
ಗೀತಾ ಜಿ ಹೆಗಡೆ ಕಲ್ಮನೆ
ಹೊತ್ತು ಮೂಡುವ ಮುನ್ನ
ಎದ್ದು ನೀರಾಕಿ ರಂಗೋಲಿಯಿಕ್ಕುವಳು
ಅಮ್ಮ ಹೇಳಿಕೊಟ್ಟ ಅನಾದಿಕಾಲದ
ಶ್ಲೋಕ ಪಟಿಸುತ್ತ
ದೀಪ ಬೆಳಗುವಳು
ಸದ್ದಾಗಿ ಎದ್ದರೆಲ್ಲಿ ಮನೆಮಂದಿ
ಹೈರಾಣಾಗಬಹುದೆಂಬ ಆತಂಕದಲಿ
ಬೆಕ್ಕಂತೆ ಅಡಿಗೆ ಮನೆ ಸೇರಿ
ಒಂದಿನಿತೂ ತಟಪಟಾಯಿಸದೇ
ಹಬೆ ತಿಂಡಿಯ ಮಾಡಿ ನಗುಮೊಗದಿ
ಹಸಿದ ಹೊಟ್ಟೆಯ ದೇಕರೇಕೆ ಗಮನಿಸಿ
ಅಡ್ಡ ಹಿಡಿದ ಮುಂಗೈ ಸರಿಸಿ
ಹೊಟ್ಟೆ ತುಂಬ ತಿನ್ನಿರೆನ್ನುವಳು
ಆಗಲೇ ಅವಳೆದ್ದು
ಮೂರು ಜಾವವಾದರೂ
ತನ್ನ ಹಸಿವ ಲೆಕ್ಕಿಸದೇ.

ಮಾಡಿದಷ್ಟೂ ಮುಗಿಯದ ಮನೆವಾರ್ತೆ
ಹೊತ್ತೇರುತಿದೆ
ಅವಸರವಸರವಾಗಿ ಮಿಂದು ಮಡಿಯನುಟ್ಟು
ದೇವರಿಗಡ್ಡ ಬಿದ್ದ ಶಾಸ್ತ್ರ ಮಾಡಿ
ಮತ್ತದೇ ಅಡಿಗೆ ಮನೆಯಲ್ಲಿ ವಕ್ಕರಿಸಿ
ಮಧ್ಯಾಹ್ನದಡುಗೆಯ ತಯಾರಿ
ಯಾರ್ಯಾರಿಗೆ ಯಾವುದಿಷ್ಟವೆಂಬ ಲೆಕ್ಕಾಚಾರ
ಕುಕ್ಕರ್ ಕೂಗುವಷ್ಟರಲ್ಲಿ
ಇತ್ತ ಪಲ್ಯ,ತಂಬುಳಿ ರೆಡಿ
ರುಬ್ಬಿದ ಮಸಾಲೆ ಕುದಿಸಿ
ಜೊತೆಗಪ್ಪಳವೂ ರೆಡಿ
ಬಡಿಸಿದ ಕೈ ಉಣುವುದು
ಎಲ್ಲರ ಎಂಜಲು ತಟ್ಟೆ ಎತ್ತಿ.
ಒಂದಿನಿತು ಸುಸ್ತಾದ ಮೈ
ಪವಡಿಸಲಡಿಯಿಡಲು
ಗಂಟೆ ನಾಲ್ಕಾಯಿತೆಂಬ ಧ್ವನಿ
ಚಹಾ ಕಾಯಿಸಿ ಕೊಟ್ಟು
ಕಟ್ಟಿದ ಮಲ್ಲೆ ಬಾ ಮುಡಿ ಎಂದಾಗ
ತಲೆ ಬಾಚಿ
ತನ್ನದೇ ಕೈ ತೋಟದಲಿ ಕಾಲಾಡಿಸಿ
ಸಂಜೆಯಡುಗೆಗೆ ಮತ್ತೇನಿದೆ ಇಲ್ಲೆಂಬ
ಹುಡುಕಾಟ ಆ ಮನಸಿಗೆ
ಕಿತ್ತು ತಂದ ಕೆಂಪು ಹರಿವೆ
ಅಮ್ಮ ಕೊಟ್ಟ ಬೀಜವ ನೆನೆದು
ತವರ ಮನೆ ನೆನಪು
ಕಣ್ಣಂಚಿನ ಹನಿಯಲ್ಲಿ!

ಗಾಣದೆತ್ತಿನ ಬದುಕು
ಹೆಣ್ಣು ಜೀವನಕಂಟಿದ ಶಾಪ
ಗೊಣಗಲಾಗದ ಜೀವ
ಸೈರಣೆಯಲಿ ಕಳೆಯುವ ಕಾಲ
ನೀ ಹೆಣ್ಣು ಹೆಣ್ಣು ಎಂದು
ಅಡಿಗಡಿಗೆ ನೆನಪಿಸುತ
ಬತ್ತಿದ ಕಣ್ಣೆವೆಗಳು ಹೇಳುವುವು
ಪ್ರತಿ ನಾರಿಯ ಒಳ ತೊಳಲು.
ಬದಲಾವಣೆ ಜಗದ ನಿಯಮ
ಆಗಿಹುದು ಅಂದಿಗೂ ಇಂದಿಗೂ ಬಹಳಷ್ಟು .
ಆದರೆ
ಆರಕ್ಕೇರಿದರೆ ಜನರಾಡುವ ಮಾತು
ಮೂರಕ್ಕಿಳಿದರೆ ತುಳಿವವರ ಕಾವು
ಬೆನ್ನಿಗಂಟಿದ ಪ್ರತಿ ತಿಂಗಳೂ
ಆ ನಾಲ್ಕು ದಿನ ಪಡುವ ಪಾಡು
ಹೆರುವ ನೋವು
ಎಂದಾದರೂ ಬದಲಾದೀತೆ?






0 Comments