ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಂಗಡಿ ಟೇಬಲ್ ಮೇಲೆ ಹರಡಿದ ಆ ಸೆಟ್ಟು..

ಗೀತಾ ಹೆಗ್ಡೆ ಕಲ್ಮನೆ 

ಬಿಟ್ಟ ಕಣ್ಣು ಬಿಟ್ಟ ಹಾಗೆ
ನಿಂತು ನೋಡುತಲಿದ್ದೆ ತಲ್ಲೀನಳಾಗಿ
ಪಕಾ ಪಕಾ ಹೊಳೆವ ನಕ್ಷತ್ರದ ಮಿಂಚು
ಲಂಗಾ ದಾವಣಿ ಚೂಡಿದಾರು.

ಎಷ್ಟೊಂದು ಧಿರಿಸು ತೊಡುವ ಬಯಕೆ
ಪೇಟೆಯ ಸುತ್ತಿದಾಗ ಭುಗಿಲೇಳುತಿತ್ತು
ಅಂಗಡಿ ಮುಂದಿನ ಗೊಂಬೆ ಕಂಡಾಗೆಲ್ಲ.

ಆಗೆಲ್ಲಾ ಈ ಬೊಂಬೆಯೇ ನಾನಾಗಿದ್ದರೆ
ದಿನಕ್ಕೊಂದ್ಬಟ್ಟೆ ತೊಟ್ಟುಕೊಂಡು
ಕಂಡವರ ಕಣ್ಣು ಕುಕ್ಕುವ ಹಾಗೆ
ಒಂದಷ್ಟು ಸ್ಟೈಲು ಹೊಡಿಬಹುದಿತ್ತಲ್ಲಾ!

ಇಲ್ಕೇಳಿ ಹೀಗೊಂದಿನ
ಬಟ್ಟೆಯ ಖರೀಧಿಗೆ ನಾನೂ ಹೋದೆ
ಕಣ್ಣಿಗೆ ಬಿತ್ತು
ಸಂಪತ್ತಿಗೆ ಸವಾಲು ಸಿನೇಮಾದಲ್ಲಿ
ಮಂಜುಳಾ ಹಾಕಿದ ಆ ಚಂದದ ಡ್ರೆಸ್ಸು.

ಅಪ್ಪನಿಗೆ ದುಂಬಾಲು ಬಿದ್ದೆ
ಕೊಡಿಸೂ ಕೊಡಿಸೂ ಕೊಡಿಸೂ…
ಆಗಿನ ಕಾಲದ ಪ್ಯಾಷನ್ ದೊಗಳೆ ಪ್ಯಾಂಟು
ಅದಕೊಪ್ಪುವ ಚಂದದ ಟಾಪು
ಅಂಗಡಿ ಟೇಬಲ್ ಮೇಲೆ ಹರಡಿದ ಆ ಸೆಟ್ಟು
ನನಗಿಷ್ಟವಾದ ಕೆಂಪನೆ ಬಣ್ಣ
ಕೈ ನೇವರಿಸಿದ ನೆನಪಿನ ಬೊಟ್ಟು‌.

“ಅದು ನಮ್ಮಂಥವರು ಹಾಕುವುದಲ್ಲ
ಸುಮ್ನಿರು ನಾವು ಹಳ್ಳಿಯವರು”
ಖಡಕ್ಕಾದ ಅಪ್ಪನ ಮಾತು
ಹೃದಯ ಒದೆ ತಿಂದಂತಿತ್ತು
ನನ್ನ ಹಠ ಸೋತು ಹೋಗಿ
ಕಣ್ಣು ಕೆಂಪು ಗೋಲಿಯಾಯ್ತು.

ಹಿಂದೆಲ್ಲಾ
ವರ್ಷಕ್ಕೊಮ್ಮೆ ಬಟ್ಟೆಯ ಖರೀದಿ
ಸರ್ಕಾರಿ ಶಾಲೆಯ ಯುನಿಫಾರ್ಮು
ನೀಲಿಯ ಬಣ್ಣದ ಒಂದೇ ಥಾನು
ಶಾಲೆಗು ಮನೆಗು ಅದನ್ನೇ ಹಾಕು
ಕಡಿಮೆ ಖರ್ಚಿನ ನನ್ನಪ್ಪನ ಪ್ಲ್ಯಾನು
ಸ್ಕರ್ಟು ಫ್ರಾಕು ಎಲ್ಲರಿಗದರಲ್ಲೊಲೆದು
ಹಾಕಿ ಹೊರಟರೆ ಥೇಟ್ ಪಾತ್ರೆ ಸೆಟ್ಟು
ಹಾಕಿದ್ದೇ ಹಾಕಿ ಬಲೂ ಬೇಜಾರು.

ಉರುಳಿತು ವರ್ಷ
ಲಂಗ ಹೋಗಿ ಸೀರೆ ಬಂತು
ಆಗಲೂ ಬರೀ ಇದೇ ಮಾತು
ದೊಡ್ಡ ಜನ ಉಡೋ ವಸ್ತ್ರ
ನಾವಾಸೆ ಪಡಲೇಬಾರದು
ಹಿಟ್ಲರ್ನಂತೆ ಕಟ್ ನಿಟ್ ಮಾತು.

ಕೊನೆ ಕೊನೆಗೆ
ಹೌದು ಇದೇ ನಿಜವಿರಬಹುದುದೆಂದು
ನಂಬಿಕೆ ಮಾತುಗಳ ಹಿಂದೆ
ಗಿರಕಿ ಹೊಡೆದೂ ಹೊಡೆದೂ
ಮನಸು ಅಪ್ಪ ನೆಟ್ಟ ಆಲದ ಮರಕೆ
ಜೋತು ಬಿತ್ತು.

ಅಬ್ಬಾ!
ಆ ಕಾಲಕ್ಕೂ ಈ ಕಾಲಕ್ಕೂ ತುಲನೆ ಮಾಡಿ
ಮನಸು ಹೀಂಗೆಲ್ಲಾ ಪೆಚ್ಚಾಗುವುದು ;

ಈಗಿನವರದು
ಸ್ವತಂತ್ರ ವ್ಯಕ್ತಿತ್ವ  ಧಿಲ್ದಾರು ಲೈಫು
ಕಂತೆ ಕಂತೆ ತರಾವರಿ ಉಡುಪು
ಬೇಕಾದವರ ಜೊತೆಗೆಲ್ಲ ಸೆಲ್ಫಿ ಗಿಲ್ಫಿ
ಹೋಗಿ ಬರಲಿಕ್ಕಿಲ್ಲ ಯಾವ ಕಟ್ಟು ಪಾಡು
ಝಣ ಝಣ ಕಾಂಚಾಣ ಕೈ ತುಂಬಾ
ಶೋಕಿ ಜೀವನ ಸಖತ್ ಖುಲಾಸು
ಬದುಕೆಂದರೆ ಎಂಜಾಯ್
ಮಾಡಿಬಿಡಬೇಕೆನ್ನುವ ಮಾತು.

ಆದರಾಗ
ಸಂಪ್ರದಾಯದ ಹೆಸರಲ್ಲಿ
ಅದೆಷ್ಟೊಂದು ರಿಸ್ಟ್ರಿಕ್ಷನ್ನು ಉಡಲು,ತೊಡಲು,ಮಾತಾಡಲು,
ಎಲ್ಲಿ ಹೋಗಲು,ಬರಲು
ಎದ್ದರೆ ತಪ್ಪು ಕುಂತರೆ ತಪ್ಪು
ಹೀಗಿರಬೇಕು ಹಾಗಿರಬೇಕು
ಸದಾ ಕಟ್ಟು ಕಟ್ಟಳೆಯಲ್ಲೆ
ಕಳೆದೋಯ್ತು ಕಾಲವೆಲ್ಲ
ಈಗ ನೆನಪಾಗಿ ಎಷ್ಟೊಂದು ವ್ಯಥೆ!!

‍ಲೇಖಕರು avadhi

6 November, 2018

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading