ಸಾಧಕರ ಶಿಖರೌನ್ನತ್ಯದ ಕಥೆ: ಕಸ್ತೂರ್‌ ಬಾ v/s ಗಾಂಧಿ

ಪ್ರಕಾಶ್ ‌ಕೊಡಗನೂರ್

ಮೆದುಳು, ಹೃದಯ – ಎರಡಕ್ಕೂ ಏಕಕಾಲಕ್ಕೆ ನಾಟುವಂತೆ ಮಾತಾಡಬಲ್ಲ, ಬರೆಯಬಲ್ಲ ಸಮಕಾಲೀನ ಕನ್ನಡದ ಕೆಲವೇ ಲೇಖಕರಲ್ಲಿ ಮುಂಚೂಣಿಯಲ್ಲಿರುವ ಹೆಸರು ಬರಗೂರು ರಾಮಚಂದ್ರಪ್ಪ! ಬರೆಹ, ಭಾಷಣದ ಜೊತೆಜೊತೆಗೇ ಸಿನಿಮಾ, ಸಂಘಟನೆ- ಮತ್ತಿತರ ಕ್ರಿಯಾತ್ಮಕ ಮತ್ತು ಸೃಜನಾತ್ಮಕ ಚಟುವಟಿಕೆಗಳಲ್ಲಿ ಮುಳುಗಿರುವ ಅವರು ಹೊರಬರುವುದು ಈ ಥರದ ಯಾವುದಾದರೊಂದು ಅಪರೂಪದ ಅನನ್ಯ ಕಲಾಕೃತಿಯ ಮೂಲಕ ಎನ್ನುವುದು ವಿಶೇಷ.

ಸದಸ್ಯ ಬಿಡುಗಡೆಯಾಗಿರುವ ‘ಕಸ್ತೂರ್‌ ಬಾ v/s ಗಾಂಧಿ’ ಕಾದಂಬರಿ ಸಮಾಜದ ಎರಡು ಮೇರು ಹಾಗೂ ಸಂಕೀರ್ಣ ವ್ಯಕ್ತಿತ್ವಗಳನ್ನು ಮುಖಾಮುಖಿಯಾಗಿಸುವ ಮತ್ತು ಬಿಚ್ಚಿಡುವ ನಿರೂಪಣಾ ತಂತ್ರದಲ್ಲಿ ಓದುಗನ ಅಂತಃಕರಣದ ಗಾದಿಗೆ ಲಗ್ಗೆ ಇಡುವಲ್ಲಿ ಯಶಸ್ವಿಯಾಗಿದೆ. ತಮ್ಮ ‘ಬರೆವಣಿಗೆ ಕಲೆ’ಯ ಎಲ್ಲೆ ಮೀರಿ ಶ್ರಮಿಸಿದಂತಿರುವ ಈ ಕೃತಿಯಲ್ಲಿ ಅಂತ್ಯದಿಂದಲೇ ಆರಂಭಗೊಳ್ಳುವ ವಿಶಿಷ್ಟ ಮಾದರಿಯನ್ನು ಅನುಸರಿಸುವಲ್ಲೂ ಬರಗೂರು ಗೆದ್ದಿದ್ದಾರೆ. ಇದೊಂಥರ ಬೇಯುತ್ತಲೇ ಬೆಳಗುವ ಅರ್ಥಾತ್ ಅನುಭವಿಸುತ್ತಲೇ ಸಾಕಾರಗೊಳ್ಳುವ ಸಾಧಕರ ಶಿಖರೌನ್ನತ್ಯದ ಕಥೆ.

ಬಾಲ್ಯ, ಯೌವ್ವನ, ಗಾಂಧಿ-ಹರಿಲಾಲ್, ಗಾಂಧಿ-ಗೋಖಲೆ, ಗಾಂಧಿ-ಅಂಬೇಡ್ಕರ್, ಕಸ್ತೂರ್‌ಬಾ-ಅಂಬೇಡ್ಕರ್, ಸಬರಮತಿ ಆಶ್ರಮ, ಆಗಾಖಾನ್ ಅರಮನೆ- ಮೊದಲಾದ ಘಟ್ಟಗಳಲ್ಲಿ ಬೆಳೆಯುವ ಕಾದಂಬರಿಯಲ್ಲಿ ಗಾಂಧಿ ಜೊತೆಗೇ ಕಸ್ತೂರ್‌ ಬಾ ಅರಳುವ, ಘಮಘಮಿಸುವ ಪರಿಯನ್ನು ಓದಿಯೇ ಅನುಭವಿಸಬೇಕು.

ಬಾಲ್ಯ
ಬಹುತೇಕರಿಗೆ ಗಾಂಧಿ, ಕಸ್ತೂರ್ ‌ಬಾ ಗಂಡ-ಹೆಂಡತಿ ಎಂದಷ್ಟೇ ಗೊತ್ತು. ಅದಕ್ಕೂ ಪೂರ್ವದಲ್ಲಿ ಅವರು ಬಾಲ್ಯದ ಗೆಳೆಯರಾಗಿದ್ದರು ಎಂಬ ಸಂಗತಿಯೇ ತಿಳಿದಿರುವುದಿಲ್ಲ. ಕಾದಂಬರಿಯ ಬಾಲ್ಯದ ಘಟ್ಟವನ್ನು ಓದಿದವರಿಗೆ ಗಾಂಧಿ ಕಸ್ತೂರ್ ‌ಬಾರ ಸಾಂಗತ್ಯದಲ್ಲಿ ಅಭಿರುಚಿಯ ಜೊತೆಗೆ ಗೆಳೆತನದ ಗಾಢ ಸೆಳವೂ ಕಂಡುಬರುತ್ತದೆ. ಅಲ್ಲದೆ ಗಂಡು ಹೆಣ್ಣಾಗುವ, ಹೆಣ್ಣು ಗಂಡಾಗುವ ‘ಪರಕಾಯತೆ’ಯಲ್ಲಿ ಅದ್ದಿದಂತೆ ಇಲ್ಲಿನ ಕಬಡ್ಡಿ, ಕುಂಟಾಬಿಲ್ಲೆ ಆಟಗಳು ಅನಾವರಣಗೊಳ್ಳುವ ಸಾಂದರ್ಭಿಕ ಸೃಷ್ಟಿಗಳಿವೆ.

ಗಾಂಧಿ ಕಸ್ತೂರ್‌ ಬಾಗೆ ಸೋತಂತೆ, ಕಸ್ತೂರ್ ‌ಬಾ ಗಾಂಧಿಗೆ ಸೋತಂತೆ – ಹೀಗೆ ಸೋಲಿನ ಸಾರ್ಥಕ್ಯದಲ್ಲಿ ಸಾಗುವ ಗೆಲುವಿನ ಹೆಜ್ಜೆಗಳು ಬಾಂಧವ್ಯದ ಬೆಸುಗೆಗಳಾಗುತ್ತವೆ. ಇವರ ‘ಗಂಡ-ಹೆಂಡತಿ’ ಆಟದಿಂದ ಇವರಲ್ಲಿ ಬಾಲ್ಯದಲ್ಲೇ ಪ್ರೇಮ ಚಿಗುರಿತ್ತು ಎನ್ನುವುದೂ ಸೂಚ್ಯವಾಗಿ ಅನುಭವಕ್ಕೆ ಬರುತ್ತದೆ ಮತ್ತು ಮನೆಯ ‘ಮಲ ಹೊರುವ ಹೊಲೆಯ’ನ ಪ್ರಸಂಗ ಕೇವಲ ವ್ಯಕ್ತಿಗತ ನೆಲೆಗಟ್ಟಿನಲ್ಲಿ ಕಾಣದೇ ಸಾಮಾಜಿಕ ಪಿಡುಗಿನ ಸಂಕೇತವಾಗಿ ಇವರ ಮೇಲೆ ಬೀರಿದ ಪ್ರಭಾವವನ್ನು ಲೇಖಕರು ಮಾರ್ಮಿಕವಾಗಿ ಚಿತ್ರಿಸಿದ್ದಾರೆ.

ಯೌವನ
ಗಾಂಧೀಜಿಯ ಯೌವನ ಮದುವೆ, ವಿದ್ಯಾಭ್ಯಾಸ; ಕಸ್ತೂರ್ ‌ಬಾ ಯೌವನ ಮದುವೆ, ಸಂಸಾರಗಳೊಂದಿಗೆ ಆರಂಭಗೊಂಡು ಮುಂದೆ ಸಾಮಾಜಿಕ ಬದುಕಿನ ವಿಸ್ತಾರ ಪಡೆಯುತ್ತೆ. ಮದುವೆಯ ಮೊದಲ ರಾತ್ರಿಯ ‘ಕತ್ತಲು-ಬೆಳಕಿನ’ ವೈರುಧ್ಯ ಪರಸ್ಪರ ಅನುಸಂಧಾನಗೊಳ್ಳುವ; ಅಂತಃಕರಣಕ್ಕೆ ತಾಕುವ ಘಟನೆಯಾಗಿ ಬೆಸೆಯಲ್ಪಟ್ಟಿದೆ. ಇಲ್ಲಿ ಇಬ್ಬರ ಪೂರ್ವಗ್ರಹಗಳೂ ಹಾವಿನ ಪೊರೆಯಂತೆ ಕಳಚಿಕೊಳ್ಳುತ್ತವೆ. ಅಲ್ಲದೆ ಕಸ್ತೂರ್ ‌ಬಾ ಸ್ವಾತಂತ್ರ್ಯದಲ್ಲಿ ಆಗಾಗ್ಗೆ ಮಧ್ಯೆ ಪ್ರವೇಶಿಸುವ ಗಾಂಧಿ, ಕಸ್ತೂರ್‌ ಬಾ ಕಿಡಿನುಡಿಗಳಿಂದ ತಮ್ಮನ್ನು ತಾವು ನವೀಕರಿಸಿಗೊಳ್ಳುವ ಕ್ರಮ ಮಾದರಿಯಾಗಿ ನಿಲ್ಲುತ್ತದೆ. ಇದಕ್ಕೆ ಪರ್ಯಾಯವೆಂಬಂತೆ ದಕ್ಷಿಣ ಆಫ್ರಿಕಾದಲ್ಲಿ ‘ಅತಿಥಿಯ ಮಲ ಹೊರುವ’ ವಿಚಾರದಲ್ಲಿ ಕಸ್ತೂರ್ ‌ಬಾ ತಮ್ಮ ತಿಳಿವಳಿಕೆಯಿಂದ ಹೊರಬಂದು ಗಾಂಧಿಯನ್ನು ಒಪ್ಪಿಕೊಳ್ಳುತ್ತಾರೆ. ಸತ್ಯಾಗ್ರಹದ ವಿಚಾರದಲ್ಲೂ ಇಬ್ಬರಲ್ಲಿ ಒಮ್ಮತ ಮೂಡುತ್ತದೆ. ಇಲ್ಲೆಲ್ಲ ಬಿಡಿಬಿಡಿಯಾಗಿ, ಸಾಂದರ್ಭಿಕವಾಗಿ ಘಟನೆಗಳನ್ನು ಕಟ್ಟಿಕೊಟ್ಟ ಕ್ರಮ ಶ್ಲಾಘನೀಯ.

ಗಾಂಧಿ-ಹರಿಲಾಲ್
ವಿವಾಹಪೂರ್ವ, ವಿವಾಹೋತ್ತರವಾಗಿ ಎರಡು ಮೂರು ಬಾರಿ ಗಾಂಧಿ ಹರಿಲಾಲ್ ಮುಖಾಮುಖಿಯಾಗುವ ಸನ್ನಿವೇಶಗಳಿದ್ದು ತಾತ್ವಿಕ, ಸಾಂದರ್ಭಿಕ ನೆಲೆಗಟ್ಟಿನಲ್ಲಿ ಇವು ಮಹತ್ವದ ಸ್ಥಾನ ಪಡೆದುಕೊಳ್ಳುತ್ತವೆ. ಮೊದಲ ಮದುವೆ, ವಿದೇಶದಲ್ಲಿ ಬ್ಯಾರಿಸ್ಟರ್ ಕೋರ್ಸ್ ಅಭ್ಯಾಸ, ಮರುಮದುವೆ-ಮೂರೂ ಸಂದರ್ಭಗಳಲ್ಲಿ ತಂದೆ ಗಾಂಧಿಯ ಒಪ್ಪಿಗೆ ಪಡೆಯಲು ವಿಫಲರಾಗುವ ಮಗ ಹರಿಲಾಲ್ ವೈಯಕ್ತಿಕ ನೆಲೆಗಟ್ಟಿನಲ್ಲಿ ತಂದೆಯನ್ನು ಟೀಕಿಸಿ ಗಮನಸೆಳೆದರೂ ಅವರದು ಅಷ್ಟು ಮಹತ್ವದ ಪಾತ್ರವಾಗುಳಿಯುವುದಿಲ್ಲ. ಇದು ದೇವರನ್ನೇ ಭಕ್ತ ಬ್ಲಾಕ್‌ಮೇಲ್ ಮಾಡುವ ರೀತಿಯಂತಿದೆ. ಆದರಿಲ್ಲಿ ಕಸ್ತೂರ್‌ಬಾ ತಾಯಿಯಾಗಿ, ಪತ್ನಿಯಾಗಿ ನಿರ್ವಹಿಸುವ ಪಾತ್ರ ಸ್ತ್ರೀತನದ ಆದರ್ಶೀಯ ಮತ್ತು ಅಂತಃಕರಣದ ನಿಲುವಿಗೆ ಮುಕುಟಪ್ರಾಯವಾಗಿ ನಿಲ್ಲುತ್ತದೆ.

ಗಾಂಧಿ-ಗೋಖಲೆ
ಭಾರತ ಸ್ವಾತಂತ್ರ್ಯ ಸಂಗ್ರಾಮದ ‘ಗಾಂಧಿನಾಯಕತ್ವ’ದ ಗಾಡ್‌ಫಾದರ್ ಗೋಪಾಲಕೃಷ್ಣ ಗೋಖಲೆ ಗಾಂಧಿಗೆ ಮುಖಾಮುಖಿಯಾಗುವ ಸಂದರ್ಭದಲ್ಲಿ ಕಸ್ತೂರ್‌ಬಾ ಹಾಜರಿಯೂ ಪ್ರಮುಖವಾದದ್ದು. ಗುರು ಗೋಖಲೆಯವರ ಸಲಹೆಯಂತೆ ಸಾಮಾನ್ಯ ಜನರ ಜೀವನ ಅರ್ಥಮಾಡಿಕೊಳ್ಳಲು ಮೂರನೇ ದರ್ಜೆ ರೈಲಿನಲ್ಲಿ ದೇಶಪ್ರವಾಸ ಮಾಡುವ ಗಾಂಧಿ, ಸಾಮಾನ್ಯ ಜನರ ಬದುಕಿನ ಆಳ ಅಗಲಗಳನ್ನು ಅರ್ಥಮಾಡಿಕೊಂಡ ತಕ್ಷಣವೇ ಸೂಟು ಬೂಟಿನ ಬದುಕಿಗೆ ವಿದಾಯ ಹೇಳುವ ಸಂದರ್ಭ ಬಂದಾಗ ಕಸ್ತೂರ್‌ ಬಾ ಅವರಿಗೆ ಬೆಂಗಾವಲಾಗಿ ನಿಲ್ಲುವ ಕ್ರಮ ಸ್ವಾಗತಾರ್ಹ.

ಗಾಂಧಿ-ಆಶ್ರಮ
ಸೂಟು ಬೂಟಿನಿಂದ ವಿಮುಖರಾದ ಗಾಂಧಿ ಆಶ್ರಮ ಕಟ್ಟುವ ಆಕಾಂಕ್ಷೆ ವ್ಯಕ್ತಪಡಿಸಿದಾಗ ಕಸ್ತೂರ್‌ ಬಾ ಸರಳ ಜೀವನಕ್ಕೆ ಸಜ್ಜಾಗುತ್ತಾರೆ. ಆರಂಭದಲ್ಲಿ ಇಪ್ಪತ್ತೈದು ಜನ ಆಶ್ರಮವಾಸಿಗಳಿಂದ ಸಾಗಿದ ಆಶ್ರಮವಾಸದ ಪೂರ್ಣ ನೇತೃತ್ವ ವಹಿಸಿದವರು ಕಸ್ತೂರ್‌ ಬಾ!

ಮುಂದೆ ಎರಡು ಘಟನೆಗಳಿಂದಾಗಿ ಕಸ್ತೂರ್‌ ಬಾ, ಗಾಂಧಿ ಮತ್ತೆ ಮುಖಾಮುಖಿಯಾಗುವ ಸಂದರ್ಭ ಬಂದೆರಗುತ್ತೆ. ಒಂದು, ಆಶ್ರಮದ ನಿವಾಸಿಗಳ್ಯಾರೂ ಕಷಾಯದ ಹೊರತಾಗಿ ಟೀ, ಕಾಫಿ ಕುಡಿಯಬಾರದೆಂಬ ನಿಯಮವಿದ್ದರೂ ಕಸ್ತೂರ್ ‌ಬಾ ಆಗಾಗ್ಗೆ ಕಾಫಿ ಕುಡಿಯುವುದನ್ನು ಆಶ್ರಮವಾಸಿಗಳು ಗಾಂಧಿ ಗಮನಕ್ಕೆ ತರುತ್ತಾರೆ. ಗಾಂಧಿ ಕಸ್ತೂರ್ ‌ಬಾ ಕಾಫಿ ಸೇವನೆ ನಿಲ್ಲಿಸಲು ಹೇಳಿ ಕಳುಹಿಸಿದಾಗ ಗಾಂಧಿ ಅನುಯಾಯಿ ಮಹದೇವ ದೇಸಾಯಿ ಕಸ್ತೂರ್ ‌ಬಾ ಗೆ ‘ಲಕ್ಷ್ಮಣನ ಪ್ರಸಂಗ’ ವಿವರಿಸುತ್ತಾರೆ. ಮುಂದೆ ಇದು ಕಸ್ತೂರ್ ‌ಬಾ ರಾಮಾಯಣವನ್ನು ಸಂಪೂರ್ಣವಾಗಿ ತಿಳಿಯಲು ಸಹಾಯಕವಾಗುತ್ತದೆ. ಇದು ಸಿಹಿತಿಂಡಿಯ ವಿಷಯದಲ್ಲೂ ಹಾಗಾಗುತ್ತೆ. ಕಸ್ತೂರ್ ‌ಬಾ ಅದರ ಸೇವನೆಯನ್ನೂ ನಿಲ್ಲಿಸುತ್ತಾರೆ. ಹೀಗೆ ಆಶ್ರಮ ವಾಸದಲ್ಲೂ ಬದಲಾಗುವ ಕಸ್ತೂರ್ ‌ಬಾ ಗಾಂಧಿಯನ್ನು ಸಾಂದರ್ಭಿಕವಾಗಿ ಕೆಣಕುತ್ತಲೇ ಇರುತ್ತಾರೆ; ಸ್ವತಂತ್ರ ಭಾವನೆಯನ್ನು ವ್ಯಕ್ತಪಡಿಸುತ್ತಿರುತ್ತಾರೆ.

ಗಾಂಧಿ-ಅಂಬೇಡ್ಕರ್
ಆಶ್ರಮಕ್ಕೆ ಅಂಬೇಡ್ಕರ್ ಬರುವುದು ಕೇಳಿ ಚಕಿತರಾಗುವ ಕಸ್ತೂರ್ ‌ಬಾ ಇವರಿಬ್ಬರ ಭೇಟಿಯ ಚರ್ಚಾಂಶಗಳಿಂದ ಪ್ರಭಾವಿತರಾಗಿ ಅಸ್ಪೃಶ್ಯತಾ ವಿರೋಧಿ ಸಮಾವೇಶದಲ್ಲಿ ಮಹಿಳೆಯರನ್ನು ಸಂಘಟಿಸುವ ಸಂಕಲ್ಪ ತೊಡುವುದು ಈ ಹಂತದಲ್ಲಿ ಕಾಣುವ ಮತ್ತೊಂದು ತಿರುವು. ಗಾಂಧೀಜಿಯ ಅಸ್ಪೃಶ್ಯತೆಯ ಹೊರತಾದ ಹಿಂದೂಧರ್ಮ; ಅಂಬೇಡ್ಕರರ ದಲಿತರಿಗೆ ಸಮಾನ ಗೌರವ, ಅವಕಾಶ ಕಲ್ಪಿಸುವ ದಲಿತಧರ್ಮ ಇದೇ ಸಂದರ್ಭದಲ್ಲಿ ಪ್ರಕಟಗೊಳ್ಳುವ ಪರಿ ಔಚಿತ್ಯಪೂರ್ಣ. ಎಲ್ಲೂ ಸಿಕ್ಕಾಗದೆ, ಸುಕ್ಕೂ ಕಾಣದೆ ಸಂಕೀರ್ಣತೆಯಲ್ಲೂ ಸ್ಪಷ್ಟ ನಿಲುವುಗಳನ್ನು ಬಿಂಬಿಸುವ ನಿರೂಪಣೆ ಓದುಗರಿಗೆ ಗಾಂಧಿ, ಅಂಬೇಡ್ಕರ್, ಕಸ್ತೂರ್‌ ಬಾರ ಖಚಿತತೆಯನ್ನು ಪ್ರಕಟಪಡಿಸುತ್ತದೆ.

ಆಗಾಖಾನ್ ಅರಮನೆ
ಇಡೀ ಕಾದಂಬರಿಯ ಕೇಂದ್ರ ನೆಲೆಯಾಗಿ ಗುರುತಿಸಿಕೊಳ್ಳುವ ಆಗಾಖಾನ್ ಅರಮನೆ ಜೈಲಾದ ಬಗೆಯನ್ನು ಪರಿಚಯಿಸಿಕೊಳ್ಳುವುದೇ ಕಸ್ತೂರ್‌ ಬಾ ಅಂತ್ಯಸಂಸ್ಕಾರದಿಂದ! ಶೋಕದ ನಡುವೆಯೂ ಲೋಕದ ಮುಂದೆ ಜೈಲು ಇತಿಹಾಸ ಆರಂಭಿಕ ಆಕರ್ಷಣೆಯಾಗದೆ ಓದುಗನ ತಿಳಿವಿನ ವ್ಯಾಪ್ತಿಗೆ ಪ್ರವೇಶಿಸುವುದು ಗಮನಿಸಬೇಕಾದ ಸಂಗತಿ.

ಇಡೀ ಕಾದಂಬರಿಯಲ್ಲಿ ಕಸ್ತೂರ್ ‌ಬಾ ಮತ್ತು ಗಾಂಧಿಯನ್ನು ವಿಶಿಷ್ಟ ಸಾಂದರ್ಭಿಕ ಸನ್ನಿವೇಶಗಳ ಮೂಲಕ ಮುಖಾಮುಖಿಯಾಗಿಸುವ ಬರಗೂರು ರಾಮಚಂದ್ರಪ್ಪನವರು ಅಂಬೇಡ್ಕರ್, ಗೋಖಲೆ, ಹರಿಲಾಲ ಪ್ರಕರಣಗಳಲ್ಲೂ ‘ಇಬ್ಬರ ವಿಭಿನ್ನ ವ್ಯಕ್ತಿತ್ವ; ಸಮಾನ ಅಂತಃಕರಣ’ ವನ್ನು ಬಯಲುಗೊಳಿಸುವುದಲ್ಲದೇ ಇನ್ನಿತರ ಪಾತ್ರಗಳ ನ್ಯಾಯಪರ, ನಿಷ್ಠೂರ ಪೋಷಣೆಗೈಯುವಲ್ಲೂ ಪಾರಮ್ಯ ಮೆರೆದಿದ್ದಾರೆ. ನಿರೂಪಣೆಯಲ್ಲಿ ಬಳಸುವ ‘ಗಪದ್ಯ’ ಮಾದರಿಯಲ್ಲಿ ಕೆಲವೆಡೆ ಪದ್ಯಗಳು ಪೇಲವಗೊಳ್ಳುವುದು ಬಿಟ್ಟರೆ ಎಲ್ಲೂ ಲಯ ಕಳೆದುಕೊಳ್ಳದೇ ಸಾಗುವ ‘ಸಂವಾದ ಸಂಸ್ಕೃತಿ’ ಸಂಸ್ಕಾರಯುತವಾಗಿ ಸಾಗುವ ಬಗೆ ಅದ್ಭುತ. ಬರಗೂರರ ಈ ಸಾಧನೆಗೆ ಪ್ರೇರಣೆಯಾದ ಚ ಹ ರಘುನಾಥ್ ಕೂಡ ಅಭಿನಂದನಾರ್ಹರು!!

‍ಲೇಖಕರು Avadhi

January 20, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: