‘ಕಲಾಕಂದ್’ ಎಂಬ ಪ್ರೇಮಿ

ಹೆಸರೇ ಅನಾಮಿಕಾ ಹಾಗಾಗಿಯೇ ಈಕೆ ಅನಾಮಿಕೆ .

ಹೆಸರು ಹೇಳಲು ಒಲ್ಲದ ಈಕೆ ಭೋಜನಪ್ರಿಯೆ ಅಂತ ಬಿಡಿಸಿ ಹೇಳಬೇಕಿಲ್ಲವಲ್ಲ. ಅದು ಎಷ್ಟು ಖರೆ ಎಂದು ನಮಗೂ ಗೊತ್ತಿಲ್ಲ. ಆದರೆ ಇಷ್ಟು ಮಾತ್ರ ನಿಜ. ಭೋಜನಕ್ಕೆ ನಮ್ಮನ್ನು ಬಡಿದೆಬ್ಬಿಸುವಂತೆ ಈಕೆ ಬರೆಯುತ್ತಾಳೆ.

ಅಷ್ಟೇ ಆಗಿದ್ದರೆ ಇದನ್ನು ಒಂದು ರಸ ರುಚಿಕಾಲಂ ಹೆಸರಿನಡಿ ಸೇರಿಸಿ ನಾವು ಕೈ ತೊಳೆದುಕೊಳ್ಳುತ್ತಿದ್ದೇವೇನೋ..!

ಆಕೆಗೆ ಒಳಗಣ್ಣಿದೆ. ಒಂದು ಆಹಾರ ಹೇಗೆ ಒಂದು ಸಂಸ್ಕೃತಿಯ ಭಾಗವಾಗಿ ಬರುತ್ತದೆ ಎನ್ನುವುದರ ಬಗ್ಗೆ ಹಾಗೂ ಹೇಗೆ ಆಹಾರ ಒಂದು ಸಂಸ್ಕೃತಿಯನ್ನು ರೂಪಿಸುತ್ತದೆ ಎನ್ನುವುದರ ಬಗ್ಗೆಯೂ

ಹಾಗಾಗಿಯೇ ಇದು ರಸದೂಟವೂ ಹೌದು ಸಮಾಜ ಶಾಸ್ತ್ರದ ಪಾಠವೂ ಹೌದು.

ನಮ್ಮ ದೊಡ್ಡಮ್ಮ ಬೆಳಗಾವಿಗೆ ಇದ್ರು. ಅವರು ಮನೀಗೆ ಬರೂಮುಂದೆಲ್ಲ ಕುಂದಾ ತರೋರು. ಹಂಗಾಗಿ ನಮ್ಮಣ್ಣನ ಮಗ, ದೊಡ್ಡಮ್ಮಗ ಕುಂದಾ ದೊಡ್ಡಮ್ಮ ಅಂತ ಹೆಸರಿಟ್ಟಿದ್ದ. ಬೆಳಗಾವಿಗೆ ಇರೂತನಾನೂ ಈ ಹೆಸರಿಗೆ ನ್ಯಾಯ ಸಲ್ಲಿಸಿದರು ನಮ್ಮ ದೊಡ್ಡಮ್ಮ. ಕುಂದಾ ಯಾವಾಗಲೂ ಕಡುಕಂದು ಬಣ್ಣದ್ದಿರ್ತದ. ಪೇಢೆನೆ ಬಿಸಿ ಬಿಸಿ ಇದ್ದಾಗ ಆಕಾರ ಕೊಡದೇ ಹಂಗೇ ಕಡಾಯಿಯಿಂದ ಇಳಿಸಿಬಿಡ್ತಾ ಅನ್ಕೊಂಡಿದ್ದೆ.

ಮೂವತ್ತು ವರ್ಷಗಳ ಹಿಂದ ಶರ್ಮಾ ಸ್ವೀಟ್ಸ್‌ ಬೀದರ್‌ಕ ಬಂದಾಗ ಕುಂದಾದು ಅಣ್ತಮ್ಮ, ಅಕ್ತಂಗಿ ಇದ್ದಂತಾದು ಟ್ರೇಯೊಳಗಿರ್ತಿತ್ತು. ಸ್ವಲ್ಪ ತಿಳಿ ಇರ್ತಿತ್ತು. ಕುಂದಾದ್ಹಂಗ ಕಂದು ಬಣ್ಣ ಟ್ರೇ ಕೊನಿಗಿದ್ರ, ಒಳಗ ಬಿಳಿ ಬಣ್ಣನ ಇರ್ತಿತ್ತು. ಆಗಸ್ಟ್‌ ತಿಂಗಳದಾಗಂತೂ ತ್ರಿವರ್ಣದ ಬಣ್ಣದೊಳಗ ಈ ಟ್ರೇಗಳು ಕಣ್ಸೆಳಿತಿದ್ವು.

ಯಾರೇ ಬಂದ್ರೂ ಇದನ್ನ ಪ್ಲೇಟ್‌ನಾಗ ಹಾಕಸ್ಕೊಂಡು ಚಪ್ಪರಸ್ತಿದ್ರು. ನಾ ಅಂತ್ರೂ ಅಲ್ಲಿ ಹೋದ್ರ ಬರೇ ಪಾನ್‌ ತಿಂದು ಬರ್ತಿದ್ದೆ. ಅದು ಇನ್ನೊಮ್ಮೆ ಹೇಳ್ತೀನಿ.. ಅದರ ಕಥಿನ.. ಈಗ ಈ ಕುಂದಾದ ಅಣ್ತಮ್ಮ, ಅಕ್ತಂಗಿ ಕಲಾಕಂದ್‌ ಬಗ್ಗೆ ಮಾತಾಡೂನು.

ಕಲಾಖಂದ್‌ ಒಂಥರಾ ಪ್ರೀತಿಸುವವರನ್ನು ಸೂಚಿಸುವ ಖಾದ್ಯ ಅನಸ್ತದ.. ಅದ್ಹೆಂಗಂದ್ರ.. ಮೊದಲು ಪರಿಶ್ರುಭ್ರ ಹಾಲು.. ಸ್ನೇಹ ಇದ್ದಂಗ.. ಕಾವು ಹೆಚ್ಚಿದಂಗ ಭಾವಾತಿರೇಕ ಹೆಚ್ಗೊಂತ ಹೋಗ್ತದ. ಈ ಬಿಸುಪು ಬಿಟ್ಟಿರಲಾರೆ ಅನ್ನೂಹಂಗ ಒಗ್ಗೂಡಿ ಕಾಯ್ತದ. ಆಮೇಲೆ ಶಾಖ ಕುದಿಬಿಂದು ತಲುಪಿದಾಗ ಹಾಲ್ನೊರೆಯುಕ್ಕಿಸುತ್ತ ಕಾಯಲಾರಂಭಿಸುತ್ತದೆ. ಅದಾಗಲೇ ಸ್ನೇಹವೆಂಬುದು ಪ್ರೀತಿಯ ಬಣ್ಣ ಪಡೆದಿರುತ್ತದೆ. ಇದಕ್ಕೆ ಅಗತ್ಯವಿರುವಷ್ಟು ಸಕ್ಕರೆ ಸುರಿಯುವುದು ಇದೇ ಕಾಲದಲ್ಲಿ. ಆಮೇಲೆ ಹಾಲು ತನ್ನ ಹಟ ಬಿಟ್ಟು, ಸಕ್ಕರೆ ತನ್ನ ಸವಿ ಬಿಟ್ಟು ಎರಡೂ ಒಂದಾಗುತ್ತವೆ. 

ಹಾಗೆ ಒಂದಾದಾಗ, ಪ್ರೀತಿಯ ಕಾವು, ಕಾಮಕ್ಕೆ ತಿರುಗಿದಂತೆ ಹಾಲು ಸಕ್ಕರೆ ಒಗ್ಗೂಡಿ, ಬಾಂಧವ್ಯ ಗಟ್ಟಿಗೊಳಿಸಿದಂತೆ ಗಟ್ಟಿಯಾಗುತ್ತ ಹೋಗುತ್ತದೆ. ಇನ್ನು ಕಾವಿನ ಹದ ಒಂದು ಹಂತಕ್ಕೆ ತಲುಪಿದಾಗ ಗಟ್ಟಿಯಾದ ಹಾಲಿನ ನಡುವೆ ಕಡುಕಂದು, ತಿಳಿಕಂದು, ತಿಳಿ ಹಳದಿ, ಮುತ್ತಿನ ಬಣ್ಣಕ್ಕೆ ಬಂದು ಮತ್ತೆ ಶುಭ್ರ ಬಿಳಿಯ ಬಣ್ಣ ತುದಿಗೆ ಬಂದಿರುತ್ತದೆ. 

ಸ್ನೇಹದಿಂದಲೇ ಆರಂಭವಾದರೂ, ಬಾಂಧವ್ಯವೊಂದು ಗಟ್ಟಿಯಾದಾಗ ಅಲ್ಲಿ ಹೊಸ ಜೀವಾಂಕುರವಾಗುತ್ತದೆ. ಆ ಜೀವಾಂಕುರದ ಸಂಭ್ರಮವೇ ಬೇರೆ. ಜೀವವೊಂದು ಒಡಲಾಳದಲ್ಲಿ ಮೊಳಕೆಯೊಡೆದ ಮೊದಮೊದಲ ದಿನಗಳಲ್ಲಿ ಏನೂ ತಿನ್ನದ ಪರಿಸ್ಥಿತಿ… ಆ ದಿನಗಳಲ್ಲಿ.. ಅದೇ ಆ ಬಯಕೆಯ ಮೊದಲ ದಿನಗಳಲ್ಲಿ… ಖುಷಿಯ ಸುದ್ದಿ ಕೇಳಿದಾಗ ಇದೇ ಖಲಾಕಂದ್‌ ತಂದು ಕೊಡ್ತಾರೆ.

ಅದಕ್ಕ ಮೂಲ ಕಾರಣ, ಇದು ಕರಿಯೂದಿಲ್ಲ, ಎಣ್ಣಿ ತಿನಿಸಲ್ಲ. ಬರೀಹಾಲು. ಅಗತ್ಯವಿರುವ ಕ್ಯಾಲ್ಸಿಯಂ ಸಿಗ್ತದಂತ. ಇನ್ನ ಅಂಜೂರಿ ಕಲಾಖಂದ್‌ ಸಹ ಮಾಡ್ತಾರ. ಅದನ್ನೂ ವಿಶೇಷವಾಗಿ ಗರ್ಭಿಣಿಯರಿಗೆ, ಬಾಣಂತಿಯರಿಗೆ ಕೊಡ್ತಾರ. ನಿಶ್ಯಕ್ತಿ ಕಾಡಬಾರದು ಅಂತ. ರಕ್ತಹೀನರಾಗಬಾರದು ಅಂತ…

ಹಿಂಗ ಕಲಾಕಂದ್‌ ರಾಜಸ್ತಾನ ಮೂಲದ ತಿನಿಸು ಅಂತ್ಹೇಳ್ತಾರ. ರಾಜಸ್ತಾನದ ಆಲ್ವಾರ್‌ ನಲ್ಲಿದ್ದ ಬಾಬಾ ಠಾಕೂರ್‌ ಸಾಬ್‌ ಮೊದಲಿಗೆ ಇದನ್ನು ಕಂಡು ಹಿಡದ್ರು ಅಂತ್ಹೇಳ್ತಾರ. ಅವರು ಹಾಲು ಕಾಯಿಸಿ, ಒಂದು ಎರಕದೊಳಗ ಹಾಕ್ತಿದ್ರು.

ತಳಕ್ಕ ಕಡುಕಂದು ಬಣ್ಣ ಬಂದ್ರ, ತುದಿಗೆ ಶುಭ್ರ ಹಾಲ್ಕೆನಿಯ ಬಣ್ಣನೆ ಉಳೀತಿತ್ತು. ಅವಾಗ ಜನರೆಲ್ಲ ಇವರೇನೋ ಕರಾಮತ್ತು ಮಾಡ್ತಾರ ಅಂತ ಸಂಶಯಗಣ್ಣಿನಿಂದ ನೋಡ್ತಿದ್ರು. ಆಗಾ ಠಾಕೂರ್‌ ಬಾಬಾ, ಒಲಿಯನ್ನೇ ಅಂಗಡಿಯಿಂದ ಬೀದಿಗೆ ತಂದಿಟ್ಟು ಮಾಡಿದ್ರು. ಈ ಕಂದ್‌, ಅಥವಾ ಕುಂದಾ ಹಿಂಗ ಬಣ್ಣ ಉಳಸ್ಕೊಳ್ಳೂದು ಹೆಂಗ ಅಂದಾಗ ಅದೇ ಕಲಾ.. ಇದು ಕಲಾಕಂದ್‌ ಅಂದ್ರಂತ.. ಹಿಂಗಂತ ಇತಿಹಾಸ ಹೇಳ್ತದ. 

ಈಗ ಅಜ್ಮೇರಿ ಕಲಾಕಂದ್‌, ಪಿಸ್ತಾ ಕಲಾಕಂದ್‌ ಹಿಂಗ ಒಣಹಣ್ಣಗಳನ್ನು ಬಳಸಿ ಮಾಡುವ ಕಲಾಕಂದ್‌ ಸೃಷ್ಟಿಯಾಗ್ತಾವ. ಬಣ್ಣನೂ ಅಷ್ಟೆ ಚಂದ. ರುಚೀನು. 

ಆದ್ರ ಕಲಾಕಂದ್‌ ಪಾಕಿಸ್ತಾನದೊಳಗೂ ಜನಪ್ರಿಯ. ನಮ್ಮ  ಹೈದರಾಬಾದ್‌ ಕರ್ನಾಟಕ ಅಲ್ಲಲ್ಲ ಕಲ್ಯಾಣ ಕರ್ನಾಟಕದಾಗ ನಿಜಾಮನ ಕಾಲದಿಂದಲೂ ಈ ತಿನಿಸಿತ್ತು. ಮೊದಲ ದಿನ ಬಿಸಿಬಿಸಿ ಕಲಾಕಂದ್ ತಿನ್ನೂದೆ ಸಂಭ್ರಮ. ಮರುದಿನ ಅಂತೂ ಇನ್ನಾ ರುಚಿಯಾಗಿರ್ತದ. ಮಾಡಿದ ದಿನ ಇಟ್ಟು ಮರುದಿನ ತಿನ್ನುವವರೇ ಹೆಚ್ಚು.

ಗರ್ಭಿಣಿಯಾಗಿದ್ದಾಗ ಭಾಳ ಕಲಾಕಂದ್‌ ತಿಂತಿದ್ರು, ಕೂಸು ಹುಟ್ಟಿದ ಕೂಡಲೆ, ಗಲ್ಲ ಜಿಗುಟಿದವರೆಲ್ಲ… ಆಹಹಾ… ಹಿಂಗ ಹಿಂಡಿದ್ರ ಹಾಲು ಹನೀತಾವ… ಅವರವ್ವ ಖೂಬ್‌ ಕಲಾಕಂದ್‌ ತಿಂದಂಗದ ಅಂತಾರ.

ಇಂಥ ಕಲಾಕಂದ್‌ ಹೆಂಗ ಮಾಡ್ತಾರ ಅಂತ ನೋಡಲೇಬೇಕು ಅನಿಸಿತ್ತು. ಹತ್ತವರ್ಷದ ಹಿಂದ ನಮ್ಮ ಶರ್ಮಾ ಅಂಕಲ್‌ ಭಟ್ಟಿಗೆ ಹೋಗಿದ್ದೆ. ಅಲ್ಲಿ ಭಟ್ಟಿಯೊಳಗ ತಂದೂರ್‌ನಂಥ ಒಲಿಗಳಿದ್ವು. ಕಂಚಿನ ಬಾಣಲಿಯೊಳಗ ಹಾಲು ಹಾಕಿದ್ರ 50 ನಿಮಿಷಗಳ ತನಾನೂ ಕೈ ಕಲುಕಿಕೊಂತ ಇರಬೇಕಾಗ್ತಿತ್ತು. ಒಮ್ಮೆ ಉಕ್ಕಿ ಬಂದ ಮೇಲೆ ತಳ ಹಿಡಿಯದ್ಹಂಗ ನೋಡಿಕೊಳ್ಳಲೇಬೇಕಾಗ್ತಿತ್ತು.

ಈಗ ಸ್ಟೀಮ್‌ ಒಲಿ ಹಾಕ್ಯಾರ. 9–10 ನಿಮಿಷದೊಳಗ ಹಾಲು ಕುದಿಕುದಿದು ಒಂದು ಹದಕ್ಕ ಬಂದೇ ಬಿಡ್ತಾವ. ಹತ್ತು ಲೀಟರ್‌ ಹಾಲು ಕಾಯಿಸಿದ್ರ 3.5 ಕೆ.ಜಿ. ಕಲಾಕಂದ್‌ ಆಗ್ತದ. ಹಿಂಗ ಕಾಯಿಸುಮುಂದ ಚೂರೆಚೂರು ಹದ ತಪ್ಪಿದ್ರೂ ತಳ ಹಿಡೀತದ. ಥೇಟ್‌ ನಮ್ಮ ಬಾಂಧವ್ಯಗಳಿದ್ದಂಗ.. ಚೂರೆಚೂರು ಕಾವು ಹೆಚ್ಚಾದ ಸನ್ನಿವೇಶದೊಳಗ ಹೆಜ್ಜಿ ಊರಿ ನಿಂತ್ವಿ ಅಂದ್ರ ಸಂಬಂಧ ಸುಟ್ಗೊಂತ ಹೋಗ್ತದ. ಆದರ ಹಾಲಿನಂಥ ಸ್ನೇಹ ಇದ್ದಾಗ, ಸುಡುವ ಜಾಗದೊಳಗ ನೆಲೆ ಊರಲೇಬಾರದು. ಕಾವಿಗೆ ಕಾಲು ತಾಕಿದ್ಹಂಗ ಆ ಕ್ಷಣದಿಂದ ಮುಂದ ಬರಬೇಕು. ಅವಾಗ ಬಾಂಧವ್ಯ ಗಟ್ಟಿಯಾಗ್ತದ.

ಹಂಗಂತ ಸರಿಯಾದ ಸಮಯಕ್ಕ ಬಾಣಲಿ ಕೆಳಗ ಇಳಸ್ಲಿಲ್ಲಂದ್ರ ಅದು ಮತ್ತ ಪೇಡೆ ಹದಕ್ಕ ಹೋಗ್ತದ. ಆದ್ರ ಅದೂ ಸರಿಯಾಗೂದಿಲ್ಲ. ಪ್ರೀತಿ ಮತ್ತು ಬಾಂಧವ್ಯಗಳೂ ಥೇಟ್‌ ಹಿಂಗೆನೆ. ಇಲ್ಲಿ ಹೋಗಲಿಬಿಡಲೆ ಅನ್ನುವ ಸ್ನೇಹ ಬಾಂಧವ್ಯ ಇದ್ದು, ಕಾವನ್ನೂ ಆನಂದಿಸುವಂತೆ ಕುದಿದರೆ ಕಲಾಕಂದ್‌ನ ಸವಿ ಮೂಡೆಬಿಡ್ತದ. ನಾ ಇಲ್ಲೇ ಈ ಕ್ಷಣದೊಳಗೆ ಬಂಧಿಯಾಗ್ತೀನಿ ಅಂದ್ರ ಕರಪಿಟ್ಟು, ದುರ್ನಾತ ಬರ್ತದ. ಬದುಕಿನ ಕುಲುಮೆಯೊಳಗ ಬೆಂದರೂ, ನೊಂದರೂ ಹಿಂಗ ಸವಿ ಬೀರುವುದು ಕಲೀಬೇಕು. ಅದಕ್ಕೆ ಕಲಾ ಅನ್ನೂದು. ಸಿಹಿನೂ ಬೀರಿದ್ರ ಕಲಾಕಂದ್‌ ಅನ್ನೂದು…

‍ಲೇಖಕರು ಅನಾಮಿಕಾ

September 27, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: