ʻಕೇ ಡೇ, ತಕಡೂʼ ಬಂಧ: ಇದು ಪಹಾಡಿ ರಾಗ!

ಹುಟ್ಟಿದ್ದುಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ.

ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ ಸಂಸ್ಥೆಯೊಂದರಲ್ಲಿ ಮಹಿಳಾ ಸ್ವಾವಲಂಬನೆ ವಿಭಾಗದಲ್ಲಿ ಗ್ರಾಮೀಣ ಮಹಿಳೆಯರಿಗೆ ಕಲಾ ತರಬೇತಿ ನೀಡುತ್ತಿರುವುದು ತೃಪ್ತಿಕೊಟ್ಟಿದೆ.

ತಿರುಗಾಟ ಹುಚ್ಚು. ಸ್ಟ್ರೆಂತೂ, ವೀಕ್ನೆಸ್ಸುಗಳೆರಡೂ ಹಿಮಾಲಯವೇ. ಬದುಕಿನ ಚಿಕ್ಕ ಚಿಕ್ಕ ಸಂಗತಿಗಳು ಕ್ಯಾಮರಾ ಫ್ರೇಮಿನೊಳಗೆ ಇಳಿವಾಗ ಅವುಗಳು ರೂಪಾಂತರ ಹೊಂದುವ ಅದ್ಭುತ ಸಾಧ್ಯತೆಗಳ ಬಗ್ಗೆ ಸದಾ ಬೆರಗು.


‌ʻಕೇ ಡೇʼ (ನೀವು ಹೇಗಿದ್ದೀರಿ?)
ʻತಕಡೂʼ(ನಾನು ಆರಾಮ)
ಎತ್ರಾಶಿ, ಏದಾಶಿ…
ಹೀಗೆ ಗೆಸ್‌ ವರ್ಕೂ ಮಾಡಲಾಗದ ಒಂಥರಾ ಕ್ಲಿಷ್ಟವೆನಿಸುವ ಭಾಷೆಯಲ್ಲಿ ಮಾತು ಆರಂಭಿಸುವುದು ನಮ್ಮನೆ ಪುಟಾಣಿ ಮತ್ತು ಆ ಬೆಟ್ಟದೂರಿನ ಹುಡುಗ ರೋಹಿತ್.‌ ಭಾಷೆ ಹಿಮಾಚಲದ ಪಹಾಡಿ. ಇವರಿಬ್ಬರೂ ಮಾತಿಗೆ ಕೂತರೆ ಮಂದ್ರದಿಂದ ಶುರುವಾಗುವ ಪಹಾಡಿ, ತಾರಕಕ್ಕೇರುವಾಗ ಹಿಂದಿಗೆ ತಿರುಗುತ್ತದೆ.

ಮೊನ್ನೆ ಮೊನ್ನೆ ಈ ರೋಹಿತ್‌ ಕಾಲ್‌ ಮಾಡಿದ್ದ. ಮತ್ತದೇ ಪಹಾಡಿ ರಾಗ ಶುರುವಾಯಿತು ಇಬ್ಬರದ್ದೂ. ʻನಿಲ್ಲು ನೋಡೋಣ, ಈಗೆಷ್ಟು ದೊಡ್ಡೋನಾಗಿದ್ದಿ ನೋಡ್ತೀನಿ!, ಈ ಸಾರಿ ಬಂದ್ರೆ ಬುರ್ಹನ್‌ ಘಾಟಿಗೆ ಚಾರಣ ಹೋಗ್ಬಹುದು ಅನ್ಸತ್ತೆ ನೋಡು, ತುಂಬ ಎತ್ತರವೇ ಆಗಿದ್ದಿ, ಆ ಚಾರಣ ಎಷ್ಟು ಮಜಾ ಇದೆ ಗೊತ್ತಾ? ನೀ ಹತ್ತೋಕೆ ಸ್ವಲ್ಪ ಕಷ್ಟ ಪಟ್ರೆ ಆಯ್ತು, ಇಳಿಯೋಕೆ ಕಷ್ಟನೇ ಇಲ್ಲ, ಸ್ನೋನಲ್ಲೇ ಜಾರಿದ್ರೆ ಒಂದೇ ಉಸಿರಿಗೆ ಟೆಂಟೊಳಗೆ ಇರ್ತಿʼ ಎನ್ನುತ್ತಾ ಇಬ್ಬರದೂ ಜೋರು ನಗು.

ಇವನ ಮುಗ್ಧ ಉತ್ತರಕ್ಕಾಗಿಯೇ ಅವನು ಪ್ರತೀ ಸಾರಿ ಕೇಳಿದ ಪ್ರಶ್ನೆಗಳನ್ನೇ ಬೇಕಂತಲೇ ಕೇಳುತ್ತಾನೆ. ಅದಕ್ಕಾಗಿಯೇ ಎರಡ್ಮೂರು ತಿಂಗಳಿಗೊಮ್ಮೆಯಾದ್ರೂ ವಿಡಿಯೋ ಕಾಲ್‌ ಮಾಡಿ ಹರಟೆ ಹೊಡೀತಾನೆ. ಇವರಿಬ್ಬರ ಮಾತು-ಕಥೆ ನೋಡ್ತಾ ಇದ್ದರೆ ಆ ದಿನಗಳು ನೆನಪಾಗಿಬಿಡುತ್ತವೆ. ರೋಹಿತ್‌ ಎಂಬ ಈ ಕಾಲೇಜು ಹೈದ ನಮ್ಮ ಜೊತೆ ಇದ್ದಿದ್ದು ಕೇವಲ ಐದೇ ದಿನ. ಆದರೆ ಆ ಐದು ದಿನ, ವಯಸ್ಸಿನ ಅಂತರವನ್ನೂ ಮೀರಿದ ಬಾಂಧವ್ಯವೊಂದನ್ನು ಈ ಇಬ್ಬರ ಮಧ್ಯೆ ಹುಟ್ಟುಹಾಕೀತೆಂದು ನಾವಂದುಕೊಂಡಿರಲಿಲ್ಲ.

ಅದೊಂದು ದಿನ ಎರಡು ಫ್ಯಾಮಿಲಿ ಮಂದಿ ನಾವು ಇಬ್ಬರು ಪುಟ್‌ ಪುಟಾಣಿ ಮಕ್ಕಳನ್ನು ಕಟ್ಟಿಕೊಂಡು ಚಾರಣಕ್ಕೆ ಹೊರಟಿದ್ದೆವು. ನಮ್ಮ ಪುಟಾಣಿಗೆ ನಾಲ್ಕುವರೆ, ಅವರ ಮಗಳಿಗೆ ಏಳುವರೆ. ʻಏಳಾದರೂ ಓಕೆ, ನಾಲ್ಕೂವರೆ ವರ್ಷದ್ದು ಇನ್ನೂ ಮಗು ಕಣ್ರೀ! ನಾವಿನ್ನೂ ಇಷ್ಟು ಪುಟ್ಟ ಮಗುವನ್ನೆಲ್ಲ ಚಾರಣಕ್ಕೆ ಕರೆದೊಯ್ದಿಲ್ಲವಲ್ಲ, ಏನು ಮಾಡಲಿ?ʼ ಎನ್ನುತ್ತಾ ಆರಂಭದಲ್ಲಿ ಅವರು ಹಿಂದೇಟು ಹಾಕಿದ್ದರು.

ʻಈ ಹುಡುಗನಿಗೆ ಹೀಗೆ ನಮ್ಮ ಜೊತೆ ತಿರುಗಾಡಿ ಅಭ್ಯಾಸ ಆಗಿದೆ. ಚಳಿಯ ಬಗ್ಗೆ ಚಿಂತಿಲ್ಲ. ನಡೆಯುವುದು ಹೊಸತಲ್ಲ. ಹಿಮಾಲಯವೂ ಪರಿಚಿತವೇ. ಮೂರನೇ ವಯಸ್ಸಿಂದಲೇ ಚಾರಣ ಶುರು ಮಾಡಿದ್ದಾನೆ. ಐದಾರು ಒಂದೊಂದು ದಿನದ ಆರೇಳು ಕಿಮೀ ಚಾರಣಗಳನ್ನೆಲ್ಲ ನಮ್ಮ ಜೊತೆ ಮಾಡಿದ್ದಾನೆ. ಮಧ್ಯೆ ಮಧ್ಯೆ ಸುಸ್ತಾದರೂ ಬಹಳ ಎಂಜಾಯ್‌ ಮಾಡ್ತಾನೆ. ಏನೂ ಕಿರಿಕಿರಿ ಇಲ್ಲ, ಅಲ್ಲಲ್ಲಿ ಬ್ರೇಕ್‌ ತೆಗೆದುಕೊಂಡು ಆರಾಮವಾಗಿ ಹೋದರೇನೂ ಸಮಸ್ಯೆಯಿಲ್ಲ. ಆದರೆ, ಯಾವ ಸೌಲಭ್ಯವೂ ಇಲ್ಲದ, ಜನರ ಸಂಪರ್ಕವೂ ಇಲ್ಲದ ಪರ್ವತಗಳಲ್ಲಿಐದು ದಿನ ಹೇಗೆ ಎಂಬ ಒಂದೇ ವಿಚಾರದ ಬಗ್ಗೆ ನಮಗೆ ಚಿಂತೆ ಅಷ್ಟೇ.

ಅದಕ್ಕಾಗಿಯೇ ಅಗತ್ಯ ಬಿದ್ದರೆ ಇರಲಿ ಅಂತ ಮಕ್ಕಳಿಬ್ಬರಿಗೂ ಒಬ್ಬರಂತೆ ಸಹಾಯಕರಿರಲಿ. ನಡೆಯುವುದು ಕಷ್ಟವಾದಲ್ಲಿ ಸಹಾಯಕ್ಕೆ ಬೇಕಾಗಬಹುದುʼ ಎಂದಿದ್ದೆವು. ನಮ್ಮ ಈ ಮಾತು ಅವರಿಗೂ ಸ್ವಲ್ಪ ಧೈರ್ಯ ಕೊಟ್ಟಿತ್ತು. ನಿಧಾನಕ್ಕೇ ಹೋದರಾಯಿತು, ಐದು ದಿನದಲ್ಲಿ ಮುಗಿಸಲಾಗದಿದ್ದರೆ ಒಂದು ಹೆಚ್ಚುವರಿ ದಿನ ತೆಗೆದುಕೊಂಡರಾಯಿತು. ಚಿಂತೆ ಬೇಡ, ಬನ್ನಿ ಎಂದು ನಮ್ಮಷ್ಟೇ ಉತ್ಸಾಹದಿಂದ ರೆಡಿಯಾದರು.

ಅಂದು ಸತತ ೧೮ ಗಂಟೆಗಳ ಡ್ರೈವ್‌ ಮಾಡಿ, ಏರಿಳಿತದ ಮಾರ್ಗದಲ್ಲೆಲ್ಲಾ ಹತ್ತಿಳಿದು ಹಿಮಾಚಲದ ಮೂಲೆಯಲ್ಲಿದ್ದ ಅವರ ಹಳ್ಳಿ ತಲುಪಿದಾಗ ರಾತ್ರಿ ಹತ್ತು ದಾಟಿ ಸುಸ್ತಾಗಿತ್ತು. ಮಾರನೇ ದಿನವೇ ಚಾರಣ ಸಾಧ್ಯವಾ? ಅದೂ ಈ ಮಕ್ಕಳನ್ನು ಕಟ್ಟಿಕೊಂಡು ಎಂದು ನಮಗೆ ಚಿಂತೆ ಶುರುವಾಗಿದ್ದು ಸುಳ್ಳಲ್ಲ. ಆಗ ಬಂದಿದ್ದು ಈ ರೋಹಿತ್ ನೇಗಿ ಮತ್ತು ರಜನೀಶ್‌ ನೇಗಿ.‌ ʻಈ ಇಬ್ಬರು ಕಾಲೇಜು ಹುಡುಗ್ರು ನನ್ನ ಸಂಬಂಧಿಗಳು. ಚಾರಣದ ಐದೂ ದಿನ ನಿಮ್ಮ ಜೊತೆಗಿರುತ್ತಾರೆʼ ಎಂದರು.  

ಈ ಕಾಲೇಜು ಹುಡುಗ್ರಿಗೆ ಈ ಪುಟಾಣಿಗಳನ್ನು ಸಂಭಾಳಿಸಲು ಬಂದೀತಾ ಎಂದು ನಾನು ಹಾಗೂ ಪ್ರಿಯ ಮುಖಮುಖ ನೋಡಿಕೊಂಡಿದ್ದೆವು. ಇದೇನೂ ಒಂದೆರಡು ಕಿಮೀ ನಡಿಗೆಯ ತಮಾಷೆಯಲ್ಲ. ಒಂದು ದಿನದ ಮಾತೂ ಅಲ್ಲ. ಐದು ದಿನ ಮಕ್ಕಳನ್ನು ಕಟ್ಟಿಕೊಂಡು ೪೦-೪೫ ಕಿಮೀ ನಡೆಯಬೇಕು. ನಡೆದು ಸುಸ್ತಾದರೆ ಅವರ ಹೆಗಲ ಮೇಲೆ ಕೂರಲು ಈ ನನ್ನ ಮಗ ಒಪ್ಪಬಹುದಾ? ಹಠ ಹಿಡಿದು ನಮ್ಮ ಹೆಗಲೇರಿದರೆ ಮಾಡೋದೇನು? ನಾಲ್ಕು ದಾಟಿದ ಇವನನ್ನು ಹೊತ್ತು ಆ ಬೆಟ್ಟದಲ್ಲಿ ಮೈಲುಗಟ್ಟಲೆ  ನಡೆಯೋದಂತೂ ನಮಗೆ ಕಷ್ಟವೇ. ಅತ್ತ ಕಡೆ ಎತ್ತಿ ತಿರುಗಲೂ ಆಗದ, ಇತ್ತ ಪೂರ್ತಿಯಾಗಿ ಮೈಲುಗಟ್ಟಲೆ ನಡೆಯಲು ಬಿಡಲೂ ಆಗದಂತಹ ವಯಸ್ಸದು.

ಪುಣ್ಯಕ್ಕೆ ಆಗಿದ್ದೆಲ್ಲ ಬೇರೆಯೇ. ರೋಹಿತ್‌ ಮತ್ತು ಈ ಹುಡುಗನ ನಡುವೆ ಸೇತುವೆಯಾದದ್ದು ಅರ್ಜಿತ್‌ ಸಿಂಗನ ಹಿಂದಿ ಹಾಡುಗಳು. ಚೆಂದಕ್ಕೆ ಹಾಡು ಗುನುಗುತ್ತಿದ್ದ ಅವನ ರಾಗಕ್ಕೆ ಈ ಪುಟಾಣಿ ಮಾರುಹೋದ. ಅರ್ಜಿತ್‌ ಸಿಂಗನ ದೊಡ್ಡ ಫ್ಯಾನ್‌ ಆಗಿದ್ದ ಮಗರಾಯನಿಗೆ ಆತ ಅವನ ಫೇವರಿಟ್‌ ಹಾಡು ಹಾಡಿದ್ದೇ ಸಾಕಿತ್ತು. ಅವನ ಕೈ ಹಿಡಿದುಕೊಂಡು ನಡೆಯತೊಡಗಿದ. ನಡೆನಡೆದು ಸುಸ್ತಾದಾಗ ಅವನ ಹೆಗಲೇರಿದ. ತೊರೆ ದಾಟುವಾಗ, ಎತ್ತರೆತ್ತರದ ಕಲ್ಲು, ಕಡಿದಾದ ಜಾಗಗಳಲ್ಲಿ ಪುಟಾಣಿ ಕಾಲುಗಳನ್ನು ಎತ್ತಿ ಇಡಲಾಗದಲ್ಲಿ ಸಲೀಸಾಗಿ ಅವನ ಹೆಗಲೇರಿಬಿಡುತ್ತಿದ್ದ. ಮತ್ತೆ ಇಳಿದು ನಡಿಗೆ. ನಾವು ಜೊತೆಗೆ ಇದ್ದೇವೆಂದೇ ಅವನಿಗೆ ಮರೆತು ಹೋದಂತಿತ್ತು.

ಅದ್ಯಾವುದೋ ಮರದ ತೊಗಟೆ, ಇನ್ಯಾವುದೋ ಹೂವು, ಆ ಹೂವಿನ ಗಂಧ, ಧೂಪದ ಹೊಗೆಗೆ ಬಳಸುವ ಪರ್ವತದ ಆ ಗಿಡ ಹೀಗೇ ಏನೇನೋ ತೋರಿಸುತ್ತಾ ಹಾಡು ಹಾಡುತ್ತಾ, ಪಹಾಡಿ ಕಲಿಯುತ್ತಾ, ಆ ಬೆಟ್ಟದ ಕಣಿವೆಗಳಲ್ಲಿ ಮೇಯುವ ದಂಡು ದಂಡು ಕುರಿಗಳ ಹಿಂದೆ ನಡೆಯುತ್ತಾ, ಅದರ ಮರಿಯನ್ನು ಕೈಲಿ ಹಿಡಿದು ಮುದ್ದಾಡುತ್ತಾ, ದಾರಿ ಮಧ್ಯೆಯ ನಿಲುಗಡೆಗಳಲ್ಲಿ ಸಿಕ್ಕ ಇದ್ದಿಲ ತುಂಡುಗಳಿಂದ ಬಂಡೆಗಳಲ್ಲಿ ಚಿತ್ರ ಬರೆಯುತ್ತಾ ಮಕ್ಕಳಿಬ್ಬರೂ ಕಳೆದುಹೋದರು. ಇದಕ್ಕಿಂತ ಹೆಚ್ಚಿಗೆ ನಮಗೇನೂ ಬೇಕಿರಲಿಲ್ಲ ಕೂಡಾ. ಅಲ್ಲಿಲ್ಲಿ ಕೆಲವೆಡೆ ಹೊರತುಪಡಿಸಿದರೆ, ಪುಟಾಣಿಗಳಿಬ್ಬರೂ ಮೈಲಿಗಟ್ಟಲೆ ನಡೆದುಬಿಟ್ಟಿದ್ದರು. ಇದನ್ನು ನೋಡಿಯೇ ನಮಗೆ ಹೊಟ್ಟೆ ತುಂಬಿತ್ತು.

ಮೂರನೇ ದಿನದ್ದು ಏರುಹಾದಿ ಒಂದು ಚಾಲೆಂಜಾದರೆ, ಅದನ್ನು ಅದೇ ದಿನ ಇಳಿದು ಮತ್ತೆ ನಮ್ಮ ಟೆಂಟಿಗೆ ಮರಳಲೇ ಬೇಕಾದ ಇನ್ನೊಂದು ಟಾಸ್ಕು. ಮೇಲೆ ಏರಿಯೇನೋ ಆಯಿತು. ಆದರೆ ಅಷ್ಟರವರೆಗೆ ಬಿಸಿಲಿದ್ದ ಆಗಸ ಹಠಾತ್ತನೆ ಕಪ್ಪಾಗತೊಡಗಿತ್ತು. ಒಂದರ್ಧ ಗಂಟೆಯಲ್ಲಿ ಎಲ್ಲವೂ ಬದಲಾಗಿ ಧೋ ಎಂದು ಹಿಮ ಬೀಳಲಾರಂಭಿಸಿತು. ಪರಿಸ್ಥಿತಿಯ ಸೂಕ್ಷ್ಮ ಅರಿತ ಈ ಇಬ್ಬರೂ, ಮಕ್ಕಳಿಬ್ಬರನ್ನು ಬೆನ್ನಿಗೆ ನೇತಾಕಿಕೊಂಡು ಕೂಡಲೇ ಇಳಿಯಲು ಹೊರಟಿದ್ದು ಈ ರೋಹಿತನ ಸಾಹಸಗಳಲ್ಲೊಂದು. ನೀವು ನಿಧಾನಕ್ಕೆ ಬನ್ನಿ, ಮಕ್ಕಳ ಜವಾಬ್ದಾರಿ ನಮ್ದು ಎಂದು ನಮ್ಮ ಕಣ್ಣ ಸೀಮೆಯಿಂದ ಮರೆಯಾದರು.

ನಾವು ಆಗಷ್ಟೇ ಬಿದ್ದ ಹಿಮ ಕರಗಿ ಮಣ್ಣಾಗುವುದನ್ನು ನೋಡುತ್ತಾ, ನೆನೆಯುತ್ತಾ ಆ ಕಡಿದಾದ ಬೆಟ್ಟದಿಂದ ನಿಧಾನವಾಗಿ ಇಳಿದು ನಮ್ಮ ಟೆಂಟಿಗೆ ತಲುಪಿದಾಗ, ಮಕ್ಕಳು ಆಗಲೇ ತಲುಪಿ ತಮ್ಮ ರೇನ್ ಕೋಟ್‌ ಬಿಚ್ಚಿಟ್ಟು ಆಡಲು ಶುರುಮಾಡಿ ಗಂಟೆಯೊಂದು ಕಳೆದಿತ್ತು.  ಅವರಿಬ್ಬರೂ ಇತ್ತ ಮಕ್ಕಳನ್ನು ಟೆಂಟಿನೊಳಗೆ ಬಿಟ್ಟು ತಾವು ಸಂಜೆಯ ಚಹಾ ಜೊತೆಗೆ ಬಿಸಿ ಬಿಸಿ ಬಜ್ಜಿ ತಯಾರು ಮಾಡಲು ಸೌದೆ ಜೋಡಿಸಿ ಬೆಂಕಿ ಹಚ್ಚಿ ಕೂತಿದ್ದರು.

ಈ ಚುರುಕು ಪಹಾಡಿ ಹುಡುಗ ರೋಹಿತ್ ಮಾಡಿದ ಮೋಡಿಯೇ ಅಂಥಾದ್ದು. ರಾಮ ಮಾಯಾಜಿಂಕೆಯ ಹಿಂದೆ ಬಿದ್ದಂತೆ, ಆ ಎತ್ತರರೆತ್ತರದ ಬೆಟ್ಟಗಳಲ್ಲಿ ಅದೊಂದು ಪರ್ವತದ ಆಡಿನ ಹಿಂದೆ ಗಂಟೆಗಟ್ಟಲೆ ಅಲೆದಿದ್ದ. ʻಇದೊಂದು ಆಡನ್ನು ಹಿಡಿದು ಸಾಕಬೇಕು ಅಂತಾಸೆ, ಇರಿ ಒಂದೇ ನಿಮಿಷʼ ಎನ್ನುತ್ತಾ ಅಕ್ಷರಶಃ ಒಂದೇ ನಿಮಿಷದಲ್ಲಿ ನಾವಿದ್ದ ಅಷ್ಟೆತ್ತರದ ಬೆಟ್ಟವನ್ನು ಸರಸರನೆ ಇಳಿದು, ಇಳಿದಷ್ಟೇ ವೇಗದಲ್ಲಿ ಪಕ್ಕದ ಬೆಟ್ಟವೇರಿದ್ದ. ಮಿಂಚಿನ ವೇಗದಲ್ಲಿ ಓಡೋ ಅದನ್ನು ಹಿಡಿವ ಸಾಹಸವುಂಟೇ ಎಂದು ನಾವು ಮಾತನಾಡಿಕೊಂಡಾಗ, ನಮ್ಮನ್ನೇ ಮೂಕರನ್ನಾಗಿಸಿ, ಇನ್ನೇನು ಕೈಗೆ ಸಿಕ್ಕೇ ಬಿಟ್ಟಿತು ಎಂಬಷ್ಟು ಹತ್ತಿರದಿಂದ ಮಿಸ್ಸಾದರೂ ಅದೂ ಕೂಡಾ ಆತನ ಸಾಮರ್ಥ್ಯವೇ. ಈಗ ಆ ಬೆಟ್ಟದ ತುದಿಯಲ್ಲಿದ್ದನಲ್ಲ, ಎಂದು ನಮ್ಮ ಕಣ್ಣು ಹುಡುಕುವಷ್ಟರಲ್ಲಿ ಸಿನಿಮೀಯ ಮಾದರಿಯಲ್ಲಿ ಮತ್ತೆ ಬಂದು ನಮ್ಮೆದುರು ಪ್ರತ್ಯಕ್ಷನಾಗಿದ್ದ. ಇವನ ಓಟದ ಕೋಲ್ಮಿಂಚಿಗೆ ನಮಗೆ ಕರೆಂಟ್‌ ಹೊಡೆದಂತಾಗಿತ್ತು. ಮಕ್ಕಳ ಖುಷಿಗಿಷ್ಟು ಸಾಕಿತ್ತು.



ನಂಬಿಕೆಯ ಪ್ರಶ್ನೆ:

ಆ ದಿನ ಆಕೆ ಕೂತು ಈ ರೋಹಿತನ ಕಥೆ ಕೇಳುತ್ತಿದ್ದಳು. ʻಅಲ್ವೇ, ಅದ್ಹೇಗೆ ನೀನವರನ್ನು ನಂಬಿದೆ? ಎರಡು ದಿನದ ಹಿಂದಷ್ಟೆ ಪರಿಚಯವಾದ ಅವರ ಕೈಲಿ ಮಕ್ಕಳನ್ನು ಅದೂ ಅಂಥಾ ಪರಿಸ್ಥಿತಿಯಲ್ಲಿ ಹೋಗಲು ಬಿಟ್ಟೆಯಾ? ನಿನ್ನ ಕಣ್ಣಂಚಿನಿಂದ ಕಾಣದಷ್ಟು ಅವರು ಮುಂದೆ ಹೋದಾಗ ನಿನಗೇನೂ ಅನಿಸಲಿಲ್ಲವಾ? ನನ್ನಿಂದ ಸಾಧ್ಯವಾಗುತ್ತಿರಲಿಲ್ಲ ಕಣೇ ಹಿಂಗೆʼ ಎಂದಳು.

ʻಪರಿಸ್ಥಿತಿ ನಂಬುವ ಹಾಗೆ ಮಾಡುತ್ತೆ ಕಣೇ. ಅವರನ್ನು ನಂಬಲು ಆ ಒಂದೆರಡು ದಿನ ಧಾರಾಳವಾಗಿ ಸಾಕಿತ್ತು.  ಅನುಮಾನ ಯಾಕೆ?ʼ ಎಂದೆ.

ʻಆದರೂ…ʼ ಎಂದಳು.

ʻಹೂಂ, ಇಲ್ಲಿ ಕೂತು ಯೋಚಿಸಿದರೆ ನಿನಗೆ ಹಾಗನಿಸಬಹುದೇನೋ. ಆದರೆ ಹಿಮಾಲಯವೇ ಹಾಗೆ. ನಂಬಿಸಿಬಿಡುತ್ತದೆ.  ಆ ಎತ್ತರೆತ್ತರದ ಪರ್ವತಗಳು ಆ ಕ್ಷಣವನ್ನು ಬಿಟ್ಟು ಬೇರೆಲ್ಲವನ್ನೂ ಮರೆಸಿಬಿಡುವ ತಾಕತ್ತು ಪಡೆದಿವೆ ನೋಡು. ಹಿಮಚ್ಛಾದಿತ ಬೆಟ್ಟಗಳು ದಿವ್ಯವಾಗಿ ಹೊಳೆಯುವಾಗ, ಪ್ರಾಪಂಚಿಕ ವಿಚಾರಗಳೇ ಮರೆತುಹೋಗುತ್ತದೆ. ಸುತ್ತಲೂ ಎತ್ತರೆತ್ತರ ಹಿಮ ಬೆಟ್ಟಗಳು, ನಡುವೆ ಇಷ್ಟೇ ಪುಟ್ಟ ಚುಕ್ಕೆಯಂತಹ ನಾವು..! ಇಂಥ ಜಾಗದಲ್ಲಿ ಇಂಥದ್ದೊಂದು ಯೋಚನೆಯೇ ಬರಲಿಲ್ಲ ನೋಡು, ನಂಬಿಬಿಟ್ಟೆʼ ಎಂದೆ.

ʻನನ್ನಿಂದ ಸಾಧ್ಯವಿಲ್ಲವಪ್ಪ! ಪ್ರಪಂಚದಲ್ಲಿ ಮಕ್ಕಳ ಮೇಲೆ ಏನೇನು ನಡೆಯುತ್ತಿವೆಯೆಂದು ಸ್ವಲ್ಪ ಕಣ್ತೆರೆದು ನೋಡು!ʼ ಎಂದು ಕೈಚೆಲ್ಲಿದಳು.

ʻನೋಡು, ನಿನ್ನ ಹಾಗೆ ನನಗೆ ಅನುಮಾನ ಬರದೇ ಇರುವುದಿಲ್ಲ ಎನ್ನಲಾರೆ. ಅವತ್ತು ಗುರುಗ್ರಾಮದ ಶಾಲೆಯಲ್ಲಿ ಆ ಮಗುವೊಂದರ ಹತ್ಯೆಯಾದಾಗ ಎಲ್ಲರಂತೆಯೇ ನಾನೂ ಗಾಬರಿಗೊಂಡವಳೇ. ದಿನನಿತ್ಯ ಪತ್ರಿಕೆಗಳಲ್ಲಿ ಇಂಥ ಸುದ್ದಿಗಳನ್ನು ನೋಡುವಾಗ ಹೀಗನಿಸೋದು ಸಹಜವೇ. ಒಂದೇ ಒಂದು ದಿನ ಶಾಲೆಗೆ ಹೋಗದಿದ್ದಾಗ ಆ ಸೆಕ್ಯುರಿಟಿ ಅಂಕಲ್ಲು ʻಯಾಕೆ ನಿನ್ನೆ ಕಾಣಲಿಲ್ಲ?ʼ ಎಂದು ಕೇಳಿದಾಗ, ಈತನದ್ದು ಕೊಂಚ ಜಾಸ್ತಿಯಾಯ್ತಾ ಹೇಗೆ? ಎಂಬ ಸಣ್ಣ ಅನುಮಾನ ನುಸುಳಿದ್ದೂ ಇದೆ.

ಆದರೆ ಈ ಎಲ್ಲ ನಮ್ಮ ಭಯಗಳ ಪರಿಣಾಮವನ್ನು ಈ ಪುಟಾಣಿ ಮಕ್ಕಳ ಮೇಲೆ ಹೇರೋದು ಯಾವ ನ್ಯಾಯ? ಅವರನ್ನು ಇಷ್ಟೆಲ್ಲ ಕನ್‌ಫ್ಯೂಸ್‌ ಮಾಡಿಸಬೇಕಾ? ಈಗ ನೋಡು, ಈ ನನ್ನ ಮಗ ಪ್ರತಿ ಪರ್ವತ ಹತ್ತುವಾಗಲೂ ಒಂದಿಷ್ಟು ಜನ ಅವನಿಗೆ ಗೆಳೆಯರಾಗುತ್ತಾರೆ. ಹಾದಿಯಲ್ಲಿ ಸಿಕ್ಕವರೆಲ್ಲರೂ ʻಛೋಟಾ ಟ್ರೆಕ್ಕರ್‌ʼ ಎಂದು ಬೆನ್ನು ತಟ್ಟಿ ಚಾಕ್ಲೇಟ್‌ ಕೊಟ್ಟರೆ ಅವ ಖುಷಿಯಾಗ್ತಾನೆ. ಅವರ ʻಯು ಆರ್‌ ಅಮೇಜಿಂಗ್‌ʼ ಮಾತೇ ಸಾಕು ಅವನಿಗೆ ಚಾರಣ ಮುಗಿಸಲು. ಹೀಗಿದ್ದಾಗ ಅದು ಮಾಡಬೇಡ, ಇದು ಮಾಡಬೇಡ, ಚಾಕ್ಲೇಟ್‌ ತೆಗೋಬೇಡ, ಅಪರಿಚಿತರೊಂದಿಗೆ ಬೆರೆಯಬೇಡ ಎಂದೆಲ್ಲ ಎಲ್ಲವನ್ನೂ ಹಳದಿ ಕನ್ನಡಕದಲ್ಲೇ ನೋಡೋದು ಸರಿ ಅಂತೀಯಾ? ಜೊತೆಗೆ ನಾವೂ ಇರ್ತೀವಿ ತಾನೇ? ಈಗ್ಲೇ ತುಂಬಾ ಕನ್‌ಫ್ಯೂಸ್‌ ಮಾಡಿಸ್ಬೇಕಾ? ಬೆಳೀತಾ ಬೆಳೀತಾ ಕಲ್ತ್ಕೋತಾರೆ ಮಕ್ಳು ಅನಿಸಲ್ವಾ? ಕೆಲವು ಘಟನೆಗಳು ನನ್ನನ್ನು ಕಂಗೆಡಿಸಿದರೂ ಸಹ, ಪ್ರತಿ ತಿರುಗಾಟದಲ್ಲೂ ಹೀಗೇನಾದ್ರೂ ಒಳ್ಳೆಯದೇ ಆಗಿ ಮಾನವ ಸಂಬಂಧಗಳ ಮೇಲೆ ನಂಬಿಕೆ ಇನ್ನೂ ಗಟ್ಟಿ ಮಾಡ್ತಿವೆ. ಅದಕ್ಕೇ ತಿರುಗಾಡ್ತೇನೆ ಕಣೇʼ ಎಂದೆ. ಅವಳು ಸಣ್ಣಗೆ ನಕ್ಕಳು.

ಇರುವುದೆಲ್ಲವ ಬಿಟ್ಟು….!:

ಅಂದಹಾಗೆ, ರೋಹಿತ್‌ ಮತ್ತೆ ಮೊನ್ನೆ ಕಾಲ್‌ ಮಾಡಿದ್ದ. ʻಈ ಕೊರೋನಾ ಗಲಾಟೆ ಲೆಕ್ಕಾಚಾರವನ್ನೆಲ್ಲ ತಲೆಕೆಳಗಾಗಿಸಿದೆʼ ಎಂದ. ಸರಿ ಮುಂದೇನು ಅಂದೆ. ʻಪದವಿ ಮುಗೀತು. ಅದೊಂದು ಕೋರ್ಸು ಮಾಡಬೇಕಿತ್ತು. ಈಗ ಎಲ್ಲ ತಲೆಕೆಳಗೆ. ಇನ್ನೊಂದು ವರ್ಷ ಹಿಡಿಯತ್ತೆ ಸರಿಯಾಗಲು. ಎಲ್ಲ ಸರಿಯಾದರೆ ಬೆಂಗಳೂರುʼ ಎಂದ.

ʻಓಹ್‌ ನಮ್ಮೂರು! ಎನ್‌ ವಿಶೇಷ? ಅಲ್ಲೇನ್‌ ಕೆಲಸʼ ಅಂದೆ. ಕೆಲಸ ಹುಡುಕಿಕೋಬೇಕು, ಫ್ರೆಂಡು ಅಲ್ಲೇ ಹೋಗಿದಾನೆ. ನಮ್ಮಂಥ ಪಹಾಡಿಗಳಿಗೆ ಸೆಟ್ಟಾಗುವ ವೆದರ್ರೂ ಇದೆಯಂತೆ, ಹೆಚ್ಚು ಸಮಸ್ಯೆಯಿಲ್ಲ ಬಾ ಅಂದಿದ್ದಾನೆ. ಕೆಲಸ ಏನಂತ ಹೋದ ಮೇಲೆ ನೋಡಿಕೋಬೇಕುʼ ಎಂದ.

ʻನಾವೆಲ್ಲ ಎಲ್ಲ ಬಿಟ್ಟು ನಿಮ್ಮೂರಿಗೆ ಬಂದ್ರೆ, ನೀವು ನಮ್ಮೂರಿಗೆ ಹೋಗ್ತೀರಿ. ಎಂಥಾ ವಿಪರ್ಯಾಸ ನೋಡಿʼ ಎಂದೆ.

ʻಹುಂ, ಏನ್‌ ಮಾಡೋದು, ಕೆಲಸ ಮಾಡಬೇಕಲ್ಲ! ಹೊಟ್ಟೆ ಪಾಡುʼ ಎಂದ.

ʻಅದ್ಸರಿ, ನಿಮ್ಮೂರು ಜನರೆಲ್ಲ ಹೀಗೆ ಊರು ಬಿಟ್ರೆ ಊರ ಗತಿ ಏನಪ್ಪಾ?ʼ ಎಂದೆ.

ʻಎಲ್ರೂ ಬಿಟ್ಟಿಲ್ಲ. ಯಾರೂ ಬಿಡೋ ಧೈರ್ಯವೂ ಮಾಡಿಲ್ಲ. ನಾವೇ ಫಸ್ಟುʼ ಎಂದ.

ನನ್ನ ಬಳಿ ಮಾತಿರಲಿಲ್ಲ.

‍ಲೇಖಕರು avadhi

September 27, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: