ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೆಸರಿಲ್ಲದ ಹೂವುಗಳು

ದಾದಾಪೀರ್ ಜೈಮನ್

ಹೆಸರಿಲ್ಲದ ಹೂವುಗಳು

ಬಿಕರಿಯಾಗುವ ಜಾಗೆಗಳ ಗಮನಿಸಿದ್ದಿರೇನು?

ದಿಂಬಿನ ಕವರಿನ ಮೇಲೆ

ಬಾಗಿಲ ಪರದೆಯ ಮೇಲೆ

ಬಣ್ಣದ ಸೀರೆಗಳ ಮೇಲೆ

ಗೂಡು ಹುಡುಕುವ ಬಣ್ಣದ ಹೂಗಳು 

ಬೇರಾವುದೋ ಊರುಗಳಿಂದ 

ಇಲ್ಲಿಗೆ ಬೇರಾಗಿ ಬಂದರೂ;

ಹುಟ್ಟುಹಬ್ಬದ ಶುಭಾಶಯ ಹೇಳುತ್ತವೆ

ಹೂದಾನಿಗಳಲ್ಲಿ ಸೆಡವಿಲ್ಲದೆ ಕೂರುತ್ತವೆ

ಬೊಕೆಗಳಲ್ಲಿ ಸದಾ ತಾಜಾ ಇರಲು

ಆಗಾಗ ಮುಖಕ್ಕೆ ನೀರು ಚಿಮುಕಿಸಿಕೊಳ್ಳುತ್ತವೆ

ಅವಕ್ಯಾವ ಹೊಟ್ಟೆ ಹೊರೆಯುವ ಹೊಣೆಯೊ?

ಎಲ್ಲರೂ ಬಳಸಿಯೇ ಬಳಸುವ

ಹೂಗಳಂತೆ ಜನ;

ಹೆಮ್ಮೆಯಿಂದ 

ಮಲ್ಲಿಗೆಯಂತೆ ಮೂಸುವುದಿಲ್ಲ

ಗುಲಾಬಿಯಂತೆ ಸ್ಪರ್ಶಿಸುವುದಿಲ್ಲ

ಚೆಂಡಿನಂತೆ ಬಾಗಿಲ ದಂಡೆಗೆ

ತೋರಣವಾಗಿಸುವುದಿಲ್ಲ

ಸದಾ ಪಾರದರ್ಶಕ ಪ್ಲಾಸ್ಟಿಕ್ಕಿನ ಅಟ್ಟಿ ಹಾಕಿಸಿಕೊಂಡು 

ತುದಿಗೆ ಸ್ಟೇಪ್ಲರಿನ ಪಿನ್ನು ಚುಚ್ಚಿಸಿಕೊಂಡು

ಲೋಕದ ನೂರು ಗುಟ್ಟುಗಳನ್ನು ಒಡಲೊಳಗಿಟ್ಟು ಬಿಟ್ಟು

ಮಾತು ಮಾಹಿತಿಗಳೆಲ್ಲವ ಪ್ರತಿ ಪುಟಗಳಲ್ಲಿ

ಗೆರೆಗಳ ನಡುವೆ ಅಡಗಿಸಿ

ತಂಗಾಳಿಗೆ ಮೌನವಾಗಿ ಮಿಸುಕಾಡುವ ಮುಂಗುರುಳಿನಂತೆ

ದಿನದ ಬೆಳಗು ಮಧ್ಯಾಹ್ನ ಕತ್ತಲಿನಲ್ಲಿ ತೊಯ್ದಾಡುತ್ತವೆ 

ಹಸಿವಿಗೆ ಅರಳುತ್ತವೆ

ಮಳೆಗಾಗಿ ಕಾಯುತ್ತವೆ

ಒಬ್ಬರಾದರೂ ಸರಿಯಾಗಿ ಓದಬಹುದು

ನಿರೀಕ್ಷೆಗಳನ್ನು ಕಣ್ಣುಗಳಲ್ಲಿ ಸದಾ ಕಾಪಿಟ್ಟುಕೊಳ್ಳುತ್ತವೆ

ಐದು ಪರ್ಸೆಂಟ್ ಎಕ್ಸ್-ಟ್ರಾ ಪರ್ಫ್ಯೂಮು ಪೂಸಿಕೊಂಡು

ದೊಡ್ಡ ನೆರಳಿಗೆ ಕಾದು ಕಾಡಿ ಆಡಿ ಬೇಡಿ

ತಮ್ಮ ತಮ್ಮ ಕೋಣೆಗೆ ಮರಳುತ್ತವೆ

ಬಟ್ಟೆ ಅಂಗಡಿಯ ಗಾಜಿನ ಕೋಣೆಯೊಳಗಿರುವ

ಝೀರೋ ಸೈಝಿನ ಬಳುಕಿನ ಬೊಂಬೆಗಳಂತೆ

ಲೋಕವನ್ನು ಕಣ್ಣು ಪಿಳುಕಿಸದೆ ನೋಡುತ್ತವೆ

ನಮ್ಮ ಕಾವಲಿಗಳ ಮೀರಿ ಮೇಲೇಳುತ್ತವೆ

ಬಟ್ಟೆ ಉಟ್ಟುಕೊಂಡ ಲೋಕ

ತುಟಿ ಅಲುಗಿಸಿ ಕೊಂಕು ನಗುವುದು ಹೂವಿಗೆ

ತಿಳಿಯುತ್ತದೆ 

ಆದರದಕೆ ಫರಕು ಬೀಳುವುದಿಲ್ಲ

ಬಹುಶಃ ಅದಕೆ ಗೊತ್ತಿರಬೇಕು

ಸುತ್ತಿಕೊಳ್ಳುವ ಮಾಸುತ್ತಾ ಹೋಗುವ

ಪ್ರತಿಬಟ್ಟೆಗೆ ತನ್ನದೆ ಕೊನೆಯಿದೆ

ಮಾಗುವುದು ಬೆತ್ತಲೆ; ಬಟ್ಟೆಯಲ್ಲ 

ಬೆತ್ತಲೆಗೆ ಉಟ್ಟದ್ದೆಲ್ಲಾ ಬಣ್ಣ

ಬದುಕಿದ್ದೇ ಭಾಷೆ,

ತನ್ನ ಬಾಳೇ  ಬಯಲು

ಕಾಯಕವೇ ಕೈಲಾಸ

ಇರುವಿಕೆಗೆ ಅರಿವಿಕೆಯ ಹಂಗಿಲ್ಲ

ಅರಿವಿಗ್ಯಾವ ಕೈಪಿಡಿಗಳೂ ಬೇಕಿಲ್ಲ 

ಹೆಸರಿಲ್ಲದ ಹೂವುಗಳಿಗೆ

ನಮ್ಮ ಪ್ರಕಾರದ 

ಹಸನು ಬದುಕಿನ ಕನಸಿಲ್ಲ-ದಿಲ್ಲ

ಅದರ ಗೊಡವೆ ಅದಕೆ ಬೇಕಿಲ್ಲ

ಅದರ ಗೊಡವೆ ಅದಕೆ ಬೇಕಿಲ್ಲ

‍ಲೇಖಕರು Avadhi

31 August, 2020

1 Comment

  1. D.M.Nadaf.

    ದಾದಾಪೀರ್ ಜೈ ಮನವರ ಕವನ ಅತ್ಯುತ್ತಮವಾಗಿದೆ ಬೇರೆ ಎಲ್ಲಿಂದಲೂ ಬಂದು ಬೇಕಾದವರು ಎಂಬ ಶ್ಲೇಷ ಅರ್ಥ ತುಂಬಿದ ಸಾಲುಗಳು ಕವಿಯ ಕಾವ್ಯ ಸಾಮರ್ಥ್ಯವನ್ನು ತೋರಿಸುತ್ತವೆ ಅಭಿನಂದನೆಗಳು
    ಡಿ ಎಂ ನದಾಫ್ ಅಫ್ಜಲ್ಪುರ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading