ʻಪರಿಹಾಸಪುರʼ ಎಂಬ ನಗು ಮಾಯವಾದ ಊರಿನಲ್ಲಿ!

ಹುಟ್ಟಿದ್ದುಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ.

ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ ಸಂಸ್ಥೆಯೊಂದರಲ್ಲಿ ಮಹಿಳಾ ಸ್ವಾವಲಂಬನೆ ವಿಭಾಗದಲ್ಲಿ ಗ್ರಾಮೀಣ ಮಹಿಳೆಯರಿಗೆ ಕಲಾ ತರಬೇತಿ ನೀಡುತ್ತಿರುವುದು ತೃಪ್ತಿಕೊಟ್ಟಿದೆ.

ತಿರುಗಾಟ ಹುಚ್ಚು. ಸ್ಟ್ರೆಂತೂ, ವೀಕ್ನೆಸ್ಸುಗಳೆರಡೂ ಹಿಮಾಲಯವೇ. ಬದುಕಿನ ಚಿಕ್ಕ ಚಿಕ್ಕ ಸಂಗತಿಗಳು ಕ್ಯಾಮರಾ ಫ್ರೇಮಿನೊಳಗೆ ಇಳಿವಾಗ ಅವುಗಳು ರೂಪಾಂತರ ಹೊಂದುವ ಅದ್ಭುತ ಸಾಧ್ಯತೆಗಳ ಬಗ್ಗೆ ಸದಾ ಬೆರಗು.

ಹೆಸರೇ ಪರಿಹಾಸಪುರ! ಆಹಾ, ಎಷ್ಟು ಚೆಂದದ ಹೆಸರು. ಅಂದರೆ, ನಗುವಿನ / ಖುಷಿಯಿರುವ ಊರು ಎಂಬರ್ಥ. ಹೀಗೊಂದು ಊರಿನ ಕಲ್ಪನೆ 1200 ವರ್ಷಗಳ ಹಿಂದೆ ರಾಜನೊಬ್ಬನದ್ದು. ಕೇವಲ ಕನಸಲ್ಲ. ಕನಸನ್ನು ನನಸಾಗಿಸಿ ಹೊಸದಾಗಿ ಊರು ಕಟ್ಟಿದ. ಊರು ತುಂಬ ದೇವಸ್ಥಾನ ಕಟ್ಟಿಸಿದ. ದೇವಸ್ಥಾನದೊಳಗೆ ಚಿನ್ನ ಬೆಳ್ಳಿಯ ದೇವರುಗಳನ್ನಿಟ್ಟ. ನಾವು ಕೃಷ್ಣದೇವರಾಯನ ವೈಭವೋಪೇತ ಹಂಪೆ ಕಥೆಯನ್ನು ಕೇಳಿದ್ದೇವಲ್ಲ, ಹಾಗೆಯೇ, ಇಂದ್ರನ ಅಮರಾವತಿನ್ನೂ ಮೀರಿಸುವ ಊರಾಗಿತ್ತಂತೆ ಈ ಪರಿಹಾಸಪುರ. ಈ ರಾಜನ ಹೆಸರು ಲಲಿತಾದಿತ್ಯ ಮುಕ್ತಪೀಡ!

ನಮ್ಮ ಹಂಪೆ ಹಾಳುಹಂಪೆಯಾಯಿತಲ್ಲ ಎಂದು ನಾವು ಹಳಿದುಕೊಳ್ಳುತ್ತೇವೆ. ಆದರೆ ಈಗ ಈ ಪರಿಹಾಸಪುರದ ದುರವಸ್ಥೆ ನೋಡಿದರೆ, ಈ ಹೆಸರೇ ಪರಿಹಾಸ್ಯ ಎನ್ನಬಹುದು. ಎತ್ತ ನೋಡಿದರೂ ಖಾಲಿ ಜಾಗ, ಹರಡಿಕೊಂಡಿರುವ ಬಂಡೆ ಕಲ್ಲುಗಳ ರಾಶಿ ನೋಡಿದರೆ ಯಾರೂ ಕೂಡಾ ಈ ಜಾಗ ಇಂಥದ್ದೊಂದು ಸುವರ್ಣಯುಗ ಕಂಡಿತ್ತು ಎಂದು ಊಹಿಸಲಾರರು. ಇಲ್ಲಿ ಯಾವ ಜಾಗದಲ್ಲಿ ಇವರು ವರ್ಣಿಸುವಂಥ ದೇವಾಲಯವಿತ್ತು ಎಂದು ಕಲ್ಪನೆಯೂ ಮಾಡಲಾಗದಷ್ಟು ಭಗ್ನವಾಗಿ ನಿಂತಿದೆ ಇದು.

ಅಂದಾಜು ಏಳೆಂಟು ಅಡಿ ಎತ್ತರದ ಬೃಹತ್‌ ಅಡಿಪಾಯದಂತಿರುವ ರಚನೆಯೊಂದನ್ನು ಬಿಟ್ಟರೆ, ಒಂದು ಸಾಧಾರಣ ಕಾಂಪೌಂಡು, ಪುರಾತತ್ವ ಇಲಾಖೆಯ ಒಂದು ಬೋರ್ಡು, ಒಂದಿಷ್ಟು ಚದುರಿಹೋದ ಬಂಡೆಕಲ್ಲುಗಳ ರಾಶಿ, ದನ ಮೇಯಿಸುವ ಒಂದಿಬ್ಬರು ಗ್ರಾಮಸ್ಥರು ಬಿಟ್ಟರೆ ಅಲ್ಲಿ ನೋಡಲು ಏನೆಂದರೆ ಏನೂ ಇರಲಿಲ್ಲ. ಹಾಗಾಗಿಯೋ ಏನೋ, ಕಾಶ್ಮೀರ ನೋಡಲು ಬರುವ ಹೆಚ್ಚಿನ ಯಾವ ಪ್ರವಾಸಿಗರಿಗೂ ಇಲ್ಲಿ ಹೀಗೊಂದು ಇತಿಹಾಸವಿರುವ ಊರಿದೆ ಎಂದೂ ಗೊತ್ತಿಲ್ಲ. ಈ ಊರಿನ ಚೆಂದದ ಹೆಸರಷ್ಟೇ ನಮ್ಮನ್ನು ಅಲ್ಲಿಗೆ ಎಳೆದು ತಂದಿತ್ತು. ಜೊತೆಗೆ, ಈ ಒಂದು ಕಾಲದ ನಗುವಿನೂರಿನ ಇತಿಹಾಸದ ರೋಮಾಂಚಕಾರಿ ಕಥೆಯೂ ಇದರ ಜೊತೆಗೆ ಪುಟ ಬಿಚ್ಚಿತು.

ಶ್ರೀನಗರದಿಂದ 22 ಕಿ. ಮೀ. ದೂರದಲ್ಲಿರುವ ಈ ಪುಟಾಣಿ ಊರು ಸದ್ಯ ಈ ಊರಿನ ಮಂದಿಗೆ ಪರಾಸ್‌ಪೊರ್.‌ ಬಹುತೇಕರಿಗೆ ಅಡ್ಡ ಹೆಸರಿನಿಂದ ʻಕನಿ ಶೆಹರ್.ʼ‌ ಅಂದರೆ ಕಲ್ಲುಗಳ ಊರು. ಹಾಗಾಗಿ ಸುಂದರ ನಗುವಿನೂರಾಗಿದ್ದ ಇದು ತನ್ನ ಹಳೇ ಹೆಸರಿಗೇ ವೈರುಧ್ಯವೆಂಬಂತೆ ಕಲ್ಲುಗಳ ಶಹರವಾಗಿದೆ.

ಬಾರಮೂಲ (ಹಳೆ ಹೆಸರು ವರಾಹ ಮೂಲ) ಜಿಲ್ಲೆಯ ಪಟ್ಟನ್‌ನ ಎರಡು ಬಹುಮುಖ್ಯ ದೇವಾಲಯ ಅವಶೇಷಗಳಾದ ಶಂಕರ ಗೌರೀಶ್ವರ ದೇವಸ್ಥಾನ ಹಾಗೂ ಸುಗಂಧೀಶ ದೇವಾಲಯಗಳನ್ನು ನೋಡಿಕೊಂಡು ಕೊನೆಗೆ ಈ ಪರಿಹಾಸಪುರವನ್ನು ಲಿಸ್ಟಿನಲ್ಲಿಟ್ಟುಕೊಂಡು ಅಲ್ಲಿಗೆ ತಲುಪಿದಾಗ ಸಂಜೆ ಐದು ದಾಟಿತ್ತು. ಸೂರ್ಯ ಪಶ್ಚಿಮದಂಚಿಗೆ ಜಾರಿದ್ದ. ಆತನ ಕಿರಣಗಳು ಆ ಕಲ್ಲರಾಶಿಗೆ ಬಿದ್ದು ಕಲ್ಲುಗಳೂ ಹೊಳೆಯುತ್ತಿದ್ದವು. ಯಾರೋ ಒಬ್ಬಾತ ತನ್ನ ಹಸುಗಳನ್ನು ಮೇಯಿಸಿ ಹೊರಡುವ ಸನ್ನಾಹದಲ್ಲಿದ್ದ.

ಈ ಬಾರಿ, ಕಾಶ್ಮೀರದ ಪ್ರಕೃತಿ ಸೌಂದರ್ಯದೆಡೆಯಲ್ಲಿ ಮುಚ್ಚಿಹೋದ ಇತಿಹಾಸದೊಳಗೊಂದು ರೌಂಡು ಹಾಕಬೇಕು ಎನಿಸಿ ಹೋದ ಜಾಗಗಳಿವು. ಒಂದೊಂದು ಜಾಗದ್ದೂ ಒಂದೊಂದು ಕಥೆ. ಆ ಮೂಲಕ ಸಾವಿರ ವರ್ಷ ಹಿಂದೆಗೆ ನಮ್ಮನ್ನು ಹೊತ್ತೊಯ್ದು ಇತಿಹಾಸ ದರ್ಶನ ಮಾಡಿಸಿಬಿಟ್ಟಿತು! ಈಗಿನ ಕಾಶ್ಮೀರದ ಇನ್ನೊಂದು ಮುಖದ ಪರಿಚಯ.

ಕಾಶ್ಮೀರದ ಮಾರ್ತಾಂಡ ದೇವಸ್ಥಾನದಿಂದ ಹಿಡಿದು ನಾರ್‌ನಾಗ್‌ನ ಶಿವ ದೇವಾಲಯದವರೆಗೆ ಸಾಕಷ್ಟು ಮಂದಿರಗಳನ್ನು ಸುತ್ತು ಹಾಕಿದಾಗ ಗೊತ್ತಾಗಿದ್ದು, ಈ ಲಲಿತಾದಿತ್ಯ ಎಂಬ ಪ್ರಚಂಡ ರಾಜನ ಬಗ್ಗೆ. ಕಾರ್ಕೋಟ ರಾಜವಂಶದ ಈ ಲಲಿತಾದಿತ್ಯ ಮುಕ್ತಪೀಡ (ಕ್ರಿ ಶ 695-731) ಎಂಬ ಈ ರಾಜ ತನ್ನ ರಾಜಧಾನಿಯನ್ನು ಶ್ರೀನಗರದಿಂದ ʻಪರಿಹಾಸಪುರʼ ಎಂದು ನಾಮಕರಣ ಮಾಡಿದ ಹೊಸ ಊರಿಗೆ ವರ್ಗಾಯಿಸುತ್ತಾನೆ. ಅಲ್ಲಿ ತನಗೊಂದು ಹೊಸ ಅರಮನೆಯ ಜೊತೆ ನಾಲ್ಕು ಬಹುದೊಡ್ಡ ದೇವಾಲಯಗಳನ್ನೂ ನಿರ್ಮಿಸುತ್ತಾನೆ.

ಕಲ್ಹಣ ತನ್ನ ರಾಜತರಂಗಿಣಿಯಲ್ಲಿ ಲಲಿತಾದಿತ್ಯನ ಕಾಲದ ಕಾಶ್ಮೀರವನ್ನು ಸುವರ್ಣಯುಗವೆಂಬಂತೆ ಬಣ್ಣಿಸುತ್ತಾನೆ. ಲಲಿತಾದಿತ್ಯ ತನ್ನ ಸಾಮ್ರಾಜ್ಯವನ್ನು ಉತ್ತರದಲ್ಲಿ ಟಿಬೆಟ್‌ವರೆಗೂ, ದಕ್ಷಿಣದಲ್ಲಿ ದ್ವಾರಕಾದವರೆಗೂ, ಪೂರ್ವದಲ್ಲಿ ಈಗಿನ ಇರಾನ್‌ವರೆಗೂ, ಪಶ್ಚಿಮದಲ್ಲಿ ಒರಿಸ್ಸಾವರೆಗೂ ವಿಸ್ತರಿಸಿದ್ದ. ಈ ಪರಿಹಾಸಪುರವು ಇಂದ್ರನ ಅಮರಾವತಿಗಿಂತಲೂ ಹೆಚ್ಚೇ ವೈಭವದಿಂದ ಕೂಡಿತ್ತು.

ಇಂಡೋ ಗ್ರೀಕ್‌ ಶೈಲಿಯಲ್ಲಿ ಇಲ್ಲೊಂದು ವಿಷ್ಣು ದೇವಾಲಯವನ್ನು ನಿರ್ಮಿಸಿ, ಇದರ ಮೂರ್ತಿಗಳನ್ನು ಚಿನ್ನ, ಬೆಳ್ಳಿ, ತಾಮ್ರ ಮತ್ತು ಹಿತ್ತಾಳೆಗಳಿಂದ ಮಾಡಿಸಿದ್ದ. ಇಲ್ಲಿದ್ದ ಮುಕ್ತೇಶ್ವರರ ಮೂರ್ತಿಯಂತೂ ಸಂಪೂರ್ಣವಾಗಿ 84,000 ತೊಲ ಚಿನ್ನವನ್ನು ಬಳಸಿ ಮಾಡಲಾಗಿತ್ತು ಎಂಬೆಲ್ಲ ಉಲ್ಲೇಖವೂ ಇದೆ.

ಇವಿಷ್ಟಲ್ಲದೆ, ಆಗ ಈತ ಕೆತ್ತಿಸಿದ ಬುದ್ಧನ ತಾಮ್ರದ ಮೂರ್ತಿ ಆಗಸದೆತ್ತರಕ್ಕೆ ಚಾಚಿತ್ತು ಎಂಬುದಾಗಿ ಕಲ್ಹಣ ತನ್ನ ರಾಜತರಂಗಿಣಿಯಲ್ಲಿ ವಿವರವಾಗಿ ಹೇಳುತ್ತಾನೆ.

ಇವಿಷ್ಟೇ ಅಲ್ಲದೆ, ಈ ಲಲಿತಾದಿತ್ಯ ತನ್ನ ಕಾಲದಲ್ಲಿ ಬೌದ್ಧ ಧರ್ಮಕ್ಕೆ ಸಾಕಷ್ಟು ಮಹತ್ವ ನೀಡಿದ್ದನ್ನು ಆತ ಕೆತ್ತಿಸಿದ ಬುದ್ಧನ ಮೂರ್ತಿಗಳಿಂದಲೂ, ಸ್ತೂಪ, ಚೈತ್ಯ, ವಿಹಾರಗಳಿಂದಲೂ ತಿಳಿಯುತ್ತದೆ.

ಒಂದು ಕಾಲದಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಈ ಊರು ಅವನತಿ ಕಂಡಿದ್ದಕ್ಕೂ ಕಾರಣಗಳಿರುತ್ತವೆ. ಲಲಿತಾದಿತ್ಯ ಸುಮಾರು 36 ವರ್ಷಗಳಷ್ಟು ಕಾಲ ರಾಜ್ಯಭಾರ ಮಾಡಿ, ದೇವಸ್ಥಾನಗಳನ್ನು ಕಟ್ಟಿಸಿ, ಸಾಮ್ರಾಜ್ಯ ವಿಸ್ತರಿಸಿ ಕೊನೆಗೆ ಇವೆಲ್ಲವುಗಳಿಂದ ಜಿಗುಪ್ಸೆ ಬಂದು ತನ್ನ ಮಕ್ಕಳಿಗೆ ರಾಜ್ಯ ಒಪ್ಪಿಸಿ ಕಾಡು ಸೇರಿ ಮರಳುವುದಿಲ್ಲ. ಅಪ್ಪ ಕಟ್ಟಿ ಬೆಳೆಸಿದ ರಾಜ್ಯ ಮಕ್ಕಳ ಮೊಮ್ಮಕ್ಕಳ ಕೈಯಲ್ಲಿ ಪ್ರಾಮುಖ್ಯತೆ ಕಳೆದುಕೊಳ್ಳುತ್ತಾ ಬಂತು. ಮತ್ತೆ ಪರಿಹಾಸಪುರದಿಂದ ರಾಜಧಾನಿ ಬದಲಾಯಿತು.

ಪರಿಹಾಸಪುರದಲ್ಲಿ ನೀರಿನ ಸಮಸ್ಯೆ ಶುರುವಾಯಿತು. ಅದಕ್ಕೆ ಕಾರಣ, ಖ್ಯಾತ ಎಂಜಿನಿಯರ್‌ ಸೋಯಾ ಪಂಡಿತ ಆಗಿನ ರಾಜ ಅವಂತಿ ವರ್ಮನ ಕಾಲದಲ್ಲಿ (ಕ್ರಿಶ 855-883) ಝೇಲಂ ನದಿಯನ್ನು ತಿರುಗಿಸಿದ್ದರು. ನದಿ ಪರಿಹಾಸಪುರದಿಂದ ಯಾವಾಗ ದಿಕ್ಕು ಬದಲಾಯಿಸಿತೋ ಊರೂ ಖಾಲಿಯಾಯಿತು.

ಖಾಲಿ ಊರು, ಬೆಲೆಬಾಳುವ ಮೂರ್ತಿಗಳುಳ್ಳ ದೇವಸ್ಥಾನಗಳು! ಊಹಿಸಿದರೆ ಸಾಕು. ವಿಷಯ ಅರ್ಥವಾಗುತ್ತದೆ. ಅದೇ ಗತಿಯಾಯಿತು ಪರಿಹಾಸಪುರಕ್ಕೂ. ಅವಂತಿ ವರ್ಮನ ಮಗ ಶಂಕರ ವರ್ಮ ಯಾವಾಗ ತಾನೊಂದು ಶಂಕರಪುರ ಎಂಬ ಹೊಸದಾದ ರಾಜಧಾನಿ ಕಟ್ಟಿ ಬೆಳೆಸಿದನೋ, ಲಲಿತಾದಿತ್ಯನ ಪರಿಹಾಸಪುರದ ಅಳಿದುಳಿದ ಬೆಲೆಬಾಳುವ ವಸ್ತುಗಳೆಲ್ಲ ಅಲ್ಲಿಗೆ ಹೋದವು. ಆಮೇಲೆ 11ನೇ ಶತಮಾನದ ವೇಳೆಗೆ ರಾಜ ಹರ್ಷನಿಗೂ ಆತನ ಮೇಲೆ ದಂಡೆತ್ತಿ ಬಂದ ಉಕ್ಕಲನಿಗೂ ಘನಘೋರ ಯುದ್ಧ ನಡೆಯುತ್ತದೆ.

ಪರಿಹಾಸಪುರದ ದೇವಸ್ಥಾನಗಳಲ್ಲಿ ಅಡಗಿ ಕುಳಿತನೆಂಬ ಕಾರಣಕ್ಕೆ ಆತನ ಮೇಲಿನ ದ್ವೇಷದಿಂದ, ಆತನನ್ನು ಹುಡುಕುವ ಭರದಲ್ಲಿ ದೇವಾಲಯಗಳು ಹಾಳಾಗಿ ಹೋದವು. ಅರ್ಧ ಹಾಳಾಗಿ ಹೋದ ದೇವಾಲಯ ನಂತರ 14ನೇ ಶತಮಾನದಲ್ಲಿ ಮುಸ್ಲಿಂ ರಾಜರ ಪ್ರಾಬಲ್ಯ ಹೆಚ್ಚಿದ ಮೇಲೆ ಸುಲ್ತಾನ್‌ ಸಿಕಂದರ್‌ ಬುಟ್ಶಿಕಾನ್‌ ಕಾಲದಲ್ಲಿ ಪೂರ್ತಿಯಾಗಿ ವಿನಾಶವಾಯಿತು ಎಂಬಲ್ಲಿಗೆ ಪರಿಹಾಸಪುರ ಎಂಬ ಊರೊಂದರ ಅಧ್ಯಾಯ ಅಂತ್ಯವಾಯಿತು.

ದೇವಸ್ಥಾನದ ಅಳಿದುಳಿದ ಕೆಲವೇ ಕೆಲವು ಮೂರ್ತಿಗಳು ಶ್ರೀನಗರ ಮ್ಯೂಸಿಯಂನಲ್ಲಿದೆ. 1892ರಲ್ಲಿ ಈ ಊರಿಗೆ ಭೇಟಿಕೊಟ್ಟ ಬ್ರಿಟೀಶ್‌ ಪುರಾತತ್ವಜ್ಞ ಎಂ ಎ ಸ್ಟೀನ್‌ ಅವರು, ನಿಧಾನವಾಗಿ ಅಳಿದುಳಿದ ಕಲ್ಲುಗಳೂ ಮಾಯವಾಗುವುದನ್ನು ಗಮನಿಸಿದಾಗ, ಕಾಶ್ಮೀರದ ಢೋಗ್ರ ಮನೆತನದ ರಾಜ ಝೇಲಂ ಕಾರ್ಟ್‌ ರಸ್ತೆ ಮಾಡಲು ಈ ಕಲ್ಲುಗಳನ್ನು ಬಳಸುತ್ತಿರುವುದು ತಿಳಿದುಬಂತು. ಕೊನೆಗೆ ಈ ಕಲ್ಲುಗಳ ಮಹತ್ವದ ಮನವರಿಕೆಯನ್ನು ರಾಜನಿಗೆ ಮಾಡಲಾಗಿ, ಈಗ ಕಾಣುವ ಅಲ್ಪಸ್ವಲ್ಪ ಕಲ್ಲಾದರೂ ಆ ಜಾಗದಲ್ಲಿ ಉಳಿದವು ಎನ್ನಲಾಗುತ್ತದೆ.

ಇದೇ ಲಲಿತಾದಿತ್ಯ ಕಟ್ಟಿಸಿದ ಇನ್ನೊಂದು ಅದ್ಭುತ ದೇವಾಲಯ ಗಂದರ್‌ಬಲ್‌ ಜಿಲ್ಲೆಯಲ್ಲಿರುವ ನಾರ್‌ನಾಗ್‌ ಶಿವ ದೇವಾಲಯ. ಮುಖ್ಯವಾಗಿ ಈ ದೇವಾಲಯದ ಪರಿಸರವೇ ಅಪರೂಪದ ದೃಶ್ಯ. ಒಂದೆಡೆ ಝೇಲಂನ ಉಪನದಿಯಾದ ಸಿಂಧ್‌ ನದಿ, ನಾಲ್ಕೂ ದಿಕ್ಕಿನಿಂದ ಸುತ್ತುವರಿದಿರುವ ದಟ್ಟಾರಣ್ಯವನ್ನು ಹೊತ್ತು ನಿಂತ ಪರ್ವತಗಳು, ಹಿಮಚ್ಛಾದಿತ ಶ್ರೇಣಿಗಳು, ಮಧ್ಯದಲ್ಲಿ ಸಿಂಧ್‌ ತೀರದಲ್ಲಿ ಅವಶೇಷಗಳನ್ನು ಹೊತ್ತು ನಿಂತ ಈ ದೇವಾಲಯ.

ಒಂದು ಕಾಲದಲ್ಲಿ ಇದು ಎಷ್ಟು ಸುಂದರವಿದ್ದಿರಬಹುದು ಎಂದು ಊಹಿಸಿಕೊಳ್ಳಬಹುದು, ಅಂಥಾ ಜಾಗ, ಅಂಥಾ ವಾಸ್ತುಶಿಲ್ಪ. ಈಗಲೂ, ದೇವಾಲಯದ ಬಳಿ ಒಂದು ಪುಟ್ಟ ಕುಂಡ, ನಾಶವಾದರೂ ಉಳಿದುಕೊಂಡಿರುವ ಶಿವಲಿಂಗ ಕಾಣಬಹುದು. ಚಾರಣದ ಹುಚ್ಚಿರುವ ಮಂದಿಗೆ ಈ ದೇವಾಲಯ ಸಾಧಾರಣವಾಗಿ ಪರಿಚಯವಿರುವಂಥದ್ದೇ. ಕಾಶ್ಮೀರದ ಅತ್ಯಂತ ಸುಂದರವಾದ, ಚಾರಣಗಳಲ್ಲೇ ಬಲು ಪ್ರಸಿದ್ಧವಾದ ಹಾಗೂ ಪ್ರತಿ ಚಾರಣಿಗನೂ ತನ್ನ ಬಕೆಟ್‌ ಲಿಸ್ಟಿನಲ್ಲಿಟ್ಟಿರುವ ʻಗ್ರೇಟ್‌ ಲೇಕ್ಸ್‌ʼ ಚಾರಣದ ಬೇಸ್‌ ಕ್ಯಾಂಪ್‌ ಇದೇ ಊರು.

ಇನ್ನು ಲಲಿತಾದಿತ್ಯ ಕಟ್ಟಿಸಿದ ಬಹುಮುಖ್ಯ ದೇವಾಲಯಗಳಲ್ಲಿ ಒಂದಾದ ಮಾರ್ತಾಂಡ ದೇವಸ್ಥಾನದ ಕಥೆ ಹೇಳಹೊರಟರೆ, ಅದೇ ಒಂದು ದೊಡ್ಡ ಕಥೆ. ಅದನ್ನು ಇನ್ನೊಮ್ಮೆ ಹೇಳುವೆ. ಒಂದು ಭೂಪ್ರದೇಶ ಕಾಲಕಾಲಕ್ಕೆ ಬದಲಾಗುತ್ತಾ, ತನ್ನೊಳಗೆ ಅನೇಕ ಕಥೆಗಳನ್ನು ಹುದುಗಿಸಿಕೊಂಡು ಅದಕ್ಕೆ ವೈರುಧ್ಯವಾದ ಇನ್ನೊಂದು ಕಥೆ ಹೇಳುವ ಪ್ರದೇಶವಾಗಿ ಬದಲಾಗುವುದು ಎಷ್ಟು ವಿಚಿತ್ರವೋ ಅಷ್ಟೇ ಸತ್ಯ. ಅದಕ್ಕೆ ಬಹುಶಃ ನಮ್ಮ ದೇಶದಲ್ಲಿ ಕಾಶ್ಮೀರಕ್ಕಿಂತ ಒಳ್ಳೆಯ ಉದಾಹರಣೆ ಸಿಕ್ಕಲಿಕ್ಕಿಲ್ಲ.

‍ಲೇಖಕರು ರಾಧಿಕ ವಿಟ್ಲ

December 13, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: