ತದೆ.‌ ನಿಮ್ಮ ಭವಿಷ್ಯ ಶಾಸ್ತ್ರದ ಯಾವ ಜ್ಞಾನವೂ ಇದನ್ನು ನಿಮಗೆ ತಿಳಿಸುತ್ತಿಲ್ಲ. ಆಗ ನೀವು… 

*   *    *    * 

ಕುಟುಂಬದೊಂದಿಗೆ ಡಿನ್ನರ್ ಗೆಂದು ರೆಸ್ಟೋರೆಂಟ್ ಗೆ ಹೋಗಿ ಕೂತಿದ್ದೀರಿ.‌ ಬಹಳ ಹೊತ್ತಾದರೂ ಯಾವೊಬ್ಬ ವೈಟರ್ ಕೂಡ ಆ ಟೇಬಲ್ ಬಳಿ ಸುಳಿಯುವುದೇ ಇಲ್ಲ. ಕೆಲ ಸಮಯದ ನಂತರ ನಿಮ್ಮ ಬಳಿ ಬಂದ ವ್ಯಕ್ತಿಯೊಬ್ಬ ಆ ಟೇಬಲ್ಲನ್ನು ತಾನು ಬುಕ್ ಮಾಡಿರುವುದಾಗಿ ಹೇಳಿ ಅಲ್ಲಿಂದ ಏಳುವಂತೆ ಸೂಚಿಸುತ್ತಾನೆ. ಆದರೆ ‘ನೀವು ರಿಸರ್ವ್ ಮಾಡಿದ್ದರೆ ಈ ಟೇಬಲ್ ಮೇಲೆ ಯಾಕೆ Reserved ಅನ್ನೋ ಬೋರ್ಡ್ ಇಲ್ಲ’ ಎಂದು ನೀವು ಪ್ರಶ್ನಿಸುತ್ತೀರಿ. ಅದಕ್ಕಾತ, ‘ನೀವು ಎಷ್ಟೊತ್ತು ಕೂತರೂ ಇಲ್ಲಿ ಯಾರೂ ವೈಟರ್ ಬರುವುದಿಲ್ಲ. ಇದನ್ನು ನಾನು ಹತ್ತು ವರ್ಷದ ಹಿಂದೆಯೇ ರಿಸರ್ವ್ ಮಾಡಿದ್ದೆ ಎನ್ನುತ್ತಾನೆ. ಅವನ ಜೊತೆಯಲ್ಲಿ ಯಾರೊಬ್ಬರೂ ಇಲ್ಲ.

ಕುಟುಂಬದವರು ವಿಶೇಷವಾಗಿ ತೆರಳುವ ಈ ರೆಸ್ಟೋರೆಂಟ್ ಗೆ ಆತ ಹತ್ತು ವರ್ಷದ ಹಿಂದೆಯೇ ಬುಕ್ ಮಾಡಿದ್ದೇಕೆ ಮತ್ತು ಈಗ ಒಬ್ಬನೇ ಬಂದಿರುವುದೇಕೆ‌ ಎಂದು ನೀವು ಗೊಂದಲಕ್ಕೆ ಬೀಳುತ್ತೀರಿ. ಕುಟುಂಬದೊಂದಿಗೆ ಸುಂದರ ಸಮಯ ಕಳೆಯಲೆಂದು ಆ ಸಂಜೆ ಹೋಗಿರುವ ನಿಮಗೆ ಇದು ಅನಿರೀಕ್ಷಿತವಾಗಿರುತ್ತದೆ. ಆಗ ನೀವು… 

*   *    *    * 

ಯಾವಾಗಲೂ ಬಟ್ಟೆಯ ವಿಷಯದಲ್ಲಿ ಕರಾರುವಕ್ಕಾಗಿರುವ ನೀವು ಈ ಬಾರಿ ಒಂದು ವಿಶೇಷವಾದ ಅಂಗಿಯನ್ನೇ ಕೊಂಡು ತಂದಿದ್ದೀರಿ. ಇವೆಲ್ಲ ಸಿಂಗಲ್ ಪೀಸ್ ಸರ್. ಚೆನ್ನಾಗಿದೆ ಇದು ರೇರ್ ಕಲರ್ ಎಂದು ಅಂಗಡಿಯಾತ ಹೇಳಿರುತ್ತಾನೆ. ನೀವು ಇಡೀ ನಗರದಲ್ಲಿ ನನ್ನ ಬಳಿ ಮಾತ್ರ ಈ ಅಂಗಿ ಇರೋದು ಎಂದುಕೊಂಡು ಗರ್ವ ಪಟ್ಟುಕೊಂಡಿರುತ್ತೀರಿ. ಅಚಾನಕ್ ಆಗಿ ಸಿಗ್ನಲ್ ನಲ್ಲಿ ಹಾರ್ನ್ ಆಯ್ತು ಎಂದು ಹಿಂತಿರುಗಿ ನೋಡಿದರೆ ಅದೇ ಅಂಗಿಯನ್ನು ಇನ್ನೊಬ್ಬ ಹಾಕಿಕೊಂಡಿರುತ್ತಾನೆ. ಅದನ್ನು ನೋಡಿ ನಿಮಗೆ ಬೇಸರ ಅನ್ನಿಸುತ್ತದೆ. ನೀವು ಅಂಗಿಯನ್ನು ಹಾಕುವುದನ್ನೇ ಬಿಟ್ಟು ಬಿಡುತ್ತೀರಿ.

ಕೆಲ ದಿನಗಳ ನಂತರ ಸಿನಿಮಾಕ್ಕೆ ಹೋದಾಗ ನಿಮ್ಮ ಮುಂದಿನ ಮೂರನೇ ಸಾಲಿನಲ್ಲಿ ಕೂತ ವ್ಯಕ್ತಿ ಅದೇ ಅಂಗಿಯನ್ನು ಹಾಕಿರುತ್ತಾನೆ. ಅವನನ್ನು ನೋಡಿ ನೀವು ಸಿನಿಮಾವನ್ನೂ ಕೂಡ ಮನಸ್ಸಿಟ್ಟು ನೋಡಲಾಗುವುದಿಲ್ಲ. ಆ ದಿನ ಮನೆಗೆ ಬಂದವರು ಆ ಅಂಗಿಯನ್ನು ಹರಿದು ಹಾಕುತ್ತೀರಿ. ಇದಾದ ಮೇಲೂ ಬಸ್ಸಿನಲ್ಲಿ , ಸಿಗ್ನಲ್ ನಲ್ಲಿ , ಪಾರ್ಕಿನಲ್ಲಿ , ಕೋರ್ಟು ಇವೇ ಮುಂತಾದ ಕಡೆಗಳಲ್ಲಿ ಅದೇ ಅಂಗಿಯನ್ನು ಧರಿಸಿದವರು ಆಗಾಗ ಎದುರಾಗುತ್ತಲೇ ಇರುತ್ತಾರೆ. ಆಗ ನೀವು… 

January 20, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: