ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೆದರಕೊಂಡ್ ಬಿಟ್ಟಿದ್ದಾನೆ ನಂಗೆನಾಗುತ್ತೋ ಅಂತ..

ಮೌನ

jayaram chari

ಜಯರಾಮ ಚಾರಿ 

ನಾನಾಗ ರಾಜಗೋಪಾಲನಗರದ ಪೊಲೀಸ್ ಠಾಣೆ ಮುಂದೆ ಹೋಗುತ್ತಿದ್ದೆ ಸುಮಾರು ನಲವತ್ತರ ವೇಗದಲ್ಲಿ,ಮೊಬೈಲು ರಿಂಗಣಿಸಿತು ಮಾಮೂಲಿ ದಿನಗಳಾಗಿದ್ದಲ್ಲಿ ಮನೆಗೆ ಹೋಗಿ ನೋಡಿದರಾಯಿತು ಎಂದುಕೊಂಡು ಸುಮ್ಮನಾಗುತ್ತಿದ್ದೆ, ಆದ್ರೆ ಈ ಮೂರು ದಿನದಿಂದ ಅವ್ವ ಐ ಸಿ ಯು ವಾರ್ಡ್ ನಲ್ಲಿದ್ದಳು ಅವಳಿಗೆ ಪಿತ್ತಕೋಶದ ಗಡ್ದೆಯಾಗಿ ಮೊನ್ನೆಯಷ್ಟೇ ಆಪರೇಷನ್ನು ಆಗಿತ್ತು. ಹಾಗಾಗಿ ಗಾಡಿಯನ್ನು ನಿಲ್ಲಿಸಿ ಮಾತಾನಾಡಲು ಶುರುಮಾಡಿದೆ ಆದರೆ ಹಲೋ ಎಂದೊಡನೆ ಅವ್ವನನ್ನು ನೋಡಿಕೊಳ್ಳುತ್ತಿದ್ದ ನನ್ನಣ್ಣನ ಮಗಳು ಜೋರಾಗಿ ಅಳುತ್ತಿದ್ದಳು, ಏನೋ ಹೇಳುತ್ತಿದ್ದಳು ಆದರೆ ಅಳುವಿನ ಕಾರಣ ಕೇಳಿಸದು, ಮನದಲ್ಲಿ ಒಂದು ರೀತಿ ಭಯ ಅವ್ವಲಿಗೆ ಏನಾದರೂ ಆಯಿತಾ ಎಂದು.

love heartಸರಿ ಅವಳು ಅಳುವುದು ನಿಲ್ಲಿಸಿ ಮಾತಾಡುತ್ತಾಳೆ ಎಂದು ಗೊತ್ತು, ಕಾದೆ ಆಮೇಲೆ ಸುಧಾರಿಸಿಕೊಂಡು ಹೇಳಿದಳು “ಅಣ್ಣಾ ಅಜ್ಜಿಗೆ ಕ್ಯಾನ್ಸರ್ ಅಂತೇ ಬೇಗ ಬಾ ನಂಗೆ ಎನ್ ಮಾಡ್ಬೇಕು ಗೊತ್ಟಾಗ್ತಿಲ್ಲಾ” ಒಂದು ಕ್ಷಣ ಶೂನ್ಯ ಭಾವ ,ಕ್ಯಾನ್ಸರ್ ಅಂದ್ರೆ ಕನ್ನಡ ಸಿನಿಮಾಗಳಲ್ಲಿ ನಾಯಕ ನಾಯಕಿ ಅವರ ಸಂಬಂಧಿಗಳನ್ನು ಬದುಕಲು ಬಿಡದೆ ಜೀವ ತೆಗೆದುಕೊಳ್ಳುತ್ತಿದ್ದ ಒಂದು ಘೋರ ಕಾಯಿಲೆ ಎಂದಷ್ಟೇ ಗೊತ್ತಿತ್ತು, ಆದ್ರೆ ಒಂದು ದಿನವೂ ಬೆಳಗ್ಗೆ ಐದರ ಮೇಲೆ ಮಲಗದ ಎಂದಿಗೂ ಕಳ್ಳ ಬೀಳದೆ ಕೆಲಸ ಮಾಡುತ್ತಿದ್ದ ಇಡೀ ಕುಟುಂಬಕ್ಕೆ ದೊಡ್ಡ ಆಲದ ಮರದಂತಿದ್ದ ಅವ್ವಾಳಿಗೂ ಬರುತ್ತೆ ಎಂದು ಎಣಿಸಿರಲಿಲ್ಲ, ಸೀದಾ ಆಸ್ಪತ್ರೆಗೆ ಗಾಡಿ ತಿರುಗಿಸಿದೆ ಆ ದಿನ ಎಂತತಹುದೋ ನೆನಪುಗಳೆಲ್ಲಾ ಒಟ್ಟಾಗಿ ದಾಳಿಯಿತ್ತವೂ ಆದ್ರೂ ಆಸ್ಪತ್ರೆ ಹೇಗೆ ಸೇರಿದೆ ಎಂಬುದೇ ತಿಳಿಯಲಿಲ್ಲ

ಕೆಂಪೇಗೌಡ ಆಸ್ಪತ್ರೆಯ ಐದನೇ ಮಹಡಿಯ ಮೂರನೇ ಬೆಡ್ ನಲ್ಲಿ ಅಮ್ಮ ಹಸಿರು ಹಾಸಿಗೆ ಮೇಲೆ ಮಲಗಿದ್ದಳು, ಗ್ಲೂಕೋಸ್ ಹಾಕಿದ್ದರು. ಬಳಿ ಹೋದೆ, ತಂಗಿಯ ಕಣ್ಣುಗಳು ಉದಿಕೊಂಡಿದ್ದವು, ನನ್ನನ್ನು ನೋಡಿ ಮತ್ತೆ ಅಳಲು ಶುರು ಮಾಡಿದಳು ನಾನು ಸುಮ್ನಿರು ಎಂದೆ. ಅವ್ವ ಏನನ್ನೋ ಲೆಕ್ಕ ಹಾಕುತ್ತಿದ್ದಳು ಗೋಡೆಯನ್ನು ನೋಡಿಕೊಂಡು ನಾನು ಬಂದ ಪರಿವಿರಲಿಲ್ಲ,ನಾನು ಭುಜವನ್ನು ತಟ್ಟಿದಾಗ ಅವಳು ಮೊದಲು ಕೇಳಿದ್ದೆ “ಏನ್ ತಿಂದೆ ” ಇದು ಅವ್ವಳ ವೀಕ್ನೆಸ್ ಆಕೆ ಯಾವಾಗಲೂ ನಾನು ಹೊರಗಿನಿಂದ ಬಂದಾಗ ಕೇಳುವ ಏಕೈಕ ಪ್ರಶ್ನೆ ಆದು. ಆಪ್ಪಂದಿರು ಎಲ್ಲಿ ಹೋಗಿದ್ದೆ ಅಂತಾರೆ ಅಮ್ಮಂದಿರು ಏನ್ ತಿಂದೆ ಅಂತಾರೆ ಅಪ್ಪ ಅಲೆಮಾರಿ ಅಮ್ಮ ಸಂಸಾರಿ.

ನಿಜಕ್ಕೂ ಆದಿನ ಏನೂ ತಿಂದಿರಲಿಲ್ಲ, ಏನು ಹೇಳಲಿಲ್ಲ, ಏನ್ ಯೋಚಿಸ್ತಾ ಇದ್ದೀಯಾ ಅಂದೆ. ಆಕೆ ಹಾಲಿನ ಬಿಲ್ಲು ಎಷ್ಟು ಅಂತಾ ಲೆಕ್ಕಕ್ಕೆ ಸಿಗ್ತಾ ಇಲ್ಲ ಅಂದ್ಲು, ಇದು ಅವ್ವ. ಆಕೆ ಎಲ್ಲಿದ್ರೂ ಮೊದಲು ಮಕ್ಳು ಎನ್ ತಿಂದ್ವು, ಎಲ್ಲಿ ತಿಂದ್ವು, ಮನೆ ಕಸ, ಹಾಲಿನ ಬಿಲ್ಲು ಕರೆಂಟು ಬಿಲ್ಲು, ಅಕ್ಕಿ ಇನ್ನೆಷ್ಟು ಉಳಿದಿದೆ, ಗ್ಯಾಸು ಇನ್ನೆಷ್ಟು ದಿನಕ್ಕೆ ಮುಗಿಯುತ್ತೆ, ಆಸ್ಪತ್ರೆಗೆ ಬರುವ ಮುನ್ನ ಮೂಲೆಯಲ್ಲಿಟ್ಟ ಬಿಳಿ ಕೂದಲು ಅಲ್ಲೇ ಇದ್ಯಾ? ಜಿರಲೆ ಬರೋಲ್ವ, ಟೆರೇಸಿನಲ್ಲಿ ಆರಿ ಹಾಕಿದ ಬಟ್ಟೆ ಗತಿ ಏನಾಯ್ತು, ಒಲೆ ಮೇಲಿಟ್ಟ ಹುಳಿ ಏನಾಯ್ತು ಇವೇ ಯೋಚಿಸೋದು. ಅವಳಿಗೆ ಒಂದ ಬಂದ ಹಾಗಿ ತಂಗಿಯನ್ನು ಕರೆದಳು ಅವಳ ಭುಜದ ಮೇಲೆ ಕೈ ಬಳಸಿ ನಿಧಾನಕ್ಕೆ ನಡೆಯುತ್ತಿದ್ದಳು, ಹುಟ್ಟು ಸ್ವಾಭಿಮಾನಿ ಹಾಗೂ ಸ್ವತಂತ್ರ ಮನೋಭಾವದ ಅವ್ವ ಅವತ್ತು ತೀರಾ ಸೋತ ಹಾಗೆ ಕಂಡಳು, ಅವ್ಳಿಗೆ ಅರವತ್ತು ದಾಟಿದ್ದು ಮೊದಲ ಬಾರಿ ಕಾಣಿಸಿತು.

ಅತ್ತ ಹೋದ ಹಾಗೆ ಪಕ್ಕದ ಬೆಡ್ ನ ಪದ್ದಕ್ಕ ಕರೆದು ಹೇಳಿದಳು. ಅವರ ಮನೆಯಲ್ಲೂ ಸಹ ಅವರಮ್ಮ ಕ್ಯಾನ್ಸರ್ ನಿಂದ ಸತ್ತದ್ದು ಅದಕ್ಕೆ ನಾನೆಲ್ಲ ಹೇಗೆ ಅಮ್ಮನನ್ನು ನೋಡಿಕೊಳ್ಳಬೇಕೆಂದು. ಕ್ಯಾರೆಟ್ ಜ್ಯೂಸ್ ಕೂಡಿಸಿ, ಓಡಾಡಿಸಿ, ಅಳಬೇಡಿ ಅವಳ ಮುಂದೆ, ಕೊನೆ ಮಗ ಅಂದ್ರೆ ಪಂಚಪ್ರಾಣ ಹೀಗೆ. ನನಗೆ ಗೊತ್ತಿಲ್ಲದ್ದ ಹಾಗೆ ನಾನು ಅಳುತ್ತಿದ್ದೆ. ಆ ಮಟ್ಟಿಗೆ ನಾನೆಂದೂ ಅತ್ತವನಲ್ಲ, ಅವ್ವನನ್ನು ನಾನು ಅಷ್ಟು ಬೇಗ ಕಳೆದುಕೊಳ್ಳಲು ಬಯಸಿರಲಿಲ್ಲ, ಪದ್ದಕ್ಕ ನನ್ನನು ಅಳಬೇಡಿ ಅಂತಾ ಒಂದು ಮಾತು ಹೇಳಲಿಲ್ಲ ಆಕೆಗೆ ಗೊತ್ತಾಗಿತ್ತು ನನ್ನ ನೋವು.

ಅವ್ವ ಒಂದ ಮುಗಿಸಿ ಬಂದು ಹಾಸಿಗೆ ಮೇಲೆ ಮಲಗಿದಳು. ನಾನು ಅಳುತ್ತಿದ್ದನ್ನು ನೋಡಿ ಪದ್ದಕ್ಕನ ಕಡೆಗೆ ತಿರುಗಿ ನಕ್ಕು ಹೆದರಕೊಂಡ್ ಬಿಟ್ಟಿದ್ದಾನೆ ನಂಗೆನಾಗುತ್ತೋ ಅಂತ ಹೇಳಿ ನನ್ನ ಕೈ ಹಿಡಿದು ಮುತ್ತು ಕೊಟ್ಟಳು. ನಾನು ಮತ್ತಷ್ಟು ಜೋರಾಗಿ ಅತ್ತೆ, ನನ್ನ ಕೊನೆ ಬಾರಿ ಬೆನ್ನು ತಡವಿ ಸಂತೈಸಿದಳು. ನನಗಿನ್ನೂ ಆ ಸ್ಪರ್ಶದೊಳಗಿನ ಮಮತೆ ಪ್ರೀತಿ ಆ ಆರ್ಧ್ರತೆ ನೆನಪಿದೆ. ಟೈಮಾಯಿತು ಎಂದು ನರ್ಸ್ ಹೇಳಿದಳು. ಅದೇ ಸಮಯಕ್ಕೆ ಡಾಕ್ಟರ್ ಬಂದರು. ಸೈಡಿಗೆ ಕರೆದು ಯಾವುದೇ ಭಾವವಿಲ್ಲದೆ ನಿಮ್ಮ ಅಮ್ಮನಿಗೆ ಪಿತ್ತಕೋಶದ ಕ್ಯಾನ್ಸರ್, ಹೆಚ್ಚೆಂದರೆ ಮೂರು ವಾರ ಬದುಕಬಹುದು. ನಾಳೆ ಡಿಸ್ಚಾರ್ಜ್ ಎಂದು ಹೇಳಿ ಹೇಗಿದಿಯಮ್ಮ ಎಂದು ಅವ್ವನನ್ನು ಕೇಳಿದರು ಅವ್ವ ಕೈಮುಗಿದು ಚೆನ್ನಾಗಿದ್ದೀನಿ ಎಂದಳು.

ಅವ್ವಳಿಗೇ ಹೋಗಿ ಬರುತ್ತೇನೆ ಎಂದ್ಹೇಳಿ ಹೊರಟೆ. ಕರೆದಂತಾಯ್ತು ಅವ್ವ, ತಿರುಗಿದೆ ಅವ್ವ ಅದೇ ಗೋಡೆಯನ್ನು ನೋಡುತ್ತಾ ಏನನ್ನೋ ಲೆಕ್ಕ ಹಾಕುತ್ತಿದ್ದಳು. .

‍ಲೇಖಕರು Admin

31 May, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading