ಅಮ್ಮಚ್ಚಿ ರಂಗೇರಿದಳು..

ಕನ್ನಡ ರಂಗಭೂಮಿಯ ಮಹತ್ವದ ಹೆಸರು ಚಂಪಾ ಶೆಟ್ಟಿ.

ಕಾಲೇಜು ರಂಗ ಶಿಬಿರದ ಮೂಲಕ ರಂಗಭೂಮಿ ಪ್ರವೇಶಿಸಿದ ಈಕೆ ನಂತರ ಚಿತ್ರರಂಗದಲ್ಲಿ ಕಂಠದಾನ ಕಲಾವಿದೆಯಾಗಿ ಹೆಸರು ಮಾಡಿದರು.

ರಂಗ ಮಂಟಪ’ ತಂಡದ ಸ್ಥಾಪಕಿಯೂ ಹೌದು. ಈ ತಂಡಕ್ಕೆ ‘ಗಾಂಧಿ ಬಂದ’ ನಿರ್ದೇಶಿಸಿ ಸೈ ಅನಿಸಿಕೊಂಡರು. ನಂತರ ವೈದೇಹಿಯವರ ‘ಅಕ್ಕು’ ಅಮ್ಮಚ್ಚಿ ಎಂಬ ನೆನಪು ಆಗಿ ಚಿತ್ರ ನಿರ್ದೇಶಕಿಯೂ ಆದರು.ಒಂದು ಸುಂದರ ಕಾವ್ಯದಂತಿರುವ ‘ಅಮ್ಮಚ್ಚಿ ಎಂಬ ನೆನಪು’ ತೆರೆಯ ಮೇಲೆ ಅರಳಿದ ಕಥೆ ನಿಮ್ಮ ಮುಂದೆ..

ಅದುವರೆಗೂ, ನಾಟಕಗಳನ್ನು ನಿರ್ದೇಶಿಸಿದ್ದೆನಾದರೂ. ಸಿನೆಮಾದ ನಿರ್ದೇಶನ ಮೊದಲಬಾರಿ….

ನನಗಂತೂ ಒಂದಷ್ಟೂ ಅಳುಕಿರಲಿಲ್ಲ ..

ಸರಿ ಸುಮಾರು ‘ಅಕ್ಕು’ ನಾಟಕ ಮಾಡುವುದಕ್ಕಾಗಿ ಕತೆಗಳನ್ನು ಓದಿದ ನಂತರ ಆ ಮೂರೂ (ಅಕ್ಕು, ಅಮ್ಮಚ್ಚಿ, ಪುಟ್ಟಮ್ಮತ್ತೆ ) ಕತೆಗಳೂ ನನ್ನೊಳಗೆ ಹೇಗೆ ಹೊಕ್ಕಿದ್ದವೆಂದರೆ, ಒಂದೊಂದು ಸನ್ನಿವೇಶಗಳು, ಒಂದೊಂದು ಭಾವನೆಗಳೂ. ಹೀಗೇ ಇರಬೇಕೆಂದು ಸ್ಪಷ್ಟವಾಗಿದ್ದವು.

ಸಿನೆಮಾ ಮಾಡುವ ನಿರ್ಧಾರ ಮಾಡಿದ ಗಳಿಗೆಯಿಂದಲೇ ಇಡೀ ಸಿನೆಮಾ ಮನದೊಳಗೆ ಒಂದು ಸ್ಪಷ್ಟ ರೂಪ ತಾಳಿಬಿಟ್ಟಿತ್ತು…. ಚಿತ್ರಕತೆ ಮತ್ತು ಸಂಭಾಷಣೆ ಅದಾಗಲೇ ಸಿದ್ಧವಾಗಿತ್ತು ಇನ್ನು ಕೂತಲ್ಲಿ, ನಿಂತಲ್ಲಿ, ಪ್ರತಿಕ್ಷಣವೂ ಮನದಲ್ಲಿಯೇ ದೃಶ್ಯಗಳ ಜೋಡಣೆಯ ಕಾರ್ಯ ನಡೆಯುತ್ತಲೇ ಇತ್ತು…

ಈ ಎಲ್ಲಾ ಕಲ್ಪನೆಗಳನ್ನು ಮೊದಲು ಅಕ್ಷರ ರೂಪಕ್ಕೆ ಇಳಿಸುವ ಕಾರ್ಯ ಆಗಬೇಕಿತ್ತು..

ನನ್ನನ್ನು ನಂಬಿ ಹಣ ಹಾಕುತ್ತಿರುವವರು ಈಗಾಗಲೇ ಸಿನೆಮಾಗಳನ್ನು ನಿರ್ಮಾಣ ಮಾಡಿದ ನಿರ್ಮಾಪಕರೂ ಅಲ್ಲ, ಅಥವಾ ಅವರು ಕೊಡುತ್ತಿರುವುದು ಹೇಗೋ ಏನೋ ಸಂಪಾದನೆ ಮಾಡಿಟ್ಟ ದುಡ್ಡೂ ಅಲ್ಲಾ.. ಕಷ್ಟಪಟ್ಟು ಸಂಪಾದಿಸಿ, ಅಲ್ಪ ಸ್ವಲ್ಪ ಉಳಿಸಿದ್ದ ಹಣವದು. ಹಾಗಾಗಿ ನನಗೆ ಬಹುದೊಡ್ಡ ಜವಾಬ್ದಾರಿಯಿತ್ತು.. ಆದಷ್ಟು ಕಡಿಮೆ ಖರ್ಚಿನಲ್ಲಿ ಸಿನೆಮಾ ಮುಗಿಸಬೇಕೆಂಬ ಜವಾಬ್ದಾರಿ…

ಆದ್ದರಿಂದ ಶೂಟಿಂಗ್ ಗೆ ಹೊರಡುವ ಮುನ್ನ, ಎಲ್ಲವನ್ನೂ ಕಾಗದದಲ್ಲಿ ಇಳಿಸಿ, ಪಕ್ಕಾ ಪ್ಲಾನ್ ಮಾಡಿಕೊಂಡು ಸಂಪೂರ್ಣ ತಯಾರಾಗಿ ಶೂಟಿಂಗ್ ಗೆ ಹೊರಡಬೇಕೆಂಬ ಉದ್ದೇಶದಿಂದ,,…ಮನೆಯೆಂಬ ನಮ್ಮ ಆಫೀಸಿನಲ್ಲಿ ಅಥವಾ ಆಫೀಸೆಂಬ ನಮ್ಮ ಮನೆಯಲ್ಲೇ ಪ್ರತಿ ದೃಶ್ಯಗಳ ಪ್ರತಿ shot ಗಳು, ಮತ್ತು ಲೊಕೇಷನ್ ಚಾರ್ಟ್, ಆರ್ಟಿಸ್ಟ್ ಚಾರ್ಟ್, ಶೆಡ್ಯೂಲ್ ಪ್ರಾಪರ್ಟಿ ಚಾರ್ಟ್. ಹೀಗೆ ನನಗೆ ತೋಚಿದಂತೆ ನನ್ನ ಸಹಾಯಕ ನಿರ್ದೇಶಕರ ಜೊತೆಗೂಡಿ ಹಲವಾರು ಚಾರ್ಟ್ ಗಳನ್ನು ತಯಾರಿಸಿಕೊಂಡಿದ್ದೆ..

ನಟಿಯಾಗಿ, ಕಂಠದಾನ ಕಲಾವಿದೆಯಾಗಿ ಸಿನೆಮಾದ ಅನುಭವವಿದ್ದರೂ ನಿರ್ದೇಶನ ಮೊದಲಬಾರಿ.., ಹಾಗಾಗಿಯೇ ತಂಡದಲ್ಲಿ ಒಮ್ಮೆ ಅದೇ ಚರ್ಚೆಯಾಯಿತು .. ಸಾಕಷ್ಟು ಅನುಭವವಿರುವ ಸಹಾಯಕ ನಿರ್ದೇಶಕರನ್ನು ನೇಮಿಸಿಕೊಳ್ಳುವುದರ ಬಗ್ಗೆ ಹಲವು ಸಲಹೆಗಳೂ ಬಂದವು. ಎಲ್ಲಾ ಹೇಳುವಾಗ ಒಮ್ಮೆ ನನಗೂ ಆ ಆಲೋಚನೆ ಬಂದರೂ. ಹಿಂದೆಯೇ ಅದು ಬೇಡವೇ ಬೇಡವೆಂದು ನಿರ್ಧರಿಸಿದ್ದೆ….

ಅನುಭವಿ ಸಹಾಯಕ ನಿರ್ದೇಶಕರಿಗೆ ನೀಡಬೇಕಾದಷ್ಟು ಹಣ ಒದಗಿಸುವುದೂ ಕಷ್ಟ , ಜೊತೆಗೆ ಅವರ ಅನುಭವಗಳಿಗೂ ಮತ್ತು ನನ್ನ ನಿರ್ಧಾರಗಳಿಗೂ ಎಲ್ಲಿ ತಾಕಲಾಟ ಶುರುವಾಗುತ್ತದೋ? ಮತ್ತು ಎಲ್ಲಿ ನನ್ನ ಸ್ವಾತಂತ್ರ್ಯಕ್ಕೆ ಧಕ್ಕೆ‌ ಬರುತ್ತದೋ ಎನ್ನುವ ಯೋಚನೆಗಳೇ ನನ್ನೀ ನಿರ್ಧಾರಕ್ಕೆ ಕಾರಣವಾಗಿದ್ದವು…

ತಂಡದ ಕೆಲವರಿಗೆ ಮೊದಲ ಪ್ರಯತ್ನವೆಂಬ ಸಣ್ಣ ಅನುಮಾನವಿದ್ದರೂ ನನ್ನ ಮೇಲಿನ ನಂಬಿಕೆಯಿಂದ ಅದಕ್ಕೆ ಸಮ್ಮತಿಸಿದರು… ಸೋ ನಮ್ಮ ತಂಡದವರೇ ನಿರ್ದೇಶನದಲ್ಲಿ ನನ್ನ ಸಹಾಯಕ್ಕೆ ನಿಂತರು… ನಾನು ಮತ್ತು ನನ್ನ ನಿರ್ದೇಶನದ ತಂಡ, ಪೂರಾ ಫ್ರೆಶ್ ಫ್ರೆಶ್.. ಎಲ್ಲರೂ ಹೊಸಬರು..‌ ಆದರೆ, ಎಲ್ಲರೂ ನಮ್ಮನ್ನು ಬೆರಗುಗಣ್ಣಿಂದ ನೋಡಿದ್ದು 26 ದಿನಗಳ ಕಾಲ ಶೂಟಿಂಗ್ ಪ್ಲಾನ್ ಮಾಡಿ ಹೊರಟ ತಂಡ 23 ದಿನಗಳ ಒಳಗೆ ಶೂಟಿಂಗ್ ಮುಗಿಸಿ ಬಂದಾಗ….. ಅನುಭವಕ್ಕಿಂತಾ ಮಿಗಿಲು, ವಿಷನ್ ಮತ್ತು ಡೆಡಿಕೇಶನ್ ಅನ್ನುವುದನ್ನು ತಂಡ ಸಾಬೀತು ಪಡಿಸಿತ್ತು….

ನಿರ್ದೇಶಕರಿಗೆ, ಸಹಾಯಕರಾಗಿ ದುಡಿದ ಅನುಭವ ಅನಿವಾರ್ಯವೇ ಅಲ್ಲವೇ ಎಂಬ ಚರ್ಚೆ ಎಂದಿನಿಂದಲೂ ನಡೆಯುತ್ತಲೇ ಬಂದಿದೆ, ನನ್ನ ಅಭಿಪ್ರಾಯದಲ್ಲಿ ಇದ್ದರೂ ಒಳ್ಳೆಯದು, ಇರದಿದ್ದರೂ ಅಡ್ಡಿಯಿಲ್ಲ… ನಿರ್ದೇಶನಕ್ಕೆ ಬಹುಮುಖ್ಯವಾಗಿ ಬೇಕಾಗಿರುವುದು ಕ್ರಿಯಾಶೀಲತೆ, ಸ್ಪಷ್ಟತೆ, ಮತ್ತು ಬದ್ಧತೆ…

ಸಹಾಯ ನಿರ್ದೇಶನ‌ ಮಾತ್ರವಲ್ಲ ನಿರ್ಮಾಣ ನಿರ್ವಹಣೆ, ಕಾಸ್ಟ್ಯೂಮ್ಸ್, ಎಲ್ಲ ಜವಾಬ್ದಾರಿಯನ್ನೂ ತಂಡದ ಸದಸ್ಯರೇ ವಹಿಸಿಕೊಂಡದ್ದು , ಶೂಟಿಂಗ್ ವಾತಾವರಣ ಮನೆ ವಾತಾವರಣವಾಗಿ ಬದಲಾಗಲು ಕಾರಣವಾಗಿತ್ತು…. ಬಹುತೇಕ ಎಲ್ಲಾ ವಿಭಾಗಗಳಲ್ಲೂ ನಮ್ಮವರೇ ಇದ್ದರೂ, ಮುಖ್ಯ ತಂತ್ರಜ್ಞರ ನೇಮಕವಾಗಬೇಕಿತ್ತು… ಅದೃಷ್ಟವೆಂದರೆ, ಅಲ್ಲಿಯೂ ನಮ್ಮವರೇ ಸಿಕ್ಕಿದ್ದು ಮತ್ತು ಉಳಿದವರು ಬಹುಬೇಗ ನಮ್ಮವರಾಗಿದ್ದು…..

ಮೊದಲನೆಯದಾಗಿ , ಕಲಾನಿರ್ದೇಶನ… ಪ್ರತಿ ಫ್ರೇಮ್ ನಲ್ಲೂ ಕಾಣುವ ಅಂದಿನ ಕಾಲದ ಪ್ರಾಪರ್ಟೀಸ್ ದೃಶ್ಯದ ಕಲಾತ್ಮಕತೆಗೆ ಸಾಕ್ಷಿಯಾಗಿ, ನೋಡುಗರನ್ನು ಆಕರ್ಷಿಸಿದ್ದು ಮಾತ್ರವಲ್ಲ ಹಿಂದಿನ‌ಕಾಲದ ಅದ್ಭುತವಾದ ಪರಿಕರಗಳ ಡಾಕ್ಯಮೆಂಟೇಷನ್ ಕೂಡಾ ಎಂಬುದು ವಿಮರ್ಶಕರಿಂದ ಬಂದ ಮೆಚ್ಚುಗೆ…

‘ರಂಗಮಂಟಪ’ ತಂಡ ಆರಂಭವಾದದ್ದೇ ನೇಪಥ್ಯ ಕಲಾವಿದರಿಂದ ಅದರಲ್ಲಿಯೂ ಹೆಸರಾಂತ ಕಲಾನಿರ್ದೇಶಕರಾದ ಶಶಿಧರ್ ಅಡಪ, ಕೃಷ್ಣ ರಾಯಚೂರು, ಹರ್ಷ ಕಾವ, ಪ್ರತಾಪ್ ಮೆಂಡನ್.. ಒಂದಲ್ಲಾ ನಾಲ್ಕು ಅನುಭವಿ ಕಲಾನಿರ್ದೇಶಕರು ಸೇರಿದ ಮೇಲೆ ಇಷ್ಟೆಲ್ಲಾ ಮೆಚ್ಚುಗೆ ಬರದಿದ್ದರೆ ಹೇಗೆ? ಈ ನಾಲ್ಕು ಪ್ರತಿಭಾವಂತ ಕಲಾ ನಿರ್ದೇಶಕರು ಸೇರಿ “ಅಮ್ಮಚ್ಚಿ” ಸಿನೆಮಾವನ್ನು 70 ರ ದಶಕಕ್ಕೆ ಕೊಂಡೊಯ್ದರು…..

ಇನ್ನು ಸಿನೆಮಾದ ಜೀವಾಳ ಸಂಗೀತ… ‘ಅಕ್ಕು’ ನಾಟಕಕ್ಕೆ ಸೊಗಸಾದ ಸಂಗೀತ ಮಾಡಿಕೊಟ್ಟಿದ್ದ ಪಂಡಿತ್ ಕಾಶೀನಾಥ್ ಪತ್ತಾರ್ ಅವರ ಹಾಡುಗಳನ್ನು ಕೇಳಿದ ಮೇಲೆ , ಅವರನ್ನು ಬದಲಾಯಿಸಿ, ಸಿನೆಮಾಗೆ ದ್ರೋಹ ಮಾಡುವ ಸಾಹಸ ಮಾಡದೇ ಸಂಗೀತ ನಿರ್ದೇಶನದ ಜವಾಬ್ದಾರಿಯನ್ನು ಅವರಿಗೇ ಒಪ್ಪಿಸಿದೆವು… ಸಿನೆಮಾ ಬಿಡುಗಡೆಯಾದ ಮೇಲೆ ಹಾಡುಗಳಿಗೆ ಬಂದ ಅದ್ಭುತವಾದ ಪ್ರತಿಕ್ರಿಯೆಗಳು ನಮ್ಮ ನಿರ್ಧಾರದ ಬಗ್ಗೆ ನಮಗೇ ಹೆಮ್ಮೆ ಉಂಟಾಗುವಂತೆ ಮಾಡಿತ್ತು… ಈ ನಡುವೆ, ಗುರು ಕಾಶೀನಥ್ ಪತ್ತಾರರ ಅಪಾರವಾದ ಸಂಗೀತ ಜ್ಞಾನವನ್ನು ಸಾಕ್ಷೀಕರಿಸುವ ಪ್ರಸಂಗವೊಂದು ನಡೆದಿತ್ತು…

ಸಿನೆಮಾದ ಮೊದಲ ಹಾಡು “ಹೊಳೆವ ಹೊಳೆಯಾಚೆಗೆ” ಶೂಟ್ ಮಾಡುವ ಸಂದರ್ಭದಲ್ಲಿ ಅದು ಪೂರ ಮಾಂಟೇಜಸ್ ಆದ್ದರಿಂದ ಹೈ ಸ್ಪೀಡ್ ನಲ್ಲೇ ಶಾಟ್ ಗಳನ್ನು ಶೂಟ್ ಮಾಡಲಾಗಿತ್ತು…, ಈಗಾಗಲೇ ರೆಕಾರ್ಡ್ ಆಗಿದ್ದ ಫಾಸ್ಟ್ ವರ್ಷನ್ ಹಾಡಿಗೂ ಶೂಟ್ ಆದ ದೃಶ್ಯಗಳಿಗೂ ಹೊಂದುತ್ತಿರಲಿಲ್ಲ. ನಮ್ಮ ಡಿ. ಓ‌ ಪಿ ಸಲಹೆಯಂತೆ, ಅದು ರೀ ಟ್ಯೂನ್ ಆಗಬೇಕೆಂದು ನಿರ್ಧರಿಸಿ, ಪತ್ತಾರ್ ಸರ್ ಗೆ ಶೂಟ್ ಆದ ಕೆಲವು ತುಣುಕುಗಳನ್ನು ತೋರಿಸಿದ ನಂತರ ಕೇವಲ ಒಂದೇ ಒಂದು ದಿನದಲ್ಲಿ, ದೃಶ್ಯಕ್ಕೆ ತಕ್ಕ ಇಂಪಾದ ಸಂಗೀತವನ್ನು ನೀಡಿದ್ದು ಕಾಶೀನಾಥ್ ಪತ್ತಾರ್ ಸರ್ ಅಂತಹ‌ ವಿದ್ವಾಂಸರಿಗಲ್ಲದೇ ಮತ್ಯಾರಿಗೆ ಸಾಧ್ಯ…

ಅವರು ಹಾಕಿದ್ದ ರಾಗಗಳಿಗೆ ಪ್ರೀತಿಯಿಂದ ಬಂದು, ಹಾಡಿದ ಸಂಗೀತಾ ಕಟ್ಟಿ , ಅನುರಾಧಾ ಭಟ್, ಮಂಗಳಾ ರವಿ, ಮಾನಸಾ ಮತ್ತು ವರ್ಷಾರವರು ರಾಗಗಳನ್ನೂ ಬಾಯ್ತುಂಬಾ ಹೊಗಳಿ ಹಾಡುಗಳಿಗೆ ಜೀವತುಂಬಿದ್ದರು…

ಇಂತಹ ಸಿನೆಮಾಗಳಿಗೆ ಹಾಡು ಬೇಕೇ ಬೇಡವೇ ಎಂಬ ಚರ್ಚೆಯ ನಡುವೆಯೇ “ಅಮ್ಮಚ್ಚಿ” ಹಾಡುಗಳು ಎಷ್ಟೋ ಮನೆಗಳಲ್ಲಿ ಮಕ್ಕಳ ಜೋಗುಳವಾದರೆ,, ಹಲವರ ಕಾರುಗಳಲ್ಲಿ ಗುನುಗುಟ್ಟುತ್ತಾ ಅವರ ಪಯಣಕ್ಕೆ ಸಾಥ್ ಆದವು ಎಂಬುದಂತೂ ಸತ್ಯ…

ಹಾಡುಗಳ ರೆಕಾರ್ಡಿಂಗ್ ಸಮಯದಲ್ಲಿ ಪರಿಚಯವಾದ ಸಂಗೀತ್ ಥಾಮಸ್ ಸರ್ ಮುಂದೆ ನಮ್ಮವರೇ ಆಗಿ, ಸಿನೆಮಾಕ್ಕೆ ತಕ್ಕ ಹಿನ್ನೆಲೆ ಸಂಗೀತವನ್ನು ನೀಡಿದರು….ಇತ್ತ ಕಮರ್ಷಿಯಲ್ಲೂ ಅಲ್ಲದ, ಆರ್ಟೂ ಅಲ್ಲದ ಶೈಲಿಯ ದೃಶ್ಯಗಳಿಗೆ ಹಿನ್ನೆಲೆ ಸಂಗೀತ ನೀಡುವ ದೊಡ್ಡ ಚಾಲೆಂಜನ್ನು, ಬಹು ಪ್ರೀತಿಯಿಂದಲೇ ಸ್ವೀಕರಿಸಿದ ಸಂಗೀತ್ ಸರ್ ಗೆ ಸವಾಲಿಗೆ ತಕ್ಕ ಪ್ರಶಂಸೆಗಳು ಸಿಕ್ಕಿದ್ದವು….

ಸಿನೆಮಾವಾಗಲೀ ನಾಟಕವಾಗಲೀ ತರೆಯ ಹಿಂದೆ ದುಡಿವ ಇಂತಹ ಕಾಣದ ಕೈಗಳ ಶ್ರಮ ಸಾಕಷ್ಟಿರುತ್ತದೆ ಅಂತಹ ಕಲಾವಿದರನ್ನು ಇಲ್ಲಲ್ಲದೆ ಮತ್ತೆಲ್ಲಿ ಪರಿಚಯಿಸಲು ಸಾಧ್ಯ?

ಅಂತಹ ಇನ್ನಷ್ಟು ಪ್ರತಿಭೆಗಳ ಪರಿಚಯ ಮತ್ತು ಇನ್ನೂ ಕೆಲವು ಸವಾಲುಗಳು ಮುಂದಿನ ಸಂಚಿಕೆಯಲ್ಲಿ

‍ಲೇಖಕರು avadhi

September 27, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಗೀತಾ ಎನ್ ಸ್ವಾಮಿ

    ಅನುಭವದ ವಿವರ ಚೆನ್ನಾಗಿದೆ ಮೇಡಂ.
    ಇದೇ ಕಥೆಗಳನ್ನು ಆಧರಿಸಿದ ಒನ್ ಮ್ಯಾನ್ ಶೋ ನಮ್ಮ ಆಡಿಟೋರಿಯಂ ಅಲ್ಲಿ ನಡೆದಿತ್ತು. ವಿದ್ಯಕ್ಕ ಇದಕ್ಕಾಗಿಯೇ ಹೆಗ್ಗೋಡಿನಿಂದ ತಿಪಟೂರಿಗೆ ಬಂದಿದ್ದು. ಅಕ್ಷರ ಸರ್ ಮಾಧವ ಚಿಪ್ಪಳಿ ಎಲ್ಲರ ಜೊತೆ ಮಕ್ಕಳನ್ನು ಸೇರಿಸಿಕೊಂಡು ಸಂವಾದ ಕೂಡ ಚೆನ್ನಾಗಿ ಆಗಿತ್ತು….. ನಿಮ್ಮ ಬರಹದ ಮೂಲಕ ನಮ್ಮ ನೆನಪುಗಳ ಕಡೆಗೂ ನಡೆಯಲು ಆಯಿತು…..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: