ಎ ಆರ್ ಮಣಿಕಾಂತ್ ಕಂಡ ‘ನಿಸಾರ್ ಸಾರ್’

ಕೆಲವರ ನಿರ್ಗಮನವನ್ನು ಒಪ್ಪಲು ಮನಸ್ಸು ತಯಾರಿರುವುದಿಲ್ಲ.

ಅಂಥವರ ಪೈಕಿ ನಿಸಾರ್ ಅಹಮದ್ ಅವರ ನಿರ್ಗಮನವೂ ಒಂದು.

ಅವರು ಜೊತೆಗಿಲ್ಲ ಅನ್ನಲು ಈಗಲೂ ಮನಸ್ಸು ಒಪ್ಪುತ್ತಿಲ್ಲ.

ಅಷ್ಟರಮಟ್ಟಿಗೆ, ತಮ್ಮ ಆತ್ಮೀಯತೆ ಮತ್ತು ನಿಷ್ಕಲ್ಮಶ ಪ್ರೀತಿಯಿಂದ ನನ್ನನ್ನು ಆವರಿಸಿಕೊಂಡಿದ್ದ ಹಿರಿಯರು ಅವರು.

ಅವರೊಂದಿಗೆ ಆಡಿದ ಮಾತುಗಳನ್ನು ಹೀಗೇ ಆಗಾಗ ದಾಖಲಿಸಬೇಕೆಂಬ ಆಸೆಯಿಂದ…

ಎ ಆರ್ ಮಣಿಕಾಂತ್ ಅವರ ಫೇಸ್ ಬುಕ್ ನಿಂದ ಆರಿಸಿದ ಅವರ ನೆನಪುಗಳು ನಿಮ್ಮ ಮುಂದೆ

 

ಇಲ್ಲೇ ಇದ್ದಾರೆ ನಮ್ಮ ನಿಸಾರ್…

ನಿಸಾರ್ ಅಹಮದ್ ಅವರ ಬಳಿ ಯಾವತ್ತೂ ಒಂದು ಪುಟ್ಟ ಬ್ಯಾಗ್ ಇರೋದು. ಬಹುತೇಕ ಕಡೆ ಅವರು ಹೊರಟಾಗ ಅವರ ಬಗಲಲ್ಲಿ ಆ ಬ್ಯಾಗ್ ಕಾಯಂ. ತಾವು ಹೋಗಿದ್ದ ಕಾರ್ಯಕ್ರಮಗಳಲ್ಲಿ ಮಕ್ಕಳನ್ನು ಕಂಡರೆ ಸಾಕು; ಆ ಬ್ಯಾಗ್ ತೆರೆದು, ಮಕ್ಕಳನ್ನು ಕರೆಯುತ್ತಿದ್ದರು. ಅಲ್ಲಿ ಮಕ್ಕಳ ಬೊಗಸೆಗೆ ಬೀಳುತ್ತಿದ್ದುದು ತರಾವರಿ ಚಾಕ್ಲೇಟು! ಅದನ್ನು ಕಂಡಾಕ್ಷಣ ಮಕ್ಕಳು ಫುಲ್ ದಿಲ್ ಖುಷ್!

ಆಗ, ನಿಸಾರ್ ಅವರ ಮೊಗವೂ ಅರಳುತ್ತಿತ್ತು. ಮಕ್ಕಳನ್ನು ಸೆಳೆಯುವ, ಅವರ ಖುಷಿ ಕಂಡು ಹಿಗ್ಗುವ ತಾಯಿ ಮನಸ್ಸು ಅವರೊಳಗೆ ಸದಾ ಇರುತ್ತಿತ್ತು. ಪದ್ಮಶ್ರೀ ಪಡೆದ ನಂತರವೂ, ಅವರಿಗೆ ಅಹಮಿಕೆ ಜೊತೆಯಾಗಲಿಲ್ಲ. ”ಸಾರ್, ನಿಮ್ಮ ಶ್ರೇಷ್ಠ ಪದ್ಯ ಯಾವುದು ಎಂದು ಕೇಳಿದರೆ, ಅದು ಇನ್ನಷ್ಟೇ ಬರಬೇಕಿದೆ” ಎಂದು ವಿನೀತರಾಗಿ ಉತ್ತರಿಸುತ್ತಿದ್ದರು.
*****************

ಅಪ್ಪ-ಅಮ್ಮನ ಹೆಸರಿಂದ ಅರ್ಧರ್ಧ ತೆಗೆದು ”ಹಮೀದಾ ಹೈದರ್” ಎಂದು ತಮ್ಮ ಮನೆಗೆ ಹೆಸರಿಟ್ಟಿದ್ದರು ನಿಸಾರ್. ಅವರ ಮಾತು- ವರ್ತನೆಯಲ್ಲಿ ಅಮ್ಮನ ಕಾಳಜಿ, ಅಪ್ಪನ ಪ್ರೋತ್ಸಾಹ, ಎರಡೂ ಇರುತ್ತಿತ್ತು. ಆಗಷ್ಟೇ ಪರಿಚಯ ಆದವರಿಗೂ- ನಿಮ್ಮ ಊರು ಯಾವುದು? ಅಪ್ಪ-ಅಮ್ಮ ಏನು ಮಾಡ್ತಿದ್ದಾರೆ? ಎಷ್ಟು ಜನ ಇದ್ದೀರಿ? ಎಂದೆಲ್ಲ ವಿಚಾರಿಸುತ್ತಾ, ಹತ್ತೇ ನಿಮಿಷದಲ್ಲಿ ಆತ್ಮೀಯರಾಗಿಬಿಡುತ್ತಿದ್ದರು.

ಮುಂದೆ, ವರ್ಷದ ನಂತರ ಸಿಕ್ಕಿದರೂ, ಅವರ ಊರು, ಮನೆಯ ಜನರನ್ನೆಲ್ಲ ನೆನಪಿಸಿಕೊಂಡು, ಎಲ್ಲರ ಕ್ಷೇಮ ವಿಚಾರಿಸುವ ಮೂಲಕ ”ನಮ್ಮೊಳಗೊಬ್ಬ” ಆಗುತ್ತಿದ್ದರು ನಿಸಾರ್.
*************

ಎಷ್ಟೋ ಜನರಿಗೆ ಅವರ ಮುಖ ಪರಿಚಯ ಕಡಿಮೆ. ಆದರೆ, ಅವರು ಬರೆದ ”ನಿತ್ಯೋತ್ಸವ” ಗೀತೆ ಎಲ್ಲರಿಗೂ ಕಂಠಪಾಠ. ಧರ್ಮಗಳನ್ನು ಮೀರಿದ ಕವಿ ಅವರು. ಇನ್ನೊಂದರ್ಥದಲ್ಲಿ, ಹೇಳುವುದಾದರೆ, ಕವಿಯಾದವನಿಗೆ ಧರ್ಮಗಳಿಲ್ಲ ಎಂದು ನಿರೂಪಿಸಿ, ಬದುಕಿದ ಕವಿ. ‘ಬೆಣ್ಣೆ ಕದ್ದ ನಮ್ಮ ಕೃಷ್ಣ’ ಗೀತೆಯೇ ಅದಕ್ಕೊಂದು ಸೂಕ್ತ ಉದಾಹರಣೆ.

ಸದಾ ಹೊಸತನಕ್ಕೆ ಹಂಬಲಿಸುತ್ತಿದ್ದ ಅವರು, ಅದನ್ನು ಪದ್ಯದ ಮೂಲಕ ಹೇಳಿದ್ದು ಹೀಗೆ- ಬೇರೆ ಹಾಡ ಕಲಿಸು ತಾಯೆ, ಬೇರೆ ತೆರೆನ ರಾಗವ…
*************

ಸದಾ ಸೂಟ್ ಧಾರಿ ಆಗಿರುತ್ತಿದ್ದರು ನಿಸಾರ್. ಈ ಶಿಸ್ತು, ಅವರಿಗೆ ಕಾಲೇಜಿನ ದಿನಗಳಿಂದಲೇ ಜೊತೆಯಾದದ್ದು. ಅದನ್ನೇ ನೆಪ ಮಾಡಿಕೊಂಡು- ”ಆಲ್ವೇಸ್ ಕೋಟ್ ನಿಸಾರ್ ಅಹಮದ್, ಆನ್ ಕೋಟ್ ಇಲ್ವೇ ಇಲ್ಲ” ಎಂದು ಹೇಳಿದರೆ, ‘ಒಳ್ಳೇ ಪನ್ ಕಣ್ರೀ ಇದು’ ಎಂದು ನಗುತ್ತಿದ್ದರು.

ಕೆಲವೊಮ್ಮೆ, ಪನ್ ಅಂದಾಕ್ಷಣ ಅವರಿಗೆ ವೈಎನ್ಕೆ ಅವರ ನೆನಪು ಬಂದುಬಿಡುತ್ತಿತ್ತು. ವೈಎನ್ಕೆ ಹೇಗೆಲ್ಲಾ ಪನ್ ಮಾಡುತ್ತಿದ್ದರು ಎಂಬುದನ್ನು ಬಲು ಸ್ವಾರಸ್ಯವಾಗಿ ಹೇಳುತ್ತಿದ್ದರು.
*************

ಆತ್ಮೀಯರನ್ನು ಒಮ್ಮೆ ಏಕವಚನದಲ್ಲಿಯೂ, ಇನ್ನೊಮ್ಮೆ ಬಹುವಚನದಲ್ಲಿಯೂ ಮಾತಾಡಿಸುತ್ತ, ಅವರಿಗೆ ತಮ್ಮ ಹೊಸ ಪುಸ್ತಕವನ್ನೋ, ಸಿ ಡಿ ಯನ್ನೋ ಕೊಟ್ಟು- ನೋಡ್ರೀ, ನಾನು ಇದನ್ನು ಎಲ್ಲರಿಗೂ ಕೊಡುವುದಿಲ್ಲ, ಪಬ್ಲಿಷರ್ ಕೆಲವೇ ಪ್ರತಿ ಕೊಟ್ಟಿದ್ದಾನೆ. ನಿನಗೆ ಒಂದು ಕಾಪಿ ಕೊಡ್ತಾ ಇದ್ದೇನೆ! ತಿಳಕೋ! ಅನ್ನುತ್ತಿದ್ದರು. ನಂತರ, ತಮ್ಮ ಮುತ್ತಿನಂಥ ಅಕ್ಷರಗಳಲ್ಲಿ ಶುಭ ಹಾರೈಕೆಯ ಮಾತು ಬರೆದು, ಸಹಿ ಹಾಕಿ ಕೊಡುತ್ತಿದ್ದರು. ನಿಸಾರ್.

ಅವರೊಳಗಿದ್ದ ಅಮ್ಮ ಜಾಗೃತಳಾಗುತ್ತಿದ್ದುದೇ ಆನಂತರದಲ್ಲಿ. ಕವರ್ ಕೊಡಲಾ? ಕವರ್ ನೊಳಗೆ ಇಟ್ಟುಕೋ… ಎನ್ನುತ್ತಲೇ ಆ ಕೆಲಸ ಮಾಡುತ್ತಿದ್ದರು. ಅತಿಥಿಗಳು ಅವರ ರೂಮಿನಿಂದ ಹೊರಬಂದರೆ, ತಕ್ಷಣವೇ- ”ಕಿಟಕಿಯ ತುದಿ ಹೊಡೆದುಬಿಟ್ಟೀತು, ಜೋಪಾನ” ಅನ್ನುತ್ತಿದ್ದರು. ಬಾಣಂತಿಯೊಬ್ಬಳು ಮಕ್ಕಳ ಕುರಿತು ಯೋಚಿಸುವಾಗಿನ ಕಾಳಜಿ, ಅವರ ಮಾತುಗಳಲ್ಲಿ ಇರುತ್ತಿತ್ತು.
************

ಯಾವಾಗ ಬೇಕಾದರೂ ಅವರ ಮನೆಗೆ ಹೋಗಬಹುದು, ಯಾವ ಪ್ರಶ್ನೆಯನ್ನಾದರೂ ಕೇಳಬಹುದು ಅನ್ನುವಷ್ಟು ಸ್ವಾತಂತ್ರ್ಯ, ಸಲುಗೆ ಅವರ ಜೊತೆಗಿತ್ತು. ೨೦ ವರ್ಷಗಳ ಹಿಂದೆ, ಈಗಿನಷ್ಟು ಮೆಚುರಿಟಿ ಕೂಡ ಇರಲಿಲ್ಲ ನನಗೆ. ಮನಸ್ಸಿಗೆ ಏನು ಅನಿಸುತ್ತೋ, ಅದನ್ನು ಕೇಳಿಬಿಡುತ್ತಿದ್ದೆ. ‘ಕಣ್ಣಲೇಕೆ ಕಂಬನಿ, ಹೇಳು ಹೇಳೆ ಕಮಲಿನಿ…’, ‘ಕಣ್ಣು ಕಣ್ಣೊಡನೆ ಮಾತಾಡಿದೆ… ‘, ‘ ನೀನು ಜೊತೆಯಲಿರುವ ವೇಳೆ… ‘, ಮುಂತಾದ ಅವರ ಗೀತೆಗಳು ಬಾಯಿ ಪಾಠವಾಗಿದ್ದ ದಿನಗಳು ಅವು.

ಅದನ್ನೇ ಮನಸಲ್ಲಿ ಇಟ್ಟುಕೊಂಡು ಒಮ್ಮೆ ಕೇಳಿದ್ದೆ : ‘ಸಾರ್, ನಿಮ್ಮದು ಲವ್ ಮ್ಯಾರೇಜಾ?’

‘ಲವ್ ಮ್ಯಾರೇಜ್ ಆಗಬೇಕು ಅಂತ ಇಷ್ಟ ಇತ್ತು. ಆದರೆ ಆಗಲಿಲ್ಲ. ನಮ್ಮದು ಅರೆಂಜ್ಡ್ ಮ್ಯಾರೇಜ್’ ಅಂದಿದ್ದರು ನಿಸಾರ್ ಅಹಮದ್. ನನ್ನ ಭವಿಷ್ಯದ ಬಗ್ಗೆ, ಮದುವೆಯ ಬಗ್ಗೆ ನನ್ನ ಹೆತ್ತವರು ಬಹಳ ಆಸೆ ಇಟ್ಕೊಂಡಿದ್ರು ಕಣಪ್ಪಾ… ಪೋಷಕರ ಮನಸ್ಸಿಗೆ ಬೇಸರ ಮಾಡಬಾರದು ಅಂತ ಲವ್ ಮ್ಯಾರೇಜ್ ಬಗ್ಗೆ ಜಾಸ್ತಿ ತಲೆ ಕೆಡಿಸಿಕೊಳ್ಳಲಿಲ್ಲ ಎಂದೂ ಸೇರಿಸಿದರು.
*************

ಇನ್ನೊಂದು ಸಂದರ್ಭದಲ್ಲಿ, ಸಾರ್, ಎಲ್ಲರಿಗೂ ಒಬ್ಬ ”ಪರಮಾಪ್ತ” ಅಂತ ಇರ್ತಾನೆ. ಏನೇ ಗುಟ್ಟಿನ ವಿಚಾರ ಇದ್ರೂ, ಯಾವುದೇ ಕಷ್ಟ ಬಂದ್ರೂ ಅವನ ಜೊತೆ ಹೇಳಿಕೊಳ್ಳಬೇಕು ಅನಿಸಿಬಿಡುತ್ತೆ. ನಿಮಗೆ ಇರುವ ಅಂಥಾ ” ಪರಮಾಪ್ತ ”ಆಪ್ತ ಯಾರು? ಅಂತ ಕೇಳಿಬಿಟ್ಟೆ.

ಈ ಪ್ರಶ್ನೆ ಕೇಳುತ್ತಿದ್ದಂತೆಯೇ ನಿಸಾರ್ ಅಹಮದ್ ರ ಮುಖ ಮಂಕಾಯಿತು. ಅವರು ಕೂತಲ್ಲಿಯೇ ಚಡಪಡಿಸಿದರು. ಏನೋ ಹೇಳಲು ಹೋಗಿ, ಏನೂ ಹೇಳಲಾಗದೆ ಸುಮ್ಮನಾಗಿಬಿಟ್ಟರು.
‘ಪರಮಾಪ್ತ’ ಅಂದರೆ, ನಮ್ಮದೇ ಒಬ್ಬ ಕ್ಲಾಸ್ ಮೇಟ್ ಅಥವಾ ನಮ್ಮ ಸೋದರ ಮಾವ. ಇಲ್ಲವಾದರೆ, ನಮ್ಮದೇ ಕುಟುಂಬದ ಚಿಕ್ಕಪ್ಪ/ ದೊಡ್ಡಪ್ಪನ ಮಗ – ಎಂಬುದಷ್ಟೇ ಆಗ ನನ್ನ ತಿಳಿವಳಿಕೆ ಆಗಿತ್ತು. ಇಷ್ಟು ವಿಷಯ ಹೇಳೋಕೆ, ಚಡಪಡಿಕೆ ಯಾಕೆ? ಎಂಬುದೇ ಅರ್ಥವಾಗಲಿಲ್ಲ.

ಆಗಲೇ, ಒಮ್ಮೆ ಕೈಮುಗಿದು, ಎರಡೂ ಕೈಗಳಿಂದ ಕಣ್ಣುಗಳನ್ನು ಉಜ್ಜಿಕೊಂಡು ನಿಸಾರ್ ಹೇಳಿದರು: ವೇಣುಗೋಪಾಲ ಸೊರಬ ಅಂತ ಕೇಳಿದ್ದೀಯೇನಯ್ಯ? ಅವನು ಉತ್ತಮ ಕವಿ. ತುಂಬಾ ಒಳ್ಳೆಯ ಮನುಷ್ಯ. ತುಂಬಾ ಸಾಫ್ಟ್ ಫೆಲೋ. ಅವನೇ ನನ್ನ ಪರಮಾಪ್ತ. ಅಂಥಾ ಮಿತ್ರ, ತುಂಬಾ ಬೇಗ ತೀರಿಕೊಂಡುಬಿಟ್ಟ. ನಿನ್ನ ಪ್ರಶ್ನೆ, ಅವನನ್ನು, ಅವನೊಂದಿಗಿನ ಒಡನಾಟವನ್ನು ಮತ್ತೆ ಕಣ್ಮುಂದೆ ನಿಲ್ಲಿಸಿಬಿಡ್ತು…’ ಅಂದರು.
ನಿಸಾರ್ ಅಹಮದ್ ಅವರು ಕಣ್ತುಂಬಿಕೊಂಡಿದ್ದನ್ನು ನಾನು ನೋಡಿದ್ದು, ಅದೇ ಮೊದಲು.

( ವೇಣುಗೋಪಾಲ ಸೊರಬ ಅವರ ಮೂವರು ಮಕ್ಕಳೂ ಪತ್ರಕರ್ತರು. ಯಾವುದೇ ಕಾರ್ಯಕ್ರಮದಲ್ಲಿ ಅವರನ್ನು ಕಂಡರೂ, ತಕ್ಷಣ ಹತ್ತಿರ ಕರೆದು, ಮನೆಯ ಎಲ್ಲರ ಹೆಸರು ಹೇಳಿ, ಪ್ರತ್ಯೇಕವಾಗಿ ಅವರೆಲ್ಲರ ಕ್ಷೇಮ ವಿಚಾರಿಸಿ, ಕಡೆಗೆ-” ಎಲ್ಲರಿಗೂ ನಮಸ್ಕಾರ ಹೇಳಿಬಿಡಯ್ಯಾ. ಮನೆಗೆ ಹೋದಮೇಲೆ ಫೋನ್ ಮಾಡಿಸು ಅನ್ನಲು ನಿಸಾರ್ ಮರೆಯುತ್ತಿರಲಿಲ್ಲ.)
**********

ಪ್ರಕಾಶಕರೊಬ್ಬರು ನಿಸಾರ್ ಅವರನ್ನು ಒಂದು ಕಾರ್ಯಕ್ರಮಕ್ಕೆ ಆಹ್ವಾನಿಸಿದರಂತೆ.

ಆಯ್ತಪ್ಪ, ಬರ್ತೇನೆ. ಕಾರ್ಯಕ್ರಮದಲ್ಲಿ ಪ್ರೇಕ್ಷಕರಿಗೆ ಸ್ವಲ್ಪ ತಿಂಡಿ -ಕಾಫಿ ವ್ಯವಸ್ಥೆ ಮಾಡಿಸೋಕೆ ಟ್ರೈ ಮಾಡಿ ಅಂದರಂತೆ ನಿಸಾರ್. ಆ ಪ್ರಕಾಶಕರು ಅದನ್ನು ಒಂದು ದೂರಿನಂತೆ ಹೇಳುತ್ತಾ- ”ತಿಂಡಿ ವ್ಯವಸ್ಥೆ ಮಾಡಿಸಿ ಅಂತಾರಲ್ಲ, ಎಷ್ಟು ಖರ್ಚಾಗುತ್ತೆ ಅಂತ ಗೂತ್ತಾ ಅವರಿಗೆ?” ಅಂದಿದ್ದರು. ಏನು ಬೇಕಾದರೂ ಮಾತಾಡುವ ಸಲುಗೆ ಇತ್ತಲ್ಲ; ನಾನು ಅದೊಮ್ಮೆ ನಿಸಾರ್ ಅವರಿಗೇ ಕೇಳಿದೆ- ”ಸಾರ್, ನೀವು ಈ ಥರಾ ಡಿಮ್ಯಾಂಡ್ ಮಾಡಿದ್ರಂತೆ, ನಿಜವಾ?”

ನನ್ನ ಮಾತಿಂದ, ನಿಸಾರ್ ಅಹಮದ್ ಅವರು ಬೇಜಾರಾಗಲಿಲ್ಲ. ಶಾಂತವಾಗಿಯೇ ಹೇಳಿದರು: ”ನೋಡ್ರೀ, ನೀವು ಬಸವನಗುಡಿಯ ವರ್ಲ್ಡ್ ಕಲ್ಚರ್ ನಲ್ಲಿ ಅಥವಾ ಚಾಮರಾಜಪೇಟೆಯ ಸಾಹಿತ್ಯ ಪರಿಷತ್ ನಲ್ಲಿ ಕಾರ್ಯಕ್ರಮ ಮಾಡ್ತೀರಾ ಅಂತ ಇಟ್ಕೊಳ್ಳಿ. ೧೦ ಗಂಟೆಗೆ ಕಾರ್ಯಕ್ರಮ ಶುರು ಆಗುತ್ತೆ. ಆ ಕಾರ್ಯಕ್ರಮಕ್ಕೆ ಜೆ. ಪಿ. ನಗರದಿಂದಲೋ ಅಥವಾ ಹೊಸಕೋಟೆಯಿಂದಲೋ ಒಬ್ಬರು ಬರ್ತಾರೆ ಅಂದುಕೊಳ್ಳಿ; ಅವರು ೮ ಗಂಟೆಗೇ ಮನೆ ಬಿಡಬೇಕು. ಅಷ್ಟು ಬೇಗ ಮನೆಯಲ್ಲಿ ತಿಂಡಿ ಮಾಡಿರ್ತಾರಾ? ೮ ಗಂಟೆಗೇ ಸ್ವಲ್ಪ ತಿಂಡಿ ತಿಂದು ಬರ್ತಾರೆ ಅಂತಾನೇ ಇಟ್ಕೊಳ್ಳಿ, ೨-೩ ಬಸ್ ಬದಲಿಸಿ ಸಭಾಂಗಣ ತಲುಪುವವೇಳೆಗೆ ಹೊಟ್ಟೆ ಖಾಲಿ ಆಗಿರಲ್ವಾ?

ಅಂಥವರಿಗೆ, ಎರಡು ತುತ್ತು ತಿಂಡಿ ಕೊಟ್ರೆ, ಕಾರ್ಯಕ್ರಮ ಪೂರ್ತಿ ಇದ್ದು ಹೋಗುವ ಮನಸ್ಸು ಬರುತ್ತೆ ಅಲ್ವೇನ್ರೀ? ಇದನ್ನೆಲ್ಲಾ ಯೋಚನೆ ಮಾಡಿ, ಸ್ವಲ್ಪ ತಿಂಡಿ ವ್ಯವಸ್ಥೆ ಮಾಡೋಕೆ ಆಗುತ್ತೇನ್ರೀ ಅಂತ ಹೇಳಿದ್ದೆ ಅವರಿಗೆ. ಅದನ್ನು ತಪ್ಪಾಗಿ ತಿಳ್ಕೊಂಡ್ರಾ?” ಅಂದಿದ್ದರು…
************

ಯಾವುದೇ ಕಾರ್ಯಕ್ರಮಕ್ಕೆ ಅವರು ಬರುತ್ತಾರೆ ಅಂದರೆ ಸಾಕು, ಜನ ತುಂಬಿಕೊಳ್ಳುತ್ತಿದ್ದರು. ” ನೋಡಪ್ಪ… ನನಗೆ ಆರೋಗ್ಯ ಅಷ್ಟೇನೂ ಸರಿಯಿಲ್ಲ, ಆದರೂ ನೀನು ಕರೆದಾಗ ಇಲ್ಲ ಅನ್ನಲಾಗದೆ ಬರ್ತಾ ಇದ್ದೇನೆ. ನನ್ನನ್ನು ಸಮಯಕ್ಕೆ ಸರಿಯಾಗಿ ಕರ್ಕೊಂಡು ಹೋಗಬೇಕು, ಬೇಗ ಕಳಿಸಿಬಿಡಬೇಕು… ” ಅನ್ನುತ್ತಿದ್ದರು ನಿಸಾರ್.

ಆದರೆ ಕಾರ್ಯಕ್ರಮದಲ್ಲಿ ಆಗುತ್ತಿದ್ದುದೇ ಬೇರೆ. ಅವರಿಗೆ ಆತ್ಮೀಯರಾದ ಜನರನ್ನು ಕಂಡು- ”ಏನ್ರೀ, ಹೇಗಿದ್ದೀರಿ? ಮನೆಯಲ್ಲಿ ಎಲ್ಲರೂ ಕ್ಷೇಮ ತಾನೆ…” ಅನ್ನುತ್ತಾ ಮಾತಿಗೆ ನಿಂತುಬಿಡುತ್ತಿದ್ದರು. ಅರ್ಧ ಗಂಟೆ ಮಾತ್ರ ಇರ್ತೇನೆ ಅಂತ ಬಂದವರು, ಮೂರೂವರೆ ಗಂಟೆ ಕಳೆದು, ಎಲ್ಲರನ್ನೂ ಖುಷಿಯಿಂದ ಮಾತಾಡಿಸಿ, ಎಲ್ಲರಿಗೂ ಸಮಾಧಾನ ಹೇಳಿ ಕಾರ್ ಹತ್ತುತ್ತಿದ್ದರು.

( ಮುಂದುವರಿಯುತ್ತದೆ… )

‍ಲೇಖಕರು avadhi

May 26, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: