ಮಲ್ಲಿಕಾರ್ಜುನಗೌಡ ತೂಲಹಳ್ಳಿ ಅವರ ಹೊಸ ಕವಿತಾ ಸಂಕಲನ ಪ್ರಕಟವಾಗಿದೆ.
ಶಿವಮೊಗ್ಗದ ‘ಗೀತಾಂಜಲಿ ಪುಸ್ತಕ ಪ್ರಕಾಶನ’ ಈ ಕೃತಿಯನ್ನು ಪ್ರಕಟಿಸಿದೆ.
‘ಹೇಳಲೇಬೇಕಾದದ್ದು ಇನ್ನೂ ಇದೆ..’ ಸಂಕಲನಕ್ಕೆ ಲೇಖಕರು ಬರೆದ ಮಾತು ನಿಮ್ಮ ಓದಿಗಾಗಿ ಇಲ್ಲಿದೆ-
ಯಾರೇನೇ ಅಂದುಕೊಳ್ಳಲಿ ಬದುಕು ನಿಂತಿರುವುದೇ ಪ್ರೀತಿಯ ಅಡಿಪಾಯದ ಮೇಲೆ. ಈ ಹೂವಿನ ಮುಳ್ಳಿನಂತಹ ಪ್ರೀತಿ ಚುಚ್ಚಿ ಚುಚ್ಚಿ ಕೊಡುವಷ್ಟು ಜೀವನೋತ್ಸಾಹ ಮತ್ತೊಂದು ಕೊಡಲಾರದು. ಎಂಥವರ ಹೃದಯವೂ ತುಸು ಭಾರವಾಗಿ, ಕಣ್ಣಂಚಲ್ಲಿ ನೀರು ಜಿನುಗಿ ಲೋಕದ ದ್ವೇಷದ ಮೊನಚು ಮೊಂಡಾಗುವುದು ಈ ಪ್ರೀತಿಯಿಂದ. ಹೀಗಾಗಿ ನಾನು ಕ್ಷಮಿಸುವುದಕ್ಕೂ ಮುನ್ನ ಕ್ಷಮೆ ಕೋರುವುದೇ ಜಾಸ್ತಿ. ಪ್ರೀತಿಯಿಂದ ಮಾತ್ರ ಇದೆಲ್ಲಾ ಸಾಧ್ಯ. ಜಾತಿ ಮತ ಪಂಥ ತೊರೆದ ಪ್ರೇಮದ ಜಾಡು ನಮ್ಮನ್ನು ಸದಾ ಕನಸುಗಾರರನ್ನಾಗಿಸಬಲ್ಲದು. ಭರವಸೆಯ ಬೀಜ ಬಿತ್ತಿ ನೆರಳಾಗಬಲ್ಲದು.
ಈ ಪ್ರೇಮವೆಂಬುದು ಕೊನೆಯಿಲ್ಲದ ಹುಚ್ಚು. ಅವಿರತ ಹುಡುಕಾಟ. ಮಗ್ಗ, ನೂಲುಗಳ ಜೊತೆಗೆ ನಿತ್ಯವಿರುವ ನೇಕಾರನ ಇನ್ನೂ ನೇಯಬೇಕಿರುವ ಹೊಸ ಬಟ್ಟೆಯ ಸುಂದರ ಕನಸು. ಇಲ್ಲಿ ಕನಸಿನ ಬೀಜಗಳ ಮೊಳೆಸುವ ಬೆಚ್ಚನೆಯ ಕಾವಿದೆ. ಎಳೆ ಚಿಗುರಿನ ಜೀವನೋತ್ಸಾಹವಿದೆ. ಬರಬರುತ್ತ ನಂಬಿಕೆ ಗಾಢವಾದಾಗ ಅಪನಂಬಿಕೆಯ ಬಿರುಕು ಮೂಡಿ ಏಕಾಂತದ ಒದ್ದಾಟಗಳಿವೆ. ಇವೆಲ್ಲಕ್ಕೂ ಕೊಟ್ಟುಕೊಳ್ಳುತ್ತಲೇ ಇವುಗಳ ಮೀರುವ ಬದುಕಿನ ಅಧ್ಯಾತ್ಮವಿದೆ. ಇಹ ಮೀರಿದಂತಾದರೂ ಮತ್ತೆ ಇಲ್ಲಿಗೇ ಬಂದು ಆ ಪ್ರೇಮದ ವಿಳಾಸವ ಮತ್ತೆ ಮತ್ತೆ ಹುಡುಕುವ ಅಲೆದಾಟವಿದೆ. ಹಾಗಾಗಿ ಹೇಳುವುದು ಮುಗಿಯುವುದಿಲ್ಲ,. “ಹೇಳಲೇಬೇಕಾದದ್ದು ಇನ್ನೂ ಇದೆ”
-ಮಲ್ಲಿಕಾರ್ಜುನಗೌಡ ತೂಲಹಳ್ಳಿ
ಗೆಳೆಯ ಮಲ್ಲಿಕಾರ್ಜುನಗೌಡರ ಕವಿತೆಗಳನ್ನು ಓದುವುದೆಂದರೆ ನಮ್ಮ ಅರಿವಿಗೆ ಬಾರದಂತೆ ನಿರ್ಲಕ್ಷ್ಯಕ್ಕೊಳಗಾದ ಅನೇಕ ಸಂಗತಿಗಳೊಂದಿಗೆ ನಾವು ಅತ್ಯಂತ ಆಪ್ತವಾಗಿ ಒಡನಾಡುವುದೆಂದೇ ಅರ್ಥ. ಅವರು ಬದುಕನ್ನು ಅದೆಷ್ಟು ಪ್ರೀತಿಸುತ್ತಾರೆಂದರೆ, ಇದಕ್ಕೆಲ್ಲ ಅವರ ಕವಿತೆಗಳೇ ಪುನರ್ ಸಾಕ್ಷಿಯಾಗಿ ನಿಲ್ಲುತ್ತವೆ. ಯಾವತ್ತಿಗೂ ಕೂಡ ಪ್ರಸಿದ್ಧಿಗೆ ಹಪಹಪಿಸದ, ತಮ್ಮ ಆತ್ಮತೃಪ್ತಿಗಾಗಿಯಷ್ಟೇ ಕವಿತೆಗಳನ್ನು ಹೊಸೆಯುವ ಮಲ್ಲಿಕಾರ್ಜುನಗೌಡ ಈ ಕಾರಣವಾಗಿಯೇ ಮತ್ತೆ ಮತ್ತೆ ಇಷ್ಟವಾಗುತ್ತಾರೆ. ಸಧ್ಯ, ಅವರ ‘ಹೇಳಲೇಬೇಕಾದದ್ದು ಇನ್ನೂ ಇದೆ’ ಕವನಸಂಕಲನದಲ್ಲಿನ ಕವಿತೆಗಳು ನಾನು ಓದಿರುವಂತೆ ಅವರ ವಿಭಿನ್ನವಾದ ದೃಷ್ಟಿಕೋನಕ್ಕೆ ಕನ್ನಡಿ ಹಿಡಿಯುತ್ತವೆ..
# ಕಲ್ಲೇಶ್ ಕುಂಬಾರ್, ಹಾರೂಗೇರಿ