ಅಮ್ಮಚ್ಚಿಯ ಈ ಅದ್ಭುತ ಪಯಣದಲ್ಲೂ ಅನಿಸುತ್ತಿರುವುದೊಂದೇ ‘ಅಮ್ಮನಿರಬೇಕಿತ್ತು’ ‘ಅಪ್ಪನೂ ಇರಬೇಕಿತ್ತು’…

“ಇವಳು ಅಮ್ಮಚ್ಚಿ”ಯ ಕಡೆಯ ಸಂಚಿಕೆಯಿದು….

“ಅಮ್ಮಚ್ಚಿ”ಯ ಪಯಣದಲ್ಲಿ ಆಗಿದ್ದು, ಅನಿಸಿದ್ದು ಎಲ್ಲವನ್ನೂ ಹಾಗೆಯೇ ನಿಮ್ಮ ಮುಂದಿಟ್ಟಿದ್ದೇನೆ. ಮುಗಿಸುವ ಮುನ್ನ, ಅಮ್ಮಚ್ಚಿಯ ಸಂವಾದಗಳಲ್ಲಿ, ತಪ್ಪದೆ ಕೇಳುವ ಒಂದು ಪ್ರಶ್ನೆಗೆ ಉತ್ತರಿಸಿಬಿಡೋಣವೆನಿಸಿದೆ.

ಪ್ರಶ್ನೆ : ಮಹಿಳಾ ನಿರ್ದೇಶಕಿಯಾಗಿ ನಿಮ್ಮ ಅನುಭವವೇನು ?

ಉತ್ತರ : ಮನದಲ್ಲೇ ನಗುತ್ತಾ “ನಿರ್ದೇಶಕಿ” ಅಂದ ಮೇಲೆ ಮಹಿಳೆಯೇ ತಾನೆ? ಅಂದುಕೊಂಡು ನಾನು ಕೊಡುತ್ತಿದ್ದ ಉತ್ತರವಿದು….. ಡೈರೆಕ್ಟರ್ ಅಂದರೆ “ಕ್ಯಾಪ್ಟನ್ ಆಫ್ ದ ಶಿಪ್” ಹಾಗಾಗಿ ನಿರ್ದೇಶಕರಿಗೆ ಸಹಜವಾಗಿ ನಾಯಕತ್ವದ ಗುಣ ಇರಬೇಕಾಗುತ್ತದೆ. ನಾಯಕರಲ್ಲಿ ಎರಡು ರೀತಿ. ಒಂದು, ಭಯಂಕರ ಶಿಸ್ತಿನಿಂದ ಹೆದರಿಸಿ ಗೆಲ್ಲುವ ನಾಯಕತ್ವ, ಮತ್ತೊಂದು ಎಲ್ಲರನ್ನೂ ಪ್ರೀತಿಯಿಂದ ಗೆಲ್ಲುವ ನಾಯಕತ್ವ. ಹೆದರಿಸುವುದು, ಗದರಿಸುವುದು ನನ್ನಿಂದ ಎಂದಿಗೂ ಸಾಧ್ಯವಾಗದ್ದು, ಪ್ರೀತಿಯಿಂದ ಕೆಲಸ ಮಾಡುವುದು ನನಗೆ ಸಹಜವಾದದ್ದು ಆದ್ದರಿಂದಲೇ ಕೆಲವೊಮ್ಮೆ ನೋವುಣ್ಣುವ ಸಂದರ್ಭ ಬಂದದ್ದಿದೆಯಾದರೂ ಅದು ನನ್ನ ಸ್ವಭಾವದಿಂದಲೇ ವಿನಃ ನಾನು ಮಹಿಳೆ ಎಂಬ ಕಾರಣಕ್ಕಲ್ಲ…

ಆದರೆ, ಹೆಣ್ಣೆಂಬ ಕಾರಣಕ್ಕೋ ಏನೋ ನಾನು ಮಾಡಲು ಹೊರಟ ಪ್ರತಿ ಕೆಲಸಗಳಲ್ಲಿ ಪ್ರತಿ ಹೆಜ್ಜೆಯಲ್ಲೂ ಪ್ರತಿಯೊಬ್ಬರನ್ನೂ ನಂಬಿಸಿ ಮುಂದುವರೆಯಬೇಕಿತ್ತು ಎಂಬುದು ನನ್ನ ಅನುಭವಕ್ಕೆ ಬಂದ ಸತ್ಯ… ಮತ್ತೊಂದು ಸತ್ಯವೆಂದರೆ, ಮನೆಯಿಂದ ಕೆಲಸಕ್ಕೆ ಹೊರಟ ಗಂಡಸರಿಗೆ ಕೆಲಸದ ಮಧ್ಯೆ ಇನ್ಯಾವ ನೆನಪಿನ ಹಂಗೂ ಇರುವುದಿಲ್ಲ. (ಕೆಲವರನ್ನು ಹೊರತುಪಡಿಸಿ) ಹೆಣ್ಣು ಹಾಗಲ್ಲ ಮನೆಯಿಂದ ಕೆಲಸಕ್ಕೆ ಹೊರಟರೂ ಎಲ್ಲ ಜವಾಬ್ದಾರಿಗಳನ್ನೂ ಗಂಟುಕಟ್ಟಿಕೊಂಡೇ ಹೊರಡುತ್ತಾಳೆ.

ಕೆಲಸದ ಮಧ್ಯೆ, “ಮಕ್ಕಳು ಮನೆಗೆ ಬಂದರೇನೋ? ಬಾಗಿಲು ಹಾಕಿದ್ದಾರಾ? ಊಟ ಮಾಡಿದ್ದಾರೋ ಇಲ್ಲವೋ? ಚಿಕ್ಕವಳಿಗೆ ತಲೆನೋವು ಕಡಿಮೆಯಾಗಿದೆಯೇ? ದೊಡ್ಡವಳ ಪರೀಕ್ಷೆ ಹೇಗಿತ್ತೋ? ” ಎಂಬೆಲ್ಲಾ ನೂರೆಂಟು ಯೋಚನೆಗಳು ನಮ್ಮನ್ನು ಬಿಟ್ಟುಹೋಗುವುದೇ ಇಲ್ಲ….ಇಷ್ಟೆಲ್ಲಾ ಗೊಡವೆಗಳ ನಡುವೆ ಸೃಜನಾತ್ಮಕ ಕೆಲಸ ಮಾಡುವುದು ಹೆಣ್ಣಿಗೆ ಸವಾಲೇ ಸರಿ….. ಆದ್ದರಿಂದಲೇ ಹೆಣ್ಣಿನ ಸಾಧನೆಗೆ ಸ್ಪೆಷಲ್ ರಿವಾರ್ಡ್ ಅಲ್ಲದಿದ್ದರೂ ಸ್ಪೆಷಲ್ ರೆಕಗ್ನಿಷನ್ ಅನ್ನುವುದು ಖಂಡಿತ ಬೇಕು…..

ಹೆಣ್ಣಿಗೆ ಮತ್ತೊಂದು ಸಾಮಾನ್ಯ ಸಮಸ್ಯೆಯಿದೆ,… ಹಿಂದಿಯ “ಅಭಿಮಾನ್”, “ಆಶಿಕಿ-2” ಚಿತ್ರಗಳಂತಹ ಸಮಸ್ಯೆ, ಹೆಂಡತಿಯ ಗೆಲುವನ್ನು ನೋಡಿ ಅಸೂಯೆ ಪಡುವ ಗಂಡಸರ ಸಮಸ್ಯೆ… ಈ ಸಮಸ್ಯೆ ಮಾತ್ರ ಎಂದಿಗೂ ನನ್ನ ಹತ್ತಿರವೂ ಸುಳಿದಿಲ್ಲ ನನ್ನ ಗೆಲುವನ್ನು ತನ್ನದೇ ಎಂದು ಕೊಳ್ಳುವ ಗಂಡ, ಮಾತ್ರವಲ್ಲ, ಅದನ್ನು ಸಂಭ್ರಮಿಸುವ ಗಂಡನ ಮನೆಯವರು ನನ್ನ ದೊಡ್ಡ ಶಕ್ತಿಯೇ ಆಗಿದ್ದಾರೆ….

ಮಾಡುವ ಕಾಯಕದಲ್ಲಿ ಅತೀವವಾದ ಆಸಕ್ತಿ, ಶ್ರದ್ಧೆ, ಇದ್ದು ಕುಟುಂಬ‌ ಮತ್ತು ಸ್ನೇಹಿತರ ಸಹಕಾರ ಸಿಕ್ಕಿದಲ್ಲಿ ಯಾರಾದರೂ ಸರಿ, ಅಂದುಕೊಂಡಿದ್ದನ್ನು ಸಾಧಿಸಬಹುದು…. ಅದಕ್ಕೆ ಹೆಣ್ಣು ಗಂಡೆಂಬ ಭೇದವಿಲ್ಲ…. ಇಂತಹ ಅತೀವವಾದ ಪ್ರೀತಿ, ಸಹಕಾರ ಎಲ್ಲರಿಂದ, ಎಲ್ಲೆಡೆಯಿಂದ ಪಡೆದುಕೊಂಡ ಅಮ್ಮಚ್ಚಿ ಧನ್ಯಳು….

ಬೆಳಗೆದ್ದು ನಾನು ಯರ್ಯಾರ ನೆನೆಯಲಿ ಅನ್ನುವ ಹಾಗೆ, ಕತೆ ಕೊಟ್ಟು ಹರಸಿ ಹಾರೈಸಿ , ನಮಗೆಲ್ಲಾ ಒಳಿತಾಗಲಿ ಎಂದು ಸದಾ ಮಿಡಿಯುವ ನನ್ನ ಪ್ರೀತಿಯ ವೈದೇಹಿ ಮೇಡಂ. ಮೇಡಂ ನಷ್ಟೇ ನಮ್ಮನ್ನು ಪ್ರೀತಿಸುವ ಶ್ರೀನಿವಾಸ‌ಮೂರ್ತಿ ಸರ್ , ನನ್ನನ್ನು ನಂಬಿದ ನಮ್ಮ ನಿರ್ಮಾಪಕರು, ನಮ್ಮೆಲ್ಲಾ ಕಲಾವಿದರು ತಂತ್ರಜ್ಞರು, ಮತ್ತು ಸಿನೆಮಾದ ಮೊದಲ ಸ್ರೀನ್ ಪ್ಲೇ ತನ್ನ ಹಸ್ತಾಕ್ಷರದಲ್ಲಿ ಬರೆದುಕೊಟ್ಟ “ಲಹರಿ ತಂತ್ರಿ”ಯಿಂದಾ ಮೊದಲುಗೊಂಡು ಸಿನೆಮಾ ಮುಗಿಸುವ ಹೊತ್ತಿಗೆ, ರಿಲೀಸ್ ಬಗ್ಗೆ ಏನೇನೂ ಗೊತ್ತಿಲ್ಲದೆ ತಲೆಕೆಡಿಸಿಕೊಂಡಿದ್ದಾಗ. ಅದರ ಎ ಟೂ ಜ಼ೆಡ್ ತಿಳಿಸಿಕೊಟ್ಟು , ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ನಮ್ಮೊಂದಿಗೆ ಸೇರಿಕೊಂಡ ಬಾಲು ಅವರವರೆಗೂ ನೂರಾರು ಹಿತೈಶಿಗಳು ನಮ್ಮ ಬೆಂಬಲಕ್ಕೆ ನಿಂತಿದ್ದಾರೆ.

“ನಮ್ಮ ಗೊಡವೆ ನಿನಗೆ ಬೇಡವಮ್ಮ ನೀನು ಆರಾಮಾಗಿ ಸಿನೆಮಾ ಮಾಡು” ಅಂತಾ ಪ್ರೀತಿಯಿಂದ ಕಳುಹಿಸಿಕೊಟ್ಟ ನನ್ನೆರಡು ಮಕ್ಕಳ ಜೊತೆಗೆ, ಕಾಣದ ಲೋಕದಿಂದ ಆಶೀರ್ವದಿಸಿದ ನನ್ನ ಅಪ್ಪ ಅಮ್ಮ… ಜೊತೆಗಿದ್ದು ಹಾರೈಸಿದ ಅತ್ತೆ ಮಾವ ಮತ್ತು ಇಡೀ ಕುಟುಂಬದವರು ಸಿನೆಮಾದ ಯಶಸ್ಸಿನ ಪಾಲುದಾರರಾಗಿದ್ದಾರೆ. ಸ್ನೇಹಿತರು ಜೊತೆಗೂಡಿದ್ದಾರೆ.

ಸಿನೆಮಾ ನೋಡಿದ ಮೇಲೆ ನಿಮ್ಮ ತಂಡದಲ್ಲಿ ನಾನೂ ಇರಬೇಕಿತ್ತು, ಮುಂದಿನ ಸಿನೆಮಾದಲ್ಲಿಯಾದರೂ ಸೇರಿಸಿಕೊಳ್ಳಿ ಅಂತಾ ಕೇಳಿದ ಪ್ರೀತಿಯ ಮನಸ್ಸುಗಳು ನಮ್ಮ ಹೆಮ್ಮೆಯನ್ನು ಇಮ್ಮಡಿಗೊಳಿಸಿವೆ… ಸಿನೆಮಾ ನೋಡಿ, ಸೋಷಿಯಲ್ ಮೀಡಿಯಾ ಮುಖಾಂತರ ಸಿಕ್ಕಿದ ಸ್ನೇಹಗಳು ನಮ್ಮ ಸ್ನೇಹಬಳಗವನ್ನು ಹಿರಿದು ಮಾಡಿವೆ. ಪತ್ರಿಕಾ ಮಾಧ್ಯಮವಂತೂ ಬೆಟ್ಟದಷ್ಟು ಪ್ರೀತಿ ಕೊಟ್ಟು ಸದಭಿರುಚಿಯ ಸಿನೆಮಾಗೆ ಎಂದಿಗೂ ತಮ್ಮ ಬೆಂಬಲವಿದೆ ಎಂಬುದನ್ನು ಸಾಬೀತುಪಡಿಸಿದೆ …

ಮತ್ತೇನು ಬೇಕು?. ಸಿನೆಮಾ ಮಾಡಿ ಕಳೆದುಕೊಂಡ ಹಣದ ಲೆಕ್ಕಕಿಂತಾ, ಸಿನೆಮಾದಿಂದ ಗಳಿಸಿದ ಪ್ರೀತಿಯ ಲೆಕ್ಕ ಬಹು ದೊಡ್ಡದು. ಹಲವಾರು ಪ್ರತಿಷ್ಠಿತ ಸಿನಿಮೋತ್ಸವಗಳಲ್ಲಿ ಪಾಲ್ಗೊಂಡ “ಅಮಚ್ಚಿ” ಸಾಕಷ್ಟು ಪ್ರಶಂಸೆಗೊಳಗಾಗಿದ್ದಾಳೆ. ಪ್ರಶಸ್ತಿಗಳು ಸಿಕ್ಕಾಗ ಬರುವ ಅಭಿನಂದನೆಗಳಿಗಿಂತಾ, ಪ್ರಶಸ್ತಿಗಳಿಂದ ವಂಚಿತಳಾದ ಅಮ್ಮಚ್ಚಿಯನ್ನು ಕಂಡು ನಮಗಿಂತಾ ಹೆಚ್ಚು ನೋವುಂಡ ಪ್ರೇಕ್ಷಕರ ಅಭಿಮಾನ, ಪ್ರಶಸ್ತಿಗಿಂತಾ ದೊಡ್ಡ ಸಮಾಧಾನವನ್ನು ತಂದುಕೊಟ್ಟಿದೆ…..

ಸ್ಕ್ರಿಪ್ಟ್ಸ್ರಿ ತಯಾರಾಗಿಟ್ಟುಕೊಂಡು ನಿರ್ಮಾಪಕರಿಗಾಗಿ ಅಲೆಯುವ ನಿರ್ದೇಶಕರಿರುವಾಗ,”ಅಮ್ಮಚ್ಚಿ” ಸಿನೆಮಾ ನೋಡಿದ ಕೂಡಲೆ ನನ್ನನ್ನು ಭೇಟಿ ಮಾಡಿ, ನಮಗೂ ಒಂದು ಸಿನೆಮಾ ಮಾಡಿಕೊಡಿ‌ ಅಂತಾ ಕೇಳಿದ ನಾಲ್ಕು ನಿರ್ಮಾಪಕರು “ಅಮ್ಮಚ್ಚಿ”ಯ ಯಶಸ್ಸಿಗೆ ಸಾಕ್ಷಿಯಾಗಿದ್ದಾರೆ… ಇನ್ನೇನು, ಮುಂದಣ ಹೆಜ್ಜೆ ಇಡಬೇಕಷ್ಟೆ. ಅದಕ್ಕೆ ಮುನ್ನ ಒಂದೆರಡು ಮಾತು…..

ಹಿಂದೆ, ಮಕ್ಕಳಿಗೆ ಲೀವ್ ಲೆಟರ್ ಬರೆಯಬೇಕಾದಾಗ, ಕಡಿಮೆ ಎಂದರೂ ಮೂರು ಬಿಳಿ ಹಾಳೆಗಳು ವೇಸ್ಟ್ ಆಗದೆ ಇರುತ್ತಿರಲಿಲ್ಲ… ಬರವಣಿಗೆಗೂ ನನಗೂ ಅಷ್ಟು ದೂರ…. ಈಗ, ಯಾವ ತಯಾರಿಯೂ ಇಲ್ಲದೆಯೇ ಯಾವ ನೋಟ್ಸ್ ಗಳೂ ಇಲ್ಲದೆಯೇ ಬರೀ ನೆನಪಿನ ಬುತ್ತಿಯಿಂದ ಹೊರ ತೆಗೆದು ಬರೆಯುತ್ತಿರುವ ಈ “ಇವಳು ಅಮ್ಮಚ್ಚಿ” ಅಂಕಣ ಒಂದೆರಡು ಗಂಟೆಗಳಲ್ಲಿ ಬರೆದು ಮುಗಿಸುತ್ತಿದ್ದೇನೆ ಎಂದರೆ, ಅದು ನನ್ನ ಮಟ್ಟಿಗೆ ಪವಾಡವೇ ಸರಿ!

ಚಿಕ್ಕವಳಿದ್ದಾಗಿನಿಂದ ಕತೆ, ಕಾದಂಬರಿಗಳನ್ನು ಓದಿ ಗೊತ್ತಿತ್ತು. ಅಂಕಣ ಬರಹ ಕೆಲವು ಓದಿದ್ದರೂ ಅದರ ಬಗ್ಗೆ ಅಷ್ಟು ಗಮನವಿರಲಿಲ್ಲ. ನನ್ನ ಅಕ್ಕನ ಸೊಸೆ (ನಮ್ಮ ತಂಡದ ಕಲಾವಿದೆ ಕೂಡ) “ಲಹರಿ ತಂತ್ರಿ”ಯ ಕೆಲವು ಅಂಕಣಗಳನ್ನು ಓದುತ್ತಾ ನಮ್ಮ ನಡುವೆ ನಡೆದ ಘಟನೆಗಳನ್ನೇ ಅಷ್ಟು ಚೆಂದವಾಗಿ ಬರೆಯುವ ಅವಳ ಶೈಲಿ ನೋಡಿ “ಇಂತಾ ಎಷ್ಟೋ ಅನುಭವಗಳು ನನ್ನನ್ನೂ ಕಾಡುತ್ತಿದೆಯಲ್ಲ “ನಾನೇಕೆ ಬರೆಯಬಾರದು? ನನ್ನ ಖುಷಿಗೆ” ಎನಿಸಿ, ಮನೆಗೆ ಬಂದು ಹೋದ ಪುಟ್ಟ ಹಕ್ಕಿ, ನನ್ನಿಂದ ಬಾಣಂತನ ಮಾಡಿಸಿಕೊಂಡ ಎಂಟು ಮಕ್ಕಳ ತಾಯಿ ಕೆಂಪಿ, (ನಮ್ಮ ಬೀದಿಯ ನಾಯಿ), ನನ್ನ ಅಮ್ಮ, ಅಪ್ಪ, ನನ್ನ ಬಾಲ್ಯದ ಕೆಲವು ನೆನಪುಗಳು ಎಲ್ಲವನ್ನೂ ಚಿಕ್ಕದಾಗಿ ಬರೆದೆ. ಆಗಲೇ ಅರಿವಾದದ್ದು ನನಗೆ, ನಟನೆ ಮಡುವಾಗ ಸಿಗುವಂತದ್ದೇ ವಿಚಿತ್ರವಾದ ಒಂದು ಸಮಾಧಾನ, ಖುಷಿ ಬರೆಯುವಾಗಲೂ ಸಿಗುತ್ತದೆ ಎಂದು…

ಹಾಗೇ ಒಮ್ಮೆ ಬರೆದ “ಅಮ್ಮನಿರಬೇಕಿತ್ತು” ಎಂಬ, ಗದ್ಯವೂ ಅಲ್ಲದ, ಪದ್ಯವೂ ಅಲ್ಲದ ಒಂದು ಲೇಖನ ಬರೆದು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದೆ, ಮರು ದಿನ ವಾಟ್ಸಾಪ್ ನಲ್ಲಿ ಜಿ. ಎನ್ ಮೋಹನ್ ಸರ್ ಅವರ ಮೆಸೇಜ್ … “ಅವಧಿಗೆ ಬೇಕು ನಿಮ್ಮ ಅಂಕಣ” ಅಂತಾ…

ಅಬ್ಬಾ! ಆ ಕ್ಷಣ ನಿಜಕ್ಕೂ ಖುಷಿಯಾಗಿತ್ತು. ಮರುಕ್ಷಣವೇ ಎಷ್ಟು ಭಯವಾಗಿತ್ತೆಂದರೆ, ಇದು ಖಂಡಿತ ನನ್ನಿಂದ ಸಾಧ್ಯವಿಲ್ಲ ಎನಿಸಿಬಿಟ್ಟಿತು… ಮೋಹನ್ ಸರ್ ಗೆ ಕಾಲ್ ಮಾಡಿ, “ಸರ್ ನನ್ನಿಂದ ಖಂಡಿತ ಸಾಧ್ಯವಿಲ್ಲ” ಎಂದೆ ಹೆದರಿಕೆಯಿಂದಲೇ… ಬಿಡುತ್ತಾರ, ಮೋಹನ್ ಸರ್?. ಒಪ್ಪಿಸಿಯೇ ಬಿಟ್ಟರು. ಅಂಜಿಕೆಯಿಂದಲೇ ಒಪ್ಪಿದೆ….

ಮೊದಲ ಅಂಕಣ ಬರೆದೆ, ಎರಡೇ ಪ್ಯಾರಾ…. ಅವಧಿ ಟೀಂ ನಿಂದ ಕಾಲ್ ಬಂತು “ಮೇಡಂ ಇನ್ನಷ್ಟು ಉದ್ದ ಬೇಕು”, ಕಷ್ಟದಲ್ಲೇ ಮತ್ತೊಂದು ಪ್ಯಾರಾ ಬರೆದು ಕಳುಹಿಸಿದೆ. ಮತ್ತೆ ಕಾಲ್, “ಮೇಡಂ, ಇನ್ನೂ ಒಂದೆರಡು ಪ್ಯಾರಾ ಆದರೂ ಬೇಕು” ಎಂದು , ಉಫ್ ! ಬಹುಶಃ ಇದೇ ಮೊದಲ ಮತ್ತು ಕೊನೆಯ ಸಂಚಿಕೆಯಾಗಬಹುದು ಅಂತಲೇ, ಅನಿಸಿದ್ದನ್ನು ಬರೆದು ಕಳುಹಿಸಿದೆ…ಹೇಗೋ ಅಂತೂ ಒಂದು ಸಂಚಿಕೆ ಮುಗಿಯಿತು..

ಒಂದೆರಡು ದಿನಗಳ‌ ನಂತರ ಎರಡನೆಯ ಸಂಚಿಕೆ ಬರೆಯಲು ಶುರು ಮಾಡಿದೆ. ಅದ್ಯಾವ ಪ್ರೇರಣೆಯೋ ಗೊತ್ತಿಲ್ಲ ಅಲ್ಲಿಂದ ಇಲ್ಲಿಯವರೆಗೆ ಯಾವ ಆಯಾಸವೂ ಇಲ್ಲದೆ ತನ್ನಷ್ಟಕ್ಜೆ ಬರೆಸಿಕೊಂಡು ಹೋಗುತ್ತಿದೆ, ಪವಾಡವೆಂಬಂತೆ…. ಒಂದಿಷ್ಟಾದರೂ ಬರೆಯುತ್ತೇನೆಂಬ ನಂಬಿಕೆ ನನಗೇ ಇಲ್ಲದಾಗ ನನ್ನನ್ನು ನಂಬಿ ನನ್ನಿಂದ ಇಷ್ಟೆಲ್ಲಾ ಬರೆಸಿದ ಮೋಹನ್ ಸರ್ ಗೆ ಏನು ಹೇಳಬೇಕು? ಹೇಗೆ ಕೃತಜ್ಞತೆ ತಿಳಿಸಬೇಕೋ ಗೊತ್ತಿಲ್ಲ….

ಈ ಲೇಖನಕ್ಕೆ ಬಂದ, ನಾನು ಊಹಿಸಲೂ ಸಾಧ್ಯವಾಗದಷ್ಟು ಒಳ್ಳೆಯ ಪ್ರತಿಕ್ರಿಯೆಗಳು ನಿಜಕ್ಕೂ ನನಗೆ ಸ್ಪೂರ್ತಿಯಾಗಿವೆ. ಅಮ್ಮಚ್ಚಿ ಸಿನೆಮಾಗೆ ನೀಡಿದಷ್ಟೇ ಪ್ರೀತಿ “ಇವಳು ಅಮ್ಮಚ್ಚಿ” ಅಂಕಣಕ್ಕೂ ನೀಡಿ ಪ್ರೋತ್ಸಾಹಿಸಿದ ನಿಮ್ಮೆಲ್ಲರಿಗೂ ಸಾವಿರ ನಮನಗಳು … ಓದಿದವರಿಗೆ ಎಷ್ಟು ಉಪಯೋಗವಾಗಿದೆಯೋ ತಿಳಿದಿಲ್ಲ ಆದರೆ ನಮ್ಮೆಲ್ಲಾ ಅನುಭವಗಳನ್ನೂ ನಿಮ್ಮ‌ಮುಂದೆ ಹಂಚಿಕೊಂಡ ಕಾರಣ, ಒಂದು ನಿರಾಳವಾದ ಅನುಭವ ನಮ್ಮದಾಗಿದೆ ಅದು ಹೊಸತೊಂದು ಪ್ರಯತ್ನಕ್ಕೆ ಪ್ರೇರಣೆಯೂ ಆಗಿದೆ. ಜೊತೆಗೆ ಮುಂದಿನ ನಮ್ಮ ಯೋಜನೆಗಳಲ್ಲಿ ಕ್ರಮೇಣವಾಗಿ ಮಸುಕಾಗಿಬಿಡಬಹುದಾದ, ಅಮ್ಮಚ್ಚಿಯ ಅನುಭವಗಳೆಲ್ಲವೂ ಒಂದೆಡೆ ದಾಖಲಾದ ಖುಷಿ ನಮಗೆ… ಅದಕ್ಕಾಗಿ ಮೋಹನ್ ಸರ್ ಗೆ , ಅವಧಿ ಟೀಂ ಗೆ, ಮತ್ತು ತಮಗೆ ಅಮ್ಮಚ್ಚಿ ತಂಡ ಎಂದಿಗೂ ಋಣಿಯಾಗಿರುತ್ತದೆ….ಇಷ್ಟರಲ್ಲೇ ಕೈಗೆತ್ತಿಕೊಳ್ಳುವ ನಮ್ಮ ಮತ್ತೊಂದು ಪ್ರಯತ್ನಕ್ಕೂ ನಿಮ್ಮೆಲ್ಲರ ಪ್ರೀತಿ, ಹಾರೈಕೆ ಹೀಗೆ ಇರಲಿ….

ಈ ಕ್ಷಣದಲ್ಲೂ, ಅಮ್ಮಚ್ಚಿಯ ಈ ಅದ್ಭುತ ಪಯಣದಲ್ಲೂ ಅನಿಸುತ್ತಿರುವುದೊಂದೇ “ಅಮ್ಮನಿರಬೇಕಿತ್ತು ” “ಅಪ್ಪನೂ ಇರಬೇಕಿತ್ತು”…..

‍ಲೇಖಕರು avadhi

December 13, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Shyamala Madhav

    ಇವಳು ಅಮ್ಮಚ್ಚಿಯನ್ನು ಬರೆದ, ತೋರಿದ ಕೈಗಳಿಂದ ಮುಂದಿನ ಕಾಣ್ಕೆ ಗಾಗಿ ಕಾದಿದ್ದೇನೆ, ಚಂಪಾ. ಹೃದಯ ತುಂಬಿ ಅಭಿನಂದನೆ!

    ಪ್ರತಿಕ್ರಿಯೆ
  2. km vasundhara

    ಸಿನೆಮಾದಷ್ಟೇ ಚೆಂದವಿತ್ತು ನಿಮ್ಮ ಅಂಕಣ. ಪ್ರತಿ ಭಾನುವಾರ ಕಾದು ಓದುತ್ತಿದ್ದೆ. ಶುಭಾಶಯಗಳು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: