ಲಕ್ಷ್ಮಿಕಾಂತ್ ಇಟ್ನಾಳ್
ಇಂಪು, ಕಂಪಿನ ಪರಿಮಳದ ಬೆರಗು ಕಣ್ತಣಿವ ಬೆಳದಿಂಗಳು
ರೆಕ್ಕೆಯಲಿ ಯಕ್ಷಿ ಅಂಗಳದಲಿ ಹಾಲ್ನೊರೆಯ ತಿಳಿಗೆಂಪಲಿ
ತುಟಿಯರಳಿ ತುಳುಕಿದ ನಗೆ ಮಿಂಚಲಿ ವಾತ್ಸಲ್ಯವರಳಿದ ಗೊಂಚಲು
ಲವಲವಿಕೆಯ ಮೊಳಕೆ ಪರಿಸರಕೆ ಸಡಗರಕೆ ಸಡಗರ ಮನೆಯ ಸಕಲಕೆ
ಭಾವಗಳಿಗೆ ಜೀವಸಹಿತ ಕನಸು ನಿರೀಕ್ಷೆಗೂ ಅನಿರೀಕ್ಷಿತ ನನಸು
ಕೊಳಲಾದ ಕಣ್ಣುಗಳು ಕಣ್ಣುಕೊಳಗಳಲಿ ನವಿಲುಗಳ ನೃತ್ಯ
ಒಳ ಧಾವಂತ, ಏಕಾಂತ, ಬೆಳದಿಂಗಳ ಕೊಡೆಯಲಿ ನಿರಾತಂಕ
ಮನೆಯ ಹೃದಯ ಮಿಡಿತದಲಿ ನಗಾರಿಯ ನಾಟ್ಯ
ಎದೆಯಮೃತ ಕಲಶ ಸುಮಧುರ ಶೃತಿ ಮನ ವೀಣೆಯ ತಂತಿ
ಭಾಷ್ಪಗಳು! ಎದೆಯಾಳದ ಭಾವಗಳ ಹೊರಜಾರಿದ ಇಬ್ಬನಿ

ಬೆಳದಿಂಗಳಿದು ಆದರದ ಎದೆಗಳಲಿ ಬರೆದ ಕಾವ್ಯ ದೃಶ್ಯ ಕಾವ್ಯ
ಬದುಕೆಂಬುದು ವಿಸ್ಮಯದ ಕಡಲು ಬೊಗಸೆಯಲಿ ಬಂದಿಳಿದ ಅಂಬುಧಿ
ಬೆಳದಿಂಗಳಿದು ‘ಬರಿ ಬೆಳಗಲ್ಲೋ ಅಣ್ಣಾ’ ಅನಿಸಿದ ಗಳಿಗೆ ನಮ್ಮೊಳಗೆ
ದೈವಿ ಪ್ರಕಾಶಪಾತದ ಶ್ವೇತ ಧಾರೆ. ಧರೆಗಿಳಿದ ಕ್ಷಣವೆ, ಸ್ಥಬ್ಧ ಗಳಿಗೆ
ತಿಳಿಗೊಳದ ನೇಸರ ಮೆರುಗು..ಅಮ್ಮನೆದೆಗಪ್ಪಿದ ಮಗುವಿನ ಮುಗ್ಧ ನಗು
ದಂತ ಪಂಕ್ತಿಗೆ ನಗಲು ಬೇಕೆ ಕಾರಣಗಳು! ನಗೆವಾಲು ಉಕ್ಕಿದ ಮನೆಯ ಕೆನ್ನೆಗಳು
ಮೆಚ್ಚುಗೆಯ ಕಂಗಳಲಿ ಜೀಕಾಡಿದ ಜಿಗಿತ, ಮೌನಗಳ ಮುಗುಳು ಮನಗಳ ಸ್ವಗತ
ಹೊಂಬೆಳಕಿನ ಸಿರಿಯ ಶಾಮಿಯಾನ, ‘ಪ್ರಭೆ ಏನಿದು’ ಚಂದ್ರನಿಗೂ ಅನುಮಾನ
ಮೋಡಗಳಲ್ಲಿ ಮುಖತೂರಿ ಪಿಸುಮಾತಲಿ ಕೇಳಿತು ‘ಖರೆ ಹೇಳು, ನೀನಾರು!’
ಹೃದಯಗಳನ್ನು ಬೆಸೆದ ಬೆಳದಿಂಗಳು ಉಲಿಯಿತು ‘ನಾನೋ ಭವಿಷ್ಯ!






ಇಂಪು, ಕಂಪಿನ ಪರಿಮಳದ ಬೆರಗು ಕಣ್ತಣಿವ ಬೆಳದಿಂಗಳು sir super
uttama kavana…
ಧನ್ಯವಾದ ಮೇಡಂ ಎಮ್ ಎಮ್ ಶೇಖ, ಹಾಗೂ ಮಹೇಶ ಜಿ. ತಮ್ಮ ಮೆಚ್ಚುಗೆಗೆ ವಂದನೆಗಳು.